Wednesday, January 09, 2013

ರಾಘವಾಂಕನ ಹರಿಶ್ಚಂದ್ರ : ಒಂದು ಮರು ವಿವೇಚನೆ

                                                ಡಾ. ಸಿದ್ರಾಮ ಕಾರಣಿಕ
                       
   ಭಾರತೀಯ ಪುರಾಣ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬನಾದ ಹರಿಶ್ಚಂದ್ರ, ಸತ್ಯ ಹರಿಶ್ಚಂದ್ರನೆಂದೇ ಖ್ಯಾತಿ. ಕಾವ್ಯ ನಾಟಕಗಳಲ್ಲಿ ಆತ ಕಾಣಿಸಿಕೊಂಡು ಹಲವರಿಗೆ ಆದರ್ಶಪ್ರಾಯ. ಇಡೀ ಸಾಹಿತ್ಯದಲ್ಲಿ ಇದೊಂದು ವಿಸ್ಮಯ ಕೂಡ. ಹರಿಶ್ಚಂದ್ರನನ್ನು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಗುರುತಿಸಿದವನು ಕವಿ ರಾಘವಾಂಕ. ಕವಿಯ ಕಾವ್ಯದ ರೂಪ ಅತ್ಯಂತ ಮನಾಕರ್ಷಕವಾದುದು. ಕಾವ್ಯ ಕಟ್ಟುವ ಕಲೆ ರಾಘವಾಂಕನಿಗೆ ಜನ್ಮಜಾತ ಕರಗತ ಎನ್ನುವಷ್ಟರಮಟ್ಟಿಗೆ ಕಾವ್ಯದ ಹಿರಿಮೆ ಇದೆ. ಆದರೆ ಇದೆ ಮಾತನ್ನು ಕಾವ್ಯದ ವಸ್ತುವಿನ ಬಗ್ಗೆ ಹೇಳುವಂತಿಲ್ಲ. ಹರಿಶ್ಚಂದ್ರ ಕಾವ್ಯ ಬರೆಯುವುದರ ಉದ್ದೇಶ ಹರನ ಮಹಿಮೆಯನ್ನೂ ಆತನನ್ನು ನಂಬಿದವರಿಗೆ ಆತ ತೋರುವ ಕರುಣೆಯನ್ನೂ ವಿವರಿಸುವುದೇ ಆಗಿದೆ. ಹರಿಶ್ಚಂದ್ರನ ಕತೆ ಇಲ್ಲಿ ನೆಪ ಮಾತ್ರ. ಹೀಗಾಗಿ ಈ ಕಾವ್ಯದ ವಸ್ತು ಸೂತ್ರಬದ್ಧತೆಯನ್ನು ಕಳೆದುಕೊಂಡಿದೆ. ಇಲ್ಲಿ ಹರಿಶ್ಚಂದ್ರನ ಪಾತ್ರ ಮೇಲ್ಜಾತಿಯವನೆನ್ನಿಸಿಕೊಂಡ ಅರಸನೊಬ್ಬನ ಮಡಿವಂತಿಕೆಯನ್ನು ಮಾತ್ರ ಪ್ರತಿನಿಧಿಸುತ್ತದೆ. ಚಾತುರ್ವರ್ಣದ ಅಂಧಶೃದ್ಧೆಯಲ್ಲಿ ಕನಲುವ ಚಿತ್ರ ಇಲ್ಲಿದೆ. ಬಾಲಸಾಹಿತ್ಯದಲ್ಲಿ ಬಂದ ಕತೆಯನ್ನೇ ಓದಿಕೊಂಡು ಬಂದಿರುವವರಿಗೆ ಇದು ಒಲ್ಲದ ಸತ್ಯವೇ ! ರಾಘವಾಂಕನ ಹರಿಶ್ಚಂದ್ರ ಕಾವ್ಯ ಹರಿಶ್ಚಂದ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸುವಲ್ಲಿ ಸಫಲತೆ ಕಂಡಿದೆ ಮತ್ತು ಮೊಗೆದಷ್ಟು ಹೊಸ ಹೊಸ ಅರ್ಥಗಳನ್ನು ಅನಾವರಣ ಮಾಡುತ್ತ ಸಾಗುತ್ತದೆ.
