Showing posts with label ವಚನ. Show all posts
Showing posts with label ವಚನ. Show all posts

Wednesday, February 25, 2015

ವಚನ-42

ಬೊಲ್ಲನಾಗಿದ್ದರೆ ಕುಮಾರ ರಾಮನ
ಸಾಂಗತ್ಯ ಅಂತ ಸುಮ್ಮಿರಬೋದಿತ್ತು
ತಲ್ಲಣಗೊಂಡಿದ್ದರೆ ಸಮಾಧಾನಿಸಬೋದಿತ್ತು
ಮಲ್ಲನಾಗಿದ್ದರೆ ಅಖಾಡದಲ್ಲಿಯೇ ಕೆಡವಬೋದಿತ್ತು
ಸೊಲ್ಲು ಕೇಳಿ ಸುಖಾಸುಮ್ಮ ಓಡಿ ಹೋಗುವ
ಬೆಲ್ಲ ಮಾತುಗಳ ಹೊಲ್ಲಗಳ ಹರಿಹಾಯ್ದು ಪರಿಣಾಮವಿಲ್ಲ
ಕಾರಣಿಕ ಸಿದ್ಧರಾಮ ತಿಳಿ ತಿಳಿಯಾಗು
ಹೊಲಬುಗೆಟ್ಟವರು ಹಾದರದಲ್ಲಿದ್ದಾರೆ !

Friday, November 21, 2014

ವಚನ-41

ದ್ರವಕ್ಕೆ ದ್ರವ ಸೇರಿ ಘನವಾಯಿತು !
ಘನದ ಘನತೆ ಗುಲ್ಲಾಗಿ
ಮೆಲ್ಲಗೆ ಮೂಲಕ್ಕೆ ತಿರುಗಿತ್ತು
ಕಾರಣಿಕ ಸಿದ್ಧರಾಮ ಕಟ್ಟೆ ಕಲ್ಲು
ಕಟ್ಟೆಗಲ್ಲದೆ ಕಳಸಕ್ಕೆ ಸಲ್ಲದು !

Monday, October 06, 2014

ವಚನ-40

ಅದೆಂಥ ಗಾಳಿ !
ತೂರಿಕೊಂಡವರೂ
ಮಾರಿಕೊಂಡವರೂ
ನಡುವೆ ಆಣೆ ಲೆಕ್ಕ ಇಟ್ಟುಕೊಂಡವರೂ
ಸುಗ್ಗಿ ಮಾಡುವಾಗಲೇ
ಬೀಸಿತಲ್ಲಾ !
ತಂಗಾಳಿ ಎನಿಸಿದ್ದು ಸುಳಿಗಾಳಿ, 
ಬಿರುಗಾಳಿ, ಎದುರ್ಗಾಳಿಯಾಗಿ
ಬಗ್ಗು ಬಡಿಯುತ್ತಿದೆಯಲ್ಲ !
ಸಿಡಿಲಾಗಿ ಸಿಡಿದು ಜೋರು ಮಳೆಯಾದರೆ
ಬೆಳೆದದ್ದು ಮುಗ್ಗು ಹಿಡಿಯದಿರದೇ ?
ಕಾರಣಿಕ ಸಿದ್ಧರಾಮ ಕಾಲಕ್ಕೆ ಕಾಲನ ಭಯ ಇಲ್ಲ !  

Thursday, September 18, 2014

ವಚನ-39

ಹುಟ್ಟಿನ ಮೂಲ ಅರಿಯದವ
ತಾಯಿ ಪ್ರೀತಿ ಎಂತು ಅರಿತಾನು ?
ಗುಡಿಸಲ ತಡಿಕೆ ದಾಟಿ
ಮಹಲು ಸೇರಿದವಗೆ ಮೂಲ ನೆನಪಿರಬೇಕಲ್ಲವೆ ?
ಮಾನ ಮರ್ಯಾದೆ ಉಳಿಸಿಕೊಂಡು
ಅಸ್ಮಿತೆಯನ್ನೇ ಕಳೆದುಕೊಂಡವರ  ಏನೆಂಬೆ ?
ಕಾರಣಿಕ ಸಿದ್ಧರಾಮ ವಾಸನೆಗೆ ಕೊಟ್ಟ ಹೂವು
ಹೂಸಿನ ಜಾಗಕ್ಕೆ ಇಟ್ಟುಕೊಳ್ಳುವವರ
ಕಾಸಿನಾಸೆ ಕಂಡು ಕಸಿವಿಸಿಗೊಂಡ !



