Saturday, November 12, 2011

ಕಾರಣಿಕ : ಸಾಂಸ್ಕೃತಿಕ ನೆಲೆಗಳು - 3

ಮೈಲಾರಲಿಂಗನನ್ನು ಕುರಿತ ಹರಕೆ : ನಂಬಿಕೆ, ಆಚರಣೆಗಳು

‘ಮೈಲಾರಲಿಂಗ’ ಕರ್ನಾಟಕದ ಮೂರು ಪ್ರಮುಖ ಜೈನ, ವೀರಶೈವ-ವೈಷ್ಣವ ಧಾರ್ಮಿಕ ಪುರಾಣ ಕಥೆಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತದೆ. ಈ ಎಲ್ಲ ಪುರಾಣೀಕರಿಸಿಗೊಂಡ ಕಥೆಗಳ ವಿಭಿನ್ನ ಸಂದರ್ಭಗಳು ಮೈಲಾರನ ಭಕ್ತರು ಇಂದಿಗೂ ಪರಿಪಾಲಿಸಿಕೊಂಡು ಬಂದಿರುವ ಆಚರಣೆಗಳ ಕ್ರಿಯಾತ್ಮಕರೂಪಗಳಲ್ಲಿ ಹುಡುಗಿರುವುದನ್ನು ನಾವು ಕಾಣುತ್ತೇವೆ. ಧರ್ಮ ಎಂದು ಇಂದು ನಾವು ಬಳಸುತ್ತಿರುವುದು ಒಂದು ವ್ಯವಸ್ಥಿತಿ ಸಮಾಜದ ಒಳಪಡದ, ಅನಿಯಂತ್ರಿತವಾಗಿ ಚದುರಿದ, ವಿಭಿನ್ನ ಸಂಸ್ಕೃತಿಗಳ ಬಹುಮುಖ ಸಮಾಜ. ವ್ಯವಸ್ಥಿತ ಸಮಾಜದ ಧಾರ್ಮಿಕ ಪುರಾಣ, ಸೈದ್ದಾಂತಿಕ ಪರಿಕಲ್ಪನೆಗಳನ್ನು ‘ಮೈಲಾರಲಿಂಗ’ನಂಥ ಸಂಕೀರ್ಣ ದೇವತೆಯ ವಿವೇಚನೆಗೆ ನೇರವಾಗಿ ಅನ್ವಯಗೊಳಿಸುವುದು ದಾರ್ಷ್ಟ್ಯದ ಮಾತು. ಆದರೆ ಅದೇ ಕಾಲಕ್ಕೆ ಶಿಷ್ಟಪದ ಸಮಾಜದ ಬೆಳವಣಿಗೆಯ ವಿವಿಧ ಹಂತಗಳಿಗೆ ಆಧಾರವಾಗಿದೆ. ಜನಪದ ನಡವಳಿಕೆಗಳಲ್ಲಿ ತೊಡಗಿ ಪರಿಚಲನೆಗೊಳ್ಳುತ್ತ ಬಂದ ನಂಬಿಕೆ, ಆಚರಣೆ, ಸಂಜ್ಞೆ, ಸಂಕೇತ, ದೇವಾನುದೇವತೆಗಳ ಆರಾಧನೆ, ಉತ್ಸವ, ಧಾರ್ಮಿಕ ಕಟ್ಟುಕಟ್ಟಳೆ, ಮಂತ್ರ, ಮಾಟ, ಪವಾಡ, ಕಾರ್ಣಿಕ, ಗೊರವ, ಪುರವಂತ, ಇತ್ಯಾದಿ ವಿವಿಧ ರೂಪ, ಮಾದರಿಗಳಲ್ಲಿ ಜನಪದ ಧರ್ಮ, ನಂಬಿಕೆ, ಆಚರಣೆಗಳ ಮೂಲಸ್ವರೂಪವನ್ನು ಸ್ಥೂಲವಾಗಿ ಗುರುತಿಸಬಹುದು.
ಪುರಾಣಗಳಲ್ಲಿ ವೈಭವೀಕರಣಗೊಂಡ ‘ಮೈಲಾರ’ ದೇವತೆಯ ಪ್ರಾಬಲ್ಯವನ್ನು ಶಿಷ್ಟಪದ ಧರ್ಮಗಳು ಇಲ್ಲ ಖಂಡಿಸಿವೆ. ಇಲ್ಲ ಹೀಗಳೆದಿವೆ. ಆದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಮುಂತಾದ ವಿವಿಧ ಪ್ರದೇಶಗಳ ಜನಪದ ಬುಡಕಟ್ಟು, ಅಲೆಮಾರಿ, ವೃತ್ತಿ, ಕೃಷಿ ಸಮುದಾಗಳ ಜನಪದರಿಗೆ ಇಂದಿಗೂ ಮೈಲಾರ ಒಂದು ‘ಜೀವಂತ ದೇವತೆ’ಯಾಗಿ ಉಳಿದುಬಂದಿರುವುದನ್ನು ಕಾಣುತ್ತೇವೆ. ಮೈಲಾರನ ಪುರಾಣಕಥೆಯ ವಿವಿಧ ಅಂಶಗಳನ್ನು ಕ್ರಿಯಾತ್ಮಕವಾಗಿ ತಮ್ಮ ವಿಭಿನ್ನ ಆಚರಣೆಗಳನ್ನು ಅನಾವರಣ ಗೊಳಿಸುವುದನ್ನು ಕಾಣುತ್ತೇವೆ. ಪೌರಾಣಿಕ ಕಥೆ ಸಮಗ್ರವಾಗಿ ಗೊತ್ತಿರದ ಅನಕ್ಷರಸ್ಥ ಜಲಪದರು ಪರಿಪಾಲಿಸುವ ಈ ಬಗೆಯ ಆಚರಣೆಗಳಿಗೆ ಪ್ರಾಚೀನಕಾಲದಿಂದ ಹರಿದುಬಂದ ಅಚಲ ಶ್ರದ್ಧೆ, ನಂಬಿಕೆಗಳೇ ಪ್ರೇರಕ, ಈ ಬಗೆಯ ನಂಬಿಕೆಗಳಿಗೆ ಎರಡು ಕಾರಣ ಕೊಡಬಹುದು. ಒಂದು ಕತ್ತಲು ಛೇಧಿಸಿ ಬಂದ ಸೂರ್ಯ, ಧಿಮ್ಮಂದು ಸಿಡಿದ ಜ್ವಾಲಾಮುಖಿ, ಇತ್ಯಾದಿಗಳು ಯಾವುದೇ ಆದಿಮಗುಂಪಿನ ವ್ಯಕ್ತಿಗತ ಭಯ, ವಿಸ್ಮಯಗಳಿಗೆ ಮಾತ್ರ ಸೀಮಿತವಾಗದೆ ಇಡೀ ವೃಂದದ ಅಥವಾ ವೃಂದಗಳ ವಿಸ್ಮಯಭಯಗಳ ಸಾಮೂಹಿಕ ಅನುಭವಗಳ ಪ್ರಕ್ರಿಯೆಗೆ ಕಾರಣವಾಗುವವು. ಕಾಲಾಂತರದಲ್ಲಿ ಅದ್ಭುತ ಅಮಾಯಕ ಕಲ್ಪನೆಗಳಿಗೆ ಪ್ರೇರಕವು. ಹೀಗೆ ಇತಿಹಾಸ ಪೂರ್ವಕಾಲದಿಂದಲೇ ಪ್ರಾದಿಮಗಂಪುಗಳು ತಮ್ಮ ಸುತ್ತಣ ಅಗಾಧ, ವಿಸ್ಮಯಕಾರಿ ರುದ್ರರಮ್ಯ ನಿಸರ್ಗಶಕ್ತಿಗಳಿಗೆ ಒಂದು ಮೂರ್ತಿ ಸ್ವರೂಪ ಕೊಡುವ ಹಂತದಲ್ಲಿಯೇ ಧಾರ್ಮಿಕ ಸ್ವರೂಪದ ನಂಬುಗೆಯ ಹುಟ್ಟು, ನೆಲೆ, ಟೇಯಲರ್ ಹೇಳುವ ‘ಬಿಲೀಫ್ ಇನ್ ಸ್ಪಿರಿಚ್ಯುಅಲ್ ಬೀಯಿಂಗ್ಸ್’ ಆಧ್ಯಾತ್ಮ ಜೀವಿಗಳಲ್ಲಿ ನಂಬಿಕೆ ಮತ್ತು ಪಿರಾಡಿನ್ ಹೇಳುವ ‘ಸೋಶಿಯಲ್ ಪ್ರಿಸೆಷ್ಟೇಟ್ಸ್ ಆಫ್ ಫೀಯರ್’ ಭಯದ ಸಾಮಾಜಿಕ ವಿಧಗಳು ಜನಪದದ ನಂಬಿಕೆ ಮತ್ತು ಆಚರಣಿಯ ಎರಡು ಸೂಕ್ಷ್ಮ ಅಂಶಗಳ ಕಡೆಗೆ ಬೆರಳು ಮಾಡುತ್ತದೆ.
