Showing posts with label ವಿಶ್ವವಿದ್ಯಾಲಯಗಳು. Show all posts
Showing posts with label ವಿಶ್ವವಿದ್ಯಾಲಯಗಳು. Show all posts

Saturday, July 27, 2013

‘ಅನಂತನ್‌’ ಅವಾಂತರ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗುದಮುರುಗಿ !

RCUB Anantan-Cartoon
ಅವಧಿ ಮುಗಿದರೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಪ್ರೊ.ಬಿ.ಆರ್. ಅನಂತನ್ ವಿರಾಜಮಾನರಾಗಿದ್ದಾರೆ.
ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಆದೇಶದನುಸಾರ ಅನಂತನ್ ಅವರ ಅಧಿಕಾರಾವಧಿ 2013ರ ಮೇ 2ಕ್ಕೆ ಮುಗಿದಿದೆ.
ಆದರೆ ಕಳೆದ 2 ತಿಂಗಳಿಂದ ಅನಧಿಕೃತವಾಗಿ ಕುಲಪತಿ ಹುದ್ದೆಯಲ್ಲಿ ಅನಂತನ್ ಮುಂದುವರಿದಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರು ಮಾತ್ರ ಕುಲಪತಿ ನೇಮಕ ಹಾಗೂ ಶೋಧನಾ ಸಮಿತಿ ರಚನೆ ಕುರಿತಂತೆ ಮೌನವಹಿಸಿದ್ದಾರೆ.
ಕಳೆದ 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪ್ರೊ. ಅನಂತನ್ ಅವರು 4 ವರ್ಷದ ಅವಧಿಗೆ ಅಥವಾ 65 ವರ್ಷ ಆಗುವವರೆಗೆ ರಾಣಿ ಚೆನ್ನಮ್ಮ ವಿವಿಯ ಪ್ರಥಮ ಕುಲಪತಿಯಾಗಿರುತ್ತಾರೆ. ಇದಲ್ಲದೇ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, 4 ವರ್ಷದ ಸೇವಾವಧಿ ಅಥವಾ 65 ವರ್ಷಗಳಲ್ಲಿ ಯಾವುದು ಮೊದಲಾಗುತ್ತದೆಯೋ ಅದನ್ನು ಪರಿಗಣಿಸಲಾಗುವುದು ಎಂದು. ಆದರೆ ಪ್ರೊ.ಅನಂತನ್ ಅವರು ಬೇರೆ ಲೆಕ್ಕಾಚಾರ ಮಾಡುತ್ತಿದ್ದು, ತಮ್ಮ ಸೇವಾವಧಿ ಇನ್ನು 2 ವರ್ಷವಿದೆ ಎಂದು ಅಕ್ರಮವಾಗಿ ವಿವಿಯಲ್ಲಿ ಠಿಕಾಣಿ ಹೂಡಿದ್ದಾರೆ.
ವಿಚಿತ್ರವೆಂದರೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ. ನೂತನ ವಿಶ್ವವಿದ್ಯಾಲಯದ ಮೊದಲ ಕುಲಪತಿಯೇ ಇಂತಹ ನೀತಿಗಳಿಗೆ ನಾಂದಿ ಹಾಡಿದರೆ ವಿವಿಯ ಸ್ಥಿತಿ ಅಧೋಗತಿಗೆ ತಲುಪುವುದರಲ್ಲಿ ಅನುಮಾನವಿಲ್ಲ ಎಂಬುದುದ ಅವರ ಅಭಿಪ್ರಾಯ.
ಸರ್ಕಾರದ ಆದೇಶದಲ್ಲೇನಿದೆ?: ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಯು.ಬಿ.ಉಳವಿ ಅವರು 2010ರ ಅಗಸ್ಟ್ 16ರಂದು ಹೊರಡಿಸಿದ ಆದೇಶ ಹೀಗಿದೆ, ‘ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ಪ್ರಕಾರ ಪ್ರೊ.ಬಿ.ಆರ್. ಅನಂತನ್ ಅವರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ಅಥವಾ ಸದರಿಯವರಿಗೆ 65ವರ್ಷಗಳು ವಯಸ್ಸಾಗುವುವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ’.
