- ಕಾನತ್ತೂರು ದೈವಸ್ಥಾನದ ಪರ್ಸೆಂಟೇಜ್ ಸ್ಕೀಮ್ !
ವ್ಯಾಜ್ಯವೇನಾದರೂ ಕಾನತ್ತೂರು ಕ್ಷೇತ್ರದಲ್ಲಿ ಇತ್ಯರ್ಥವಾದರೆ ಆ ವ್ಯಾಜ್ಯದ ಮೊತ್ತವನ್ನು ಆಧರಿಸಿ ಫ್ಲ್ಯಾಟ್ ೧೦ ಪರ್ಸೆಂಟ್ ಮೊತ್ತವನ್ನು ಅಲ್ಲಿನ ಭಂಡಾರಕ್ಕೆ ಹಾಕಬೇಕಾಗುತ್ತದೆ. ಬಿಸಿಲಲ್ಲಿ ಒಣಗಿ ಮನೆ, ಜಾಗ ತೋರಿಸುವ ರಿಯಲ್ ಎಸ್ಟೇಟ್ ಬ್ರೋಕರ್‌ಗಳೂ ಕೂಡಾ ಎರಡು ಪರ್ಸೆಂಟ್ ಗಿಟ್ಟಿಸಲು ಹೆಣಗಾಡುತ್ತಿರಬೇಕಾದರೆ ಇಲ್ಲಿನ ಆಡಳಿತ ಮಂಡಳಿಯವರದ್ದು ಮಾತ್ರ ಕುಳಿತಲ್ಲೇ ಡೀಸೆಂಟ್ ಕಮಾಯಿ. ಇವರ ಪರ್ಸೆಂಟೇಜಿನ ಆಕರ್ಷಕ ಸ್ಕೀಮು ಇತರ ಕೆಲವು ಕಮರ್ಷಿಯಲ್ ದೈವಸ್ಥಾನಗಳ ಆಡಳಿತಗಾರರ ಲೆಕ್ಕಾಚಾರಕ್ಕೂ ಕಾರಣವಾಗುತ್ತಿದೆ.
ಕಾನತ್ತೂರು ಕ್ಷೇತ್ರದ ಕಾರಣಿಕ ಕಥಾ ನಕಗಳು ವ್ಯಾಪಕ ಪ್ರಸಿದ್ಧಿಯನ್ನು ಪಡೆದು ಕೊಂಡಿದೆ. ಬಗೆಹರಿಸಲಾಗದ ಕಗ್ಗಂಟು ವ್ಯಾಜ್ಯಗಳೂ ಕೂಡಾ ಕಾನತ್ತೂರಿನ ನಾಲ್ವರ್ ದೈವಗಳ ನಡೆಯಲ್ಲಿ ಬಗೆಹರಿಯುತ್ತವೆ ಎನ್ನುವುದು ಚಾಲ್ತಿಯಲ್ಲಿರುವ ಪ್ರತೀತಿ.
ಆದರೆ ಕುಟುಂಬವೊಂದಕ್ಕೆ ಸೇರಿದ ಈ ದೈವಸ್ಥಾನದಲ್ಲಿ ಖಾಸಗಿ ಆಡಳಿತವಿದ್ದು, ಇಲ್ಲಿ ವ್ಯಾಜ್ಯ ಪರಿಹಾರಕ್ಕೆ ಬಳಸುತ್ತಿರುವ ವಿಧಾನ ಹಾಗೂ ವ್ಯಾಜ್ಯ ಪರಿಹಾರಾರ್ಥಿ ಗಳಿಗೆ ವಿಧಿಸುತ್ತಿರುವ ನಿಬಂಧನೆಗಳು ವ್ಯಾಪಕ ಟೀಕೆಗೆ ಕಾರಣವಾಗುತ್ತಿದೆ.
