Showing posts with label ಕನ್ನಡ. Show all posts
Showing posts with label ಕನ್ನಡ. Show all posts

Wednesday, October 30, 2013

ಸಾಯಿ ಬಾಬಾ ಮಹಾ ಕಾದಂಬರಿ : ಪ್ರತಿಗಳಿಗೆ ಸಂಪರ್ಕಿಸಿ

ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ.

ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.




ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ. ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.
ಕೃತಿಯ ಪುಟಗಳು :  612+9  (ಕಿಂಗ್ ಸೈಜ್), ಬೆಲೆ- ರೂ. 450/-  (ಅಂಚೆ ವೆಚ್ಚ ಪ್ರತ್ಯೇಕ)
ಕೃತಿಯ ಪುಟಗಳು : 612+9 (ಕಿಂಗ್ ಸೈಜ್), ಬೆಲೆ- ರೂ. 450/- (ಅಂಚೆ ವೆಚ್ಚ ಪ್ರತ್ಯೇಕ)

Monday, January 07, 2013

ಅಕ್ಷರಹೀನ ವಚನಕಾರರು ?


                                ಡಾ. ಸಿದ್ರಾಮ ಕಾರಣಿಕ
                           
    ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಂಭವಿಸಿತು. ಜಾತಿ-ಜಾತಿಗಳಲ್ಲಿದ್ದ ಅಂತರವನ್ನು ದೂರ ಮಾಡಿ, ಪುರೋಹಿತಶಾಹಿ ವರ್ಗದ ವಿರುದ್ಧ ಸಿಡಿದು ನಿಂತು ಮಾಡಿದ ಕ್ರಾಂತಿಯ ಹೆಜ್ಜೆ ಯಾವತ್ತಿಗೂ ಅನುಕರಣೀಯವೇ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯ ಕೂಡ ಅಕ್ಷರ ಕಲಿತು ವಚನ ರಚಿಸಿದರು ಎಂಬುದು ಒಪ್ಪತಕ್ಕ ಮಾತು ಅಲ್ಲ ; ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹೀಗೆ ಹೇಳುತ್ತಿರುವುದನ್ನು ಒಪ್ಪದ ಕೆಲ `ಬುದ್ಧಿಜೀವಿಗಳು', `ಪಂಡಿತರು', ವಿದ್ವಾಂಸರು' ಅಪಸ್ವರ ಎತ್ತಿ ಹಾಡಲು ಸುರು ಮಾಡಬಹುದು ! ಈ ವಾದವು ಪರಾಂಪರಾಗತ ನಂಬಿಕೆಯೊಂದನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹುಯಿಲೆಬ್ಬಿಸಬಹುದು ! ಆದರೆ ವಾಸ್ತವ ವಾಸ್ತವೇ ! ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
    ವೈದಿಕ ಧರ್ಮದಲ್ಲಿ ದಲಿತರು, ಶೂದ್ರರು ಅಕ್ಷರ ಕಲಿಯುವಿಕೆಯನ್ನು ನಿರಾಕರಿಸಲಾಗಿದೆ. ಕೇವಲ ಪಠನ ಮಾಡಿದರೆ ಸಾಕು ನಾಲಿಗೆಯನ್ನೇ ಕಿತ್ತಿ ಹಾಕುವ, ವೇದ-ಮಂತ್ರಗಳನ್ನು ಕೇಳಿದರೆ ಸಾಕು ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ಪರಿಕ್ರಮಕ್ಕೆ ಹನ್ನೆರಡನೇ ಶತಮಾನವೂ ಕೂಡ ಹೊರತಾಗಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಬಸವಣ್ಣ ತೋರಿದ ಕ್ರಾಂತಿಕಾರಿ ನಿಲುವಿಗೆ ಸನಾತನವಾದಿಗಳು ತೋರಿದ ತೀವ್ರ ವಿರೋಧವನ್ನು ಗಮನಿಸಬೇಕು. ಹೀಗೆಲ್ಲ ಇರುವಾಗ ಒಂದು ಸೀಮಿತ ಅವಧಿಯಲ್ಲಿ ಅಕ್ಷರ ಹೀನ ದಲಿತರು, ಶೂದ್ರರು ಮತ್ತು ಮಹಿಳೆಯರು ಅಕ್ಷರ ಕಲಿತು ಪಾಂಡಿತ್ಯ ಗಳಿಸಿದರು ಎಂದರೆ ಅದೇನು ಪವಾಡವೇ ?
    `ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದುರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದದ್ದು ತೀವ್ರ ಗಮನಿಸಬೇಕಾದ ಅಂಶವಾಗಿದೆ.'1 ಎನ್ನುವ ಡಾ. ಎಂ. ಎಂ. ಕಲ್ಬುರ್ಗಿಯವರ ಮಾತಿನಲ್ಲಿರುವ `ಸಾಹಿತ್ಯ ನಿರ್ಮಿತಿ' ಬಂದದ್ದು ಕೇವಲ ಅನುಭಾವದಿಂದಾಗಿಯೇ ಹೊರತು ಅಕ್ಷರಜ್ಞಾನದಿಂದ ಅಲ್ಲವೇ ಅಲ್ಲ.
