Showing posts with label ಸಾಹಿತಿ. Show all posts
Showing posts with label ಸಾಹಿತಿ. Show all posts

Sunday, July 22, 2012

ಮರಾಠಿ ಹಿರಿಯ ಬರಹಗಾರ ಉತ್ತಮ ಕಾಂಬಳೆ

ಡಾ. ಸಿದ್ರಾಮ ಕಾರಣಿಕ

(ಮರಾಠಿಯ ಶ್ರೇಷ್ಟ ಹಿರಿಯ ಸಾಹಿತಿ, ವಿಚಾರವಾದಿ, ವಿಮರ್ಶಕ ಉತ್ತಮ ಕಾಂಬಳೆಯವರ 'ದೇವದಾಸಿ ಮತ್ತು ಬೆತ್ತಲೆ ಸೇವೆ' ಕೃತಿಯನ್ನು ಮರಾಠಿಯಿಂದ ಅನುವಾದ ಮಾಡಿದಾಗ ನಾನು ಬರೆದ ಮೊದಲ ಮಾತುಗಳು)


“ಹಲೋ ಸರ್... ನಾನು, ಧಾರವಾಡದಿಂದ ಡಾ. ಸಿದ್ರಾಮ ಕಾರಣಿಕ’”
“ಹೇಳ್ರಿ ಸಿದ್ರಾಮ, ಆರಾಮಾಗಿದ್ದೀರಿ ?”
“ಆರಾಮಾಗಿದ್ದೇನ್ರಿ ಸರ್. ನಿಮಗ ಅಭಿನಂದನೆಗಳು ಸರ್”
“ಥ್ಯಾಂಕ್ಸ್... ಭಾಳ ಸಂತೋಷ ಆತು”
“ಇದು ನಮಗೆ ಸಂದ ಜಯ ಸರ್”
“ಹೌದ... ಹೌದ್ರಿ... ಥ್ಯಾಂಕ್ಯೂ ಥ್ಯಾಂಕ್ಯೂ ... ಏಳನೇ ತಾರೀಕಕ ನಾ ಬೆಳಗಾಂವಕ ಬರಾಕತ್ತೇನಿ. ಸಾಧ್ಯ ಆದ್ರ ಬರ್ರಿ”
“ಬರತೇನ್ರಿ ಸರ್. ತಮ್ಮ ಪುಸ್ತಕದ ಅನುವಾದ ಮುಗಿದಿದೆ ಸರ್. ಡಿಸೆಂಬರ್ದೊಳಗ ಬಿಡುಗಡೆ ಆಗ್ತೇತಿ.”
“ಹೌದಾ ! ಭಾಳ ಖುಷಿ ಆತು ಥ್ಯಾಂಕ್ಯೂ ...”
“ಸರ್, ಮತ್ತೊಮ್ಮಿ ನಿಮಗ ಅಭಿನಂದನೆಗಳು”
“ಥ್ಯಾಂಕ್ಯೂ ಥ್ಯಾಂಕ್ಯೂ ...”
*****
ಇದು ಉತ್ತಮ ಕಾಂಬಳೆಯವರು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರೊಂದಿಗೆ ನಾನು ಮಾತನಾಡಿದ ಪ್ರಸಂಗ. ಹೌದು ಉತ್ತಮ ಕಾಂಬಳೆಯವರು ತುಂಬ ಎತ್ತರದ ವ್ಯಕ್ತಿತ್ವ ಉಳ್ಳವರು. ತಕ್ಷಣವೇ ಆತ್ಮೀಯರಾಗಿ ಬಿಡುತ್ತಾರೆ. ಮರಾಠಿ ಸಾಹಿತ್ಯದಲ್ಲಿ ತುಂಬ ಹೆಸರು ಮಾಡಿರುವ ಅವರ ನಯ-ವಿನಯ, ಆತ್ಮೀಯತೆ, ವಿಚಾರಶೀಲತೆ, ತೀವ್ರವಾದ ವೈಚಾರಿಕತೆ ದಂಗು ಬಡಿಸುವಂಥದ್ದು.
ಸುಮಾರು ತಿಂಗಳಗಳ ಹಿಂದೆ ಉತ್ತಮ ಕಾಂಬಳೆಯವರ ‘ದೇವದಾಸಿ ಆಣೀ ನಗ್ನಪೂಜಾ’ ಎಂಬ ಸಂಶೋಧನಾತ್ಮಕ ಕೃತಿಯನ್ನು ನಾನು ಅನುವಾದ ಮಾಡತೊಡಗಿದ್ದೆ. ಆಗಲೂ ಅವರೊಂದಿಗೆ ಮಾತನಾಡಿದ್ದೆ. ನನ್ನ ಆಗ್ರಹದಿಂದ ತಮ್ಮ ಫೋಟೋವನ್ನೂ, ಬಯೋಡಾಟಾವನ್ನೂ ನನಗೆ ಕಳುಹಿಸಿ ಕೊಟ್ಟರಲ್ಲದೇ ಮುಂಬಾಯಿಯ ಪ್ರಕಾಶನದ ವತಿಯಿಂದ ಮತ್ತೊಂದು ಕೃತಿಯ ಪ್ರತಿಯನ್ನೂ ಚಿತ್ರಗಳನ್ನು ಒಳಗೊಂಡ ಸಿ.ಡಿ.ಯನ್ನೂ ಕಳುಹಿಸಿಕೊಟ್ಟರು. ಅವರ ಆತ್ಮೀಯತೆಗೆ, ಸಹಕಾರಕ್ಕೆ ಬರೆಯಬೇಕೆಂದರೂ ಪದಗಳು ದಕ್ಕುವುದಿಲ್ಲ !