    ರಾಘವಾಂಕನ ಹರಿಶ್ಚಂದ್ರ, ವಿಶ್ವಾಮಿತ್ರ ಮತ್ತು ವಸಿಷ್ಠ ಎಂಬ ಎರಡು ಕೋಣಗಳ ನಡುವೆ ಸಿಕ್ಕಿಕೊಂಡ ಗಿಡ ಎಂಬ ಮಾತು ಸತ್ಯವಾದರೂ ವಸ್ತುಸ್ಥಿತಿ ಅರಿತ ಮೇಲಾದರೂ ಆ ಎರಡೂ ಕೋಣಗಳಿಂದ ಸಮದೂರ ಕಾಪಾಡಿಕೊಳ್ಳಲು ಸಾಧ್ಯವಿತ್ತು. ಆದರೆ ಆತ ಚಂಚಲ ವೃತ್ತಿಯಿಂದ ಚಲನೆಯನ್ನು ಕಳೆದುಕೊಳ್ಳುತ್ತಾನೆ. ಮನಃಶಾಸ್ತ್ರೀಯ ದೃಷ್ಟಯಿಂದ ಇಂಥ ವರ್ತನೆಯನ್ನು ಮಾನಸಿಕ ವಿಕಲ್ಪತೆ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಫೋಬಿಯಾ !
1. ಸತ್ಯ ಮತ್ತು ಹರಿಶ್ಚಂದ್ರ : ಸತ್ಯ ಎಂಬುದು ಶಿವ ಎಂಬರ್ಥವೂ ಇದೆ. ಇದಕ್ಕೆ ಮಂಗಳಕಾರಿ ಎಂಬ ಅನ್ಯೋಕ್ತಿಯೂ ಇದೆ. ರಾಘವಾಂಕನ ಹರಿಶ್ಚಂದ್ರ ಎಲ್ಲಿಯೂ ಈ ಸತ್ಯತನ ತೋರಿದ ಉಲ್ಲೇಖಗಳು ಸಿಗುವುದಿಲ್ಲ. ಸಾಂಪ್ರದಾಯಿಕ ನಂಬಿಕೆಗಳು ಮಾತ್ರ ಆತನನ್ನು ಸತ್ಯವಂತನೆಂದೇ ಪರಿಗಣಿಸುತ್ತವೆ. ಕೊಟ್ಟ ಮಾತಿಗೆ ತಪ್ಪಿ ನಡೆಯುವ ಆತನ ವರ್ತನೆ ಯಾವ ಸತ್ಯವನ್ನು ಅಥವಾ ಎಂಥ ಸತ್ಯವನ್ನು ಒಳಗೊಂಡಿದೆ ಎನ್ನವುದೇ ನಿಗೂಢ !
    ಹರಿಶ್ಚಂದ್ರ ದಿಟದ ವ್ಯಕ್ತಿಯಲ್ಲ ಎಂಬುದಕ್ಕೆ ವರುಣನಿಗೆ ಮಾತು ತಪ್ಪಿ ಜಲೋದರ ರೋಗಕ್ಕೆ  ಈಡಾದ ಪ್ರಕರಣವೇ ಸಾಕ್ಷಿ. ರಾಘವಾಂಕ ಇದನ್ನು ಚಿತ್ರಿಸಲು ಹೋಗದೇ ವಿಶ್ವಾಮಿತ್ರನ ಮೂಲಕ ಈ ಕತೆಯನ್ನು ಆಡಿಸಿದ್ದಾನೆ.
        ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ            
        ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ                
       ಧ್ವರಕೆ ಪಶುವಂ ಮಗನ ಮಾಡಲಾರದೆ ಮೋಹದಿಂದಜೀಗರ್ತ ಮುನಿಯ        
        ವರಸುತ ಶುನಶ್ಯೇಪನಂ ತಂದು ಯಾಗವಿಧಿ                
        ಗರಿದು ಬೇಳಲ್ಕೆ ಮನದಂದ ಪಾತಕನು ಭೂ               
      ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು (2-19)
   
           ಇದು ವಿಶ್ವಾಮಿತ್ರ ಹುಟ್ಟಿಸಿಕೊಂಡು ಹೇಳಿದ್ದಲ್ಲ. ಆತ ಸತ್ಯದ ಅನಾವರಣ ಮಾಡಿದ್ದಾನೆ. ಹೀಗಾಗಿಯೇ ಈ ಮಾತಿಗೆ  ವಸಿಷ್ಠ ಯಾವುದೇ ನಿರಾಕರಣೆ ತೋರದೆ ತೇಲಿಸಿ ಮಾತನಾಡುತ್ತಾನೆ. ಮಗನಿಲ್ಲದೆ ಮುಕ್ತಿಯಿಲ್ಲ ಎಂಬ ನಂಬಿಕೆಯಿಂದಾಗಿ ವರುಣನ ವರದಿಂದ ಮಗನನ್ನು ಪಡೆದು ಮಾತಿಗೆ ತಪ್ಪುತ್ತಾನೆ. ಮಾಯದಬಲೆಯರನ್ನು ಹೊಡೆದೋಡಿಸಿದ ಮೇಲೆ ಕೆಂಡ ಕಾರುತ್ತ ಬರುವ ವಿಶ್ವಾಮಿತ್ರನ ಜತೆಯಲ್ಲಿಯ ಸಂವಾದ ಕೂಡ ಹರಿಶ್ಚಂದ್ರ ನುಡಿದಂತೆ ನಡೆಯುವ ವ್ಯಕ್ತಿಯಲ್ಲ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.
        ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್                
        ಕಡೆಗೆನ್ನ ಸರ್ವ ರಾಜ್ಯವನಾದಡಂ ನಿಮಗೆ                
        ಕೊಡಹಡೆವೆನೈಸಲ್ಲದೀಯೊಂದು ತೇಜಮಂ ಕೊಡೆ..... (8-32)
    ಎನ್ನುತ್ತಾನೆ. ಸರ್ವರಾಜ್ಯವನ್ನು ಧಾರೆ ಎರೆದು ಕೊಡುವುದಾಗಿ ಹೇಳುವ ಆತ, ಆನಂತರದಲ್ಲಿ ತಾನು ಹಾಗೇ ಹೇಳಿಯೇ ಇಲ್ಲ ಎಂದು ವಾದಿಸುವುದು ಸತ್ಯವಂತನ ಲಕ್ಷಣ ಹೇಗಾದೀತು ? ‘ನಾನಿತ್ತುದೇನಯ?’ ಎಂದು ಮರಳಿ ಪ್ರಶ್ನಿಸುವ ಮೂಲಕ ಜಾರಿಕೊಳ್ಳುತ್ತಾನೆ. ಹೀಗಾಗಿ ಹರಿಶ್ಚಂದ್ರ ಚಂಚಲ ಮನಸ್ಸಿನವನು ಎನ್ನದೇ ಅನ್ಯ ಮಾರ್ಗವಿಲ್ಲ. ‘ಹರಿಶ್ಚಂದ್ರಭೂನಾಥ ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ’ (2-20) ಎಂಬ ವಸಿಷ್ಠನ ಮಾತು ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ ಹಾಗೆಯೇ ಹಲವು ವಿಧದಿಂದ ರಾಜ್ಯವನ್ನು ಉಳಿಸಿಕೊಳ್ಳಲು ದೀನನಾಗಿ ವಿಶ್ವಾಮಿತ್ರನಲ್ಲಿ ಮೊರೆಯಿಡುವ ಹರಿಶ್ಚಂದ್ರನ ಪಾತ್ರ ಇಲ್ಲಿ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತದೆ. ವಿಶ್ವಾಮಿತ್ರನಂತಹ ಚಾಣಾಕ್ಷಮತಿ ಇಲ್ಲದೇ ಬೇರೆ ಪಾತ್ರ ಯಾವುದಾದರೂ ಅಲ್ಲಿದ್ದಿದ್ದರೆ ಹರಿಶ್ಚಂದ್ರ ತನ್ನ ಮಾತಿನ ಮೋಡಿಯಿಂದ ಮರುಳ ಮಾಡಿ ರಾಜ್ಯ ಉಳಿಸಿಕೊಳ್ಳುತ್ತಿದ್ದ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಕಾಶಿ ನಗರದಲ್ಲಿ ಕೂಡ ಆತನ ವರ್ತನೆ  ಬದಲಾಗುವುದಿಲ್ಲ. ದಕ್ಷಿಣೆಯ ಹಣಕ್ಕಾಗಿ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಮಾರುವ ಹರಿಶ್ಚಂದ್ರ ತನ್ನನ್ನೂ ಮಾರಾಟ ಮಾಡಿಕೊಳ್ಳಲು, ಗ್ರಾಹಕರನ್ನು ಕೂಗಿ ಕರೆಯುತ್ತಾನೆ. ಆದರೆ ಕೊಳ್ಳಲು ಬರುವ ವೀರಬಾಹುಕ ಕೇವಲ ಕೆಳಜಾತಿಯವ ಎಂಬ ಕಾರಣಕ್ಕಾಗಿಯೇ ತನ್ನನ್ನು ಮಾರಿಕೊಳ್ಳಲು ನಿರಾಕರಿಸುತ್ತಾನಲ್ಲದೇ ಕೊಳ್ಳಲು ಬಂದವನ ಮೇಲೆ ಕನಲಿ ಹರಿಹಾಯುವುದು ಆತನ ಮಾತಿಗೆ ತಪ್ಪುವ ಗುಣವನ್ನು ಮತ್ತೊಮ್ಮೆ ಪ್ರತಿನಿಧಿಸುತ್ತದೆ. ಹೀಗಾಗಿಯೇ ವೀರಬಾಹುಕ, ಹರಿಶ್ಚಂದ್ರನನ್ನು ‘ಹುಸಿಯಹೊಲೆಹೊರೆಕಾರ’ ಎಂದೇ ಸಂಬೋಧಿಸುವುದು ಉಚಿತವಾಗಿಯೇ ಇದೆ. ವ್ಯಾಪಾರದ ಸಂದರ್ಭದಲ್ಲಿ ಜಾತಿ, ಕುಲ, ಅಥವಾ ಇನ್ನಿತರ ಯಾವುದೇ ತೆರನಾದ ಭೇದಗಳನ್ನು ಪರಿಗಣಿಸಬಾರದು. ಗ್ರಾಹಕನಾದವ ವ್ಯಾಪಾರಿ ಹೇಳಿದ ದರ ಕೊಡಲು ಸಿದ್ಧನಾದರೆ ಯಾವುದೇ ತಕರಾರೂ ಇಲ್ಲದೇ ವ್ಯಾಪಾರ ಮಾಡಬೇಕಾಗುತ್ತದೆ. ಆದರೆ ಹರಿಶ್ಚಂದ್ರ ಇದಕ್ಕೆ ವ್ಯತಿರಿಕ್ತನಾಗಿ ವರ್ತಿಸುವ ಮೂಲಕ ತನ್ನ ಮಾತಿಗೆ ತಪ್ಪುವ ಗುಣವನ್ನು ಪ್ರದರ್ಶಿಸುತ್ತಾನೆ.