Sunday, June 29, 2014

ವಚನ-38

ಒಮ್ಮೆ ಮಲ ತಿನ್ನುವ ಚಟ ಅಂಟಿಕೊಂಡರೆ ಮುಗೀತು
ನಾಯಿಗೂ ಮಿಗಿಲಾಗಿ ಬಾಲ ಅಲ್ಲಾಡತೊಡಗುತ್ತದೆ
ಬಾಲಕ್ಕೆ ಬೆಂಕಿ ಇಕ್ಕಿದರೆ ಲಂಕೆ ಹಾಳಾಗದು ಇಂದು
ಲಂಕೆಯ ಪಾವಿತ್ರ್ಯ ಹಾಳು ಮಾಡಿದವನಿಗೇ ಪೂಜೆ
ಕಾರಣಿಕ ಸಿದ್ಧರಾಮ ತಲೆ ಅಲ್ಲಾಡಿಸು
ಒಳಗಿನ ಹೇನು ಹೊರ ಹೋಗಲಿ !

Tuesday, March 11, 2014

ವಚನ-37

ಬಣ್ಣಕ್ಕೆ ಬಗ್ಗಿದವರು ಕೆಲರು
ಬೆಣ್ಣೆಗೆ ತಗ್ಗಿದವರು ಕೆಲರು
ಬಣ್ಣ-ಬೆಣ್ಣೆ ಗರಿಮೆಯೂ ಅಲ್ಲ ; ಹಿರಿಮೆಯೂ ಅಲ್ಲ !
ಕಣ್ಣ ಕಾಣದೆ ಇರುವುದ ಕಾಂಬವರು
ರೂಹುಗಳ ಕಡೆಗಾಕಿ ನೆಚ್ಚಿಕೊಂಬುವರು
ಮಜ್ಜಿಗೆ ಸೇರಿದ ನುಚ್ಚು ; ಕಾರಣಿಕ ಸಿದ್ಧರಾಮ
ಅಚ್ಚು ಬೆಲ್ಲವ ಬಲ್ಲವರಾಗಬೇಕು ಹೊರತು
ಗಲ್ಲಕ್ಕೆ ಕೈಯಾಗುವುದು ಬರೀ ಗುಲ್ಲು !

Sunday, January 12, 2014

ವಚನ-36

ತಂಗಾಳಿಗೆ ಮೈಯೊಡ್ಡಿ ಮೈ ಮರೆತರೆ
ಬಿರುಗಾಳಿಯಾಗಿ ಒದ್ದೀತು ಜೋಕೆ !
ಬೆಟ್ಟವೆಂದು ಭಾವಿಸಿ ಆಸರ ಪಡೆದರೆ
ಭೂಕಂಪನದಿಂದ ಸಮಾಧಿ ಮಾಡೀತು ಜೋಕೆ !
ಸಮ್ಮಾನದ ಸುಖ ಹೆಸರಿಗಷ್ಟೇ ಹೊರತು
ಖಮ್ಮಾನ ಬದುಕಿಗಲ್ಲ ಕಾರಣಿಕ ಸಿದ್ಧರಾಮ
ರಾಜಿಗೆ ಪೀಠದ ಆಸೆ ಬೇಡ !