ಮೂಲತಃ ಕರ್ನಾಟಕದವರೇ ಆದ ಉತ್ತಮ ಕಾಂಬಳೆಯವರು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ ಅವರ ಹುಟ್ಟೂರು. ತೀರ ಬಡತನದ ಕುಟುಂಬ ಶಾಲೆ ಕಲಿಯಬೇಕೆಂಬ ಅವರಿಗೆ ಆರ್ಥಿಕ ಅಡಚಣೆ ತುಂಬ ಇತ್ತು. ಕೆಲವು ದಿನ ಹಮಾಲಿ ಮಾಡಿದರು ; ಕೆಲವು ದಿನ ಗೋಡೆ ಕಟ್ಟುವ ಗೌಂಡಿಗಳ ಕೈ ಕೆಳಗೆ ಆಳಾಗಿ ದುಡಿದರು ; ದಿನಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡದಾಗಿ ಒದರುತ್ತ ಮಾರುವ ಹುಡುಗ ಆಗಿದ್ದರು ! ಸೇಲ್ಸ್ಮನ್ ಆಗಿದ್ದವರು ; ಕೆಲವೊಂದಿಷ್ಟು ದಿನ ಯಾವುದೋ ಡಾಕ್ಟರರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡಿದ್ದೂ ಇದೆ ! ಇಷ್ಟೆಲ್ಲ ಮಾಡುತ್ತಲೇ ಶಿಕ್ಷಣ ಪೂರೈಸಿದ ಉತ್ತಮ ಕಾಂಬಳೆಯವರ ಬದುಕು ಹೋರಾಟದ ಹಾದಿ. ಅವರು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಾಗ ಅನುಭವಿಸಿದ ಆನಂದ ಹೇಳತೀರದಷ್ಟು ! ಯಾಕೆಂದರೆ ಅವರ ಮನೆತನದಲ್ಲಿಯೇ ಶಾಲೆ ಕಲಿತ ವೊದಲ ವ್ಯಕ್ತಿ ಅವರು !
ಬದುಕಿನ ಹಾದಿಯನ್ನು ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ದಿನಪತ್ರಿಕೆಯ ಸಾಮಾನ್ಯ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡ ಉತ್ತಮ ಕಾಂಬಳೆಯವರು ಇಂದು ಮರಾಠಿಯ ಪ್ರಮುಖ ದಿನಪತ್ರಿಕೆ `ಸಕಾಳ’ ಸಮೂಹದ ಪ್ರಧಾನ ಸಂಪಾದಕರಾಗಿದ್ದಾರೆ ! ಹತ್ತು ಪೈಸೆ ಕಮಿಶನ್ ಸಿಗುತ್ತದೆ ಎಂದು ಪತ್ರಿಕೆಗಳ ಕಟ್ಟನ್ನು ಹಿಡಿದು ಒದರುತ್ತ ಪತ್ರಿಕೆ ಮಾರುತ್ತಿದ್ದ ಹುಡುಗನೊಬ್ಬ ಇಂದು ಪ್ರಮುಖ ಪತ್ರಿಕೆಯೊಂದ ಮುಖ್ಯಸ್ಥನಾಗುತ್ತಾನೆ ಎಂದರೆ ಅದಕ್ಕೆ ಆತನ ಪ್ರಯತ್ನ, ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯನ್ನು ಸಾಧಿಸುವ ಛಲವೇ ಕಾರಣ. ಇದು ಉತ್ತಮ ಕಾಂಬಳೆಯವರ ಬದುಕಿನ ಪರಿ. ಅಷ್ಟೇ ಅಲ್ಲ ಸಾಹಿತ್ಯ ಕ್ಷೇತ್ರದಲ್ಲೂ ಅವರ ಕೃಷಿ ಬಹುದೊಡ್ಡದು. ಇದೀಗ  81ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರೆ ಅವರ ಕಾರ್ಯವ್ಯಾಪ್ತಿ ಕಣ್ಮುಂದೆ ಸುಳಿಯಬಲ್ಲದು.
ಇಲ್ಲಿಯವರೆಗೆ ಎರಡು ಕಾದಂಬರಿಗಳು, ಐದು ಕಥಾಸಂಕಲನಗಳು, ಐದು ಸಂಶೋಧನಾತ್ಮಕ ಕೃತಿಗಳು, ಎರಡು ಕಾವ್ಯ ಸಂಕಲನಗಳು, ಏಳು ಸಂಪಾದಿತ ಕೃತಿಗಳು, ತಮ್ಮ ಆತ್ಮಕತೆಯನ್ನೇ ಹೊಂದಿರುವ ಮೂರು ಕೃತಿಗಳು ಹೀಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಉತ್ತಮ ಕಾಂಬಳೆಯವರು ರಚಿಸಿದ್ದಾರೆ ಎಂದರೆ ಬರವಣಿಗೆಯ ಅಗಾಧತೆ ಅರಿವಿಗೆ ನಿಲುಕುತ್ತದೆ.
ಪತ್ರಕರ್ತನಾಗಿ 23 ಮತ್ತು ಸಾಹಿತಿಯಾಗಿ 30 ಒಟ್ಟು ನಲವತ್ಮೂರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸಧ್ಯ ಮಹಾರಾಷ್ಟ್ರದ ನಾಶಿಕದಲ್ಲಿ `ಚಾರ್ವಾಕಾಶಯ’ ಹೆಸರಿನ ಮನೆಯಲ್ಲಿ ವಾಸವಾಗಿರುವ ಉತ್ತಮ ಕಾಂಬಳೆಯವರು ಸವ್ಮೋಹಕ ವ್ಯಕ್ತಿತ್ವದವರಾಗಿದ್ದಾರೆ.