ನಂಬಿಕೆಗಳ ನಿರಂತರ ಪರಿಚಲನೆಯ ಮತ್ತೊಂದು ಕಾರಣ ವಿವಿಧ ಜನಪದ ವೃಂದಗಳ ಆರ್ಥಿಕಸ್ಥಿತಿಗತಿ, ತಾವು ನಂಬಿದ ಈ ದೈವ ತಮ್ಮ ಕೌಟುಂಬಿಕ ಸಂಕಷ್ಟಗಳಿಂದ ಕಾಪಾಡುತ್ತದೆ.. ಆರ್ಥಿಕ ಅಭದ್ರತೆಯನ್ನು ಪರಿಹರಿಸುತ್ತದೆ ಎನ್ನುವುದು. ಬಿ. ಮಾಲಿಕೋವ್ಹಸ್ಕಿ ತನ್ನ ‘ಮಿಥ್ ಇನ್ ಪ್ರಿಮಿಟಿವ್ ಸೈಕಾಲಜಿ’ ಕೃತಿಯ ಪುರಾಣ ಮತ್ತು ಪ್ರಾದಿಮ ಶ್ರದ್ದೆಗಳನ್ನು ಕುರಿತು ಆತನ ವಿವೇಚನೆ ಇಲ್ಲಿ ಪ್ರಸ್ತುತ ಪುರಾಣ ಮಾನವ ನಾಗರಿಕತೆಯ ಒಂದು ಸತ್ವಪೂರ್ಣ ತಿರುಳು (ಘಟಕ) ವಿರಾಮಕಾಲದ ಕಥೆ ಅಲ್ಲ. ತೀವ್ರ ಪರಿಶ್ರಮದ ಜೀವಂತ ಶಕ್ತಿ ಅದು ಬೌದ್ದಿಕ ಅರ್ಥವಿವರಣೆ ಅಥವಾ ಕಲಾತ್ಮಕ ಪ್ರತಿಮೆಯಾಗಿರದೆ ಆಡಿದ ಶ್ರದ್ಧೆ ಮತ್ತು ನೈತಿಕ ವಿವೇಕದ ವಸ್ತುತಃ ಸಂಭವನೀಯ ಕರಾರುಪತ್ರವಾಗಿದೆ.
ಜನಪದ ನಂಬಿಕೆ ಒಂದು ಅಲಿಖಿತ ಹೃದಯಾಂತರ್ಗತ ಕರಾರು ಪತ್ರ. ಇಂಥ ಒಂದು ನಂಬಿಕೆಯ ಫಲವಾಗಿ ತಮ್ಮ ತಮ್ಮ ಬುಡಕಟ್ಟು ವೃಂದವನ್ನು ನಿಯಂತ್ರಿಸಿ, ಕಾಪಾಡಿ ಆಯಾವೃಂದದ ಭಯವಿಸ್ಮಯಗಳಿಗೆ, ನಂಬಿಕೆ ಗೌರವಗಳಿಗೆ ಪಾತ್ರರಾಗಿ, ಮರಣಾನಂತರ ಅರ್ಚಿಸಲ್ಪಟ್ಟ, ಕಾಲಾನಂತರ ಅವರ ಸುತ್ತು ಹುಟ್ಟಿಕೊಂಡ ಐತಿಹ್ಯ, ಕಟ್ಟುಕಥೆ ಪುರಾಣಗಳ ಹುದುಗಿಹೋದ ಅಜ್ಞಾತ ಸಾಂಸ್ಕೃತಿಕ ವೀರರನ್ನು, ವ್ಯಕ್ತಿ ಶಕ್ತಿಗಳನ್ನು ಪ್ರತೀಕಗೊಳಿಸಿ, ವರ್ಷದ ನಿರ್ದಿಷ್ಟ ಕಾಲದಲ್ಲಿ ಅರ್ಚಿಸುವುದು, ವಿವಿಧ ಬಗೆಯ ರೂಢಿಗಳನ್ನು ಅಭಿನಯಿಸುವುದು, ಆಚರಣೆಗಳ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸುವುದು ಇತ್ಯಾದಿ ಜನಪದ ಸಾಮಾಜಿಕ ಧಾರ್ಮಿಕ ಜೀವನದ ವ್ಯಾಪಕಸ್ವರೂಪವನ್ನು ರೂಪಿಸುತ್ತ ಬಂದ ಸಂಗತಿಗಳಾಗಿವೆ.
ನೇರವಾಗಿ ಮೈಲಾರಲಿಂಗನಿಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ವಿವರಿಸುವ ಮೊದಲು ನಂಬಿಕೆ ಹರಕೆಗಳನ್ನು ಕುರಿತು ಒಂದೆರಡು ಮಾತು, ಕರ್ನಾಟಕದ ಅಥವಾ ಇತರ ಯಾವುದೇ ಪ್ರದೇಶದ ಜನಪದರಲ್ಲಿ ‘ಹರಕೆ’ ಸ್ವಲ್ಪಹೆಚ್ಚುಕಡಿಮೆ ಸರ್ವಸಾಮಾನ್ಯ ಸ್ವರೂಪಪಡೆದಿವೆ. ಹರಕೆಗೆ ಎರಡು ಹಂತಗಳಿವೆ.
ಒಂದು ಕೌಟುಂಬಿಕ ಇನ್ನೊಂದು ಸಾಮಾಜಿಕ ಅಥವಾ ಸಾಮೂಹಿಕ ಮದುವೆಯಿಂದಲೇ ಹರಕೆಗಳು ಮೊದಲಾಗುತ್ತವೆ ಎಂದು ಕಾಣುತ್ತದೆ. ನನ್ನ ಮಗನಿಗೆ ಮಗಳಿಗೆ ಮದುವೆಯಾದರೆ ನಾನು ಇಂಥಿಂಥ ಸೇವೆ ಮಾಡುತ್ತೇನೆ. ಇಂಥಿಂಥ ಕಾಣಿಕೆ ಸಲ್ಲಿಸುತ್ತೇನೆ. ಮಕ್ಕಳಾದರೆ, ತಾಯಿಗೆ ತಂದೆಗೆ ಗುಣವಾದರೆ, ಈ ವರ್ಷ ಮುಂಗಾರಿ ಹಿಂಗಾರಿ ಬೆಳೆ ಬಂದರೆ ಹೀಗೇ ಈ ಪಟ್ಟಿ ಬೆಳೆಸಬಹುದು.
