Showing posts with label ಹಿಂದೂ ಸಂಘಟನೆಗಳು. Show all posts
Showing posts with label ಹಿಂದೂ ಸಂಘಟನೆಗಳು. Show all posts

Friday, March 01, 2013

ಅತ್ಯಾಚಾರ : ಮಾನವೀಯ ಮೌಲ್ಯಗಳ ಅಧಃಪತನ !


ಸರೋವರ್ ಬೆಂಕೀಕೆರೆ

ಮಗುವು ತಾಯಿಂದ ಜನ್ಮ ಪಡೆದಾಗ ಅದು ಹೆಣ್ಣಾಗಲಿ, ಗಂಡಾಗಲಿ ಸಹಜವಾಗಿಯೇ ಯಾವುದೇ ಹಣೆಪಟ್ಟಿಗಳಿಲ್ಲದೆ ಬೆಳೆದಿರುತ್ತದೆ. ಆ ರೀತಿ ಬೆಳೆದ ಗಂಡು ಮಗುವಿಗೆ, ‘ನೀನು ಬೆಳೆದು ಮುಂದೊಂದು ದಿನ ಅತ್ಯಾಚಾರವೆಸಗುವ ಮೃಗವಾಗಬೇಕೆಂದಾಗಲಿ’ ಅಥವಾ ಹೆಣ್ಣುಮಗುವಿಗೆ ‘ನೀನು ಅಧೈರ್ಯಳಾಗಿ ಗಂಡಿಗೆ ತಗ್ಗಿ ಬಗ್ಗಿ ಹೆದರಿ ಬದುಕಬೇಕೆಂದಾಗಲಿ’ ಅವರ ತಲೆಯಲ್ಲಿ ಯಾರು ತುಂಬಿ ಕಳಿಸಿರುವುದಿಲ್ಲ. ಹಾಗಾದರೆ ಇಂತಹ ಅತ್ಯಾಚಾರಗಳು ನಡೆಯಲು ನಮ್ಮ ಸಮಾಜದ ಅನಾರೋಗ್ಯಕರ ವಾತಾವರಣ ಮತ್ತು ಈ ವ್ಯವಸ್ಥೆ ಎಂದಾಯ್ತು ತಾನೇ?
ನಾವು ಗಮನಿಸಬೇಕಾದ ಒಂದು ಅಂಶವಿದೆ, ದೇಶದಲ್ಲೆ ಅತ್ಯಾಚಾರ ಪ್ರಕರಣದಲ್ಲಿ ಮುಂದಿರುವ ರಾಜ್ಯಾ ಹರಿಯಾಣ. ಇಲ್ಲಿನ ಅಂಕಿಯಾಂಶ ಗಮನಿಸಿದರೆ 80 ರಿಂದ 90 ರಷ್ಟು ಅತ್ಯಾಚಾರ ನಡೆದಿರುವುದು ದಲಿತರ ಮೇಲೆಯೇ ಆಗಿದೆ. ಇದನ್ನು ನಡೆಸುವವರು ಮೇಲುವರ್ಗದವರು ಅಥವಾ ಅಧಿಕಾರದಲ್ಲಿರುವವರು, ಅಥವಾ ಆರ್ಥಿಕವಾಗಿ ಸಬಲರಾಗಿರುವವರು. ಅತ್ಯಾಚಾರ ನಡೆಯುವುದು ಯಾವುದೇ ಒಂದು ಪ್ರಚೋದನಕಾರಿ ಉಡುಪಿನಿಂದಾಗಾಲಿ ಅಥವಾ ಮಹಿಳೆಯ ನಡತೆಯಿಂದಲ್ಲ. ಇದರ ಹಿಂದೆ ಮಾನಸಿಕ ವ್ಯಗ್ರತೆಯ ಅಪರಾಧಿತನ ಇದೆ.
ಇನ್ನು ನಮ್ಮ ಧರ್ಮ, ಧರ್ಮ ಗುರುಗಳು ಹೇಳುವಂತೆ ಹೆಣ್ಣು ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ ಮತ್ತು ಮುಪ್ಪಿನಲ್ಲಿ ಮಗನನ್ನು ಆಶ್ರಯಿಸಬೇಕು ಎನ್ನುತ್ತದೆ. (ಎಲ್ಲ ಧರ್ಮಗ್ರಂಥಗಳೂ ಪುರುಷನೆ ಬರೆದಿರುವುದನ್ನು ಗಮನಿಸಬೇಕಿದೆ) ವಾಸ್ತವವಾಗಿ ದಿಲ್ಲಿಯ ಪ್ರಕರಣವನ್ನೇ ತೆಗುದುಕೊಂಡರೆ “ಯುವತಿ ತಾನು ಮದುವೆಯಾಗಬೇಕ್ಕಿದ್ದ ಹುಡುಗನ ಆಶ್ರಯದಲ್ಲಿದ್ದೇ ಇಂತಹ ಹೇಯ ಕೃತ್ಯ ನಡೆದುಹೋಗಿತ್ತು.! ಈ ಅತ್ಯಾಚಾರ ಒಂದು ಹೆಣ್ಣಿನ ಮೇಲೆ ಆದದ್ದಲ್ಲ. ಬದಲಿಗೆ ಅಕ್ಷರಶಃ ನಮ್ಮ ಕಾನೂನಿನ ಮೇಲೆ, ಪ್ರಜಾಪ್ರಭುತ್ವದ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ನಡೆದಿದ್ದಾಗಿದೆ!!
ಅರಾಸಾರಾ ಬಾಬಾ ಹಾಗೂ ಇನ್ನಿತರ ಸಂಘಟನೆಗಳ ಹೆಣ್ಣುದ್ವೇಷಿ ಪದಾಧಿಕಾರಿಗಳೆಲ್ಲ ಹೆಣ್ಣು ಸಂಜೆ ಆರು ಘಂಟೆಯೊಳಗೆ ಮನೆ ಸೇರಬೇಕು, ಮೈ ತುಂಬ ಬಟ್ಟೆ ತೊಡಬೇಕು, ಅತ್ಯಾಚಾರ ಮಾಡಲು ಬಂದವರಿಗೆ ಅಣ್ಣ, ಅಪ್ಪ ಎಂದು ವಿನಂತಿಸಬೇಕೆಂದು ಹೇಳುತಾರೆಂದರೆ, ನಾವು ಇಂಥವರ ಅನುಯಾಯಿಗಳಿಂದ ಅತ್ಯಾಚಾರಗಳನ್ನು ನಿರೀಕ್ಷಿಸಬಹುದೇನೋ(?!). ಮಹಿಳೆಯರು ಯಾವಾಗ ಬೇಕಂದಾಗ ಒಡಾಡಿದರೆ ನಾವು ರಕ್ಷಣೆ ಕೊಡಲು ಹೇಗೆ ಸಾಧ್ಯ ಎಂದು ಪೋಲಿಸರೆ ಕೇಳುತ್ತಾರೆಂದರೆ ಏನರ್ಥ ? ಅತ್ಯಾಚಾರಿಗಳನ್ನು ಅಪರಾಧಿಗಳಾಗಿ ನೋಡುವ ಬದಲು, ಅತ್ಯಾಚಾರಕ್ಕೆ ಒಳಗಾದವರನ್ನೆ ಅಪರಾಧಿಗಳಂತೆ ನೋಡಿ ಹೆಣ್ಣನ್ನೇ ಹದ್ದುಬಸ್ತಿನಲ್ಲಿ ಇಡಲು ಯತ್ನಿಸುತ್ತಾರೆ...!
ಆರೋಪಿಗಳನ್ನು ನಪಂಪಸಕರನ್ನಾಗಿಸಿ, ಅಥವಾ ಉಗ್ರ ಶಿಕ್ಷೆಯನ್ನು ಕೊಡಬೇಕೆಂಬ ವಾದಗಳಿವೆ. ಇದರಿಂದ ಪರಿಹಾರ ಸಾಧ್ಯವೇ ? ಖಂಡಿತ ಇಲ್ಲ. ಹೆಣ್ಣನ್ನು ಮನಷ್ಯಳಂತೆ, ತನ್ನಂತೆ ಎಲ್ಲ ಹಕ್ಕುಗಳನ್ನು ಹೊಂದಿರುವ ನಾಗರಿಕಳೆಂದು ಸಮಾಜ ಪರಿಗಣಿಸಬೇಕು. ಇಂತಹ ನೈತಿಕ, ಮಾನವೀಯ ಮೌಲ್ಯಗಳು ಸಮಾಜದಲ್ಲಿ ಬೆರೆತಾಗ ಮಾತ್ರ ಪರಿಹಾರ ಸಾಧ್ಯ. ಪಠ್ಯದಲ್ಲಿ ಧರ್ಮೋಪದೇಶಗಳನ್ನು ತುರುಕುವ ಬದಲು ಇಂತಹ ಮಾನವೀಯ ಮೌಲ್ಯಗಳನ್ನು ಸೇರಿಸಬೇಕೆಂದು ಅನಿಸುತ್ತದೆ.
                          

Thursday, February 07, 2013

ಮನುಸ್ಮೃತಿ ಇನ್ನೂ ಸುಟ್ಟಿಲ್ಲ ಸುಡಬೇಕಿದೆ !

ಡಾ. ಸಿದ್ರಾಮ ಕಾರಣಿಕ

ಈ ದೇಶದಲ್ಲಿ ಸ್ತ್ರೀಯರನ್ನು ‘ದೇವತೆ’ ಎಂದೇ ತಿಳಿಯಲಾಗುತ್ತದೆ ಎಂದು ಷರಾ ಬರೆಯತ್ತಲೇ ಆ ‘ದೇವತೆ’ಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಇನ್ನೂ ಮೇಲೆರಲು ಸಾಧ್ಯವಾಗಿಯೇ ಇಲ್ಲ. ಯಾಕೆಂದರೆ ಆ ‘ದೇವತೆ’ ಹೀಗೇ ಇರಬೇಕು ; ಇದನ್ನೇ ತೊಡಬೇಕು ; ಇದನ್ನೇ ಉಣ್ಣಬೇಕು ; ಇಂಥದ್ದನ್ನೇ ಮಾಡಬೇಕು ಮತ್ತು ಇಂಥದ್ದನ್ನು ಮಾಡಬಾರದು ಎಂಬ ಬಿಗಿಯಾದ ಕಟ್ಟಳೆಗಳು ಈ ದೇಶದಲ್ಲಿವೆ. ಈ ದೇಶದಲ್ಲಿ ಆ ‘ದೇವತೆ’ಯನ್ನು ಮೂರ್ಖಳು ಎಂದು ಭಾವಿಸಲಾಗುತ್ತದೆ ; ತಿಳುವಳಿಕೆ ಇಲ್ಲದವಳು ಎಂದು ಹಂಗಿಸಲಾಗುತ್ತದೆ ! ಈ ದೇಶದಲ್ಲಿ ಆ ‘ದೇವತೆ’ಯನ್ನು ಕೇವಲ ಹೇರುವ ಯಂತ್ರವನ್ನಾಗಿ ಮಾತ್ರ ನೋಡಲಾಗುತ್ತದೆ ; ಪುರುಷರ ದೈಹಿಕ ಹಸಿವನ್ನು ತೀರಿಸಿಕೊಳ್ಳಲು ಇರುವ ಒಂದು ಸಾಧನವನ್ನಾಗಿ ಪರಿಗಣಿಸಲಾಗುತ್ತದೆ ! 

ಹೀಗಾಗಿಯೇ ಆ ‘ದೇವತೆ’ಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತವೆ ; ಹೇಯವಾದ ಅತ್ಯಾಚಾರಗಳಾಗುತ್ತವೆ ! ಯಾವತ್ತೂ ಪುರುಷರ ಆಧೀನದಲ್ಲಿಯೇ ಆ ‘ದೇವತೆ’ ಇರಬೇಕು ಎಂಬ ಮನೋಭಾವ ತುಂಬಿಕೊಂಡಿದೆ ; ಏನೇ ಆದರೂ ‘ತಾಳಿ’ಕೊಳ್ಳಬೇಕು ಎಂಬ ತತ್ವಗಾರಿಕೆ ಇದೆ ! ಹೀಗಾಗಿಯೇ ಆ ‘ದೇವತೆ’ ಇಂದು ಮಾರಾಟದ ಸರಕಾಗಿದ್ದಾಳೆ ; ಭ್ರೂಣದಲ್ಲಿಯೇ ಸಾಯುತ್ತಿದ್ದಾಳೆ !