Monday, January 30, 2012

ಪ್ರಖರ ವಿದ್ವಾಂಸ ಎಲ್.ಬಸವರಾಜು ನಿಧನ

ಮೈಸೂರು: ಹಿರಿಯ ಸಾಹಿತಿ ಲಿಂಗಪ್ಪ ಬಸವರಾಜು (93) ಭಾನುವಾರ ರಾತ್ರಿ ಇಲ್ಲಿ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕೋಲಾರ ಜಿಲ್ಲೆ ಇಡಗೂರು ಗ್ರಾಮದವರಾದ ಅವರು 1919ರಲ್ಲಿ ಜನಿಸಿದ್ದರು. 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1977ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2000ರಲ್ಲಿ ಭಾಷಾಂತರಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ, 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್, ಬಸವ ಪುರಸ್ಕಾರ, ನಾಡೋಜ ಪ್ರಶಸ್ತಿ, ಪಂಪ ಪ್ರಸಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.


ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಎಲ್.ಬಸವರಾಜು ಅವರು, ವಚನಗಳ ಸಂಶೋಧನೆ, ಗ್ರಂಥಸಂಪಾದನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.


ಇಡಗೂರು, ಸಿದ್ದಗಂಗೆ ಮತ್ತು ಬೆಂಗಳೂರುಗಳಲ್ಲಿ ಹೈಸ್ಕೂಲುವರೆಗಿನ ಶಿಕ್ಷಣ ಪಡೆದ ನಂತರ ವಿಶೇಷ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದ ಎಲ್.ಬಸವರಾಜು, 1946 ರಲ್ಲಿ ಬಿಎ ಆನರ್ಸ್ ಮತ್ತು 1951 ರಲ್ಲಿ ಎಂ.ಎ. ಪದವಿ ಪಡೆದರು. ಸ್ವಲ್ಪ ಕಾಲ, ದಾವಣಗೆರೆ ಮತ್ತು ಮೈಸೂರಿನ ಯುವರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ, ಬಸವರಾಜು ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯನ್ನು ಸೇರಿದರು.(1967) 1979 ರಲ್ಲಿ ಸೇವೆಯಿಂದ ನಿವತ್ತರಾದರು.


ಎಲ್.ಬಸವರಾಜು ಅವರು ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ, ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ; ವಿಶಿಷ್ಟವಾದ ದೃಷ್ಟಿಕೋನಗಳನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಅಭಿಜಾತ ಕೃತಿಗಳು ಮತ್ತು ಜ್ಞಾನದ ಆಕರಗಳನ್ನು, ಪಂಡಿತರೇನೂ ಅಲ್ಲದ ಜನಸಾಮಾನ್ಯರ ಅಳವಿಗೆ ನಿಲುಕುವಂತೆ ನೀಡಬೇಕೆನ್ನುವುದೇ ಅವರ ಗುರಿ.


ಆದ್ದರಿಂದಲೇ ಅವರು ಅನೇಕ ಮಹಾಕಾವ್ಯಗಳ ಸರಳವಾದ ಗದ್ಯರೂಪಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬರುವ ಪದ್ಯಗಳನ್ನು, ಬಿಡಿ ಪದಗಳಾಗಿ ಒಡೆದು, ಗದ್ಯಸಮೀಪವಾದ ವಾಕ್ಯರಚನೆಯಲ್ಲಿ ಮರುಜೋಡಣೆ ಮಾಡುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಅಗತ್ಯವಿರುವ ಕಡೆಗೆ ಸೂಕ್ತವಾದ ಲೇಖನಚಿಹ್ನೆಗಳನ್ನು ಕೊಟ್ಟಿದ್ದಾರೆ.
ಈ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಮುಂಚಿತವಾಗಿಯೂ ಅವರು ಪರಿಶ್ರಮ ವಹಿಸಿ ಗ್ರಂಥಸಂಪಾದನೆ ಮಾಡಿದ್ದರು. ಓಲೆಗರಿಗಳು ಮತ್ತು ಕಾಗದದ ಹಸ್ತಪ್ರತಿಗಳ ನೆರವಿನಿಂದ ಮೂಲಪಠ್ಯವನ್ನು ಗುರುತಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಬಸವರಾಜು ಅವರು ಸಂಪಾದನೆ ಮಾಡಹೊರಡುವ ಕತಿಗಳ ಆಯ್ಕೆಯಲ್ಲಿ ಜಾತ್ಯತೀತವಾದ ಧೋರಣೆಯನ್ನು ಹೊಂದಿದ್ದಾರೆ.