‘ನಮ್ಮ ಊರಿಗೆ ಬಂದ ಮಾರಿ ಬೇನೆ ಪಿಲೇಗು ದೂರವಾದರೆ, ಊರಿನ ಮಳೆ ಬೆಳೆ ಸಮೃದ್ದವಾದರೆ ದೈವದವರು ಕೂಡಿ ನಿನ್ನ ತೇರು ಏಳೆಸುತ್ತೇವೆ ಇತ್ಯಾದಿ. ಇವು ಸಾಮೂಹಿಕವಾಗಿ ಕೈಕೊಳ್ಳುವ ಹರಕೆಗಳು, ಹರಕೆ ಎನ್ನುವುದಕ್ಕೆ ‘ಬೇಡಿಕೆಯ ಸ್ವರೂಪ ಮತ್ತು ಈ ಬೇಡಿಕೆ ತಮ್ಮ ದೈವದ ಮುಂದೆ ನಿರ್ದಿಷ್ಟವಾಗಿಡುವುದಕ್ಕೆ ಸಂಕಲ್ಪ’ ಎಂದೂ ಹೇಳಲಾಗುತ್ತದೆ. ದೇವರಲ್ಲಿ ಏನು ಬೇಡಿಕೊಂಡಿ? ಮುಂತಾದ ಪ್ರಶ್ನೆಗಳನ್ನು ಆತ್ಮೀಯರಾದವರು ಕೇಳಿದಾಗ, ಹರಕೆಹೊತ್ತ ವ್ಯಕ್ತಿ ಅದನ್ನು ಬಿಚ್ಚಿಹೇಳಬಹುದು ಅಥವಾ ಹೇಳಲಿಕ್ಕಿಲ್ಲ. ಏಕೆಂದರೆ ಹರಕೆ ಒಂದು ರೀತಿಯಲ್ಲಿ ‘ಭಕ್ತ’ ಮತ್ತು ‘ದೈವ’ದ ನಡುವೆ ಆಗುವ ಒಂದು ಗುಪ್ತಕರಾರು ಅಥವಾ ಆಂತರಿಕ ಒಡಂಬಡಿಕೆ.
ಅಂಥ ಹರಕೆಹೊತ್ತ ಸಾವಿರಾರು ಭಕ್ತರು ಮೈಲಾರಲಿಂಗನ ದೇವಾಲಯಗಳಲ್ಲಿ ಬಂದು ತಮ್ಮ ಹರಕೆ ಸಲ್ಲಿಸಿ ಹೋಗುವುದನ್ನು ಕಾಣುತ್ತೇವೆ.
ನಾನು ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಒಂದು ನಿರ್ದಿಷ್ಟ ಉದಾಹರಣೆ ನನ್ನ ಮೇಲಿನ ವಿವೇಚನೆಗೆ ಆಧಾರ.
ಧಾರವಾಡ ಜಿಲ್ಲೆಯ ಸವಣೂರಿನ ಈರಪ್ಪ ಲಿಂಗಪ್ಪ ಗಾಣಿಗೇರರು, ನಲವತ್ತು ವರ್ಷಕ್ಕಿಂತ ಹೆಚ್ಚುಕಾಲ ಮೈಲಾರಗುಡ್ಡಕ್ಕೆ ನಡೆದುಕೊಳ್ಳುವ ಈತನ ಅನುಭವ ಭಾವನೆ. ನಾವು ಮೈಲಾರೆಪ್ಪನ ಸೇವಾ ಮಾಡೂದಕ್ಕೂ ಭಾಳ ಕಾರಣ ಅದಾವು. ನಮ್ಮ ತಾಯಿ ಪಾರ್ವತಮ್ಮ ಮುಪ್ಪಿನಕಾಲಕ್ಕೆ ಜಡ್ಡಿನಿಂದ ನರಳತಿದ್ಲು. ಡಾಕ್ಟರದು ಔಷಧ ಅದು ಎಲ್ಲಾ ನಿಂತಮ್ಯಾಲ ನಾವು ನಮ್ಮೂರಾಗಿನ ಸಿಬಾರಗಟ್ಟೀಗಿ ನಡಕೊಂಡ್ವಿ. ಮೂರುದಿವ್ಸ ಆ ಸಿಬಾರಗಟ್ಟಗಿ ನಡ್ಡುಹೋಗಿ ಬಂದ್ರು. ಮಡಿ ಹುಡೀಲೆ ಎಲ್ಲಾ ಆಚರಿಸಿದಿವಿ. ಆಮ್ಯಾಲ ಆರಾಮಾತು. ಅದಕ್ಕೆ ಗುಡ್ಡಕ್ಕ ಬಂದು ಹರಿಕೆ ಸಲ್ಲಿಸಿದ್ವಿ, ಇನ್ನೊಂದು ಘಟನ ನಮ್ಮ ೧೨ ವರ್ಷದ ಮಗಳಿಗೆ ಒಮ್ಮಿಂದೊಮ್ಲೆ ಒಂದು ಕಾಲಿಗಿ ಸುಟ್ಟಗಾಯದಾಂಗ ದೊಡ್ಡಗುಳ್ಳಿ ಆಯ್ತು. ನಿಬಾರಗಟ್ಟಿಗೆ ಹೋಗಿ ಮಗಳಿಗೆ ಆರಾಮಾತು ಅಂದ್ರ ನಿನ್ನ ಗುಡ್ಡಕ್ಕ ಬಂದು ಸೇವಾ ಸಲ್ಲಿಸ್ತೀವಿ ಅಂತಾ ಬೇಡಿಕೊಂಡು ‘ಭಂಡಾರ’ ತಂದು ಕಾಲಿಗಿ ಹಚ್ಚಿದ್ವಿ ಎಲ್ಲ ಕರಗಿ ಆರಾಮಾತು. ಎಲ್ಲಾ ಆತನ ಮಾಯಾ ಮಹಿಮಾ. ನಮ್ಮ ಮನ್ಯಾಗ ಯಾವದು ಕಾರ್ಯ, ಕಾರಣಾಕಟ್ಟು ಏನು ಆದರು ನಾವು ಹೀಂಗ ಹರಕೆ ಹೊರ್ರೀ‍ವಿ ಮತ್ತು ಒಮ್ಮೊಮ್ಮೆ ತಡಾ ಆಗಬಹುದು. ಆದ್ರ ಗುಣ ಆಗೋದು ಮಾತ್ರ ಖಾತ್ರಿ, ಇನ್ನೊಂದು ಮಾತ್ರ್ಯ ನಾವೇನು ಸೇವಾ ಮಾಡ್ತೀವಿ ಇದು ಬರೀ ಹರಿಕೇ ಹೊತ್ತಾಗ ಮಾತ್ರ ಮಾಡೊದು ಆಮ್ಯಾಲ ಇಲ್ಲಾ ಅಂತೇನಿಲ್ಲ. ಹಂಗ ಒಟ್ಟು ಹುಣಿವೀಗೊಮ್ಮೆ ಬರೂದು ಮತ್ತು ಜಾತ್ರೀಗಿ ಬರೂದು, ನಮ್ಮ ನಮ್ಮ ಭಕ್ತಿ ಇದ್ದಷ್ಟು ಸೇವಾಮಾಡೂದು ಇದು ನಡದೇ ಇರತೈತಿ. ಹಸಿವಾದರ ಹ್ಯಾಂಗ ಊಟಾಮಾಡ್ತೇವು ಹಂಗ ನಮ್ಮ ಸೇವಾ ಅದು ನಮ್ಮ ಕರ್ತವ್ಯ ಅಂತ ಮಾಡ್ತೀವಿ.