ಹಿಂದಿನ ಕಾಲದಲ್ಲಿ ಬಲ್ಲಾಳ ರಾಜ್ಯಾ ಡಳಿತಕ್ಕೆ ಸೇರಿದ್ದ ಈ ದೈವಸ್ಥಾನದಲ್ಲಿ ವಿಷ್ಣುಮೂರ್ತಿ, ರಕ್ತೇಶ್ವರಿ, ಪಂಜುರ್ಲಿ ಹಾಗೂ ಚಾಮುಂಡಿ ಎಂಬ ನಾಲ್ವರು ದೈವಗಳನ್ನು ಆರಾಧಿಸಿಕೊಂಡು ಬರಲಾಗಿತ್ತು. ಆ ಕಾಲದಲ್ಲಿ ಈ ದೈವಸ್ಥಾನದ ಕಾರ್ಯ ದರ್ಶಿಯಾಗಿ ನಾಯರ್ ಒಬ್ಬರನ್ನು ನೇಮಿ ಸಲಾಗಿತ್ತು. ಕಾಲಾನುಕ್ರಮದಲ್ಲಿ ಬಲ್ಲಾಳರುಗಳು ಯಾವುದೋ ಕಾರಣಕ್ಕೆ ರಾಜ್ಯಭ್ರಷ್ಟರಾದ ನಂತರ ದೈವಸ್ಥಾನದ ಉಸ್ತುವಾರಿಯನ್ನು ಅದೇ ನಾಯರ್ ವಹಿಸಿ ಕೊಂಡಿದ್ದರು. ಅವರಿಗೆ ಮಕ್ಕಳಿಲ್ಲವಾಗಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದು ಕೊಂಡಿದ್ದು ಆ ವಂಶಸ್ಥರೇ ಈಗ ಕಾನತ್ತೂರಿನ ಆಡಳಿತ ನೋಡಿಕೊಳ್ಳುತ್ತಿರುವ ಪುದುಕೋಡಿ ತರವಾಡಿನ ನಾಯರ್‌ಗಳು. ಈ ಕುಟುಂಬದಲ್ಲಿ ಮೂರು ಕವಲು ಗಳಿದ್ದು, ಅದರ ಹಿರಿಯರಾದ ಭಾಸ್ಕರ ನಾಯರ್, ನಾರಾಯಣ ನಾಯರ್ ಹಾಗೂ ಮಾಧವನ್ ನಾಯರ್ ಎಂಬವರು ಸರದಿಯಂತೆ ಮೂರು ವರ್ಷಗಳ ಕಾಲ ಕಾನತ್ತೂರಿನ ಆಡಳಿತ ನಿರ್ವಹಿಸುತ್ತಿದ್ದಾರೆ.
ಇದು ಕಾನತ್ತೂರು ದೈವಸ್ಥಾನದ ಹಿನ್ನೆಲೆ. ಅದರೆ ಇಲ್ಲಿನ ನಾಲ್ವರ್ ದೈವಗಳು ಅತ್ಯಂತ ಕಾರಣಿಕ ಹೊಂದಿದೆ ಎಂಬ ಜನರ ಮನಸ್ಸಿನಲ್ಲಿರುವ ಭಯ, ಭಕ್ತಿ, ಶ್ರದ್ಧೆಗಳನ್ನು ಬಂಡವಾಳವಾಗಿಸಿಕೊಂಡು ದುಡ್ಡು ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ಜೊತೆಗೆ ವ್ಯಾಜ್ಯದ ಎದುರುವಾದಿಗಳಿಗೆ ಕಾನೂನು ಬಾಹಿರವಾಗಿ ನೋಟೀಸ್ ನೀಡಲಾಗುತ್ತಿರುವ ಬಗ್ಗೆಯೂ ವಿರೋಧ ಕೇಳಿ ಬರುತ್ತಿದೆ.
