Showing posts with label ಸಾಹಿತ್ಯ ಸಂಭ್ರಮ. Show all posts
Showing posts with label ಸಾಹಿತ್ಯ ಸಂಭ್ರಮ. Show all posts

Friday, March 15, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ ಆಹ್ವಾನ ಪತ್ರಿಕೆ







ಕರ್ನಾಟಕ ಜನಸಾಹಿತ್ಯ ಸಮಾವೇಶ
ಮಾರ್ಚ್ ೨೩ ಮತ್ತು ೨೪, ೨೦೧೩.
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಮಾ.೨೩. ಬೆ. ೧೦.೩೦-೧೧.೩೦:

೧. ಆಶಯ ನುಡಿ

ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ
ಆಶಯ ಮಾತು :
ಲಕ್ಷ್ಮಣ  ಗಾಯಕವಾಡ, ಮರಾಠಿ ದಲಿತ ಲೇಖಕರು
ಬಾನು ಮುಷ್ತಾಕ್,
ಸಂಯೋಜನೆ: ಡಾ. ಸಂಜೀವ ಕುಲಕರ್ಣಿ


೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು ೧೧.೩೦-೨.೦೦

ದು. ಸರಸ್ವತಿ
ಡಾ. ನಾಗೇಶ ಹೆಗಡೆ
ಡಾ. ಬಂಜಗೆರೆ ಜಯಪ್ರಕಾಶ
ಡಾ. ಎಸ್.ಬಿ.ಜೋಗುರ
ಸ್ಪಂದನ : ಡಾ. ಮುಜಾಫರ್ ಅಸ್ಸಾದಿ
ಸಂಯೋಜನೆ : ಡಾ. ಜಗದೀಶ ಕೊಪ್ಪ


೩. ಸಮಾಜ ಮತ್ತು  ನನ್ನ ಬರಹ   ಮ. ೩.೦೦ - ೫.೦೦
ಸರ್ಜಾಶಂಕರ್ ಹರಳಿಮಠ
ಬಿ.ಪೀರ್‌ಬಾಷಾ
ವೀರಣ್ಣ ಮಡಿವಾಳರ
ಡಾ. ಅನಸೂಯಾ ಕಾಂಬಳೆ
ವಸಂತ ಬನ್ನಾಡಿ
ಜ್ಯೋತಿ ಚೇಳಾಯರು
ಡಾ. ಮಲ್ಲಿಕಾರ್ಜುನ ಮೇಟಿ
ಟಿ ಕೆ ದಯಾನಂದ
ಬಾಲ ಗುರುಮೂರ್ತಿ
ರಮೇಶ ಅರೋಲಿ