ಹೌದು, ಇದು ನನ್ನದು ಎಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿಯೇ ನಡೆಯುತ್ತದೆ ! ಯಾಕೆಂದರೆ ಮನುಷ್ಯ ಸಂಬಂಧಗಳನ್ನೇ ಪರಗಣಿಸದ ವೈದಿಕಶಾಹಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ; ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಅಂದು ಸುಟ್ಟು ಹಾಕಿದ ಮನುಸ್ಮೃತಿ ಇನ್ನೂ ಬೂದಿಯಾಗಿಯೇ ಇಲ್ಲ ; ಅದು ಈ ದೇಶದಲ್ಲಿ ಇನ್ನೂ ಉರಿಯುತ್ತಲೇ ಇದೆ ! ಸಾಮಾಜಿಕ ಅಸಮಾನತೆಗೆ ಕಾರಣವಾಗಿ, ಬ್ರಾಹ್ಮಣ್ಯಶಾಹಿಯನ್ನು ಈ ದೇಶದ ಜನರ ಮೇಲೆ ಹೇರಿ ಯಜಮಾನಿಕೆ ವಿಕೃತಿಯನ್ನು ಮುಂದುವರಿಸುವ ಮೂಲವೇ ಮನುಸ್ಮೃತಿ ! 

ಇದನ್ನು ಅರಿತುಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 1927 ಡಿಸೆಂಬರ್ 20 ರಂದು ಆ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದರು ; ಇಡೀ ಜಗತ್ತು ಒಂದಾಗಿ ಬದುಕಬೇಕಾದ ಸಂದೇಶವನ್ನು ರವಾನಿಸಿದರು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ನಂತರ ಕೆಲವೇ ದಿನಗಳಲ್ಲಿ ಆ ಮನುಸ್ಮೃತಿ ಮತ್ತೇ ಚಿಗಿತುಕೊಳ್ಳತೊಡಗಿತ್ತು ! ಯಾಕೆಂದರೆ ಅದಾಗಲೇ ಈ ದೇಶದ ಎಲ್ಲರ ತಲೆಯಲ್ಲಿ ಬೀಜವನ್ನು ಬಿತ್ತಿ ರಾಶಿ ಮಾಡುವ ಹವಣಿಕೆಯಲ್ಲಿತ್ತು ! ಹೀಗಾಗಿಯೇ ಮರಾಠಿಯ ಪ್ರಗತಿಪರ ಬರಹಗಾರ ಪ್ರದೀಪ ದೇಶಪಾಂಡೆ ಹೇಳುತ್ತಾರೆ ; ‘ಮನುಸ್ಮೃತಿ ಅಜೂನಹೀ ಜಾಳತೇಚ ಆಹೆ !’ (ಮನುಸ್ಮೃತಿ ಇಂದಿಗೂ ಉರಿಯುತ್ತಲೇ ಇದೆ !)
 
ಈ ಮಾತನ್ನು ಸ್ಪಷ್ಟೀಕರೀಸಲು ಮನುಸ್ಮೃತಿಯಲ್ಲಿ ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಉದ್ದರಿಸುತ್ತಿರುವೆ. (ಧಾರವಾಡದ ಸಮಾಜ ಪುಸ್ತಕಾಲಯ 2003 ರಲ್ಲಿ ಮೂರನೇ ಮುದ್ರಣವಾಗಿ ಪ್ರಕಟಿಸಿರುವ ಶೇಷ ನವರತ್ನ ಅವರು ಅನುವಾದಿಸಿರುವ ಮನುಸ್ಮೃತಿಯಿಂದ ಇಲ್ಲಿಯ ಉದ್ಧರಣೆಗಳನ್ನು ನೀಡಲಾಗಿದೆ) ಮನುಸ್ಮೃತಿಯ ಎರಡನೇ ಅಧ್ಯಾಯದ 213 ಮತ್ತು 214ನೇ ಶ್ಲೋಕಗಳು ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ವ್ಯಾಖ್ಯಾನ ಮಾಡುತ್ತವೆ ;

ಸ್ವಭಾವ ಏಷ ನಾರೀಣಾಮಿಹ ದೂಷಣಂ I
ಅತೋರ್ಥಾನ್ನ ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ’ II213 II

ಎಂದರೆ ಪುರುಷರ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರ ತಪ್ಪಿ ನಡೆಯುವುದಿಲ್ಲ ಎನ್ನುವುದು ಇಲ್ಲಿಯ ಅರ್ಥ !

‘ಅವಿದ್ಯಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ I
ಪ್ರಮದಾ ಹ್ಯುತ್ಪಥಂ ನೇತು ಕಾಮಕ್ರೋಧವಶಾನುಗಂ’ II214 II

ಅಂದರೆ ಕಾಮ ಕ್ರೋಧಗಳಿಂದ ವಶನಾದ ಮನುಷ್ಯನನ್ನು ಅವನು ಪಂಡಿತನೇ ಇರಲಿ, ಪಾಮರನೇ ಇರಲಿ, ದಾರಿ ತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ !

‘ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚ ಸುಭಾಷಿತಂ I
ವಿವಿಧಾನಿ ಚ ಶಿಲ್ಪ ಸಮಾದೇಯಾನಿ ಸರ್ವತಃ’ II229 II

ಸ್ತ್ರೀಯರು, ರತ್ನಗಳು, ಧರ್ಮ, ಶೌಚ, ಸುಭಾಷಿತ, ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂಬುದು ಮೇಲಿನ ಶ್ಲೋಕಕ್ಕೆ ನೀಡಿರುವ ಅರ್ಥವಾಗಿದೆ.

ಇವೆಲ್ಲವುಗಳನ್ನೂ ಹೇಳಿದ ಮೇಲೆ ಮೂರನೇ ಅಧ್ಯಾಯದಲ್ಲಿ,

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ I
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ’ II56 II

ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !’ ಎಂದು ಹೇಳಿಕೊಂಡಿರುವುದು ಇದು ತಿಪ್ಪೆ ಸಾರಿಸುವ ಕೆಲಸವಲ್ಲದೆ ಮತ್ತೇನೂ ಅಲ್ಲ ! 

ಇಂಥ ಮನುಸ್ಮೃತಿ ಈ ದೇಶದ ಜನರೆಲ್ಲರ ಮನಸ್ಸನ್ನು ಕೆಡಿಸಿ ಹಾಕಿದೆ.
ಸಂವಿಧಾನಬದ್ಧವಾಗಿರುವ ಈ ದೇಶದ ಆಡಳಿತ ಕೂಡ ಮನುಸ್ಮøತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ನಮ್ಮ ದೇಶದ ದುರಂತವೇ ಸರಿ. ಬರೀ ಆಡಳಿತಗಾರರು, ಸನಾತನಿ ಪುರೋಹಿತಶಾಹಿಗಳು ಮಾತ್ರವಲ್ಲ ಈ ದೇಶದ ಪ್ರತಿಶತ ತೊಂಬತ್ತರಷ್ಟು ಜನ ಮನುಸ್ಮೃತಿಯ ಪ್ರಕಾರವೇ ಬದುಕು ನಡೆಸುತ್ತಿದ್ದಾರೆ. ಇಂದಿಗೂ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕು ಮನುಸ್ಮೃತಿಯ ಚೌಕಟ್ಟಿನಲ್ಲಿಯೇ ಬಂಧಿಯಾಗಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ! 

ಹೀಗಾಗಿಯೇ ಈ ದೇಶದ ದೀನ-ದಲಿತರು, ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಈಡಾಗಿ ನೋವು ಉಣ್ಣುತ್ತಿದ್ದಾರೆ ! ದಲಿತರ ಮೇಲೆ ನಡೆಯುವ ದೌರ್ಜನ್ಯಗಳು, ಬಹಿಷ್ಕಾರಗಳು, ಮಹಿಳೆಯರ ಮೇಲೆ ನಡೆಯುವ ಹಲ್ಲೆಗಳು, ಅತ್ಯಾಚಾರಗಳು, ಅನಾಗರಿಕ ವರ್ತನೆಗಳು ಈ ಕಾರಣಕ್ಕಾಗಿಯೇ ಇಂದು ಹೆಚ್ಚಾಗುತ್ತಲೇ ಇವೆ !
ಈ ದೇಶದ ಹೆಣ್ಣುಮಕ್ಕಳು ಇಂದು ಎಲ್ಲ ರಂಗಗಳಲ್ಲಿಯೂ ಮುಕ್ತವಾಗಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದಾರೆ. ಶಿಕ್ಷಣದ ಮೂಲಕ ಹೊಸ ಹೊಸ ಅವಕಾಶಗಳೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಇದ್ದಾರೆ. ಕೆಲವು ಜನ ಇದರಲ್ಲಿ ಯಶಸ್ಸನ್ನೂ ಪಡೆದಿದ್ದಾರೆ. ಭಾರತೀಯ ಸಮಾಜ ಇಂದು ಬದಲಾಗಿದೆ ಎಂದು ಎದೆ ತಟ್ಟಿಕೊಂಡು ಭಾಷಣ ಬಿಗಿಯುವ ಮಂದಿಯೂ ನಮ್ಮ ನಡುವೆಯೂ ಇದ್ದಾರೆ. ಆದರೆ ಬದಲಾವಣೆ ಎನ್ನುವುದು ಹೊರಗಿನ ರೂಪ ಮಾತ್ರ ! ಹೆಣ್ಣುಮಕ್ಕಳ ವಿಷಯದಲ್ಲಿ ಇಂದಿಗೂ ಅದೇ ಹಳೆಯ ಮನೋಭಾವಗಳು ನಮ್ಮಲ್ಲಿ ಇಂದಿಗೂ ಜೀವಂತವಾಗಿವೆ ! ಯಾಕೆಂದರೆ ಈ ದೇಶದಲ್ಲಿ ಮನುಸ್ಮೃತಿ ಪೂರ್ಣವಾಗಿ ಸುಟ್ಟು ಹೋಗಿಲ್ಲ !

‘ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯಿಂದ ಬಿಗಿಯಲ್ಪಟ್ಟ ಬಂಧನದಲ್ಲಿಯೇ ಇಂದಿಗೂ ನಾವು ಬದುಕು ನಡೆಸುತ್ತಿದ್ದೇವೆ … … ಸ್ಥಳಾಂತರದ ಜೊತೆಗೆ ವೃತ್ತಿಯಾಂತರವನ್ನೂ ಮಾಡಲಾಗಿದೆ ಎಂಬುದೇನೋ ನಿಜ. ಆದರೆ ಮದುವೆ ಮಾಡುವಾಗ ಮಾತ್ರ ಇಂದಿಗೂ ಜಾತಿಯೇ ಪ್ರಧಾನ ಪಾತ್ರವಹಿಸುತ್ತದೆ. ಈ ದೃಷ್ಟಿಕೋನ ಮನುಸ್ಮೃತಿಯ ಪ್ರಭಾವದಿಂದಲೇ ಚಾಲ್ತಿಯಲ್ಲಿದೆ’ ಎನ್ನುವ ಪ್ರದೀಪ ದೇಶಪಾಂಡೆಯವರ ಮಾತುಗಳನ್ನು ಗಮನಿಸಿದಾಗ ಮನುಸ್ಮೃತಿಯ ಬೇರುಗಳು ಎಷ್ಟೊಂದು ಆಳಕ್ಕಿಳಿದು ನಮ್ಮನ್ನು ಆಳುತ್ತಿವೆ ಎಂಬುದರ ಅರಿವಾಗುತ್ತದೆ.