ಈ ಆದೇಶದಲ್ಲಿ ಒಂದಂಶವನ್ನು ಸರ್ಕಾರ ಸೇರಿಸಿದೆ. ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂದು ಹೇಳಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ತಿದ್ದುಪಡಿಯೇನು?: ಕಳೆದ 2011ರ ಫೆಬ್ರುವರಿಯಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತಂದು, ಕುಲಪತಿಯಾಗಲು ಇರುವ ವಯೋವುತಿಯನ್ನು 67ಕ್ಕೆ ಏರಿಸಲಾಯಿತು. ಇದನ್ನೇ ನೆಪವಾಗಿರಿಸಿಕೊಂಡಿರುವ ಅನಂತನ್ ಇನ್ನು ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯೊಬ್ಬರು ಹೇಳಿದ ಪ್ರಕಾರ, ‘ಅನಂತನ್ ಅವರ ನೇಮಕವು 2010ರಲ್ಲಿ ಆಗಿದೆ. ಆದರೆ ಈ ತಿದ್ದುಪಡಿಯಾಗಿರುವುದು 2011ರಲ್ಲಿ. ಆದ್ದರಿಂದ ಅವರ ಅಧಿಕಾರವಧಿ 2013ರ ಮೇ ತಿಂಗಳಿನಲ್ಲಿಯೇ ಕೊನೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಈ ಗೊಂದಲದ ಅರಿವಿದ್ದರೂ ಯಾವುದೆ ಕ್ರಮ ತೆಗೆದುಕೊಂಡಿಲ್ಲ’.
ಆದರೆ 2010ರ ಅ.16 ರಂದು ಹೊರಡಿಸಿದ ಅಧಿಸೂಚನೆ ಹಾಗೂ ಅ.17ರಂದು ಹೊರಡಿಸಿದ ಸರ್ಕಾರಿ ಆದೇಶವು ವಿಭಿನ್ನವಾಗಿದೆ. ಅ.17ರಂದು ಪ್ರಕಟವಾಗಿರುವ ಸರ್ಕಾರಿ ಆದೇಶದಲ್ಲಿ ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂಬಂಶ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಂತನ್ ಅವರ ವಾದಕ್ಕೆ ಮನ್ನಣೆ ದೊರಕುವುದಿಲ್ಲ.
ಹುಟ್ಟಿದ ದಿನಾಂಕದ ದಾಖಲೆ ನೀಡಿಲ್ಲ!
ವಿವಿಯ ವಿಶೇಷಾಧಿಕಾರಿ ಹಾಗೂ ಕುಲಪತಿಗಳಾಗಿ ನೇಮಕವಾದ ಬಳಿಕ ಹುಟ್ಟಿದ ದಿನಾಂಕದ ಮಾಹಿತಿಯನ್ನು ಇಲಾಖೆಗೆ ನೀಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಾರಣದಿಂದ ಅವರ ನಿವೃತ್ತಿ ವಯಸ್ಸು ತಿಳಿದಿಲ್ಲ ಎಂಬ ವಾದವನ್ನು ಇಲಾಖೆ ಹೇಳುತ್ತಿದೆ. ಆದರೆ ‘ಕನ್ನಡಪ್ರಭ’ಕ್ಕೆ ಈ ಕುರಿತ ದಾಖಲೆಗಳು ದೊರೆತಿದ್ದು, 1948ರ ಮೇ 2ರಂದು ಪ್ರೊ.ಅನಂತನ್ ಅವರು ಜನಿಸಿದ್ದಾರೆ.
ಕೃಪೆ : ಕನ್ನಡಪ್ರಭ 16 Jul 2013 02:00:00 AM IST

