Showing posts with label ಅನುವಾದ. Show all posts
Showing posts with label ಅನುವಾದ. Show all posts

Tuesday, March 04, 2014

ವಡ್ಡರ ವೇದನೆಯ ಎರಡು ಪ್ರಸಂಗಗಳು

ವಡ್ಡರ ವೇದನೆ (ಕಾದಂಬರಿ)
ಮೂಲ ಮರಾಠಿ : ಲಕ್ಷ್ಮಣ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
---------------------------------------------
ದಿನಗಳು ಉರುಳುತ್ತಲೇ ಇದ್ದವು. ಈಗಾಗಲೆ ಅವರಿಬ್ಬರೂ ಪರಸ್ಪರ ನೋಡದಿದ್ದರೆ ಒಬ್ಬರಿಗೂ ನೆಮ್ಮದಿ ಎನಿಸುತ್ತಿರಲಿಲ್ಲ. ಒಂದು ದಿನ ಕ್ಲಾಸುಗಳೆಲ್ಲ ಮುಗಿದಿದ್ದವು. ತುಕಾರಾಮನನ್ನು ಭೇಟಿಯಾದ ಆಕೆ ತನಗೆ ಲೆಕ್ಕವೊಂದು ಬರುತ್ತಿಲ್ಲ ; ತಿಳಿಸಿಕೊಡಬೇಕು ಎಂದಳು. ಕಾಲೇಜಿನ ಬೆಲ್ ಆಗಿ ಅಳಿದುಳಿದವರು ಹೋದ ಮೇಲೆ ತುಕಾರಾಮ ಕ್ಲಾಸ್ ರೂಮಿನ ಕೊನೆಯ ಬೆಂಚಿನ ಮೇಲೆ ಅಭ್ಯಾಸ ಮಾಡುತ್ತಿರುವನಂತೆ ನಟಿಸುತ್ತ ಕುಳಿತ. ಎಲ್ಲ ಗೆಳತಿಯರ ಕಣ್ಣು ತಪ್ಪಿಸಿ ಸುನೀತಾ ಅಲ್ಲಿಗೆ ಬಂದು ತುಕಾರಾಮ ಹಿಡಿದುಕೊಂಡಿದ್ದ ಪುಸ್ತಕವನ್ನು ಕಿತ್ತಿಸೆದಳು. “ಯಾಕೋ ತುಕಾರಾಮ, ಯಾರ ಹಾದಿ ಕಾಯಕತ್ತಿ ?” ಎಂದು ನಕ್ಕಳು. ಆತ ಕೂಡ ನಗುತ್ತಲೆ, “ಅಲ್ಲss ನಿನ್ನ ಬಿಟ್ಟ ನಾ ಬ್ಯಾರೆ ಯಾರ್ ಹಾದಿ ಕಾಯ್ಲಿ ಹೇಳಲಾ ? ನಿನ್ನ ಆದೇಸ ಪಾಲ್ಸಾಕ ನಿನ್ನss ಕಾಯ್ಕೋತ ಕುಂತ್ಯಾನ ನೋಡ” ಎಂದ. ಕ್ಲಾಸ್ ರೂಮಿನ ಬಾಗಿಲು ಮುಂದೆ ಮಾಡಿ, ಕಿಟಕಿಗಳನ್ನೆಲ್ಲ ಬಂದ್ ಮಾಡಿ ಇಬ್ಬರೂ ಹಿಂದಿನ ಬೆಂಚಿನಲ್ಲಿ ಹೋಗಿ ಕುಳಿತರು. ಯಾರಾದರೂ ಬಂದರೆ ಅಭ್ಯಾಸ ಮಾಡುತ್ತಿರುವಂತೆ ಇರಬೇಕೆಂದು ಗಣಿತದ ಪುಸ್ತಕ, ವಹಿ, ಪೆನ್ನು ತೆಗೆದು ಬೆಂಚಿನ ಮೇಲೆ ಇಟ್ಟರು !
ಇಡೀ ಕಾಲೇಜು ಸ್ಮಶಾನದಂತೆ ಮೌನವಾಗಿತ್ತು. ಇಬ್ಬರೂ ಕೈಕೈ ಹಿಚುಕುತ್ತ, ಕಾಲನ್ನು ಕಾಲಿನಿಂದ ಕೆರೆಯುತ್ತ ಕುಳಿತುಕೊಂಡಿದ್ದರು ! “ತುಕಾರಾಮಾ, ನೀ ಭಾssಳ ಮಸ್ತ ಅದಿ. ಕಲ್ಲಿನಂಥಾ ನಿನ್ನ ಮೈಯ್ಯಿ, ಗಟ್ಟಿಮುಟ್ಟಾಗಿರೋ ನಿನ್ನ ತೋಳು ನಂಗ ಭಾssಳ ಹಿಡಿಸ್ಯಾವು” ಎಂದ ಆಕೆ ಮೆಲ್ಲಗೆ ತನ್ನ ತುಟಿಯನ್ನು ಮುಂದೆ ತಂದು ಆತನ ಗಲ್ಲಕ್ಕೆ ಒತ್ತಿದಳು. ಆತನ ಮೈಯೆಲ್ಲ ಕರೆಂಟ್ ಹೊಡೆದಂತಹ ಅನುಭವವಾಯಿತು. ಆತ ತಡೆದುಕೊಳ್ಳದೇ ಆಕೆಯನ್ನು ಬಿಗಿಯಾಗಿ ತಬ್ಬಿಕೊಂಡು, “ಸುನೀತಾ, ನಿನ್ನ ಮೈ, ಬಿಡಿಸಿಟ್ಟ ಹತ್ತಿಗತೇ ಎಟ್ಟ ಮೆತ್ತಗ ಏತ್ಯೇ ? ನಿನ್ನ ಹೊಗಳಾಕ ನಂಗ ಬರೂದುಲ್ಲ. ಜಗತ್ತಿನ್ಯಾಗಿನ ಎಲ್ಲಾ ಚೆಲುವ ನಿನ್ನೊಳಗss ತುಂಬಕೊಂಡೇತಿ’ ಎಂದ
ಪ್ರೇಮದ ಕಾವು ಏರಿ ಕಾಮವಾಗಿ ಕೈ ಬೀಸಿ ಕರೆಯತೊಡಗಿತ್ತು ! ಆತ ಮೆಲ್ಲಗೆ ಆಕೆಯ ಮೊಲೆಗಳ ಮೇಲೆ ಕೈ ಇಟ್ಟು ಸವರಿದ ! ಗುಂಡುಗುಂಡಾಗಿದ್ದ ಅವು ಭೂಗೋಳದಲ್ಲಿ ಹೇಳುವ ಗೋಲಾಕಾರದ ಸಣ್ಣ ಸಣ್ಣ ಭೂಮಿಯಂತಿವೆ ಎಂದೆನಿಸಿತು. ಮೊಲೆಗಳನ್ನು ಸವರುತ್ತಿದ್ದವನು ಮೆಲ್ಲಗೆ ಒಳ ಕೈ ಹಾಕಿ ಹಿಚುಕತೊಡಗಿದ ! ಆಕೆಯ ಮೊಲೆಗಳ ಸ್ಪರ್ಷದ ಅಮಲಿನಲ್ಲಿ ಆತ ತನ್ನನ್ನೇ ಮರೆತುಬಿಟ್ಟ ! ಸುನೀತಾಳನ್ನು ಮೇಲೆಳೆದುಕೊಂಡು ಬಿಗಿಯಾಗಿ ತಬ್ಬಿಕೊಂಡ. ಆತನ ಕೈಗಳು, ಕೈ ಬೆರಳುಗಳು ಆಕೆಯ ಪ್ರತಿಯೊಂದು ಅಂಗವನ್ನು ತಡಕಾಡುತ್ತ, ಮುಟ್ಟುತ್ತ, ಹಿಚುಕುತ್ತ ಜಗ್ಗುತ್ತ ಆನಂದವನ್ನು ಅನುಭವಿಸುತ್ತಿದ್ದವು !
ತುಕಾರಾಮ ಮತ್ತು ಸುನೀತಾ ಪ್ರೇಮ-ಕಾಮದ ಪಾಕದಲ್ಲಿ ಎಷ್ಟೊಂದು ಮೈ ಮರೆತ್ತಿದ್ದರೆಂದರೆ ಕಾಲೇಜಿನ ಸಿಪಾಯಿ ಬಂದು ಕ್ಲಾಸ್ ರೂಮಿನ ಬಾಗಿಲಿಗೆ ಕೀಲಿ ಜಡಿದು ಹೋದದ್ದು ಕೂಡ ಅವರಿಗೆ ಗೊತ್ತಾಗಲಿಲ್ಲ. ಅವರಿಬ್ಬರೂ ಸಮಯ, ಸಮಾಜ, ಸಂಬಂಧಗಳೆಲ್ಲವನ್ನೂ ಮರೆತು, ಪ್ರಕೃತಿಯ ಇಚ್ಚೆಗೆ ಬದ್ಧರಾಗಿ ಪ್ರೇಮ-ಕಾಮದ ಆನಂದ ಪಡೆಯುವ ಉತ್ತುಂಗ ಶಿಖರವನ್ನೇರ ತೊಡಗಿದ್ದರು !

*****
ಶಂಕರ ದಯನೀಯವಾಗಿ, ಪರಿಪರಿಯಿಂದ ವಿನಂತಿ ಮಾಡಿಕೊಂಡ. “ಮಾಸ್ತರ, ನಮ್ಮ ಹುಡ್ಗ್ನ ಕಡಿಂದ ತಪ್ಪಾಗಿದ್ರ ಹೊಟ್ಟ್ಯಾಗ ಹಾಕ್ಕೋರ್ರಿ. ಹಕನಾಕss ಅಂವ್ನ ಬದ್ನಾಮಿ ಮಾಡಬ್ಯಾಡ್ರಿ. ಅಂವ್ಯಾನಭೀ ತಪ್ಪss ಮಾಡಿಲ್ಲssತ ನಾ ಹೇಳೂದುಲ್ರಿ ... ಅಲ್ರಿ ಮಾಸ್ತರ, ಅಂವ್ನ ಜೋಡಿ ಇದ್ದ ಪೋರಿನ ಯಾಕ ಕರಿಸಿಲ್ರಿ ನೀವಾ ? ಇದ್ಯಾನ ಬರೋಬ್ಬರಿ ಅಲ್ಲ ತೆಗಿರಿ... ನಾವ ಹೊಟ್ಟಿ-ಬಟ್ಟಿ ಅನೂಲಿ ಮಾಡಕೊಂದ ನನ್ನ ಮಗ್ಗ ಸಾಲಿ ಕಲ್ಸತೇವ್ರಿ…. ಯ್ಯಾನರೇ ಇರ್ಲಿ ಬಿಡ್ರಿ ... ... ಇದೊಂದು ಸತೀ ನನ್ನ ಮಗನ ಮಾಫ ಮಾಡ್ರಿ. ನನ್ನ ಮಗ್ಗ ಕಾಲೇಜ್ ಕಲ್ಯಾಕ ಅನವ ಮಾಡ್ಯಕೊಡ್ರಿ... ...“ ಎಂದು ಬಾಯಿಗೆ ಬಂದುದ್ದನೆಲ್ಲ ಶಂಕರ ಮಾತನಾಡುತ್ತಲೇ ಇದ್ದ.
ನಡುವೆಯೇ ಬಾಯಿ ಹಾಕಿದ ಪ್ರಿನ್ಸಿಪಾಲ್, “ನೋಡ್ರಿ, ಮೀಟಿಂಗನ್ಯಾಗ ಎಲ್ಲಾ ಡಿಸ್ಕಸ್ ಮಾಡಿ ತೀರ್ಮಾನ ಮಾಡೇ ನಿಮ್ಮ ಮಗನ ಕಡೀ ತಪ್ಪದ ಮಾಡಬಾರ್ದಂಥಾ ದೊಡ್ಡ ಗುನ್ಹಾ ಅದು. ಅಂವ್ಗ ದಂಡಾ ಹಾಕಿ, ಶಿಕ್ಷಾ ಕೊಡಲಿಲ್ಲಂದ್ರ ನಮ್ಮ ಕಾಲೇಜನ್ಯಾಗ ಶಿಸ್ತ ಅನ್ನೂದss ಉಳಿಯುದಿಲ್ಲ. ದಂಡಾ ತುಂಬ್ರ್ರಿ ; ಇಲ್ಲಂದ್ರ ಮಗನ ಕರ್ಕೊಂಡ ಮನಿಗಿ ಹೋಗ್ರಿ” ಎಂದು ದಬಾಯಿಸತೊಡಗಿದ. ಹೊರಗೆ ಕಿಟಕಿ ಸುತ್ತೆಲೆಲ್ಲ ವಿದ್ಯಾರ್ಥಿಗಳು ಮುತ್ತಿಕೊಂಡು ಒಳಗೆ ನಡೆದಿರುವ ಪ್ರಸಂಗವನ್ನು ಕುತೂಹಲದಿಂದ ನೋಡುತ್ತಿದ್ದರು. ತುಕಾರಾಮ ಕೂಡ ಬಾಗಿಲ ಹೊರಗೆ ಚಿಂತೆಯಲ್ಲಿ ನಿಂತಿದ್ದ !
ಪ್ರಿನ್ಸಪಾಲ್‍ನ ಮಾತು ಕೇಳಿ ಶಂಕರನ ಸಿಟ್ಟು ನೆತ್ತಿಗೇರುತ್ತಿತ್ತು. ಅದನ್ನು ತಡೆದುಕೊಳ್ಳುವ ಪ್ರಯತ್ನದಲ್ಲಿಯೇ ಆತ, “ಮಾಸ್ತರ್ರ, ಹಲ್ಕಟ್ ಕೆಲ್ಸಾ ಮಾಡಿದ ಅಪವಾದ ಹೊರ್ಸಿ ನನ್ನ ಮಗ್ಗ ಆssಟ ಯಾಕ ದಂಡಾ ಹಾಕ್ತೇರಿ ? ... ಮಾಸ್ತರ್ರss ಶಾರದಾಗಿನ ಹಿಕ್ಮತ್ ನಂಗೂ ಗೊತ್ತೇತಿ... ಈಗ್ಯಾನ ... ಐದನೂರಾ ಐವತ್ತೊಂದ ರುಪಾಯಿ ತುಂಬಾಕss ಬೇಕssತ ನಿಣ್ರ್ಯಾ ಮಾಡೇರಿ ?...” ಎಂದಾಗ ಪ್ರಿನ್ಸಿಪಾಲ್, “ಹೌದರಿ, ಅದss ಕೋನಿ ನಿರ್ಣಯಾ. ದಂಡಾ ಕಟ್ಟೂಲ್ಲದ ನಿಮ್ಮ ಹುಡುಗ ಕ್ಲಾಸಿಗೀ ಕುಂತಕೊಳ್ಳು ಹಾಂಗಿಲ್ಲ” ಎಂದ.
“ನೋಡ್ರಿ ಮಾಸ್ತರ್ರ, ನಾ ನಿಮ್ಮಗತೆ ಕಲ್ತಾಂವೂ ಅಲ್ಲ ; ತಿಳಿದಾಂವೂ ಅಲ್ಲ. ನಾ ಒಬ್ಬ ಬಡುವ ವಡ್ರ ಅಡಾನಿ ಮನಿಸ್ಯಾ. ಆದರ ನಂಗ ಯ್ಯಾನಭೀ ಹೇಳಿದರ ನಡಿತೇತಿ ಅssತ ತಿಳ್ಕೂಬ್ಯಾಡ್ರಿ. ನಂಗೂ ಎಲ್ಲಾ ಗೊತ್ತೇತಿ... ಹೋಗ್ಲಿ ಬಿಡ್ರಿ, ನಾ ದಂಡಾ ತುಂಬಾಕ ಕಬೂಲಿ ಅದ್ಯಾನ... ಆದರ ನನ್ನ ಮಗ್ಗ ನೀವೆಲ್ಲಾರೂ ಸೇರಿ ಅರ್ಧೂಟ್ ಮಾಡೇರಿ ! ಅದಕ್ಕ ಯ್ಯಾನ ಮಾಡ್ತೇರಿ ?” ಎಂದು ಶಂಕರ ದಿಟ್ಟತನದಿಂದಲೇ ಹೇಳಿದ. ಪ್ರಿನ್ಸಿಪಾಲ್‍ನಿಗೆ ಏನೊಂದೂ ತಿಳಿಯದೇ “ಅರ್ಧೂಟ ಅಂದ್ರ ಏನ್ರಿ ? ಈ ನಿಮ್ಮ ಭಾಷಾ ನಮಗ ಆರ್ಥ ಆಗೂದಿಲ್ಲ. ಒಂದೀಸ ತಿಳಿಯಾಂಗ ಹೇಳ್ರಿ” ಎಂದ.
“ಮಾಸ್ತರ್ರss ನಾವ ಎತ್ತಕ ನೀರ ಕುಡಸಾಕ ಹೋಳಿಗೆ ಕರ್ಕೋಂಡ್ ಹೋಗತ್ಯಾವರಿ ! ಹೊಳ್ಯಾಗ ಇಳ್ದ ನೀರಡಿಸಿದ ಎತ್ತಾ ನೀರಡಿಕಿ ಇಂಗೂತಕಾ ಕುಡಿತೇತಿ. ಆಗ ಯಾರರೆ ನೀರಾಗ ಕಲ್ಲ ಒಗದ್ರ, ಗದ್ಲಾ ಮಾಡ್ಯರ ಎತ್ತಾ ಅಂಜಿಕಿಸಿ ನೀರ ಕುಡ್ಕೋದ ಬಿಟ್ಟ ಓಡಿ ಹೋತೇತ್ರಿ. ಅದರ ನೀರಡಿಕೀ ಇನ್ನಾ ಇಂಗಿರುದುಲ್ಲ. ನಾವ ಮತ್ತ ಅದನ ಜುಲುಮಿಲೆ ಕರ್ಕೊಂಡ್ ಬಂದ ನೀರ ಕುಡ್ಸಬೇಕಾತೇತಿ. ಅದ ನೀರ ಕುಡ್ಯಾಗ, ಯಾರರೇ ಮತ್ತss ನೀರಾಗ ಕಲ್ಲ ಒಗಿದಾಂಗ, ಗದ್ಲಾ ಮಾಡದಾಂಗ ಕಾಯ್ಬೇಕಾತೇತಿ. ಆವಾಗ ಎತ್ತಾ ಹೊಟ್ತುಂಬ ನೀರ ಕುಡ್ದ, ತನ್ನಿಂತಾನss ಹೊಳಿ ಬಿಟ್ಟ ಮ್ಯಾಗ ಬರ್ತೇತಿ. ಎತ್ತಗ ಹೆಂಗ ಬುಚಕುಳಾ (ಅರ್ಧೂಟ್) ಆಗತೇತ್ಯಲಾ ಹಂಗ ನಮ್ಮ ಹುಡಗ್ಗss ಆಗೇತಿ. ನಮ್ಮ ಹುಡ್ಗ ಮತ್ತ ಆ ಪೋರಿ ಒಳಗ ಇರಬೇಕಾರ ನೀವ ಬಾಕ್ಲಾ ತಗ್ದ ಅಡ್ಡಗಾಲ ಹಾಕಿ, ನನ್ನ ಮಗ್ಗ ಬುಚಕುಳಾ ಮಾಡೇರಿ. ಅದಕ್ಕ ಐದ್ನೂರಾ ಐವತ್ತೊಂದು ರುಪಾಯಿ ದಂಡಾ ಕಟ್ಟ ಅಂತಿರಿ ! ನನ್ನ ಮಗಾ ಹೇಳ್ತಾನು, ತಾ ಪೋರಿ ಸಂಗಾಟ ಯ್ಯಾನಭೀ ಮಾಡಲ್ಲಿssತ ! ನೀವಂತಿರೀ ಅಂವಾ ಮಾಡ್ಯಾನ ದಂಡಾ ಕಟ್ರಿ ಅssತ ! ಮಾಸ್ತರ್ರ, ನಾ ತಿಳಿದಾಂವ ಅಲ್ಲ, ಆದ್ರಭಿ ನನ್ನ ಅನುನಕೀ ಹಿಂಗೇತ್ಯಲಾ, ನನ್ನ ಮಗಾ ಯ್ಯಾನಭೀ ಮಾಡೂಲ್ಲದss ಆ ಪೋರಿ ಸಂಗಾಟ ಖೋಲ್ಯಾಗ ಇರಾನಾ ದಂಡಾ ಹಾಕ್ಕ್ಯರಲಾ ? ಒಂದ್ ಸಲಾ ಖೋಲ್ಯಾಗ ಇರಾಕss ನೀವ ಅssಟ್ ದಂಡಾ ಹಾಕತೇರ್ಯಲಾ ? ಹಂಗಾರ ನಾ ಹೇಳ್ಕೇಳಿ ವಡ್ರ ಮನಸ್ಯಾ, ಮಾಯಲೇ ಬಂದ್ರ ತಲಿಮ್ಯಾಗಿನ ಪಟಗಾ ಸುದ್ದಾ ಕುಡತ್ಯಾನ ! ನಾವ್ ಒಮ್ಮೀ ಜಿದ್ದಿಗಿ ಬಿದ್ದ್ಯೂ ಅಂದ್ರ ಏಕ್ ಮಾರ್ ದೋ ತುಕಾಡಾ ! ನೋಡ್ರಿ ಮಾಸ್ತರ, ನಾ ಇನ್ನಾ ಐದ್ನೂರಾ ಐವತ್ತೊಂದ ರುಪಾಯಿ ಹೆಚ್ಚss ಕುಡತ್ಯಾನ ತುಗೋರಿ ! ಆದರ ಇನ್ನೊಮ್ಮಿ ಆ ಪೋರಿ ಮತ್ತ ನನ್ನ ಮಗನ್ನ ಅದss ಖೋಲ್ಯಾಗ ಬಿಟ್ಟ ಕೀಲಿ ಹಾಕ್ರಿ ! ಮಗಾ ಯ್ಯಾನಾ ಮಾಡೋದೇತಿ ಅದ್ನ ಮಾಡಿ ಸಮಾಧಾನ್ರೇ ಆಗ್ಲಿ ! ಆದದ್ದss ಇನ್ನೊಮ್ಮಿ ಆಗ್ಲಿ. ನಾ ಡಬಲ್ ರೊಕ್ಕಾ ಕುಡಾಕ ತಯಾರಿದ್ಯಾನ. ಆದ್ರ ಸುಮ್ಮ ಸುಮ್ಮ ಯ್ಯಾನೂ ಮಾಡೂಲ್ಲದss ನಮ್ಮ ಮಗನ ಮಯ್ ಮ್ಯಾಲ ಹೇಲ ಚಲ್ಲೂದಕ ನಾ ಬಿಡು ಪೈಕಿಯಲ್ಲ” ಎಂದು ಒಂದೇ ಸಮನೇ ಮಾತನಾಡಿದ.