ಪ್ರದೀಪ ದೇಶಪಾಂಡೆಯವರ ಮಾತುಗಳನ್ನೇ ಮುಂದುವರಿಸಿ ಹೇಳುವುದಾದರೆ ಹೆಣ್ಣುಮಕ್ಕಳನ್ನು ತಮ್ಮ ಆಧೀನ ಎಂದುಕೊಳ್ಳುವ ಪ್ರವೃತ್ತಿ ಇಂದು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದೆ. ‘ಗಂಡು’ ಶ್ರೇಷ್ಠ – ಹೆಣ್ಣು ಕನಿಷ್ಠ ಎನ್ನುವ ವಿಚಾರಗಳು ನಮ್ಮ ತಲೆಯಲ್ಲಿಯೂ ಹಾಗೆಯೇ ಉಳಿದುಕೊಂಡಿವೆ. ಮದುವೆಯ ಸಂದರ್ಭದಲ್ಲಿ ಮದುಮಗನ ಕಡೆಯವರೇ ಎಲ್ಲ ಗೌರವಕ್ಕೂ ಅರ್ಹರು ; ಹೆಣ್ಣಿನ ಕಡೆಯವರು ಗೌಣ ! ಮದುವೆಯಾದ ನಂತರ ವಧುವಿನ ಹೆಸರು ಬದಲಾಗುತ್ತದೆ ; ಅಡ್ಡಹೆಸರೂ ಬದಲಾಗುತ್ತದೆ ! ಮಕ್ಕಳಾದಾಗಲೂ ಹೀಗೆಯೇ ನಮ್ಮ ವರ್ತನೆ ಇರುತ್ತದೆ – ಗಂಡು ಹುಟ್ಟಿದರೆ ಫೇಡೆ ಹಮಚುತ್ತೇವೆ ; ಹೆಣ್ಣುಮಗುವಾಗಿದ್ದರೆ ಜಿಲೇಬಿ ಅಥವಾ ಬರ್ಫಿ ಹಂಚುತ್ತೇವೆ (ಕೆಲವು ಸಲ ಅದೂ ಇಲ್ಲ !) ಮನೆಯಲ್ಲಿ ಹೆಂಡತಿಯಾದಾಕೆ ಗಂಡನನ್ನು ‘ರೀ’ ಎಂದೇ ಕರೆಯಬೇಕು ; ಗಂಡನಾದವನು ಮಾತ್ರ ಹೆಂಡತಿಯನ್ನು ‘ಏಯ್’ ಎಂದೇ ಮಾತನಾಡಿಸುತ್ತಾನೆ !
 
ಗಂಡಸರು ಏನು ಮಾಡಿದರೂ ‘ಅಂವಾ ಗಂಡ್ಸು ; ಮಾಡಿದರ ನಡೀತದ ಬಿಡ’ ಅನ್ನುವ ಮಾತು ಸಾಮಾನ್ಯ ; ಅದೇ ಹೆಂಗಸು ಒಂದು ಸಣ್ಣ ತಪ್ಪು ಮಾಡಿದರೂ ಕೂಡ ‘ಗಂಡುಭೀರಿ’ ಎನಿಸಿಕೊಳ್ಳುತ್ತಾಳೆ ; ವ್ಯಭಿಚಾರಿಣಿ ಪಟ್ಟ ಕಟ್ಟಲಾಗುತ್ತದೆ ! ಅನೈತಿಕ ಸಂಬಂಧ ಮಾಡಿದ ಕೆಟ್ಟ ಹುಳು ಎಂದು ದೂರೀಕರಿಸುತ್ತೇವೆ ! ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಶವ ಸಂಸ್ಕಾರ ಮಾಡುವಂತಿಲ್ಲ ; ವಿಧವೆಯಾದರೆ ಪೂಜೆ-ಪುನಸ್ಕಾರ-ಮದುವೆ-ಮುಂಜಿ-ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ; ಎರಡನೆಯ ಮದುವೆಗೂ ನೂರಾರು ವಿಘ್ನ ! ಗಂಡಸಾದರೆ ಆತ ವಿಧುರನಾದರೂ ಎಲ್ಲದರಲ್ಲೂ ಭಾಗವಹಿಸಬಹುದು ; ಎರಡನೆಯ ಮದುವೆಯನ್ನೂ (ಯಾಕೆ ಮೂರನೆಯ ಮದುವೆಯನ್ನೂ) ಮಾಡಿಕೊಳ್ಳಬಹುದು – ಇದಕ್ಕೆ ಯಾವುದೇ ತಕರಾರುಗಳು ಇಲ್ಲ ! ಮನೆಯಲ್ಲಿ ಗಂಡನಾದವನು ಆರಾಮಾಗಿ ಕುಳಿತಾಗ ಹೆಂಡತಿಯಾದವಳು ಮನೆಯ ಕೆಲಸವನ್ನೆಲ್ಲ ಅಚ್ಚಕಟ್ಟಾಗಿ ಮಾಡಿ ಮುಗಿಸಬೇಕು ; ಹೆಚ್ಚು-ಕಡಿಮೆಯಾದರೆ ಬೈಗುಳಗಳ ಸುರಿಮಳೆ ; ಬುದ್ಧಿಯಿಲ್ಲದವಳು ಎಂಬ ತೆಗಳಿಕೆ !

ಈ ಎಲ್ಲ ಕಾರಣಗಳಿಂದಲೇ ಕೆಲವು ಮುಖಂಡರು, ಸನ್ಯಾಸಿಗಳು ಹೆಣ್ಣಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡತೊಡಗಿದ್ದಾರೆ. ಯಾರೋ ಒಬ್ಬರು ಹೆಣ್ಣುಮಕ್ಕಳು ಹೊರಗೆ ಹೋಗಬಾರದು ; ತಗ್ಗಿ-ಬಗ್ಗಿ ನಡೆಯಬೇಕು. ಯಾವುದೇ ಅಲಂಕಾರ ಮಾಡಿಕೊಳ್ಳಬಾರದು ; ಹೊಸ ಬದುಕಿಗೆ ಹಾತೊರೆಯಬಾರದು ; ಬಟ್ಟೆಗಳನ್ನು ಮೈ ತುಂಬ ಧರಿಸಬೇಕು ಎಂದು ಮೊದಲಾಗಿ ಒದರಿ, ಹೆಣ್ಣುಮಕ್ಕಳು ಹೀಗಿದ್ದರೆ ಅವರ ಮೇಲೆ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. ನಗರಗಳಲ್ಲಿ ಹೆಣ್ಣುಮಕ್ಕಳು ವಿದೇಶಿ ಸಂಸ್ಕೃತಿಯಿಂದ ಪ್ರಭಾವಿತರಾಗಿರುವುದರಿಂದ ಚೆಲ್ಲು ಚೆಲ್ಲಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಅತ್ಯಾಚಾರ ಪ್ರಮಾಣ ಹೆಚ್ಚು ಎಂದು ಕರಬುತ್ತಾರೆ ! ಯಾಕೆ ಹಳ್ಳಿಗಳಲ್ಲಿಯೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುವುದಿಲ್ಲವೆ ! ಅಲ್ಲಿ ಪ್ರಚಾರ ಸಿಗುವುದಿಲ್ಲ ; ನಗರಗಳಲ್ಲಿ ಸುದ್ದಿ ಬಹುಬೇಗ ಹಬ್ಬುತ್ತದೆ ಅಷ್ಟೆ ! ಹಾಗೆ ನೋಡಿದರೆ ಇಂಥ ಎಲ್ಲಿ ವಿಕೃತಿ ಇರುತ್ತದೆಯೋ ಅಂಥಲ್ಲೆಲ್ಲ ಇವು ನಡೆಯುತ್ತಲೇ ಇರುತ್ತವೆ.

ಇನ್ನೊಬ್ಬರು ಬಾಯಿ ಬಾಯಿ ಪಡೆದುಕೊಂಡು ಅತ್ಯಾಚಾರಿಗಳು ಎದುರಿಗೆ ಬಂದಾಗ ಹೆಣ್ಣುಮಕ್ಕಳು ಅವರಿಗೆ ಕೈ ಮುಗಿದು. ‘ಅಣ್ಣಾ, ಅಪ್ಪಾ’ ಎನ್ನಬೇಕು. ಆಗ ಅತ್ಯಾಚಾರಿಗಳ ಮನಃಪರಿವರ್ತನೆಯಾಗುತ್ತದೆ ಎಂಬುದಾಗಿ ಪ್ರವಚನ ಹೇಳತೊಡಗಿದರು ! ಹೆಣ್ಣನ್ನು ಎಷ್ಟೊಂದು ಹೀನಾಯವಾಗಿ ನಡೆಯಿಸಿಕೊಳ್ಳುತ್ತದೆಯಲ್ಲ ಈ ದೇಶ ! ವಿಕೃತ ಮನಸ್ಸಿನವರ ಮುಂದೆ ಕೈ ಕಾಲು ಹಿಡಿದು ಕಾಪಾಡಿ ಎಂದರೆ ರಕ್ಷಣೆ ಸಿಗಲು ಸಾಧ್ಯವೆ ! ಇಂಥ ಮಾತುಗಳೆಲ್ಲ ಹೆಣ್ಣುಮಕ್ಕಳನ್ನು ಇನ್ನೊಂದಿಷ್ಟು ಭ್ರಮಾವಲಯದಲ್ಲಿ ಕೆಡವಲು ಮಾಡುವ ಹುನ್ನಾರಗಳೇ ಆಗಿವೆ ! ಇದಕ್ಕೆಲ್ಲ ಮೂಲ ಕಾರಣ ಮನುಸ್ಮೃತಿ ಇನ್ನೂ ಉರಿಯುತ್ತಲೇ ಇದೆ ! ಅದನ್ನು ಮತ್ತೊಮ್ಮೆ ನಾವೆಲ್ಲ ಸೇರಿ ನಮ್ಮ ಮನೆಗಳಿಂದ-ಮನಗಳಿಂದ ಹೊರ ತಂದು ಸಂಪೂರ್ಣವಾಗಿ ಸುಡಬೇಕಿದೆ ; ಸುಟ್ಟು ಇನ್ನೆಂದೂ ಚಿಗಿಯದಂತೆ ಬೂದಿ ಮಾಡಬೇಕಿದೆ.

Tuesday, January 22, 2013

ಹಿಂದು ಉಗ್ರವಾದ ನಿಜ: ಬರಗೂರು ರಾಮಚಂದ್ರಪ್ಪ



'ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳಿಂದ ಭಯೋತ್ಪಾದನೆ ನಡೆಯುತ್ತಿರುವುದು ಸತ್ಯ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್‌ ಸಂಘಟನೆಯಿಂದಲೇ ಅದು ನಡೆಯುತ್ತಿದೆ ಎಂಬುದನ್ನು ನಾನು ಹೇಳಲಾರೆ' ಎಂದು ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಇಂದು ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ. ಮುಸ್ಲಿಂ ಧರ್ಮಕ್ಕೆ ಸೇರಿದ ಹಾದಿ ತಪ್ಪಿದ ಕೆಲವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪ ಇತ್ತು. ಆದರೆ, ಈಗ ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿ ಮತ್ತು ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಹೇಳಿದರು.

ಹಿಂದೂಗಳ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ಬಿಜೆಪಿ ಅಥವಾ ಆರೆಸ್ಸೆಸ್‌ ಇದೆ ಎಂದು ಹೇಳುವುದು ಕಷ್ಟ. ಹೀಗೆ ಹೇಳಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಬಳಿ ಈ ಕುರಿತು ಯಾವುದಾದರೂ ದಾಖಲೆಗಳಿದ್ದರೆ ಬಹಿರಂಗ ಪಡಿಸುವುದು ಸೂಕ್ತ. ಈ ಬಗ್ಗೆ ನನ್ನ ಬಳಿ ಯಾವುದೇ ಸ್ಪಷ್ಟ ದಾಖಲೆಗಳು ಇಲ್ಲ ಎಂದು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ಕೃಪೆ : ಉದಯವಾಣಿ : 22-01-2013

Friday, January 04, 2013

ಮೋದಿಗೆ ಉತ್ತರ ಉವೈಸಿಯಲ್ಲ ...