`ಆದಿಪುರಾಣ`ದಂತಹ ಜೈನ ಕೃತಿ, `ಬುದ್ಧಚರಿತ`ದಂತಹ ಬೌದ್ಧಕೃತಿ, `ತೊರವೆಯ ರಾಮಾಯಣ`, `ಶಬ್ದಮಣಿದರ್ಪಣ` ಯಾವುದೂ ಅವರ ಅನಾದರಕ್ಕೆ ಗುರಿಯಾಗಿಲ್ಲ. ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವರು ಯಾವಾಗಲೂ ಹಿಂಜರಿದಿಲ್ಲ.


`ಬಸವೇಶ್ವರರ ವಚನಗಳು` `ಅಲ್ಲಮನ ವಚನಚಂದ್ರಿಕೆ`  `ಶಿವದಾಸ ಗೀತಾಂಜಲಿ`,     `ಬಸವ ವಚನಾಮೃತ`,  `ಅಕ್ಕನ ವಚನಗಳು`, `ಅಲ್ಲಮನ ವಚನಗಳು` ಇವು ಬಸವರಾಜು ಅವರು ಸಂಪಾದಿಸಿರುವ ಕೆಲವು ಪ್ರಮುಖ ಗ್ರಂಥಗಳು.
ಕೃಪೆ : ಪ್ರಜಾವಾಣಿ 

ಕನ್ನಡ ಸಾಹಿತ್ಯ ಸಂಪತ್ತು ಎಲ್ ಬಸವರಾಜು ಇನ್ನಿಲ್ಲ

ಎಲ್ ಬಸವರಾಜು ನೆನಪಿನಲ್ಲಿ ಅವರು ಬಿ.ಎಸ್. ನಾರಾಯಣಸ್ವಾಮಿಯವರೊಂದಿಗಿನ ಸಂದರ್ಶನ ಇಲ್ಲಿದೆ :
“ಬರಿಮಾತಿನ ಸಾಹಿತಿ, ಸ್ವಾಮೀಜಿ, ರಾಜಕಾರಣಿಗಳಿಂದ ದೇಶ ಹಾಳು”ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್. ಬಸವರಾಜು ಅವರು ಆಯ್ಕೆಯಾದ ಕೂಡಲೇ ಅದುವರೆಗಿದ್ದ ವಿವಾದದ ಹೊಗೆಯೆಲ್ಲವೂ ಒಮ್ಮೆಗೇ ಮಾಯವಾಯಿತು. ಆ ಸ್ಥಾನಕ್ಕೆ ಪ್ರೊಫೆಸರ್ ಎಲ್‌ಬಿ ಅಷ್ಟು ಸೂಕ್ತರು ಹಾಗೂ ವಿವಾದಾತೀತರು. 90ರ ಹರೆಯದಲ್ಲೂ ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಸಾಹಿತ್ಯದ ಸಹವಾಸದಿಂದ ಅವರು ದೂರವಾಗಿಲ್ಲ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್‌ಬಿ ಅವರೊಂದಿಗೆ ಬಿ.ಎಸ್. ನಾರಾಯಣಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೀವು ಬಹು ಹಿಂದೆಯೇ ಆಯ್ಕೆಯಾಗಬೇಕಿತ್ತು.
ಇದೀಗ ನಾಡೋಜ ಪ್ರಶಸ್ತಿಯೂ ಸಂದಿದೆ. ಈ ಬಗ್ಗೆ…?
ಈ ಪ್ರಶಸ್ತಿಗಳೆಲ್ಲಾ ನಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸುತ್ತವೆ ಅಷ್ಟೆ. ಪ್ರಶಸ್ತಿ, ಪದವಿಯನ್ನೆಲ್ಲಾ ನಾನು ಯಾವತ್ತೂ ನಿರೀಕ್ಷಿಸಿದವನಲ್ಲ; ಅದಕ್ಕಾಗಿ ಕೆಲಸ ಮಾಡಿದವನಲ್ಲ. ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಬರಹಗಳೆರಡರಲ್ಲೂ ತೊಡಗಿಸಿಕೊಂಡಿದ್ದೀರಿ. ನಿಮಗೆ ಖುಷಿ ಕೊಟ್ಟಿದ್ದು…ಗ್ರಂಥ ಸಂಪಾದನೆ ಇರಲಿ, ಸೃಜನಶೀಲ ಬರವಣಿಗೆ ಇರಲಿ ಎರಡನ್ನೂ ಖುಷಿಯಿಂದಲೇ ಮಾಡಿದ್ದೀನಿ ಅಂತ ಹೇಳಬಲ್ಲೆ. ಈಗ ತಿರುಗಿ ನೋಡಿದರೆ ಇವನ್ನೆಲ್ಲಾ ಬರೆದದ್ದು ನಾನೇನಾ ಅನಿಸುತ್ತದೆ. ನಾನು ಬರೆದಿಲ್ಲ; ಯಾವುದೋ ಶಕ್ತಿ ನನ್ನ ಕೈಯಿಂದ ಬರೆಸಿತು ಅನ್ನುವುದೇ ನಿಜ. ಏನೇ ಮಾಡಿದರೂ ಆ ಒಂದು ಆವೇಶದಿಂದ, ಮನಃಪೂರ್ವಕವಾಗಿ ಮಾಡಬೇಕು. ಇಲ್ಲದೇ ಹೋದರೆ ಅದು ಕೂಲಿ ಕೆಲಸ ಆಗುತ್ತದೆ.
ಗ್ರಂಥ ಸಂಪಾದನೆಯತ್ತ ನಿಮ್ಮ ಒಲವು ಹರಿದಿದ್ದು ಹೇಗೆ?

