Showing posts with label ವ್ಯವಸ್ಥೆ. Show all posts
Showing posts with label ವ್ಯವಸ್ಥೆ. Show all posts

Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

Thursday, November 22, 2012

ಪತ್ರಕರ್ತ `ಸಾಕ್ಷಿ'ಯಾಗಬೇಕೆ, `ರಕ್ಷಕ'ನಾಗಬೇಕೆ?

                                   - ದಿನೇಶ ಮೀನಮಟ್ಟು 
ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ` ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್` ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..` ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು` ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ`ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ` ಎಂದು ಬಡಬಡಿಸುತ್ತಿದ್ದ` ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್` ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?` ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ` ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ` ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು` ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ` ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ`ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?` ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ`ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ`ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ` ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ` ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?` ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್` ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್` ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್`ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....` ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ.

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಕೃಪೆ : ಪ್ರಜಾವಾಣಿ

Wednesday, September 05, 2012

ಸಿನೆಮಾ ಮುಗಿದಮೇಲೆ ಚೇತನಾ ಬರೆದದ್ದು

                                      ಚೇತನಾ ತೀರ್ಥಹಳ್ಳಿ 

ಅಗೋ ಅಲ್ಲಿ.. !
ಕೆಂಪುಕೋಟೆಯ ಮೇಲೆ ಹೀಗೊಬ್ಬ ಪಾಪ!
ಹೆಜ್ಜೆ ಮುಂದೆ ಹೆಜ್ಜೆ ಇಟ್ಟು ನಡೆಯುತ್ತಿದ್ದ. ‘ಘೋಷ’ದ ತಾಳಕ್ಕೆ ತಪ್ಪಬಾರದ ಕಾಳಜಿ ಜೊತೆಗೆ! ಅವನ ಕೈಲೊಂದು ಕಮಲದ ಹೂವು.
‘ಗರ್ದೀ’, ‘ದರ್ದೀ’... ‘ಗರ್ದೀ’, ‘ದರ್ದೀ’... ಎಂದೆನ್ನುತ್ತ ಒಂದೊಂದೆ ಪಕಳೆಗಳನ್ನು ಕೆಳಗೆಸೆಯುತ್ತಿದ್ದ. ಕೋಟೆ ಮೇಲಿನ ಕಾಂಪೌಂಡು ಮುಗಿಯುವ ಹೊತ್ತಿಗೆ ಉದುರಿಸುವ ಪಕಳೆ ‘ಗರ್ದೀ’ಯಾಗಿದ್ದರೆ ತನಗೆ ಖುರ್ಚಿ ಗ್ಯಾರೆಂಟಿ!
‘ಇಲ್ಲವಾದರೆ?’- ಯೋಚಿಸುವ ಉಸಾಬರಿಗೇ ಹೋಗಿರಲಿಲ್ಲ...

ಹಾಗೆ ಪಕಳೆ ಬೀಳಿಸುತ್ತ, ನಡೆಯುತ್ತ ನಡೆಯುತ್ತ ಕಾಂಪೌಂಡು ಇನ್ನೂ ಅಷ್ಟುದ್ದ ಇದೆ ಅನ್ನುವಾಗ...
ಕೈಯಲ್ಲಿನ ಕಮಲ ದಳವೇ ಖಾಲಿ!!
ಆತ ತ್ರಿಶಂಕುವಿನ ಹಾಗೆ ನಿಂತುಬಿಟ್ಟ...

******

ಇನ್ನೊಂಚೂರು ಈಚೆ... ಸ್ವಲ್ಪ ಆಚೆ...
ಸರ್ಕಸ್ ಕಂಪೆನಿಯೊಂದು ಗುಡಾರ ಹೂಡಿತ್ತು. ಕೆಂಪು ಟೀಶರ್ಟಿನ ರಿಂಗ್ ಮಾಸ್ಟರ್, ಆನೆಗೆ ‘ಸಿಟ್’ ‘ಸ್ಟ್ಯಾಂಡ್’ ಕಸರತ್ತು ಮಾಡಿಸಲು ಹೆಣಗಾಡುತ್ತಿದ್ದ. ಅವನ ಪರದಾಟಕ್ಕೆ ನಗಲು ತೋಚದ ಜೋಕರ್, ಗಡದ್ದು ಉಂಡು ಮಲಗಿಬಿಟ್ಟಿದ್ದ.