2. ವರ್ಣಧರ್ಮ ಮತ್ತು ಹರಿಶ್ಚಂದ್ರ : ರಾಘವಾಂಕನ ಹರಿಶ್ಚಂದ್ರ ವರ್ಣಧರ್ಮದ ಚೌಕಟ್ಟಿಗೆ ಒಳಗಾದವನು. ಅಷ್ಟೇ ಅಲ್ಲ, ಆ ತೆರನಾಗಿಯೇ ಎಲ್ಲರೂ ಬದುಕಬೇಕು ಎಂಬ ಕಠೋರ ಉಕ್ತಿ ಆತನದಾಗಿತ್ತು. ಇದು ಮೊಟ್ಟಮೊದಲ ಬಾರಿಗೆ ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದದ್ದು ಮಾಯದಬಲೆಯರ ಪ್ರಸಂಗದಲ್ಲಿ. ಮೇಲು-ಕೀಳು ಜಾತಿ ಎಂಬ ವರ್ಗೀಕರಣದ ಮಡಿವಂತಿಕೆ ಹರಿಶ್ಚಂದ್ರನಲ್ಲಿದೆ. ಒಂದು ನಾಡಿನ ಒಬ್ಬ ಅರಸನಾಗಿ ಎಲ್ಲರನ್ನು ಸಮಾನಭಾವದಿಂದ ಕಾಣಬೇಕೆಂಬ ತತ್ವ ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕೊನೆಯಲ್ಲಿ ಬರುವ ವೀರಬಾಹುಕನ ಪ್ರಸಂಗದಲ್ಲೂ ಹರಿಶ್ಚಂದ್ರನ ಈ ಮಡಿವಂತಿಕೆಯ ವರ್ತನೆ ಪುನರಾವರ್ತಿತವಾಗುತ್ತದೆ.
    ಹೊಲತಿಯರು, ಅನಾಮಿಕೆಯರು, ಮಾಯದಬಲೆಯರು ಎಂಬ ಹೆಸರುಗಳಿಂದ ಕಾವ್ಯದಲ್ಲಿ  ಕಾಣಿಸಿಕೊಳ್ಳುವ ಈ ಯುವತಿಯರು ವಿಶ್ವಾಮಿತ್ರನ ಸೃಷ್ಟಿ. ಹಾಗೆಂದ ಕೂಡಲೇ ಅವರೇನು ಮಾಯಾ-ಮಂತ್ರಗಳಿಂದ ಜನ್ಮ ತಳೆದವರಲ್ಲ. ಯಾವುದೇ ಒಂದು ಹೆಣ್ಣಿನಲ್ಲಿ ವಿಶ್ವಾಮಿತ್ರನಿಗೆ ಹುಟ್ಟಿರಬಹುದಾದ ಮಕ್ಕಳೇ ಅವರಾಗಿದ್ದಾರೆ ಎಂಬುದನ್ನು ವಾಸ್ತವದ ಅರಿವಿರುವವರೆಲ್ಲರಿಗೂ ಸ್ಪಷ್ಟವಾಗಿರುವ ಅಂಶ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ ಬಂದೆವು ಎನ್ನುವ ಉಲ್ಲೇಖ ಇದನ್ನೇ ಸಾರುತ್ತದೆ. ಇಂಥ ಮಾಯದಬಲೆಯರನ್ನು ಹರಿಶ್ಚಂದ್ರ ಅಪಮಾನಗೊಳಿಸಿ, ಹೊಡೆದೊಡಿಸುವ ಕ್ರಿಯೆ ರಾಜನ ಮುಂಗೋಪಿತನಕ್ಕೆ ಸಾಕ್ಷಿಯಾಗುತ್ತದೆ ಮತ್ತು ಆತನ ಜಾತಿ ಬಗೆಗಿನ ವರ್ತನೆಯನ್ನು ಅನಾವರಣಗೊಳಿಸುತ್ತದೆ.