    `........ಪ್ರಾಚೀನ ಮಹಿಳಾ ಶಿಕ್ಷಣವನ್ನು ಗಮನಿಸಿದರೆ ಹೆಣ್ಣು ಸಾಂಸ್ಕøತಿಕವಾಗಿ ದಾಖಲಾಗಿರುವುದು ಗಮನಾರ್ಹ ವಸ್ತವಾಗಿದೆಯೇ ಹೊರತು ವಿದ್ಯಾವತಿಯಾಗಿ ಅಲ್ಲ'2 ಎನ್ನುವ ಡಾ. ಚೆನ್ನಕ್ಕ ಪಾವಟೆಯವರ ಮಾತುಗಳನ್ನು ದಲಿತ ಮತ್ತು ಶೂದ್ರರಿಗೂ ಅನ್ವಯಿಸಿಕೊಂಡು ಅವಲೋಕಿಸಿದಾಗ ಲೇಖನದ ಈ ವಾದಕ್ಕೆ ಸಾಕ್ಷ್ಯ ದೊರೆಯುತ್ತದೆ. ಆದರೆ ಈ ಮಟ್ಟಿಗಿನ ವಾದವನ್ನು ಬೆಳೆಸಲು ಬಹಳಷ್ಟು ಜನ ಹಿಂಜರಿಯುವುದೇ ಹೆಚ್ಚು. ಮತಾಂಧತೆಯ ಭಾರತದಲ್ಲಿ ಇದು ಸಹಜ ಕೂಡ !
    `ಯಾವ ದಲಿತರು ಅಜ್ಞಾನಿಗಳಾಗಿದ್ದರೋ ಅಂಥವರು ವಚನ ಚಳುವಳಿಯ ಸಂದರ್ಭದಲ್ಲಿ ವಿಚಾರವಂತರಾದರು. ವಿಚಾರವಾದಕ್ಕೆ ವ್ಯಾಖ್ಯೆಯನ್ನು ಬರೆದರು. ಯಾರನ್ನು ಈ ವ್ಯವಸ್ಥೆಯಲ್ಲಿ ಪಶು-ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತೋ ಅಂತಹವರೇ ಹೊಸ ಸಂಸ್ಕøತಿಯ ಹರಿಕಾರರಾದರು. ಯಾರು ಭಯದಿಂದ ತತ್ತರಿಸಿ, ಕೀಳರಿಮೆಯಿಂದ ಮುದುಡಿಕೊಂಡಿದ್ದರೋ ಅಂಥವರೇ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಝಳಪಳಿಸುವ ಖಡ್ಗಗಳಾದರು. ಇದು ವಚನ ಚಳುವಳಿಯ ಅತ್ಯಂತ ಮಹತ್ವದ ಸಾಧನೆ.'3 ಎನ್ನುವ   ಡಾ. ಬಸವರಾಜ ಸಬರದ ಅವರ ವಿವರಣೆ ಪಾರಂಪರಿಕವಾಗಿ ಪ್ರಚುರಪಡಿಸುತ್ತ ಬಂದಿರುವಂಥದ್ದೇ ಆಗಿದೆ. ಈ ಮೊದಲು ನಾವು ಕೂಡ ಈ ವಿಚಾರವನ್ನೇ ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದೇವು. ಆದರೆ ಇಲ್ಲಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದಾಗ ವಚನ ಚಳುವಳಿ ಮೌಖಿಕ ಪರಂಪರೆಯ ಸಾಧನೆಯೇ ಆಗಿದೆ ಎಂಬುದು ಸಾಧಿತ ಅಂಶವಾಗಿ ಹೊರಹೊಮ್ಮುತ್ತದೆ.
    ಬಸವಣ್ಣನ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ಆರಂಭವಾದಾಗ ಕೆಲವು ದಲಿತರು, ಶೂದ್ರರು ಮತ್ತು ಮಹಿಳೆಯರು ಸಾಂಪ್ರದಾಯಿಕ ಸಮಾಜವನ್ನು ಧಿಕ್ಕರಿಸಿ, ಹೊಸ ಸಮಾಜದ ಅಸ್ತಿತ್ವಕ್ಕಾಗಿ ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದರಷ್ಟೇ ಅಲ್ಲ, ತಮ್ಮ ವಿಚಾರಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಇನ್ನುಳಿದ ತಮ್ಮ ಬಾಂಧವರಿಗೆ ಅರಿವನ್ನುಂಟು ಮಾಡಲು ಮುಂದಾದರು. ಆದರೆ ಅವರಿಗೆ ಅಕ್ಷರದ ಅರಿವು ಇರಲಿಲ್ಲ. ಅವರ ಹೆಸರಿನಲ್ಲಿರುವ ವಚನಗಳು ಬೇರೆ ಯಾರೋ ಲಿಪೀಕರಣ ಮಾಡಿದರ ಫಲ ಮಾತ್ರ. ಆದರೆ ಆ ವಚನಗಳಲ್ಲಿ ಇರುವ ವಿಚಾರ ಮಾತ್ರ ಆ ವಚನಕಾರರದೇ ಆಗಿದೆ. ಅಂದರೆ ವಚನಕಾರರೆಲ್ಲ ಪ್ರಾಜ್ಞರೇ ಆಗಿದ್ದರೂ ಅಕ್ಷರವನ್ನು ಬಲ್ಲವರಾಗಿರಲಿಲ್ಲ.
    ಜಾನಪದ ಪರಂಪರೆಯನ್ನು ಗಮನಿಸಿದಾಗ ಈ ಪ್ರಕ್ರಿಯೆ ಬಹು ಹಿಂದಿನಿಂದಲೇ ಹೊರಹೊಮ್ಮಿ ಬಂದಿದೆ ಎನ್ನುವದು ಸ್ಪಷ್ಟವಾಗುತ್ತದೆ. ಈ ವಿಚಾರದಿಂದ ಜನಪದರು ಸೃಷ್ಟಿಸಿದ ಜಾನಪದ ಸಾಹಿತ್ಯ ಕೂಡ ಗಟ್ಟಿಕಾಳೇ ಆಗಿದೆ ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಹನ್ನೆರಡನೇ ಶತಮಾನದ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಆಯ್ದ ಕೆಲವರನ್ನು ಬಿಟ್ಟರೆ ಇನ್ನುಳಿದವರೆಲ್ಲ ಮೌಖಿಕ ಪರಂಪರೆಯವರು ಎಂಬುದು ಖಚಿತ.
