Showing posts with label ಆಕ್ಷೇಪ. Show all posts
Showing posts with label ಆಕ್ಷೇಪ. Show all posts

Tuesday, September 03, 2013

ಬೆಳಗಾವಿಯ ದಲಿತ ಸಂಘಟನೆಗಳಿಗೆ, ದಲಿತ ಪಕ್ಷಗಳಿಗೆ ನನ್ನ ಧಿಕ್ಕಾರ !

 
ಬೆಳಗಾವಿಯ ದಲಿತ ಬಂಧುಗಳು ಮಾಡುವ ಕಿತಾಪತಿ ಇದು !
---------------------------------------------------------------

ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಬಿ.ಆರ್‌. ಅನಂತನ್ಅವರ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಹಾಗೂ ಆರ್ಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮಂಗಳವಾರ ವಿಟಿಯು ಆವರಣದಲ್ಲಿ ಪ್ರತಿಭಟನೆ ನಡೆಸಿದ ಾರ್ಯಕರ್ತರು, ವಿಟಿಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು
ಆರ್ಪಿಐ ಮತ್ತು ದಲಿತ ಮುಖಂಡರು ಮಾತನಾಡಿ, ಕುಲಪತಿ ಅನಂತನ್ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಿ ವಿಶ್ವವಿದ್ಯಾಲಯವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ವಿವಿಯಲ್ಲಿ ನಡೆಯುತ್ತಿರುವ ನೇಮಕಾತಿಯನ್ನು ಅತ್ಯಂತ ಪಾರದರ್ಶಕವಾಗಿ ಮಾಡುತ್ತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸರಕಾರ ಅವರ ವಿರುದ್ಧ ಬರುತ್ತಿರುವ ಆರೋಪಗಳಿಗೆ ಕಿವಿಗೊಡದೆ ಅವರಿಗೆ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ದೇಶಪಾಂಡೆ, ಸರಕಾರ ಕೇವಲ ನಿರಾಧಾರ ಆರೋಪಗಳಿಂದ ಯಾರ ವಿರುದ್ಧ ಕ್ರಮ ಜರುಗಿಸುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರ ಹಿತ ಕಾಪಾಡುತ್ತದೆ ಎಂದು ಭರವಸೆ ನೀಡಿದರು. (ಉದಯವಾಣಿ ಸುದ್ದಿ : 19/06/2013)
*******************
ಸುದ್ದಿಯನ್ನು ಯಾರಾದರೂ ನಂಬುತ್ತೀರಾ ? ರಾಣಿ ಚೆನ್ನಮ್ಮ ವಿ.ವಿ. ಹಗರಣಗಳು ಎಲ್ಲರಿಗೂ ಗೊತ್ತು ; ಆದರೆ ಯಾರೂ ಬಗ್ಗೆ ಚಕಾರ ಎತ್ತುತ್ತಿಲ್ಲ. ಅದನ್ನು ಈಗ ನಾನು ಆರಂಭ ಮಾಡುತ್ತಿದ್ದೇನೆ. ಕುಲಪತಿ ಅನಂತನ್ ಅವರನ್ನು ಹೊಗಳಿದ ಕೆಲ ದಲಿತ ಸಂಘಟನೆಗಳಿಗೆ, ಆರ್.ಪಿ.. ದಂತಹ ದಲಿತ ಪಕ್ಷಗಳಿಗೆ ನನ್ನ ಧಿಕ್ಕಾರ !

Monday, February 11, 2013

ಸಾಹಿತ್ಯ ಸಮ್ಮೇಳನದ ಅವಘಡ !


            ಮಾತಾಡುವುದಕ್ಕೆ ತ್ರಾಣ ಕೊಡದ ಅಧ್ಯಕ್ಷರ ಇಳಿ ವಯಸ್ಸು, ಯಾವುದೇ ಹೊಸ ಚಿಂತನೆಗಳನ್ನು ಹೊಳೆಸದ ಹಳೆ ಪ್ರಶ್ನೆಗಳು ಮತ್ತು ಆಗಲೇ ಹೇಳಿದ ಉತ್ತರಗಳ ಪುನರಾವರ್ತನೆ - ಇವುಗಳೊಂದಿಗೆ ಬಹುನಿರೀಕ್ಷಿತ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕೊನೆಗೊಂಡಿತು.

    ಅಧ್ಯಕ್ಷರ ಅನಾರೋಗ್ಯದಿಂದಾಗಿಯೇ ತಡವಾಗಿ ಸಂವಾದವನ್ನು ಪ್ರಾರಂಭಿಸಿದರಾದರೂ ಅವರಾಗಲೇ ತುಂಬ ಸುಸ್ತಾಗಿದ್ದರು. ಅವರನ್ನು ಹೊಗಳುತ್ತಾ, ವಿಷಯಾಂತರ ಮಾಡುತ್ತಾ ಸಂವಾದಕರು ಪ್ರಶ್ನೆ ಕೇಳುತ್ತಾ ಹೋದರು. ಅವರ ಪ್ರಶ್ನೆ ಮತ್ತು ಇವರ ಉತ್ತರದ ನಡುವೆ ಲೇಖಕಿ ಡಾ.ವಸುಂಧರಾ ಭೂಪತಿ ನಿರ್ವಾಹಕಿಯಾಗಿ ಕೆಲಸ ಮಾಡಿದರು. ಆದರೆ ಸಂವಾದದ ಮೂಲಕ ಸಮ್ಮೇಳನಾಧ್ಯಕ್ಷರನ್ನು ಪ್ರೇಕ್ಷಕರು ಅರಿತುಕೊಳ್ಳುವ ಇಂಥ ಸಂವಾದದ ಮೂಲ ಆಶಯವೇ ಈಡೇರಲಿಲ್ಲ.

    ಅಧ್ಯಕ್ಷ ಕೋಚೆ ಇಳಿವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಹಣ್ಣಾಗಿದ್ದರಾದರೂ ಮನೋಚೈತನ್ಯ ಕುಂದಿರಲಿಲ್ಲ. ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿರುವಾಗ ಇನ್ನೊಂದು ಪ್ರಶ್ನೆಯ ಕಡೆ ಹೋಗಲಾಯಿತು. ಆದರೆ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸದೇ ಮುನ್ನಡೆಯಬಾರದು ಎಂದು ಹೇಳಿ ತಮ್ಮ ಉತ್ತರವನ್ನು ಕೋಚೆ ಮುಂದುವರಿಸಿದರು.

            ಅವರಿಗೆ ತೊಂದರೆಯಾಗದಿರಲೆಂದು ಎಲ್ಲರ ಪ್ರಶ್ನೆಗಳನ್ನೂ ಒಟ್ಟಿಗೇ ನೀಡಿ, ಉತ್ತರವನ್ನು ಕಡೆಯಲ್ಲಿ ನೀಡುವ ಅವಕಾಶ ಕಲ್ಪಿಸಲಾಯಿತು. ಆದರೆ 'ತುಂಬ ಪ್ರಶ್ನೆ ಒಟ್ಟಿಗೇ ಕೇಳಿಬಿಟ್ಟರೆ ನನಗೆ ಯಾರು ಏನು ಕೇಳಿದರು ಅಂತ ಗೊತ್ತಾಗುವುದಿಲ್ಲ, ನೆನಪೂ ಇರುವುದಿಲ್ಲ' ಎಂದು ತಮಾಷೆಯಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ರಚಿಸಿ:

          ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕನ್ನಡ ಶಾಲೆಗಳು ಮತ್ತು ಇಂಗ್ಲಿಷ್‌ ಶಾಲೆಗಳನ್ನು ಮುಚ್ಚುವ ಸ್ಥಿತಿ ಯಾಕೆ ಬಂದಿದೆ ಎಂಬ ಬಗ್ಗೆ ಅಧ್ಯಯನ ಆಗಬೇಕು ಎಂದರು. ಸರ್ಕಾರ ಒಂದು ಸಮಿತಿಯನ್ನು ರಚಿಸಿ ಸರ್ವೇ ನಡೆಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆಯಲ್ಲಿ ಓದಿದವರು ಮತ್ತು ಇಂಗ್ಲಿಷ್‌ ಶಾಲೆಗಳಲ್ಲಿ ಓದಿದವರು ಪಡೆದುಕೊಂಡ ಯಶಸ್ಸಿನ ಅನುಪಾತವನ್ನು ತೆಗೆಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾತೃಭಾಷೆಯ ಶಿಕ್ಷಣದಲ್ಲಿ ಅಪಾರ ಯಶಸ್ಸು ಗಳಿಸಿದ್ದಾರೆ. ಆದರೆ ಇಂಗ್ಲಿಷ್‌ ಓದಿದರೆ ಮಾತ್ರ ಗೆಲುವು ಮತ್ತು ಉದ್ಯೋಗ ಸಾಧ್ಯ ಎನ್ನುವ ಭ್ರಮೆ ಮೂಡಿರುವುದರಿಂದಲೇ ಕನ್ನಡ ಶಾಲೆಗಳ ಈ ದುಸ್ಥಿತಿಗೆ ಕಾರಣ ಎಂದು ಕೋಚೆ ಹೇಳಿದರು.