Friday, January 10, 2014

ವಚನ-35

ನಡೆಯೊಳಗೆ ನೋಡು ನಡುವಿನ ಬದುಕು
ನೋಡದೇ ನಡೆಯಬೇಡ ನರಳಿಕೆ ಹೆಚ್ಚು !
ತಾನಾಡುವ ನುಡಿ ಕಾಗೆಯಾಗಬೇಕು
ಕರೆದು ಉಣ್ಣುವ ಕಾಯಕದ ಕಾಮನೆಯಲ್ಲಿ
ಕಳೆದು ಹೋದರೂ ನಡೆದೀತು ಕಾರಣಿಕ ಸಿದ್ಧರಾಮ
ಸಂಬಂಧಗಳಿಗೆ ಸಲುಹುವ ಗುಂಗು ಇರುತ್ತದೆ !

Wednesday, November 27, 2013

ವಚನ-34

ಹಾದರದ ಲಾಡಿ ಬಿಗಿದುಕೊಳ್ಳುತ್ತ
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ 
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !

Saturday, November 23, 2013

ವಚನ-33

ಬಡತನ ಶಾಪ ಎಂದುಕೊಂಡವರು ಯಾರು ? 
ಪುಟಿ ನೆಗೆದು ಶಾಪವೆಂದುಕೊಂಡವರ ಮುಂದೆ 
ಸೆಟೆದು ನಿಲ್ಲಬೇಕಲ್ಲದೆ ಅಳುವುದು ತರವಲ್ಲ ; 
ತೆಗಿ ತೆಗಿ ನಿನ್ನ ಡಮರುಗದ ನಾದಕ್ಕೆ 
ಆವ ಶಬುದ ಎದುರಾಗಿ ನಿಲುವುದು ?
ಅದಾವ ಶಾಪ ಸಂಗ ಬಯಸಬಲ್ಲದು ?
ಹಂಗೆ ಹೇಳುವ ಹೇಸಿಯೋ ಕಸಿಗೊಂಡಾನು
ಇಲ್ಲವೆ ಕಸಿವಿಸಿಗೊಂಡಾನು 
ಕಾರಣಿಕ ಸಿದ್ಧರಾಮ ತಿಳಿವಿನೊಳಗಲ್ಲದೆ
ಮರೆವಿನವನಲ್ಲ !

Monday, October 21, 2013

ವಚನ-32

ಹೊಸದರ ಪದರ ಹರಿಯುವುದಷ್ಟೇ 
ಅಲ್ಲ ಬದುಕು ಹಳೆಯದರ ಅನುಭವಗಳ 
ಮುದುಡಿದ ತಾವರೆಯನ್ನೂ ಅರಳಿಸಬೇಕು !
ಮೆಟ್ಟಿ ನಿಲ್ಲುವವರಿಗೆ ಮೆಟ್ಟು ತೋರಿಸಬೇಕಿದೆ 
ಅರಿವಿನ ಪರದೆ ಹರಿದೊಗೆದು ಹೊರಬರಬೇಕು ;
ಬರಬೇಕು ; ಬರ ಇರದೇ ಬರಬೇಕು ;
ಹಾದಿಗೆ ಅಡುಗಾಲು ಗರಿಮೆಯವರ ನಿಲುಮೆ
ಹರಿದೊಗೆಯಬೇಕು ಕಾರಣಿಕ ಸಿದ್ಧರಾಮ
ಗತದ ಬೆಂಕಿಗೆ ಪಾತರಗಿತ್ತಿ ಸುಡಲಿ ಬಿಡು !

Monday, October 14, 2013

ವಚನ-31

ಸಂಬಂಧಗಳಿಗೆ ಸೂತಕಗಳಿರುವುದಿಲ್ಲ
ಅನುಬಂಧಕ್ಕೆ ಮಾತುಗಳೇ ಬೇಕೆಂದೇನೂ ಇಲ್ಲ
ಅರಿಯುವ ಮನ ; ಅರಿತುಕೊಳ್ಳುವ ಗುಣ
ಬೆರತರೆ ಬದುಕು ಎನ್ನುವುದು ಬಲು ಚೆನ್ನ
ಕಾರಣಿಕ ಸಿದ್ಧರಾಮ ಅರಿತೂ ಅರಿಯದ
ತಿಳಿಗೇಡಿಗಳ ಮೆಚ್ಚಲು ಹುಚ್ಚನಲ್ಲ ಮರುಳೆ !