ಬಶೀರ್ ಬಿ.ಎಂ.
ವಾರ್ತಾಭಾರತಿ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಸಂಪಾದಕೀಯ
ಖಾಲಿ ಮಡಕೆಯೊಳಗೆ ಒಂದು ಸಣ್ಣ ಕಲ್ಲು ಹಾಕಿದರೂ ಅದು ಭಾರೀ ಸದ್ದು ಮಾಡುತ್ತದೆ. ರಾಜಕಾರಣಿಗಳಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಉದ್ವಿಗ್ನಕಾರಿ, ಪ್ರಚೋದನ ಕಾರಿ ಭಾಷಣ ಮಾಡುವವರನ್ನೆಲ್ಲ ನಾವು ಈ ಖಾಲಿ ಮಡಕೆಗಳಿಗೆ ಹೋಲಿಸಬಹುದಾಗಿದೆ. ಇಂತಹ ಖಾಲಿಗಳೇ ಈ ದೇಶವನ್ನು ಅವನತಿಯೆಡೆಗೆ ನಡೆಸುತ್ತಾ ಬಂದಿದ್ದಾರೆ. ಪ್ರವೀಣ್ ತೊಗಾಡಿಯಾರಿಂದ ಹಿಡಿದು, ವರುಣ್ ಗಾಂಧಿಯವರ ವರೆಗೆ, ಇಂತಹ ಪ್ರಚೋದನಾಕಾರಿ ಭಾಷಣಗಳಿಂದ ಈ ದೇಶಕ್ಕಾದ ನಷ್ಟ ಅಷ್ಟಿಷ್ಟಲ್ಲ. ಇವರ ಭಾಷಣದಲ್ಲಿ ಅದೇನೋ ಇದೆ ಜನ ಹುಚ್ಚೆದ್ದು ಚಪ್ಪಾಳೆ ತಟ್ಟುತ್ತಾರೆ. ಅಮರೇರಿದವರಂತೆ ವರ್ತಿಸು ತ್ತಾರೆ. ಆದರೆ ಏರಿದ ಅಮಲು ಇಳಿದಾಗ, ಎಲ್ಲವೂ ಮುಗಿದಿರುತ್ತದೆ. ಇಂತಹ ಪ್ರಚೋದನಕಾರಿ ಭಾಷಣಗಳ ಮೂಲಕವೇ ದೇಶದಲ್ಲಿ ಹೆಚ್ಚಿನ ಕೋಮುಗಲಭೆಗಳು ಸಂಭವಿಸಿವೆ. ಗುಜರಾತ್ ಗಲಭೆಗೆ ಮುನ್ನ, ಪ್ರವೀಣ್ ತೊಗಾಡಿಯಾ ಮಾಡಿದ ಭಾಷಣ ಅಲ್ಲಿನ ಜನರನ್ನು ಹುಚ್ಚರನ್ನಾಗಿ ಮಾಡಿತು. ಮುಂದೆ ಅದು ಭಾರೀ ಕೋಮುಗಲಭೆಗಳಿಗೆ ಕಾರಣವಾಯಿತು. ಮುಂಬಯಿ ಗಲಭೆಯಿಂದ ಹಿಡಿದು ಸುರತ್ಕಲ್ ಗಲಭೆಗಳವರೆಗೆ ನಾವು ಅವಲೋಕಿಸುತ್ತಾ ಬಂದರೆ, ಖಾಲಿ ಮಡಕೆಗಳ ಪ್ರಚೋದನಕಾರಿ ಭಾಷಣಗಳೇ ಜನರನ್ನು ಹಾದಿ ತಪ್ಪಿಸಿದವು. ಹಿಂಸೆಗಳಿಗೆ ಕಾರಣವಾದವು. ರಾಜದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ನಾಯಕರಾದುದು, ಇಂತಹ ವಿಷಪೂರಿತ ಭಾಷಣಗಳನ್ನು ಕಕ್ಕುವ ಮೂಲಕ. ಯಾವುದೇ ಮಾರಕ ಆಯುಧಗಳಿಗಿಂತ, ಯಾವುದೇ ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಪಾಯಕಾರಿ ಈ ಭಾಷಣಗಳು.

ಇದೀಗ ಹೈದರಾಬಾದ್‌ನಲ್ಲಿ ಶಾಸಕನೊಬ್ಬ ಇಂತಹದೇ ಭಾಷಣವನ್ನು ಮಾಡುವ ಮೂಲಕ, ತನ್ನನ್ನು ತಾನು ಮುಸ್ಲಿಮರ ನಾಯಕನಾಗಿ ಬಿಂಬಿಸಲು ಹೊರಟಿದ್ದಾನೆ. ಆತನ ಹೆಸರು ಅಕ್ಬರುದ್ದೀನ್ ಉವೈಸಿ. ಅಖಿಲ ಭಾರತ ಮಜ್ಸಿಸ್ ಎ ಇತ್ತೆಹಾದ್ ಮುಸ್ಲಿಮೀನ್(ಎಂಐಎಂ) ವರಿಷ್ಠ ಅಸಾಸುದ್ದೀನ್ ಉವೈಸಿಯವರ ಸೋದರ ಈತ. ಮೋದಿಯವರನ್ನು ಕಟುವಾಗಿ ಟೀಕಿಸುವ ನೆಪದಲ್ಲಿ, ಈತ ಪರೋಕ್ಷವಾಗಿ ತನ್ನ ಭಾಷಣದಲ್ಲಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಪೊಲೀಸರಿಗೆ ಕೆಲವು ನಿಮಿಷ ಬಿಡುವು ಕೊಟ್ಟರೆ, ಈತ ಅದೇನೋ ಮಾಡಿ ತೋರಿಸುತಾರಂತೆ. ಈತ ಕಕ್ಕಿದ ವಿಷಕಾರಿ ಭಾಷಣ ಇದೀಗ ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದೆ. ಈತನ ಭಾಷಣವನ್ನು ಮುಂದಿಟ್ಟುಕೊಂಡು, ಸಂಘ ಪರಿವಾರದ ಕೆಲವು ವಿಷಪೂರಿತ ಹಾವುಗಳು ಹೆಡೆ ಬಿಚ್ಚಲು ಮುಂದಾಗಿವೆೆ. ಈತನಿಗೆ ಭಾಷಣ ಮಾಡಿ ಮುಗಿಸಲು ಕೆಲವು ನಿಮಿಷಗಳು ಸಾಕಾಗಿರಬಹುದು. ಆದರೆ ಉಳಿಸಿ ಹೋದ ಪರಿಣಾಮವನ್ನು ಈ ದೇಶದ ಅಲ್ಪಸಂಖ್ಯಾತರು ವರ್ಷವಿಡೀ ಅನುಭವಿಸ ಬೇಕಾಗುತ್ತದೆ.

ಈ ದೇಶದಲ್ಲಿ ಮುಸ್ಲಿಮ್ ನಾಯಕರಿಗೆ ಮಾತನಾಡಲು ಬೇಕಾದಷ್ಟು ಮುಸ್ಲಿಮರ ಸಮಸ್ಯೆಗಳಿವೆ. ಶಿಕ್ಷಣ, ಬಡತನ, ಅನಾರೋಗ್ಯ ಸೇರಿದಂತೆ ಮುಸ್ಲಿಮರ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಒಂದೋ ಎರಡೋ. ಭಾರತೀಯ ಮುಸ್ಲಿಮರನ್ನು ಸಾಚಾರ್ ಸಮಿತಿ ಆಧುನಿಕ ದಿನಗಳ ನವ ದಲಿತರು ಎಂದು ಕರೆದಿದೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮೇಲೆತ್ತಲು ಮುಸ್ಲಿಮ್ ನಾಯಕರ ಪಾತ್ರ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಎಂಬ ಖಾತೆಯಲ್ಲಿ ಎಂಎಲ್‌ಎ, ಎಂಪಿಗಳಾದ ನಾಯಕರು ಬೀದಿಗಿಳಿದು ಹೋರಾಟ ಮಾಡಿದ್ದಿದ್ದರೆ, ತಮ್ಮ ಸಮುದಾಯದ ಏಳಿಗೆಗಾಗಿ ತನು ಮನ ಧನವನ್ನು ಮೀಸಲಿಟ್ಟು ಕೆಲಸ ಮಾಡಿದ್ದರೆ ದೇಶದ ಮುಸ್ಲಿಮರ ಸ್ಥಿತಿ ಈ ರೀತಿ ದಯನೀಯವಾಗುತ್ತಿರಲಿಲ್ಲ. ಮೋದಿಯ ವರಂಥವರು ಬಾಲ ಬಿಚ್ಚುವುದಕ್ಕೂ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂದು ಮುಸ್ಲಿಮ್ ನಾಯಕರೇ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿರುವುದರಿಂದ, ಅವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಉವೈಸಿ ಸಾರ್ವಜನಿಕವಾಗಿ ಮೋದಿಯವ ರನ್ನು ಟೀಕಿಸುವ ಮೊದಲು, ತಾನು ಮುಸ್ಲಿಮರಿಗಾಗಿ, ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನು ಮಾಡಿದ್ದೇನೆ ಎನ್ನುವುದನ್ನು ಹೇಳಬೇಕಾಗಿತ್ತು. ಇತರ ಜಾತಿ, ಧರ್ಮಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವುದರಿಂದ, ಮುಸ್ಲಿಮರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಅದರಿಂದ ಅವರು ಇನ್ನಷ್ಟು ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಉವೈಸಿಯ ಉದ್ವಿಗ್ನಕಾರಿ ಭಾಷಣವು ಪರೋಕ್ಷವಾಗಿ ಮೋದಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾಗಳನ್ನು ಸಮರ್ಥಿಸಿ ದಂತಾಗುತ್ತದೆ. ಒಂದು ರೀತಿಯಲ್ಲಿ ಉವೈಸಿ ಭಾಷಣದಿಂದ ಸಂಘಪರಿವಾರದ ಮಂದಿ ಸಂತೋಷದಿಂದ ಕುಣಿದಾಡಿದ್ದಾರೆ. ಈ ಭಾಷಣದೆಡೆಗೆ ಬೊಟ್ಟು ಮಾಡಿ, ಕೋಮುವಾದವನ್ನು ಹರಡಲು ಇವರಿಗೆ ಪರವಾನಿಗೆ ಸಿಕ್ಕಿದಂತಾಗಿದೆ. ಮುಸ್ಲಿಮರ ಕುರಿತಂತೆ ಯಾವುದೇ ಅಭಿವೃದ್ಧಿಯ ಮುನ್ನೋಟವಿಲ್ಲದ ಉವೈಸಿಯಂತಹವರು, ಮುಸ್ಲಿಮ್ ಸಮುದಾಯದ ನಡುವೆ ಆತ್ಮವಿಶ್ವಾಸ ತುಂಬುವ ಬದಲು ಅವರನ್ನು ಇನ್ನಷ್ಟು ಅನ್ಯಾಯದೆಡೆಗೆ ತಳ್ಳಿದ್ದಾರೆ. ಅಕ್ಬರುದ್ದೀನ್ ಉವೈಸಿ ಒಬ್ಬ ವಿಧಾನಸಭಾ ಶಾಸಕ. ಅವರಿಗೆ ಅವರದೇ ಜವಾಬ್ದಾರಿಗಳಿವೆ. ಹೊಣೆಗಾರಿಕೆಗಳಿವೆ. ಆದರೆ ಅದನ್ನು ಮರೆತು, ಜನರನ್ನು ಆಕರ್ಷಿಸಲು ಸಾರ್ವಜನಿಕವಾಗಿ ಉದ್ವಿಗ್ನಕಾರಿ ಮಾತನಾಡಿದುದು ಅಕ್ಷಮ್ಯ ಅಪರಾಧ. ಅವರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಮೋದಿಯವ ರಂತಹ ಕೋಮುವಾದಿನಾಯಕರಿಗೆ ಪ್ರತಿ ಕೋಮುವಾದ ಉತ್ತರವಲ್ಲ. ಬದಲಿಗೆ, ಈ ದೇಶದ ಜಾತ್ಯತೀತತೆಯನ್ನು ಗಟ್ಟಿ ಮಾಡಿಕೊಂಡು, ಹಿಂದೂ, ಮುಸ್ಲಿಮ್ ಕ್ರೈಸ್ತರನ್ನು ಒಟ್ಟುಗೂಡಿಸುವುದೇ ಮೋದಿಯ ವರಿಗೆ ಈ ದೇಶ, ಸಂವಿಧಾನ ನೀಡುವ ಪ್ರತಿ ಉತ್ತರ. ಹಾಗಾದಲ್ಲಿ ಈ ದೇಶ ಎಂದೆಂದೂ ಅಖಂಡವಾಗಿ ಉಳಿದೀತು. ಅಭಿವೃದ್ಧಿಯತ್ತ ಮುನ್ನಡೆದೀತು.