ಇದರಂತೆ ಇನ್ನೂ ಅನೇಕ ಉದಾಹರಣೆ ಕೊಡುತ್ತ ಹೋಗಬಹುದು. ಈ ನಂಬಿಕೆ ಹರಕೆಗಳಲ್ಲಿ ಹುದುಗಿರುವ ಸೂಕ್ಷ್ಮ ಅಂಶವೆಂದರೆ ಈ ದೈವ ಜನಪದದ ಪಾಲಿನ ಹೊರಗಿನವನಲ್ಲ, ಅನ್ಯನಲ್ಲ ಎನ್ನುವುದು. ಆತ ತಮಗೆ ಅನನ್ಯ ಆತ್ಮೀಯ ತಾವು ಆತನೊಡನೆ ನೇರವಾಗಿ, ಆತ್ಮೀಯತೆಯಿಂದ ಮಾತಾಡಬಲ್ಲೆವು. ತಂದೆ ತಾಯಿಗಳ ಮುಂದೆ ಮಕ್ಕಳು ತಮ್ಮ ಬೇಡಿಕೆಗಳನ್ನು ಮಂಡಿಸುವ ಹಾಗೆ ತಮ್ಮ ತಮ್ಮ ಸುಖ ದುಃಖಗಳನ್ನು ಹೇಳಿಕೊಳ್ಳುವ ಹಾಗೆ ತಾವೂ ಈ ದೈವದ ಮುಂದೆ ಎಲ್ಲವನ್ನೂ ಹೇಳಿಕೊಂಡು ಅವನಿಂದ ಪರಿಹಾರ ಪಡೆಯಬಹುದು ಎನ್ನುವ ಆಂತರಿಕ ವಿಶ್ವಾಸ ತಮಗೆ ಬಂದ ವಿಪತ್ತು ದೂರಾಗುವುದು ದೇವರ ಕೃಪೆಯಿಂದ ಅದು ದೇವರ ಪವಾಡ ಎನ್ನುವ ಶ್ರದ್ಧೆ. ಹರಕೆ ಹೊತ್ತ ಬಳಿಕ ಅದನ್ನು ಪೂರೈಸದೆ ಹೋದರೆ ತಮಗೆ ನಿರಂತರ ಅನಿಷ್ಟಗಳು ಒದಗಿಬರುತ್ತವೆ ಎನ್ನುವುದು ಈ ಭಕ್ತರ ನಂಬುಗೆ.
‘ಮೈಲಾರಲಿಂಗ’ ಒಂದು ಅತ್ಯಂತ ವ್ಯಾಪ್ತಿಪಡೆದ ದೇವತೆ ಈ ದೇವತೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಭಕ್ತರಿಗೆ ವಿಶೇಷತಃ ಕರ್ನಾಟಕದ ಭಕ್ತರಿಗೆ ಒಂದು ಜೀವಂತ ದೈವೀಶಕ್ತಿ. ಈತನನ್ನು ಕುರಿತ ಆಚರಣೆಗಳಲ್ಲಿ ವೈವಿಧ್ಯ, ಭಿನ್ನತೆಗಳಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಧಾರವಾಡ ಜಿಲ್ಲೆಯ ದೇವರ ಗುಡ್ಡ ಅಥವಾ ಗುಡ್ಡದ ಮೈಲಾರ (ಇದನ್ನು ಕಲ್ಲು ಮೈಲಾರವೆಂದೂ ಹೇಳುತ್ತಾರೆ) ಮತ್ತು ಬಳ್ಳಾರಿ ಜಿಲ್ಲೆಯ ಮಣ್ಣ ಮೈಲಾರ ಈ ಎರಡು ಕ್ಷೇತ್ರಗಳಲ್ಲಿ ನಡೆಯುವ ಕೆಲವು ಆಚರಣೆಗಳಿಗೆ ಮಾತ್ರ ಇಲ್ಲಿಯ ವಿವೇಚನೆ ಸೀಮಿತವಾಗಿದೆ. 1 {೧. ಬಿದ್ದಾಡೆಪ್ಪ ಸೆದಿಯಪ್ಪ ನಾಗೂರ ವಯಸ್ಸು ೬೦ ನಿರಕ್ಷರಿ ತನ್ನ ೩೫ನೆಯ ವಯಸ್ಸಿನಿಂದಲೇ ಈ ಪವಾಡಗಳನ್ನು ಆಚರಿಸುತ್ತ ಬಂದ ವ್ಯಕ್ತಿ ಭಂಡಾರವೆಂದರೆ ಮೈಲಾರ ಯುದ್ಧ ಕಾಲದಲ್ಲಿ ಮೈಗೆ ಲೇಪಿಸಿಕೊಂಡ ಹಳದಿ ವರ್ಣದ ಹುಡಿ ಮತ್ತು ಪೀತ ವರ್ಣದ ಬಟ್ಟೆಯ ಸಂಕೇತ ಮತ್ತು ಇದು ವಜ್ರ ಕವಚ ಎಂದು ನಂಬಿಕೆ.}
ಯಾವುದೇ ಒಂದು ದೇವತೆಯನ್ನು ಕುರಿತಾದ ಆಚರಣೆಗಳು ಅತ್ಯಂತ ಕುತೂಹಲಕಾರಿಯಾಗಿದ್ದು ಆ ದೇವತೆಯನ್ನು ಕುರಿತು ಪುರಾಣ ಕಥೆ ಮತ್ತು ಆಚರಣೆಗಳಿಗೆ ಒಂದು ಗಾಢ ಸಂಬಂಧವಿದೆ. ಈ ಶಿಷ್ಟಪದ ಸಾಹಿತ್ಯದ ಪುರಾಣ ಕಾವ್ಯಗಳು ಯಾವುದೇ ಒಬ್ಬದೇವತೆಯ ಕಥಾನಕವನ್ನು ವಿವರಿಸಿ, ವೈಭವೀಕರಿಸಿ ತೃಪ್ತಿ ಹೊಂದುತ್ತವೆ. ಆದರೆ ಜನಪದರು ಅಂಥ ಕಥಾನಕದ ವಿವಿಧ ಸಂದರ್ಭಗಳನ್ನು ಮೌಖಿಕ ಪರಂಪರೆಯ ಜನಪದ ಪುರಾಣ, ಸಾಹಿತ್ಯ ಮತ್ತು ಸಾಹಿತ್ಯೇತರ ಆಚರಣೆ, ನಂಬಿಕೆಗಳ ಮೂಲಕ ಜೀವಂತಗೊಳಿಸುತ್ತಾರೆ. ಪುರಾಣ ಮತ್ತು ಜನಪದ ಆಚರಣೆಗಳಿಗಿರುವ ಈ ಗಾಢ ಸಂಬಂಧ ಕುರಿತು ಸಂಶೋಧನೆ ನಡೆಸಿದ ವಿದ್ವಾಂಸರ ಅಭಿಪ್ರಾಯಗಳು ಈ ದಿಸೆಯಲ್ಲಿ ಹೆಚ್ಚು ಪ್ರಸ್ತುತ ಮತ್ತು ಮಾರ್ಗದರ್ಶಿ.
ಲಾರ್ಡ್ ರಗ್ಲನ್, ಸ್ಟ್ಯಾನ್ಲೀ ಈಡ್ಗರ್ ಹೈಮ್, ಸ್ಟಿತ್ ಥಾಮ್ಸನ್, ಒಟ್ಟೂರ್ಯಾಂಕ, ಆಂದ್ರೂಲಾಂಗ್‌ರುತ್ ಬೆನೆಡಿಕ್ಟ್, ಮುಂತಾದವರ ವಿವೇಚನೆಗಳನ್ನು ಚರ್ಚಿಸಿದ ಮಿಲಿಯಮ್ ಬಾಸ್ಕಮ್ – ಮಿಥ್ ರಿಚ್ಯುಅಲ್‌ಥಿಯೊರಿ ‘ಪುರಾಣ ಆಚರಣಾ ಸಿದ್ದಾಂತ’ ಎನ್ನುವ ಒಂದು ಹೊಸ ತೀರ್ಮಾನ ನೀಡಿದ್ದಾನೆ.
