Friday, November 11, 2011

ಕಾರಣಿಕ ಕವಿತೆಗಳು - 2 ಚನ್ನಪ್ಪ ಅಂಗಡಿ

ಕಾರಣಿಕ
ಚನ್ನಪ್ಪ ಅಂಗಡಿ   
ನುಡಿ ನುಡಿ ನಿಜವ ಬಿಲ್ಲನೇರಿದ ಗೊರವನೆ
ಮುಗಿಲೆಡೆಗೆ ಬೇಡ ನೆಲದೆಡೆಗೆ ದಿಟ್ಟಿತೂರು
ಬಾರುಕೋಲಿನೇಟು ಶಿಬಾರಗಟ್ಟಿಯ ಸೀಳಿ
ಸುಲಿದ ಚರ್ಮವ ಸುತ್ತಿಟ್ಟ ಅಣ್ಣ ತಮ್ಮಂದಿರ ತಡಿಕೆಗಳಲಿ
‘ಸದ್ದಲೇ’ ಸದ್ದಿಗೆ ಹಸಿದ ಕಿವಿಗಳು ಬಾಯ್ದೆರೆದು
ಪರಿಸೆಯ ಪರಿಹರಿಸೋ ಹೊರೆಹೊತ್ತ ಗೊರವನೆ
ಕಾಕುಳ್ಳಿನ ಕಾವಿಗೆ ಊರ ಹಾಲುಕ್ಕುತ್ತದೆ
ಬಸರಿ ಗಿಡದಲಿ ಹಕ್ಕಿ ಗುಟುಕಿಕ್ಕುತ್ತದೆ
ನಿನಗಿಲ್ಲ ತುತ್ತನ್ನ, ನೀನೊಬ್ಬನೇ ಭಿನ್ನ
ಎದ್ದು ಬಿದ್ದು ಹೋಗುವ ಮಾತಲ್ಲ ಡೆಂಕಣಮರಡಿಯ ಸೊಲ್ಲ
ದೇಹಿಯನ್ನುವ ದೇಹಿ ನಾಲಿಗೆಯಲಿ ಧೇನಿಸು ದಾಹವ
ರಥ ಬರುವ ಹೊತ್ತು ಮೌನ ಮುರಿಯೊ ಭಕ್ತ
ಹಿಗ್ಗಲಯ್ಯ ದೋಣಿ ಮಗ್ಗುಲಿಗೆ ಹುರುಳಿ ಗುಗ್ಗರಿ
ಹಗೆಯೇಕೆ ಹೊಗೆಯೇಕೆ ಜೋಳದಾ ಕಿಚಡಿ
ಹೊಟ್ಟೆ ತುಂಬಿಸು ದೈವ, ಮೈಲಾರಲಿಂಗದೇವ
ತಪ್ಪಿದೊಡೆ ಮುಂದಿದೆ ಕರಾಮತ್ತಿಗೆ ‘ಕಡುಬಿನ’ ಕಾಳಗ
ವಧೆಗಾಗಿ ಎಣ್ಣೆ ಬಳಿಯಲಿ ಮಣಿ ಮಲ್ಲಾಸುರನ ಬಳಗ

ನೂರು ಕೋಟಿಯ ಪರಿಸೆಗೆ ಏಳುಕೋಟಿಯೆಲ್ಲೆಡು?