ಈ ಮಾತು ಕೇಳಿ ಸಭೆಯಲ್ಲಿ ಇದ್ದವರ ಬುಡ ಬೆದರಿದವು !

Wednesday, December 04, 2013

ಕೃತಿಚೌರ್ಯ : ನನ್ನ ಅನುಭವ


ಡಾ. ಸಿದ್ರಾಮ ಕಾರಣಿಕ
(ಯುಗಾರಂಭ ಅನುವಾದದ ಬಗೆಗೆ ವಿಚಿತ್ರವಾದ ಕೆಲವು ಸತ್ಯಗಳು)


... ವಿಷಯ ತುಂಬ ಸ್ವಾರಸ್ಯಕರವಾದುದು. ಯಾವುದನ್ನು ನಾನು ನಿರೀಕ್ಷಿಸಿರಲಿಲ್ಲವೋ ಅದೇ ಆಗಿತ್ತು ! ಮರಾಠಿಯಲ್ಲಿ ಡಾ. ವಿನೋದ ಗಾಯಕವಾಡ ಅವರು ಮಹಾತ್ಮಾ ಫುಲೆಯವರ ಬಗ್ಗೆ ಕಾದಂಬರಿಯನ್ನು ಬರೆಯುತ್ತಿರುವುದಾಗಿಯೂ ಅದನ್ನು ಕನ್ನಡದಲ್ಲಿ ನಾನು ಮಾಡಬೇಕೆಂದೂ ಒತ್ತಾಯಿಸಿದರು. ಅದೂ ಹಸ್ತಪ್ರತಿಯಲ್ಲೇ ಇರುವ ಕೃತಿ. ನಾನೂ ಒಪ್ಪಿಕೊಂಡೆ. ಹದಿನೈದು ದಿನ ನಿರಂತರ ಕೆಲಸ ಮಾಡಿದೆ. 27ನೇ ಮಾರ್ಚ್ 2008 ರಂದು ಅನುವಾದವನ್ನೂ ಮಾಡಿ, ಡಿಟಿಪಿಯನ್ನೂ ಮಾಡಿ ಪ್ರಕಟಣೆಗೆ ಸಿದ್ಧ ಮಾಡಿದೆ. ಎರಡು ಸಿ.ಡಿ.ಗಳಲ್ಲಿ ರೈಟ್ ಮಾಡಿ ಡಾ. ಗಾಯಕವಾಡ ಅವರಿಗೂ ನೀಡಿದೆ. ಅವರು ಅವುಗಳನ್ನು ಬೆಂಗಳೂರಿಗೆ ಪ್ರಕಟಣೆಗೆಂದು ಕಳುಹಿಸಿ ಕೊಟ್ಟೆ ಎಂದು ಹೇಳಿದರು. ಬಹು ದಿನಗಳಾದರೂ ಪುಸ್ತಕ ಪ್ರಕಟವಾಗಲಿಲ್ಲ. ಆಗ ಮತ್ತೇ ನಾನು ಮೇಲಿಂದ ಮೇಲೆ ಡಾ. ಗಾಯಕವಾಡ ಅವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಅವರು ಹೇಳಿದ್ದು ಏನೆಂದರೆ ಪ್ರಕಟಣೆಯ ಜವಾಬ್ದಾರಿ ಹೊತ್ತ ವ್ಯಕ್ತಿ ನುಣುಚಿಕೊಂಡರಂತೆ !
ಆಮೇಲೆ ನಾನೂ ಸುಮ್ಮನಾದೆ. ಆದರೆ ಈ ವರ್ಷ ಅಂದರೆ ನಾನು ಅನುವಾದ ಮಾಡಿದ ಎರಡು ವರ್ಷಗಳ ನಂತರ ನನಗೆ ಒಂದು ಆಘಾತದ ಸುದ್ದಿ ತಿಳಿಯಿತು. ಮಹಾತ್ಮಾ ಫುಲೆಯವರ ಬಗ್ಗೆ ಬೆಂಗಳೂರಿನ ಮಹನೀಯರೊಬ್ಬರು ಕೃತಿಯನ್ನು ರಚಿಸಿ, ಪ್ರಕಟಪಡಿಸಿದ್ದಾರೆ. ಅದನ್ನು ಓದಿದೆ. ಯಾಕೋ ಸಂಶಯ ! ಓದುತ್ತ ಹೋದಂತೆ ನನ್ನ ಸಂಶಯ ಬಲಗೊಂಡಿತು. ಹೌದು. ಆ ಕೃತಿ ನನ್ನ ಅನುವಾದದ ಮಾದರಿಯಲ್ಲೇ ಇದೆ. ಅಲ್ಲಿ ಬರುವ ಸಂಭಾಷಣೆಗಳು ನಾನೇ ಬರೆದವುಗಳು ಎಂಬುದು ನನಗೆ ದೃಢವಾಯಿತು ! ಯಾಕೆಂದರೆ ನನ್ನ ಶೈಲಿ ನನಗೆ ಗೊತ್ತಾಗುವುದಿಲ್ಲವೇ ? ಅನುವಾದವಾದರೂ ನಾನು ಬಳಸುವ ಶಬ್ದಗಳು, ನುಡಿಗಟ್ಟುಗಳು ಭಿನ್ನವೇ ಆಗಿರುತ್ತವೆ. ಅನುವಾದ ಎನ್ನುವುದಕ್ಕಿಂತಲೂ ಕೆಲವೊಂದಿಷ್ಟು ವಿಚಾರಗಳನ್ನೂ ಹೆಚ್ಚಿನ ವಿವರಗಳನ್ನೂ ನಾನು ಬಳಸಿಕೊಂಡಿರುತ್ತೇನೆ. ಇದನ್ನು ಹಲವರಲ್ಲಿ ನಾನು ಪ್ರಸ್ತಾಪ ಮಾಡಿದೆ. ಯಾವುದೋ ಗುಮಾನಿಯಿಂದ ಮೂಲ ಲೇಖಕರನ್ನೂ ಸಂಪರ್ಕಸಿದೆ. ಅವರೂ ತಮಗೇನೂ ತಿಳಿದಿಲ್ಲ ಎಂದರು. ಕೃತಿಚೌರ್ಯ ನಡೆದಿರುವುದಂತೂ ಸ್ಪಷ್ಟವಾಗಿತ್ತು. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡುವ ವಿಚಾರ ನನ್ನದಾಗಿರಲಿಲ್ಲ. ಹೀಗಾಗಿ ರೂಪ ಪ್ರಕಾಶನದ ಆತ್ಮೀಯ ಮಹೇಶ ಅವರನ್ನು ಸಂಪರ್ಕಿಸಿದೆ. ಅವರು ಕೃತಿಯನ್ನು ಪ್ರಕಟಿಸಲು ಮುಂದೆ ಬಂದರು. 
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಕೃತಿಚೌರ್ಯ ಮಾಡುವವರು ಹೇಗೆ ಎಲ್ಲ ಕಡೆ ತುಂಬಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿಕ್ಕೆಂದು ಎಂದರೆ ಆಶ್ಚರ್ಯವಾದೀತು ! ಯಥಾವತ್ತ ನಕಲು ಮಾಡದೇ ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಯಾರದೋ ಪುಸ್ತಕವನ್ನು ಇನ್ನ್ಯಾರೋ ತಮ್ಮ ಹೆಸರಿನಲ್ಲಿ ಪ್ರಕಟಸುವುದು ಮತ್ತು ಹೆಸರು ಮಾಡುವುದು ಎಷ್ಟು ಸರಿ. ಈ ಬಗ್ಗೆ ಯಾರೇ ಬಂದರೂ ಮುಖಾಮುಖಿ ಉತ್ತರ ನೀಡಲೂ ನಾನು ಸಿದ್ಧನಾಗಿಯೇ ಇದ್ದೇನೆ. ಆದರೂ ಮಹಾತ್ಮ ಜ್ಯೋತಿಬಾ ಫುಲೆಯವರ ಬಗ್ಗೆ ಇರುವ ಈ ಕಾದಂಬರಿ ಕನ್ನಡದಲ್ಲಿ ಮೊಟ್ಟ ಮೊದಲನೆಯದು ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚೆ ಪಡುತ್ತೇನೆ.

Wednesday, October 30, 2013

ಸಾಯಿ ಬಾಬಾ ಮಹಾ ಕಾದಂಬರಿ : ಪ್ರತಿಗಳಿಗೆ ಸಂಪರ್ಕಿಸಿ

ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ.

ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.




ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ. ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.
ಕೃತಿಯ ಪುಟಗಳು :  612+9  (ಕಿಂಗ್ ಸೈಜ್), ಬೆಲೆ- ರೂ. 450/-  (ಅಂಚೆ ವೆಚ್ಚ ಪ್ರತ್ಯೇಕ)
ಕೃತಿಯ ಪುಟಗಳು : 612+9 (ಕಿಂಗ್ ಸೈಜ್), ಬೆಲೆ- ರೂ. 450/- (ಅಂಚೆ ವೆಚ್ಚ ಪ್ರತ್ಯೇಕ)

Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

Sunday, September 23, 2012

ಹೇಳೋದು ಆಚಾರ ; ತಿನ್ನೋದು ಬದನೆ !