Monday, September 30, 2013

ವಚನ-30


ಗಂಡನೊಲ್ಲದ ಹೆಂಡತಿ ; ಹೆಂಡತಿಯನ್ನೊಲ್ಲದ ಗಂಡ
ಪರ ಗಂಡು-ಹೆಣ್ಣಿನ ಸಂಗವೆಲ್ಲ ಹಾದರವೇ ?
ಬರೀ ಕೂಡವುದು ಮಾತ್ರವಲ್ಲ
ನೋಡುವುದೂ ಹಾದರ ಎಂದುಕೊಂಡರೆ
ರೇಣುಕೆಯ ಪಾಪ ಇರುವುದ ಮರೆಯಬೇಕೆ ?
ಕದ್ದು ಮುಚ್ಚಿ ಮಾಡಿದರೆ ಸಂಪನ್ನರೇ ?
ಕಚ್ಚೆ ಹರುಕರು ಬೇರೆ ; ಇಚ್ಚೆಬುರುಕರು ಬೇರೆ

ಕಾರಣಿಕ ಸಿದ್ಧರಾಮ ಕಾಯವೇ ಕೈಲಾಸವಾದಲ್ಲಿ  ಭಿನ್ನವುಂಟೆ ?

Sunday, July 14, 2013

ವಚನ-30

ನುಡಿಯೊಳಗೆ ನಡೆಯುವ ನಡಿಗನ
ನೋಡುವ ವರ್ತನ ಮನದ ಕೇಡು
ಗಡಿಗೆಯ ಸುಡುವಿಕೆ ಗಟ್ಟಿತನದ ಪರೀಕ್ಷೆ
ಸುಟ್ಟುಕೊಂಡರೂ ಸುಮ್ಮನಿರುವುದು ತರವಲ್ಲ
ಕಾರಣಿಕ ಸಿದ್ಧರಾಮ ಗುಮ್ಮನ ಗುಸುಕರ ಕೆಮ್ಮಿಗೆ
ಕಸಿವಿಸಿಗೊಳ್ಳಬೇಡ ; ಹಸನು ಮಾಡು ಹಸನು ಮಾಡು !

Sunday, June 30, 2013

ವಚನ-29

ತೊಡೆಯೇರಿದ ತಾಂಬೂಲದ ಹೆಣ್ಣು
ಕಣ್ಣು ಕತ್ತಲು ಬರುವಷ್ಟು ರಸ ಹೀರಿದ ರಭಸಕ್ಕೆ
ಕಸಿವಿಸಿಗೊಳ್ಳುವ ಸರದಿಯಲ್ಲಿದ್ದೂ ಸರಸದ ಬಯಕೆ
ಪುಟಿನಗೆಯುವಿಕೆಗೆ ಬರೀ ದೇಹ ಕಾರಣವಲ್ಲ
ಕಾರಣಿಕ ಸಿದ್ಧರಾಮ ಅಲ್ಲಿದೆ ಬಯಸದೇ ಬಂದ ಬಂಧವೂ
ದೆಸೆ ದೆಸೆಗೆ ತಡವಿ ಮಾಯಾಮೃಗದ ಹಸಿತನ !

Monday, June 03, 2013

ವಚನ-28

ಮರಸುಂದು ಹಿಡಿಸಿದ ಸುಸ್ತು, ಆಯಾಸ
ಅನಾಯಾಸ ಸಾಹಸವಲ್ಲ
ಸೆರುಗು ಹಿಡಿದು ಸಲ್ಲಲಿತದ ಸಲ್ಲಾಪ
ಕಡು ಕಷ್ಟ ಎಂದು ಬಗೆದರೆ
ಸಂಸಾರದ ಹುಟ್ಟು ಸಾವಿಗೆ ಮೂರ್ಖ
ಕಾರಣಿಕ ಸಿದ್ಧರಾಮ ಪಪ್ಪಾಯಿಯೊಳಗಣ
ಬೀಜವಾಗಿರುವೆ ನಿಮ್ಮ ಸಂಗಾತ !