ಏಳುಮಲೆ ತುಂಬಿ ತುಳುಕಲಿ ತಿರುಮಲನ ಹುಂಡಿ
ಚಿಕ್ಕಯ್ಯ ದೊಡ್ಡಯ್ಯರಿಗೆ ತುತ್ತಿಕ್ಕುವ ಭಾಗ್ಯ
ಗಂಗಿ ಮಾಳವ್ವಗೆ ತರಲಿ ತವರು ವೈರಾಗ್ಯ
ತುಂಗೆಯ ನೀರು ಸ್ವಯಂಭೂಲಿಂಗನ ತಣಿಸಲಿ
ಕೋರಿಯಂಗಿ ಕುಲಾಯಿ ಬಾಳ್ವೆ ಬೆಚ್ಚಗಾಗಿಸಲಿ
ಸಪ್ತಮಾತೃಕೆಯರು ಸರ್ವದೆಸೆಗೂ ಜೋಗುಳಿಸಲಿ
ಕಾಸೆಯವೀರರ ಪವಾಡ ಗಾಳಿಯಲಿ ಪವಡಿಸಿ
ಮಾಳಿಯೆದೆ ಹಾಲೊಂದು ಕ್ಷಣ ಹನಿಸದೆ ಹೆಪ್ಪುಗಟ್ಟಿ
ಡಮರು ಗಂಟೆ ಪಾರಿಯ ದನಿಗೆ ಬಸಿದ ಹಣ್ತುಪ್ಪದ ಗಸಿ
ಭಕ್ಷದ ಭಂಡಾರ ಹುಡಿಯೆದ್ದು ಹುಲಿದೊಗಲಿಗಡಂ
ಸವೆಯುವ ಪಾದುಕೆಗಳೆರಡು ನಿಂತ ನೆಲವವಡುಗಚ್ಚಿ
ಕಾಯ್‌ಕೋಲು ದೀವಟಿಗೆಯ ಕಣ್ಣೆವೆಗಳ ಬಿಗಿದಪ್ಪಿ
‘ಚಾಂಗಭಲೋ ಚಾಂಗಭಲೊ’ ಎನ್ನುತ್ತಿವೆ ದೇವ, ಮನದಲಿ.
ಹನ್ನೊಂದಕಿನ್ನೊಂದು ಸೇರಿಸುವ ದೈವವೆಲ್ಲೆಲ್ಲೂ
ಕಲಬೆರಕೆಯ ತನುಮನಕೆ ಪರಶಿ ಬಟ್ಟಲೊಡ್ಡು
ಖಂಡತುಂಡ ಹೇಳಿಬಿಡು ಭಂಡಾರದೊಡೆಯ
ಕೈಗಳನ್ನೆತ್ತಿ ಪರಾಕು ಪರಾಕೆನ್ನುವೆ
ವರ್ತಮಾನದ ಮಾತೃಕೆಯುದರದಿ ಪಂಚಭೂತಗಳ ಪಾಡೇನೆಂದು?
ಟಿಪ್ಪಣಿ:
ಕಾರಣಿಕ-ವರ್ಷಕ್ಕೊಮ್ಮೆ ಹೇಳುವ ಭವಿಷ್ಯವಾಕ್ಯ, ಡೆಂಕಣಮರಡಿ-ಕಾರಣಿಕ ನಡೆಯುವ ಬಯಲು, ಮಣಿ ಮಲ್ಲಾಸುರ, ಮೈಲಾರಲಿಂಗನು ವಧಿಸಿದ ರಾಕ್ಷಸ, ಚಿಕ್ಕಯ್ಯ ದೊಡ್ಡಯ್ಯ-ಅವನ ಮಕ್ಕಳು, ಗಂಗಿ ಮಾಳವ್ವ-ಅವನ ಹೆಂಡತಿ, ಕಾಸೆಯವೀರರು-ಕಂಚಾವೀರರೆಂಬ ಭಕ್ತರು, ಭಕ್ಸ-ಭಂಡಾರದ ಚರ್ಮದ ಚೀಲ, ಕಾಯ್‌ಕೋಲು-ದೀವಟಿಗೆಗೆ, ಎಣ್ಣೆಯುಣಿಸುವ ಕಿರುಪಾತ್ರೆ, ಪರಶಿ ಬಟ್ಟಲು (ದೋಣಿ): ಗೊರವರ ಕೈಯಲ್ಲಿರುವ ಪವಿತ್ರ ಪಾತ್ರೆ
(ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ  ಮೆಚ್ಚುಗೆ ಗಳಿಸಿದ ಕವಿತೆ : 21-11-2010 ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.