 

Thursday, November 22, 2012

ಪತ್ರಕರ್ತ `ಸಾಕ್ಷಿ'ಯಾಗಬೇಕೆ, `ರಕ್ಷಕ'ನಾಗಬೇಕೆ?

                                   - ದಿನೇಶ ಮೀನಮಟ್ಟು 
ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ` ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್` ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..` ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು` ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ`ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ` ಎಂದು ಬಡಬಡಿಸುತ್ತಿದ್ದ` ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್` ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?` ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ` ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ` ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು` ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ` ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ`ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?` ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ`ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ`ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ` ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ` ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?` ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್` ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್` ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್`ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....` ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ.

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಕೃಪೆ : ಪ್ರಜಾವಾಣಿ

Tuesday, July 31, 2012

ಮಂಗಳೂರ ಹಿಂಸೆಯಲ್ಲಿ ನಮ್ಮ ಪಾಲುದಾರಿಕೆ…



                                                                  -ಬಿ. ಶ್ರೀಪಾದ್ ಭಟ್ 

ಮಂಗಳೂರಿನಲ್ಲಿ ಅಟ್ಟಹಾಸ ಮೆರೆದ ‘ನೈತಿಕ ಪೊಲೀಸರು’

ನಿನ್ನೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಹುಡುಗರು ಹೆಣ್ಣುಮಕ್ಕಳ ಮೇಲೆ ನಡೆಸಿದ ಹಲ್ಲೆ ಅಮಾನವೀಯವಾದದ್ದು ಹಾಗೂ ಅತ್ಯಂತ ಕ್ರೌರ್ಯವಾದದ್ದು. ಆದರೆ ಇದು ಹೊಸದಾಗಿ ನಡೆಯುತ್ತಿದೆ ಎಂದು ನಾವು ಗಾಬರಿಗೊಂಡರೆ ಅದು ನಮ್ಮ ಆತ್ಮವಂಚನೆಯಷ್ಟೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇದು ದೇಶಾದ್ಯಾಂತ ನೂರಾರು ಬಾರಿ ನಡೆದಿದೆ. ಈ ಮತೀಯವಾದಿ ಆರೆಸ್ಸೆಸ್ ಸಂಘಟನೆ “ಗರ್ವ್ ಸೆ ಕಹೋ ಹಂ ಹಿಂದೂ ಹೈ” ಎನ್ನುವ ಘೋಷಣೆಯನ್ನು ಹುಟ್ಟು ಹಾಕಿದಾಗಲೇ ಈ ಹಲ್ಲೆಯ ಕ್ರೌರ್ಯದ ಬೀಜಗಳು ಮೊಳಕೆಯೊಡೆದದ್ದು.. ನಂತರ “ಏಕ್ ಧಕ್ಕ ಔರ್ ದೋ” ಎನ್ನುವ ಫ್ಯಾಸಿಸ್ಟ್ ಮನಸ್ಥಿತಿ ಚಲನಶೀಲಗೊಂಡಾಗ ಈ ಕ್ರೌರ್ಯದ ಅನೇಕ ಮುಖಗಳು ಅನಾವರಣಗೊಂಡವು. ಈ ಬಗೆಯ ಕ್ರೌರ್ಯಕ್ಕೆ ನೀರೆರೆದು ಪೋಷಿಸಿದ ಅಡ್ವಾನಿ ಹಾಗೂ ಮತ್ತೊಬ್ಬ ಫ್ಯಾಸಿಸ್ಟ್ ನರೇಂದ್ರ ಮೋದಿ ಇಂದು ಭವಿಷ್ಯದ ಪ್ರಧಾನಿ ಪಟ್ಟದ ಸ್ಪರ್ಧೆಗಳು. ಇವರನ್ನು ಹಾಗೂ ಇವರ ಫ್ಯಾಸಿಸ್ಟ್ ಮಾತೃ ಪಕ್ಷ ಆರೆಸ್ಸೆಸ್ ಅನ್ನು ಸಹಿಸಿಕೊಂಡ ಘೋರವಾದ ತಪ್ಪಿಗೆ ಸಮಾಜ ಈ ಬಗೆಯ ಹಲ್ಲೆಗಳನ್ನು ಕಾಲಕಾಲಕ್ಕೆ ಎದುರುನೋಡಬಹುದು. ಇವರ ಹಿಂದುತ್ವದ ಕ್ರೌರ್ಯದ ಹುಸಿಚಿಂತನೆಗೆ ದೇಶವೊಂದರ, ರಾಜ್ಯವೊಂದರ ಸಾಂಸ್ಕೃತಿಕ ಸಮಾಜ ಹಾಗೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ವ್ಯವಸ್ಥೆ ತೆರಬೇಕಾದ ಬೆಲೆ ಅಪಾರವಾದದ್ದು. ಚಿಂತಕ ಗ್ರಾಮ್ಷಿ ಹೇಳಿದ ಹಾಗೆ “ನಾವು ಮೇಲ್ನೋಟಕ್ಕೆ ವೇದಾಂತಿಗಳಾಗಿಯೂ,ಸಿದ್ಧಾಂತವಾದಿಗಳಾಗಿ ಕಾಣಿಸಿಕೊಳ್ಳುತ್ತೇವೆ. ಆದರೆ ಈ ಮುಗ್ಧ ವೇದಾಂತಗಳೇ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ನಮ್ಮೊಳಗೆ ಫ್ಯಾಸಿಸ್ಟ್ ಸಂಸೃತಿಯನ್ನು ಹುಟ್ಟಿಹಾಕುತ್ತವೆ”. ಈ ಮಾತುಗಳು ನಾಗರಿಕ ಸಮಾಜದಲ್ಲಿ ಅತ್ಯಂತ ಕ್ರೌರ್ಯದಿಂದ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಅನಾಗರಿಕವಾಗಿ ಹಲ್ಲೆ ನಡೆಸಿದ ಆ ಘಾತುಕ ಹುಡುಗರಿಗೂ ಅನ್ವಯಿಸುತ್ತದೆ, ಈ ಅಮಾನವೀಯ,ಅನಾಗರೀಕ ಹಲ್ಲೆಯನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೂ ಅನ್ವಯಿಸುತ್ತದೆ, ನಮ್ಮ ಕಾಲಘಟ್ಟದಲ್ಲಿ ಈ ತರಹದ ಅನಾಗರಿಕ ಘಟನೆಗಳು ನಡೆದಾಗಲೆಲ್ಲ ಅಸಹಾಯಕತೆಯಿಂದ ಪತ್ರಿಕಾ ಹೇಳಿಕೆಗಳ ಮೂಲಕ, ಲೇಖನಗಳ ಮೂಲಕ ಖಂಡಿಸುವ ನಮಗೂ ಅನ್ವಯಿಸುತ್ತದೆ.
ಈ ಫ಼್ಯಾಸಿಸ್ಟ್ ಧೋರಣೆಗಳಿಂದ ಮುಕ್ತಿಗಾಗಿ ರಾಜಕೀಯ ಚಿಂತಕ ’ಗ್ರಾಮ್ಷಿ’ ಯು “ಸಾಂಸ್ಕೃತಿಕ ಯಜಮಾನ್ಯ”ವನ್ನು ಪ್ರತಿಪಾದಿಸುತ್ತಾನೆ (Cultural hegemony). ಈ ಸಾಂಸ್ಕೃತಿಕ ಯಜಮಾನ್ಯದಲ್ಲಿ ಗ್ರಾಮ್ಷಿಯು ದುಡಿಯುವ ವರ್ಗಗಳು ಕೇವಲ ಆರ್ಥಿಕ ಬೆಳವಣಿಗೆಯ ಮುಖಾಂತರವಾಗಲೀ, ಕೇವಲ ರಾಜಕೀಯ ಅಧಿಕಾರದ ಮುಖಾಂತರವಾಗಲೀ ಒಂದು ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ, ಬದಲಾಗಿ ಈ ದುಡಿಯುವ ಜನತೆ ಸಾಂಸ್ಕೃತಿಕವಾಗಿ ಬುದ್ಧಿಜೀವಿಗಳಾಗಿಯೂ ರೂಪಗೊಂಡಾಗ ಆಗ ವ್ಯವಸ್ಥೆಯಲ್ಲಿ ಸಮತೋಲನ, ಸಹನೆ ಒಡಮೂಡುತ್ತದೆ ಎಂದು ಚಿಂತಿಸುತ್ತಾನೆ. ಇಲ್ಲದೇ ಹೋದಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳ ಪ್ರಭುತ್ವವು ತನ್ನದೇ ಆದ ಬೂರ್ಜ್ವಾ ಯಜಮಾನಿಕೆಯನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮಾಜದ ಮೇಲೆ ಹೇರುತ್ತದೆ ಎಂದು ಗ್ರಾಮ್ಷಿಯ ಖಚಿತವಾದ ಅಭಿಪ್ರಾಯ.
ಇಂದು ದೇಶದಲ್ಲಿ, ನಿನ್ನೆ ಹಾಗೂ ನಿರಂತರವಾಗಿ ಕೆಲವು ವರ್ಷಗಳಿಂದ ಮಂಗಳೂರು ಹಾಗು ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ನಡೆದ ಹಲ್ಲೆಯ ಹಿಂದಿನ ಕ್ರೌರ್ಯದ ಮನಸ್ಥಿತಿಯನ್ನು ಈ ಸಾಂಸ್ಕೃತಿಕ ಯಜಮಾನ್ಯದ ಪರಿಭಾಷೆಯಲ್ಲಿ ಅರ್ಥೈಸಬೇಕು. ನಾವೆಲ್ಲ ನಮ್ಮ ನೆಲದ ಮಾನವೀಯ ಸಂಸ್ಕೃತಿಯನ್ನು, ಜೀವಪರವಾದ ಅವೈದಿಕ ಸಂಸ್ಕೃತಿಯ ಯಜಮಾನ್ಯವನ್ನು ವ್ಯವಸ್ಥೆಯೊಳಗೆ ಚಲನಶೀಲವಾಗಿ, ನಿರಂತರವಾಗಿ ನೆಲೆಗೊಳ್ಳಲು ಪ್ರಯತ್ನಿಸಿಲ್ಲದ ತಪ್ಪಿಗಾಗಿ ಇಂದು ಸಂಘಪರಿವಾರದ ವಿಕೃತಿ ಚಿಂತನೆಯನ್ನು ಮೈಗೂಡಿಸಿಕೊಂಡ ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾದ ಹಲ್ಲೆ ಇಂದು ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ. ಇಲ್ಲಿ ಆಧುನಿಕ ಬುದ್ಧಿಜೀವಿಗಳು ಕೇವಲ ಮಾತುಗಾರರಾಗದೆ ಬಹಿರಂಗವಾಗಿ ಸಾಮಾನ್ಯ ಜನತೆಯೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವಲ್ಲಿ ಸೋತಂತಹ ಜಾಗದಲ್ಲಿ ಸಂಘಪರಿವಾರದ ವಿಕೃತಿ ಚಿಂತನೆಗಳು ಆ ಖಾಲಿಯಾದ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ ಹಾಗೂ ತಮ್ಮ ಯಜಮಾನಿಕೆಯನ್ನು ಪ್ರತಿಷ್ಠಾಪಿಸುತ್ತವೆ. ಇಂದು ಅಸಹಾಯಕ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ ಆ ಅನಾಗರಿಕ ಯುವಕರು, ಹಿಂದೂ ಸಂಘಟನೆಗಳು ಮತ್ತು ಜನಸಾಮಾನ್ಯರು ಆ ದುಷ್ಕೃತ್ಯವನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕಾರಣ ನಮ್ಮೆಲ್ಲರ ಸಾಂಸ್ಕೃತಿಕ ನಿಷ್ಕ್ರಿಯತೆ ಮತ್ತು ಸಿನಿಕತೆ. ನಾವೆಲ್ಲ ಸಾಂಸ್ಕೃತಿಕವಾಗಿ ನಿಷ್ಕ್ರಿಯಗೊಂಡಾಗ ಸಂಘಪರಿವಾರ ಪ್ರೇರಿತ ಬಲು ಸುಲಭವಾಗಿ ಸರಳೀಕೃತಗೊಂಡ ದೇವರುಗಳನ್ನು, ನಂಬಿಕೆಗಳನ್ನು ಒಳಗೊಂಡ ಏಕರೂಪಿ ಕಲ್ಪಿತ ಹಿಂದೂ ಸಂಸ್ಕೃತಿ ಬಂದು ನೆಲೆಯೂರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಒಂದು ಬಗೆಯ ಒಪ್ಪಿತ ಗುಲಾಮಿಗಿರಿ ನೆಲೆಗೊಳ್ಳುತ್ತದೆ. ಈ ಗುಲಾಮಿಗಿರಿ ಧರ್ಮವನ್ನು ಸಾರ್ವಜನಿಕವಾಗಿ ಚರ್ಚಿಯನ್ನು ಆರಂಭಿಸಲು ಪ್ರೇರೇಪಿಸುತ್ತದೆ. ಈ ಬಗೆಯ ಪಟ್ಟಭದ್ರ ನೆಲೆಯಲ್ಲಿ ಚರ್ಚೆಗೊಂಡ ಧಾರ್ಮಿಕತೆಯು ಕಡೆಗೆ ಸನಾತನ ಧರ್ಮಗಳ ಸಂಕೇತಗಳಾಗಿ ರೂಪಗೊಂಡು ಕ್ರಮೇಣವಾಗಿ ಜೀವವಿರೋಧಿ ಸಂಕೇತಗಾಗಿ ಬಿಡುತ್ತವೆ. ಆಗಲೇ ಗ್ರಾಮ್ಷಿ ಹೇಳಿದ ಹಾಗೆ ನಮ್ಮ ಕಾಲ ಬುಡದಲ್ಲಿ ನೆಲ ಕುಸಿಯುತ್ತಿದ್ದರೂ ನಾವು ಅದನ್ನು ಅರಿಯಲಾರದಷ್ಟು ಮೈಮರೆತಿರುತ್ತೇವೆ. ಆಗ ಈ ಜೀವ ವಿರೋಧಿ ಕ್ಷುಲ್ಲಕತನದ ಧಾರ್ಮಿಕತೆಯು ಕ್ರಮೇಣವಾಗಿ ಇಡೀ ಸಮಾಜವನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡುಬಿಡುತ್ತದೆ. ಇದರ ಸಾಕ್ಷಿಯಾಗಿ ಮಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಜನತೆಯು ಸಮರ್ಥಿಸಿಕೊಳ್ಳುವಂತಹ ಅನಾಗರಿಕ ಮಾನವವಿರೋಧಿ ವ್ಯವಸ್ಥೆ ಸೃಷ್ಟಿಗೊಂಡಿರುವುದು. ಇಲ್ಲಿ ’ದಯವೇ ಧರ್ಮದ ಮೂಲವಯ್ಯ’ ಎಂದು ಹೇಳಿದ ವಚನಕಾರರ ಜೀವಪರ ಮಾತುಗಳು ನಾಮಾವಶೇಷಗೊಳ್ಳುತ್ತವೆ. ಆಗ ಸಮಾಜದಲ್ಲಿ ಪ್ರಗತಿಪರರಾಗುವ ಹಂಬಲ ಮತ್ತು ತುಡಿತ ಕ್ರಮೇಣವಾಗಿ ಕಣ್ಮರೆಯಾಗುತ್ತದೆ.
ಇಂದು ಈ ಬಿಜೆಪಿ ಪಕ್ಷದ ಫ್ಯಾಸಿಸ್ಟ್ ಧೋರಣೆಗೆ, ಅದರ ದಿಕ್ಕು ತಪ್ಪಿದ ಭ್ರಷ್ಟ ಆಡಳಿತಕ್ಕೆ ವ್ಯಾಪಕವಾಗಿ ಖಂಡನೆಗಳು ವ್ಯಕ್ತವಾಗುತ್ತಿದೆ. ಆದರೆ ಈ ಅಸಹನೆ ಒಂದು ಜನಪರ ಚಳುವಳಿಯಾಗಿ ರೂಪಿತವಾಗುತ್ತಿಲ್ಲ. ಇದರ ದುರ್ಲಾಭವನ್ನು ಆಡಳಿತ ಪಕ್ಷಗಳು ಮತ್ತು ಸಮಾಜದ ಲುಂಪೆನ್ ಗುಂಪುಗಳು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತವೆ. ನಾಗರಿಕ ಸಮಾಜದ ಈ ನಿಷ್ಕ್ರಿಯತೆಯ ಫಲವಾಗಿಯೇ ಮಂಗಳೂರಿನಲ್ಲಿ ಇಂತಹ ಅನಾಗರಿಕ ಕೃತ್ಯ ನಡೆದರೂ ಇಲ್ಲಿನ ಸೋ ಕಾಲ್ಡ್ ಸಂಭಾವಿತ ಮುಖ್ಯಮಂತ್ರಿ ನಗುತ್ತಲೇ ಸಮಾಧಾನದಿಂದ ಉತ್ತರಿಸುತ್ತಾರೆ. ಇಲ್ಲಿನ ಭ್ರಷ್ಟ ಗೃಹಮಂತ್ರಿಗಳು ಇದೇನು ಅಂತಹ ದೊಡ್ಡ ವಿಷಯವೇ ಎಂಬಂತೆ ಜಾರಿಕೊಳ್ಳುತ್ತಾರೆ. ಈ ಅಧಪತನಕ್ಕೆ ನಾವೆಲ್ಲ ನಮ್ಮೊಳಗಿನ ಭಯವನ್ನು, ಹಿಂಜರಿಕೆಯನ್ನು ಮತ್ತು ಸಿನಿಕತನವನ್ನು ಕಿತ್ತೊಗೆಯುವ ಮೂಲಕ ಉತ್ತರಿಸಬೇಕಾಗಿದೆ. ಇಲ್ಲಿ ಗಾಂಧಿ ಹೇಳಿದಂತೆ ಅಹಿಂಸೆಯೆಂದರೆ, ಮಾನವೀಯತೆಯೆಂದರೆ ಹಿಂಸಾಕೃತ್ಯಗಳಲ್ಲಿ ತೊಡಗದಿರುವುದಷ್ಟೇ ಅಲ್ಲ, ಈ ಹಿಂಸೆಯನ್ನು ವಿರೋಧಿಸುವುದು ಸಹ ಅಹಿಂಸೆಯಾಗುತ್ತದೆ. ಇಲ್ಲದಿದ್ದರೆ ಈ ಮೌನವು ಆ ದುಷ್ಕೃತ್ಯದಲ್ಲಿ ಪಾಲ್ಗೊಳ್ಳುವಿಕೆಯ ಲಕ್ಷಣವೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಿಪ್ತತೆ ಎಂದರೆ ಮೂಕ ಸಾಕ್ಷಿಗಳು ಮಾತ್ರವಲ್ಲ, ಈ ಹಿಂಸೆಯಲ್ಲಿ ಪಾಲುದಾರರೂ ಸಹ.