 ಕತೆ
ಮೂಲ ಮರಾಠಿ : ಅಡ್ವೋಕೇಟ್ ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
-------------------------------------------------------------------------------------------------------------
ಪ್ರತಾಪರಾವ್ ಸರನೋಬತ್ !
ಮುರಕಟ್ಟೆವಾಡಿ ಎಂಬೋ ಊರಿನಲ್ಲಿ ಇರುವ ಒಬ್ಬ ಡಾಕ್ಟರು !
ಪದವಿ ಪಡೆಯುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೆ ತಕ್ಕಂತೆ ಡಾಕ್ಟರೀತನ ಮಾಡುವ ಡಾಕ್ಟರು ! ಒಬ್ಬ ಪ್ರಾಮಾಣಿಕ ಡಾಕ್ಟರು ಎಂದೇ ಜನಮನ್ನಣೆ ಗಳಿಸಿದ್ದ ಅಸಾಮಿ !
ಆ ದಿನ ಆ ಡಾಕ್ಟರಲ್ಲಿಗೆ ಬಂದವನು ಒಬ್ಬ ರೋಗಿ ; ಹೆಸರು ಗುಂಡೂ ಸಾವಂತ !
ಉಚಗಾವಿಯ ಗ್ರಾಮದೇವತೆ ಉಗ್ರಸ್ವರೂಪಿಣಿ. ಆ ದೇವತೆಗೊಂದು ದೇವಸ್ಥಾನ. ವರ್ಷದಲ್ಲಿ ಶ್ರಾವಣ ಮಾಸವೊಂದನ್ನು ಬಿಟ್ಟು ಉಳಿದ ಹನ್ನೊಂದು ತಿಂಗಳಿನ ನಲವತ್ತ್ನಾಲ್ಕು ವಾರಗಳಲ್ಲಿ ಎಂಬತ್ತೆಂಟು ಸಲ ಅಲ್ಲಿ ಜಾತ್ರೆ ನೆರೆಯುತ್ತದೆ !
ಬಂಧುಗಳ ಕರೆಯನ್ನು ಮನ್ನಿಸಿ ಗುಂಡೂ ಸಾವಂತ ಗ್ರಾಮದೇವತೆಯ ಜಾತ್ರೆಗೆಂದು ಉಚಗಾವಿಗೆ ಹೋಗಿದ್ದ ! ಅಲ್ಲಿಯ ದೇವಿಗೆ ಮಾಂಸಾಹಾರವೇ ನೈವೇದ್ಯ ! ಊರಿನ ಪ್ರತಿಯೊಬ್ಬರೂ ಊರದೇವಿಗೆ ಕುರಿಯನ್ನು ಬಲಿ ನೀಡಿ, ರಾತ್ರಿಯಲ್ಲಿ ಭರ್ಜರಿ ಮಾಂಸದಡುಗೆ ಮಾಡುತ್ತಿದ್ದರು ! ಊರಿಗೆ ಊರೇ ಮಸಾಲೆ ಮಾಂಸದ ವಾಸನೆಯಲ್ಲಿ ಪಾವನವಾಗುತ್ತಿತ್ತು ! ಮಾಂಸದಡುಗೆ ಇದೆ ಎಂದರೆ ಸಾರಾಯಿ ಇಲ್ಲದಿದ್ದರೆ ನಡೆಯುತ್ತದೆಯೇ ? ಸಾರಾಯಿ ತುಂಬಿ ಹರಿಯುತ್ತಿತ್ತು !
ಮಂಗಳವಾರ ಮತ್ತು ಶುಕ್ರವಾರ ಆ ದೇವಿಯ ವಾರಗಳು. ಆ ದಿನಗಳಲ್ಲಿ ಸಾರಾಯಿ ಮಾರಾಟಗಾರರಿಗೆ ಶುಕ್ರದೆಸೆ ! ಬುಕ್ಯಾಳದ ಸಾರಾಯಿ ತುಂಬಿದ ಟ್ಯೂಬ್‍ಗಳು ಊರ ಹೊರಗಿನ ಮಾವಿನ ತೋಪಿನಲ್ಲಿ ಒಟ್ಟಿದ್ದ ಬಣವೆಗಳಲ್ಲಿ ಅಥವಾ ಗೂಡುಗಳಲ್ಲಿ ತುಂಬಿರುತ್ತಿದ್ದವು ! ಜೊತೆಗೆ ಸರಕಾರಿ ಪರ್ಮಿಟ್ಟಿನ ಸಾರಾಯಿ ಕೂಡ ಇರುತ್ತಿತ್ತು !
ತಾವು ಆಮಂತ್ರಿಸಿದ ಬಂಧು-ಬಾಂಧವ-ಮಿತ್ರರನ್ನು ಆ ಊರಿನ ಮಂದಿ ಗ್ಲಾಸಿನ ಮೂಲಕವೇ ಸ್ವಾಗತಿಸುತ್ತಿದ್ದರು ! ಗುಂಡೂ ಸಾವಂತನಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತ್ತು ! ಸ್ವಂತ ದುಡ್ಡಿನಲ್ಲಿ ಸಾರಾಯಿ ಕುಡಿಯಲು ಹಿಂದುಮುಂದೆ ನೋಡುತ್ತಿದ್ದ ಗುಂಡೂ ಜಾತ್ರೆಯ ನಿಮಿತ್ಯವಾಗಿ ಪುಕ್ಕಟೆ ಸಿಕ್ಕ ಸಾರಾಯಿಯನ್ನು ಮನಸೋ ಇಚ್ಚೆ ಕುಡಿದೇ ಕುಡಿದ ! ಆಮೇಲೆ ಸಾಕೆನಿಸುವಷ್ಟು ಮಟನ್ ಊಟ !
ಸಾರಾಯಿ ಕುಡಿದು, ಕುರಿಯ ಮಾಂಸದುಟವನ್ನು ಮುಗಿಸಿಕೊಂಡು ತನ್ನ ಮನೆಗೆ ಮರಳಿದ ಗುಂಡೂ ನೆಲ ಹಿಡಿದು ಮಲಗಿಯೇ ಬಿಟ್ಟ ! ಅತಿಯಾದರೆ ಅಮೃತವೂ ವಿಷವಾಗುತ್ತದೆಯಲ್ಲವೆ ? ಪುಕ್ಕಟೆಯಾಗಿ ಸಿಕ್ಕ ಸಾರಾಯಿ ಮತ್ತು ಕುರಿ ಮಾಂಸದ ಫೀಸುಗಳ ಭರ್ಜರಿ ಊಟ ! ಅತಿಯಾಗಲು ಇನ್ನೇನು ಬೇಕು ?
ವಾಂತಿ-ಭೇದಿ ಸುರುವಾಗಿ ಸುಸ್ತಾಗಿ ಹೋದ ಗುಂಡೂ !
ಗಂಡನ ಆವಸ್ಥೆ ಕಂಡ ಆತನ ಹೆಂಡತಿ ಶಟುಲಿ ಕೈ-ಕಾಲು ಕಳೆದುಕೊಂಡಂತಾದಳು ! ದುಃಖತಪ್ತ ಆಕೆ ಅಕ್ಕ-ಪಕ್ಕದವರ ಸಹಾಯದಿಂದ ಗಂಡನನ್ನು ಡಾ. ಸರನೋಬತ್ ಕಡೆ ಕರೆದುಕೊಂಡು ಬಂದಿದ್ದಳು !
*****
ಗುಂಡೂನನ್ನು ಪರೀಕ್ಷೆ ಮಾಡಿದ ಡಾ. ಸರನೋಬತ್ ಏನೋ ಹೇಳಬೇಕು ಎನ್ನುವಷ್ಟರಲ್ಲಿಯೇ ಅಲ್ಲಿಗೆ ನಾರಾಯಣ ಪಾಟೀಲನ ಆಗಮನವಾಯಿತು !
ಪಂಢರಪುರದ ವಾರಕರಿಯಾದ ನಾರಾಯಣ ಪಾಟೀಲ ಕೊರಳಲ್ಲಿ ತುಳಸಿ ಮಾಲೆ, ಹಣೆಗೆ ಗಂಧ ಧರಿಸಿಕೊಂಡು ಮಹಾರಾಜನಂತೆ ಬೈಕಿನ ಮೇಲೆ ಅಲ್ಲಿಗೆ ಬಂದಿದ್ದ ! ನಿಜವಾಗಿಯೂ ಆತನನ್ನು ಎಲ್ಲರೂ ಸಾಧು-ಸಂತರಿಗೆ ಕರೆಯುವಂತೆ ಮಹಾರಾಜ ಎಂದೇ ಕರೆಯುತ್ತಿದ್ದರು !
ಆತನ ಜೊತೆಯಲ್ಲಿ ಸುಂದರವಾದ ಹರೆಯದ ಹುಡುಗಿ ಬೇರೆ ಇದ್ದಳು !
ಆಕೆ ಆತನ ಹೆಂಡತಿಯ ತಂಗಿ !
ಬಂದದ್ದು ಒಂದು ಸಿರೀಯಸ್ ಕೇಸು ಎಂಬುದು ಆ ಹುಡುಗಿಯ ಮುಲುಕಾಟದಿಂದಲೇ ಕಂಡುಬರುತ್ತಿತ್ತು ! ಡಾಕ್ಟರ್ ಸರನೋಬತ್ ತಡ ಮಾಡದೇ, ತನ್ನ ಸಹಾಯಕಿಗೆ ಗುಂಡೂನನ್ನು ನೋಡಿಕೊಳ್ಳಲು ಹೇಳಿ, ನಾರಾಯಣ ಪಾಟೀಲನ ಕಡೆ ಬಂದ. ಇಬ್ಬರನ್ನೂ ಒಳಗಿನ ರೂಮಿಗೆ ಕರೆಯಿಸಿಕೊಂಡ ಡಾ. ಸರನೋಬತ್ ವಿಚಾರಿಸತೊಡಗಿದ.
“ಏನ್ ಅಂತೀರಿ ನಾರಾಯಣರಾವ್, ಏನ್ ಸಮಾಚಾರಾ ?”
“ನೋಡ್ರಿ ಡಾಕ್ಟರ್ ಸಾಹೇಬ್ರ, ನಾ ಈ ತುಳಸೀ ಮಾಲಿ ಮ್ಯಾಲ ಆಣಿ ಮಾಡ್ಯ ಹೇಳ್ತೇನಿ... ..”
ಡಾಕ್ಟರು ನಗುತ್ತಲೇ ಹೇಳಿದ, “ಅಲ್ರಿ, ನೀವ್ ಮಹಾರಾಜ ಅದೇರಿ. ಮಾಲಿ ಮ್ಯಾಲ ಆಣೀ ಮಾಡೂ ಅವಶ್ಯಕತಾನ ಇಲ್ಲ. ಈಗ ಹೇಳ್ರಿ ನಿಮ್ಮ ಇಬ್ಬರದಾಗ ಯಾರ್ಗೆ ಏನಾಗೇದ ?
“ಡಾಕ್ಟರ್ ಸಾಹೇಬ್ರ, ಈಕೀ ನನ್ನ ಮೇವಣ್ಯಾಳ್ತಿ. ದ್ರೌಪತಿ ವಾಘಮಾರೆ ಅನ್ನೂದು ಈಕೀ ಹೆಸ್ರು. ಈಗ ಎರಡ್ಮೂರ ದಿವ್ಸದಿಂದ ಈಕೀ ಭಾssಳ ತ್ರಾಸ ಮಾಡ್ಕೊಳ್ಳಾಕತ್ತಾಳು. ಒಮ್ಮಿಂದೊಮ್ಮಲೇ ಚೀರಾಕss ಸುರು ಮಾಡ್ತಾಳು !”
“ಅಂಥಾದ್ದೇನಾಗೇದ ಹೇಳ್ರ್ಯಲಾ ?”
“ಹೊಟ್ಟಿ ನೋಯ್ಸತೇತಿ ಅಂತ ಹೇಳ್ತಾಳ್ರಿ. ಭಾಳ ನೋಸತೇತಿ. ಹೊಟ್ಟ್ಯಾಗ ಗಂಟಾಗೇತಿ ಅಂತಾಳು ! ಯಾಡ್ ದಿವ್ಸದಿಂದ ಬರೀ ಇದನ ನೋಡ್ಯss ನೋಡ್ಯ ನಂಗೂ ಅದss ಸಂಸೇ ಬರಾಕತ್ತೇತಿ. ಡಾಕ್ಟರ್ ಸಾಹೇಬ್ರ, ಏನಾರ ಮಾಡ್ರಿ, ಮದಲ ಈಕೀ ಹೊಟ್ಟ್ಯಾಗಿಂದ ಗಂಟ ತಗದ ಹಾಕ್ರಿ. ಖಾಲಿ ಫುಕ್ಕಟ ಕಿರಿಕಿರಿ ಸಾಕಾಗೇತಿ !”
“ಈಕೀ ನಿಮ್ಮ ಮನ್ಯಾಗ ಇರ್ತಾಳೇನ್ರಿ ?”
“ಹೌಂದ್ರಿ. ಈಗ ನಮ್ಮ ಮನ್ಯಾಗ ಅದಾಳು. ನನ್ನ ಧರ್ಮಪತ್ನಿ ಮಂಜುಳಾ ಡೆಲಿವರಿ ಸಲುವಾಗಿ ತವರ್ಮನಿಗಿ ಹೋಗ್ಯಾಳು. ಮದಲ್ನೆ ಡೆಲಿವರಿ ನೋಡ್ರ್ಯ ತವರ್ಮನ್ಯಾಗ ಆಗಬೇಕನ್ನೂದು ಪ್ರಥಾ ಏತಿ. ಈಗ ಆಕೀ ಹೋಗಿ ಮೂರ ತಿಂಗ್ಳಾತ್ರಿ. ನಮ್ಮ ಮಾಂವ ಭಾಳ ಕಾಳಜಿ ಇರೂ ಮನಿಸ್ಯಾ. ಎಲ್ಲಾರ್ದೂ ಕಾಳಜಿ ಮಾಡ್ತಾನು ! ಜೋಡಿ ಇಲ್ಲದಿರಕ ಹೊಲಮನಿ ಕೆಲಸದಾಗ ನನ್ನ ಹೊಟ್ಟಿಪಾಡಿಂದ ಹೈರಾಣ ಆಗ್ತೇತಿ ಅಂತ, ಅವರss ಈ ದ್ರೌಪದೀನ ನಮ್ಮ ಮನ್ಯಾಗ ಇಟ್ಟ ಹೋಗ್ಯಾರು ! ಹಂಗಿದ್ರೂ ನಾ ಏನ ಸುಮ್ನಿಲ್ಲ. ಈಕೀ ಬಗ್ಗಿ ಭಾಳಂದ್ರ ಭಾಳ ಕಾಳಜಿ ಮಾಡ್ತೇನಿ. ಈಕೀನೂ ನಂದ ಭಾಳ ಕಾಳಜಿ ಮಾಡ್ತಾಳು ! ನೀವ್ ನೋಡಾಕತ್ತೇರಲ್ಲ, ನೋಡಾಕ ಎಷ್ಟ ಸುಂದರ ಅದಾಳು ಈಕಿ ! ಹೆಂಗ ಸುಂದರ ಅದಾಳೋ ಹಂಗ ಮನ್ಯಾಗೀನ ಎಲ್ಲಾ ಕೆಲಸಾನೂ ಮಾಡೋದ್ರಾಗ ಭಾssಳ ಹುಶಾರಿ !
ನಮ್ಮ ಮಾಂವ್ಗ ಕಂಡಾಪಟ್ಟಿ ಜಮೀನ ಏತಿ. ಕುಂತ ತಿಂದ್ರೂ ಕರಗುಲ್ಲದಷ್ಟ ಸಂಪತ್ತ ಏತಿ. ಆದರ ಅವ್ರಿಗಿ ಗಂಡ ಮಕ್ಳ ಇಲ್ರಿ. ಯಾಡ್ಡೂss ಹೆಣ್ಣಮಕ್ಕಳಾನ ಅದಾವು ! ನನ್ನ ಧರ್ಮಪತ್ನಿ ಮಂಜುಳಾ ಮತ್ತ ಈಕೀ ದ್ರೌಪದಿ. ಇಬ್ಬರ ! ಗಂಡಮಕ್ಕಳ ಇಲ್ಲಂತ ನಮ್ಮ ಮಾಂವ್ನ ಅಣತಮರು ಅಂವ್ನ ಆಸ್ತಿ ಕಸಗೊಳ್ಳಾಕ ತಯಾರ ಆಗ್ಯಾರು ! ಆ ಅಣತಮರು ಭಾಳ ಕೆಟ್ಟವ್ರ ಅದಾರು. ನಮ್ಮ ಮಾಂವಗ  ಮ್ಯಾಲಿಂದ ಮ್ಯಾಲ ತ್ರಾಸ್ ಮಾಡ್ತಿರ್ತಾರು ! ಡಾಕ್ಟರ್ ಸಾಹೇಬ್ರ, ನೀವ್ ನೋಡ್ಬೇಕರಿ, ದರ ಅಮಾಸಿಗಿ ಅವ್ರು ಮಾಟಾ ಮಾಡ್ಸಿ ನಮ್ಮ ಮಾಂವನ ಮನಿ ಮುಂದ ಒಗಿತಾರು ! ಟೆಂಗಿನಕಾಯಿ, ಸೂಂಜಿ ಚುಚ್ಚಿದ ಲಿಂಬಿಕಾಯಿ, ಗುಲಾಲದಾಗ ಮಾಡಿದ ಅನ್ನ, ಕರೀಗೊಂಬಿ ಹೀಂಗ್ ಏನೇನೋ ವಿಚಿತ್ರ ವಿಚಿತ್ರ ವಸ್ತುಗೋಳ್ನ ನಮ್ಮ ಮಾಂವ್ನ ಮನಿ ಆಜೂಬಾಜೂ ಬಿದ್ದಿರ್ತಾವು ! ಹಿಂಗಾಗಿ ನಮ್ಮ ಮಾಂವ್ನ ಮನ್ಯಾಗ ಭಾಳ ತ್ರಾಸ್ ಆಗಾಕತ್ತಾವು !