    ಈ ವಾದಕ್ಕೆ ಇನ್ನಷ್ಟು ನಿಖರತೆಯನ್ನು ನೀಡಲು ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ಅವರನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಪುರಾಣ, ಕಥೆ, ಐತಿಹ್ಯ ತೆಗೆದು ನೋಡಿದರೂ ಅವುಗಳಲ್ಲಿ ಈ ಇಬ್ಬರು ಒಂದೇ ಕಡೆ ಹೆಚ್ಚು ಕಾಲ ಸ್ಥಾಯಿಯಾಗಿ ನೆಲೆ ನಿಂತವರಲ್ಲ ಎಂಬ ಪ್ರಸ್ತಾಪ ಕಂಡು ಬರುತ್ತದೆ. ಮಾಯಾ ಮೋಹವನ್ನೇ ತಿರಸ್ಕರಿಸಿ, ವಿಚಿತ್ರ ವೇಷದಲ್ಲಿ ದೇಶ ಸಂಚಾರ ಮಾಡಿದ ಅಲ್ಲಮ ಮತ್ತು ಭವದ ಬದುಕನ್ನೇ ತಿರಸ್ಕರಿಸಿ, ಕೇಶಾಂಬರಿಯಾಗಿ ಸಂಚಾರ ಮಾಡಿದ ಅಕ್ಕಮಹಾದೇವಿ ಜಂಗಮತ್ವವನ್ನು ಅಪ್ಪಿಕೊಂಡವರು. ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ ! ಅಲೆದಾಟದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದ ಇವರು ಸಂದರ್ಭಕ್ಕೆ ತಕ್ಕಂತೆ ಅನುಭಾವದ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸುತ್ತ ಹೋಗಿದ್ದಾರೆ. ಅವೆಲ್ಲ ಅವರು ಬರೆದಿಟ್ಟ ವಿಚಾರಗಳಲ್ಲ ಅಥವಾ ಆನಂತರದಲ್ಲಿ ಅವುಗಳನ್ನು ಬರೆದುಕೊಂಡವರೂ ಅಲ್ಲ. ಬರೆದಿಡುವುದು ಸಾಧ್ಯವೂ ಇರಲಿಲ್ಲ.
    ಇದಕ್ಕೆ ಪೂರಕವಾಗಿ ಒಂದು ಮೂಲಭೂತವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ ; ಅಲೆದಾಟದಲ್ಲಿದ್ದ ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ತಾವಾಡಿದ ಮಾತುಗಳನ್ನು ಬರೆದಿಟ್ಟುಕೊಳ್ಳಲು ತಮ್ಮ ಹತ್ತಿರ ಬರೆಯುವ ಹಾಳೆ, ತಾಳೆಗರಿ, ಲೆಕ್ಕಣಿಕೆ, ದೌತಿಗಳನ್ನು ಖಾಯಮ್ಮಾಗಿ ಇಟ್ಟುಕೊಂಡಿರುತ್ತಿದ್ದರೆ ? ಅನುಭಾವದ ವಿಚಾರಗಳನ್ನು ಹೇಳಿಯಾದ ಮೇಲೆ ಅವುಗಳನ್ನು ಲಿಪಿಬದ್ಧಗೊಳಿಸುತ್ತಿದ್ದರೆ ? ಹಾಗಾದರೆ ಅವರು ತಾವು ಬರೆದ ವಚನಗಳನ್ನು ಎಲ್ಲಿ ಸಂಗ್ರಹಿಸಿ ಇಡುತ್ತಿದ್ದರು ? ತಮ್ಮ ಜೊತೆಯಲ್ಲಿಯೇ ಗಂಟು ಕಟ್ಟಿಕೊಂಡು ತಿರುಗುತ್ತಿದ್ದರೆ ? ಅರಿವೆಯ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ಇವರು ಹೀಗೆಲ್ಲ ಮಾಡಲು ಸಾಧ್ಯವೇ ?
    ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ. ಅದೂ ಅಲ್ಲದೇ `ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿಚರ್ಚೆಯನ್ನು ಬೆಳೆಯಿಸಿದ `ಶೂನ್ಯ ಸಂಪಾದನೆ'ಗಳಲ್ಲಿ ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟಕೀಯತೆಗಾಗಿ ನಿರ್ಮಿತಿಯಾದವುಗಳೇ ಹೊರತು ಅವು ಅಲ್ಲಮ ಹಾಗೂ ಅಕ್ಕನ `ಮೂಲ ವಚನ'ಗಳಾಗಿರಲಾರವು.'4 ಎನ್ನುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾತಿನಲ್ಲಿ ವಚನಗಳನ್ನು ಬರೆದಿರುವ ಬಗ್ಗೆ ಗುಮಾನಿ ಇದೆ. ಆ ಸಂದರ್ಭದಲ್ಲಷ್ಟೇ ಅಲ್ಲ ಅವರ ಹೆಸರಿನಲ್ಲಿರುವ ಯಾವ ವಚನಗಳೂ ಅವರ ಮೂಲ ವಚನಗಳೇ ಅಲ್ಲ. ಯಾಕೆಂದರೆ ಅವರು ಮೌಖಿಕ ಪರಂಪರೆಯ ಪ್ರತಿನಿಧಿಗಳು.
    ಹಾಗಾದರೆ ವಚನಗಳನ್ನು ಲಿಪೀಕರಣ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇಲ್ಲಿ ತಲೆ ತಿನ್ನುತ್ತದೆ. ಅದಕ್ಕೆ ಉತ್ತರವೂ ಇದೆ. ಪ್ರಾಚೀನ ಕಾಲದಲ್ಲಿ ಬರವಣಿಗೆ ಒಂದು ನಿರ್ದಿಷ್ಟ ಜಾತಿಯ ಕೆಲಸವಾಗಿತ್ತು. ಅವರು ಇತರರು (ಬರವಣಿಗೆಯ ಚೌಕಟ್ಟಿಗೆ ಸಂಬಂಧಿಸಿದವರು) ಹೇಳಿದ್ದನ್ನು ಲಿಪಿಬದ್ಧಗೊಳಿಸುತ್ತಿದ್ದರು. ಇದು ಒಂದು ವೃತ್ತಿಯೇ ಆಗಿತ್ತೆಂದರೆ ತಪ್ಪಾಗುವುದಿಲ್ಲ. ಇದರ ಜೊತೆಗೆ ಈ ಲಿಪೀಕರಣ ವ್ಯಕ್ತಿಯೊಬ್ಬನ ಆಸಕ್ತಿ ಕೂಡ ಆಗಿತ್ತು. ಬುದ್ಧನ ಕಾಲದಲ್ಲಿ ಬುದ್ಧನ ಆಚಾರ-ವಿಚಾರಗಳನ್ನು, ಬೋಧನೆಗಳನ್ನು ಬರೆದಿಡಲು `ಭಾಣಕರು' ಎನ್ನುವವರು ಇದ್ದರು. ಹನ್ನೆರಡನೇ ಶತಮಾನದಲ್ಲಿ ಕೂಡ ಇಂಥ ಪದ್ಧತಿ ಚಾಲ್ತಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು.
    ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಬರೆದಿಡುವ ಕಾಯಕದವರೂ ಇದ್ದರು. `ಪ್ರತಿಯೊಂದು ವಚನವೂ ಆಯಾ ವಚನಕಾರನ ಇಷ್ಟ ದೈವದ ಸಾಕ್ಷಿಯಲ್ಲಿ ನುಡಿದ ಮಾತು'5 ಆಗಿರುವುದರಿಂದ ಆ ವಚನಕಾರ ತನ್ನ ಮಾತನ್ನು ಇಷ್ಟದೈವದ ಹೆಸರಿನೊಂದಿಗೆ ನುಡಿಯುತ್ತಿದ್ದರಿರಬೇಕು. ಇಲ್ಲವೆ ವಚನಕಾರನ ಇಷ್ಟದೇವದ ಹೆಸರುಗಳನ್ನು ಅರಿತ ಲಿಪಿಕಾರ ವಚನಕಾರನ ಮಾತಿನ ಕೊನೆಯಲ್ಲಿ ಸೇರಿಸಿ ಬರೆಯುವ ರೂಢಿ ಇಟ್ಟುಕೊಂಡಿರಬೇಕು. ಇದನ್ನೇ ನಾವು ಮುದ್ರಿಕೆಗಳು ಎನ್ನುವುದು. ಈ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಆವಾಗ ಮೂಲ ಹಸ್ತಪ್ರತಿಯ ಲಿಪಿಕಾರ ಯಾರು ಎನ್ನುವುದು ತಿಳಿಯಲು ಸಾದ್ಯವಾಗಬಹುದು.
    ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿಯರ ವಚನಗಳಿಗೆ ಈ ಮಾತು ಸರಿ ಹೊಂದಲಾರದು. ಅವರು ಅನುಭವ ಮಂಟಪದಲ್ಲಿದ್ದಾಗ ಅವರ ನುಡಿಗಳನ್ನು ಲಿಪಿಬದ್ಧಗೊಳಿಸಿರುವ ಲಿಪಿಕಾರ ಇಷ್ಟದೈವದ ಸೇರಿಸಿದ್ದರೆ, ಅವರು ಜಂಗಮತ್ವವನ್ನು ಹೊಂದಿ ನಿರಂತರ ತಿರುಗಾಟದಲ್ಲಿ ಇದ್ದಾಗ ಅವರ ಅಂಕಿತ ಅವರ ವಚನಗಳಿಗೆ ಹೇಗೆ ಬಂತು ಎಂಬ ಪ್ರಶ್ನೆಯೂ ವಿದ್ವಾಂಸರಿಂದ ಉದ್ಭವಿಸುತ್ತದೆ.
    ಇದಕ್ಕೂ ಸರಳವಾದ ಉತ್ತರವಿದೆ. ಮೇಲೆ ಹೇಳಿದಂತೆ ಇವರು ನುಡಿಯನ್ನು ಮುಗಿಸಬೇಕಾದರೆ ಇಷ್ಟದೈವದ ಹೆಸರನ್ನು ಹೇಳುತ್ತಿರಬೇಕು. ಹೀಗೆ ಅವರು ಹೇಳುತ್ತ ಹೋದಂತೆ ಆಸಕ್ತರಾಗಿರುವ ಕೆಲವು ಜನರು ಅವರ ವಿಚಾರಗಳಿಂದ ಪ್ರಭಾವಿತರಾಗಿ ಯಥಾವತ್ ಅಲ್ಲದಿದ್ದರೂ ನುಡಿಯ ಸಾರ ಮತ್ತು ಅಂಕಿತವನ್ನು ಲಿಪಿಬದ್ಧಗೊಳಿಸಿರಬೇಕು. ಈ ಕಾರಣದಿಂದಲೇ ವಚನಗಳ ಸಂಖ್ಯೆಯನ್ನು ನಿರ್ಣಯಿಸುವ ಕಾರ್ಯ ಇಂದಿಗೂ ಕಷ್ಟದಾಯಕವಾಗಿಯೇ ಇದೆ. ಯಾಕೆಂದರೆ ಭಿನ್ನ ಅಂಕಿತಗಳು ಇರುವ ಒಂದೇ ರೀತಿಯ ವಚನಗಳೂ ಇಂದು ನಮ್ಮ ನಡುವೆ ಇವೆ.ಯಾವುದು ಯಾರ ವಚನ ಎನ್ನುವುದನ್ನು ನಿರ್ಣಯಿಸುವಲ್ಲಿ ಇನ್ನೂ ಗೊಂದಲಗಳಿವೆ.  ಲಿಪಿಕಾರ ಮತ್ತು ಪ್ರತಿ ಲಿಪಿಕಾರನ ತಪ್ಪಿನಿಂದಲೇ ಇಂತಹ ಅವಘಡಗಳು ಸಂಭವಿಸಿವೆ.
    ಇದಕ್ಕಿಂತ ಮುಖ್ಯವಾಗಿ ವಚನಗಳನ್ನು ಸಾಮಾನ್ಯವಾಗಿ ನುಡಿ, ಮಾತು, ಸೂಳ್ನುಡಿ ಮೊದಲಾದವುಗಳಿಂದಲೇ ಸೂಚಿಸಲಾಗಿದೆ ಹೊರತು ಬೇರೆ ರೀತಿಯಲ್ಲಿ ಹೇಳಿಲ್ಲ. `ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುದಾಗಿ ಹೇಳಲಾಗಿದೆಯೇ ಹೊರತು `ಬರೆದರೆ.....' ಎಂದು ಹೇಳಲಾಗಿಲ್ಲ. ಈ ವಾದ ತುಂಬ ಬಾಲಿಶ ಎನಿಸಬಹುದಾದರೂ ಕೂಡ ಅದೇ ಸತ್ಯವನ್ನು ತೋರುವ ಮಾರ್ಗವೂ ಆಗಬಲ್ಲದು ಎಂಬುದನ್ನು ಮಾತ್ರ ನಾವು ಮರೆಯುವಂತಿಲ್ಲ.
    ಈ ಎಲ್ಲ ಅಂಶಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮಥಿಸಿದಾಗ ವಚನಕಾರರೆಲ್ಲರೂ ಅಕ್ಷರ ಕಲಿತವರಾಗಿರಲಿಲ್ಲ ಎಂಬ ವಾದ ಸಾಧಿತವಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ಮೌಖಿಕ ಪರಂಪರೆಯ ಜಾನಪದ ಸಾಹಿತ್ಯ ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ ಅಲ್ಲವೇ ?