    ಹರಿಶ್ಚಂದ್ರ ಕಾಡಿನಲ್ಲಿ ಬೇಸತ್ತು, ದಣಿದು ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಯದಬಲೆಯರು ಅಲ್ಲಿಗೆ ಬಂದ ತಮ್ಮ ಮಧುರ ಗಾಯನದಿಂದ ಆತನ ಬೇಸರ ನೀಗುವಂತೆ ಮಾಡುತ್ತಾರೆ. ಇದರಿಂದ ಸಂತುಷ್ಟಗೊಂಡ ಹರಿಶ್ಚಂದ್ರ ಆಭರಣಗಳ ಕಾಣಿಕೆ ನೀಡಿದಾಗ ಅದನ್ನು ಸ್ವೀಕರಿಸಲೊಲ್ಲದ ಆ ಮಾನನಿಯರು ‘ಬಿರುಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮುತ್ತಿನ ಸತ್ತಿಗೆಯನ್ನು ಬಯಸುತ್ತಾರೆ. ಮುತ್ತಿನ ಸತ್ತಿಗೆ ರವಿಕುಲದ ಪ್ರತೀಕ. ಅದನ್ನು ಕೊಡಲಾಗದು ಎನ್ನುವ ಹರಿಶ್ಚಂದ್ರ ಅದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾನೆ. ಆಗ ಆ ಅನಾಮಿಕೆಯರು ಅದರ ಬದಲಾಗಿ ‘ವಲ್ಲಭನಾಗಿ ಚಿತ್ತದುಮ್ಮಳಿಕೆಯಂ ಕಳೆ’ ಎನ್ನುವ ಮೂಲಕ ಆತನ ರಾಣಿಯರಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ ಹರಿಶ್ಚಂದ್ರ ಅವರು ಕೀಳು ಕುಲದವರು ಎಂಬ ಒಂದೇ ಕಾರಣದಿಂದ ಅವರನ್ನು ತಿರಸ್ಕರಿಸುತ್ತಾನೆ. ಅವರು ಹಾಗೇ ಕೇಳಿದ್ದೇ ತಪ್ಪೆಂದು ವಾದಿಸುತ್ತಾನೆ. ‘ನಿಮಗೋಸಿಗೆನ್ನ ಕುಲಮಂ ಕೆಡಿಪೆನೆ’ ಎಂಬುದಾಗಿ ಪ್ರಶ್ನೆ ಎಸೆಯುತ್ತಾನೆ.
    ವರ್ಣಧರ್ಮದಲ್ಲಿ ಕೀಳು ಜಾತಿಯ ಹೆಣ್ಣುಗಳನ್ನು ಮದುವೆಯಾಗಲು ಯಾವುದೇ ತಕರಾರು ಇಲ್ಲ. ಆದರೆ ಹರಿಶ್ಚಂದ್ರ ವರ್ತಿಸುವ ರೀತಿ ತೀರ ವಿಚಿತ್ರವಾಗಿದೆ. ವೈದಿಕ ಧರ್ಮದ ನಿಯಮಾವಳಿಗಳಿಂದ ಕೂಡಿದ ಮನುಸ್ಮೃತಿಯೇ ಈ ಅನುಲೋಮ ವಿವಾಹಕ್ಕೆ ಮಾನ್ಯತೆ ನೀಡಿದೆ. ಆದರೆ ಕುಲದ ನೆಪವೊಡ್ಡಿ ಹರಿಶ್ಚಂದ್ರ ಆ ಅನಾಮಿಕೆಯರನ್ನು ತಿರಸ್ಕರಿಸುವ ಪರಿ ಬೇರೆ ಏನನ್ನೋ ಸೂಚಿಸುವಂತಿದೆ.
    ಜನಸಾಮಾನ್ಯರಲ್ಲಿ ಬೀಡು ಬಿಟ್ಟಿರುವ ಕಂದಾಚಾರಗಳ ಪ್ರತಿರೂಪ ಹರಿಶ್ಚಂದ್ರ ಎನ್ನಲಡ್ಡಿಯಿಲ್ಲ. ಆತನ ವರ್ತನೆಯೇ ಜಟೀಲ. ಕೀಳು ಕುಲದವರು ಅಸ್ಪೃಶ್ಯರೆಂದೇ ಭಾವಿಸುವ ವ್ಯಕ್ತಿ ಅವರನ್ನು ಹೇಗೆ ತಾನೆ ಮುಟ್ಟಿಯಾನು ? ಆ ಮಾಯದಬಲೆಯರನ್ನು ಮದುವೆಯಾಗುವಂತೆ ಸ್ವತಃ ವಿಶ್ವಾಮಿತ್ರನೇ ಬಂದು, ‘ಎನ್ನ ಬಸುರಿಂದ ಮೂಡಿರ್ದ ಕನ್ನೆಯರು’ (8/11) ಎಂದು ಹೇಳಿದರೂ ಹರಿಶ್ಚಂದ್ರನದು ಪುನರುಕ್ತಿಯಷ್ಟೆ ! ‘ಹೊಲತಿಯರ ನೆರೆವರೆ’ (8/14), ‘ಹೊಲತಿಯರನಿರಿಸಿಕೊ ಎಂದು ನೀಂ ಕರುಣಿಸಬಹುದೆ’ (8/23), ‘ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿಮಿತ್ತ ಹೋಹವನಲ್ಲ’ (8/20), ‘ಹೊಲೆಯರ ಸಂಗಮಂ ಮಾಡಿ ನಿಷ್ಕಾರಣಂ ಗೋರ ನರಕಾಳಿಯೊಳು ಬಿದ್ದು ಹೊರಳುವವನಲ್ಲ’ (8/27) ‘ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು’ (8/20) ಎಂಬುದಾಗಿ ಪ್ರತಿಮಾತಿನ ಮೂಲಕ ಆ ಅನಾಮಿಕೆಯರನ್ನು ತಿರಸ್ಕರಿಸುತ್ತಾನೆ.