‘ಆಚರಣೆಗೆ ಸಂಬಂಧಿಸಿದ (ಶಾಬ್ದಿಕ) ಕಥಾನಕವೇ ಪುರಾಣ’ ‘ಆಚರಣೆಯ ಶಾಬ್ದಕ ಭಾಗ ಪುರಾಣ ಆ ಕಥಾನಕವನ್ನೆ ಆಚರಣೆ ಅಭಿನಯಿಸುತ್ತದೆ. (ಪ್ರದರ್ಶಿಸುತ್ತದೆ).’ ಈ ಮುಂತಾದವರ ತೀರ್ಮಾನಗಳನ್ನು ಅನುಲಕ್ಷಿಸಿದ ಬಾಸ್ಕಮ್ ಮಾನವಶಾಸ್ತ್ರಜ್ಞರು ಪುರಾಣ ಮತ್ತು ಆಚರಣಾಗಳಿಗಿರುವ ಗಾಢ ಸಂಬಂಧಗಳ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಸೂಚಿಸುತ್ತಾನೆ. ಡಾ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಉಪಾಧ್ಯಾಯ ಅವರ ಇತ್ತೀಚಿನ ಭೂತಾರಾಧನೆ ಕುರಿತ ಸಂಶೋಧನೆಗಳು ಈ ದಿಸೆಯಲ್ಲಿ ಮಾರ್ಗದರ್ಶಿಯಾಗಿವೆ. ಪೌರಾಣಿಕ ಕಥಾನಕದ ಕೆಲವು ಸಂಗತಿಗಳು ಮೈಲಾರಲಿಂಗನನ್ನು ಕುರಿತು ಆಚರಣೆಗಳಲ್ಲಿ ಪಳೆಯುಳಿಕೆಯಾಗಿ ಉಳಿದಿರುವುದು ಕಂಡರೂ ಈ ಆಚರಣೆಗಳು ವಿವಿಧ ಜನಪದ ಸಮುದಾಯಗಳನ್ನು ತಲೆಮಾರಿನಿಂದ ತಲೆಮಾರಿಗೆ ಧಾರ್ಮಿಕ ಶ್ರದ್ಧೆಗೆ ಬದ್ದಗೊಳಿಸಿ ಒಂದು ಪ್ರಬಲ ಸಾಮಾಜಿಕ ಮಹತ್ವ ಪಡೆದಿರುವುದು ಮತ್ತು ಈ ದೇವತೆಯನ್ನು ಒಂದು ಜ್ವಲಂತ ಜಾಗೃತ ಆರಾಧನಾ ಶಕ್ತಿಯಾಗಿ ಮುನ್ನಡೆಸಿರುವುದು. ಇವುಗಳನ್ನು ಕುರಿತು ಆಳವಾದ ಸಂಶೋಧನೆಗೆ ಅಧ್ಯಯನಕ್ಕೆ ಸವಾಲಾಗಿವೆ.
ಮಣಿ ಮಲ್ಲಾಸುರರು ಜನರಿಗೆ ಮಿತಿಯಿಲ್ಲದ ಉಪಟಳ ಉಂಟುಮಾಡಿ ಲೋಕಕಂಟಕರಾದಾಗ ದೇವತೆಗಳ ಪ್ರಾರ್ಥನೆಗೆ ಅನುಗುಣವಾಗಿ ಶಿವನು ಮಾರ್ತಾಂಡ ಭೈರವನಾಗಿ ತನ್ನ ಜಡೆಯಿಂದ ಮೂಡಿದ ಮಹಾಮಾಯೆಯೊಡಗೂಡಿ ವಿಲಕ್ಷಣ ವೇಷಧರಿಸಿ ಗುಡುಗಿದಾಗ ಅವನ ಕೋಪದಿಂದ ನಾಯಿ, ವೀರಭದ್ರ, ಜಯನಂದಿ ಹೆಗ್ಗಯ್ಯ (ಹರಿ) ಇತ್ಯಾದಿ ಏಳುಕೋಟಿ ಸೈನ್ಯದೊಡನೆ ತಾನು ಕುದುರೆಯೇರಿ ರಣವಾದ್ಯಗಳನ್ನು ಮೂಳಗಿಸಿ ಮಣಕಾಸುರ ಮಲ್ಲಾಸುರರ ಮೇಲೆ ಯುದ್ಧ ಸಾರುತ್ತಾನೆ. ಅಖಂಡ ಹನ್ನೊಂದು ದಿನ ಭೀಕರ ಕದನ ಮತ್ತು ರಕ್ಕಸರ ಸಂಹಾರ ಮಾಡುತ್ತಾನೆ. ಮಲ್ಲಾಸುರನನ್ನು ತನ್ನ ಪಾದದಲ್ಲಿ ಸೇರಿಸಿಕೊಂಡು ತಾನು ಮಲ್ಲಾರಿಯಾದರೂ ತನ್ನನ್ನು ‘ಮೈಲಾರಿ ಲಿಂಗ’ ಮೈಲ್ಲಾರಿ ಲಿಂಗ ಎಂದು ದರೆಯುವಂತೆ ಭಕ್ತರಿಗೆ ಆದೇಶ ನೀಡುತ್ತಾನೆ. ಅಂದಿನಿಂದ ಮೈಲಾರಲಿಂಗ ಆರಾಧ್ಯದೇವತೆಯಾಗಿ ಪೂಜೆಗೊಳ್ಳುತ್ತ ಬಂದಿದ್ದಾನೆ. ಇದು ಈ ಕ್ಷೇತ್ರದ ಸ್ಥಳಪುರಾಣ. ಮೈಲಾರನ ಭಕ್ತರು ಹೇಳುವ ‘ಒಡಬು’ಗಳಲ್ಲಿ ಈ ಬಗೆಯ ಕಥಾನಕದ ಚೆದುರಿದ ರೂಪಗಳನ್ನು ಕಾಣುತ್ತೇವೆ. ಆದರೆ ಈ ದೇವತೆಯ ಬಗೆಗಿರುವ ಆಚರಣೆಗಳಲ್ಲಿ ಮಾತ್ರ ಮೈಲಾರ ದೇವತೆಯ ಕರ್ಥಾನಕದ ವಿಸ್ಮಯಕಾರಿ ರುದ್ರ ಭೀಕರ ಸ್ಥೂಲಾಂಶಗಳನ್ನು ಗುರುತಿಸಬಹುದಾಗಿದೆ. ಪ್ರತಿ ವರ್ಷದ ಆಶ್ವೀಜ ಬಹುಳ ನವಮಿ ದೇವರ ಗುಡ್ಡ (ಕಲ್ಲುಗುಡ್ಡ)ದಲ್ಲಿ ಮತ್ತು ಪ್ರತಿ ವರ್ಷ ಮಾಘ ಪೂರ್ಣಿಮೆಯಂದು ಸಣ್ಣಮೈಲಾರದಲ್ಲಿ ಮೈಲಾರಲಿಂಗನ ವಿಶೇಷ ಉತ್ಸವ ಜರುಗುತ್ತದೆ. ಈ ಎರಡು ಸಂದರ್ಭಗಳಲ್ಲಿ ವಿಶೇಷ ಬಗೆಯ ಆಚರಣೆಗಳು ಅನಾವರಣಗೊಳ್ಳುವುದನ್ನು ಕಾಣಬಹುದು.
ಆಚರಣೆಗಳನ್ನು (ಅಭಿನಯಿಸುವ) ಪ್ರದಶಿಸುವ ವ್ಯಕ್ತಿಗಳಲ್ಲಿ ಎರಡು ಬಗೆ
ಒಂದು ಸೇವಾಕಾರರು. ಎರಡು ವೀರಗಾರರು. ಕುದುರಿಕಾರರು ಎನ್ನುವ (ಮೈಲಾರಿ ಎನ್ನುವ ನಂಬಿಕೆ) ಇನ್ನೊಂದು ಬಗೆ ಇದ್ದರೂ ಅವರು ಸೇವಾಕಾರರಲ್ಲಿಯೇ ಸೇರುತ್ತಾರೆ. ಸೇವಾಕಾರರು ಕೈಕೊಳ್ಳುವ ಸೇವೆಯೆಂದರೆ ಮಾರ್ತಾಂಡ ಭೈರವನ ಜೊತೆ ಹೊರಟ ಸೈನ್ಯದ ಸಂಕೇತವಾದ ಆಚರಣೆ. ಈ ಸೇವಾಕಾರರ ಆಚರಣೆಗಳಲ್ಲಿ ಮುಖ್ಯವಾದವು.