ನಮ್ಮ ಅತ್ತಿಗಿ ಭಾಳ ತ್ರಾಸ ಆಗೇತಿ. ಮಾಂವ್ಗೂ ತ್ರಾಸ್ ಏತಿ. ಬೆಳಗಾಂವದಾಗಿನ ಭಾಳ ಡಾಕ್ಟರ್ ಕಡೀ ಇಬ್ಬರೂನು ತೋರ್ಸೇವಿ. ರೊಕ್ಕ ಇರೂ ಪೆಸೆಂಟ್ ಸಿಕ್ರ ಅವಶ್ಯಕತಾ ಇರಲಿಕ್ಕಂದ್ರೂ ಏನೇನೋ ತಪಾಸ ಮಾಡಿ ಪೆಸೆಂಟ್‍ಗೋಳ್ನ ಲುಟಾಸ್ತಾರು ! ಬಿ.ಪಿ., ಶುಗರ್ ಇಲ್ಲಿಕಂದ್ರೂ ಅದಾವಂತ ಹೇಳಿ ಹಗಲಿ ದರೋಡಿ ಮಾಡ್ತಾರು ಡಾಕ್ಟರ್ ಸಾಹೇಬ್ರ, ನಾ ಅಂತೂ ಹೇಳಿ ಕೇಳಿ ಮಹಾರಾಜಾ ಮನಿಷ್ಯಾ. ಬೇಕಾರ ನಾ ಆಣಿ ಮಾಡ್ಯ ಹೇಳ್ತೇನಿ ; ನಮ್ಮ ಮಾಂವ್ನ ಮನ್ಯಾಗ ಏನೇನ ತ್ರಾಸ ಆಗಾಕತ್ತಾವಲಾ ಅವುಗೋಳೀಗೆಲ್ಲ ಅವರ ಅಣತಮರು ಮಾಡಿಸಿದ ಮಾಟಾssನ ಕಾರಣ ಏತಿ ! ದೇವ್ರಾಣಿರೀಪಾ, ಅವ್ರನೂ ನಿಮ್ಮ ಕಡೀನ ತೋರ್ಸಕ ಕರಕೊಂಡ ಬರಾಂವದೇನಿ !”
ದೀರ್ಘವಾಗಿ  ಹೇಳಿದ ನಾರಾಯಣನ ಆಮತು ಕೇಳಿ ಡಾಕ್ಟರ ಮನಸ್ಸು ದ್ವಂದ್ವಕ್ಕೆ ಸಿಲುಕಿತು !
“ನಾರಾಯಣರಾವ್, ನೀವ್ ಸಂತ ಮಹಾರಾಜ ಇದ್ದೇರಿ. ಆದರ ಮ್ಯಾಲಿಂದ ಮ್ಯಾಲ ದೇವ್ರಾಣಿ, ದೇವ್ರಾಣಿ ಅಂತ ಯಾಕ ಹೇಳ್ತೇರಿ ? ಮಂದಿ ಏನೋ ಮಾಡ್ಸಿದ್ದಾರು ಅಂತ ಎಂಥ ಭ್ರಮಾ ಇಟ್ಕೊಂಡೀರಲ್ಲ ? ಅಲ್ಲ, ಸಂತರು ಏನ ಹೇಳ್ಯಾರು ಗೊತ್ತದ ಏನ ನಿಮಗ ... ; ‘ಮೈಮ್ಯಾಗ ಬರೂ ಗಾಳಿಧೂಳಿ ಬರೀ ಸೋಗಿನ ದಾಳಿ !’ ಅಲ್ವೇನ್ರಿ ? ಜ್ಞಾನೇಶ್ವರ ಮಹಾರಾಜರು ಹೇಳ್ಯಾರಲ್ಲ ;  ‘ಮಂತ್ರದಿಂದ ವೈರಿ ಸತ್ತರ ಸೊಂಟಕ್ಯಾಕ ಉಡದಾರ ?’ ಮತ್ತೊಂದ ಕಡೀ ಅವರss ಹೇಳ್ಯಾರ, ‘ಹರಕೆ ಹೊತ್ತು ಮಗು ಹಡೆದರ ಕಾರಣ ಹೇಗಾಗುತ್ತಾನ ಪತಿ ?’ ಅಂದ್ರ ... ... ನಾ ಏನ ಹೇಳ್ಬೇಕಂತೀನಿ ಅಂದ್ರ ಈ ಹರಕೆ, ಮಾಟ-ಮಂತ್ರಾ ಎಲ್ಲಾ ಬಂಡಲ್ ಅದವು. ಇಂದ ಜಗತ್ತ ಎಷ್ಟ ಮುಂದ ಹೋಗೇದ ? ನೀವು ನೋಡ್ಯರ ಸಂತ ಮಹಾರಾಜ ಆಗಿನೂ ಹಳೀದನ್ನ ಜಗ್ಗಾಡ್ಕೊಂತ ಕುಂತೇರಿ ! ಮೂಢನಂಬಿಕಿ ಮ್ಯಾಲ ಯಾಕ ನಿಮಗ ನಂಬ್ಕಿ ? ವಿಚಿತ್ರ ಅನ್ನಿಸ್ತದ ನನಗ. ಕೊಳ್ಳಾಗ ಮಾಲಿ, ಕಾಲಾಗ ದಿಂಡಿ ಅಂತೇರಿ ; ಪಂಢರಪುರದ ವಾರಕರೀ ಅಂತೇರಿ ! ಮತ್ತ ಮ್ಯಾಲ ಇಂಥಾ ವಿಚಾರಗಳ್ನೆಲ್ಲ ನಂಬತೇರಿ ! ಖರೇ ಹೇಳ್ಬೇಕಂದ್ರ ನಿಮ್ಮಂಥವರ್ನ ನಾ ಎಂದೂ ನೋಡಿಲ್ಲ ! ಜ್ಞಾನೇಶ್ವರ, ತುಕಾರಾಮ, ಚೋಖಾಮೇಳ, ಸಾವತಾ, ಏಕನಾಥ ಮೊದಲಾದ ಸಂತ ಮಹರಾಜರು ಈ ಮೂಢನಂಬಿಕೆಯನ್ನು ಕಟುವಾಗಿ ಟೀಕಿಸ್ಯಾರ. ಇಂಥ ಹುಚ್ಚುತನದ ಕಲ್ಪನೆಗಳನ್ನ ತಿರಸ್ಕರಿಸ್ಯಾರ. ಕೆಟ್ಟ ರೂಢಿ, ಸಂಪ್ರದಾಯ ಅನ್ನೂ ಪ್ರವಾಹಗಳ ವಿರುದ್ಧ ಈಜಿ ನಮಗ ಅರಿವ ನೀಡೂ ಕೆಲಸಾ ಮಾಡ್ಯಾರು. ಇದೆಲ್ಲ ಬರೀ ಭ್ರಮಾ ನಾರಾಯಣರಾವ್ ! ಇದರಿಂದ ಇಡೀ ಸಮಾಜ ದುರ್ಬಲ ಆಗ್ತದ ಅಷ್ಟ !”
ಡಾಕ್ಟರು ತುಂಬ ವಿಷಯಗಳ ಮಾತನಾಡಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ. ಆದರೆ ಮೂರ್ಖನಾದ ಆ ನಾರಾಯಣರಾವ್ ಮಹಾರಾಜನಿಗೆ ಒಂದಿಷ್ಟೂ ತಿಳಿಯಲಿಲ್ಲ ! ಬದಲಿಗೆ ಆತ ಮತ್ತೇ ತನ್ನ ಹಳೇ ಹಾಡನ್ನೇ ಹಾಡುತ್ತ ಮೂರ್ಖತನದ ಸೂರು ಎಳೆದ !
“ಹಂಗಲ್ರಿss ಡಾಕ್ಟರ್ ಸಾಹೇಬ್ರ, ಈ ದ್ರೌಪದಿ ಮ್ಯಾಲ ಯಾರೋ ಮಾಟಾ ಮಾಡಿಸ್ಯಾರರೀ ! ಅದರ ಪ್ರಭಾವ ಇದೇತಿ. ಯಾರೋ ಮಾಟಾ ಮಾಡ್ಸಿ ಹೊಟ್ಟ್ಯಾಗ ಹಾಕ್ಯಾರಿ ! ರಾತ್ರಿ ಸರೋತ್ತಿನ್ಯಾಗ ಈಕೀ ಒದ್ದಾಡೋದೇನು, ಚೀರಾಡೋದೇನು ! ಹೊಟ್ಟ್ಯಾಗೀನ ಗಂಟದಿಂದ ಸಾಕಾಗೇತಿ ಅನ್ನೋದೇನು ! ಇದೆಲ್ಲ ಹೊಟ್ಟ್ಯಾಗೀನ ಗಂಟದss ತ್ರಾಸ ! ನಿಮಗ ಮಾಟಾ ಮಾಡ್ಸೂ ವಿಷ್ಯಾ ತಿಳ್ಯೂದಿಲ್ಲ ಬಿಡ್ರಿ ! ನೀವ್ ಈಕೀನ ಚೊಲೋತಂಗ ಚೆಕ್ ಮಾಡ್ರಿ. ಮತ್ತ ಹೊಟ್ಟ್ಯಾಗ ಇರೂ ಗಂಟಷ್ಟ ತಗದ ಬಿಡ್ರಿ ! ನಮ್ಮ ಮಾಂವ-ಅತ್ತೀಗಿ ಯಾಕ ಸುಮ್ನ ತ್ರಾಸ ಕೊಡೂದು ಅಂತ ನಾನss ಈ ಜವಾಬ್ದಾರಿ ಹೊತ್ಕೊಂಡೇನಿ. ಹೊಟ್ಟ್ಯಾಗಿಂದ ಅಷ್ಟ ನಿಕಾಲ ಮಾಡ್ರಿ”
“ನೀವ್ ಹೆಂಗ್ ಅಂತೇರಿ ಹಂಗ. ನಾ ಎಲ್ಲಾ ತಪಾಸ ಮಾಡ್ತೇನಿ. ಅಲ್ಲಿತಂಕಾ ನೀವೊಂದಿಷ್ಟ ಹೊರಗ ಹೋಗ್ರಿ”
“ಡಾಕ್ಟರ್ ಸಾಹೇಬ್ರ, ಫೀಜಿನ ಚಿಂತಿ ಮಾಡಬ್ಯಾಡ್ರಿ. ಎಷ್ಟಬೇಕೋ ಅಷ್ಟ ಖರ್ಚ ಮಾಡಾಕ ನಾ ತಯಾರಿದೇನಿ. ಈಕೀ ಚೊಲೋ ಆದರ ಸಾಕ ನೋಡ್ರಿ” ಎಂದು ನಾರಾಯಣರಾವ್ ತುಂಬ ಉತ್ಸುಕತೆಯಿಂದಲೇ ಹೇಳಿದ.
“ಓಕೆ, ಓಕೆ. ಆತಾತು. ನೀವ್ ಹೊರಗ ಕೂಡ್ರಿ. ನಾ ಚೆಕ್‍ಫ್ ಮಾಡ್ತೇನಿ” ಎಂದು ಹೇಳಿದ ಡಾಕ್ಟರು ದ್ರೌಪದಿಯೊಂದಿಗೆ ಚೆಕ್‍ಫ್ ರೂಮಿನೊಳಗೆ ಹೊಕ್ಕ !
*****
ಡಾಕ್ಟರ್ ಸರನೋಬತ್ ತುಂಬ ಚಾಣಾಕ್ಷ ವ್ಯಕ್ತಿ.
ಚಿಚ್ಚಿ ಅಂದ್ರ ಚಿಕನ್ ಅನ್ನೊದು ಆತನಿಗೆ ಗೊತ್ತು ! ಒಂದಿಷ್ಟು ಚೆಕಫ್ ಮಾಡುವಷ್ಟರಲ್ಲಿಯೇ ಹಕೀಕತ್ತು ಏನು ಎನ್ನುವುದು ಆತನಿಗೆ ಗೊತ್ತಾಗಿ ಹೋಗಿತ್ತು !
ದ್ರೌಪದಿಯ ಹೊಟ್ಟೆಯಲ್ಲಿ ಇರುವ ಗಂಟು ಬೇರೆಯೇ ಆಗಿದೆ !
ಆಕೆಗೆ ಇನ್ನೂ ಮದುವೆಯೇ ಆಗಿಲ್ಲ ; ಆದರೂ ಹೊಟ್ಟೆಯಲ್ಲಿ ಮುಲುಕಾಡುವ ಪಿಂಡ ಇದೆ !
ಹೇಗಾಯಿತು ಇದು ?
ಇದು ಮಾಟ ಮಾಡಿಸಿದ್ದಲ್ಲ !
ದ್ರೌಪದಿ ಯಾರೋ ಗಂಡಸಿನ ಜೊತೆ ಮೈತ್ರಿ ಮಾಡಿ, ಸಲ್ಲಾಪವಾಡಿ ಸುಖದಲ್ಲಿಯೇ ಗೊತ್ತಾಗದಂತೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ಗಂಟು ಅಥವಾ ಪಿಂಡ ಬೆಳೆದು ನಿಂತಿದೆ !
ಇದು ಅನೈತಿಕ ಸಂಬಂಧದ ಪ್ರತಿಫಲವಲ್ಲದೇ ಬೇರೇನೂ ಅಲ್ಲ !
ದ್ರೌಪದಿಯನ್ನು ವಿಶ್ವಾಸಕ್ಕೆ ತೆಗದುಕೊಂಡ ಡಾ. ಸರನೋಬತ್ ಡಾಕ್ಟರು ಸತ್ಯವನ್ನು ಹೊತೆಗೆಯುವ ಪ್ರಯತ್ನ ಮಾಡಿದ ! ಆತ ಆತ್ಮೀಯವಾಗಿಯೇ ಮಾತನಾಡಿದ ;
“ನೋಡ ದ್ರೌಪದಿ, ನಿನ್ನ ರೋಗ ಭಾಳ ದೊಡ್ಡದು ! ಎಲ್ಲಾರಿಗೂ ತ್ರಾಸ ಮಾಡೂವಂಥದ್ದು ! ನಿಂದ ಮದ್ವಿ ಆಗಿಲ್ಲ ; ಆದರ ನಿನ್ನ ಹೊಟ್ಟ್ಯಾಗ ಪಿಂಡ ಬೆಳ್ಯಾಕತ್ತದ ! ಇದ ಹೆಂಗ ? ಮೂರ ತಿಂಗ್ಳಾದ್ರೂ ನೀ ಯಾಕ ಸುಮ್ಮನಿದ್ದೀ ? ಹಂಗ ನೋಡಿದ್ರ ಋತುಚಕ್ರದಾಗ ಒಂದೆರಡ ಪಾಳಿ ತಪ್ಪಿದ ಮ್ಯಾಲಾದ್ರೂ ನೀ ಒಂದಿಷ್ಟ ವಿಚಾರ ಮಾಡ್ಬೇಕಿತ್ತಲಾ ? ಆದರ ನೀ ಹಂಗ ಮಾಡಿಲ್ಲ ! ಖರೇ ಹೇಳ, ಇದೆಲ್ಲ ಭಾನಗಡಿ ಯಾರ್ದು ?”
ದ್ರೌಪದಿಗೆ ದುಃಖ ಒತ್ತರಿಸಿ ಬಂತು ! ಆಕೆ ಮುಳು ಮುಳು ಅಳುತ್ತಲೇ ಕತೆ ಹೇಳತೊಡಗಿದ್ದಳು !
“ಸರ್, ಇದೆಲ್ಲಾ ನಮ್ಮ ಮಾಮಾ ಮಾಡಿದ ಭಾನಗಡಿನ ! ನಮ್ಮ ಅಕ್ಕಾ ಡೆಲಿವರೀ ಸಲ್ವಾಗಿ ತೌರ್ಮನಿಗಿ ಹ್ವಾದ ಮ್ಯಾಲ, ಮಾಮಾನ ಹೊಟ್ಟೀದ ಹಾಲ್ ಆಗ್ಬಾರ್ದಂತ ನಮ್ಮ ಅಪ್ಪ ನನ್ನ ತಂದು ಇಲ್ಲಿಟ್ರು. ನಮ್ಮ ಮಾಮಾನ ಮ್ಯಾಲ, ನಮ್ಮ ಮನ್ಯಾವರ್ದು ಭಾಳಂದ್ರ ಭಾssಳ ವಿಶ್ವಾಸ ಇತ್ತು ! ಇವರ ಮಾರಾಜಾ ಅದಾರ ಅಂದ ಮ್ಯಾಲ ನಂಬ್ಕಿ ಇಡೂಲ್ಲದ ಏನ ಮಾಡ್ತಾರು ಹೇಳ್ರ್ಯಲ್ಲ ? ಆದರ ಮನಿಯೊಳಗ ನಮ್ಮಿಬ್ಬರ ನಡುವ ಪ್ರೇಮದ ರಂಗ ಹರದಾಡಿತು ! ಮನಿಯೊಳಗ ಇರಾವ್ರ ನಾವಿಬ್ರ ! ಹೊಲಕ್ಕ ಹೋಗಿ ಬಂದ ಇವ್ರು ನನ್ನ ಹಂತ್ಯಾಕ ಕರೀತಿದ್ರು ! ಎಣ್ಣಿ ಹಚ್ಚಿ ಮೈ ಮಾಲೀಸ್ ಮಾಡಾಕ ಹೇಳ್ತಿದ್ರು ! ತಲಿ ನೋಸಾಕತ್ತೇತಿ ಒರ್ಸು ಅಂತಿದ್ರು ! ನಾ ಬ್ಯಾರೆ ಏನೂ ವಿಚಾರ ಮಾಡೂಲ್ಲದ ಭಾಳ ವಿಶ್ವಾಸದಿಂದನ ಮಾಡತಿದ್ನಿ. ಆದರ ಸಾವಕಾಶ ನಮ್ಮ ಮಾಮಾ ಸಮತೋಲನ ಕಳ್ಕೊಂಡ್ರು ! ಗೊತ್ತಾಗದಂಗ ನನ್ನ ಹಾಸಿಗೀಗಿ ಎಳೆದ್ರು ! ನಾನೂ ಹರೇದ ಹುಡುಗಿ ! ನನ್ನ ವಿರೋಧ ಭಾಳ ದಿನ ಉಳಿಲಿಲ್ಲ ! ಹರೇದ ನನ್ನ ಮೈಯ್ಯಾಗನೂ ಹಸವ ಇತ್ತು ! ಪ್ರಕೃತಿ ನಿಯಮ ಮೀರಾಕ ಆಗದಿಲ್ಲ ! ಹಸವ ಹೆಚ್ಚಾತು ! .... ಮತ್ತ ಬ್ಯಾರೆ ಏನ ಆಗ್ತೇತಿ ಹೇಳ್ರ್ಯಲಾ ? ಏನ ಆಗಬಾರ್ದಿತ್ತಲಾ ಅದss ಆತು ! ಮೊದಲ ಸಲಾ ನನಗ ಕಾಂಡೋಮ್ ತೋರ್ಸಿ ಇದರಿಂದ ಹೊಟ್ಟೀಲಿ ಆಗೂದಿಲ್ಲ ಅಂತ ಮಾಮಾ ಹೇಳತ್ತಿದ್ರು ! ಇಬ್ರಿಗೂ ಸುಖಾ ಸಿಗಾಕತ್ತಿತ್ತು ! ನಾ ಮೋಹದ ಬಲ್ಯಾಗ ಬಿದ್ದೇನಿ ಅನ್ನೂ ಖಬರss ಇರ್ಲಿಲ್ಲ ! ಒಂದೆರಡಲ್ಲ ಭಾssಳ ರಾತ್ರಿಗೋಳು ಮೈ ಸುಖದಾಗ ಕಳದ ಹ್ವಾದೂ ! ಕಾಂಡೋಮ್‍ದಿಂದ ಯಾವ ತೊಂದ್ರೀನೂ ಇಲ್ಲ ಅಂತ ನನ್ನ ಗೆಳತ್ಯಾರ ಹೇಳೂದ ಕೇಳಿದ್ನಿ ! ಹಿಂಗಾಗಿ ದಿನ್ನಾ ಮೈ ಸುಖಾ ನಂಗೂ ಬೇಕ ಅನ್ನಸತಿತ್ತು ! ಆದರ ಆ ಸುಖದಾಗ ಕಾಂಡೋಮ್ ಏತ್ಯೋ ಇಲ್ಲೋ ತಿಳಿಲಾರ್ದ ಮೈ ಮರತ್ನಿ ! ಸುಖದಾಗ ಮೈ ಮರಿತಿದ್ರ ಫಲಾನ ಈ ಹೊಟ್ಟಿ !