    ಈ ಮೊದಲೇ ಹೇಳಿದಂತೆ ಮಾಯದಬಲೆಯರು ವಿಶ್ವಾಮಿತ್ರನ ಅನೈತಿಕತೆಯ ಸಂತಾನವೇ ಆಗಿದ್ದಾರೆ. ವರ್ಣಧರ್ಮ ಅಂತಹ ವ್ಯಕ್ತಿಗಳ ಜೊತೆ ಸಂಬಂಧ ಬೆಳೆಸುವುದನ್ನು ನಿಷೇಧಿಸಿದೆ. ಈ ಕಾರಣವಾಗಿಯೇ ಹರಿಶ್ಚಂದ್ರ ಮಾತು ಮಾತಿಗೂ ಅವರು ಹೊಲತಿಯರು ಎಂದು ನುಡಿಯುತ್ತಾನೆ. ಅವರು ಬಹುಶಃ ವಿಶ್ವಾಮಿತ್ರನ ಕುಲೀನ ಹೆಣ್ಣುಗಳಾಗಿದ್ದರೆ ಹರಿಶ್ಚಂದ್ರ, ಅವರನ್ನು ಮದುವೆಯಾಗುತ್ತಿದ್ದನೇನೋ ? ಯಾಕೆಂದರೆ ದೇವಿಭಾಗವತದ ಪ್ರಕಾರ ಹರಿಶ್ಚಂದ್ರನಿಗೆ ನೂರು ಜನ ಹೆಂಡತಿಯರಿದ್ದರು. ಇನ್ನಿಬ್ಬರು ಹೆಚ್ಚಾಗುತ್ತಿರಲಿಲ್ಲ ಅಲ್ಲವೇ ?
3. ರಾಘವಾಂಕನ ದೃಷ್ಟಿ : ರಾಘವಾಂಕ ಕೂಡ ಜಾತಿಯ ಬಲೆಯಿಂದ ಹೊರಬಿದ್ದವನಲ್ಲ. ಕಾವ್ಯದ ವಸ್ತು ಹೇಗಿದ್ದರೂ ಅದನ್ನು ನಿರ್ವಹಿಸುವಲ್ಲಿ ಕವಿಯ ಪಾತ್ರ, ಮನೋಸ್ಥಿತಿ ಮುಖ್ಯವಾಗಿರುತ್ತದೆ. ಹೀಗಾಗಿ ಕವಿ ಇಲ್ಲಿ ಮಾಯದಬಲೆಯರ ಮೂಲಕ ಪಾಪದ ಫಲವಾಗಿ ಕೆಳಜಾತಿಯವರು ಹುಟ್ಟುತ್ತಾರೆ ಎಂಬ ವಾದ ಮುಂದಿಡುತ್ತಾನೆ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ (7/22) ಬಂದೆವೆ ಎನ್ನುವ ಮಾಯದಬಲೆಯರ ಮಾತು ಇದನ್ನು ದೃಢಪಡಿಸುತ್ತದೆ. ಆ ಕಾಲದ ವಿಚಾರ ಏನೇ ಇದ್ದರೂ ಕವಿಯ ಮನೋಭಾವ ಶರಣಕ್ರಾಂತಿಯಿಂದ ಪ್ರೇರಿತವಾಗಿದ್ದರೂ ಜಾತಿಯ ಮೇಲು-ಕೀಳಿನ ತಾರತಮ್ಯವನ್ನು ಕವಿ ನಿರಾಕರಿಸುವುದಿಲ್ಲ. ಬಹುಶಃ ರಾಘವಾಂಕನಿಗೆ ಹರಿಹರ ಏಟು ನೀಡಿ ಹಲ್ಲು ಮುರಿದದ್ದು ಈ ಪ್ರಸಂಗದ ಕಾರಣವಾಗಿಯೇ ಇರಬೇಕು. ರಾಘವಾಂಕನನ್ನು ಬಂಡಾಯ ಕವಿ, ಕ್ರಾಂತಿ ಕವಿ ಎಂದು ಹೊಗಳಿದವರು ಈ ವಿಚಾರವನ್ನು ಗಮನಿಸಿದಂತೆ ತೋರುವುದಿಲ್ಲ.