ಕುದರಿ ಸೇವಾ, ಕಾಳಿ (ಕಹಳೆ) ಸೇವಾ, ಖಡ್ಗದ ಸೇವಾ, ನಿಶಾನಿಸೇವಾ, ಕೊಡಿಸೇವಾ, ಚವರಿಸೇವಾ, ಪಾಲ್ಕಿ ಸೇವಾ, ಕಾಯಕೋಲು (ದೀವಟಿಗೆ)ಸೇವಾ, ಹೂಗಾರ ಸೇವಾ, ದೋಣಿ ಸೇವಾ, ಒಗ್ಗಸೇವಾ, ಸ್ತೋತ್ರಸೇವಾ, ಎಲಿ ಚಂಚಿ ಸೇವಾ, ಪಾದರಕ್ಷೆಸೇವಾ, ಬೆತ್ತದ ಸೇವಾ, ಜಜೂರಿ (ಚೆಲುಮೆ) ಸೇವಾ ಇತ್ಯಾದಿ. ಈ ಬಗೆಯ ಸೇವಾಕಾರರಲ್ಲಿ ನಾಯಿಯಂತೆ ಬೊಗಳುವ ಮತ್ತು ಕಾಲಿಗೆ ಚಾಟಿ (ಬಾರಕೋಲು) ಗಳಿಂದ ಬಡಿದುಕೊಳ್ಳುತ್ತ ಕುಣಿಯುವರು ಇದ್ದರೂ ಅವರೆಲ್ಲ ಕುದುರೆ ಸೇವಾಕಾರರಲ್ಲಿ ಸೇರುತ್ತಾರೆ. “ಸ್ತೋತ್ರಸೇವೇ”ಯಲ್ಲಿ ಗೊರವರು ಮೈಲಾರನನ್ನು ಕುರಿತ ‘ಇಂದು ನಮ್ಮನಾಗಿ ಸ್ವಾಮಿ ಬಂದಾ ಮೈಲಾರಲಿಂಗಾ’ ಎಂದು ಮುಂತಾಗಿ ಹಾಡುತ್ತ ಹೋಗುತ್ತಾರೆ. ದೋಣಿಸೇವಿ ವಗ್ಗ ಸೇವೆಗಳಲ್ಲಿ ಸೇವಾಕಾರರು ಕುಣಿಯುತ್ತ ಸಕ್ಕರೆ, ಬೆಲ್ಲ ಬಾಳೆಹಣ್ಣುಗಳಿಂದ ತುಂಬಿಸಿದ ದೋಣಿಗಳಿಗೆ ಬಾಯಿಹಚ್ಚಿ ಅದನ್ನು ಸೇವಿಸುತ್ತಾರೆ. ಶಿವನು ಭೈರವ ಮಾರ್ತಾಂಡನಾಗಿ ಗೊರವನಾಗಿ ದೈತ್ಯ ಸಂಹಾರ ಮಾಡಿದ ಕಾಲದಲ್ಲಿ ದೋಣಿಗೇ ಬಾಯಿ ಹಚ್ಚಿ ಹಸಿವು ಹಿಂಗಸಿ ಕೊಂಡುದರ ಸಂಕೇತವಾಗಿ ಈ ಆಚರಣೆ ಎಂದು ಹೇಳಲಾಗುತ್ತದೆ.
ವೀರಗಾರರಲ್ಲಿ ಮುಖ್ಯರು ‘ಕಂಚಾವೀರ’ ಕಂಚೀವೀರ ಅಥವಾ ಪಂಚವೀರ ಮತ್ತು ಕಾರ್ಣೀಕದವರು.
ಕಂಚಾವೀರರು ಸ್ವಾಮಿಯ ಬೆವರಿನಿಂದ ಹುಟ್ಟಿದವರೆಂದು ನಂಬಿಕೆ ‘ಕಂಚಾವೀರರು’ ಕೈಕೊಳ್ಳುವ ಆಚರಣೆಗಳಲ್ಲಿ ಪ್ರಮುಖವಾದವು ಸರಪಣಿ ಪವಾಡ, (ಶಸ್ತ್ರಪವಾಡ) ಮಿಣಿ ಪವಾಡ, ಮುಳ್ಳಿನ ಪವಾಡ, ಗೂಟದ ಪವಾಡ, ಹಸ್ತಪವಾಡ ಅಥವಾ ಕೈಪವಾಡ ಪವಾಡಗಳು ಎರಡು ಹಂತಗಳಲ್ಲಿ ನೆರವೇರುತ್ತವೆ. ವೀರಗಾರರಲ್ಲಿ ಎರಡು ಬಗೆಯ ವೇಷದ ಕರಡಿಗೊರವ, ಸರಪಣಿಗೊರವ ಗೊರವರು ಮುಂದಾಳಾಗಿರುತ್ತಾರೆ. ಪವಾಡಗಳು ನಡೆಯುವುದನ್ನು ದೇವಾಲಯದ ನಗಾರಿ ಜಾಗಟೆಗಳನ್ನು ಬಾರಿಸಿ ಸೂಚಿಸಲಾಗುತ್ತದೆ. ವೀರಭದ್ರನ ಪರಂಪರೆಯ ಪುರವಂತರ ಮಾದರಿಯ ವೇಷ ಹಾಕಿಕೊಂಡ ವೀರಗಾರರು ತಲೆಯಲ್ಲಿ ರಣಗೂದಲು, ಕೊರಳಲ್ಲಿ ರುಂಡಮಾಲೆ, ಮುದ್ರೆಗಳು, ನಿಲವಂಗಿ, ಕೆಂಪುದಡಿದೋತರ, ನಡವಿಗೆ ಸೆಲ್ಲೆ, ಹೆಗಲಮೇಲೆ ದಡಿಡೋತ್ತರ, ಮುಖದ ತುಂಬ ವಿಭೂತಿ ಭಂಡಾರಧಾರಣಿ, ಕೈಯಲ್ಲಿ ಖಡ್ಗ ಒಡಬುಗಳ ಮೂಲಕ ಮೈಲಾರ ಗುಡ್ಡದಯ್ಯನ ಮಹಿಮೆಗಳನ್ನು ಆರ್ಭಟಿಸಿ ಹೇಳುತ್ತಹೋದಂತೆ ಕಂಚೇವೀರರು ಬಗನಿಗೂಟವನ್ನು ಕಾಲಿನ ಹಿಮ್ಮಡವನ್ನು ಛೇದಿಸುವಂತೆ ಬಡಿದುಕೊಳ್ಳುತ್ತಾರೆ ಗೂಟವನ್ನು ಕಡೆಹಾಯಿಸಿ ಕಿತ್ತ ತೂತಿನಲ್ಲಿ ತೀರ್ಥ, ಹಣ್ಣು ತುಪ್ಪಗಳಿಂದ ನುಣುಪುಗೊಳಿಸದೆ ಮಿಣ, ಮುಳ್ಳಿನ ಕಂಟ ಹೀಗೆ ಒಂದೊಂದನ್ನೇ ಆಚೆಯಿಂದ ಪೋಣಿಸಿ ಈಚೆ ಏಳೆದುಕೊಳ್ಳುತ್ತಾರೆ. ಕಾಲಲ್ಲಾದ ಗಾಯಕ್ಕೆ (ವೀರಗಾರರು ‘ಕುರುಹು’ ಎಂದು ಕರೆಯುತ್ತಾರೆ) ಬಂಡಾರತುಂಬಿ ಬಿಳಿ ಅರಿವೆಯ ಪಟ್ಟಕಟ್ಟಲಾಗುತ್ತದೆ. ಈ ಪವಾಡಗಳಲ್ಲಿ ಅತ್ಯಂತ ಮುಖ್ಯವಾದುದು ಕೈಪವಾಡ. ಅಂಗೈಯಲ್ಲಿ ದೀಪವನ್ನು ಉರಿಸಲಾಗುತ್ತದೆ. ದೀಪ ಉರಿದಂತೆಲ್ಲ ಅಂಗೈಸುಟ್ಟರೂ ವೀರಕಾರ ಸ್ವಾಮಿಯ ಮಹಿಮೆ ಬಿತ್ತರಿಸುವ ಒಡಬು ಉದ್ಘೋಷಗಳಲ್ಲಿ ಪರವಶನಾಗಿರುತ್ತಾನೆ. ಒಂದು ಬಗೆಯ ದರುವುದುಂಬಿದ ವೀರಾವೇಶದ ಮನಸ್ಸಿನ ಸ್ಥಿತಿ. ದೀಪ ಉರಿದ ಬಳಿಕ ಮತ್ತೆ ಅಲ್ಲಿ ಭಂಡಾರ ಲೇಪನ ಮತ್ತೆ ಏಳುಕೋಟಿ ಉದ್ಘೋಷ ಇವೆಲ್ಲವುಗಳಿಗಿಂತ ಅತಿ ಭೀಕರವಾದ ಕೇಳಿದರೇ ಮೈನಡುಗುವ ಮತ್ತು ಇಂದು ಅದರ ಆಚರಣೆ ನಿಂತುಹೋಗಿದೆಯೆಂದು ಹೇಳಲಾಗುವ ‘ಶಿರಸ್‌ಪವಾಡ’ ಇಂದಿಗೆ ಸುಮರು ೨೦೦ ವರ್ಷದ ಹಿಂದೆ ಇಂಥ ಪವಾಡ ನಡೆಯುತ್ತಿದ್ದುದನ್ನು ತಮ್ಮ ಅಜ್ಜ ಹೇಳಿದ್ದನೆಂದು ಇಂದಿನ ಕಂಚಾವೀರ ಹೇಳುತ್ತಾನೆ.