ಕೃಪೆ : ವರ್ತಮಾನ : (ಫೋಟೋ : ವಿಜಯ ಕರ್ನಾಟಕ)

Tuesday, January 31, 2012

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು ?


ದಿನೇಶ್ ಅಮೀನ್ ಮಟ್ಟು
`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ.

ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ...`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಆ ಘಟನೆ ನಡೆದ ನಂತರ 1948ರ ಜನವರಿ 21ರಂದು ದೆಹಲಿಯ ಬಿರ್ಲಾ ಭವನದಲ್ಲಿಯೇ ಗಾಂಧೀಜಿ ಹತ್ಯೆಗೆ ಮತ್ತೊಂದು ಪ್ರಯತ್ನ ನಡೆದಿತ್ತು. ಅದರಿಂದಲೂ ಅವರು ಪಾರಾಗಿದ್ದರು. ಕೊನೆಗೆ 1948ರ ಜನವರಿ 30ರಂದು ಅವರು ಸಾವಿಗೆ ಶರಣಾದರು.

ಪ್ರಾಣದ ಆಸೆ ಇಲ್ಲದ ಕೊಲೆಗಡುಕ, ಕೊಲೆ ಮಾಡುವುದನ್ನು ತಡೆಯುವುದು ಎಷ್ಟು ಕಷ್ಟವೋ, ಪ್ರಾಣದ ಆಸೆ ಇಲ್ಲದ ವ್ಯಕ್ತಿಯನ್ನು ಕೊಲೆಗಡುಕನಿಂದ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಗಾಂಧೀಜಿ ಹತ್ಯೆ ನಡೆಯುವ ಹೊತ್ತಿಗೆ ಕೊಲೆಗಡುಕ ನಾಥುರಾಮ್ ಗೋಡ್ಸೆ ಮಾತ್ರವಲ್ಲ, ಕೊಲೆಯಾಗಿದ್ದ ಗಾಂಧೀಜಿ ಕೂಡಾ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು.


ಅವರ ಹತ್ಯೆಯ ದಿನವೇ ತನ್ನೆರಡು `ಊರುಗೋಲು`ಗಳಾದ ಆಭಾ ಮತ್ತು ಮನು ಜತೆ ಮಾತನಾಡುತ್ತಾ ಒಂದಲ್ಲ ಎರಡು ಬಾರಿ ತನ್ನ ಸಾವಿನ ಬಗ್ಗೆ ಗಾಂಧೀಜಿ ಮಾತನಾಡಿದ್ದರು. ತಾನು ನಂಬಿದವರೇ ತನ್ನ ಜತೆ ಇಲ್ಲವೇನೋ ಎಂಬ ಅನಾಥಪ್ರಜ್ಞೆಯೇ ಅವರಿಂದ ಈ ಮಾತುಗಳನ್ನು ಆಡಿಸಿತ್ತೋ ಏನೋ? ಹಿಂದೆ ಏಳು ಬಾರಿ ಅವರ ಹತ್ಯೆಗೆ ಪ್ರಯತ್ನ ನಡೆದಾಗ ಭಾರತೀಯರು ಶತ್ರುಗಳೆಂದು ತಿಳಿದುಕೊಂಡಿದ್ದ ಬ್ರಿಟಿಷರು ಅಧಿಕಾರದಲ್ಲಿದ್ದರು. ಹಾಗಿದ್ದರೂ ಆ ಪ್ರಯತ್ನಗಳು ವಿಫಲವಾಗಿದ್ದವು.

ಆದರೆ ಅವರ ಹತ್ಯೆ ನಡೆದಾಗ ಅವರ ಶಿಷ್ಯೋತ್ತಮರೇ ಅಧಿಕಾರದಲ್ಲಿದ್ದರು. ಅವರಿಗೂ ಬಾಪುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶಿಷ್ಯಂದಿರ ವರ್ತನೆಯ ಸುಳಿವು ಸಿಕ್ಕಿಯೇ ಗಾಂಧೀಜಿ ಬದುಕುವ ಆಸೆ ಕಳೆದುಕೊಂಡಿದ್ದರೇ?