    ರಾಘವಾಂಕನ ಹರಿಶ್ಚಂದ್ರ, ಕಾವ್ಯದ ಕೊನೆಯವರೆಗೂ ಕೂಡ ಜಾತಿಯ ಬಗ್ಗೆ  ಇಟ್ಟುಕೊಂಡಿರುವ  ಮೇಲರಿಮೆಯನ್ನು  ಬಿಟ್ಟುಕೊಡುವುದಿಲ್ಲ. ಕಾಶಿ ಕ್ಷೇತ್ರದಲ್ಲಿ ತನ್ನ ಹೆಂಡತಿ-ಮಗನನ್ನು ಮಾರಿದ ಮೇಲೆ, ಋಣದ ಭಾರ ಕಡಿಮೆಯಾಗದೇ ಇದ್ದಾಗ ತನ್ನನ್ನು ತಾನು ಮಾರಿಕೊಳ್ಳಲು ತಯಾರಾಗುತ್ತಾನೆ. ಆತನನ್ನು ಖರೀದಿಸಲು ಬಂದ  ವೀರಬಾಹುಕನ ‘ಸಂಬಳಿಗೋಲು’ ಕಂಡು ಈತ ಹೊಲೆಯನೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಹರಿಶ್ಚಂದ್ರ ಆತನಿಗೆ ತನ್ನನ್ನು ಮಾರಿಕೊಳ್ಳುವುದಿಲ್ಲ ಎನ್ನುತ್ತಾನೆ.
     
ನಡುಗದಂಜದೆ ಹೆದರದೋಸರಿಸದೆಕಟಕಟ               
ಕಡೆಯ ಹೊಲೆಯು ಮೇರೆದಪ್ಪಿ ಬಂದೆನ್ನ ತ               
ನ್ನೊಡೆಯಂಗೆ ದಾಸನಾಗೀಗಗಳೆಂದೆಂಬುದಿದು ಕಾಲಗುಣವೀ ಎನ್ನನು       
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ           
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು ಘುಡಿಸಿ        
ಕೋಪಾಟೋಪದಿಂ ಜರಿದು ಝಕಿಸಿದನವನಿಪನನಾಮಿಕನನು (7/19)
    ಕ್ರಯ ಮಾಡಲು ಬಂದ ಗ್ರಾಹಕನ ಜಾತಿ ಹಿಡಿದು ಭ್ರಾಂತಿ ಕಳೆದುಕೊಂಡಂತೆ ವರ್ತಿಸುವ ಹರಿಶ್ಚಂದ್ರನ ದೃಷ್ಟಿ ಎಷ್ಟೊಂದು ಸಂಕುಚಿತವಾದುದಾಗಿದೆ ಎಂಬುದನ್ನು ಈ ಪದ್ಯ ತಿಳಿಸುತ್ತದೆ. ತಾನೀಗ ರಾಜನಲ್ಲವೆಂದು ಅರಿತೂ  ಪರರಾಜ್ಯದಲ್ಲಿ ಬಂದು ‘ಹೊನ್ನುಳ್ಳ ಧನಿಕರಾರಾದೊಡಂ ಕೊಂಬುವರ್ ಬನ್ನಿ’ ಎಂದು ಕೂಗಿದವನೂ ಹರಿಶ್ಚಂದ್ರನೇ ವೀರಬಾಹುಕ ಹೊಲೆಯ ಎಂದರಿತ ತಕ್ಷಣ ಕನಲುವ ಅವಶ್ಯಕತೆ ಏನಿತ್ತು ? ಇಂಥ ವರ್ತನೆಯನ್ನು ಗಮನಿಸಿಯೇ ವೀರಬಾಹುಕನೂ ಕನಲಿ, ‘ಹದುಳಿಪ್ಪ ನಾನು ಚಾಂಡಾಳನೋ ಹುಸಿಯ ಹೊಲೆಯಿಂ ಹೋರುವ ನೀನು ಚಾಂಡಾಳನೋ’ ಎಂದು ಹೇಳುವ ಮಾತಿನ ಏಟು ಬಹುಶಃ ಹರಿಶ್ಚಂದ್ರನಿಗೆ ತಾಗಿದಂತಿಲ್ಲ. ನುಡಿದಂತೆ ನಡೆಯದ ಹರಿಶ್ಚಂದ್ರ ಸತ್ಯವಂತನೆಂದು ಜಗತ್ತಿಗೆ ಹೇಗೆ ಪರಿಚಯವಾದನೋ ? ಆತನನ್ನು ‘ಹುಸಿಯ ಹೊಲೆಹೊರೆಕಾರ’ ಎಂದು ವೀರಬಾಹುಕ ಸಂಭೋದಿಸಿರುವುದು ಔಚಿತ್ಯಪೂರ್ಣವಾಗಿದೆ.