ಸ್ಪಂದನ : ಡಾ. ಕುಂ. ವೀರಭದ್ರಪ್ಪ
ಸಂಯೋಜನೆ : ಡಾ. ಕಾ. ವೆಂ. ಶ್ರೀನಿವಾಸಮೂರ್ತಿ


೪. ಕವಿಗೋಷ್ಠಿ  ಸಂಜೆ ೫.೩೦ - ೮.೦೦

ಸುಬ್ಬು ಹೊಲೆಯಾರ್
ವಿ. ಎಂ. ಮಂಜುನಾಥ
ವಿ. ಆರ್. ಕಾರ್ಪೆಂಟರ್
ಡಾ. ಅರುಣ ಜೋಳದ ಕೂಡ್ಲಿಗಿ
ಪ್ರವರ ಕೊಟ್ಟೂರ
ಶರೀಫ್ ಹಸಮಕಲ್
ಸ್ಮಿತಾ ಮಾಕಳ್ಳಿ
ಸೈಫ್ ಜಾನ್ಸೆ ಕೊಟ್ಟೂರು
ಸೀಮಾ ಸಮತಳ
ಕಾವ್ಯ. ಪಿ. ಕೆ
ಗಂಗಪ್ಪ ತಳವಾರ
ಬಸವರಾಜ ಹಳ್ಳಿ
ಹೃದಯಶಿವ
ಸತ್ಯಮಂಗ ಮಹಾದೇವ
ವಿ. ಹರಿನಾಥ ಬಾಬು
ಗಣೇಶ್ ಹೊಸ್ಮನೆ
ಭವ್ಯ. ಎಚ್. ಸಿ
ಕಾವ್ಯಶ್ರೀ
ಟಿ. ಎಸ್. ಗೊರವರ
ಚೈತ್ರ ಬೇವಿನಗಿಡದ
ಕುಂಸಿ ಉಮೇಶ
ಅಬ್ಬಾಸ ಮೇಲಿನಮನಿ
ಮಂಜುನಾಥ ಡೊಳ್ಳಿನ
ಬಿ. ಶ್ರೀನಿವಾಸ
ಶ್ರೀದೇವಿ ಕಳಸದ
ಬಸವರಾಜ ಹೂಗಾರ
ಕೆ. ಅಕ್ಷತಾ
ಮಂಜುಳಾ ಮಾದರ
ಶಿವಕುಮಾರ ಕಂಪ್ಲಿ
ದೊಡ್ಡನಿಂಗಪ್ಪ ಆಲೂರ್
ಡಿ. ಕೆ. ರಮೇಶ್
ಕುಮಾರ್. ಎಸ್
ಕಲ್ಲೇಶ್ ಕುಂಬಾರ
ಚನ್ನಪ್ಪ ಅಂಗಡಿ
ಅಪ್ಪಗೆರೆ ಸೋಮಶೇಖರ್
ನಾಗರಾಜ ಹರಪನಹಳ್ಳಿ
ರೇಣುಕಾ ಹೆಳವರ
ಡಾ. ಟಿ ಎಂ ಉಷಾರಾಣಿ

ಸ್ಪಂದನ : ಡಾ. ಎಸ್. ಜಿ. ಸಿದ್ಧರಾಮಯ್ಯ

ಸಂಯೋಜನೆ: ಅಶೋಕ್ ಶೆಟ್ಟರ

ರಾತ್ರಿ ೮.೦೦ ಸಾಂಸ್ಕೃತಿಕ ಕಾರ್ಯಕ್ರಮ
ಚಾಲನೆ - ಜನಾರ್ದನ್ (ಜನ್ನಿ)
ಕೇಸರಿ ಹರವೂ ನಿರ್ದೇಶನದ
’ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನ

ಮಾರ್ಚ್ ೨೪, ಬೆಳಿಗ್ಗೆ ೯.೩೦ - ೧೦.೩೦

೫. ಹೊಸತಲೆಮಾರಿನ ಸಾಹಿತ್ಯ
ಕಾವ್ಯ

ತಾರಿಣಿ ಶುಭದಾಯಿನಿ
ಡಾ. ಎಚ್.ಎಸ್.ಅನುಪಮಾ

ಸ್ಪಂದನ - ಕೆ. ಪಿ. ಸುರೇಶ್ಸಂಯೋಜನೆ : ಜಗದೀಶ ಮಂಗಳೂರಮಠ

ಕತೆ:   ೧೦.೩೦ - ೧೧.೩೦.

ಮಂಜುನಾಥ್ ಲತಾ
ಮಹಾಂತೇಶ್ ನವಲಕಲ್

ಸ್ಪಂದನ:  ಎಸ್. ಗಂಗಾಧರಯ್ಯ
ಸಂಯೋಜನೆ : ಸುನಂದಾ ಕಡಮೆ

ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ: ೧೧.೩೦ - ೧೨.೩೦
ದೇವು ಪತ್ತಾರ
ಡಾ. ರಂಗನಾಥ ಕಂಟನಕುಂಟೆ

ಸ್ಪಂದನ: ಕೆ.ಫಣಿರಾಜ್ಸಂಯೋಜನೆ : ಡಾ. ಸಿದ್ರಾಮ ಕಾರಣಿಕ

೬ ಹೊಸ ತಲೆಮಾರು : ನಮ್ಮ ಗ್ರಹಿಕೆ ೧೨.೩೦-೨.೩೦
ಜಿ ಪಿ ಬಸವರಾಜು
ಡಾ. ನಟರಾಜ್ ಬೂದಾಳು
ಡಾ ಬಿ. ಎನ್. ಸುಮಿತ್ರಾಬಾಯಿ
ಡಾ. ಸಬಿಹಾ ಭೂಮಿಗೌಡ
ಕೆ. ನೀಲಾ