ಸರ್, ಈಗ ಈ ಮಾಮಾ ನನ್ನೂ ಮದ್ವಿ ಆಗ್ತೇನು ಅಂತಾರು ! ಇಬ್ರನೂ ಖುಷಿಲೇ ಇಡ್ತೇನಿ ಅಂತಾರು ! ಈಗ ನೋಡ್ಯರ ಮಾಟಾ-ಮಂತ್ರ ಮುಂದ ಮಾಡಿ ತಾ ಬಚಾವ್ ಆಗಾಕ ನೋಡಾಕತ್ತಾರು ! ನನ್ನ ಈ ನರಕದಿಂದ ಪಾರ ಮಾಡ್ರಿ ಸರ್ ! ಇಲ್ಲಂದ್ರ ನಾ ಕೇರೀನೋ ಬಾಂವಿನೋ ನೋಡ್ಕೋಬೇಕಾಗ್ತೇತಿ ! ನಂಗ ಬ್ಯಾರೆ ಹಾದಿ ಇಲ್ಲ ... !”
*****
ಡಾ. ಸರನೋಬತ್‍ನಿಗೆ ನಡೆದಿರುವುದು ಏನು ಎಂಬುದು ಪಕ್ಕಾ ಗೊತ್ತಾಗಿ ಹೋಗಿತ್ತು ! ಆದರೆ ಮುಂದಿನ ದಾರಿ ಏನು ಎಂಬುದು ತಿಳಿಯಲಿಲ್ಲ ! ಆತ ನಾರಾಯಣರಾವ್‍ನನ್ನು ಒಳಗೆ ಕರೆಯಿಸಿದ.
“ನಾರಾಯಣರಾವ್, ಮಹಾರಾಜರ್ಹಂಗ ಸೋಂಗ ಹಾಕಿ ಮಾಟಾ-ಮಂತ್ರ ಮುಂದ ಮಾಡಿ ನೀವ್ ಭಾssಳ ಮೋಸಾ ಮಾಡೇರಿ ! ಪುಣ್ಯಕರ್ಮಕ್ಕ ಬೆನ್ನೆಲಬಾಗಿ ನಿಲ್ಲಬೇಕಾದ ನೀವss ಮಹಾರಾಜರ್ಹಾಂಗ ಸೋಂಗ ಹಾಕಿ ಭಾಳ ಕೆಟ್ಟ ಪಾಪಾ ಮಾಡೇರಿ ! ಈ ಹುಡ್ಗಿ ಹೊಟ್ಟ್ಯಾಗಿರೂ ಗಂಟು ಯಾರೋ ಮಾಟಾ ಮಾಡಿಸಿದ್ದಲ್ಲ ; ಅದು ನೀವss ಮಾಡಿದ ಪಾಪದ ಫಲಾ ! ಖರೇ ಹೇಳ್ಬೇಕಂದ್ರ ನಿಮ್ಮ ಹರಕತ್ತ ಕಂಡು ನನಗ ಹೇಸ್ಗಿ ಅನ್ನಿಸ್ಲಿಕ್ಕತ್ತದ ! ಭ್ರೂಣ ಹತ್ಯಾ ಮಹಾಪಾಪ ; ಆ ಪಾಪಾ ಮಾಡಂತ ನನಗ ಹೇಳ್ಕಲಿಕ್ಕತ್ತೀರಿ ? ನಿಮ್ಮ ಮಹಾರಾಜಗಿರಿಗಿ ಏನ ಅನ್ನಬೇಕೋ ತಿಳೀವಲ್ದು. ಈಗ ಸರಳ ನೀವ್ ಇಲ್ಲಿಂದ ಜಾಗಾ ಮಾಡ್ರಿ. ಇಲ್ಲಂದ್ರ ಪೋಲೀಸ್‍ರ್ನ ಕರ್ಸಬೇಕಾದೋತು !”
ಪೋಲೀಸು ಎಂಬ ಮಾತು ಕೇಳಿದ ತಕ್ಷಣ ನಾರಾಯಣನ ಮೈಯಿಂದ ನೀರು ಇಳಿಯತೊಡಗಿತು ! ಆತ ಲಗುಬಗೆಯಿಂದ ದ್ರೌಪದಿಯನ್ನು ಕರೆದುಕೊಂಡು ಆ ಆಸ್ಪತ್ರೆಯಿಂದ ಪಚಾರಾದ !
*****
ದ್ರೌಪದಿ ಹಠ ಹಿಡಿದು ಕುಳಿತ್ತಿದ್ದಳು !
“ನೀ ನಿರೋಧ ಹಾಕ್ಕೊಂಡ ಮ್ಯಾಲೂ ಇದ ಹ್ಯಾಂಗ ಆತು ? ಇದಕ್ಕ ಇನ್ನ ಉಳದಿರೋ ಹಾದಿ ಒಂದss ಒಂದ ; ಆತ್ಮಹತ್ಯೆ ! ಆದರ ಆತ್ಮಹತ್ಯಾ ಮಾಡ್ಕೊಳ್ಳಾಕೂ ಧೈರ್ಯಾ ಬೇಕಾಗ್ತೇತಿ. ಆ ಧೈರ್ಯಾನೂ ನಂಗಿಲ್ಲ ! ಇನ್ನ ನಿನ್ನ ಉಸಾಬರಿ ಸಾಕು. ನಾ ನಿನ್ನ ಬಿಟ್ಟ ಹೋಗ್ತೇನಿ”
ಸಿಟ್ಟಿನಿಂದ ಒಂದೇ ಸಮನೇ ಬೈಯ್ಯುತ್ತಲೇ ಇದ್ದ ದ್ರೌಪದಿ ಅದೇ ದಿನ ತನ್ನ ತವರಿಗೆ ಹೊರಟು ಹೋದಳು !
*****
ದ್ರೌಪದಿ ಹುಚ್ಚಿಯಂತಾಗಿದ್ದಳು !
ಅನ್ನ-ನೀರು-ನಿದ್ದೆಯ ಮೇಲಿನ ಆಕೆಯ ಲಕ್ಷ್ಯ ಹಾರಿ ಹೋಗಿತ್ತು ! ಕಾಲ ಉರುಳಿದಂತೆ ಆಕೆಯ ಪ್ರಕೃತಿ ಬಿಗಡಾಯಿಸತೊಡಗಿತ್ತು ! ಬರುಬರುತ್ತ ಆಕೆ ಯಾರೊಂದಿಗೂ ಮಾತನಾಡದೇ ಮೌನಿಯಾಗಿರತೊಡಗಿದಳು ! ನಿಜವಾಗಿ ಮೂಕಿಯೇ ಆದಳು ! ಆಕೆಯನ್ನು ಮಾತನಡಿಸುವ ಪ್ರಯತ್ನದಲ್ಲಿ ತಂದೆ-ತಾಯಿ ಸೋತು ಹೋದರು !
‘ಹೇಗೆ ಹೇಳಬೇಕು ?’
‘ಏನು ಹೇಳಬೇಕು ?’
‘ತಂದೆ-ತಾಯಿ ಏನು ತಿಳಿದುಕೊಳ್ಳಬಹುದು ?’
‘ಅಕ್ಕ ಸುಮ್ಮನಿರುತ್ತಾಳೆಯೇ ?’
ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಪೇಚಿನಲ್ಲಿ ದ್ರೌಪದಿ ಸಿಲುಕಿಕೊಂಡಿದ್ದಳು !
ಅತ್ತ ದರಿ ; ಇತ್ತ ಪುಲಿ !
ತುಂಬ ಪ್ರಯತ್ನದ ನಂತರ ಆಕೆ ಮೌನವನ್ನು ಮುರಿದಳು !
ಅಳಿಯನ ಅಯೋಗ್ಯತನ ಕೇಳಿ ತಂದೆ-ತಾಯಿಯ ತಲೆ ಗಿಮಿಗಿಮಿ ತಿರುಗತೊಡಗಿತ್ತು ! ಅವರು ಮೂರ್ಚೆ ಬೀಳುವುದೊಂದೇ ಬಾಕಿ ಇತ್ತು ! ಇದರಿಂದ ಹೇಗೆ ಪಾರಾಗಬೇಕು ಎಂಬ ಚಿಂತೆ ಅವರನ್ನು ಆವರಿಸಿಕೊಂಡು ಹಿಂಡಿ ಹಿಪ್ಪಿ ಮಾಡಿತ್ತು ! ಆದರೆ ಯಾವ ಹಾದಿಗಳೂ ಅವರ ಮುಂದೆ ಸುರಳಿತವಾಗಿ ತೆರೆದುಕೊಳ್ಳಲಿಲ್ಲ ! ಹಾಗೆ ಹೀಗೆ ಮಾಡಿ ಕೊನೆ ಅವರೊಂದು ನಿರ್ಧಾರಕ್ಕೆ ಬಂದರು ;
ದ್ರೌಪದಿಯನ್ನು ನಾರಾಯಣನಿಗೇ ಮದುವೆ ಮಾಡಿಕೊಡಬೇಕು !
*****
ದ್ರೌಪದಿ ಭಿಡೆ ಬಿಟ್ಟೇ ಹೇಳಿದಳು ;
“ಮಾಮಾ ನನ್ನ ಜೋಡಿ ಲಗ್ನಾ ಮಾಡ್ಕೋತೇನಿ ಅಂತ ಆಣೀ ಮಾಡ್ಯಾಣು ! ಅಂವ್ನ ಜೋಡೀನ ನಾ ಸಂಸಾರ ಮಾಡಾಕಿ. ಯಾವದರ ಗುಡ್ಯಾಗ ಯಾಕಾಗವಲ್ದು ನಮ್ಮ ಲಗ್ನಾ ಮಾಡ್ಸರಿ. ಲಗ್ನಾ ಆದ್ರ ಎಲ್ಲಾ ಚೊಲೋ ಆಗ್ತೇತಿ”
ತನ್ನ ಅಳಿಯನನ್ನು ಕರೆಯಿಸಿಕೊಂಡು ಯಾರಿಗೂ ಗೊತ್ತಾಗದಂತೆ ವೈಜನಾಥ ದೇವಾಲಯದಲ್ಲಿ ಮದುವೆ ಮಾಡಿ ಬಿಡಬೇಕು ಎಂದು ಆಕೆಯ ಅಪ್ಪನೂ ನಿರ್ಧರಿಸಿದ !
ಆದರೆ ಮಂಜುಳಾ ?
ಮಂಜುಳಾ ವಿರೋಧಿಸಿದಳು !
“ನನ್ನ ತಂಗೀನ ಸಂವತಿ ಅಂತ ನಾ ಹೆಂಗ್ ಒಪ್ಕೊಳ್ಲಿ ? ಇಷ್ಟ ದಿವಸ ಅಕ್ಕಾ-ತಂಗಿ ಅಂತ ಪ್ರೀತಿಲೇ ಬದಕೇವಿ. ಈಗ ಸಂವತೇರ ಆಗಿ ಬದಕಬೇಕೇನ ? ಸಂವತಿ ಅಂದ್ರ ಮನ್ಯಾಗ ಜಗಳ ಆಗೇ ಆಗ್ತಾವ ! ನಾ ಈ ಲಗ್ನಕ ಒಪ್ಪೂದಿಲ್ಲ ತಿಳ್ಕೋರಿ”
ಮಂಜುಳಾ ಮಾತು ಕೇಳಿದ ಮೇಲೆ ನಾನಾ ಪರಿಯಿಂದ ಆಕೆಯನ್ನು ಸಮಾಧಾನಿಸಿ, “ಸಧ್ಯ ಇರೋದ ಇದೊಂದ ಹಾದಿ. ಇಲ್ಲಂದ್ರ ಎರಡೂ ಮನೆತನಗಳ ಮಾನ-ಮರ್ಯಾದೆ ಹರಾಜಾಗ್ತೇತಿ” ಎಂದಾಗ ಆಕೆ ಗತ್ಯಂತರವಿಲ್ಲದೆ ಹ್ಞೂಂಗುಟ್ಟಿದಳು !
*****
ಅಳಿಯ ನಾರಾಯಣನನ್ನು ಊರಿಗೆ ಕರೆಯಿಸಲಾಯಿತು !
ಆತನ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ಆತನಿಂದಲೇ ಆದ ಈ ಹಲ್ಕಾ ಕೆಲಸಕ್ಕಾಗಿ ಜಗಳಾ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿ ಹೇಳಿದರು !
ನಾರಾಯಣ ತಿರುಗಿ ಬಿದ್ದ !
ಎಲ್ಲವನ್ನೂ ಕೇಳಿದ ಆತನಿಗೆ ಒಂದುಕ್ಷಣ ಒಳ್ಳೆಯದೇ ಆಯಿತು ಎನಿಸಿದರೂ ಮಹಾರಾಜ ಮಂಡಳಿಯಲ್ಲಿ ತನಗೆ ಸ್ಥಾನಮಾನ ಸಿಗಲಾರದು ; ಅದರಿಂದ ತಾನು ದೂರ ಉಳಿಯಬೇಕಾಗುತ್ತದೆ ಎಂದುಕೊಂಡ. ಆತನ ಕಪಟ ಸಂತತನ ಜಾಗೃತವಾಗಿತ್ತು. ತನ್ನದೇನೂ ತಪ್ಪಿಲ್ಲ ಎಂದು ವಾದಿಸತೊಡಗಿದ !
“ನೀವೇನ ಆಟಾ ಸುರು ಮಾಡೇರಿ ? ನಿಮ್ಮ ಮಗ್ಳ ಎಲ್ಲಿ ಸೆಗಣಾ ತಿಂದ ಬಂದಾಳೋ ಯಾರ್ಗಿ ಗೊತ್ತ ! ಆಕೀ ಮಾತ ಕೇಳಿ ನೀವ್ ಆ ಸೆಗಣಾ ನನ್ನ ಮ್ಯಾಲ ಚೆಲ್ಲೂ ವಿಚಾರ ಮಾಡೇರಿ ? ಜನಕ್ಕ ಅಂಜದಿದ್ರೂ ಮನಕ್ಕಾದ್ರೂ ಅಂಜಬೇಕಲಾ ! ನನ್ನ ಮ್ಯಾಲ ಇಲ್ಲದ ಆರೋಪ ಹೊರ್ಸಬ್ಯಾಡ್ರಿ. ಯಾರ ಮುಂದಾರ ಇದ್ನ ಹೇಳ್ಯರ ಕೇಳಿದೋರು ನನ್ನ ಮುಖಕ ಸೆಗಣಿ ಬಳದಾರಲಾ ! ಇದರಾಗ ನನ್ನ ಸೇರ್ಸಕೋಬ್ಯಾಡ್ರಿ. ಮುಂದ ನನ್ನ ಏನೂ ಕೇಳಬ್ಯಾಡ್ರಿ. ಏನ್ ಮಾಡ್ಕೋತಿರೋ ಮಾಡ್ಕೋರಿ”
ಅವಸರ ಅವಸರವಾಗಿಯೇ ಎಲ್ಲವನ್ನೂ ಒದರಿ ತರತುರಿಯಲ್ಲೇ ಆತ ಅಲ್ಲಿಂದ ಹೊರಟು ಹೋದ !
ಈಗ ಮಾತ್ರ ಕುಟುಂಬ ಮೇಲೆ ಆಕಾಶವೇ ಹರಿದು ಬಿದ್ದಂತಾಯಿತು ! ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದ ಹುಮ್ಮಸ್ಸು ಕರಗಿ ದುಸುಮುಸುಗಳು ಆರಂಭವಾದವು !
*****
ಇದ್ದಕ್ಕಿದ್ದಂತೆ ಒಂದು ದಿನ ಮನೆಯಲ್ಲಿ ಹಾಹಾಕಾರವೇ ಎದ್ದಿತು !
ಬೆಳಗಾಗಿ ತುಂಬ ಹೊತ್ತದರೂ ದ್ರೌಪದಿ ಎದ್ದಿಲ್ಲ ಎಂದುಕೊಂಡು ಮನೆಯವರು ಬಾಗಿಲು ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದರು. ಆದರೆ ತುಂಬ ಹೊತ್ತು ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ! ಗಾಭರಿಯಾದ ಮನೆಯವರು ಬಾಗಿಲು ಮುರಿದು ಒಳಹೊಕ್ಕರು !
ದ್ರೌಪದಿ ಹೆಣವಾಗಿ ಮಲಗಿದ್ದಾಳೆ !
ಅಸ್ತವ್ಯಸ್ತಗೊಂಡ ಆಕೆಯ ದೇಹ ಒದ್ದಾಡಿ ಒದ್ದಾಡಿ ಹೆಣವಾಗಿದೆ ! ಮನೆಯಲ್ಲಿದ್ದ ಕೀಟನಾಶಕ ಔಷಧಿಯ ಡಬ್ಬಿ ಅಲ್ಲೇ ಪಕ್ಕದಲ್ಲಿ ಉರುಳಿ ಬಿದ್ದಿತ್ತು !
ಇಡೀ ಮನೆ ರೋಧಿಸತೊಡಗಿತು !
ಅಕ್ಕಪಕ್ಕದವರು ಸೇರಿದರು. ತಮ್ಮ ಮನೆಯ ಮಾನ ಉಳಿಸಿಕೊಳ್ಳಲು ಹಾರ್ಟ್ ಅಟ್ಯಾಕ್ ಆಗಿ ತನ್ನ ಮಗಳು ತೀರಿಕೊಂಡಿದ್ದಾಳೆ ಎಂದು ತಂದೆ-ತಾಯಿ ಹೇಳಿಕೊಂಡು ಅತ್ತರು !
ಮನೆಯ ಮಾನವೇನೋ ಉಳಿಯಿತು !
ಬಂಗಾರದಂಥ ಮಗಳು ಬದುಕುಳಿಯಲಿಲ್ಲ !
ದ್ರೌಪದಿ ಸಹಜವಾಗಿ ಸಾಯದೇ ಮಹಾರಾಜ ಅನ್ನಿಸಿಕೊಂಡ ನಾರಾಯಣನ ಹಲ್ಕಟ್ ಕೆಲಸದಿಮದ ಹೆಣವಾಗಿದ್ದಳು !
ಹೊರಜಗತ್ತಿಗೆ ಇದು ತಿಳಿಯಲೇ ಇಲ್ಲ ! ನಾರಾಯಣ ಮಹಾರಾಜನ ಸಂತತನ ಅಭಾದಿತವಾಗಿ ಮುಂದುವರಿಯಿತು !
ನಾರಾಯಣನಂತಹ ಸೋಗಲಾಡಿ ಜನರನ್ನು ಕಂಡೇ ಸಂತ ತುಕಾರಾಮ ಒಂದು ಹೇಳುತ್ತಾನೆ;
‘ತುಕಾನ ಮಾತಿದು ಇಂಥ ನರರನ್ನು
ಚಪ್ಪಲಿಯಿಂದ ಹೊಡೆಯಬೇಕು !’
*****