ಈ ಆನೆಯೋ! ಒಂದಕ್ಕೆ ಹನ್ನೊಂದು ಮಾಡುತ್ತ, ನಖರಾ ಆಡುತ್ತ, ಬೇಕೆಂದೇ ಕಾಡುತ್ತ ಹೈರಾಣು ಮಾಡಿತ್ತು. ತಾನು ರೇಸಿಗೆ ಸೇರಿದ್ದೇ ಸಾಧನೆಯೆನ್ನುತ್ತ ಬೀಗತೊಡಗಿತ್ತು. ರಿಂಗ್ ಮಾಸ್ಟರನ್ನ ಕಾಡಲಂತಲೇ ಸಿಟ್ ಅಂದಾಗ ಸ್ಟ್ಯಾಂಡಾಗಿ, ಸ್ಟ್ಯಾಂಡ್ ಅಂದಾಗ ‘ಸಿಟ್ಟು’ಕೊಂಡು ದೊಂಬರಾಟ ನಡೆಸಿತ್ತು.

ತಾಲೀಮು ನಡೆದಿದ್ದಾಗಲೇ ಧಬಾರನೆ ಕಿವಿ ಹಾರುವ ಸದ್ದು!
ಆನೆ ಕನಸಿನ ಖುರ್ಚಿ ಮುರಿದುಬಿದ್ದಿತ್ತು...

******

ಈ ಎಲ್ಲ ಸಂತೆಯಿಂದ ಹೊರಗೆ, ಅಲ್ಲಿ ಅಮ್ಮಾಯಿಯೊಬ್ಬಳು ಹಣೆಗೆ ಲಾಲ್ ಗಂಧ ತೀಡುತ್ತ ಕುಂತಿದ್ದಳು. ಮ್ಯೂಸಿಕಲ್ ಛೇರಿನಲ್ಲಿ ಮೈಹೊತ್ತು ಓಡಲಾಗದ ಸಂಕಟ ಅವಳಿಗೆ. ಆದರೇನು? ತನ್ನ ದಾಳದ ಪಾಳಿಗಾಗಿ ಕಾದುಕೊಂಡಿದ್ದಳು.

ಆ ದಿನಕ್ಕೆ ತಾನು ಯಾವ ಸೀರೆ, ಯಾವ ಚಪ್ಪಲಿ, ಯಾವ ಪರ್ಫ್ಯೂಮು, ಯಾವ ವ್ಯಾನಿಟಿ...
ಆಯ್ದುಕೊಳ್ಳುವ ಗಲಿಬಿಲಿಯಲ್ಲಿ ಪಗಡೆಹಾಸು ಎತ್ತಿಟ್ಟಿದ್ದು ಅವಳಿಗೆ ಗೊತ್ತೇ ಆಗಲಿಲ್ಲ!

********

ಇನ್ನೀಗ ಅಂವ ಕೆಂಪು ಕೋಟೆಯಿಂದಿಳಿದು ಬಂದ. “ಕಡಿಮೆ ದಳದ ಕಮಲ ಸರಬರಾಜಾಗಿದ್ದು ಗುಜರಾತಿನಿಂದ"- ಇಂಟೆಲಿಜೆನ್ಸ್ ರಿಪೋರ್ಟು!
ನಗು ಹೊತ್ತ ಮುಖವಾಡಗಳು ಹಾದಿಗುಂಟ ಬಿದ್ದಿದ್ದವು. ಇಕ್ಕೆಲದ ಇಟ್ಟಿಗೆ ಸಾಲು ಸಾಲು, ಉಳಿದ ಕಮಲ ದಂಟಿಗೆ ಸ್ಮಾರಕ ಕಟ್ಟಲು ಕಾಯ್ತಿದ್ದವು...

ಇತ್ತ ಸರ್ಕಸ್ ಕಂಪೆನಿಯ ಕಂಬ ಉರುಳಿಬಿದ್ದಿತ್ತು. ಆಟ ಬರಖಾಸ್ತುಗೊಂಡು ಎಲ್ಲರೂ ತಂತಮ್ಮ ಗಂಟು ಕಟ್ಟತೊಡಗಿದರು.
ಜೋಕರ್ ಮಾತ್ರ, “ಇನ್ನೂ ಐದು ವರ್ಷ ಇಲ್ಲೇ ಮಲಗಬೇಕಲ್ಲ?" ಅನ್ನುತ್ತಾ ಚಾಪೆ ಕೊಡವಿಕೊಂಡ...

******

ಅಲ್ಲಿ, ನಂ.೧೦, ಜನಪಥದ ರಾಣೀವಾಸದಲ್ಲಿ ಸಂಭ್ರಮವೋ ಸಂಭ್ರಮ. ರಾಣಿಯ ಕಿರೀಟ ಭದ್ರ ನಿಂತಿತ್ತು. ಮಹಾಮಂತ್ರಿಯ... ಅಲ್ಲಲ್ಲ... ಪ್ರಧಾನ ಮಂತ್ರಿಯ ಸಾಧನೆ, ಕೋಟೆ ಉಳಿಸಿಕೊಟ್ಟಿತ್ತು.