ಗಾಂಧೀಜಿ ಹತ್ಯೆ ಮುಗಿದ ಅಧ್ಯಾಯ ಎಂದೇ ಹೆಚ್ಚಿನವರು ನಂಬಿದ್ದಾರೆ. ಕೊಲೆಗಡುಕರು ಯಾರೆಂದು ಗೊತ್ತಾಗಿದೆ, ಅವರಿಗೆ ಶಿಕ್ಷೆಯೂ ಆಗಿದೆ, ಇನ್ನೇನು ಎಂದು ಕೇಳುವವರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ವಿಚಾರವಷ್ಟೇ ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿತ್ತೇ? ಇಲ್ಲವೇ ಬೇರೆ ಕಾರಣಗಳೂ ಇದ್ದವೇ? ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವುದಿಲ್ಲ.

ಹತ್ಯೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಗೊತ್ತಿದ್ದರೂ ಗಾಂಧೀಜಿಯವರನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ನ್ಯಾಯಾಲಯದಲ್ಲಿನ ವಿಚಾರಣೆಯ ದಾಖಲೆಗಳು ಹಾಗೂ ಕೊಲೆಗಾರರಿಗೆ ಶಿಕ್ಷೆಯಾದ ನಂತರ ಎದ್ದ ವಿವಾದದಿಂದಾಗಿ ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ ಕಪೂರ್ ಆಯೋಗದ ವರದಿಗಳ ಪುಟಗಳನ್ನು ತಿರುವಿಹಾಕಿದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ಹೊರತು ಉತ್ತರ ಸಿಗುವುದಿಲ್ಲ.

ಗಾಂಧೀಜಿ ಹತ್ಯೆಗೆ ನಡೆದ ಐದು ಪ್ರಯತ್ನಗಳನ್ನು ದೃಢೀಕರಿಸುವ ದಾಖಲೆಗಳು ಲಭ್ಯ ಇವೆ. ಈ ಐದೂ ಪ್ರಯತ್ನಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿದ್ದ ಉಲ್ಲೇಖಗಳಿವೆ.

ಈ ಕಾರಣದಿಂದಾಗಿಯೇ ಪೊಲೀಸರು ಆತನನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದು 1934ರ ಜೂನ್ 25ರಂದು ಪುಣೆಯಲ್ಲಿ. `ಹರಿಜನ ಯಾತ್ರೆ`ಯಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಅಲ್ಲಿಗೆ ಹೋಗಿದ್ದರು. ಅಲ್ಲಿ ದುಷ್ಕರ್ಮಿಗಳು ಎಸೆದ ಬಾಂಬು ಗಾಂಧಿ ವಿರೋಧಿ ಅಣ್ಣಾಸಾಹೇಬ್ ಬೋಪಟ್ಕರ್ ಕಾರು ಮೇಲೆ ಬಿದ್ದ ಕಾರಣ ಗಾಂಧೀಜಿ ಪಾರಾಗಿದ್ದರು.

ಈ ಪ್ರಕರಣದ ಆರೋಪಿಗಳ್ಯಾರು ಎನ್ನುವ ಬಗ್ಗೆ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ. ಅಲ್ಲೆಲ್ಲೂ ಗೋಡ್ಸೆ ಹೆಸರು ಬರುವುದಿಲ್ಲ. ಆದರೆ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಎರಡು ಸಂಪುಟಗಳಲ್ಲಿ ಬರೆದಿರುವ ಪ್ಯಾರೇಲಾಲ್ ಅವರು ಗಾಂಧೀಜಿ ಹತ್ಯೆಯ ಮೊದಲ ಪ್ರಯತ್ನದ ಬಗ್ಗೆ ಬರೆಯುತ್ತಾ `ಈ ಪ್ರಯತ್ನದಲ್ಲಿ ಭಾಗಿಯಾಗಿದ್ದವರೇ 1948ರಲ್ಲಿ ಗಲಭೆಗ್ರಸ್ತ ದೆಹಲಿಯಲ್ಲಿ ಶಾಂತಿಪಾಲನೆಗಾಗಿ ಹೋರಾಡುತ್ತಿದ್ದ ಗಾಂಧೀಜಿಯವರ ಕೊಲೆಗೈದರು` ಎಂದು ಹೇಳಿದ್ದಾರೆ.

`ಗಾಂಧೀಜಿ ಮುಸ್ಲಿಮ್ ಪಕ್ಷಪಾತಿಯಾಗಿದ್ದರು, ಭಾರತದ ವಿಭಜನೆಗೆ ಕಾರಣರಾಗಿದ್ದರು. ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದ್ದರು. ಇದನ್ನು ಕಂಡು ಕ್ರುದ್ಧರಾದ ಹಿಂದೂ ಮಹಾಸಭಾಕ್ಕೆ ಸೇರಿದ್ದ ಗೋಡ್ಸೆ ಮತ್ತು ಆಪ್ಟೆ ಗಾಂಧೀಜಿಯವರ ಹತ್ಯೆಗೆ ಮುಂದಾದರು` ಎನ್ನುವ ಸಾಮಾನ್ಯ ಅಭಿಪ್ರಾಯ ಜನಜನಿತವಾಗಿದೆ. ಅಪರಾಧಿಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳು ಮತ್ತು ನ್ಯಾಯಾಲಯದ ತೀರ್ಪು ಕೂಡಾ ಇದನ್ನೇ ಹೇಳುತ್ತವೆ.

ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದಾಗ ಭಾರತದ ವಿಭಜನೆ ಆಗಿರಲಿಲ್ಲ, ಮುಸ್ಲಿಮ್ ಪಕ್ಷಪಾತಿ ಎಂಬ ಆರೋಪ ಕೂಡಾ ಅವರ ಮೇಲೆ ಇರಲಿಲ್ಲ. ಆಗಿನ್ನೂ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಅನಿಷ್ಟವಾದ ಅಸ್ಪೃಶ್ಯತೆ ಮತ್ತು ಕಂದಾಚಾರಗಳ ವಿರುದ್ಧ ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹರಿಜನರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕೆಂದು ಚಳವಳಿ ಪ್ರಾರಂಭಿಸಿದ್ದರು.

ಗಾಂಧೀಜಿಯವರ ಈ ವಿಚಾರಗಳೇ ಅವರ ವಿರೋಧಿಗಳ ಸಿಟ್ಟಿಗೆ ಕಾರಣವಾಗಿತ್ತೇ?
ಗಾಂಧಿ ಹತ್ಯೆಯ ಎರಡನೇ ಪ್ರಯತ್ನ ಮಹಾರಾಷ್ಟ್ರದ ಪಂಚಗಣಿಯಲ್ಲಿ 1944ರ ಜುಲೈ ತಿಂಗಳಲ್ಲಿ ನಡೆದಿತ್ತು.

ಮಲೇರಿಯಾ ಪೀಡಿತರಾಗಿದ್ದ ಗಾಂಧೀಜಿ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಹೋಗಿ ಪ್ರತಿಭಟನೆ ನಡೆಸಿದ್ದ. ಆತನನ್ನು ಮಾತುಕತೆಗೆ ಗಾಂಧೀಜಿ ಕರೆದಾಗ ಹೋಗದ ಗೋಡ್ಸೆ ಪ್ರಾರ್ಥನೆಯ ಸಮಯದಲ್ಲಿ ಕೈಯಲ್ಲಿ ಕಠಾರಿ ಝಳಪಿಸುತ್ತಾ ಗಾಂಧೀಜಿ ಕಡೆ ನುಗ್ಗಿದ್ದ.

ಆಗ ಗಾಂಧಿ ಅನುಯಾಯಿಗಳು ಆತನನ್ನು ತಡೆದು ಹೊರಗೆ ಒಯ್ದಿದ್ದರು. `ಕೊಲೆ ಮಾಡಲು ಬಂದವನು ನಾಥುರಾಮ್ ಗೋಡ್ಸೆ` ಎಂದು ಆತನ ಯತ್ನವನ್ನು ವಿಫಲಗೊಳಿಸಿದ್ದ ಅಲ್ಲಿನ ವಿಶ್ರಾಂತಿಗೃಹದ ಮಾಲೀಕ ಮಣಿಶಂಕರ್ ಪುರೋಹಿತ್ ಮತ್ತು ಸತಾರದ ಡಿ.ಬಿಲಾರೆ ಗುರೂಜಿ ಅವರು ಕಪೂರ್ ಆಯೋಗದ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ಮೂರನೇ ಪ್ರಯತ್ನ 1944ರ ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಯ ಮೊದಲು, ಸೇವಾಗ್ರಾಮದಲ್ಲಿಯೇ ನಡೆದಿತ್ತು. ಆ ಮಾತುಕತೆಗೆ ಹೋಗದಂತೆ ತಡೆಯಲು ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಗಾಂಧೀಜಿ ಉಳಿದುಕೊಂಡಿದ್ದ ಸೇವಾಗ್ರಾಮಕ್ಕೆ ಹೋಗಿದ್ದ. ಗಾಂಧೀಜಿ ಕಡೆ ನುಗ್ಗಿ ಬರುತ್ತಿದ್ದ ಗೋಡ್ಸೆಯನ್ನು ಆಶ್ರಮವಾಸಿಗಳು ತಡೆದು ನಿಲ್ಲಿಸಿದ್ದರು.

ಪೊಲೀಸರು ಬಂದು ತಪಾಸಣೆ ಮಾಡಿದಾಗ ಆತನ ಅಂಗಿಯ ಕಿಸೆಯಲ್ಲಿ ಕಠಾರಿ ಇದ್ದದ್ದು ಗೊತ್ತಾಗಿತ್ತು. ರೈಲು ಅಪಘಾತದ ಮೂಲಕ ಗಾಂಧೀಜಿಯವರನ್ನು ಕೊಲ್ಲುವ ನಾಲ್ಕನೇ ಪ್ರಯತ್ನ ಪುಣೆಯಲ್ಲಿಯೇ 1946ರ ಜೂನ್ 29ರಂದು ನಡೆದಿತ್ತು.ಗಾಂಧೀಜಿಯವರು ಪ್ರಯಾಣಿಸುತ್ತಿದ್ದ `ಗಾಂಧೀ ವಿಶೇಷ` ಎನ್ನುವ ಹೆಸರಿನ ರೈಲು ಪುಣೆಗೆ ಹೋಗುತ್ತಿರುವಾಗ ಹಳಿಗಳ ಮೇಲೆ ಕಲ್ಲುಬಂಡೆಗಳನ್ನು ಇಟ್ಟು ಅಪಘಾತ ನಡೆಸುವ ಪ್ರಯತ್ನ ನಡೆಸಲಾಗಿತ್ತು.

ಆದರೆ ರೈಲಿನ ಚಾಲಕ ವಹಿಸಿದ್ದ ಎಚ್ಚರಿಕೆಯಿಂದಾಗಿ ಆ ಅಪಘಾತ ನಡೆಯಲಿಲ್ಲ. ಈ ಘಟನೆ ನಡೆದ ಮರುದಿನವೇ ಗಾಂಧೀಜಿ ಪುಣೆಯಲ್ಲಿ ನಡೆದ ಸಭೆಯಲ್ಲಿ `ನಾನು 125 ವರ್ಷ ಬದುಕುತ್ತೇನೆ...`ಎಂದು ಹೇಳಿದ್ದು. ಅದನ್ನು ಕೇಳಿ ಆ ಸಭೆಯಲ್ಲಿದ್ದ ನಾಥುರಾಮ್ ಗೋಡ್ಸೆ `ಅಷ್ಟುದಿನ ನಿಮ್ಮನ್ನು ಬದುಕಲು ಯಾರು ಬಿಡುತ್ತಾರೆ` ಎಂದು ಪ್ರತಿಕ್ರಿಯಿಸಿದ್ದನ್ನು ಆತನ ಜತೆಯಲ್ಲಿದ್ದವರು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆಯ ಕೊನೆಯ ಪ್ರಯತ್ನ ವಿಫಲಗೊಂಡದ್ದು 1948ರ ಜನವರಿ 20ರಂದು. ತಾವು ನಂಬಿದ್ದ `ಗುರುಹಿರಿಯರ` ಆಶೀರ್ವಾದದೊಂದಿಗೆ ಸರ್ವಸನ್ನದ್ಧರಾಗಿ ದೆಹಲಿಗೆ ಬಂದಿದ್ದ ನಾಥೂರಾಮ್ ಗೋಡ್ಸೆ ಮತ್ತು ಸಂಗಾತಿಗಳು, ಸಂಜೆ ಹೊತ್ತಿಗೆ ಬಿರ್ಲಾ ಭವನದೊಳಗೆ ಸೇರಿಕೊಂಡಿದ್ದರು. ಮೊದಲು ಮದನ್‌ಲಾಲ್ ಪಹವಾ ಗಾಂಧೀಜಿ ಪ್ರಾರ್ಥನೆ ಮಾಡುವ ಸ್ಥಳದ ಹಿಂದಿನ ಗೋಡೆಯಲ್ಲಿ ಬಾಂಬು ಇಟ್ಟು ಸ್ಫೋಟಿಸಬೇಕು.