Tuesday, August 21, 2012

ಕಮರಿ ಹೋದವು ಕರುಳಿನ ಕಣ್ಣೀರು !

ಮೂಲ ಮರಾಠಿ : ಕೆ.ಬಿ. ಹನ್ನೂರಕರ 
 ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
 _____________________________________________________________________________
ಶಾಂತಾಬಾಯಿ !
ಗಂಡ, ಅಪಘಾತದಲ್ಲಿ ತೀರಿಕೊಂಡ ಮೇಲೆ ವಿಧವೆಯಾದ ಆಕೆಯ ಮಡಿಲಲ್ಲಿ ಚಿಕ್ಕ ಚಿಕ್ಕ ಮೂರು ಮಕ್ಕಳಿದ್ದವು ; ಬದುಕು ನಡೆಸಲು ಏನೂ ಇರಲಿಲ್ಲ !
ಮಾಡುವುದಾದರೂ ಏನು ?
ಶಾಂತಾಬಾಯಿ ನೋವಿನಲ್ಲೂ ಸ್ಥೈರ್ಯ ಕಳೆದುಕೊಳ್ಳಲಿಲ್ಲ.
ಅಸಹಾಯಕತೆಯಿಂದ ಅಳಲಿಲ್ಲ ; ಎದೆಗುಂದಲಿಲ್ಲ.
ಗುಬ್ಬಿಯಂತಹ ಮೂರು ಮಕ್ಕಳಿಗಾಗಿ ಆಕೆ ತುಂಬು ಧೈರ್ಯದಿಂದಲೇ ಎದೆ ಮೇಲೆ ಎಗರಿ ಬಿದ್ದಿದ್ದ ಪರಿಸ್ಥಿತಿಯನ್ನು ನಿಭಾಯಿಸಿದಳು.
ಗಂಡನ ಸಾವು ಎಂದರೆ ಹೆಣ್ಣಿನ ಬಾಳಿನ ಮೇಲೆ ಬಿದ್ದ ಸಂಕಟದ ಗುಡ್ಡವೇ ಸರಿ. ಆದರೆ ತನ್ನ ಮಕ್ಕಳನ್ನು ಬೆಳೆಸಲು, ಪಾಲಿಸಲು ಆ ಸಂಕಟದ ಗುಡ್ಡವೇ ಶಾಂತಾಬಾಯಿಗೆ ಶಕ್ತಿ ನೀಡಿದಂತಿತ್ತು !
ಏನಾದರೂ ಸರಿ ; ತನ್ನ ಬಳ್ಳಿಯ ಹೂಗಳು ಅರಳಲೇ ಬೇಕು ಎಂಬ ಹಠವನ್ನು ಮನದಲ್ಲಿ ತುಂಬಿಕೊಂಡ ಆಕೆ ಬದುಕಿ ತೋರಿದಳು.
ವೊದಲಿಗೆ ಕಾಯಿಪಲ್ಲೆ ಮಾರುವ ಕಾಯಕ ಮಾಡತೊಡಗಿದಳು. ಮುಂಗಡ ಹಣವಿಲ್ಲದೆ ಕಾಯಿಪಲ್ಲೆ ದೊರೆಯುತ್ತಿತ್ತು. ಜನಸಂಚಾರದ ಹಾದಿಯ ಬದಿಗೆ ಕುಳಿತು ಕಾಯಿಪಲ್ಲೆ ಮಾರಬಹುದು ; ಬಾಡಿಗೆ ಅಂಗಡಿಯ ಅವಶ್ಯಕತೆಯೇ ಇಲ್ಲ ! ಆಕೆ ನೋವನ್ನೆಲ್ಲ ಮರೆತು ಮನಸಿಟ್ಟು ದುಡಿದು ಮಕ್ಕಳನ್ನು ಬೆಳೆಸತೊಡಗಿದಳು !
ಶಾಂತಾಬಾಯಿ ಹೆಚ್ಚು ಕಲಿತವಳಲ್ಲ. ಆದರೆ ಶಿಕ್ಷಣವೇ ಮನುಷ್ಯ ಬದುಕಲು ಅಸ್ತ್ರವಾಗುತ್ತದೆ ಎಂಬ ಅರಿವು ಆಕೆಯಲ್ಲಿತ್ತು ! ಕ್ರಾಂತಿದೀಪ ಸಾವಿತ್ರಿಬಾಯಿ ಫುಲೆಯ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದಳು. ಕಷ್ಟಗಳ ಸುರಿಮಳೆಯೇ ಸುರಿದರೂ ಕೂಡ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ; ಉನ್ನತವಾದ ಸರಕಾರಿ ಹುದ್ದೆ ದೊರೆಯಬೇಕು ಎಂದು ಆಕೆ ಪಣ ತೊಟ್ಟಳು. ಮಕ್ಕಳಿಗೂ ಕೂಡ ಆಕೆ ಯಾವಾಗಲೂ ಇದನ್ನೇ ಹೇಳುತ್ತಿದ್ದಳು. ಗುರಿ ತಲುಪಲು ಬೇಕಾದ ಬಲವನ್ನು ಅವರಲ್ಲಿ ತುಂಬುತ್ತಿದ್ದಳು. ಹಂಬಲದ ಹುಚ್ಚಿನಲ್ಲಿಯೇ ಬೆವರು ಹರಿಸಿ ದುಡಿಯತೊಡಗಿದ್ದಳು. ತನ್ನ ಭವ್ಯವಾದ, ದಿವ್ಯವಾದ ಕನಸನ್ನು ನನಸಾಗಿಸಿಕೊಳ್ಳಲು ಆಕಾಶ-ಭೂಮಿಗಳೆರಡನ್ನೂ ಒಂದು ಮಾಡುವ ಉಮೇದು ಆಕೆಯಲ್ಲಿತ್ತು.
ಆಕೆಯ ಮಕ್ಕಳಾದರೂ ಆಕೆಯ ಹಂಬಲದಂತೆಯೇ ಬುದ್ಧಿವಂತರಾಗಿಯೇ ಬೆಳೆದರು. ಆ ಮೂರೂ ಮಕ್ಕಳು ಉನ್ನತ ಶಿಕ್ಷಣ ಪಡೆದುದರಿಂದ ಶಾಂತಬಾಯಿಯ ಕಷ್ಟಗಳು ಕರಗಿ ಹೋಗಿ ಸುಖದ ಸಂಭ್ರಮ ಗೂಡು ಕಟ್ಟುತ್ತಿತ್ತು.
ಹಿರಯ ಮಗ ಪ್ರಲ್ಹಾದ ಇಂಜಿನೀಯರ್ ಆಗಿ ಬೆಳಗಾವಿ ಬಿಟ್ಟು ಮುಂಬಾಯಿ ಸೇರಿಕೊಂಡು ಸರಕಾರಿ ಹುದ್ದೆ ಗಳಿಸಿದ. ಎರಡನೆಯ ಮಗ ಪ್ರಕಾಶನೂ ಬಿ.ಕಾಂ. ಪದವೀಧರನಾಗಿ ಮುಂಬಾಯಿಯ ಬ್ಯಾಂಕಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಬೆಳಗಾವಿಯನ್ನು ಬಿಟ್ಟ. ಮೂರನೆಯ ಮಗ ವಿನಾಯಕ ಬಿಜಿನೆಸ್ದಲ್ಲಿ ಆಸಕ್ತಿವಹಿಸಿ ಬೆಳಗಾವಿಯ ಒಂದು ಸೂಕ್ತ ಜಾಗದಲ್ಲಿ ಹೊಟೇಲು ಆರಂಭಿಸಿದ.
*****
ಒಂದು ಕಾಲದಲ್ಲಿ ರೊಟ್ಟಿಯ ತುಣುಕಿಗಾಗಿ ಹಪಹಪಿಸುತ್ತಿದ್ದ ತನ್ನ ಮೂರೂ ಮಕ್ಕಳು ಇಂದು ಹಣದ ರಾಶಿಯ ಮೇಲೆ ರಾಜ್ಯ ಮಾಡುವುದನ್ನು ಕಂಡು ಶಾಂತಾಬಾಯಿಯ ಜೀವ ತೃಪ್ತಗೊಂಡಿತು. ಒಂದು ಕಾಲದಲ್ಲಿ ಎಲ್ಲಿಯಾದರೂ ಸಹಾಯ ಬೇಡಿಯಾಳು ಎಂದು ಶಾಂತಾಬಾಯಿಯಿಂದ ದೂರ ಓಡುತ್ತಿದ್ದ ಸಂಬಂಧಿಕರು ಈಗ ಆಕೆಯ ಆಸುಪಾಸಿನಲ್ಲೇ ಸುತ್ತಾಡತೊಡಗಿದ್ದರು ! ಮೇಲಿಂದ ಮೇಲೆ ಆಕೆಯ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲು ಬರತೊಡಗಿದ್ದರು ! ಸೊಸೆಯಂದಿರನ್ನು ಯಾವಾಗ ತರುತ್ತಿ ಎಂದೂ ಕೇಳತೊಡಗಿದರು ! ಮಕ್ಕಳ ಮುಂದೆ ಶಾಂತಾಬಾಯಿ ಮದುವೆಯ ಪ್ರಸ್ತಾಪ ಮಾಡಿದಾಗ, ಈ ಮುರುಕು ಮನೆಗೆ ಯಾರು ಹೆಣ್ಣು ಕೊಡುತ್ತಾರೆ ; ವೊದಲು ಹೊಸಮನೆ ಕಟ್ಟೋಣ, ಆಮೇಲೆ ಮದುವೆ-ಗಿದುವೆ ಎಲ್ಲ ಎಂದರು !
*****
ಮೂರೂ ಮಕ್ಕಳು ಸೇರಿ, ತಮ್ಮ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಮೂರು ಅಂತಸ್ತಿನ ಅದ್ಭುತವಾದ ಮಹಲನ್ನು ಕಟ್ಟಿಸಿದರು. ಚೆಲುವೆಯರಾದ ಸೊಸೆಯಂದಿರು ಮನೆ ತುಂಬಿದರು. ಮನೆ ನಂದನವಾಗಿ ನಲಿಯತೊಡಗಿತ್ತು !
ಆದರೆ ಮುಂದೆ ನಡೆದದ್ದು ಮಾತ್ರ ಘೋರವಾದದ್ದು ! ಎಣಿಸಿದಂತೆ ಯಾವುದೂ ಆಗುವುದಿಲ್ಲ ! ಮದುವೆಯ ಸಲುವಾಗಿ ಎರಡೆರಡು ತಿಂಗಳು ರಜೆ ಹಾಕಿ ಬಂದ ಪ್ರಲ್ಹಾದ ಮತ್ತು ಪ್ರಕಾಶರಿಗೆ ರಜೆ ಯಾವಾಗ ಮುಗಿಯುತ್ತದೆಯೋ ಎನಿಸತೊಡಗಿತ್ತು ! ಯಾಕೆಂದರೆ ಬಡತನದ ಅರಿವಿನ ಶಾಂತಾಬಾಯಿಯ ಕಟ್ಟುನಿಟ್ಟು ಹೊಸದಾಗಿ ಮನೆ ಸೇರಿದ ಸೊಸೆಯಂದಿರಿಗೆ ಇರುಸು-ಮುರುಸು ಉಂಟು ಮಾಡುತ್ತಿತ್ತು !
ಕಿರಿಯ ಮಗ ವಿನಾಯಕನ ಹೆಂಡತಿಯಂತೂ ಹೋಯ್ಮಾಲಿಯೇ ಆಗಿದ್ದಳು ! ಇಂದಲ್ಲ ನಾಳೆ, ಇಬ್ಬರೂ ಮೈದುನರು ಮುಂಬಾಯಿಗೆ ತಮ್ಮ ತಮ್ಮ ಹೆಂಡತಿಯರೊಂದಿಗೆ ಹೊರಟು ಬಿಡುತ್ತಾರೆ ; ಇಲ್ಲಿ ತಾನೊಬ್ಬಳೇ ಈ ಮುದುಕಿಯ ಕಷ್ಟವನ್ನು ಸಹಿಸಬೇಕಾಗುತ್ತದೆ ಎಂಬುದು ಆಕೆಯ ಒಳಗುದಿಯಾಗಿತ್ತು ! ಮುದುಕಿಯನ್ನು ತಾನೊಬ್ಬಳೇ ನೋಡಿಕೊಳ್ಳಬೇಕಾಗುತ್ತದೆ ಎಂದುಕೊಂಡ ಆಕೆ ಗಂಡನ ಹತ್ತಿರ ತಕರಾರು ಎತ್ತಿದಳು. ಹಿರಿಯರಿಬ್ಬರೂ ಕಿರಿಯ ತಮ್ಮನನ್ನು ಬೆಂಬಲಿಸಿದರು. ಮುಂಬಾಯಿಗೆ ಮರಳುವ ಮುಂಚೆ ಬೇರೆಯಾಗುವ ಮಾತುಗಳನ್ನು ಸೊಸೆಯಂದಿರು ವಿನಿಮಯ ಮಾಡಿಕೊಂಡರು ! ಹೆಂಡತಿಯರ ಗುಂಗಿನಲ್ಲಿದ್ದ ಶಾಂತಾಬಾಯಿ ಕರುಳ ಕುಡಿಗಳಾಗಿದ್ದ ಆ ಮೂರೂ ಮಕ್ಕಳೂ ತಲೆಕೆಟ್ಟವರಂತೆ ವರ್ತಿಸಿದರು ! ಅವರಿಗೆ ತಮ್ಮ ಅವ್ವ ಎದುರಿಸಿದ ಕಷ್ಟಗಳ ಅರಿವು ಮರೆತು, ಹೆಂಡತಿಯರ ಹೇಳಿಕೆ ಮಾತಿಗೆ ತಲೆಬಾಗಿ ಪಾಲು ಹಂಚಿಕೊಳ್ಳಲು ಸಿದ್ಧವಾದರು !
ಶಾಂತಾಬಾಯಿಗೆ ವೊದವೊದಲು ಈ ಸಂಗತಿ ಒಂದಿಷ್ಟು ನೋವು ನೀಡಿದ್ದು ಸತ್ಯ. ಆದರೆ ಮಕ್ಕಳು ಹೇಗಾದರೂ ಸುಖಿಯಾಗಿದ್ದರೆ ಸಾಕು ಎಂದಿತು ತಾಯಿ ಹೃದಯ ! ಪಾಲು ಹಂಚಿಕೊಳ್ಳಲು ಆಕೆ ಸಮ್ಮತಿಸಿದಳು. ಹಾಗೆ ನೋಡಿದರೆ ಹಿರಿಯ ಮಕ್ಕಳಿಬ್ಬರೂ ನೌಕರಿಯ ನಿಮಿತ್ಯವಾಗಿ ಮನೆಯನ್ನು ಬಿಟ್ಟು ಹೋಗುವವರೇ ಅಲ್ಲವೆ ; ಅದಕ್ಕೆ ಯಾಕೆ ತಕರಾರು ಎಂದುಕೊಂಡ ಆಕೆ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಳು !
*****
ಪಂಚರನ್ನು ಕರೆಯಿಸಲಾಯಿತು !
ಮನೆಯಂತೂ ವೊದಲೇ ಮೂರು ಅಂತಸ್ತಿನದೇ ಆಗಿತ್ತು ! ಮೇಲಿನ ಮಹಡಿ ಹಿರಿಯ ಮಗ ಪ್ರಲ್ಹಾದನ ಪಾಲಾಯಿತು. ನಡುವಿನ ಮಗ ಪ್ರಕಾಶನಿಗೆ ನಡುವಿನ ಮಹಡಿ ಎಂದಾಯಿತು. ಕೆಳಗಿದ್ದ ಮನೆ ಕಿರಿಯ ಮಗ ವಿನಾಯಕನಿಗೆ ಉಳಿಯಿತು. ಹೀಗಾಗಿ ಮನೆ ಪಾಲು ಮಾಡಿಕೊಳ್ಳುವಲ್ಲಿ ಯಾವ ತಕರಾರೂ ಇರಲಿಲ್ಲ.
ಪಂಚರನ್ನು ಕರೆಯಿಸಿದ್ದು ಮನೆ ಪಾಲು ಮಾಡಿಕೊಳ್ಳಲು ಅಲ್ಲ !
ಮುದುಕಿಯಾದ  ಶಾಂತಾಬಾಯಿಯನ್ನು ಹೇಗೆ ಹಂಚಿಕೊಳ್ಳಬೇಕು ? ಮುಂಬಾಯಿಯ ಇಬ್ಬರೂ ಸೊಸೆಯಂದಿರು ಅತ್ತೆಯನ್ನು ತಾವಿದ್ದಲ್ಲಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು ! ಕಿರಿಯಾಕೆ ಕೂಡ ತನಗೂ ನಿಭಾಯಿಸುವುದಾಗುವುದಿಲ್ಲ ಎಂದು ಜಾರಿಕೊಂಡಿದ್ದಳು !
“ಹಂಗಾದ್ರ, ವಯಸ್ಸಾದ ಮುದ್ಕಿ ಎಲ್ಲಿರ್ಬೇಕ ಹೇಳ್ರ್ಯಲ್ಲ ?” ಪಂಚರು ಪ್ರಶ್ನೆ ಎಸೆದರು.
ವೊದಲೇ ಮಾತಾಡಿಕೊಂಡಂತೆ ಹಿರಿಸೊಸೆ, “ಅತ್ತಿಯೋರ್ನ ನಾಕನೇ ಮಾಡಿ ಮ್ಯಾಗ ಅಂದ್ರ ಟೆರೆಸ್ ಮ್ಯಾಲ ಇರೂ ರೂಮದಾಗ ಇಟ್ಟರಾಗುದಿಲ್ಲೇನ ?” ಎಂದಾಗ ಉಳಿದಿಬ್ಬರೂ ಸೊಸೆಯಂದಿರು ಸಮ್ಮತಿ ಸೂಚಿಸಿದರು ! ಮೂರೂ ಮಂದಿ ಗಂಡುಮಕ್ಕಳು ಮೌನವಾಗಿಯೇ ತಮಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಿಂತಿದ್ದರು !
“ನೀವ್ ಏನ್ ಅಂತೀರೋ ಪೋರಗೋಳ್ರ್ಯಾ ?” ಪಂಚರು ಮಕ್ಕಳನ್ನೇ ನೇರವಾಗಿ ಕೇಳಿದರು.
“ಅವ್ರ ಹೆಂಗ್ ಹೇಳ್ತಾರೋ ಹಂಗ ಆಗ್ಲಿ” ಮೂವರೂ ‘ಜೀ’ ಎಳೆದರು !
“ಹಂಗಾದ್ರ, ಆ ಮುದ್ಕಿ ಹೊಟ್ಟಿಗಿ-ಬಟ್ಟಿಗಿ ಏನ್ಮಡ್ಬೇಕಂತೇರಿ ?”
“ಅತ್ತೀ ಕಡೀ ಭಾಳ ರೊಕ್ಕ ಇರ್ಬೇಕಲಾ. ಇಲ್ಲದಿರಕ ಮೂರ ಮಕ್ಳಾ ಸಾಕಿ, ಸಾಲಿ ಕಲ್ಸಾಕ ಆಗ್ತಿತ್ತೇನ್ರಿ ? ಇನ್ನೂ ಭಾಳಕೂನೆ ರೊಕ್ಕ ಇರ್ಬೇಕ ಬಿಡ್ರಿ. ನಮ್ಮ ಕಡಿಂದ ಒಂದ ದಮ್ಮಡಿನೂ ಅಕಿಗೂ ಕೊಡಾಕಾಗುದಿಲ್ಲ” ಎಂಬ ಸೊಸೆಯಂದಿರ ಕಟುನುಡಿಗಳನ್ನು ಕೇಳಿದ ಶಾಂತಾಬಾಯಿಗೆ ನೆಲ ನುಂಗಬಾರದೇ ಎನಿಸತೊಡಗಿತು ! ಆದರೆ ಎಂಥದ್ದೇ ಸಂಕಷ್ಟ ಸಂದರ್ಭದಲ್ಲೂ ನೋವನ್ನು ಸಹಿಸಿಕೊಳ್ಳುವ ಶಕ್ತಿ, ಆಕೆಯ ಗಂಡ ತೀರಿಕೊಂಡಾಗಲೇ ಆಕೆಗೆ ಸಿದ್ಧಿಸಿತ್ತು !
ಎಂಥಾ ಕೌರ್ಯ !
ಪಂಚರು ತಮ್ಮ ತಮ್ಮಲೇ ಮಾತಾಡಿಕೊಂಡರು.  ಒಂದು ದಿಟ್ಟ ನಿಲುಮೆಯನ್ನು ತಾಳಿದ ಅವರು, ಆ ಗಂಡುಮಕ್ಕಳಿಗೆ ಹೇಳಿದರು, “ಏನ್ರ್ಯಪಾ, ನಿಮ್ಮ ಹ್ಯಾಂತೇರ ಮಾತಾಡ್ತಾರು ; ನೀವ್ ನೋಡ್ಯರ ಕಲ್ಲಿನಗತೆ ಮೂಕಾಗಿ ನಿಂತೇರಿ. ಇದೇನ ಸರಿ ಅಲ್ಲ. ಪಾಪ ಆ ಮುದ್ಕಿ, ನಿಮ್ಮ ಸಲಮಂದ ಎಸ್ಟೊಂದ್ ಕಸ್ಟಾ ಸೋಸ್ಯಾಳ ಅನ್ನೂದ ನಿಮಗೇನ ಅರೀದಲ್ಲ. ಎಲ್ಲಾ ನೋಡ್ಕೊಂಡ ಬೆಳದೇರಿ. ನಿಮ್ಮ ಸಲಮಂದ ರಕ್ತಾ ಬೆವರ ಮಾಡ್ಕೊಂಡ ದುಡದ ಹೆಣ್ಣಮಗಳ ಆಕಿ. ಹಂತಾಕಿಯನ್ನ ನೀವ್ ಟೇರೆಸ್ ಮ್ಯಾಲ ಹಾಕಾಕತ್ತೇರಿ ? ನಿಮಗೇನ ಇದ ಒಪ್ಪೂ ಮಾತ ?”
ಪಂಚರ ಯಾವೊಂದು ಮಾತುಗಳೂ ಆ ಮಕ್ಕಳ ಮೇಲೆ ಯಾವೊಂದು ಪರಿಣಾಮವನ್ನೂ ಬೀರಿದಂತೆ ಕಾಣಿಸಲಿಲ್ಲ !
ಹೇಳಿಕೇಳಿ ನಿರ್ಲಜ್ಜರೇ ಆಗಿದ್ದ ಅವರು ಮಾತನಾಡಲು ಬಾಯಿಯೇ ಇಲ್ಲದವರಂತೆ ನಿಂತುಕೊಂಡಿದ್ದರು !
ಹಿರಿಯ ಮಗ ಕೊನೆಗೂ ಬಾಯಿ ಬಿಟ್ಟ !
“ನಾವಿಬ್ರೂ ಮುಂಬಾಯಾಗ ಇರಾರು. ಹಂಗಾಗಿ ನಮ್ಮ ಕಡಿಂದ ಅವ್ವನ ನೋಡಕೊಳ್ಳಾಕ ಆಗೂದ ಇಲ್ಲ. ಇಸ್ಟಂತೂ ಮಾಡಾಕ ತಯಾರ ಅದೇವು. ಏನಂದ್ರ ಯಾರ್ನರೆ ಆಳ ಇಟ್ಟ ಅವ್ವನ ಸೇವಾ ಮಾಡ್ಸತೇವು. ಮುಂಬಾಯಾಗ ಇರೂ ನಾವಿಬ್ರೂ ಆಳಿನ ಎರಡ ತಿಂಗ್ಳ ಪಗಾರ ಕೊಡತೇವು. ಸಣ್ಣಾಂವ ಮೂರ್ನೆ ತಿಂಗ್ಳದ ನೋಡ್ಕೋಲಿ”