ಮಾತುಕತೆಯಿಂದಷ್ಟೇ ಸಾಧ್ಯ:

        ಕಾವೇರಿ, ಕೃಷ್ಣಾ ನದಿ ಹಂಚಿಕೆ ವಿವಾದದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕಳೆದ 20ವರ್ಷಗಳಿಂದ ಕರ್ನಾಟಕ ಮತ್ತು ನೆರೆ ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ವಿವಾದ ನಡೆಯುತ್ತಲೇ ಇದೆ. ಇದನ್ನು ನ್ಯಾಯಾಲಯದ ಮೂಲಕವೇ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ. ಪರಸ್ಪರ ಕೂತು ಚರ್ಚಿಸಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ದೇಣಿಗೆ ಸಂಗ್ರಹಿಸೋಣ:

         ಸಮ್ಮೇಳನ ಸರ್ಕಾರದ ಸಹಾಯಕ್ಕೆ ಕೈಚಾಚಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲೆ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ನಡೆಯುತ್ತಿತ್ತು. ಈಗ ಹಾಗಿಲ್ಲ, ಸರ್ಕಾರದ ಹಣ ಎಂದಾಕ್ಷಣ ಅದ್ದೂರಿತನವೂ ಬರುತ್ತದೆ. ಹಾಗಾಗಿ ಮತ್ತೆ ಜನರಿಂದ ಹಣ ಸಂಗ್ರಹಿಸಿ, ಸರಳ ಸಮ್ಮೇಳನ ಆಯೋಜಿಸಲು ಸಾಧ್ಯ ಎಂದರು.

ಒಂದಾಗಿ ಬಾಳ್ಳೋಣ:

              ಗಡಿ, ಪ್ರಾದೇಶಿಕ ಅಸಮಾನತೆ ಸೇರಿದಂತೆ ಇವತ್ತು ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪ್ರೀತಿಯೇ ಉತ್ತರ ಎಂದು ಕೋಚೆ ನುಡಿದರು. ತಮ್ಮ ಸಂವಾದದ ಕೊನೆಯ ಆಶಯ ಇಷ್ಟೇ, ಎಲ್ಲರೂ ಒಂದಾಗಿ ಇರೋಣ, ಪ್ರೀತಿಯಿಂದ ಬಾಳ್ಳೋಣ ಎಂದರು. 

ಕೃಪೆ : ಉದಯವಾಣಿ

Saturday, January 19, 2013

ಧಾರವಾಡ ಸಾಹಿತ್ಯ ಸಂಭ್ರಮ : ನಿಬಂಧನೆಗಳು ರದ್ದು !

ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ನಿಬಂಧನೆಗಳನ್ನು ನಾಡಿನ ಹಲವಾರು ಬರಹಗಾರರು ಖಂಡಿಸುವ ಮೂಲಕ, ವಿರೋಧಿಸುವ ಮೂಲಕ ಪರ್ಯಾಯ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ ಮೇಲೆ ಸಾಹಿತ್ಯ ಸಂಭ್ರಮದ ಸಂಘಟಕರು ಎಚ್ಚೆತ್ತುಕೊಂಡು ತಾವು ವಿಧಿಸಿದ್ದ ನಿಬಂಧನೆಗಳನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಇಲ್ಲಿದೆ ನೋಡಿ ;