ಅಡಿ ಟಿಪ್ಪಣಿಗಳು :
1. ಮಾರ್ಗ ಸಂ-1 : ಡಾ. ಎಂ.ಎಂ.ಕಲ್ಬುರ್ಗಿ : 1995 : ಪು-260
2. ಅನುಗ್ರಹ : ಡಾ. ಚೆನ್ನಕ್ಕ ಪಾವಟೆ : 1999 : ಪು-217
3. ಸಮುದಾಯ ಮತ್ತು ಸಂಸ್ಕøತಿ : ಡಾ. ಬಸವರಾಜ ಸಬರದ : 2002 : ಪು-130
4. ಸಾಹಿತ್ಯ ವಿಮರ್ಶೆ-1992 : ಸಂ-ಡಾ. ರಹಮತ್ ತರೀಕೆರೆ : 1993 : (ಅಡಿ ಟಿಪ್ಪಣಿ)      ಪು-124
                    ********

Wednesday, October 31, 2012

ಮತ್ತೇ ನಾವು ಆಂಡಯ್ಯ ಆಗುವುದು ಬೇಡ !



ಡಾ. ಸಿದ್ರಾಮ ಕಾರಣಿಕ 
 
ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘... ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

Saturday, June 16, 2012

ಇಂಗ್ಲಿಷ್ ಸಂವಹನಕ್ಕಾಗಿ ಮಾತ್ರವಲ್ಲ, ಜಗತ್ತಿನ ಜ್ಞಾನ, ಸಾಹಿತ್ಯ ಗ್ರಹಿಸುವ ಕಿಟಕಿ !


                               - ಡಾ. ನಟರಾಜ್ ಹುಳಿಯಾರ್

ಎರಡು ವರ್ಷಗಳ ಕೆಳಗೆ ಗುಲ್ಬರ್ಗ ಸೆಂಟ್ರಲ್ ಯೂನಿವರ್ಸಿಟಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾಗ ಒಂದು ಅಂಶವನ್ನು ಗಮನಿಸಿದ್ದೆ: ಇಂಗ್ಲಿಷ್ ಎಂ.ಎ. ಓದುತ್ತಿದ್ದ ಒಟ್ಟು ಅರವತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಕೇವಲ ಇಬ್ಬರು ಮಾತ್ರ ತಪ್ಪಿಲ್ಲದೆ ಇಂಗ್ಲಿಷ್ ಮಾತಾಡಬಲ್ಲವರಾಗಿದ್ದರು.

ಇನ್ನುಳಿದ ವಿದ್ಯಾರ್ಥಿಗಳಿಗೆ ಈ ಸಾಮರ್ಥ್ಯ ಇಲ್ಲದಿರುವುದಕ್ಕೆ ಅವರ ಸಾಮಾಜಿಕ ಹಿನ್ನೆಲೆಯ ಜೊತೆಗೇ ಅವರೆಲ್ಲ ಇಂಗ್ಲಿಷ್ ಕಲಿಕೆಯನ್ನು ತಡವಾಗಿ ಆರಂಭಿಸಿದ್ದು ಕೂಡ ಕಾರಣವಾಗಿತ್ತು. ಈ ಸ್ಥಿತಿಯನ್ನು ನೋಡಿದಾಗ, ಇಂಗ್ಲಿಷ್ ಭಾಷೆಯನ್ನು ತಡವಾಗಿ ಕಲಿಯುತ್ತಿರುವವರ ಕಷ್ಟಗಳು ನನಗೆ ಮನದಟ್ಟಾಯಿತು. ಬಾಲ್ಯದಲ್ಲಿ ಎಲ್ಲ ಮಕ್ಕಳಿಗೂ ಸಾಧ್ಯವಿರುವ ಭಾಷಾಕಲಿಕೆಯ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವುದೇ ಮಕ್ಕಳ ಕಷ್ಟಕ್ಕೆ ಕಾರಣವಾಗಿತ್ತು.


ಈಗಾಗಲೇ ಸಿದ್ಧವಾಗಿರುವ ಹಾಗೆ ಬಾಲ್ಯದಲ್ಲಿ ಸಹಜವಾಗಿ ಇರುವ `ಲಿಂಗ್ವಿಸ್ಟಿಕ್ ಪ್ಲಾಸಿಸಿಟಿ` ಅಥವಾ ಭಾಷಾಕಲಿಕೆಯ ಸಾಮರ್ಥ್ಯದಿಂದಾಗಿ ಮಕ್ಕಳು ನಾಲ್ಕು ಭಾಷೆಗಳನ್ನು ಕಲಿಯಬಲ್ಲರು. ಆದರೆ ಆ ಹಂತ ದಾಟಿದ ನಂತರ ಇಂಗ್ಲಿಷ್ ಕಲಿಕೆಯನ್ನು ಆರಂಭಿಸಿದ ಮಕ್ಕಳು ಅನೇಕ ಬಗೆಯ ಹಿನ್ನಡೆ, ಕೀಳರಿಮೆಗಳನ್ನು ಅನುಭವಿಸುತ್ತಿರುವುದನ್ನು ದಿನನಿತ್ಯ ನೋಡುತ್ತಿದ್ದೇವೆ.


ಆದರೆ ನಮ್ಮ ಸರ್ಕಾರಗಳು ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾದ ನಂತರವೂ ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮವನ್ನು ಜಾರಿಗೆ ತರುತ್ತೇವೆಂದು ಹುಸಿ ಭರವಸೆ ಕೊಡುತ್ತಾ ಕಳೆದ ಇಪ್ಪತ್ತು ವರ್ಷಗಳಿಂದ ಕಾಲ ತಳ್ಳುತ್ತಲೇ ಬಂದವು. ಸರ್ಕಾರಿ ಶಾಲೆಗಳ ಮಕ್ಕಳು ಹಿಂದುಳಿಯುತ್ತಲೇ ಬಂದವು. ಆರು ವರ್ಷಗಳ ಕೆಳಗೆ ವಿವಾದ ಕೋರ್ಟಿನಲ್ಲಿದೆ ಎಂಬ ನೆಪವೊಡ್ಡಿ ಕೆಲವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲೂ ಅಡ್ಡಗಾಲು ಹಾಕಲು ಯತ್ನಿಸಿದ್ದರು.

ಇಷ್ಟಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಸುಮಾರಾಗಿಯಾದರೂ ಕಲಿಯಲೆತ್ನಿಸಿರುವ ಮಕ್ಕಳಿಗೆ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.


ಒಂದು ಅಂದಾಜಿನ ಪ್ರಕಾರ, ರಾಜ್ಯದಲ್ಲಿರುವ ಸುಮಾರು ಇಪ್ಪತ್ತೈದು ಸಾವಿರ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮದ ಶಾಲೆಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಅಧಿಕೃತ, ಅನಧಿಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ.


ಅವುಗಳಲ್ಲೂ ಹಲಬಗೆಯ ಶ್ರೇಣಿಗಳಿವೆ. ಆದರೆ ಕರ್ನಾಟಕದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಈ ಎರಡು ಬಗೆಯ ಶಾಲೆಗಳ ನಡುವಣ ಸ್ಪರ್ಧೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಬಡತನ, ವಾತಾವರಣ ಹಾಗೂ ಇಂಗ್ಲಿಷ್ ಭಾಷೆಯ ಕೊರತೆಯ ಕಾರಣದಿಂದಾಗಿಯೂ ಹಿಂದೆ ಬಿದ್ದ್ದ್ದಿದಾರೆ.


ಮೊನ್ನೆ ತಾನೇ ಫಲಿತಾಂಶ ಪ್ರಕಟವಾಗಿರುವ ಪಿಯುಸಿ ನಂತರದ ಸಿ.ಇ.ಟಿ. ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ತೊಂಬತ್ತರಷ್ಟು ಭಾಗದ ಮಕ್ಕಳು ರ‌್ಯಾಂಕುಗಳನ್ನು ಪಡೆದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೂಡ ಇಂಗ್ಲಿಷ್ ಮಾಧ್ಯಮದ ಅನುಕೂಲವನ್ನು ಒದಗಿಸುವುದು ಅನಿವಾರ್ಯ.


ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಶೇ.18 ಭಾಗ ಶಿಕ್ಷಕ, ಶಿಕ್ಷಕಿಯರು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ತರಬೇತಿಗೊಂಡಿದ್ದಾರೆ; ಜೊತೆಗೆ, ಈಗಾಗಲೇ ವಿಜ್ಞಾನ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಸುತ್ತಿರುವವರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಡಿ.ಎಡ್ ಪದವಿ ಪಡೆದಿರುವವರು ಕೂಡ ಈ ಕಾರ್ಯಕ್ಕೆ ಸಿದ್ಧವಾಗಿದ್ದಾರೆ. ಆದ್ದರಿಂದ ಇಂಗ್ಲಿಷ್ ಮಾಧ್ಯಮ ಕೇವಲ ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಅಲ್ಲ; ಕರ್ನಾಟಕದಾದ್ಯಂತ ಮಾಧ್ಯಮಿಕ ಹಂತದಲ್ಲಿ ಐಚ್ಛಿಕವಾಗಿಯಾದರೂ ಆರಂಭವಾಗಬೇಕು.


ಆದರೆ, ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಖಾಸಗಿ ಶಾಲೆಗಳಲ್ಲಿರುವಂತೆ ಅವೈಜ್ಞಾನಿಕವಾಗಿ, ಮಾತೃಭಾಷೆಯನ್ನು ಸಂಪೂರ್ಣವಾಗಿ ಹೊರಗಿಟ್ಟು ವಿಷಯಗಳನ್ನು ಕಲಿಸಬಾರದು. ಬದಲಿಗೆ ಮಾತೃಭಾಷೆ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳನ್ನು ಬೆರೆಸಿ ಕಲಿಸುವ ಕ್ರಮವನ್ನು ಆರಂಭಿಸಬೇಕು.


ಇದು ಯಾಂತ್ರಿಕ  ಅನುವಾದ ವಿಧಾನ ಅಲ್ಲ. ಬದಲಿಗೆ ಮಾತೃಭಾಷೆಯಲ್ಲಿ ವಿಷಯವನ್ನು ಗ್ರಹಿಸುವ ಹಾಗೂ ಅದನ್ನು ಎರಡು ಭಾಷೆಗಳಲ್ಲಿ ಮಂಡಿಸುವ ಸಾಮರ್ಥ್ಯವನ್ನು ಕಲಿಸುವ ವಿಧಾನ. ಅದಕ್ಕಾಗಿ ಒಂದು ಪಠ್ಯಪುಸ್ತಕದ ಎಡ ಪುಟದಲ್ಲಿ ಕನ್ನಡ ಅಥವಾ ಇನ್ನಿತರ ಮಾತೃಭಾಷೆಯಲ್ಲಿಯೂ ಹಾಗೂ ಬಲಪುಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ವಿಷಯಗಳನ್ನು ಮುದ್ರಿಸಬೇಕು. ಪುಸ್ತಕ ದೊಡ್ಡದಾಗುತ್ತದೆ ಎಂಬ ಹುಸಿ ನೆಪ ಹೇಳದೆ ಈ ಕೆಲಸ ಮಾಡಬೇಕು.


ಯಾಕೆಂದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪುಸ್ತಕಗಳ ಗಾತ್ರಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳ ಪುಸ್ತಕಗಳು ತೀರಾ ಕಡಿಮೆ ವಿಷಯಗಳನ್ನು ಒಳಗೊಂಡಿವೆ. ಜೊತೆಗೆ, ಉಚಿತವಾಗಿ ಕೊಡುತ್ತಿದ್ದೇವೆ ಎಂಬ ಅಹಂಕಾರದಿಂದ ಈ ಪುಸ್ತಕಗಳನ್ನು ಆಕರ್ಷಕವಾಗಿ ಮುದ್ರಿಸುತ್ತಲೂ ಇಲ್ಲ. ಸರ್ಕಾರಿ ಶಾಲೆಗಳ ಕಲಿಕೆಯ ವಾತಾವರಣವನ್ನು ಆಕರ್ಷಕವಾಗಿಸಿ, ಮಕ್ಕಳಲ್ಲಿ ಉತ್ಸಾಹ ಉಕ್ಕುವಂತೆ ಮಾಡಬೇಕಾಗಿದೆ.


ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಭಾವುಕವಾಗಿ ವಿರೋಧಿಸುತ್ತಿರುವವರು ತಮಗರಿವಿಲ್ಲದೆಯೇ ಎಲ್ಲ ಜಾತಿಗಳ ಕಡುಬಡವರ ಪ್ರಗತಿಗೆ ವಿರುದ್ಧವಾಗಿದ್ದಾರೆ. ಯಾಕೆಂದರೆ ಇವತ್ತು ಮಕ್ಕಳಿಗಾಗಿ ತಿಂಗಳಿಗೆ ಕನಿಷ್ಠ ಐನೂರು ರೂಪಾಯಿಯನ್ನು ಖರ್ಚು ಮಾಡಬಲ್ಲ ಬಡ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳನ್ನು ಎಂಥದೋ ಒಂದು ಖಾಸಗಿ ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದಾರೆ.


ಇತ್ತ ಬಹುತೇಕ ಕಾಲೇಜು, ವಿವಿಗಳ ಶಿಕ್ಷಕ, ಶಿಕ್ಷಕಿಯರು, ಅನೇಕ ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇವರ‌್ಯಾರಿಗೂ ಇಲ್ಲದ ಕನ್ನಡ ರಕ್ಷಣೆ ಜವಾಬ್ದಾರಿಯನ್ನು ಅತಿ ಬಡ ಮಕ್ಕಳು ಮತ್ತು ಅವರ ಪಾಲಕರು ಮಾತ್ರ ಯಾಕೆ ಹೊರಬೇಕು? ಹಲ ಬಗೆಯ ಪ್ರತಿಕೂಲ ವಾತಾವರಣಗಳಲ್ಲಿ ಕಲಿಯುತ್ತಾ, ಕನ್ನಡವನ್ನು ಕಾಪಾಡುತ್ತಿರುವ ಈ ಮಕ್ಕಳಿಗೆ ಆರನೆಯ ತರಗತಿಯಿಂದ ಕೂಡ ಉಳ್ಳವರ ಮಕ್ಕಳ ಜೊತೆ ಸ್ಪರ್ಧಿಸಲು ಅವಕಾಶ ಕೊಡಬಾರದೆಂದು ವಾದಿಸುವುದು ಭಯಾನಕ ಕ್ರೌರ್ಯವಾಗುತ್ತದೆ.


ಹಾಗೆ ನೋಡಿದರೆ, ಈ ಮಕ್ಕಳಿಗೆ ಭಾಷೆಯ ಬಲ ಹಾಗೂ ಆತ್ಮವಿಶ್ವಾಸ ತುಂಬುವ ಸಲುವಾಗಿ ಇಂಗ್ಲಿಷ್ ಬರವಣಿಗೆ ಹಾಗೂ ಅಭಿವ್ಯಕ್ತಿಯನ್ನು ಅತ್ಯಂತ ಸಮರ್ಥವಾಗಿ ಕಲಿಸಿ ಹೊಸ ಜಗತ್ತಿಗೆ ಅಣಿಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಇಂಗ್ಲಿಷನ್ನು ಸಂವಹನಕ್ಕಾಗಿ ಮಾತ್ರವಲ್ಲದೆ, ಜಗತ್ತಿನ ಜ್ಞಾನ, ಸಾಹಿತ್ಯವನ್ನು ಗ್ರಹಿಸುವ ಕಿಟಕಿಯಾಗಿಯೂ ಕಲಿಸಬೇಕು.


ಅತಿಯಾದ ಉಚ್ಚಾರಣೆಯ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳದೆ, ಜಗತ್ತಿನಲ್ಲಿ ಬಗೆಬಗೆಯ ಇಂಗ್ಲಿಷುಗಳಿವೆ, ಉಚ್ಚಾರಣೆಗಳಿವೆ ಎಂಬ ಅರಿವಿನಲ್ಲಿಯೂ ಇಂಗ್ಲಿಷನ್ನು ಕಲಿಸಬೇಕು. ಇಂಗ್ಲಿಷ್ ಶಿಕ್ಷಣದ ವ್ಯಾಪಾರಿಗಳ ದಂಧೆಗೆ ಕೊನೆ ಹೇಳಲು ಸರ್ಕಾರಿ ಶಾಲೆಗಳಲ್ಲಿ ಅದನ್ನು ಸರಿಯಾಗಿ ಕಲಿಸಬೇಕು.


ಈ ಸನ್ನಿವೇಶವನ್ನು ಸರಿಯಾಗಿ ಗ್ರಹಿಸಲು ಒಂದು ಉದಾಹರಣೆ ನೋಡಿ: ಹಿಂದುಳಿದ ಪ್ರದೇಶವೊಂದರಲ್ಲಿ ಎಕನಾಮಿಕ್ಸ್ ಎಂ.ಎ. ಕಲಿಯುತ್ತಿರುವ  ಬಡ ವಿದ್ಯಾರ್ಥಿಯೊಬ್ಬ ತನ್ನ ಎರಡು ವರ್ಷಗಳ ಎಂ.ಎ.ಕೋರ್ಸಿಗೆ ವಿಶ್ವವಿದ್ಯಾಲಯಕ್ಕೆ ಪಾವತಿಸುತ್ತಿರುವ ಬೋಧನಾ ಶುಲ್ಕ 1000 ರೂಪಾಯಿ; ಆದರೆ  ಖಾಸಗಿ ಸಂಸ್ಥೆಯೊಂದರಲ್ಲಿ ಎರಡು ತಿಂಗಳ ಇಂಗ್ಲಿಷ್ ಕಲಿಕೆಯ ಕೋರ್ಸಿಗೆ ಕೊಟ್ಟ ಶುಲ್ಕ 5000 ರೂಪಾಯಿ! ಅಲ್ಲಿ ಕೂಡ ಅವನು ಸಾಂದರ್ಭಿಕವಾಗಿ ಬಳಸುವ ಇಂಗ್ಲಿಷನ್ನು ತಕ್ಕಮಟ್ಟಿಗೇ ಕಲಿತನೇ ಹೊರತು ಚೆನ್ನಾಗಿಯೇನೂ ಕಲಿಯಲಿಲ್ಲ. ಬಾಲ್ಯದಲ್ಲೇ ಶಾಲೆಯಲ್ಲಿ  ಇಂಗ್ಲಿಷ್ ಭಾಷೆ ಕಲಿತಿದ್ದರೆ ಆ ಸಮಸ್ಯೆಯಿಂದ ಪಾರಾಗುತ್ತಿದ್ದನೇನೋ.


ಇದೇ ಸಂದರ್ಭದಲ್ಲಿ ಉರ್ದು ಮಾಧ್ಯಮದಲ್ಲಿ ಓದುತ್ತಿರುವ ಬಡ ಮುಸ್ಲಿಂ ಮಕ್ಕಳ ಕಷ್ಟವನ್ನು ಕೊಂಚ ವಸ್ತುನಿಷ್ಠವಾಗಿ ಗಮನಿಸಬೇಕು. ಈ ಮಕ್ಕಳಿಗೆ ಏಳನೆಯ ತರಗತಿಯ ನಂತರ ಯಾವ ವಿಷಯಗಳನ್ನೂ ಉರ್ದುವಿನಲ್ಲಿ ಕಲಿಸುತ್ತಿಲ್ಲ. ಹಾಗಾದರೆ ಈ ಮಕ್ಕಳು ಎಲ್ಲಿಗೆ ಹೋಗಬೇಕು? ಈ ಮಕ್ಕಳು ಹೈಸ್ಕೂಲ್ ಹೊತ್ತಿಗೆ ಸ್ಕೂಲು ಬಿಡುತ್ತಿವೆ ಅಥವಾ ಅನಿವಾರ್ಯವಾಗಿ ಎಲ್ಲೋ ವಿರಳವಾಗಿಯಷ್ಟೇ ಇರುವ ಇಂಗ್ಲಿಷ್ ಮಾಧ್ಯಮವನ್ನು ಹುಡುಕಿಕೊಂಡು ಹೋಗುತ್ತಿವೆ.


ಈ ಮಕ್ಕಳು ತಮ್ಮ ಆರ್ಥಿಕ ಬೆಳವಣಿಗೆಗಾಗಿಯಾದರೂ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಇಂಗ್ಲಿಷಿನಲ್ಲಿ ಕಲಿಯುವುದು ಅನಿವಾರ್ಯವಾಗಿದೆ. ಇನ್ನು ಇವತ್ತಿನ ಖಾಸಗಿ ಉದ್ಯೋಗಗಳ ಜಗತ್ತಿನಲ್ಲಿ ಇಂಗ್ಲಿಷನ್ನು ಚೆನ್ನಾಗಿ ಬಳಸುವ ಸಾಮರ್ಥ್ಯವನ್ನು ರಾಜ್ಯದ ಒಳಹೊರಗೆ ಬಗೆಬಗೆಯ ಉದ್ಯೋಗಗಳನ್ನು ಹುಡುಕುವ ಎಲ್ಲ ವರ್ಗದವರೂ ಪಡೆಯಬೇಕಾಗಿದೆ; ಇದು ಹೊಟ್ಟೆಪಾಡಿಗೆ ಸಂಬಂಧಿಸಿದ ಪ್ರಶ್ನೆ ಕೂಡ.


ಭಾಷೆಯೇ ಒಂದು ಆಸ್ತಿಯಾಗಿರುವ ಈ ಕಾಲದಲ್ಲಿ ಹೆಣ್ಣುಮಕ್ಕಳ ಉದ್ಯೋಗದ ಸಾಧ್ಯತೆಗಳು ಹಾಗೂ ಆತ್ಮವಿಶ್ವಾಸ ಹೆಚ್ಚಿರುವುದರಲ್ಲಿ ಇಂಗ್ಲಿಷಿನ ಪಾಲೂ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು.


ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಜಾರಿಯನ್ನು ವಿರೋಧಿಸುತ್ತಿರುವವರು  ಹಾಗೂ ಅದನ್ನು ಕನ್ನಡ ವಿರೋಧಿ ಎಂದು ತಿಳಿದವರು ನಿಜಕ್ಕೂ ಕನ್ನಡವನ್ನು ಉಳಿಸಬೇಕಾಗಿರುವುದು ಖಾಸಗಿ ಶಾಲೆಗಳಲ್ಲಿ. ಕನ್ನಡವನ್ನು ಒಂದು ಭಾಷೆಯಾಗಿ ಕೂಡ ಕಲಿಯಲು ಅವಕಾಶ ಕೊಡದ ಅನೇಕ ಶಾಲೆಗಳು ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕಲಿಸುತ್ತಿರುವುದರಿಂದ ಹಾಗೂ ಈ ಧೋರಣೆಗೆ ಕನ್ನಡ ತಂದೆತಾಯಿಗಳೇ ಕುಮ್ಮಕ್ಕು ಕೊಡುತ್ತಿರುವುದರಿಂದ ಕನ್ನಡಕ್ಕೆ ಹೆಚ್ಚಿನ ಧಕ್ಕೆಯಾಗುತ್ತಿದೆ.


ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತಿ ತರಗತಿಗೆ ಎರಡು ಕನ್ನಡ ಭಾಷಾಪಠ್ಯಗಳನ್ನಿಟ್ಟು ಈ ಮಕ್ಕಳು ಕನ್ನಡವನ್ನು ದಕ್ಷವಾಗಿ ಕಲಿಯುವಂತೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಹಾಗೆಯೇ ಕನ್ನಡ ಮಾಧ್ಯಮದ ಮಕ್ಕಳು ಕಲಿಯುತ್ತಿರುವ ಇಂಗ್ಲಿಷಿನ ಕ್ರಮವನ್ನು ಇನ್ನಷ್ಟು ಸುಧಾರಿಸಬೇಕು.


ಹಾಗೆಯೇ ಐದನೇ ತರಗತಿಯವರೆಗೆ ಹಾಗೂ ಆನಂತರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಹುದ್ದೆಗಳನ್ನು ಹಾಗೂ ಹೆಚ್ಚು ಶೈಕ್ಷಣಿಕ ಅವಕಾಶಗಳನ್ನು ಮೀಸಲಿಟ್ಟು, ಪ್ರೋತ್ಸಾಹ ವೇತನಗಳನ್ನು ಕೂಡ ನೀಡಿ ಈ ಬಡ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. 

ಕೃಪೆ : ಪ್ರಜಾವಾಣಿ - ಅಂತರಾಳ

Monday, June 11, 2012

ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ !

                                                      -ಸೂರ್ಯ ಮುಕುಂದರಾಜ್
                                                                
ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಿಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.
ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.
ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.
ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.
ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.
ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.
 ಕೃಪೆ : ವರ್ತಮಾನ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.