Saturday, November 12, 2011

ಕಾರಣಿಕ : ಸಾಂಸ್ಕೃತಿಕ ನೆಲೆಗಳು

ಸಿರುಗುಪ್ಪ: `ಮೂರು... ಆರು... ಆರು... ಮೂರು... ಬಹುಪರಾಕ್.`
ಇದು ರಾಜ್ಯದ ಗಡಿಯಲ್ಲಿರುವ ಆಂಧ್ರದ ದೇವರಗುಡ್ಡದ ಮಾಳಮಲ್ಲೇಶ್ವರ ಸ್ವಾಮಿಯ ಪ್ರಸಕ್ತ ಸಾಲಿನ ಕಾರಣಿಕ ಉತ್ಸವದಲ್ಲಿ ಕೇಳಿಬಂದ ಭವಿಷ್ಯವಾಣಿ.

ಕಾರಣಿಕ ಉತ್ಸವ ಸಕಲ ವೈಭವಗಳೊಂದಿಗೆ ಜರುಗಿ ಕಾರಣಿಕ ದೈವವಾಣಿಯನ್ನು ಶುಕ್ರವಾರ ಸೂರ್ಯೋದಯದಲ್ಲಿ ಸ್ವಾಮಿಯ ಅರ್ಚಕ ಮಲ್ಲಯ್ಯಸ್ವಾಮಿ ಭಕ್ತ ಸಮೂಹದಲ್ಲಿ ನುಡಿದ ಕಾರಣಿಕ ನುಡಿ.

`ನಾಲ್ಕು ಸಾವಿರದ ಐದುನೂರು ರೂಪಾಯಿ ಅರಳೆ... ಎರಡು ಸಾವಿರದ ಆರು ನೂರು ರೂಪಾಯಿ ಜೋಳ.. ಸೂರ್ಯ- ಚಂದ್ರ ಗಗನ ಮಂಡಲಕ್ಕೆ ಚಂದ್ರಹಾರ ಹಾಸಿದಾಳೆ... ಗಂಗೆ- ತುಳಸಿ ಒಂದಾಗಿದ್ದಾರೆ ಬಹುಪರಾಕ್` ಎಂದು ಈ ವರ್ಷದ ಮುಂದಿನ ಭವಿಷ್ಯವಾಣಿ ಹೇಳಿದ್ದಾರೆ.

ಈ ಭವಿಷ್ಯವಾಣಿ ಈ ಭಾಗದಲ್ಲಿ ಇಲ್ಲಿಯವರೆಗೆ ಎಂದೂ ಸುಳ್ಳಾಗಿಲ್ಲ ಎಂಬುದು ಈ ದೇವರ ಭಕ್ತರ ಮನೆ ಮಾತು.

ಈ ಭವಿಷ್ಯವಾಣಿಯನ್ನು ಆಲಿಸಿದ ಭಕ್ತ ಸಮೂಹವು ಅದರ ಅರ್ಥವನ್ನು ಹಿರಿಯರ ಬಳಿ ಕೇಳಿದಾಗ, ತುಳಸಿ-ಗಂಗೆ ಒಂದಾದ ಎಂಬ ಶಬ್ಧಕ್ಕೆ ಮಳೆ ಕಡಿಮೆ ಎಂದು, ಮೂರು-ಆರು, ಆರು-ಮೂರರ ಲೆಕ್ಕಾಚಾರ ರೈತರು ಬೆಳೆದ ಬೆಳೆಗೆ ಆರಂಭದಲ್ಲಿ ಕಡಿಮೆ ಬೆಲೆ ಇದ್ದರೂ ಅಲ್ಪ ಸಮಯದಲ್ಲಿ ಬೆಲೆ ಏರಿಕೆಯಾಗಿ, ಸ್ಥಿರ ಬೆಲೆ ಉಳಿಯುವ ಸಂಭವ ಎನ್ನುತ್ತಾರೆ, ಆದರೆ, ಸೂರ್ಯ-ಚಂದ್ರರ ಬಗ್ಗೆ ಹೇಳಿರುವ ವಾಣಿ ಬಗ್ಗೆ ಸಮರ್ಥವಾದ ಅರ್ಥ ಹುಡುಕಲು ಆರಂಭಿಸಿದ್ದಾರೆ.

ಕನ್ನಡಿಗರ ಉತ್ಸವ
: ಈ ದೇವಸ್ಥಾನ ಆಂಧ್ರದಲ್ಲಿದ್ದರೂ ಕನ್ನಡಿಗರೇ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರೆಲ್ಲ ಕನ್ನಡಿಗರು. ಇಲ್ಲಿ ಕನ್ನಡ ಭಾಷೆಯದ್ದೇ ಕಾರುಬಾರು, ಭವಿಷ್ಯವಾಣಿ ಕೂಡ ಕನ್ನಡದಲ್ಲಿಯೇ. ಕರ್ನಾಟಕ ರಾಜ್ಯದ ಗಡಿಯಿಂದ ಕೇವಲ 20 ಕಿಮೀ ಅಂತರದಲ್ಲಿರುವ ಈ ಸ್ವಾಮಿಯ ಭಕ್ತರೆಲ್ಲಾ ಕನ್ನಡಿಗರೇ ಎಂಬುದು ವೈಶಿಷ್ಟ್ಯ. ಎದುರು ಬಸವಣ್ಣನ ದೇವಸ್ಥಾನದ ಮೇಲೆ ಲಕ್ಷಾಂತರ ಭಕ್ತರ ಮಧ್ಯೆ ದೈವವಾಣಿ ಹೇಳುವ ಅರ್ಚಕ ಈ ವರ್ಷದ ಭವಿಷ್ಯ ನುಡಿದರು. ದೇವರಗುಡ್ಡದಲ್ಲಿ 5 ದಿನಗಳ ಕಾಲ ನಡೆಯು ಕಾರ್ಯಕ್ರಮಗಳಲ್ಲಿ ರಥೋತ್ಸ, ಗೊರಯ್ಯನವರು ಕಬ್ಬಿಣದ ಸರಪಳಿ ತುಂಡು ಮಾಡುವುದು, ಗೊರವಯ್ಯನವರ ಆಟ, ಊಟ, ಕಡುಬಿನ ಕಾಳಗಗಳು ನಡೆಯಲಿವೆ.

ಕೃಪೆ :ಪ್ರಜಾವಾಣಿ ವಾರ್ತೆ October 08, 2011
 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.