ಭಾರತೀಯ ಕಾನೂನಿನ ಪ್ರಕಾರ ವ್ಯಾಜ್ಯ ಪರಿಹಾರಕ್ಕೆ ನ್ಯಾಯಾಲಯ ಅಥವಾ ಇತರ ಸರ್ಕಾರಿ ಅಂಗಸಂಸ್ಥೆಗಳಲ್ಲದೆ ಯಾವುದೇ ಖಾಸಗಿಯವರು ವೈಯಕ್ತಿಕ ನೋಟೀಸ್ ನೀಡು ವಂತಿಲ್ಲ. ಆದರೆ ಕಾನತ್ತೂರಿನಲ್ಲಿ ವ್ಯಾಜ್ಯ ಪರಿ ಹರಿಸಿಕೊಳ್ಳಲು ಬರುವ ವ್ಯಕ್ತಿಯ ಅಹವಾಲಿನ ಆಧಾರದ ಮೇಲೆ ಪ್ರತಿವಾದಿಯ ವಿಳಾಸಕ್ಕೆ ಕ್ಷೇತ್ರದಲ್ಲಿ ಹಾಜರಾಗುವಂತೆ ನೋಟೀಸು ಕಳುಹಿ ಸಲಾಗುತ್ತದೆ. ಅದಕ್ಕೆ ಹಾಜರಾಗದಿದ್ದಲ್ಲಿ ಎರಡನೇ ಬಾರಿ ನೋಟೀಸು ರವಾನಿಸಲಾಗುತ್ತದೆ. ಅದಕ್ಕೂ ಹಾಜರಾಗದಿದ್ದರೆ ಮೂರನೆಯ ಬಾರಿಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ನೋಟೀಸು ಕಳುಹಿಸಲಾಗುತ್ತದೆ. ಈ ಮೂರು ನೋಟೀಸು ಗಳಿಗೆ ಪ್ರತಿಕ್ರಿಯೆ ಬಾರದಿದ್ದ ಪಕ್ಷದಲ್ಲಿ ಆತನ ವಿರುದ್ಧ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.
ಪ್ರಸ್ತುತ ಪ್ರಶ್ನೆಯೇನೆಂದರೆ, ಕಾನೂನಿನಲ್ಲಿ ಅವಕಾಶವೇ ಇಲ್ಲವೆಂದ ಮೇಲೆ ಯಾವನೇ ಒಬ್ಬ ವ್ಯಕ್ತಿಗೆ ಕ್ಷೇತ್ರಕ್ಕೆ ಹಾಜರಾಗುವಂತೆ ನೋಟೀಸು ಕಳಿಸುವ ಅಧಿಕಾರವನ್ನು ಕಾನತ್ತೂ ರಿನ ಆಡಳಿತ ಮಂಡಳಿಗೆ ಕೊಟ್ಟವರಾದರೂ ಯಾರು? ಒಂದು ವೇಳೆ ಯಾವುದಾದರೂ ಕಾರಣಕ್ಕೆ ಪ್ರತಿವಾದಿ ಕ್ಷೇತ್ರಕ್ಕೆ ಹಾಜರಾಗದಿದ್ದರೆ ಆತನ ವಿರುದ್ಧ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡುವ ಕ್ಷೇತ್ರದ ಆಡಳಿತ ಪ್ರಮುಖರ ಕೆಟ್ಟ ಚಾಳಿಗೆ ಏನನ್ನ ಬೇಕು? ಕಾನತ್ತೂರಿಗೆ ದೂರು ನೀಡುವ ವ್ಯಕ್ತಿಗೆ ಯಾವುದೇ ಅರ್ಹತೆಯನ್ನು ನಿಗದಿಪಡಿಸಲಾಗಿಲ್ಲ.