ಕಿರಿಯ ಮಗ ಕೂಡ ಮಾತಾಡಿದ, “ನಾನೂ ಅದನ ಕೊಡಾಕ ತಯಾರಿದೇನಿ. ಅವ್ವನ ನೋಡ್ಕೊಳ್ಳಾಕ ಖಾಯಮ್ಮಾಗಿ ಯಾರ್ನರೆ ಪಗಾರ ಕೊಟ್ಟ ನೇಮಸ್ರಿ”
“ಏನ್ರೆಪಾ, ಏನ್ ಹೇಳ್ತೇರಿ ?” ಉಳಿದವರಿಬ್ಬರನ್ನು ಪಂಚರು ಕೇಳಿದರು.
“ಅಂವಾ ಹೇಳಿದಾಂಗ ಮಾಡ್ರಿ. ನಾವೂ ನಮ್ಮ ನಮ್ಮ ಪಾಲಿನ ಆಳಿನ ಪಗಾರ ಕಳ್ಸತೇವು”
ಪಂಚರಿಗೆ ಅಸಹ್ಯವೆನಿಸಿತು ! ಎಂಥ ಮಕ್ಕಳಿವು ! ಮುಂದೆ ಏನೊಂದೂ ಮಾತನಾಡದೆ ಅವರು ಎದ್ದು ಹೋದರು !
ಟೇರೆಸ್ ಮೇಲೆ ಹಳೆಯ ಸಾಮಾನುಗಳನ್ನು ಇಡಲು ಕಟ್ಟಿದ್ದ ಕೋಣೆಯನ್ನು ಸ್ವಚ್ಛಗೊಳಿಸಿದ ಆ ಮೂವರೂ ಮಕ್ಕಳು, ಶಾಂತಾಬಾಯಿಗಾಗಿ ಒಂದು ಮಂಚ, ಗಾದಿ, ಒಂದಿಷ್ಟು ಪಾತ್ರ-ಪಗಡಿಗಳೊಂದಿಗೆ ಅವ್ವನನ್ನು ಅಲ್ಲಿಟ್ಟು, ಆಕೆಯನ್ನು ನೊಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿದರು !
*****
ರಜೆಗಳನ್ನೆಲ್ಲ ಮುಗಿಸಿಕೊಂಡ ಪ್ರಲ್ಹಾದ ಮತ್ತು ಪ್ರಕಾಶ ತಮ್ಮ ಹೆಂಡತಿಯರೊಂದಿಗೆ ಮುಂಬಾಯಿಗೆ ಹೋದರು. ಕಿರಿಯಾತ ತನ್ನ ಹೊಟೇಲು ಉದ್ದಿಮೆಯಲ್ಲಿ ಮಗ್ನನಾದ. ಆತನ ಹೆಂಡತಿ ಮಹಿಳಾ ವಿವೋಚನಾ ಚಳುವಳಿಯ ಸದಸ್ಯೆಯಾಗಿದ್ದಳು ! ಮಹಿಳಾ ವಿವೋಚನೆಯ ಬಗ್ಗೆ ಆಕೆ ಉದ್ದುದ್ದ ಭಾಷಣವನ್ನೂ ಸಭೆ-ಸಮಾರಂಭದಲ್ಲಿ ಬಿಗಿಯುತ್ತಿದ್ದಳು ! ಆಕೆಯ ಮಾತುಗಳನ್ನು ಕೇಳಿದವರು ಆಕೆಯನ್ನು ಮೆಚ್ಚಿಕೊಳ್ಳತೊಡಗಿದರು !
ತನ್ನ ಸ್ವಂತ ಅತ್ತೆಯನ್ನೇ ನೋಡಿಕೊಳ್ಳದೇ ನಿರ್ದಯವಾಗಿ ಟೇರೆಸ್ಗೆ ವರ್ಗಾಯಿಸಿದ ಮೇಲೆಯೂ ಆಕೆಯ ಲಂಗು-ಲಗಾಮಿಲ್ಲದ ಮಹಿಳಾ ವಿವೋಚನಾ ಪರ ಭಾಷಣಗಳು ನಿರಂತರವಾಗಿದ್ದವು !
“ಇಂದಿನವರು ವೃದ್ಧ ತಂದೆ-ತಾಯಿಯರನ್ನು ನೋಡೋದಿಲ್ಲ. ಇಂಥವರಿಗೆ ಧಿಕ್ಕಾರವಿರಲಿ. ಸಮಾಜದಲ್ಲಿ ಇಂಥ ಅಮಾನವೀಯ ವರ್ತನೆಗಳಿಗೆ ಅಂಕುಶ ಹಾಕುವ ಕೆಲಸವನ್ನು ನಾವು ಮಾಡಬೇಕಿದೆ”
ಇದು ಆಕೆಯ ಭಾಷಣದ ಒಂದು ಝಲಕು !
*****
ಒಂದು ದಿನ ಬೆಳಿಗ್ಗೆ ಇದ್ದಕಿದ್ದಂತೆ ಆ ಸಮಾಜಸೇವಕಿ ಸೊಸೆಯ ಮನೆಯ ಟೇರೆಸಿನ ಮೇಲೆ ಕಾಗೆಗಳು ‘ಕಾವ್ ಕಾವ್’ ಅನ್ನತೊಡಗಿದ್ದವು ! ತಮ್ಮ ಗೂಡಿಗೆ ಬೆಂಕಿ ಬಿದ್ದಂತೆ ಅವು ಹಾಹಾಕಾರ ಎಬ್ಬಿಸಿದ್ದವು ! ಗುಬ್ಬಿಗಳು ಕೂಡ ಅಳುಧ್ವನಿಯಲ್ಲಿ ಚಿಂವ್ಗುಟ್ಟುತ್ತಿದ್ದವು !
ಅಕ್ಕಪಕ್ಕದವರಿಗೆ ಏನೊಂದೂ ತಿಳಿಯದಂತಾಯಿತು ! ನಡೆಯಬಾರದ್ದೇನೋ ನಡೆದಿದೆ ಎಂದುಕೊಂಡರೂ ನಡೆದಿರುವುದು ಏನು ಎಂಬುದು ಅವರಿಗೆ ಗೊತ್ತಾಗಲಿಲ್ಲ ! ಗಲ್ಲಿಯವರೆಲ್ಲ ಒಂದು ಕಡೆ ಸೇರಿ ಗುಜುಗುಜು ಆರಂಭಿಸಿದ್ದರು ! ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬಾಡಿಗೆದಾರರಿದ್ದರು. ತಮ್ಮ ಮನೆಯ ಟೇರೆಸ್ ಮೇಲೆ ಏನೋ ನಡೆದಿದೆ ಎಂಬ ಗುಮಾನಿ ಅವರಿಗೆ ಬಂತು. ಬಾಡಿಗೆದಾರ ಶಿವಬಾ ಪರೀಟ್ ಟೇರೆಸ್ ಮೇಲೆ ಹೋದ.
ಅಲ್ಲೆಲ್ಲ ತಡೆದುಕೊಳ್ಳಲಾರದಂಥ ದುರ್ಗಂಧ ಹರಡಿತ್ತು ! ಯಾವುದೋ ಪ್ರಾಣಿ ಸತ್ತು ಕೊಳೆತು ಹೋದ ಆ ದುರ್ಗಂಧವನ್ನು ತಡೆದುಕೊಳ್ಳಲಾರದೇ ಶಿವಬಾ ದಡದಡನೇ ಕೆಳಗಿಳಿದು ಬಂದು ಸೇರಿದವರಿಗೆಲ್ಲ ಹೇಳಿದ, “ಅಲ್ಲೇನೋ ಸತ್ತ ಕೊಳತಾಂಗ ವಾಸ ಬರಾಕತ್ತೇತಿ”
ಪಂಚರೂ ಸೇರಿದರು. ಬೆಳಿಗ್ಗೆ ಬೆಳಿಗ್ಗೆ ಗಟಾರು ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರಿಗೆ ಟೇರೆಸ್ ಮೇಲೆ ಹೋಗಿ ನೋಡಿಕೊಂಡು ಬರುವಂತೆ ಹೇಳಲಾಯಿತು. ಅವರೆಲ್ಲ ಟೇರೆಸ್ ಏರಿದರು.
ಮೇಲೆ ಹೋಗಿ ನೋಡಿದರೆ ಆ ಮುದುಕಿ ಇರುತ್ತಿದ್ದ ಕೋಣೆಯಿಂದಲೇ ಆ ದುರ್ಗಂಧ ಹರಡಿತ್ತು ! ಕಾರ್ಮಿಕರು ಪಂಚರನ್ನು ಕೂಗಿ ಕರೆದರು. ಪಂಚರು ಮೇಲೆ ಬಂದು ಆ ಕೋಣೆಯ ಬಾಗಿಲು ಮುರಿಸಿ ಒಳಹೊಕ್ಕರು.
ಅವರೆಲ್ಲರ ತಲೆ ಸುತ್ತಿದಂತಾಯಿತು ! ಒಳಗಿನ ದೃಶ್ಯ ಭಯಂಕರವಾಗಿತ್ತು ! ‘ಹೆಣ, ಹೆಣ’ ಎನ್ನುತ್ತ ಅವರೆಲ್ಲ ಕೂಗು ಹಾಕತೊಡಗಿದರು !
ಶಾಂತಾಬಾಯಿಯ ಹೆಣ ಮಂಚದ ಮೇಲಿನಿಂದ ಕೆಳಗೆ ಬಿದ್ದು ಕೊಳೆತು ಹೋಗಿತ್ತು !
ಯಾವ ಶಾಂತಾಬಾಯಿ ಪಡಬಾರದ ಕಷ್ಟಗಳನ್ನೆಲ್ಲ ಸಹಿಸಿ, ತನ್ನ ಮೂವರು ಮಕ್ಕಳನ್ನು ಬೆಳೆಸಿ, ಓದಿಸಿ ವಿದ್ಯಾವಂತರನ್ನಾಗಿಸಿ ಆದರ್ಶ ತಾಯಿ ಎಂಬುದಾಗಿ ಗೌರವಿಸಲ್ಪಡುತ್ತಿದ್ದಳೋ ಅಂಥವಳ ದೇಹವನ್ನು ಕ್ರೀಮಿ-ಕೀಟಗಳು ಮುಕ್ಕಿ ತಿನ್ನುತ್ತಿದ್ದವು ! ಅವೆಲ್ಲ ಆಕೆಯ ಮಕ್ಕಳಂತೆಯೇ ಆಕೆಯ ಮಾಂಸವನ್ನು ತಿಂದು ಕೊಬ್ಬಿಕೊಂಡು ಓಡಾಡಿಕೊಂಡಿದ್ದವು !
ಅಲ್ಲಿ ಶಾಂತಾಬಾಯಿಯ ದೇಹದ ಎಲುಬಿನ ಹಂದರ ಮಾತ್ರ ಉಳಿದಿತ್ತು !
ಮೂಗು ಮುಚ್ಚಿಕೊಂಡೇ ಬಂದು ನೋಡಿದ ಗಲ್ಲಿಯವರೆಲ್ಲರ ಎದೆ ಒಡೆದಂತಾಗಿತ್ತು ! ಅವರ ಮನಸ್ಸುಗಳು ಆ ಆದರ್ಶ ತಾಯಿಗೆ ಬಂದ ದುರ್ಗತಿಗೆ ಕಂಡು ರೋಧಿಸತೊಡಗಿದ್ದವು. ಅವರ ಹೃದಯ ಘಾಸಿಗೊಂಡಿತ್ತು !
*****
ಮುಂಬಾಯಿಯ ಮಕ್ಕಳಿಗೆ ಸುದ್ದಿ ತಲುಪಿಸಲಾಯಿತು.
ಕೃತಘ್ನ ಆ ಭಂಡ ಮಕ್ಕಳು ಬರಲೇ ಇಲ್ಲ ; “ನಾವ್ ಬಂದ್ರೇನ ಆಕಿ ಬದಕ್ತಾಳು ? ವಿನಾಯಕ ಅಂತ್ಯಸಂಸ್ಕಾರ ಮಾಡಿ ಮುಗಸ್ಲಿ. ನಾವ್ ತಿಥಿ ಮಾಡಾಕ ಬರ್ತೇವು” ಎಂದು ಅಲ್ಲಿಂದಲೇ ಸುದ್ದಿ ಕಳುಹಿಸಿದರು !
ಫೋನಿನಲ್ಲಿ ಅವರ ಮಾತುಗಳನ್ನು ಕೇಳಿದ ಪಂಚರು ಅವಕ್ಕಾದರು !
“ಹಿಂಥಾ ನಾಲಾಯಕ್ ಮಕ್ಳು ಯಾರ್ ಹೊಟ್ಟ್ಯಾಗೂ ಹುಟ್ಟಬಾರ್ದು !”
*****
ಪೋಲೀಸರಿಗೆ ಸುದ್ದಿ ಹೋಯಿತು.
ಪೋಲೀಸರು ಬರುತ್ತಲೇ ಸಮಾಜಸೇವಕಿಯಾಗಿದ್ದ ಶಾಂತಾಬಾಯಿಯ ಸೊಸೆ ಬಾಯಿ ಬಾಯಿ ಬಡೆದುಕೊಂಡು ಅಳುವ ನಾಟಕವನ್ನು ಚೆನ್ನಾಗಿಯೇ ನಿಭಾಯಿಸಿದಳು !
ವಿನಾಯಕನೂ ದುಃಖದಲ್ಲಿದ್ದವರಂತೆ ಸೋಗು ಹಾಕಿದ್ದ !
ಪೋಲೀಸರ ವಿಚಾರಣೆ ನಡೆಸಿದ್ದರು.
“ಏನ್ರಿ ವಿನಾಯಕರಾವ್, ಈ ಹೆಣಾ ಯಾರ್ದು ?”
“ನಮ್ಮ ತಾಯಿದರಿ ಸರ್”
“ನಿಮ್ಮ ತಾಯಿಯದ ಅಂತ ಹೆಂಗ ಹೇಳ್ತೇರಿ ?”
“ಹ್ವಾದ ವಾರ ನಾವ್ ಮೂರೂ ಮಂದಿ ಅಣತಮರು ಮಾತಾಡಿಕೊಂಡಾಂಗ ಪಾಲಾ ಮಾಡ್ಕೊಂಡ ಮ್ಯಾಲ ನಮ್ಮ ತಾಯ್ಗಿ ಟೇರೆಸ್ ಮ್ಯಾಲಿನ ರೂಮಿನ್ಯಾಗ ಇರೂ ವ್ಯವಸ್ಥಾ ಮಾಡಿದ್ದ್ಯುರಿ.”
“ನಿಮ್ಮ ತಾಯೀನ ನೋಡಾಕ ಈ ಎಂಟ ದಿವ್ಸದಾಗ ಯಾವಾಗರೇ ಮ್ಯಾಲ ಹೋಗಿದ್ರಿ ?”
“ಇಲ್ರಿ ಸರ್”
“ಯಾಕ್ ?”
“ಈ ತಿಂಗ್ಳ ಹಿರಿಯಣ್ಣ, ಆಕೀನ ನೋಡ್ಕೊಳ್ಳೂ ಮಾತಾಗಿತ್ರಿ”
“ಅವ್ರಾದ್ರೂ ನೋಡ್ಯಾರೇನು ?”
“ಇಲ್ರಿ ಸರ್, ಅವ್ರು ಮುಂಬಾಯಾಗ ಇರ್ತಾರು”
“ಅವ್ರ ಅಲ್ಲಿಂದ ಹೆಂಗ್ ನೋಡ್ತಾರ್ರಿ ವಿನಾಯಕರಾವ್ ?”
“ಪಗಾರದ ಮ್ಯಾಲ ಒಂದಾಳ ನೇಮಿಸು ವಿಚಾರಿತ್ರಿ ಸರ್”
“ಆ ಆಳ ಎಲ್ಲಿ ಅದಾನು ?”
“ಗೊತ್ತಿಲ್ರಿ ಸರ್”
“ಯಾಕ ?”
“ಅದನ್ನ ಹಿರಿ ಅಣ್ಣಾನ ನಿರ್ಧರಿಸ್ಬೇಕಿತ್ರಿ”
“ಹೋಗ್ಲಿ, ಆ ಆಳಮನಸ್ಯಾ ಬಂದಾನಿಲ್ಲೋ ? ಅಂವಾ ಚೊಲೋತಂಗ ನೋಡ್ಕೋತಾನೋ ಇಲ್ಲೋ ನೋಡ್ಬೇಕಾಗಿತ್ತಲ್ಲ ನೀವ್ ?”
“ನೋಡ್ಬೇಕಿತ್ರಿ ಸರ್ ... ...”
“ನೋಡ್ಬೇಕಿತ್ತು ಅಂತೀರಿ ! ಮತ್ತ್ಯಾಕ ನೋಡದಿಲ್ಲ ?”
“ಹೇಳ್ಯನಲ್ರಿ. ಈ ತಿಂಗ್ಳ ಜವಾಬದಾರಿ ಹಿರಿ ಅಣ್ಣಂದ ಇತ್ತು... ...”
“ಶಬ್ಬಾಶ್ ... ! ಗುಡ್... ! ವೇರಿ ಗುಡ್ ! ಹಿಂಥಾ ಮಕ್ಳು ಪ್ರತಿಯೊಬ್ಬ ತಂದೆ-ತಾಯಿ ಹೊಟ್ಟ್ಯಾಗ ಹುಟ್ಟಿ ಬಂದ್ರ ಕಣ್ಣಾಗೀನು ಕಣ್ಣೀರ ಕರಗಿ ಹೋಗ್ತಾವು ! ಲೇ ಹುಚ್ಚ, ಜನಕಲ್ಲದಿದ್ರೂ ಮನಕ್ಕಾದ್ರೂ ನಾಚಬೇಕಲೇ ! ಖರೇ ಅಂದ್ರ ನಿಮ್ಮಂಥ ಬದ್ಮಾಸ್ ಮಕ್ಕಳನ್ನ ಹುಟ್ಟಿಸಿದ ಆ ತಾಯಿ ಭಾಳ ದೊಡ್ಡ ತಪ್ಪ ಮಾಡಿದಂಗಾತು ! ... ...”
ಸಮಾಜಸೇವಕಿ ಸೊಸೆಯತ್ತ ತಿರುಗಿದ ಪೋಲೀಸ್ ಇನ್ಸಪೆಕ್ಟರ್, “ಏನೇ ಮಿಡ್ಕಲಾಡಿ, ಮಹಿಳಾ ವಿವೋಚನಾ ಹೋರಾಟ ಮಾಡೂ ಸಮಾಜಸೇವಕಿ ಹೌದಿಲ್ಲೋ ನೀ ? ಇದ ಏನ್ ನಿನ್ನ ಸಮಾಜ ಸೇವಾ ? ಇದ ಏನ್ ನಿನ್ನ ಮಹಿಳಾ ವಿವೋಚನಾ ? ಹೇಳೋದ ಆಚಾರ ; ತಿನ್ನೋದು ಬದ್ನಿಕಾಯಿ ! ಹಂಗ ನೋಡ್ಯರ ನಿಮ್ಮ ಮೈಮ್ಯಾಲ ಡಾಂಬರ್ ಸುರುವಿ ಬಾರಕೋಲಲೇ ಬಾರ್ಸಬೇಕ ! ಆದರ ಕಾನೂನದಾಗ ಹಂಥಾ ಅವಕಾಶಾ ಇಲ್ಲಂತ ಬಿಟ್ಟೇನಿ. ಥೂ ನಿಮ್ಮ ಜನ್ಮಕ !”
ಇನ್ಸಪೆಕ್ಟರ್ ಎದ್ದು, ಆ ತಾಯಿಯ ಎಲುಬಿನ ಹಂದರಕ್ಕೆ ಶಿರಬಾಗಿ ನಮಸ್ಕರಿಸಿದ ; ಆತನಿಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ ! ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದವನೇ ಅಲ್ಲಿಂದ ಹೊರಟು ಹೋದ !
ಪಂಚರ ಹೇಳಿಕೆಯಿಂದ ಶಾಂತಾಬಾಯಿ ಅನ್ನ-ನೀರಿಲ್ಲದೇ ಚಡಪಡಿಸಿ ತೀರಿಕೊಂಡಿದ್ದಾಳೆ ಎಂಬುದಾಗಿ ಪಂಚನಾಮೆ ಆಯಿತು !
*****
ಆ ಆದರ್ಶ ತಾಯಿಗೆ ಸತ್ತಮೇಲೆಯೂ ಅಪಮಾನವಾಗಬಾರದೆಂದು ಪಂಚರೇ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು !
ಶಾಂತಾಬಾಯಿಯ ಮಕ್ಕಳು ಮತ್ತು ಸೊಸೆಯಂದಿರನ್ನು ಜನ ನಿಂದಿಸತೊಡಗಿದರು ! ಅದರಲ್ಲಂತೂ ಹತ್ತಿರವೇ ಇದ್ದರೂ ಹೆತ್ತತಾಯಿಯನ್ನು ಮರೆತ ಕೃತಘ್ನ ಮಗ ವಿನಾಯಕ ಮತ್ತು ಸಮಾಜಸೇವಕಿಯ ಸೋಗಿನ ಸೊಸೆಯನ್ನು ನಿಂದಿಸುತ್ತ ಮಹಾತಾಯಿಯ ಅಂತ್ಯಸಂಸ್ಕಾರಕ್ಕೆ ಎಲ್ಲ ತಯಾರಿ ಮಾಡಿಕೊಂಡರು. ಒಂದು ಚೀಲದಲ್ಲಿ ಆ ತಾಯಿಯ ಹೆಣದ ಎಲುಬುಗಳನ್ನೆಲ್ಲ ತುಂಬಿ, ಮಸಣಕ್ಕೆ ಒಯ್ದು ಬೆಂಕಿ ಇಟ್ಟರು !
‘ಕಣ್ಣೀರು ಕಮರಿ ಹೋದವು !’
ಮಸಣಕ್ಕೆ ಬಂದವರೆಲ್ಲ ಕಣ್ಣೀರುಗರೆಯುತ್ತ ಮನೆಗೆ ಮರಳಿದರು.
ನಿಜವಾಗಿಯೂ ಜೀವನ ಎನ್ನುವುದು ಎರಡು ಕ್ಷಣದ ಆಟವೇ ಅಲ್ಲವೆ ? ಸಂಬಂಧ-ಗಿಂಬಂಧ, ಪ್ರೇಮ ಅನ್ನುವುದೆಲ್ಲ ಬರಿ ಬುರುಡೆ ! ಕೇವಲ ತೋರಿಕೆಯಷ್ಟೆ ! ಅದೆಲ್ಲವನ್ನೂ ಸೃಷ್ಟಿಸಿಕೊಂಡವರೂ ನಾವೇ ಅಲ್ಲವೆ ?
*****
“ಅವ್ವ, ನೀನು ಪ್ರತಿಕ್ಷಣ ನೆನಪಾಗುತ್ತಿಯಾ. ನೀನಿಲ್ಲದೇ ನಾವೆಲ್ಲ ತಬ್ಬಲಿಗಳಾಗಿದ್ದೇವೆ ! ನಿನ್ನ ಆದರ್ಶದ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿನ್ನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ನಿನಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೇವೆ”
ದಿನಪತ್ರಿಕೆಗಳಲ್ಲಿ ಶಾಂತಾಬಾಯಿಯ ದೊಡ್ಡದಾದ ಫೋಟೋ ಹಾಕಿಸಿ ಆ ನಿರ್ದಯಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದರು !
ಪತ್ರಿಕೆಗಳಲ್ಲಿ ಅದನ್ನು ಕಂಡವರೆಲ್ಲ ‘ಕರುಳ ಕಣ್ಣೀರು ಕಮರಿ ಹೋದವು’ ಎಂದು ನೊಂದುಕೊಂಡರು !
*****