ಸಂಯೋಜನೆ: ಶಂಕರ ಹಲಗತ್ತಿ

೭ ಹೊಸ ಸಾಹಿತ್ಯ ಚಳುವಳಿಯ ಸಾಧ್ಯತೆ: ಮ. ೩.೩೦ - ೫.೩೦
ಡಾ. ಸಿದ್ಧನಗೌಡ ಪಾಟೀಲ್
ಡಾ. ವಿನಯಾ
ಡಾ. ಬಿ. ಎಂ ಪುಟ್ಟಯ್ಯ
ಡಾ. ರಹಮತ್ ತರೀಕೆರೆ

ಸಂಯೋಜನೆ: ಡಾ. ಕೆ ಆರ್ ದುರ್ಗಾದಾಸ

ಚಿತ್ರಕಲಾ ಪ್ರದರ್ಶನ

ನಮ್ಮೊಂದಿಗೆ:
ಹಸನ್‌ನಯೀಂ ಸುರಕೋಡ,   ಡಾ. ಎಚ್.ಟಿ. ಪೋತೆ,  ಡಾ.ಎಚ್ ನಾಗವೇಣಿ,  ರಾಮಚಂದ್ರ ಕುಲಕರ್ಣಿ,  ಹನಮಂತ ಹಾಲಗೇರಿ,  ಶಶಿಧರ ಹೆಮ್ಮಾಡಿ,  ಚಂದ್ರಕಾಂತ ಪೋಕಳೆ,  ಡಾ. ಶ್ರೀಶೈಲ್ ಹುದ್ದಾರ,  ಡಾ. ಸುಮಾ ಎಂಬಾರ್, ಸಂವರ್ಥ ಸಾಹಿಲ್,  ಡಾ. ಎಂ.ವಿ. ವಸು, ಕೆ.ಪಿ. ನಟರಾಜ, ಕೆ. ವೆಂಕಟೇಶ್, ನಾಮದೇವ ಕಾಗದಗಾರ, ಲಕ್ಷ್ಮೀಕಾಂತ ಮಿರಜಕರ, ದಾದಾಪೀರ್ ನವಲೇಹಾಳ್, ರಮೇಶ ಗಬ್ಬೂರ, ಡಾ. ಜಾಜಿ ದೇವೇಂದ್ರಪ್ಪ, ಬಿ.ಎಸ್.ಸೊಪ್ಪಿನ್, ಬಿ.ಆಯ್. ಇಳಿಗೇರ, ಮಹಾಂತೇಶ ಮಸ್ಕಿ, ಶ್ರೀದೇವಿ ಕೆರೆಮನೆ , ವೀರೇಶ ಸೌದ್ರಿ, ಶಿವಕುಮಾರ ಕಣಸೋಗಿ, ಎನ್, ಚಂದ್ರಶೇಖರ್, ಜಗನ್ನಾಥ ಮಾಸ್ತಿ, ವೈ.ಗ.ಜಗದೀಶ್, ಎಂ. ಎಫ್.ನದಾಪ, ಡಾ. ಸುನಂದಮ್ಮ, ಡಾ. ಸಬಿತಾ ಬನ್ನಾಡಿ, ಮಹಾಲಿಂಗಪ್ಪ ಅಲಬಾಳ್, ಸಿ.ಜಿ. ಹಿರೇಮಠ, ಸುರೇಶ ತಾಂಡೇಲ, ಮಾಧವಿ ಭಂಡಾರಿ, ಡಾ. ನಟರಾಜ ಹುಳಿಯಾರ್, ಸರಜೂ ಕಾಟಕರ, ಸತೀಶ ಕುಲಕರ್ಣಿ, ಡಿ.ಎಸ್.ಚೌಗಲೆ, ಭೀಮನಗೌಡ ಇಟಗಿ, ವಿಠ್ಠಪ್ಪ ಗೊರಂಟ್ಲಿ, ಡಾ. ಎ.ಎಸ್. ಪ್ರಭಾಕರ್, ಡಾ. ಎಚ್.ಡಿ. ಪ್ರಶಾಂತ್, ಡಾ. ರಾಜಪ್ಪ ದಳವಾಯಿ, ಶ್ರೀಪಾದ ಭಟ್, ಡಾ. ಗವಿಸಿದ್ದ ಪಾಟೀಲ, ಗವಿಸಿದ್ದ ಹೊಸಮನಿ, ಜಿ.ಎನ್.ಮೋಹನ್, ಬಸವರಾಜ ಕೆಂಚರಡ್ಡಿ, ಎಸ್.ಜಿ.ಚಿಕ್ಕನರಗುಂದ, ಜೆ. ಪಿ. ಶೆಟ್ಟಿ, ಸುಭಾಸ ರಾಜಮಾನೆ, ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಲಿಂಗಾರಡ್ಡಿ ಶೇರಿ, ಪ್ರಭು ಖಾನಾಪುರೆ, ಕಾಶೀನಾಥ ಅಂಬಲಗೆ, ಡಾ.ಎಚ್.ಬಿ.ಕೋಲ್ಕಾರ, ಲಕ್ಷ್ಮಣ ಕಾಪಸೆ, ಡಾ. ಮೈನುದ್ದೀನ ರೇವಡಿಗಾರ, ಡಾ. ಪ್ರಕಾಶ ಖಾಡೆ, ಶಿವಸುಂದರ, ಸತೀಶ್ ಶಿಲೆ, ವೀರಣ್ಣ ಮಂಟಾಳಕರ್, ಡಾ. ದಸ್ತಗೀರ್‌ಸಾಬ್ ದಿನ್ನಿ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಬಸವರಾಜ ಶೀಲವಂತರ್, ರಮೇಶ ನಾಯಕ, ಎಂ. ಚಂದ್ರಪ್ಪ, ಡಾ. ಆಂಜನಪ್ಪ, ವಿರುಪಾಕ್ಷಪ್ಪ ಪಡಿಗೋದಿ, ಸದಾನಂದ ಮೋದಿ, ಪ್ರಮೋದ ತುರ್ವಿಹಾಳ, ಡಾ. ವೈ.ಎಂ.ಭಜಂತ್ರಿ, ಡಾ. ಎಲ್.ಆರ್ ಅಂಗಡಿ, ಡಾ. ವೈ ಬಿ ಹಿಮ್ಮಡಿ, ಪಾರ್ವತೇಶ್, ಮುಂತಾದ ಹಿರಿಯರು ಮತ್ತು ಕಿರಿಯರು
ಬನ್ನಿ, ಗೆಳೆಯರ ಜತೆಗೆ..