ಇದೇ 25, 26 ಮತ್ತು 27ರಂದು ನಗರದಲ್ಲಿ ನಡೆಯಲಿರುವ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಪಾಲ್ಗೊಳ್ಳುವವರಿಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ರದ್ದುಪಡಿಸಲಾಗಿದೆ ಎಂದು `ಧಾರವಾಡ ಸಾಹಿತ್ಯ ಸಂಭ್ರಮ'ದ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟಪಡಿಸಿದ್ದಾರೆ.
`ಈ ನಿಬಂಧನೆಗಳ ಬಗ್ಗೆ ಬಹಳಷ್ಟು ತಪ್ಪು ತಿಳಿವಳಿಕೆ ಉಂಟಾಗಿದ್ದರಿಂದ ಮತ್ತು ಇವುಗಳನ್ನೇ ಮುಖ್ಯವಾಗಿರಿಸಿಕೊಂಡು ವಿರೋಧ ವ್ಯಕ್ತವಾಗುತ್ತಿರುವುದರಿಂದ ಇವುಗಳನ್ನು ರದ್ದುಪಡಿಸಲಾಗಿದೆ. ಈ ಸಂಭ್ರಮವನ್ನು ಮೊದಲ ಪ್ರಯೋಗವಾಗಿ ಹಮ್ಮಿಕೊಳ್ಳಲಾಗಿದ್ದು, ಚರ್ಚಿಸಬೇಕಾಗಿರುವ ಸಾಕಷ್ಟು ವಿಷಯಗಳನ್ನು ಮುಂಬರುವ ಸಂಭ್ರಮಗಳಲ್ಲಿ ಎತ್ತಿಕೊಳ್ಳಲು ಅವಕಾಶ ಇದ್ದೇ ಇದೆ. 60 ಸಂಪನ್ಮೂಲ ವ್ಯಕ್ತಿಗಳು ಮತ್ತು ಸುಮಾರು 60 ವಿಶೇಷ ಆಮಂತ್ರಿತರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದಾರೆ'.
`ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ. 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರ ಕೊಡುವ ಅನುದಾನ ಸಾಲದೇ ಇದ್ದುದರಿಂದ ಸಂಭ್ರಮದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪ್ರತಿನಿಧಿ ಶುಲ್ಕ ಆಕರಿಸಲಾಗುತ್ತಿದೆ. ಕೆಲವರು ತಪ್ಪು ತಿಳಿವಳಿಕೆಯಿಂದ ಆರೋಪಿಸುತ್ತಿರುವಂತೆ ಇದರಿಂದ ಯಾವುದೇ ಹಣ ಮಾಡಿಕೊಳ್ಳುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಸಂಭ್ರಮದ ವೆಚ್ಚ ಸುಮಾರುರೂ 16ರಿಂದರೂ 18 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ಕೆಲವರು ಆರೋಪಿಸುತ್ತಿರುವಂತೆರೂ 40ರಿಂದರೂ 50 ಲಕ್ಷ ಸಂಗ್ರಹಿಸಲಾಗಿಲ್ಲ. ಸಂಭ್ರಮ ಮುಗಿದ ಕೆಲವೇ ದಿನಗಳೊಳಗಾಗಿ ಇದರ ಖರ್ಚು ವೆಚ್ಚವನ್ನು ಪಾರದರ್ಶಕವಾಗಿ ಪ್ರಕಟಿಸಲಾಗುವುದು' ಎಂದು ಡಾ.ಗಿರಡ್ಡಿ ತಿಳಿಸಿದ್ದಾರೆ.

Friday, August 10, 2012

ಚನ್ನಮ್ಮ ವಿವಿ ನೇಮಕಾತಿ ಕರ್ಮಕಾಂಡ !

  • ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪೂರ್ವ ನಿಗದಿತ ಪಟ್ಟಿಯಲ್ಲಿರುವವರೇ ಆಯ್ಕೆಯಾಗಿದ್ದು ಮೊದಲೇ ಹರಡಿದ್ದ ಸುದ್ದಿ ಖರೆ ಆಗಿದೆ..!

    ಖೇದದ ಸಂಗತಿ ಎಂದರೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿರುವ ಸುಳಿವನ್ನು ರಾಜ್ಯಪಾಲ, ವಿವಿ ಸಿಂಡಿಕೇಟ್‌ ಸದಸ್ಯರಿಗೆ ಲಿಖೀತವಾಗಿ ಮಾಹಿತಿ ನೀಡಿದರೂ ಅರ್ಹರಿಗೆ ಮಾತ್ರ ನ್ಯಾಯ ದೊರೆತಿಲ್ಲ. ವಿವಿ ಆಂತರಿಕ ಶಕ್ತಿಗಳೇ ಮೇಲುಗೈ ಸಾಧಿಸಿವೆ.

    ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಕೂಗನ್ನು ಯಾರೊಬ್ಬರೂ ಗಂಭೀರ ಪರಿಗಣಿಸದೇ ಹೋಗಿದ್ದರಿಂದ ಅರ್ಹತೆ, ಅನುಭವಗಳು ಗಾಳಿಗೆ ತೂರಲ್ಪಟ್ಟಿವೆ. ಹುದ್ದೆ ಪಡೆಯುತ್ತೇವೆಂದು ನಂಬಿದವರು, ಸಂದರ್ಶನದಲ್ಲಿ ಉತ್ತಮವಾಗಿ ಉತ್ತರ ನೀಡಿದ್ದೇವೆಂಬ ಆತ್ಮವಿಶ್ವಾಸ ಹೊಂದಿದರು ನಿರಾಸೆ ಪಡುವಂತಾಗಿದೆ. ಇಂತಹ ಹುದ್ದೆಗೆ ಇಂತಹವರೇ ನೇಮಕಾತಿ ಆಗುತ್ತಾರೆಂಬ ಸುದ್ದಿಯಲ್ಲಿ ಇದ್ದವರಿಗೇ ಪಟ್ಟ ನೀಡಿದ ಕೀರ್ತಿಗೆ ವಿವಿ ಭಾಜನವಾಗಿದೆ!

    ಅರ್ಹತೆ, ಅನುಭವದಿಂದ ಹುದ್ದೆ ದೊರೆಯುತ್ತದೆಂಬ ಆತ್ಮವಿಶ್ವಾಸ ಹೊಂದಿದವರು ತಮಗಿಂತ ಕಡಿಮೆ ಅರ್ಹರಾದವರಿಗೆ ಹುದ್ದೆ ಭಾಗ್ಯ ದೊರೆತಿದ್ದು ಕಂಡು ಮಾನಸಿಕವಾಗಿ ಕುಗ್ಗಿ ಹೋಗಿ ವಿವಿಗೆ ಹಿಡಿಶಾಪ ಹಾಕುವಂತಾಗಿದೆ.

    ಇದಕ್ಕೆ ಸಾಕ್ಷಿಯೆಂಬಂತೆ ಸಮಾಜಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಜ. 12ರಂದು ಸಂದರ್ಶನ ನಡೆದಿತ್ತು. ಸಂದರ್ಶನಕ್ಕೆ ಮೊದಲೇ ಈ ಎರಡೂ ಹುದ್ದೆಗಳಿಗೆ ಯಾರು ಆಯ್ಕೆ ಆಗುತ್ತಾರೆ ಎಂಬ ಸುದ್ದಿ ಹರಡಿತ್ತೋ ಅವರ ಹೆಸರುಗಳೆ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರೇ ಹುದ್ದೆ ಅಲಂಕರಿಸಿದ್ದಾರೆ.

    ವಿವಿಯಲ್ಲಿನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವರು ಜ. 16ರಂದೇ ವಿವಿಯ ಎಲ್ಲ ಸಿಂಡಿಕೇಟ್‌ ಸದಸ್ಯರಿಗೆ ಪತ್ರ ಬರೆದು ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹುದ್ದೆಗೆ ಇಂತಹವರೇ ಆಯ್ಕೆ ಆಗುತ್ತಾರೆ ಎಂಬ ಅನುಮಾನ ಇದೆ. ಆಯ್ಕೆಯ ಪೂರ್ವನಿರ್ಧಾರ ಆಗಿದ್ದರೆ, ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೇಕೆ? ಸಂದರ್ಶನದ ನಾಟಕ ಯಾಕೆ ಬೇಕು ಎಂದು ಪ್ರಶ್ನಿಸಿ ಮನದಾಳದ ನೋವು ತೋಡಿಕೊಂಡಿದ್ದರು.