ಅಂದರೆ ಯಾವ ಕಳ್ಳ ಕಾಕರೂ ದೈವಸ್ಥಾನದ ಸುಂಕವನ್ನು ತೆತ್ತು, ಕಳ್ಳರು ಸುಭಗ ರೆನ್ನದೆ ಬೇಕೆಂದವರಿಗೆ ನೋಟೀಸು ಕಳುಹಿ ಸಬಹುದು ಎಂದಾಯ್ತಲ್ಲ? ಅಲ್ಲದೆ ಸತ್ಯವಂತ ನೊಬ್ಬನಿಗೆ ಯಾವನೋ ಅಡ್ಡಹೋಕ ಕಾನ ತ್ತೂರಿನಿಂದ ನೋಟೀಸು ಕಳುಹಿಸಿದ ಎಂಬ ಕಾರಣಕ್ಕೆ ದುಡಿಯುವ ಕೆಲಸವನ್ನೂ ಬಿಟ್ಟು ಅಲ್ಲಿಗೆ ಓಡಿ ಹೋಗುವ ಜರೂರತ್ತಾದರೂ ಏನಿದೆ? ತನ್ನ ಆತ್ಮ ಸಾಕ್ಷಿಯ ಪ್ರಕಾರ ನ್ಯಾಯ ಪಾಲಿಸಿಕೊಂಡು ಬರುವವರು, ದೈವಸ್ಥಾನದ ನಡೆಯಲ್ಲಿ ಅಲ್ಲಿನ ಆಡಳಿತ ಪ್ರಮುಖರೆದುರು ಬಿದ್ದು ಹೊರಳಾಡುವುದು ಯಾವ ಕರ್ಮಕ್ಕೆ? ಹೊಟ್ಟೆಪಾಡಿಗೆ ದಿನವಿಡೀ ದುಡಿಯುವ ವ್ಯಕ್ತಿಗೆ ಯಾವುದೋ ಒಂದು ಆಪಾದನೆಯ ನೋಟೀ ಸು ಸ್ವೀಕರಿಸುವಾಗಿನ ಮಾನಸಿಕ ಹಿಂಸೆಗೆ ಕಾನತ್ತೂರಿನ ಆಡಳಿತ ಮಂಡಳಿ ಏನು ಉತ್ತರ ನೀಡುತ್ತದೆ? ದೂರುದಾತನಿಂದ ಫೀಸು ಪಡೆದು ಕೊಂಡು ಮನ ಬಂದವರಿಗೆ ನೋಟೀಸು ಕಳು ಹಿಸಲು ಇವರು ಯಾವೂರ ದೊಣ್ಣೆ ನಾಯಕರು? ಇಲ್ಲಿನ ಆಡಳಿತ ಮಂಡಳಿಯ ನೋಟೀಸು ಕಳುಹಿಸುವ ತೆವಲಿನ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವ ಎಲ್ಲಾ ಅವಕಾಶಗಳಿರುವುದಾಗಿ ಮಂಗಳೂರಿನ ಖ್ಯಾತ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾನತ್ತೂರಿನ ಆಡಳಿತ ಮಂಡಳಿಯು ಜನರನ್ನು ಮರಳುಗೊಳಿಸುವ ಅಭಿಯಾನದ್ದೇ ಒಂದು ತೂಕ. ಇವರ ಪ್ರಕಾರ ನ್ಯಾಯಾಲಯ ಗಳಲ್ಲಿ ನಡೆಯುತ್ತಿರುವ ವ್ಯಾಜ್ಯದ ವಾದಿ ಹಾಗೂ ಪ್ರತಿವಾದಿಗಳು ಸೇರಿ ನಾವು ನಮ್ಮ ವ್ಯಾಜ್ಯವನ್ನು ಕಾನತ್ತೂರಿನಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರೆ ಅದನ್ನು ನ್ಯಾಯಾಲಯ ಪುರಸ್ಕರಿ ಸುತ್ತದೆ ಎಂದು ಪುಂಗಿ ಊದಲಾಗುತ್ತಿದೆ. ಆದರೆ ಸ್ವಾಮೀ.., ವಾದಿ ಪ್ರತಿವಾದಿಗಳು ಸೇರಿ ನ್ಯಾಯಾಲಯದ ಮುಂದೆ ಹೋಗಿ ‘ನಾವಿಬ್ಬರು ನಮ್ಮ ವ್ಯಾಜ್ಯವನ್ನು ಮಾವನ ಮನೆಯ ಹಿತ್ತಿಲಲ್ಲೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿ ದರೂ ನ್ಯಾಯಾಲಯ ಸಮ್ಮತಿಸುತ್ತದೆ. ಇಲ್ಲಿ ಅವರಿಬ್ಬರೂ ಸಂಧಾನ ಮಾಡಿಕೊಂಡು ನ್ಯಾಯಾಲಯದಿಂದ ಹೊರ ಬರುತ್ತಾರೆ ಎನ್ನುವುದು ಮುಖ್ಯವೇ ಹೊರತು ಎಲ್ಲಿ ಹೋಗಿ ರಾಜಿ ಮಾಡಿಕೊಳ್ಳುತ್ತಾರೆಂದಲ್ಲ.