Saturday, January 26, 2013

ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ

'ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು' ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

'ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ' ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ 'ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ' ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. 'ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು' ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ 'ಸಂಭ್ರಮ' ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ 'ಜನತೆಯತ್ತ ಸಾಹಿತ್ಯ' ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು 'ಸಂಭ್ರಮ ಸಂಘಟಕರ' ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ 'ಸಂಭ್ರಮ' ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! 'ಸಂಭ್ರಮ' ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ 'ಸಂಭ್ರಮ' ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ 'ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ' ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ 'ಸಂಭ್ರಮ' ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.
 
ಕೃಪೆ: ವಿಜಯ ಕರ್ನಾಟಕ

Monday, January 21, 2013

ಸಾಹಿತ್ಯ ಸಂಭ್ರಮಕ್ಕೆ ಆತ್ಮೀಯ ಸ್ವಾಗತ !


ಡಾ. ಸಿದ್ರಾಮ ಕಾರಣಿಕ               

            ಜನೇವರಿ ೨೫, ೨೬, ೨೭ ರಂದು ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ' ಜರುಗಲಿದೆ. ಸಂಘಟಕರು ವಿರೋಧಿ ಬಣದವರನ್ನು ಸಮಝಾಯಿಸಿ (ಬಗ್ಗು ಬಡಿದು) ಒಲಿಸಿಕೊಂಡಿದ್ದಾರೆ. ಸಾಹಿತ್ಯ ಎನ್ನುವುದನ್ನು ವ್ಯಾಪಾರವನ್ನಾಗಿಯೇ ನೋಡುವ ಕೆಲವು ಜನರು ರಾಜಿಯಾಗಿರುವುದರಲ್ಲಿ ಲಾಭದ ಉದ್ದೇಶವನ್ನು ಅಲ್ಲಗಳೆಯಲಾಗದು. ಹೋರಾಟ, ಕ್ರಾಂತಿ, ಪ್ರತಿಭಟನೆ ಮೊದಲಾದವುಗಳೆಲ್ಲ ಅರ್ಥ ಕಳೆದುಕೊಂಡಿರುವುದು ಇಂಥ ಲಾಭಕೋರ ಪ್ರಜ್ಞಾವಂತರಿಂದಲೇ ಎಂದರೆ ತಪ್ಪಾಗಲಾರದು ! ಧಾರವಾಡ ಇನ್ನಾದರೂ ಬದಲಾದೀತೆ ಎಂಬ ನನ್ನಂಥವರ ಪ್ರಶ್ನೆಗೆ ಇಲ್ಲಿ ಉತ್ತರ ಇರುವುದಿಲ್ಲ ; ಉತ್ತರಿಸುವ ವ್ಯವಧಾನವಾಗಲಿ ; ನಿರ್ಭೀತಿಯಾಗಲಿ ಸೋ ಕಾಲ್ಡ್ ಪ್ರತಿಭಟನಾಕಾರರಲ್ಲಿ ಇಲ್ಲವೇನೋ ಎನಿಸುತ್ತಿದೆ !
 