    ಪತ್ರದಲ್ಲಿ ಆಯ್ಕೆಯಾಗಲಿರುವ ಅಭ್ಯರ್ಥಿ ಹೆಸರು ನಮೂದಿಸಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಜ. 17ರಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರಿಗೂ ಮನವಿ ಕಳುಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌.ಡಿ, ನೆಟ್‌-ಸೆಟ್‌ ಮುಗಿಸಿದ, 20 ವರ್ಷಕ್ಕಿಂತ ಹೆಚ್ಚಿನ ಬೋಧನಾ ಅನುಭವ ಹೊಂದಿದವರು ಸಂದರ್ಶನದಲ್ಲಿ ಭಾಗಿಯಾಗಿದ್ದರೂ, ಕೇವಲ ಸೆಟ್‌ ಮಾತ್ರ ಮುಗಿಸಿದ ವ್ಯಕ್ತಿ ಆಯ್ಕೆ ಆಗುವ ಸುದ್ದಿ ಹರಡಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

    ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಆಯ್ಕೆಯಾದವರ ಪಟ್ಟಿ ಮಂಡಿಸಲ್ಪಟ್ಟಾಗ ಯಾರು ಹುದ್ದೆ ಪಡೆಯುತ್ತಾರೆಂದು ಆರೋಪಿಸಲಾಗಿತ್ತೋ ಅವರೇ ಹುದ್ದೆಗೆ ಆಯ್ಕೆಯಾಗಿದ್ದುದು ದೃಢೀಕರಿಸಲ್ಪಟ್ಟಿತು!

    ಪೆನ್ಸಿಲ್‌ನಿಂದ ನಮೂದನೆ ಯಾಕೆ?: ರಾಣಿ ಚನ್ನಮ್ಮ ವಿವಿಯ ಹುದ್ದೆಗಳ ಆಯ್ಕೆಗೆ ನಡೆದ ಸಂದರ್ಶನ ಬಹುಶಃ ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಸಂದರ್ಶನಕ್ಕಿಂತಲೂ ಕಡೆಯಾಗಿ ನಡೆಯಿತು ಎಂದು ಹೇಳಲಾಗುತ್ತಿದೆ.

    ಮಹತ್ವದ ಹುದ್ದೆಗಳಿಗೆ ಅದಾಗಲೇ ಹೆಸರುಗಳು ನಿಗದಿಯಾಗಿದ್ದರಿಂದಲೋ ಏನೋ ನೇಮಕಾತಿ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳನ್ನು ತಲಾ ಕೆಲವೇ ನಿಮಿಷಗಳಂತೆ ಸಂದರ್ಶಿಸಿ ಕಳುಹಿಸಲಾಗಿದೆ. ಸಮಾಜಶಾಸ್ತ್ರ ವಿಭಾಗದಲ್ಲಿ 45 ಜನರನ್ನು ಕೇವಲ ಆರು ತಾಸಿನಲ್ಲಿ ಸಂದರ್ಶಿಸಿ ಕಳುಹಿಸಿರುವುದು ವಿವಿ ದಾಖಲೆಯೇ ಸರಿ ಎನ್ನುವುದು ಅಭ್ಯರ್ಥಿಗಳ ಅನಿಸಿಕೆ. ಇದರಲ್ಲಿ ಭೋಜನ ಸಮಯವೂ ಸೇರಿದೆ ಎನ್ನುತ್ತಾರೆ ಅಭ್ಯರ್ಥಿಗಳು.

    ಅರ್ಥಶಾಸ್ತ್ರ ವಿಭಾಗದಲ್ಲಿ ಸಂದರ್ಶನಕ್ಕೆ ಆಗಮಿಸಿದ್ದ ಅಭ್ಯರ್ಥಿಯೊಬ್ಬರನ್ನು ಸಂದರ್ಶಿಸಿದವರು, ಅಧ್ಯಯನ ಕೇಂದ್ರಗಳನ್ನು ಪದವಿ ಕಾಲೇಜುಗಳಲ್ಲಿಯೇ ವಿವಿ ಆರಂಭಿಸುತ್ತಿದೆ. ಹೀಗಿರುವಾಗ ಪಿಎಚ್‌ಡಿ ಆದ ನೀವು ಅಲ್ಲಿಯೇ ಪಾಠ ಮಾಡಿ. ಇಲ್ಲಿಗೆ ಯಾಕೆ ಬರುತ್ತೀರಿ ಎನ್ನುವುದಾಗಿ ಹೇಳಿ ವಾಪಸು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