ಇನ್ನು ಇಲ್ಲಿನ ಹಣಕಾಸು ನೀತಿಗಳ ಬಗ್ಗೆಯೂ ಆಸಕ್ತಿದಾಯಕ ಅಂಶಗಳಿವೆ. ಯಾವುದೇ ವ್ಯಾಜ್ಯದ ಬಗ್ಗೆ ಪ್ರತಿವಾದಿಗೆ ನೋಟೀಸು ಕಳುಹಿಸುವ ಶುಲ್ಕ ಕೇವಲ ರೂ. ೧೫೦ ಮಾತ್ರ. ಕಳುಹಿಸಿದ ನೋಟೀಸಿಗೆ ಪ್ರತಿವಾದಿ ಉತ್ತರಿಸದಿದ್ದರೆ ಆತನ ವಿರುದ್ಧ ಪ್ರಾರ್ಥನೆ ನಡೆಸುವರೇ ಇನ್ನೊಂದು ಬಾರಿ ಕೇವಲ ೧೫೦ ಮಾತ್ರ.
ಇನ್ನೂ ವ್ಯಾಜ್ಯವೇನಾದರೂ ಕ್ಷೇತ್ರದಲ್ಲಿ ಇತ್ಯರ್ಥವಾದರೆ ಆ ವ್ಯಾಜ್ಯದ ಮೊತ್ತವನ್ನು ಆಧರಿಸಿ ಫ್ಲ್ಯಾಟ್ ೧೦ ಪರ್ಸೆಂಟ್ ಮೊತ್ತವನ್ನು ಅಲ್ಲಿನ ಭಂಡಾರಕ್ಕೆ ಹಾಕಬೇಕಾಗುತ್ತದೆ. ಮೊತ್ತ ಏರಿಕೆಯಾದಲ್ಲಿ ಪರ್ಸೆಂಟೇಜಿನಲ್ಲಿ ಸಡಿಲಿಕೆಯೂ ಇದೆಯಂತೆ.
ಈ ಎಲ್ಲಾ ವಿವರಗಳು ಅಲಿಖಿತ ನಿಯಮಗಳಾಗಿ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಬಿಸಿಲಲ್ಲಿ ಒಣಗಿ ಮನೆ, ಜಾಗ ತೋರಿಸುವ ರಿಯಲ್ ಎಸ್ಟೇಟ್ ಬ್ರೋಕರ್‌ಗಳೂ ಎರಡು ಪರ್ಸೆಂಟ್ ಗಿಟ್ಟಿಸಲು ಹೆಣಗಾಡುತ್ತಿರಬೇ ಕಾದರೆ ಇಲ್ಲಿನ ಆಡಳಿತ ಮಂಡಳಿಯವರದ್ದು ಮಾತ್ರ ಕುಳಿತಲ್ಲೇ ಡೀಸೆಂಟ್ ಕಮಾಯಿ. ಇವರ ಪರ್ಸೆಂಟೇಜಿನ ಆಕರ್ಷಕ ಸ್ಕೀಮು ಇತರ ಕೆಲವು ಕಮರ್ಷಿಯಲ್ ದೈವಸ್ಥಾನಗಳ ಆಡಳಿತಗಾರರ ಲೆಕ್ಕಾಚಾರಕ್ಕೂ ಕಾರಣವಾಗುತ್ತಿದೆ.