           ಈಗ ನನ್ನ ಅಭಿಪ್ರಾಯವೆಂದರೆ ಕೇವಲ ಧಾರವಾಡ ಮಾತ್ರವಲ್ಲ ಹೊರ ಊರಿನ ಹಲವಾರು ಗೆಳೆಯರು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವನ್ನು ಕೊಟ್ಟು ಬರಲು ತಯಾರಾಗಿದ್ದಾರೆ. ನಾನು ಹಾದಿ ಕಾಯ್ದೆ ; ಪ್ರತಿಭಟಿಸುವವರು 'ಪರ್ಯಾಯ' ಮಾಡಬಹುದು ಎಂದು ! ನೋ ಚಾನ್ಸ್ ! ಹೀಗಾಗಿ ನಾನೇ ಹೇಳುತ್ತಿದ್ದೇನೆ. ಇಷ್ಟವಿದ್ದವರು ಯಾವುದೇ ಸಂಹಿತೆ, ನಿಬಂಧನೆ, ಸಂವೇದನೆ, ಪ್ರಜ್ಞೆ, ಮನಸಾಕ್ಷಿ ಎನ್ನುವುದನ್ನು ಮರೆತು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

         ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಆಗಮಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತಿದ್ದೇನೆ ! 

Saturday, January 19, 2013

ಧಾರವಾಡ ಸಾಹಿತ್ಯ ಸಂಭ್ರಮ : ನಿಬಂಧನೆಗಳು ರದ್ದು !

ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ನಿಬಂಧನೆಗಳನ್ನು ನಾಡಿನ ಹಲವಾರು ಬರಹಗಾರರು ಖಂಡಿಸುವ ಮೂಲಕ, ವಿರೋಧಿಸುವ ಮೂಲಕ ಪರ್ಯಾಯ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ ಮೇಲೆ ಸಾಹಿತ್ಯ ಸಂಭ್ರಮದ ಸಂಘಟಕರು ಎಚ್ಚೆತ್ತುಕೊಂಡು ತಾವು ವಿಧಿಸಿದ್ದ ನಿಬಂಧನೆಗಳನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಇಲ್ಲಿದೆ ನೋಡಿ ;