ನಾನು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪ್ರಾಚೀನ ಪಠ್ಯಗಳನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಿದ್ದಾಗ ಕೆಲವು ಕಡೆ ಏನೋ ತಪ್ಪಿದೆ; ಅರ್ಥ ಸರಿ ಬರುತ್ತಿಲ್ಲಾ ಎನಿಸುತ್ತಿತ್ತು. ಇದನ್ನು ನಮ್ಮ ಗುರುಗಳಿಗೂ ಹೇಳುತ್ತಿದ್ದೆ. ಅವರೂ ಕೂಡಾ ನನ್ನ ಹಾಗೇ ಅಭಿಪ್ರಾಯಪಡುತ್ತಿದ್ದರು. ಆನಂತರ ಪ್ರಾಚೀನ ಕೃತಿಯೊಂದರ ಹಲವು ಪಠ್ಯಗಳನ್ನು ಓದಿ ಯಾವುದು ಸರಿ ಎಂದು ನಿರ್ಣಯಿಸುವುದೇ ನನಗೆ ಒಂದು ಹವ್ಯಾಸವಾಗಿ ಹೋಯಿತು. ಹೀಗಾಗಿ ಗ್ರಂಥ ಸಂಪಾದನೆಯತ್ತ ನನ್ನನ್ನು ತೊಡಗಿಸಿಕೊಂಡೆ. ಮೇಲಾಗಿ ನಮ್ಮ ಪ್ರಾಚೀನ ಕೃತಿಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಿವೆ. ಕೃತಿಯ ಉದ್ದೇಶವೇ ಮರೆಯಾಗಿ ಹೋಗುವಂತಹ ಪ್ರಕ್ಷೇಪಗಳಾಗಿವೆ. ಬಸವಣ್ಣನವರದಲ್ಲದ ಹಲವು ವಚನಗಳು ಅವರ ಅಂಕಿತನಾಮದಿಂದ ಪ್ರಕಟವಾಗಿದ್ದವು. ನಾನು ಅವನ್ನೆಲ್ಲಾ ಸ್ಥೂಲವಾಗಿ ಅಧ್ಯಯನ ಮಾಡಿ ಇವು ಬಸವಣ್ಣ ಅವರದಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಹಲವು ವಿರೋಧಗಳೂ ಬಂದವು. ಇನ್ನು ‘ಶೂನ್ಯಸಂಪಾದನೆ’ಯಂತಹ ಕೃತಿಗಳು ಬಹಳಷ್ಟು ಕಾಲ ಕೃತಿಕಾರನ ಹೆಸರಿನ ಬದಲಿಗೆ ಯಾರ್‍ಯಾರದೋ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. ಇಂತಹ ‘ಕಳ್ಳತನ’ದಲ್ಲಿ ಹಲವು ಮಠಗಳು, ಸ್ವಾಮೀಜಿಗಳೂ ಪಾಲ್ಗೊಂಡಿದ್ದು ಬೇಸರ ತರುವ ವಿಷಯ.
ಪ್ರಾಚೀನ ಕೃತಿಗಳು ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?
ಪ್ರಾಚೀನ ಕೃತಿಗಳಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗಟ್ಟಿ ಕೃತಿಗಳೇ ಈಗಲೂ ಉಳಿದಿರುವುದು. ಅವು ಇಂದಿಗೂ ಪ್ರಸ್ತುತ. ಪಂಪ, ರನ್ನ, ಬಸವಾದಿ ಶರಣರು… ಅವರೆಲ್ಲಾ ಎಂಥಾ ನೀತಿ ಹೇಳಿದ್ದಾರೆ? ಆದರೆ ಅವುಗಳನ್ನೆಲ್ಲಾ ಈಗಿನವರು ಓದಬೇಕಲ್ಲಾ… ಓದಿ ಅದರಂತೆ ನಡೆಯಬೇಕಲ್ಲಾ… ರನ್ನನ ಒಂದು ಕಂದ ಪದ್ಯ ಹೀಗಿದೆ: ‘ಶ್ರೀಯುತನೊಳುದಾರತೆ, ವಾಕ್‌ಶ್ರೀಯುತನೊಳಮತ್ಸರತ್ವಂ ಆಗದು…’ ಅಂದರೆ ಶ್ರೀಮಂತರಲ್ಲಿ ಉದಾರತೆಯೂ, ಕವಿ-ಸಾಹಿತಿಗಳಲ್ಲಿ ಅಮತ್ಸರವೂ (ಪ್ರೀತಿ) ಇರುವುದಿಲ್ಲ. ಅದರ ಬದಲು ಉದಾರವಂತನೇ ಶ್ರೀಮಂತನಾಗಿ, ಅಮತ್ಸರನು ಕವಿಯಾದರೆ ಎಷ್ಟು ಚೆನ್ನ ಎನ್ನುತ್ತಾನೆ ರನ್ನ. ಇದು ಈಗಲೂ ಎಷ್ಟು ನಿಜ ನೋಡಿ. ನಮ್ಮ ಸಾಹಿತ್ಯವಲಯದಲ್ಲಿ ಎಷ್ಟು ಮತ್ಸರ ಇದೆ ಗೊತ್ತಲ್ಲ! ಇಂದಿನವರು ಹಿರಿಯರ ನೀತಿಯನ್ನು ಪಾಲಿಸುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಧರ್ಮಕ್ಕೆ ಪ್ರತಿಯಾಗಿ ಸಮಾಜ ಸುಧಾರಣೆಯಾಗುವಂತಹ ಕಾಯಕ ಧರ್ಮವನ್ನು ಬೋಧಿಸಿದ. ಅದು ಜಾತಿರಹಿತ ಧರ್ಮ. ಆದರೆ ಈಗ ಬಸವನ ಅನುಯಾಯಿ ಎಂದುಕೊಳ್ಳುವವರು ‘ಬ್ರಾಹ್ಮಣ’ರಾಗಲು ಹೊರಟಿದ್ದಾರೆ; ಜಾತಿ ರಾಜಕೀಯದಲ್ಲೇ ತೊಡಗಿದ್ದಾರೆ.
ಹಾಗಿದ್ದರೆ ಈಗಿನ ಸಾಹಿತ್ಯದ ಜಾಡು ಎತ್ತ ಸಾಗುತ್ತಿದೆ?
ಈಗಿನ ಸಾಹಿತ್ಯವೇ? ಅದೇ ನೋಡಿ, ಯಾರಿಗೆ ಅಕಾಡೆಮಿ ಪ್ರಶಸ್ತಿ ಬಂತು, ಯಾರಿಗೆ ಪಂಪ ಪ್ರಶಸ್ತಿ ಬಂತು, ನಾಡೋಜ ಬಂತು; ತನಗೆ ಬರಲಿಲ್ಲ… ಎಂಬ ಮತ್ಸರದಲ್ಲಿ ತೊಡಗಿದೆ ಅಷ್ಟೇ. ನನಗೆ ಪ್ರಶಸ್ತಿ ಬಂತು ಅಂತ ನಾನು ಉಳಿದವರ ಬಗ್ಗೆ ತಿರಸ್ಕಾರದಿಂದ ಈ ಮಾತು ಹೇಳುತ್ತಿಲ್ಲ. ಆದರೆ ವಾಸ್ತವ ಹೀಗಿದೆ. ಸಾಹಿತ್ಯ ಎನ್ನುವುದು ಸತ್ಕ್ರಿಯೆಗೆ ಪ್ರೇರೇಪಣೆ ನೀಡಬೇಕು. ಅಂದರೆ ಒಂದು ರೀತಿಯಲ್ಲಿ ದೀಪದಿಂದ ದೀಪ ಹಚ್ಚುವ ಕೆಲಸ ಮಾಡಬೇಕು. ಆದರೆ ಇವತ್ತು ಸಾಹಿತಿಗಳು ಬರೀ ಮಾತನಾಡುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತ್ಯ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೃತಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ಬರೆಯುವವರು, ಸಾಹಿತಿಗಳನ್ನು ಜನ ಮಹಾತ್ಮ ಎಂದೇ ತಿಳಿಯುತ್ತಾರೆ. ಆದರೆ ಆತ ಮಹಾತ್ಮನೇನೂ ಆಗಿರುವುದಿಲ್ಲ. ಅವನಲ್ಲೂ ಎಲ್ಲರಂತೆ ಓರೆ-ಕೋರೆಗಳು ಇರುತ್ತವೆ. ಯುರೋಪ್‌ನಲ್ಲಿ ಇಂಗ್ಲೆಂಡ್-ಫ್ರೆಂಚ್ ಯುದ್ಧದ ಸಂದರ್ಭದಲ್ಲಿ ವರ್ಡ್ಸ್‌ವರ್ತ್ ಕವಿ ತನ್ನ ದೇಶದ ಬಗ್ಗೆ ಬಹಳ ಅಭಿಮಾನದಿಂದ ಬರೆದ. ಆದರೆ ಅದೇ ವೇಳೆ ಅವನ ದೇಶದ ಜನ ಭಾರತದಲ್ಲಿ ಶೋಷಣೆ ಮಾಡುತ್ತಿದ್ದಾಗ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಕವಿಗಳೆಲ್ಲಾ ಮಹಾತ್ಮರೇನಲ್ಲ. ಇಂದು ಎಲ್ಲಾ ಕ್ಷೇತ್ರ ಹೊಲಸಾದ ಹಾಗೆ ಸಾಹಿತ್ಯವಲಯ ಕೂಡಾ ಹೊಲಸಾಗಿಬಿಟ್ಟಿದೆ. ನನಗಂತೂ ಯಾವುದೇ ಆಶಾವಾದ ಕಾಣುತ್ತಿಲ್ಲ. ಇವತ್ತು ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದು.
ಸಾಹಿತ್ಯ ಸಮ್ಮೇಳನಗಳು ಕೂಡಾ ವಿವಾದಗಳಿಂದ ಹೊರತಾಗುತ್ತಿಲ್ಲ…