ವೀರಕಾರ ಸ್ವಾಮಿಯ ಎದುರು ವೀರಾವೇಶದಿಂದ ಕುಣಿಯುತ್ತ ತನ್ನ ಕೈಯಲ್ಲಿರುವ ಖಡ್ಗದಿಂದ ತನ್ನ ಶಿರಸ್ಸು ಕತ್ತರಿಸಿ ತಟ್ಟೆಯಲ್ಲಿಟ್ಟು, ಮಂಗಳಾರತಿಯ ಜೊತೆ ಆ ತಟ್ಟೆಯನ್ನೂ ಬೆಳಗಿ ಮತ್ತೆ ತನ್ನ ದಿಡಕ್ಕೆ ‘ಶಿರ’ ಹಚ್ಚಿ ಅದಕ್ಕೆ ಭಂಡಾರ ಲೇಪಿಸಿಕೊಳ್ಳುತ್ತಿದ್ದನಂತೆ. ದೈತ್ಯಸಂಹಾರ ಕಾಲದಲ್ಲಿ ನಾನಾ ಬಗೆಯ ರುದ್ರ ಭೀಕರ ವಿಲಕ್ಷಣ ವೇಷಧರಿಸಿದ ಮಾರ್ತಾಂಡ ಭೈರವನ ಸಂಹಾರಕಾರ್ಯ ಎಷ್ಟು ಉಗ್ರವಾಗಿತ್ತು ಮತ್ತು ಅದರಲ್ಲಿ ಪಂಚವೀರ ಕಂಚೇವೀರರು ಎಂಥ ಶೌರ್ಯ ಸಾಹಸಗಳಿಂದ ಹೋರಾಡಿದರು ಎನ್ನುವುದರ ಸಂಕೇತ ಈ ಬಗೆಯ ಆಚರಣೆಗಳಲ್ಲಿ ಹುದುಗಿದೆ ಎಂದು ನಂಬಲಾಗುತ್ತದೆ. ಕಾರಣಿಕ ಅಥವಾ ‘ಕಾರ್ಣಿಕ’ ಮೈಲಾರಲಿಂಗನನ್ನು ಕುರಿತು ಆಚರಣೆಗಳಲ್ಲಿ ಇಂದಿಗೂ ಅತ್ಯಂತ ಪ್ರಭಾವಶಾಲಿಯಾಗಿರುವ ಆಚರಣೆ. ‘ಕಾರಣಿಕ’ ಹೇಳುವ ಮನೆತನಕ್ಕೆ ಕಾರ್ಣಿಕದವರ ಮನೆ ಎಂದು, ಕಾರಣಿಕಹೇಳುವ ಅಥವಾ ಸಾರುವ ವ್ಯಕ್ತಿಗೆ ‘ಕಾರಣಿಕ ಗೊರವಪ್ಪ’ ಕಾರ್ಣಿಕಗೊರಪ್ಪ ಎಂದು ಕರೆಯಲಾಗುತ್ತದೆ.೧ {೧. ನಾನು ನೋಡಿದ ಇಂಥ ರ್ಕಾಕ ಸಂದರ್ಭದಲ್ಲಿ ನೆರೆದ ಜನಸಂಖ್ಯೆ ಹತ್ತರಿಂದ ಹದಿನೈದು ಸಾವಿರದವರೆಗೆ}
ಮಾರ್ತಾಂಡ ಭೈರವನ ಪಾಶುಪತಾಸ್ತ್ರ ಮಲ್ಲಾಸುರನನ್ನು ಸೀಳುವ ಹಂತದಲ್ಲಿ ಅವನು ತಕ್ಷಣ ‘ಮಾರ್ತಾಂಡ’ನ ಪಾದಗಳನ್ನು ತಬ್ಬಿ ತನ್ನನ್ನು ಕರುಣಿಸುವಂತೆ ಕೇಳಿದ. ಭೀಕರ ಕದನ ಮಧ್ಯೆ ಎದ್ದು ನಿಂತ ಶಿವ ಮಲ್ಲಾರಿಯನ್ನು ತನ್ನಲ್ಲಿ ಐಕ್ಯಮಾಡಿಕೊಂಡಾಗ ನೆರೆದ ಸೈನ್ಯವೆಲ್ಲ ಏಳುಕೋಟಿ, ‘ಏಳುಕೋಟಿ ಏಳುಕೋಟಿಗೋ’ ‘ಉಘೇ ಚಾಂಗಮಲೋ ಚಾಂಗಮಲೋ’ ಎಂದು ಉದ್ಘೋಷಿಸಿತು. ಮಣಿಚೂಲ ಪರ್ವತದ ತುದಿಯಲ್ಲಿನಿಂತ ‘ಮೈಲಾರಿಲಿಂಗ’ ತನ ಕೈಲಿದ್ದ ‘ಶಿವಧನಸ್ಸನ್ನು ಕೇಂಕರಿಸಿ’ ಸದ್ದುಸದ್ದಲೇ ಪರಾಕ್, ಅಂದನಂತೆ ತಕ್ಷಣವೇ ನೆರೆದ ‘ಏಳು ಕೋಟಿ’ ಜನವೂ ಸ್ತಬ್ದ. ಆಗ ಮಲ್ಲಾರಿಲಿಂಗನ ವಾಣಿ ಮೊಳಗಿತಂತೆ ನಾನು ಮಲ್ಲರಿಗೆ ಅರಿಯಾದರೂ ಆ ಮಲ್ಲಾಸುರ ನನ್ನಲ್ಲಿಯೇ ಬೆರೆತಿದ್ದಾನೆ. ಆದ್ದರಿಂದ ಇಂದಿನಿಂದ ಎಲ್ಲರೂ ‘ಮಲ್ಲಾರಿಲಿಂಗ’ ಎಂದೇ ಕರೆಯಿರಿ. ಈ ವಾಣಿಯ ಜೊತೆಗೇ ಏಕಕಂಠದಿಂದ ಏಳುಕೋಟಿಗೋ ಮಲ್ಲಾರಿಯ ಏಳುಕೋಟಿಗೋ ಎಂದು ಕೋಟಿಕಂಠಗಳ ಉಗ್ಗಡಣೆ ಹೀಗೆ ಮೊಳಗಿದ ಮಲ್ಲಾರಿ ಲಿಂಗನ ವಾಣಿ, ಭಕ್ತರನ್ನು ಘೋಷಿಸುವ, ರಕ್ಷಿಸುವ, ಮಳೆ ಬೆಳೆಗಳನ್ನು ನೀಡುವ ದೇವವಾಣಿ ಎಂದೆ ಜನಪದರ ಅಚಲ ಶ್ರದ್ಧೆ. ಈ ಶ್ರದ್ಧೆಯ ಫಲವಾಗಿ ಅಂದಿನ ಆ ಸಂದರ್ಭವನ್ನು ವೈಭವ ಉತ್ಸಾಹಗಳಿಂದ ಆಚರಿಸುತ್ತ ಬರಲಾಗಿದೆ.