    ಹರಿಶ್ಚಂದ್ರನಲ್ಲಿಯ ಜಾತಿಯ ಮೇಲರಿಮೆ, ಆತ ತಿನ್ನುವ ಕೂಳಿಗೂ ವ್ಯಾಪಿಸಿದೆ. ಹೆಣದ ಪಡಿಯಕ್ಕಿಯನ್ನು ವೃಷಭಕ್ಕೆ ತಿನ್ನಿಸಿ ಅದು ಹಾಕಿದ ಸೆಗಣಿಯಲ್ಲಿ ಪಚನವಾಗದೇ ಉಳಿದ ಅಕ್ಕಿಯನ್ನು ಆರಿಸಿ ಅನ್ನ ಮಾಡಿ ತಿನ್ನುವ ಆತನ ವರ್ತನೆ ವಿಚಿತ್ರವೆನಿಸುತ್ತದೆ.
    ಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಿದರೆ ಸಾಕು ಎಂದು ಮನುಸ್ಮೃತಿಯೇ ಹೇಳುತ್ತದೆ. ಅದೂ ಅಲ್ಲದೆ ಶುದ್ಧೀಕರಣದ ಅವಶ್ಯಕತೆಯಾದರೂ ಏನು ? ತಾನು ಮಾಡುವ ವೃತ್ತಿಗೆ ಲಭ್ಯತೆಯ ಆಧಾರದ ಮೇಲೆ ಬದುಕಬೇಕೆಂಬ ಕನಿಷ್ಟ ಆಲೋಚನೆಯಾದರೂ ಆತನಿಗೆ ಬೇಡವೇ ? ತಾನು ಮೇಲ್ಜಾತಿಯವ, ಮೇಲಾಗಿ ಅರಸ ಎನ್ನುವ ಮೇಲರಿಮೆ ಆತನಿಂದ ಕಳಚುವುದೇ ಇಲ್ಲ. ಅಂಬಲಿ ಉಣ್ಣುವಾತನಿಗೆ ಮೀಸೆ ತಿಕ್ಕುಲೊಬ್ಬ ಆಳು ಎಂಬಂತೆ ವೀರಬಾಹುಕನ ಆಳಾಗಿ ದುಡಿಯುವ ಹರಿಶ್ಚಂದ್ರನ ಸೇವೆ (ಕೈ-ಕಾಲು ಒತ್ತುವುದು, ಗೋಮಯ ಅಕ್ಕಿಯನ್ನು ಆರಿಸಿ ತರುವುದು ಇತ್ಯಾದಿ) ಮಾಡಲು ಸತ್ಯಕೀರ್ತಿ ಎಂಬ ಮಂತ್ರಿ  ಇದ್ದೇ ಇರುತ್ತಾನೆ. ತನ್ನನ್ನು ತಾನು ಮಾರಾಟ ಮಾಡಿಕೊಳ್ಳದೇ ಸತ್ಯಕೀರ್ತಿಯನ್ನು ಮಾರಿದ್ದರೂ ನಡೆಯುತ್ತಿತ್ತಲ್ಲವೇ ? ಬೆಂಕಿಗೆ ಆಹುತಿಯಾಗಲು ನಾ ಮೊದಲೆಂದು ಮುನ್ನುಗ್ಗುವ ಸತ್ಯಕೀರ್ತಿ ಮಾರಾಟದ ವಸ್ತುವಾಗಲು ಹರಿಶ್ಚಂದ್ರನ ಮಾತಿಗೆ ಇಲ್ಲವೆನ್ನುತ್ತಿದ್ದನೇ ?
    ಎಲ್ಲ ನಿಟ್ಟಿನಿಂದ  ನೋಡಿದಾಗಲೂ ಹರಿಶ್ಚಂದ್ರ ಸತ್ಯವಂತ ಎಂಬುದಾಗಲೀ ಆದರ್ಶ ಅರಸನಾಗಿಯಾಗಲೀ ಕಾಣಿಸುವುದೇ ಇಲ್ಲ. ಒಬ್ಬ ಮೇಲ್ಜಾತಿಯ ಕನವರಿಕೆಯಲ್ಲಿ ಮತಿವಿಕಲ್ಪಕ್ಕೆ ಒಳಗಾದ ವ್ಯಕ್ತಿಯಂತೆ ಕಾವ್ಯದಲ್ಲಿ ಆತನ ವರ್ತನೆ ಸ್ಪಷ್ಟವಾಗಿ ಬಿಂಬಿತವಾಗಿದೆ.                
               
                                        *******

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.