ಅದಾದ ಕೂಡಲೇ ಗೋಡ್ಸೆ ಮತ್ತು ವಿಷ್ಣು ಕರಕರೆ ಗ್ರೆನೇಡ್ ಎಸೆಯಬೇಕು. ಅಂತಿಮವಾಗಿ ದಿಗಂಬರ ಬಡ್ಗೆ ಗಾಂಧೀಜಿಯವರ ಕಡೆ ರಿವಾಲ್ವರ್‌ನಿಂದ ಗುಂಡುಹಾರಿಸಬೇಕು-ಇದು ಮೂಲ ಯೋಜನೆ. ಆದರೆ ಬಾಂಬು ಸ್ಫೋಟವಾದ ಕೂಡಲೇ ಪೊಲೀಸರು ಮದನ್‌ಲಾಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ನೋಡಿದ ಕೂಡಲೇ ಉಳಿದವರು ಅಲ್ಲಿಂದ ಪಲಾಯನಗೈದರು.

ಮದನ್‌ಲಾಲನನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಅವಧಿಯಲ್ಲಿ ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನೆಲ್ಲ ಸಂಗ್ರಹಿಸಿದ್ದರು. ಪಂಜಾಬಿ ನಿರಾಶ್ರಿತ ಮದನ್‌ಲಾಲ್‌ಗೆ ಆಶ್ರಯ ನೀಡಿ ಸಾಕಿದ್ದವರು ಮಹಾರಾಷ್ಟ್ರದ ಪ್ರೊ.ಜಗದೀಶ್‌ಚಂದ್ರ ಜೈನ್ ಎಂಬ ಪ್ರಾಧ್ಯಾಪಕರು.

ತಾನು ಗಾಂಧಿ ಹತ್ಯೆಯ ಸಂಚಿನಲ್ಲಿ ಸೇರಿಕೊಂಡದ್ದನ್ನು ಆತ ಪ್ರೊ.ಜೈನ್ ಅವರಿಗೂ ತಿಳಿಸಿದ್ದ. ಮದನ್‌ಲಾಲ್ ಬಂಧನದ ಸುದ್ದಿ ಪತ್ರಿಕೆಯಲ್ಲಿ ಓದಿದ ಕೂಡಲೇ ಜಾಗೃತರಾದ ಪ್ರೊ.ಜೈನ್ ಆಗ ಮಹಾರಾಷ್ಟ್ರದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಸಂಚಿನ ವಿವರ ತಿಳಿಸಿದ್ದರು.

ಆ ಮಾತುಕತೆಯಲ್ಲಿ ವಿ.ಡಿ.ಸಾವರ್ಕರ್ ಮತ್ತು `ಕರ್ಕರೆ ಸೇಠ್` ಜತೆ ಮದನ್‌ಲಾಲ್ ಹೊಂದಿದ್ದ ಸಂಪರ್ಕವನ್ನು ಕೂಡಾ ಅವರು ಒತ್ತಿ ಹೇಳಿದ್ದರು. `ದಕ್ಷತೆಗೆ ಹೆಸರಾಗಿದ್ದ ಮತ್ತು ಗಾಂಧಿವಾದಿಯಾಗಿದ್ದ ಮೊರಾರ್ಜಿ ದೇಸಾಯಿ ವರ್ತನೆ ಆಶ್ಚರ್ಯಕರವಾಗಿತ್ತು. ಪ್ರೊ.ಜೈನ್ ಹೇಳಿದ್ದನ್ನು ಅವರು ದಾಖಲಿಸಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಚರ್ಚಿಸಿರಲಿಲ್ಲ. ಪ್ರೊ.ಜೈನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲು ಪೊಲೀಸರಿಗೆ ತಿಳಿಸಬಹುದಿತ್ತು.

ಅದನ್ನೂ ಮಾಡಿರಲಿಲ್ಲ. ಅಹಮದಾಬಾದ್‌ಗೆ ಹೊರಟಿದ್ದ ಅವರು ರೈಲ್ವೆ ನಿಲ್ದಾಣಕ್ಕೆ ಡಿಸಿಪಿ ನಗರ್‌ವಾಲಾ ಅವರನ್ನು ಕರೆಸಿ ವಿಷಯವನ್ನಷ್ಟೇ ತಿಳಿಸಿದ್ದರು` ಎಂದು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ `ಲೆಟ್ ಅಸ್ ಕಿಲ್ ಗಾಂಧಿ` ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಮೊರಾರ್ಜಿ ಅವರಿಂದ ವಿಷಯ ತಿಳಿದುಕೊಂಡ ಡಿಸಿಪಿ ನಗರ್‌ವಾಲ್ ತನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಹೇಳುತ್ತಲೇ ಇದ್ದರೂ ಅದನ್ನು ಕೊನೆಗೂ ಬಹಿರಂಗಪಡಿಸಿದ್ದು ಗಾಂಧಿ ಹತ್ಯೆಯಾದ ಹನ್ನೆರಡು ಗಂಟೆಗಳ ನಂತರ. ಜನವರಿ 20ರಿಂದ 30ರ ವರೆಗಿನ ಹತ್ತು ದಿನಗಳ ಅವಧಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ಸಂಗಾತಿಗಳು ದೆಹಲಿ-ಮುಂಬೈ ನಡುವೆ ನಿರಾತಂಕವಾಗಿ ಓಡಾಡುತ್ತಾ ಗಾಂಧಿ ಹತ್ಯೆಯ ಕೊನೆಯ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದರು.

ಆಗ ಕೇಂದ್ರದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳ ಆಡಳಿತ ಗಾಂಧೀಜಿ ಅನುಯಾಯಿಗಳ ಕೈಯಲ್ಲಿಯೇ ಇತ್ತು. ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು `ಉಕ್ಕಿನ ಮನುಷ್ಯ` ಸರ್ದಾರ್ ವಲ್ಲಭಭಾಯಿ ಪಟೇಲ್. ಸಂಚು ರೂಪುಗೊಂಡ ಮಹಾರಾಷ್ಟ್ರದಲ್ಲಿ ಗೃಹಸಚಿವರಾಗಿದ್ದವರು ಮೊರಾರ್ಜಿ ದೇಸಾಯಿ. ಪ್ರಧಾನಿಯಾಗಿದ್ದವರು ಗಾಂಧೀಜಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜವಾಹರಲಾಲ್ ನೆಹರೂ.
ದೆಹಲಿ ಪೊಲೀಸರು ಮದನ್‌ಲಾಲ್ ನೀಡಿದ ಮಾಹಿತಿ ಆಧರಿಸಿ ಸಂಚುಕೋರರು ತಂಗಿದ್ದ ಹೊಟೇಲ್ ಕೋಣೆ ಜಾಲಾಡಿಸಿದ್ದರು.

ಅಲ್ಲಿ ಹಿಂದೂ ಮಹಾಸಭಾದ ಲೆಟರ್‌ಹೆಡ್ ಸಿಕ್ಕಿದ್ದರೂ ಆ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ವಿಚಾರಿಸಿರಲಿಲ್ಲ. ಕಪೂರ್ ಆಯೋಗದ ಮುಂದೆ ಮಹಾಸಭಾದ ಪದಾಧಿಕಾರಿ ಅಶೋಕ್ ಲಾಹಿರಿಯವರೇ ಇದನ್ನು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಮದನ್‌ಲಾಲ್ ಪ್ರಮುಖವಾಗಿ `ಅಗ್ರಾಣಿ` ಮತ್ತು `ಹಿಂದೂ ರಾಷ್ಟ್ರ` ಎನ್ನುವ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರ ಬಗ್ಗೆ ತಿಳಿಸಿದ್ದ.

ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಪೊಲೀಸರು ಹತ್ತು ದಿನಗಳ ಅವಧಿಯಲ್ಲಿ ಮಾಡಿರಲಿಲ್ಲ. ಕನಿಷ್ಠ ಆ ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಗಾಂಧಿ ಹತ್ಯೆಯ ಸಂಚನ್ನು ಭಗ್ನಗೊಳಿಸಬಹುದಿತ್ತು. ಯಾಕೆಂದರೆ ಆ ಸಂಪಾದಕರು ಮತ್ತು ಪ್ರಕಾಶಕರ ಹೆಸರು- ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಗಾಂಧೀಜಿಯವರನ್ನು ಕೇವಲ ನಾಥುರಾಮ್ ಗೋಡ್ಸೆ ಕೊಂದದ್ದು ಎಂದು ಹೇಗೆ ಹೇಳುವುದು?

Thursday, December 29, 2011

ಸರ್ವಾಧಿಕಾರಿ ವರ್ತನೆಯ ಹಜಾರೆ !


ಅಣ್ಣಾ ಹಜಾರೆ ಇರುವ ವರ್ಚಸ್ಸನ್ನು ಎಡಬಿಡಂಗಿತನ ನಡೆಗಳಿಂದ ಕಳೆದುಕೊಳ್ಳುತ್ತ ನಡೆದಿರುವುದು ಕಂಡುಬರುತ್ತಿದೆ. ಇದು ಲೋಕಪಾಲಕ್ಕಾಗಿ ನಡೆಸಿರುವ ಹೋರಾಟವಾಗಿರದೇ ಪ್ರಚಾರಕ್ಕಾಗಿ ರಚ್ಚೆ ಹಿಡಿದವರಂತೆ ಮಾಡುವ ತಂತ್ರಗಾರಿಕೆ ಎನಿಸುತ್ತಿದೆ. ಪ್ರಜ್ಞಾವಂತ ನಾಗರಿಕರು ಇದನ್ನು ಅರಿಯಬೇಕು. ಹಜಾರೆ ಆಂದೋಲನದ ಮೂಲಕ ದೇಶವನ್ನು ಒಡೆಯಲು ಹೊರಟಿದ್ದಾರೆ. ಲಕ್ಷಾನುಗಟ್ಟಲೆ ರುಪಾಯಿ ಖರ್ಚು ಮಾಡಿ ಸಿದ್ದಪಡಿಸುವ ವೇದಿಕೆಯ ಮೇಲೆ ಹಜಾರೆ ರಾಜನಂತೆ ಕುಳಿತುಕೊಳ್ಳುವುದನ್ನು ಕಂಡಾಗ ಇದು ಜನಸಾಮಾನ್ಯರ ಆಂದೋಲನವಾಗಿರದೆ ರಾಜಶಾಹಿತನವೇ ಆಗಿದೆ. ನಾವು ಆಂದೋಲನ ಮಾಡಿದಾಗ, ಮುಷ್ಕರ-ಮೆರವಣಿಗೆ ಮಾಡುವಾಗ ನಮ್ಮ ಕಿಸೆಗಳನ್ನು ಮುಟ್ಟಿ ನೋಡಿಕೊಳ್ಳುತ್ತೇವೆ ಎನ್ನುವ ದಲಿತ ಪ್ಯಾಂಥರ್ ನ ಮುಖಂಡ ಮತ್ತು ಹಿರಿಯ ಮರಾಠಿ ಲೇಖಕ ನಾಮದೇವ ಢಸಾಳ ಹೇಳಿರುವುದರಲ್ಲಿ ಅರ್ಥವಿದೆ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.