Monday, March 18, 2013

ಡಾ. ಕಂಬಾರರಿಗೆ : ‘ಹೇಳತೇನಿ ಕೇಳು’ ಅಲ್ಲ : ‘ಕೇಳತೇನಿ ಹೇಳ್ರಿ !’

ಡಾ. ಸಿದ್ರಾಮ ಕಾರಣಿಕ

ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡವರೆನಿಸಿಕೊಂಡವರು, ವಿದ್ವಾಂಸರು ಎಂಬ ಬಿರುದಾಂಕಿತರು ಹೇಳಿಕೆಗಳನ್ನು ನೀಡಬೇಕಾದರೆ ಸಾವಿರ ಸಲ ಯೋಚಿಸಬೇಕು. ತಕ್ಷಣದ ಅನುಭವ ಅಥವಾ ಮಾತಿನ ಭರದಲ್ಲಿ ಬೇಕಾಬಿಟ್ಟಿಯಾಗಿ ವಿಚಾರ ಲಹರಿಗಳನ್ನು ಹರಿಯಬಿಡವುದು ಸೂಕ್ತವಲ್ಲ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯಗಳಿಂದ ಕೆಟ್ಟ ವಿಮರ್ಶಕರ ಸೃಷ್ಟಿಯಾಗಿದೆ ಎಂಬ ಆರೋಪವನ್ನು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ (ವಿ.ಕ. 13-03-2013).
ಕಂಬಾರರು ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಒಂದೇ ವಿಷಯ ಮತ್ತು ಪರಿಸರವನ್ನು ಇಟ್ಟುಕೊಂಡು ಹಲವಾರು ಪುಸ್ತಕಗಳನ್ನು ಬರೆದವರು. ನಡುನಡುವೆ ವಿಲಕ್ಷಣವಾದ ಹೇಳಿಕೆಗಳನ್ನು ನೀಡುತ್ತ ತಾವು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಲು ಮುಂದಾದವರು. ಇವರು ಈಗ ಹೀಗೆ ಹೇಳುತ್ತಿರವುದನ್ನು ಕಂಡಾಗ ಇದನ್ನು ಅವರು ತಮ್ಮ ಅನುಭವದಿಂದಲೇ ಅವರು ಹೇಳಿರಬಹುದು ಎನಿಸುತ್ತದೆ.
ವಿಶ್ವವಿದ್ಯಾಲಯಗಳು ಇಂದು ಮೊದಲಿನ ವಾತಾವರಣವನ್ನು ಉಳಿಸಿಕೊಂಡಿಲ್ಲ ಎಂಬುದೇನೋ ನಿಜ. ಆದರೆ ಅದನ್ನೇ ಮುಂದಿಟ್ಟುಕೊಂಡು ತಮ್ಮ ಹಿರಿತನದ ಜಾಡ್ಯವನ್ನು ಬಿತ್ತುವುದು ಸರಿಯಾದ ಕ್ರಮವಲ್ಲ. ‘ಬ್ರಿಟಿಷರಿಂದ ನಮಗಾದ ದೊಡ್ಡ ಲಾಭವೆಂದರೆ ಅವರು ಶಿಕ್ಷಣವನ್ನು ಸಾರ್ವಜನಿಕಗೊಳಿಸಿದ್ದು. ಅದು ಐತಿಹಾಸಿಕ ಅನಿವಾರ್ಯ. ಆದರೆ ನಮ್ಮ ಮನಸು ಶಿಕ್ಷಿತವಾದದ್ದು ಪಾಶ್ಚಾತ್ಯ ರೀತಿಯಲ್ಲಿ. ವಿದ್ಯೆಗಳನ್ನು ಕಲಿಸಲು ಹೇಳಿಕೊಟ್ಟ ವಿಧಾನಗಳನ್ನೇ ಬಳಸಿದೆವು. ಕನ್ನಡ ಮತ್ತು ಸಂಸ್ಕೃತದಂಥ ವಿಷಯಗಳನ್ನೂ ಅವರ ವಿಧಾನದಲ್ಲಿಯೇ ಓದಿದೆವು’ ಎಂಬ ಕಂಬಾರರ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ. ನಾವು ಪಾಶ್ಚಾತ್ಯರ ಮಾದರಿಯಲ್ಲಿ ವಿದ್ಯಾದಾನದ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿಲ್ಲ. ಪಾರಂಪರಿಕವಾದ ಗುರುಕುಲಗಳಲ್ಲಿ ಇದ್ದ ಶಿಕ್ಷಣ ಮಾದರಿಯೇ ಇಂದಿಗೂ ನಮ್ಮ ನಡುವೆ ಇದೆ. ಒಂದು ಬದಲಾವಣೆ ಎಂದರೆ ಎಲ್ಲ ಜಾತಿ-ಜನಾಂಗದವರಿಗೆ ಶಿಕ್ಷಣದ ಅವಕಾಶ ಇಂದು ನಮಗಿದೆ ಅಷ್ಟೆ. ಇದು ಕಂಬಾರರು ಹೇಳಿದಂತೆಯೇ ಬ್ರಿಟಿಷರಿಂದ ಆದ ಬದಲಾವಣೆ. ಮುಂದೆ ಶಿಕ್ಷಣದ ಪಠ್ಯಕ್ರಮವನ್ನು ಒಂದಿಷ್ಟು ನೋಡಿದರೆ ಕಂಬಾರರು ತಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳುತ್ತಾರೇನೋ ! ಯಾಕೆಂದರೆ ಇಂದಿಗೂ ದೇವರು, ಧರ್ಮ ಮೊದಲಾದ ವಿಷಯಗಳೇ ಪಠ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಅದೂ ಒಂದೇ ಧರ್ಮಕ್ಕೆ ಸಂಬಂಧಿಸಿದಂತೆ ! ಹಾಗಾದರೆ ಇದನ್ನು ಪಾಶ್ಚಾತ್ಯರ ಅನುಕರಣೆ ಎನ್ನೋಣವೆ ?