ಇದೇ 25, 26 ಮತ್ತು 27ರಂದು ನಗರದಲ್ಲಿ ನಡೆಯಲಿರುವ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಪಾಲ್ಗೊಳ್ಳುವವರಿಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ರದ್ದುಪಡಿಸಲಾಗಿದೆ ಎಂದು `ಧಾರವಾಡ ಸಾಹಿತ್ಯ ಸಂಭ್ರಮ'ದ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟಪಡಿಸಿದ್ದಾರೆ.
`ಈ ನಿಬಂಧನೆಗಳ ಬಗ್ಗೆ ಬಹಳಷ್ಟು ತಪ್ಪು ತಿಳಿವಳಿಕೆ ಉಂಟಾಗಿದ್ದರಿಂದ ಮತ್ತು ಇವುಗಳನ್ನೇ ಮುಖ್ಯವಾಗಿರಿಸಿಕೊಂಡು ವಿರೋಧ ವ್ಯಕ್ತವಾಗುತ್ತಿರುವುದರಿಂದ ಇವುಗಳನ್ನು ರದ್ದುಪಡಿಸಲಾಗಿದೆ. ಈ ಸಂಭ್ರಮವನ್ನು ಮೊದಲ ಪ್ರಯೋಗವಾಗಿ ಹಮ್ಮಿಕೊಳ್ಳಲಾಗಿದ್ದು, ಚರ್ಚಿಸಬೇಕಾಗಿರುವ ಸಾಕಷ್ಟು ವಿಷಯಗಳನ್ನು ಮುಂಬರುವ ಸಂಭ್ರಮಗಳಲ್ಲಿ ಎತ್ತಿಕೊಳ್ಳಲು ಅವಕಾಶ ಇದ್ದೇ ಇದೆ. 60 ಸಂಪನ್ಮೂಲ ವ್ಯಕ್ತಿಗಳು ಮತ್ತು ಸುಮಾರು 60 ವಿಶೇಷ ಆಮಂತ್ರಿತರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದಾರೆ'.
`ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ. 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರ ಕೊಡುವ ಅನುದಾನ ಸಾಲದೇ ಇದ್ದುದರಿಂದ ಸಂಭ್ರಮದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪ್ರತಿನಿಧಿ ಶುಲ್ಕ ಆಕರಿಸಲಾಗುತ್ತಿದೆ. ಕೆಲವರು ತಪ್ಪು ತಿಳಿವಳಿಕೆಯಿಂದ ಆರೋಪಿಸುತ್ತಿರುವಂತೆ ಇದರಿಂದ ಯಾವುದೇ ಹಣ ಮಾಡಿಕೊಳ್ಳುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಸಂಭ್ರಮದ ವೆಚ್ಚ ಸುಮಾರುರೂ 16ರಿಂದರೂ 18 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ಕೆಲವರು ಆರೋಪಿಸುತ್ತಿರುವಂತೆರೂ 40ರಿಂದರೂ 50 ಲಕ್ಷ ಸಂಗ್ರಹಿಸಲಾಗಿಲ್ಲ. ಸಂಭ್ರಮ ಮುಗಿದ ಕೆಲವೇ ದಿನಗಳೊಳಗಾಗಿ ಇದರ ಖರ್ಚು ವೆಚ್ಚವನ್ನು ಪಾರದರ್ಶಕವಾಗಿ ಪ್ರಕಟಿಸಲಾಗುವುದು' ಎಂದು ಡಾ.ಗಿರಡ್ಡಿ ತಿಳಿಸಿದ್ದಾರೆ.

Friday, January 18, 2013

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ಜೋಗಿ ಅವರ ಪತ್ರ

ಗೆ,
ಅಧ್ಯಕ್ಷರು,
ಧಾರವಾಡ ಸಾಹಿತ್ಯ ಸಂಭ್ರಮ

ಮಾನ್ಯರೇ,
ವಿಷಯ: ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸದೇ ಇರುವ ಕುರಿತು.

ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 3 ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಆಭಾರಿ.
ಆದರೆ, ನಾನು ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಕಾರಣಗಳು ಇಂತಿವೆ:
1. ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಮುಕ್ತ ಪ್ರವೇಶ ಇರುವುದಿಲ್ಲ ಎಂದು ತಿಳಿಯಿತು. 1,500 ರುಪಾಯಿ ತೆತ್ತು ಅದರಲ್ಲಿ ಪ್ರತಿನಿಧಿಗಳು ಭಾಗವಹಿಸಬೇಕು ಅನ್ನುವುದು ನನಗೆ ಒಪ್ಪಿಗೆ ಇಲ್ಲ. 1500 ರುಪಾಯಿ ಕೊಟ್ಟು ಭಾಗವಹಿಸುವ ಪ್ರತಿನಿಧಿಗೆ ನಾನೇನು ಕೊಡಬಲ್ಲೆ ಎಂದು ಯಾರಾದರೂ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ.
2. ತಾವು ಪ್ರತಿನಿಧಿಗಳಿಗೆ ವಿಧಿಸಿರುವ ಕಟ್ಟುಪಾಡುಗಳ ಬಗ್ಗೆ ನನಗೆ ವಿರೋಧವಿದೆ. ಅನುಮತಿ ಇಲ್ಲದೇ ಪ್ರಶ್ನೆ ಕೇಳಕೂಡದು, ಕರಪತ್ರ ಹಂಚಕೂಡದು ಇವೆಲ್ಲ ಪಾಳೇಗಾರಿಕೆಯಂತೆ ಭಾಸವಾಗುತ್ತಿದೆ. ಸಭ್ಯವಾಗಿ ವರ್ತಿಸಬೇಕು ಎಂದು ಓದುಗರಿಗೆ ಹೇಳಬಹುದೇ? ಶಸ್ತ್ರಾಸ್ತ್ರ ತರಬೇಡಿ, ಸಭಾಂಗಣದೊಳಗೆ ಕುಡಿಯಬೇಡಿ, ಮಾದಕ ದ್ರವ್ಯ ಸೇವಿಸಬೇಡಿ ಎಂದು ಸಜ್ಜನ ಸಾಹಿತ್ಯ ರಸಿಕರಿಗೆ ಹೇಳುವ ಮುಖಾಂತರ ಅವರ ವ್ಯಕ್ತಿತ್ವವನ್ನು ಅವಮಾನಿಸಬಹುದೇ? ಈ ಎಲ್ಲ ಗೊಂದಲಗಳೂ ನನ್ನಲ್ಲಿವೆ. ಸಾಹಿತ್ಯದ ವಿದ್ಯಾರ್ಥಿಗಳು ಕೂಡ ರುಪಾಯಿ 1000 ಕೊಟ್ಟು ಭಾಗವಹಿಸಬೇಕು ಅನ್ನುವುದು, ಕೇವಲ ಐವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅನ್ನುವುದು ಸರಿಯಾ? ಇಂಥ ಕಟ್ಟುಪಾಡುಗಳಿದ್ದಿದ್ದರೆ ಬಡತನದಲ್ಲಿ ಓದಿ ಬೆಳೆದ ನಾವು ಯಾವುದಾದರೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತೇ?
3. ನಿಮ್ಮ ನಿಯಮಾವಳಿಯೊಂದು ಹೀಗಿದೆ: ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ ಅಥವಾ ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು, ಕರಪತ್ರಗಳ ಮೂಲಕ ಹಂಚುವುದು, ಅಂಚೆಯ ಮೂಲಕ ಕಳಿಸುವುದು, ಕಂಪ್ಯೂಟರ್‌ದಲ್ಲಿ ಸೇರಿಸುವುದು ಇತ್ಯಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಇದನ್ನು ಪಾಲಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಅಂಚೆಯ ಮೂಲಕ ಕಳುಹಿಸುವುದನ್ನು ತಾವು ಹೇಗೆ ತಡೆಯಬಲ್ಲಿರಿ? ಕಂಪ್ಯೂಟರಿಗೆ ಸೇರಿಸುವುದಕ್ಕೆ ಅವಕಾಶ ಇಲ್ಲ ಎಂದರೆ ಕಾರ್ಯಕ್ರಮದ ಕುರಿತು ವಿಮರ್ಶೆಗಳನ್ನೂ ನಾನು ಬರೆಯುವಂತಿಲ್ಲ ಎಂದು ಅರ್ಥವೇ ತಿಳಿಯುತ್ತಿಲ್ಲ.
4. ಓದುಗರನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾವು ಇದೇನು ಮಾಡಲು ಹೊರಟಿದ್ದೇವೆ ಎಂಬ ಬಗ್ಗೆ ನನಗೆ ಗೊಂದಲವಿದೆ. ಸರ್ಕಸ್ಸಿನಲ್ಲಿ ಹುಲಿ, ಸಿಂಹ, ಆನೆಗಳನ್ನು ತಂದು ಅವುಗಳಿಂದ ವಿವಿದ ಚಮತ್ಕಾರಗಳನ್ನು ತೋರಿಸಿ, ಪ್ರವೇಶ ದರ ನಿಗದಿ ಮಾಡಿ, ಪ್ರಾಣಿಗಳಿಗೆ ತಿಂಡಿ ಹಾಕುವಂತಿಲ್ಲ ಎಂದು ಕಟ್ಟುಪಾಡು ಮಾಡುವ ಸರ್ಕಸ್ಸು ಕಂಪೆನಿಯ ಮಾಲಿಕರಂತೆ ಸಾಹಿತಿಗಳು ಕಾಣಬೇಕಾಗಿಲ್ಲ ಎಂದು ನನ್ನ ವಿನಮ್ರ ಭಾವನೆ.
5. ನಾನು ಕವಿತೆ ಓದುತ್ತೇನೆ, ಕತೆ ಓದುತ್ತೇನೆ, ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದು ಮುಕ್ತ ಆಹ್ವಾನ ನೀಡುತ್ತಿದ್ದ ಸಾಹಿತಿಗಳ ಬಳಗ, ಹೀಗೆ ಪ್ರವೇಶ ಶುಲ್ಕ ಕೊಟ್ಟು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬನ್ನಿ ಎಂದು ಹೇಳುವ ಸಂಪ್ರದಾಯದಲ್ಲಿ ಪಾಲುದಾರನಾಗುವಷ್ಟು ಮಹಾನ್ ಲೇಖಕನಾಗಲೀ, ಭಾಷಣಕಾರನಾಗಲೀ ನಾನು ಅಲ್ಲದೇ ಇರುವುದರಿಂದ ಸಂಭ್ರಮದಿಂದ ದೂರ ಉಳಿಯಲು ಇಚ್ಛಿಸುತ್ತೇನೆ.