ಇದನ್ನೆಲ್ಲಾ ಯಾಕೆ ಹೇಳಲಾಗುತ್ತಿದೆಯೆಂ ದರೆ, ಕಾನತ್ತೂರು ದೈವಸ್ಥಾನ ಇನ್ನೂ ಎಂಡೋ ಮೆಂಟ್‌ಗೆ ಒಳಪಟ್ಟಿಲ್ಲ. ಬಹಳ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವೊಂದರ ಪ್ರಕಾರ ಅದು ಎಂಡೋಮೆಂಟಿಗೆ ಒಳಪಡುವುದೂ ಇಲ್ಲ. ಇಲ್ಲಿನ ಭಂಡಾರಕ್ಕೆ ಬೀಳುವ ಅಷ್ಟೂ ದುಡ್ಡು ಇಲ್ಲಿನ ಆಡಳಿತ ನಡಸುವ ಕುಟುಂಬಗಳ ವೈಯಕ್ತಿಕ ಖರ್ಚಿಗೇ ಪೋಲಾಗುತ್ತಿದೆ. ಭಕ್ತರ ಭಯದ ದುಡ್ಡಲ್ಲೇ ಎಲ್ಲಮ್ಮನ ಜಾತ್ರ ಸಾಗುತ್ತಿದೆ. ಈ ಕುಟುಂಬಗಳು ದೈವಸ್ಥಾನದ ಆದಾಯ ದಲ್ಲೇ ವೈಭವೋಪೇತ ಮನೆಗಳನ್ನು ಕಟ್ಟಿ ಕೊಂಡಿವೆ. ತಮ್ಮ ಮಕ್ಕಳ ಮದುವೆ ಗಳನ್ನು ಅದ್ದೂರಿಯಾಗಿ ನಡೆಸುತ್ತವೆ. ಜನ ಸಮುದಾಯ ಮಾತ್ರ ದೈವಗಳ ಕಾರಣಿಕಕ್ಕೆ ಪರ್ಸೆಂಟೇಜು ಲೆಕ್ಕದಲ್ಲಿ ಕಂದಾಯ ಕಟ್ಟುತ್ತಲೇ ಇದ್ದಾರೆ.
ದೈವ ದೇವರುಗಳ ಬಗೆಗಿನ ಜನರ ಭಾವನೆ ಗಳು ಪ್ರಶ್ನಾತೀತವಾದುದು. ಆದರೆ ಆ ಭಾವನೆಗ ಳನ್ನು ನಗದೀಕರಿಸುವ ಅತೀ ಬುದ್ದಿವಂತಿ ಕೆಯನ್ನು ಮಾತ್ರ ವಿರೋಧಿಸಲೇ ಬೇಕಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶತಮಾನಗಳಿಂದಲೂ ನ್ಯಾಯದಾನ ಮಾಡಿಕೊಂಡು ಬರಲಾಗುತ್ತಿದೆ. ಹಾಗೆಂದು ಅಂಚೆಯಲ್ಲಿ ಸ್ಟಾಂಪು ಹಚ್ಚಿ ನೋಟೀಸು ಕಳುಹಿಸುವುದು, ಬಾರದವರ ವಿರುದ್ಧ ಪ್ರಾರ್ಥನೆ ಮಾಡುವಂಥದ್ದನ್ನು ನಡೆಸ ಲಾಗಿಲ್ಲ. ಶುದ್ಧ ನ್ಯಾಯದಾನವನ್ನು ಮಾತ್ರ ನೀಡ ಲಾಗುತ್ತಿದೆ. ಇಂಥ ಅನುಕರಣೀಯತೆ ಕಾನತ್ತೂರಿನ ಆಡಳಿತಗಾರರಿಗೆ ಯಾಕಿಲ್ಲವೋ? ನಾಲ್ವರ್ ದೈವಗಳೇ ನುಡಿಯಬೇಕು.
ಕೃಪೆ : ಜಯಕಿರಣ ದಿನಪತ್ರಿಕೆ, 18-02-2011 http://jayakirana.com/images/jayakirana.gif
No comments:
Post a Comment