ವಚನ-27

ಅವರಿದ್ದ ಮನೆಯ ಮಾಳಿಗೆ ಮಳೆಗೆ ಹಾಳು
ಇವರಿದ್ದ ಮನೆಯ ಜಾಳಿಗೆಯ ಗೂಡು
ತಾನಿದ್ದ ಮನೆಯ ಐಭೋಗ ಬೇರಲ್ಲ
ತೊಡೆ ಮೇಲಿನ ಚೋಳಿಗೆ ವಿಷವಿಲ್ಲ ಎಂದೊಡೆ
ಕಾರಣಿಕ ಸಿದ್ಧರಾಮ ಹಾವು ಹೊಕ್ಕರೂ
ಕಾವೇರುವ ಜನ ಇವರು, ಮರುಳಾಗಬೇಡ !

Saturday, May 04, 2013

ವಚನ-26

ಜಗ ಮತ್ತು ಮಿಗ ಬಾಯಿ ತೆರೆದುಕೊಂಡು
ನುಂಗಲು ಕಾಲ ಕಾಯುತ್ತಿವೆ !
ಭೂಮಿ ಬಿರಿಯಲಾರದು ಎಂದೇನೂ ಅಲ್ಲ !
ನಗವೇ ನಗುತ್ತಿರುವಾಗ ; ಬೀಗುತ್ತಿರುವಾಗ
ಮನುಷ್ಯ, ಮನುಷ್ಯತ್ವ ಇಲ್ಲವೆಂದೇನೂ ಅಲ್ಲ
ಕಾರಣಿಕ ಸಿದ್ಧರಾಮ ಬಂಕೆ ಈಡೇರಬಲ್ಲದು
ಆದರೆ ಬಯಕೆಗಳೇ ಬೇಡ ಅಂತೇನೂ ಅಲ್ಲ !

Thursday, April 18, 2013

ವಚನ-26

ಗಟ್ಟಿ ಗಟ್ಟಿ ಅಂದುಕೊಂಡಿದ್ದೆಲ್ಲ ಅಳಕಾಗಿ
ಇಳಿದು ಹೋದಾಗ ನೆಮ್ಮದಿಗೆ ಭಂಗವಾಗಬಾರದು !
ದಂಗುಬಡಿಸುವಂತೆ ಮತ್ತೇ ಚಿಗಿಯಬೇಕು !
ಮತ್ತೇ ಗಟ್ಟಿಯಾಗಬೇಕು ; ಅಳಕಾಗಲಿ ಅಳುಕಬಾರದು !
ಗಟ್ಟಿ-ಅಳಕಿನ ನಡುವಿನ ಅಂಬಲಿಯೂ ಅಳಕಲ್ಲವೆ
ಕಾರಣಿಕ ಸಿದ್ಧರಾಮ ಅಳುಕಿಯೂ ಅಳುಕದಂತಿರಬೇಕು !

Saturday, April 06, 2013

ವಚನ-25

ಒಳಗೊಳಗೆ ಉಂಡ ನೋವು ; ಕಂಡ ಬದುಕು
ನೆಂಟರೆಲ್ಲರ ಉಂಬಳಿಯ ಬಾವಿಯ ಸಾವು !
ಎಚ್ಚೆತ್ತುಕೊಂಡಾಗ ಬಿಚ್ಚುಗತ್ತಿಯ ಮರೆವು !
ಕಾರಣಿಕ ಸಿದ್ಧರಾಮ ನೆಚ್ಚಿಕೆಗೆ ಮುಚ್ಚಿಕೆ
ಆಗಿಬರದು ; ಆಗಬಾರದು ; ಆಗಗೊಡಬಾರದು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.