ಶುಭವಾಗಲಿ.

ಪ್ರೀತಿಯಿಂದ
ಜೋಗಿ

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ರಹಮತ್ ತರೀಕೆರೆ ಪತ್ರ

ಮಾನ್ಯರಾದ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ವಿಜ್ಞಾಪನೆಗಳು

ಪ್ರಿಯರೆ,
ಜನವರಿ ೨೫ರಿಂದ ೨೭ರ ತನಕ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ನನ್ನನ್ನುವಿಶೇಷ ಆಮಂತ್ರಿತನಾಗಿ ಆಹ್ವಾನ (ಪತ್ರ ೧೨.೧೨.೧೨) ನೀಡಿದ್ದಿರಿ. ತಮ್ಮ ವಿಶ್ವಾಸಕ್ಕೆ ಕೃತಜ್ಞತೆ ಹೇಳುತ್ತೇನೆ. ಈಗ ಧಾರವಾಡ ಗೆಳೆಯರು ಕಳಿಸಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ವಿವರಗಳನ್ನು ಕಂಡ ಮೇಲೆ ಬರಬೇಕು ಎಂದು ಅನಿಸುತ್ತಿಲ್ಲ . ಆದ್ದರಿಂದ ನನ್ನ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಿಂದ ಕೈಬಿಡಬೇಕು ಎಂದು ಕೋರುತ್ತೇನೆ.
ವಂದನೆಗಳು

ತಮ್ಮ ವಿಶ್ವಾಸದ

ರಹಮತ್ ತರೀಕೆರೆ

ಸಾಹಿತ್ಯ ಸಂಭ್ರಮಕ್ಕೆ ಗೈರು ಆಗುವ ವಿಚಾರದ ಕುಂ.ವೀ. ಅವರ ಪತ್ರ

ಸಂಭ್ರಮ ಸಂಘಟಕ ಗೆಳೆಯರೇ,
ಶುಭೋದಯ,

ಕಾರ್ಯಕ್ರಮದ ನಿಯಮಾವಳಿಗಳಿಗೆ ನನ್ನ ಸಹಮತವಿಲ್ಲ,

ಅಂತ ಉಸಿರುಗಟ್ಟಿಸುವ ವಾತಾವರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ,

ದಯವಿಟ್ಟು ಕ್ಷಮಿಸಿ ನನ್ನ ಗೈರುಹಾಜರಿಯನ್ನು,

ನಿಮ್ಮ

ಕುಂವೀ

ಧಾರವಾಡ ಸಾಹಿತ್ಯ ಸಂಭ್ರಮ : ಅಧ್ಯಕ್ಷರಿಗೊಂದು ಅಶೋಕ ಶೆಟ್ಟರ್ ಬಹಿರಂಗ ಪತ್ರ

 ಡಾ. ಗಿರಡ್ಡಿ ಗೋವಿಂದರಾಜ
ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
ಇವರಿಗೆ


ಡಿಯರ್ ಸರ್,

ಇದೇ (ಜನವರಿ, ೨೦೧೩) ೨೫, ೨೬, ೨೭ ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.

ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ, ಗುಂಪು, ಜಾತಿ, ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ, ಸಂಗೀತ, ವಿಮರ್ಶೆ, ಚಿತ್ರಕಲೆ, ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು, ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ, ಪ್ರೀತಿ, ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ-ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ. ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವುದಿಲ್ಲ.

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕಣೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ-ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು ? ಏಕೆ ಇಂಥ ಹಾಸ್ಯಾಸ್ಪದ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ ?

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ; ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ; ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ..... ! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
ಅಶೋಕ ಶೆಟ್ಟರ್
 ಧಾರವಾಡ
 ೧೬ ಜನವರಿ ೨೦೧೩

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.