ಅದೇ ನಾನು ಹೇಳಿದೆನಲ್ಲಾ. ಇವತ್ತು ದುಡ್ಡು, ದುರಹಂಕಾರ, ದುರಾಡಳಿತ ಇವುಗಳಿಂದ ಎಲ್ಲಾ ಕ್ಷೇತ್ರಗಳೂ ಹೊಲಸಾಗುತ್ತಿವೆ. ಸಾಹಿತ್ಯ ವಲಯ ಕೂಡಾ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನನಗೆ ಪರಮಾಶ್ಚರ್ಯ ಆಗುವಂಥ, ಆತಂಕಕಾರಿ ವಿಷಯ ಎಂದರೆ, ನಾವು ಪರಸ್ಪರ ಪ್ರೀತಿಸುತ್ತಲೇ ಇಲ್ಲ. ಬರೀ ದ್ವೇಷ ತುಂಬಿದೆ. ಪ್ರಾಯಶಃ ಯಾವ ದೇಶದಲ್ಲಿಯೂ ಇಷ್ಟೊಂದು ದ್ವೇಷ, ಕಚ್ಚಾಟ ಇಲ್ಲ ಎನಿಸುತ್ತೆ. ದ್ವೇಷ ಮಾಡುವುದೇ ನಮ್ಮ ಸಂಸ್ಕೃತಿಯಾ ಎಂಬ ಶಂಕೆ ಮೂಡಿಬಿಟ್ಟಿದೆ ನನಗೆ.ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೂಡಾ ಕೇವಲ ನೆಪಮಾತ್ರಕ್ಕೆ ಎನಿಸಿಬಿಟ್ಟಿವೆ. ಅವುಗಳಿಗೆ ಏನಾದರೂ ಅರ್ಥ ಇದೆ ಎನ್ನುತ್ತೀರಾ?ನಮ್ಮ ಭಾಷೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆದರೆ ಅದು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಕೈಗೊಳ್ಳಬೇಕಿದೆ. ಇದು ಒಂದು ರೀತಿ ಬಾಯಿ ಬಡಿದುಕೊಳ್ಳುವ ಕೆಲಸ, ಅಷ್ಟೇ.
ಶಾಸ್ತ್ರೀಯ ಸ್ಥಾನ-ಮಾನ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಈಗ ಆಗಬೇಕಾದ ಕೆಲಸಗಳೇನು?
ಪ್ರಾಚೀನ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಂಶೋಧನಾ ಕ್ಷೇತ್ರಕ್ಕೆ ನೆರವು ನೀಡಬೇಕು. ಅದಿರಲಿ. ಈ ಶಾಸ್ತ್ರೀಯ ಸ್ಥಾನ-ಮಾನ ಗಳಿಸಿಕೊಳ್ಳೋದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಯಿತು ನೋಡಿ. ಅದೂ 90ರ ಅಂಚಿನಲ್ಲಿರುವ ದೇಜಗೌ ಅವರಂತಹ ಹಿರಿಯರು ಉಪವಾಸ ಮಾಡಬೇಕಾಯಿತು. ಆದರೆ ಕೇಂದ್ರ ಸರ್ಕಾರ ಕೊಡೋ ದುಡ್ಡಿನಿಂದಲೇ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆ? ಏಕೆ, ರಾಜ್ಯ ಸರ್ಕಾರದ ಬಳಿ ದುಡ್ಡು ಇರಲಿಲ್ಲವೇ? ನಮ್ಮ ಭಾಷೆಯನ್ನು ನಾವೇ ಪ್ರೀತಿಸುತ್ತಿಲ್ಲ; ಮನುಷ್ಯ ಸ್ವಭಾವ ಎಷ್ಟು ವಿಚಿತ್ರ ನೋಡಿ. ನಮ್ಮ ಭಾಷೆಯನ್ನು ಉದ್ಧಾರ ಮಾಡೋದಕ್ಕೆ ನಮಗೇ ಮನಸಿಲ್ಲ!ಈಗಿನ ಭಯೋತ್ಪಾದನೆ ಜಾಗತಿಕ ಸಮುದಾಯದ ಮೇಲೆ ಒಡ್ಡಿರುವ ಸವಾಲಿಗೆ ಸಾಹಿತ್ಯ ಹೇಗೆ ಪ್ರತಿಕ್ರಿಯಿಸಬೇಕು?ಎಲ್ಲಿ ಮಹಾಕವಿ ವಿಫಲನಾಗುತ್ತಾನೋ ಅಲ್ಲಿ ಭಯೋತ್ಪಾದನೆ ದೈತ್ಯ ಸ್ವರೂಪ ತಾಳುತ್ತದೆ. ಇವತ್ತು ಮಹಾಕವಿ ವಿಫಲನಾಗಿದ್ದಾನೆ. ಎಲ್ಲಕ್ಕೂ ದ್ವೇಷವೇ ಮೂಲ ಆಗಿದೆ. ತಾನು ಒಂದು ಧರ್ಮ ಅನುಸರಿಸುತ್ತಿದ್ದೇನೆಂದರೆ ಮತ್ತೊಂದು ಧರ್ಮವನ್ನು ವಿರೋಧಿಸಬೇಕು, ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಪ್ರೀತಿ, ಸೌಹಾರ್ದವನ್ನು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕೇಳುವವರಿಲ್ಲ ಅಷ್ಟೇ. ಧರ್ಮವನ್ನು ಹೊಡೆದಾಟಕ್ಕೆ ಬಳಸಿಕೊಳ್ಳಲಾಗ್ತಿದೆ. ಆಡಳಿತ ಕೂಡಾ ಇದಕ್ಕೆ ಕುಮ್ಮಕ್ಕು ಕೊಡ್ತಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವುದು ಇದೇ. ಹಿಂದೆ ಜೈನ, ವೈಷ್ಣವ ಮತ್ತು ಶೈವರ ನಡುವೆ ಕಿತ್ತಾಟ, ಜಗಳಗಳು ನಡೆದಿವೆ. ಅಂದರೆ ಪರಸ್ಪರ ದ್ವೇಷವೇ ಮನುಷ್ಯನ ಸಂಸ್ಕೃತಿ ಎನಿಸಿಬಿಟ್ಟಿದೆ. ಇದಕ್ಕೆ ಸಣ್ಣ ನೆಪಗಳು ಸಿಕ್ಕರೂ ಸಾಕು. ಬೇಸರದ ವಿಷಯ ಅಂದರೆ ಎಳೆಯ ಮಕ್ಕಳ ಮನಸ್ಸನ್ನು ತಿದ್ದುವಂಥ ಶಿಕ್ಷಕರು, ಅಧ್ಯಾಪಕರು ಬಹುಮಂದಿ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡಾ ಹಾಳಾಗಿದೆ. ಮನುಷ್ಯನ ಮನಸ್ಸು ಸಾತ್ವಿಕತೆ ಕಡೆ ಸಾಗಲು ಬೇಕಾದ ತಯಾರಿ ಕೂಡಾ ಇಲ್ಲದಂತಾಗಿದೆ. ವಿದ್ಯಾಭ್ಯಾಸವನ್ನೇ ಖಾಸಗೀಕರಣ ಮಾಡಿಬಿಟ್ಟಿದ್ದಾರೆ. ಅಂದರೆ ವಿದ್ಯೆಯನ್ನು ಶ್ರಮಪಟ್ಟು ಗಳಿಸುವುದಲ್ಲ; ಬದಲಿಗೆ ದುಡ್ಡುಕೊಟ್ಟು ಖರೀದಿಸುವಂಥ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ಪೀಳಿಗೆ ಬಗ್ಗೆ ಯಾವುದೇ ಆಶಾವಾದ ಇಟ್ಟುಕೊಳ್ಳದಂಥ ಪರಿಸ್ಥಿತಿ ಇದೆ. ಇದನ್ನು ಹೇಗೆ ಉತ್ತಮಪಡಿಸುವುದು, ನನಗಂತೂ ಗೊತ್ತಾಗುತ್ತಿಲ್ಲ.
ನಿಮ್ಮ ಮುಂದಿನ ಬರವಣಿಗೆ?
ಪಂಪನ ‘ವಿಕ್ರಮಾರ್ಜುನ ವಿಜಯಂ’ ಕಾವ್ಯವನ್ನು ಮೂಲ ಮಹಾಭಾರತದೊಡನೆ ತುಲನೆ ಮಾಡಿ ಬರೆದ ಕೃತಿ ಅಚ್ಚಿನಲ್ಲಿದೆ. ಬಸವಣ್ಣನವರ ವಚನಗಳು ಈ ಕಾಲಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಬಗೆಗಿನ ವಿಮರ್ಶಾ ಕೃತಿಯೂ ಸದ್ಯವೇ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಈ ಎರಡು ಕೃತಿಗಳು ಬರಲಿವೆ. ಈಗಿನ ದೇಹಪ್ರಕೃತಿಯಲ್ಲಿ ಮುಂಚಿನ ಹಾಗೆ ಬರೆಯಲು ಸಾಧ್ಯವಾಗುವುದಿಲ್ಲ.ಯುವ ಜನಾಂಗಕ್ಕೆ, ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ಏನು?ನಾನು ಆಗಲೇ ಹೇಳಿದೆನಲ್ಲಾ, ಕಿವಿಮಾತು ಹೇಳಿದರೆ ಅದನ್ನು ಕೇಳುವವರು ಯಾರು? ನಮ್ಮ ಪ್ರಾಚೀನರೇ ಎಲ್ಲಾ ಹೇಳಿದ್ದಾರೆ. ಆದರೆ ಅನುಸರಿಸುವವರಿಲ್ಲ ಅಷ್ಟೇ. ನಮ್ಮ ದೇಶ, ಸಂಸ್ಕೃತಿಯನ್ನು ನಾನು ತುಂಬಾ ಬೈಯುತ್ತಿದ್ದೀನಿ ಅಂತ ನಿಮಗೆ ಅನಿಸುತ್ತಿದೆಯೇ? ಹಾಗೇನಾದರೂ ನಿಮಗೆ ಅನಿಸಿದ್ದರೆ ನಾನು ವಿವೇಕಸ್ಥ ಅಂತ ಅರ್ಥ!
(ಕೃಪೆ: ಸಂಡೇ ಇಂಡಿಯನ್)

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.