ಕಾರಣಿಕಕಟ್ಟಿ ಎಂದೇ ಒಂದು ಸ್ಥಳ ಇದಕ್ಕಾಗಿ ಮೀಸಲು. ಕಾರಣಿಕಗೊರವ ಕಟ್ಟುನಿಟ್ಟಿನ ವೃತಾಚರಣೆ ಪರಿಪಾಲಿಸುತ್ತಾನೆ. ೯ ದಿನಗಳವರೆಗೆ ಈತನಿಗೆ ನಿತ್ಯಸ್ನಾನ. ಮೈಲಾರ ಧ್ಯಾನ ಮತ್ತು ನಿರಾಹಾರ ಕಡ್ಡಾಯ. ದಸರೆಯ ಖಂಡೇ ಪೂಜೆ ಅಥವಾ ಆಯುಧ ಪೂಜೆಯ ದಿನವೇ ಕಾರ್ಣೀಕದಿನ. (ಮಣ್ಣು ಮೈಲಾರದಲ್ಲಿ ಪ್ರತಿಮಾಘ ಭಾರತ ಹುಣ್ಣಿಮೆಯ ಅವಧಿ) ಕಾರಣಿಕದ ದಿನ ಕಾರ್ಣಿಕಗೊರವ ಸುಮರು ೩೦ ಫೂಟು ಉದ್ದ ೩ ಇಂಚು ವ್ಯಾಸ ಇರುವ ಬಿಲ್ಲು ಪೂಜೆ ಮಾಡುತ್ತಾನೆ. ಮಲ್ಲಾಸುರನ ಸಂಹಾರಕಾಲಕ್ಕೆ ಮಲ್ಲಾರಲಿಂಗ ಈ ಬಿಲ್ಲನ್ನು ಬಳಸಿದನೆಂದು ಭಕ್ತರ ನಂಬಿಕೆ. ಪೂಜೆಯ ಬಳಿಕ ಅಷ್ಟೇ ಗಾತ್ರದ ಪೂಜೆಗೊಂಡ ಮತ್ತೊಂದು ಬಿಲ್ಲನ್ನು ಗೊರವ ಹೊತ್ತು ಮಲ್ಲಾರಿಲಿಂಗನ ಸಕಲವೈಭಬಗಳೊಂದಿಗೆ ಎಲ್ಲ ಬಗೆಯ ಸೇವಾಕಾರರು ಅರ್ಚಕರು ಸಕಲ ವಾದ್ಯಗಳು ಇತ್ಯಾದಿ ಕಾರಣಿಟ್ಟೆಗೆ ಬರುತ್ತಾನೆ. ಸುತ್ತಲೂ ಅಸಂಖ್ಯಾತ ಜನಸಮಟ್ಟೆ. ಬಿಲ್ಲನ್ನು ಒಂದು ಮಧ್ಯಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಒಂದು ನಿಮಿಷ ಎರಡು ನಿಮಿಷ, ಅಂತಃಪ್ರೇರಣೆ ಚಿಮ್ಮಿತು ಎನ್ನುವ ಹಾಗೆ ಕಾರ್ಣಿಕಗೊರವ ಮಿಂಚಿನ ವೇಗದಲ್ಲಿ ಸರಸರನೆ ಬಿಲ್ಲು ಏರುತ್ತಾನೆ. ಬಿಲ್ಲು ತುದಿಯವರೆಗೆ ಏರಿ ತೊಡರುಗಾಲು ಹಾಕಿ ನಿಂತು ಒಮ್ಮೆಸುತ್ತಲೂ ನೋಡಿ ‘ಸದ್ದಲೇ ಪರಾಕ್’ (ಪರಾಕ್ ಎಂದರೆ ದೇವರಿಗೆ ಜಯಕಾರ ಎಂದು ಅರ್ಥ) ಎಂದು ಕೂಗುಹಾಕುತ್ತಾನೆ. ಎಲ್ಲ ಸ್ತಬ್ದ. ಉಸಿರಾಟನಿಂತ ಮೌನ, ಆಕ್ಷಣವೇ ಕಾರಣೀಕಗೊರವನ ‘ಆಕಾಶಕ್ಕೆ ಸಿಡ್ಲ ಬಡೀತಲೇ ಪರಾಕ್’ ‘ಕಲಕಮಲಕಲೇ ಪರಾಕ್’ ಇತ್ಯಾದಿ ವಾಣಿ. ಈ ಶಬ್ದಗಳು ಕಾರಣಿಕನ ಬಾಯಿಂದ ಹೊಮ್ಮಿದುವೋ ಇಲ್ಲವೋ ಎನ್ನುತ್ತಿದ್ದಂತೆ ಅಲ್ಲಿಂದಲೇ ಆ ಗೊರವ ಕೈಬಿಟ್ಟು ಕೆಳಗೆ ಧುಮುಕುತ್ತಾನೆ. ಬಿಲ್ಲಿನ ಸುತ್ತೂ ನಿಂತ ಭಕ್ತರು ಆತನನ್ನು ಅನಾಮತ್ತಾಗಿ ಎತ್ತಿಕೊಳ್ಳುತ್ತಾರೆ. ‘ಏಳುಕೋಟಿ’ ಉದ್ವೋಷ ಸುತ್ತಲೂ ಮೊಳಗುತ್ತದೆ. ನೆರೆದ ಜನ ತಮ್ಮ ಸ್ಥಳಗಳಿಗೆ ಮರಳುತ್ತಾರೆ. ಏಕೆಂದರೆ ಕಾರ್ಣಿಕ ಕೇಳಿ ಜಾತ್ರೆ ಬಿಡಬಾರದು ಎನ್ನುವ ನಂಬಿಕೆ.
ಕಾರಣಿಕ ದೇವವಾಣಿ ಎನ್ನುವ ನಂಬಿಕೆ. ಕಾರಣಿಕ ವಾಣಿ ಆದ ಕೂಡಲೇ ಅದನ್ನು ಕುರಿತು ಜನ ಅದರ ಅರ್ಥವಿವರಣೆಯಲ್ಲಿ ತೊಡಗುತ್ತಾರೆ. ತಮತಮಗೆ ತಿಳಿದ ರೀತಿಯಲ್ಲಿ ಆ ವರ್ಷದ ಭವಿಷ್ಯದ ಸೂಚನೆ ಅದರಲ್ಲಿ ಅಡಗಿದೆಯೆಂದು ಭಾವಿಸುತ್ತಾರೆ. ಅಂಥವುಗಳಲ್ಲಿ ಕೆಲವು ಅರ್ಥವಿವರಣೆಗಳನ್ನು ಇಲ್ಲಿ ನಮೂದಿಸಬಹುದು.
ಆಕಾಶಕ್ಕೆ ಸಿಡ್ಲು ಬಡೀತಲೇ ಪರಾಕ್ – ವಿಪರೀತ ಮಳೆ, ಕಲಕಮಲಕಲೇ ಪರಾಕ್ – ಅನೀತಿ ಹೆಚ್ಚುತ್ತದೆ. ಹಿರೇರು ಕೀರೆರು, ದೊಡ್ಡವರು ಸಣ್ಣವರು ಅನ್ನೋದು ಪ್ರೀತಿ ಗೌರವ ಹಾಳಾಗ್ತವೆ. ಅಂಬ್ಲಿ ಹಳಿಸ್ತಲೇ ಪರಾಕ್ – ಅನ್ನ ಅಧಿಕ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.