ಅದರಲ್ಲಿನ್ನು ಯುವ ರಾಜ ಸುಭದ್ರ. ಮಹರಾಜನಾಗುವವರೆಗೆ ಎಲ್ಲವೂ ನಿರುಮ್ಮಳ!

******

ಈ ಚೂರು ಚೂರು ಚಿತ್ರಗಳನ್ನ ತೇಪೆ ಹಾಕಿ ಅವನೊಬ್ಬ ಸಿನೆಮಾ ತೆಗೆದ. ಎಲ್ಲ ಮುಗಿದು, ಮೇಕಪ್ಪು ತೊಟ್ಟಿದ್ದವರು ಮುಖ ತೊಳೆದುಕೊಂಡರು. ಬಣ್ಣಗಳು ಕರಗಿ ಕೊಚ್ಚೆಯಾಗಿ ಹರಿಯಿತು.
ಕಾಯ್ದಿಟ್ಟ ಟಿಕೀಟುಗಳಲ್ಲಿ ಅರ್ಧ ಮಾತ್ರ ತುಂಬಿ, ಎಲ್ಲ ಖಾಲಿ ಖಾಲಿ...

ನೋಡ ಬಂದವರು ಬಟ್ಟೆ ಹರಕೊಂಡು ಓಡಿಹೋದರು. ಹಾಗೇ ಉಳಿದವರು ಹುಚ್ಚು ಹತ್ತಿ ತಲೆ ಚಚ್ಚಿಕೊಂಡರು.

ಥಿಯೇಟರಿನತ್ತ ಮುಖ ಮಾಡದವರು ಮಾತ್ರ ಯಾವತ್ತಿನ ಹಾಗೆ ಹರಟುತ್ತ, ಉಗಿದ ಚೂಯಿಂಗಮ್ಮು ಜಗಿಯುತ್ತ ಕುಳಿತುಬಿಟ್ಟರು !

ಕೃಪೆ : ಕೆಂಡಸಂಪಿಗೆ

Sunday, February 05, 2012

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

                                  -ರಘೋತ್ತಮ ಹೂ.ಬ. ಚಾಮರಾಜನಗರ 


ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.
ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!
ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.
ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.
ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.
ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!
ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.
ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!
ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.
ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.
ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.
ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.
ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?
ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.
ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!
ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!
ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.
ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)
ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.
‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

ಕೃಪೆ : varthabharathi

Tuesday, January 10, 2012

ಮಳೆಯೆಂದರೆ ಅದು ಬರೀ ಮಳೆಯಲ್ಲ !

ಮಳೆಯೆಂದರೆ ಬರೀ ಮಳೆಯಲ್ಲ !
ಬೆಳೆ ಹಾಳು ಮಾಡಬೇಕು !
ಕೋಟೆ ಕೊತ್ತಲುಗಳನ್ನು ಕೆಡುವಬೇಕು !
ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
ಪೂಜೆ-ಪೂಜಾರಿ, ಎಲ್ಲ ...
ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
ಹೆಂಗಸು, ಗಂಡಸು, ಮಕ್ಕಳು, ಮುದುಕರೆನ್ನದೇ
ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
ಸುರಿಯಬೇಕು ಧೋ ಧೋ ಎಂದು !
ಎಲ್ಲವೂ ಕೊಚ್ಚಿಕೊಂಡು
ಭೂಮಿಯ ಮೇಲೆ ಏನೂ ಇಲ್ಲವಾದಾಗ
ಹೊಸ ಜೀವಿಗಳ ಉಗಮವಾಗಬೇಕು !
ಅಲ್ಲಿ ಮೇಲು ಕೀಳಿನ ತಿಳಿಗೇಡಿ
ತನಕ್ಕೆ ಅವಕಾಶ ಇರದು !
ಹಾಳುಮೂಳಗಳಿಗೆ ಮೂಲವಿರದು !
ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
ಮನುಷ್ಯ ಮನುಷ್ಯನನ್ನು
ಮನುಷ್ಯನೆಂದೇ ಪರಿಗಣಿಸುತ್ತಾನೆ !
ಬಾಂಧವ್ಯಗಳ ಹೊಸ ಮನ್ವಂತರ 
ಆರಂಭವಾಗುತ್ತದೆ !

ಡಾ. ಸಿದ್ರಾಮ ಕಾರಣಿಕ
(ಮರಾಠಿ ಕವಿತೆಯೊಂದರ ಪ್ರಭಾವದಿಂದ)

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.