ಈ ದೇಶದಲ್ಲಿ ಯಂತ್ರ ಪದವೀಧರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಕನ್ನಡ ಶಾಲೆಯಲ್ಲಿಯೇ ಕಲಿತು ಅದೇ ಬದಲಾವಣೆಯಿಲ್ಲದ ಪಠ್ಯದ ಮೂಲಕ ಒಂದಿಷ್ಟು ಓದು ಬರಹ ಕಲಿತ ಅಸಂಖ್ಯಾತ ಜನ ಇಂದಿಗೂ ಸರಿಯಾದ ಬದುಕಿನ ನೆಲೆ ಕಾಣದೆ ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಕಂಬಾರರು ಇದನ್ನು ಕಂಡಿಲ್ಲವೆ ? ಸಾಮಾನ್ಯ ಜನರ ಬದುಕು ಈ ಸಾಂಪ್ರದಾಯಿಕ ಶಿಕ್ಷಣದಿಂದ ಏನೇನೂ ಬದಲಾವಣೆ ಆಗಿಲ್ಲ. ಹೀಗೆ ಹೇಳಿದ ತಕ್ಷಣ ಡಾ. ಕಂಬಾರರು ತಮ್ಮ ಹಳೆಯ ಮಾತನ್ನು ಉಚ್ಚರಿಸಬಹುದು. ಅವರ ಪ್ರಕಾರ ಜನಪದ ಬದುಕು ಬದಲಾಗಬಾರದು ; ಇದರಿಂದ ಜಾನಪದ ಸಂಸ್ಕೃತಿಯೊಂದು ಅಳಿಯುತ್ತದೆ. ಕಾಡಿನಲ್ಲಿ ಇದ್ದವರಿಗೆ ಶಿಕ್ಷಣ ನೀಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಅವರ ಸಂಸ್ಕೃತಿ ಹಾಳಾಗುತ್ತದೆ ! ಹಾಗಾದರೆ ಯಾರು ಎಲ್ಲಿ ಇರುತ್ತಾರೋ ಅಲ್ಲಿಯೇ ಇರಬೇಕು ಎಂಬ ಮಾನಸಿಕ ಜಾಡ್ಯ ನಮ್ಮ ದೇಶದ ಬಹುಪಾಲು ವಿದ್ವಾಂಸರಲ್ಲಿದೆ ಎಂಬ ಅರ್ಥವಲ್ಲವೆ ?
ಇನ್ನು ಕನ್ನಡದ ಬಗ್ಗೆ ಕಂಬಾರರು ಎಲ್ಲಿ ಹೋದಲ್ಲಿ ಮಾತನಾಡುತ್ತಾರೆ. ಅವರು ಒಂದು ವಿಷಯವನ್ನು ಅರಿತುಕೊಳ್ಳಬೇಕು. ಯಾವುದೇ ಭಾಷೆಯಾದರೂ ಅದು ಬದುಕು ನೀಡಬೇಕು. ಬದುಕು ನೀಡದ ಭಾಷೆಯನ್ನು ಕಲಿಯುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗಾಗಿ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕಂಬಾರರು ಅಥವಾ ಅವರಂಥವರು ಹೇಳುವ ಅವಶ್ಯಕತೆಯೇ ಆಗ ಇರವುದಿಲ್ಲ. ಜನ ತಾವಾಗಿಯೇ ಕನ್ನಡವನ್ನು ಕಲಿಯಲು ಮುಂದೆ ಬರುತ್ತಾರೆ ; ಕನ್ನಡ ಕಲಿಯಲು ಪೈಪೋಟಿ ನಡೆಯುತ್ತದೆ. ಉನ್ನತ ಸ್ಥಾನಗಳಲ್ಲಿ ಇರುವ ಕನ್ನಡ ಪರ ಮಾತುಗಳನ್ನು ಉದರಿಸುವವರು ಸರಕಾರದ ಮುಂದೆ ಇಂಥ ಪ್ರಸ್ತಾಪವೇನಾದರೂ ಇಟ್ಟಿದ್ದಾರೆಯೇ ? ಇಟ್ಟಿದ್ದರೆ ಅವು ಕಾರ್ಯರೂಪಕ್ಕೆ ಬರಲು ಏನು ಹೋರಾಟ ಮಾಡಿದ್ದಾರೆ ? ಬರೀ ಹೇಳಿಕೆಗಳನ್ನು ಕೊಡುವುದರಿಂದಲೇ ತಾವು ಬಹುದೊಡ್ಡ ವಿದ್ವಾಂಸ ಎನಿಸಿಕೊಳ್ಳುತ್ತೇವೆ ಎಂದರೆ ತಪ್ಪಾಗುವುದಿಲ್ಲವೆ ?
*****

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.