    ಸಂದರ್ಶನಕ್ಕೆ ಹೋದ ಅಭ್ಯರ್ಥಿಗಳು ಮಂಡಿಸಿದ ಪ್ರಬಂಧಗಳ ದಾಖಲಾತಿಗಳನ್ನು, ಉಪನ್ಯಾಸದ ಮಾಹಿತಿಯನ್ನು, ವಿವಿಧ ಸಾಧನೆಗಳ ದಾಖಲೆಗಳನ್ನು ಪರಿಶೀಲಿಸುವಾಗ ನೋಂದಣಿಯನ್ನು ಪೆನ್ಸಿಲ್‌ನಿಂದ ಮಾಡಿಕೊಂಡು ಅಭ್ಯರ್ಥಿಗಳ ಸಹಿ ಪಡೆಯಲಾಗಿದೆ. ಪಿನ್ಸಿಲ್‌ನಿಂದ ನಮೂದಿಸಿರುವುದೇಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬುದು ಕೆಲ ಅಭ್ಯರ್ಥಿಗಳ ಅನಿಸಿಕೆ. ಸಂದರ್ಶನದಲ್ಲಿ ಉತ್ತಮವಾಗಿ ಉತ್ತರಿಸಿದ ಕೆಲ ಅಭ್ಯರ್ಥಿಗಳಿಗೆ ಹುದ್ದೆ ನೀಡಿದರೆ ಏನು ಅಭಿವೃದ್ಧಿ ಕೈಗೊಳ್ಳುತ್ತೀರಿ ಎಂಬ ನೀಲಿನಕ್ಷೆ ತೋರಿಸಿ ಎಂದು ಕೇಳಲಾಗಿದೆಯಂತೆ.

    ಡೀಸೆಂಟ್‌ ನೋಟ್‌ಗೂ ಡೋಂಟ್‌ ಕೇರ್‌: ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಅರ್ಹರಿಗೆ ಆದ ಅನ್ಯಾಯ, ಪಾರದರ್ಶಕತೆ ಕೊರತೆ ಬಗೆಗೆ ಆಕ್ಷೇಪವೆತ್ತಿ ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಐವರು ಸದಸ್ಯರು ಡೀಸೆಂಟ್‌ ನೋಟ್‌ ಸಲ್ಲಿಸಿದ್ದರು. ಕೆಲ ಸದಸ್ಯರು ಅಸಮರ್ಥರ ನೇಮಕಾತಿ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

    ಇದಾವುದನ್ನೂ ಗಂಭೀರವಾಗಿ ಪರಿಗಣಿಸದ ವಿವಿ ಕುಲಪತಿಯವರು ತಮ್ಮದೇ ನಿರ್ಧಾರ ಪ್ರಕಟಿಸಿ ನೇಮಕಾತಿ ಪಟ್ಟಿ ಮಂಡಿಸಿ ಅನ್ಯಾಯವಾದವರು ಬೇಕಾದರೆ ಕಾನೂನು ಮೊರೆ ಹೋಗಲಿ ಎಂಬ ಹೇಳಿಕೆ ನೀಡಿದರು ಎಂದು ಹೇಳಲಾಗುತ್ತಿದೆ.

    ಸಭೆ ನಂತರ ಡೀಸೆಂಟ್‌ ನೋಟ್‌ ಮಂಡಿಸಿದ ಸದಸ್ಯರ ಮನವೊಲಿಕೆಗೆ ಕುಲಪತಿ ಯತ್ನಿಸಿದರು ಎಂದು ಹೇಳಲಾಗುತ್ತಿದ್ದು, ಇಬ್ಬರು ಸದಸ್ಯರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಮೂವರು ಸದಸ್ಯರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಲಾಗುತ್ತಿದೆ.

    ನೇಮಕಾತಿ ಅನ್ಯಾಯದ ಬಗ್ಗೆ ರಾಜ್ಯಪಾಲರಿಗೂ ದೂರು ಹೋಗಿದೆ. ಆದರೆ, ಉತ್ತರ ಕರ್ನಾಟಕದ ವಿವಿಗಳ ಘಟಿಕೋತ್ಸವ ಇನ್ನಿತರ ಸಮಾರಂಭಗಳಿಂದ ದೂರವೇ ಉಳಿದಿರುವ ರಾಜ್ಯಪಾಲರು ಅನ್ಯಾಯದ ವಿರುದ್ಧದ ದೂರನ್ನು ದೂರವೇ ಇಟ್ಟು ಬಿಟ್ಟರೆ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ.
    ಅಮರೇಗೌಡ ಗೋನವಾರ, ಉದಯವಾಣಿ- | Jan 31, 2012

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.