Wednesday, July 25, 2012

ವಡ್ಡರ ವೇದನೆ ; ನನ್ನ ಮಾತು !


'ಉಚಲ್ಯಾ' ಆತ್ಮಕತೆಯ ಮೂಲಕ ನಮ್ಮೆಲ್ಲರಿಗೆ ಪರಿಚಿತವಾಗಿರುವ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡ ಅವರ 'ವಡಾರ ವೇದನಾ' ಎನ್ನುವ ಕಾದಂಬರಿಯನ್ನು 'ವಡ್ಡರ ವೇದನೆ' ಎಂಬುದಾಗಿ ನಾನು ಕನ್ನಡೀಕರಿಸಿದ್ದೇನೆ. (ಕಣ್ವ ಪ್ರಕಾಶನ, ಬೆಂಗಳೂರು : 2011) ಆ ಕಾದಂಬರಿಯಲ್ಲಿ ನಾನು ಹೇಳಿದ ಮಾತುಗಳು ಇಲ್ಲಿವೆ ...

ಸೃಜನ ಮತ್ತು ಸೃಜನೇತರ ಎಂದು ವಿಭಾಗಿಸಿ ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಅದನ್ನೇ ಮುಂದಿಟ್ಟುಕೊಂಡು ಅದು ಹೆಚ್ಚು ; ಇದು ಕಡಿಮೆ ಎನ್ನುವಂತಹ ವಾದಗಳಿಗೆ ಜೋತು ಬಿದ್ದರೆ ಅದು ಕೇವಲ ಒಣ ಹರಟೆಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅನುವಾದವನ್ನು ಸೃಜನೇತರ ಸಾಹಿತ್ಯವೆಂದು ಅಲ್ಲಗಳೆಯುವ, ಅನನುಮಾನಿಸುವ, ಅವಹೇಳನ ಮಾಡುವ, ಅಣಕಿಸಿ ಕಿಚಿಪಿಚಿ ಎನ್ನುವವರಿಗೆ ಈ ಮಾತನ್ನು ಅನ್ವಯಿಸಿ ಹೇಳಲಾಗಿದೆ. ಅನುವಾದವೂ ಒಂದು ಕಲೆಯಾಗಿರುವಾಗ ಅದನ್ನು ಸೃಜನೇತರ ಎನ್ನುವುದು ಏಕೆ ಎಂಬುದೇ ತಿಳಿಯುತ್ತಿಲ್ಲ. ಅನುವಾದವೂ ಕೂಡ ಒಂದು ಸೃಜನಶೀಲವಾದ ಸಾಹಿತ್ಯವೇ ಆಗಿದೆ. ಸ್ವತಃ ಬರೆಯುವುದು ಶ್ರೇಷ್ಟವೆಂದೂ ಬೇರೆ ಭಾಷೆಯಿಂದ ಅನುವಾದ ಮಾಡುವುದು ಕನಿಷ್ಟವೆಂದು ಪರಿಭಾವಿಸುವಿಕೆ ಕೇವಲ ಮೂರ್ಖತನವಾಗುತ್ತದೆ ಅಷ್ಟೆ.
ಅನುವಾದವನ್ನು ಯಾರು ಬೇಕಾದರೂ ಮಾಡಬಹುದು ಎಂಬ ಕಲ್ಪನೆಯೇ ತಪ್ಪು. ಒಬ್ಬ ಅನುವಾದಕ ತನ್ನ ಸಂಸ್ಕೃತಿಯ ಜೊತೆಗೆ ಅನುವಾದಿಸಬೇಕಾದ ಕೃತಿಯಲ್ಲಿರುವ ಸಂಸ್ಕೃತಿಯನ್ನೂ ಅರಿಯಬೇಕಾಗುತ್ತದೆ. ಕೇವಲ ಅರಿಯುವುದು ಮಾತ್ರವಲ್ಲ ; ಅದರಲ್ಲಿ ಪರಕಾಯ ಪ್ರವೇಶ ಪಡೆಯಬೇಕಾಗುತ್ತದೆ. ಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜಾಯಮಾನವನ್ನು ಅರಿಯದೇ ಮಾಡುವ ಅನುವಾದ, ಅನುವಾದ ಎನಿಸಿಕೊಳ್ಳಲಾರದು. ಒಳ್ಳೆಯ ಅನುವಾದ ಈ ಗ್ರಹಿಕೆಯನ್ನು ಅನುಸರಿಸುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಾಹಿತ್ಯ ಅನುವಾದವಾಗುವಾಗ ಮೂಲ ಲೇಖಕನ ಅನುಭವಗಳ ಮೂಲವನ್ನೂ ತಿಳಿದುಕೊಳ್ಳುವ ಪ್ರಯತ್ನವನ್ನು ಅನುವಾದಕ ಮಾಡಬೇಕಾಗಿರುತ್ತದೆ.
ಮೂಲಕೃತಿಯ ಸಂಸ್ಕೃತಿಯ ಅರಿವು, ಪ್ರಾದೇಶಿಕ, ಸಾಮಾಜಿಕ, ಮತ್ತು ಜನಾಂಗೀಯ ಭಾಷೆಗಳ ಅಧ್ಯಯನ ಮೊದಲಾದ ಅಂಶಗಳನ್ನು ಒಬ್ಬ ಅನುವಾದಕ ಹೊಂದಿದ್ದು, ಸ್ವಭಾಷೆಯಲ್ಲಿ ಅದನ್ನು ತನ್ನದಾಗಿಸಿಕೊಳ್ಳುವ ಕಾರ್ಯತತ್ಪರತೆ ಮೊದಲಾದ ಅಂಶಗಳು ಒಬ್ಬ ಅನುವಾದಕನಲ್ಲಿ ಇದ್ದರೆ ಉತ್ಕೃಷ್ಟವಾದ ಅನುವಾದವೊಂದು ಹೊರಬರಲು ಸಾಧ್ಯವಾಗುತ್ತದೆ. ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿಯೇ ನಾನು ಮರಾಠಿಯನ್ನು ಕನ್ನಡೀಕರಿಸುತ್ತೇನೆ.
ಮರಾಠಿ ದಲಿತ ಸಾಹಿತ್ಯದಲ್ಲಿ ಪ್ರಮುಖವಾಗಿರುವ ಲಕ್ಷ್ಮಣ ಗಾಯಕವಾಡ ಅವರನ್ನು ನಾನು ಭೇಟಿಯಾದಾಗ ಅವರು ವೊಟ್ಟವೊದಲು ಸೂಚಿಸಿದ್ದು ಅವರ ಆತ್ಮಚರಿತ್ರೆ ‘ಉಚಲ್ಯಾ’ವನ್ನು ಮತ್ತೊಮ್ಮೆ ಅನುವಾದಿಸಬೇಕೆಂದು. ಆದರೆ ಈಗಾಗಲೇ ಅದು ಕನ್ನಡಕ್ಕೆ ಬಂದಿರುವುದರಿಂದ ನಾನು ನಿರಾಕರಿಸಿದೆ.  ಆದರೂ ಅವರು ಒತ್ತಾಯ ಮುಂದುವರಿದೇ ಇತ್ತು. ಈಗಲೂ ಫೋನಿಸಿದಾಗ ಅವರು ಅದನ್ನೇ ಹೇಳುತ್ತಾರೆ. ಆಗ ನಾನೇ ಒಂದು ಪ್ರಸ್ತಾಪ ಮಾಡಿ ‘ಉಚಲ್ಯಾ’ ಬಂದ ನಂತರ ಆದ ಅನುಭವಗಳನ್ನೇ ಬರೆಯಿರಿ ; ಬೇಕಾದರೆ ನಾನು ಅದನ್ನು ‘ಆಪ್ಟರ್ ಉಚಲ್ಯಾ’ ಎಂದು ಹೆಸರಿಸಿ ಅನುವಾದ ಮಾಡುತ್ತೇನೆ ಎಂದೆ. ಆಗ ಅವರು ತಮ್ಮ ಮತ್ತೊಂದು ಕೃತಿ, ‘ವಡಾರ ವೇದನಾ’ ಅನುವಾದ ಮಾಡುವಂತೆ ಹೇಳಿದರು. ನಾನು ಖುಷಿಯಿಂದಲೇ ಒಪ್ಪಿಕೊಂಡೆ.
ವಡಾರ ವೇದನಾ ಕಾದಂಬರಿಯನ್ನು ನಾನು ಓದುತ್ತ ಹೋದಂತೆಲ್ಲ ಮೊದ ಮೊದಲು ನನಗೆ ರೋಮಾಂಚನವೇ ಆಯಿತು. ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟಿನ ವಡ್ಡರ ಸಮಾಜದ ಬಗ್ಗೆ ಇರುವ ಕಾದಂಬರಿಯಲ್ಲಿ ಆ ಸಮಾಜದ ಸಂಸ್ಕೃತಿಯ ಚಿತ್ರಣವೂ ಸೇರಿದೆ. ಅನುವಾದಕ್ಕಿಳಿದಾಗ ಒಂದಿಷ್ಟು ಹಿಂಜರಿಕೆ ಕೂಡ ಆಯಿತು. ಯಾಕೆಂದರೆ ಕಾದಂಬರಿಯಲ್ಲಿ ಹೆಚ್ಚಾಗಿ ಬಳಕೆಯಾಗಿದ್ದು ಗ್ರಾಮ್ಯ ಮರಾಠಿ ಭಾಷೆ ಅನ್ನುವುದಕ್ಕಿಂತ ತಳಮಟ್ಟದ ಸಮಾಜವೊಂದರ ಆಡುನುಡಿ ಎನ್ನುವುದು ಸಮಂಜಸವಾದೀತು. ಗೊಂದಲ ಹುಟ್ಟಿಸುವ ಕೆಲ ಕ್ಲಿಷ್ಟ ಪದಗಳು ಯಾವ ಡಿಕ್ಷನರಿಯಲ್ಲಿ ಹುಡುಕಿದರೂ ಸಿಗಲಾರವು. ಜೊತೆಗೆ ಅಲ್ಲಲ್ಲಿ ಮರಾಠಿ ಮಿಶ್ರಿತ ವಡ್ಡರ ಸಮಾಜದ ತೆಲುಗು ಭಾಷೆ ಬೇರೆ !
ನಾನು ಹಠ ಬಿಡಲಿಲ್ಲ ; ಸೋಲು ಒಪ್ಪಿಕೊಳ್ಳುವ ಜಾಯಮಾನವೇ ನನ್ನದಲ್ಲ.  ಕನ್ನಡ-ಮರಾಠಿ ಗಡಿಭಾಗದವನಾದ ನನಗೆ ಮರಾಠಿ ಗ್ರಾಮ್ಯದ ಅನುಭವ ಇತ್ತು. ಜನಾಂಗೀಯ ಭಾಷೆಯ ಒಡನಾಟವೂ ಇತ್ತು. ಜೊತೆಗೆ ತೆಲುಗು ಭಾಷೆಯನ್ನೂ ಅಲ್ಪ-ಸ್ವಲ್ಪ ಕಲಿತಿದ್ದೆ. ಯಾರಾದರೂ ಸಿಕ್ಕರೆ ‘ಏಮ ಚೆಪ್ಪತಾವು ಚೆಪ್ಪು’ ಎಂದೇ ಮಾತನ್ನು ಆರಂಭಿಸುವ ಪರಿಪಾಠವೂ ಬೆಳೆದು ಬಂದಿತ್ತು. ಹೀಗೆ ಎಲ್ಲವೂ ಸಕಾರಾತ್ಮಕ ಅಂಶಗಳಿದ್ದುದ್ದರಿಂದಲೇ ನಾನು ತುಂಬ ಎದೆಗಾರಿಕೆಯಿಂದಲೇ ಅನುವಾದಕ್ಕೆ ಇಳಿದೆ. ಎಲ್ಲ ಸರಾಗವಾಯಿತು ; ಸಾಂಗವಾಗಿ ನೆರವೇರಿತು. ಅನುವಾದಿಸಿದ ಮೇಲೆ ಮತ್ತೊಮ್ಮೆ ಓದಿ ತಿದ್ದುಪಾಟು ಮಾಡಿದೆ. ಮಹಾರಾಷ್ಟ್ರ ನೆಲದಲ್ಲಿ ನಡೆದ ಕನ್ನಡ ಕಥೆಯೇನೋ ಎನ್ನುವಷ್ಟರ ಮಟ್ಟಿಗೆ ಅದನ್ನು ಕಟ್ಟಿದ್ದೇನೆ ಎಂಬ ಸಾರ್ಥಕ ಭಾವವೂ ಮನದಲ್ಲಿ ಸುಳಿದಾಡಿತು.


(ಈ ಅನುವಾದಿತ ಕಾದಂಬರಿಗೆ ಅಮೂಲ್ಯವಾದ ಮುನ್ನುಡಿಯನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ಬರೆದಿದ್ದಾರೆ)

Sunday, July 22, 2012

ಮರಾಠಿ ಹಿರಿಯ ಬರಹಗಾರ ಉತ್ತಮ ಕಾಂಬಳೆ

ಡಾ. ಸಿದ್ರಾಮ ಕಾರಣಿಕ

(ಮರಾಠಿಯ ಶ್ರೇಷ್ಟ ಹಿರಿಯ ಸಾಹಿತಿ, ವಿಚಾರವಾದಿ, ವಿಮರ್ಶಕ ಉತ್ತಮ ಕಾಂಬಳೆಯವರ 'ದೇವದಾಸಿ ಮತ್ತು ಬೆತ್ತಲೆ ಸೇವೆ' ಕೃತಿಯನ್ನು ಮರಾಠಿಯಿಂದ ಅನುವಾದ ಮಾಡಿದಾಗ ನಾನು ಬರೆದ ಮೊದಲ ಮಾತುಗಳು)


“ಹಲೋ ಸರ್... ನಾನು, ಧಾರವಾಡದಿಂದ ಡಾ. ಸಿದ್ರಾಮ ಕಾರಣಿಕ’”
“ಹೇಳ್ರಿ ಸಿದ್ರಾಮ, ಆರಾಮಾಗಿದ್ದೀರಿ ?”
“ಆರಾಮಾಗಿದ್ದೇನ್ರಿ ಸರ್. ನಿಮಗ ಅಭಿನಂದನೆಗಳು ಸರ್”
“ಥ್ಯಾಂಕ್ಸ್... ಭಾಳ ಸಂತೋಷ ಆತು”
“ಇದು ನಮಗೆ ಸಂದ ಜಯ ಸರ್”
“ಹೌದ... ಹೌದ್ರಿ... ಥ್ಯಾಂಕ್ಯೂ ಥ್ಯಾಂಕ್ಯೂ ... ಏಳನೇ ತಾರೀಕಕ ನಾ ಬೆಳಗಾಂವಕ ಬರಾಕತ್ತೇನಿ. ಸಾಧ್ಯ ಆದ್ರ ಬರ್ರಿ”
“ಬರತೇನ್ರಿ ಸರ್. ತಮ್ಮ ಪುಸ್ತಕದ ಅನುವಾದ ಮುಗಿದಿದೆ ಸರ್. ಡಿಸೆಂಬರ್ದೊಳಗ ಬಿಡುಗಡೆ ಆಗ್ತೇತಿ.”
“ಹೌದಾ ! ಭಾಳ ಖುಷಿ ಆತು ಥ್ಯಾಂಕ್ಯೂ ...”
“ಸರ್, ಮತ್ತೊಮ್ಮಿ ನಿಮಗ ಅಭಿನಂದನೆಗಳು”
“ಥ್ಯಾಂಕ್ಯೂ ಥ್ಯಾಂಕ್ಯೂ ...”
*****
ಇದು ಉತ್ತಮ ಕಾಂಬಳೆಯವರು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರೊಂದಿಗೆ ನಾನು ಮಾತನಾಡಿದ ಪ್ರಸಂಗ. ಹೌದು ಉತ್ತಮ ಕಾಂಬಳೆಯವರು ತುಂಬ ಎತ್ತರದ ವ್ಯಕ್ತಿತ್ವ ಉಳ್ಳವರು. ತಕ್ಷಣವೇ ಆತ್ಮೀಯರಾಗಿ ಬಿಡುತ್ತಾರೆ. ಮರಾಠಿ ಸಾಹಿತ್ಯದಲ್ಲಿ ತುಂಬ ಹೆಸರು ಮಾಡಿರುವ ಅವರ ನಯ-ವಿನಯ, ಆತ್ಮೀಯತೆ, ವಿಚಾರಶೀಲತೆ, ತೀವ್ರವಾದ ವೈಚಾರಿಕತೆ ದಂಗು ಬಡಿಸುವಂಥದ್ದು.
ಸುಮಾರು ತಿಂಗಳಗಳ ಹಿಂದೆ ಉತ್ತಮ ಕಾಂಬಳೆಯವರ ‘ದೇವದಾಸಿ ಆಣೀ ನಗ್ನಪೂಜಾ’ ಎಂಬ ಸಂಶೋಧನಾತ್ಮಕ ಕೃತಿಯನ್ನು ನಾನು ಅನುವಾದ ಮಾಡತೊಡಗಿದ್ದೆ. ಆಗಲೂ ಅವರೊಂದಿಗೆ ಮಾತನಾಡಿದ್ದೆ. ನನ್ನ ಆಗ್ರಹದಿಂದ ತಮ್ಮ ಫೋಟೋವನ್ನೂ, ಬಯೋಡಾಟಾವನ್ನೂ ನನಗೆ ಕಳುಹಿಸಿ ಕೊಟ್ಟರಲ್ಲದೇ ಮುಂಬಾಯಿಯ ಪ್ರಕಾಶನದ ವತಿಯಿಂದ ಮತ್ತೊಂದು ಕೃತಿಯ ಪ್ರತಿಯನ್ನೂ ಚಿತ್ರಗಳನ್ನು ಒಳಗೊಂಡ ಸಿ.ಡಿ.ಯನ್ನೂ ಕಳುಹಿಸಿಕೊಟ್ಟರು. ಅವರ ಆತ್ಮೀಯತೆಗೆ, ಸಹಕಾರಕ್ಕೆ ಬರೆಯಬೇಕೆಂದರೂ ಪದಗಳು ದಕ್ಕುವುದಿಲ್ಲ !
ಮೂಲತಃ ಕರ್ನಾಟಕದವರೇ ಆದ ಉತ್ತಮ ಕಾಂಬಳೆಯವರು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ ಅವರ ಹುಟ್ಟೂರು. ತೀರ ಬಡತನದ ಕುಟುಂಬ ಶಾಲೆ ಕಲಿಯಬೇಕೆಂಬ ಅವರಿಗೆ ಆರ್ಥಿಕ ಅಡಚಣೆ ತುಂಬ ಇತ್ತು. ಕೆಲವು ದಿನ ಹಮಾಲಿ ಮಾಡಿದರು ; ಕೆಲವು ದಿನ ಗೋಡೆ ಕಟ್ಟುವ ಗೌಂಡಿಗಳ ಕೈ ಕೆಳಗೆ ಆಳಾಗಿ ದುಡಿದರು ; ದಿನಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡದಾಗಿ ಒದರುತ್ತ ಮಾರುವ ಹುಡುಗ ಆಗಿದ್ದರು ! ಸೇಲ್ಸ್ಮನ್ ಆಗಿದ್ದವರು ; ಕೆಲವೊಂದಿಷ್ಟು ದಿನ ಯಾವುದೋ ಡಾಕ್ಟರರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡಿದ್ದೂ ಇದೆ ! ಇಷ್ಟೆಲ್ಲ ಮಾಡುತ್ತಲೇ ಶಿಕ್ಷಣ ಪೂರೈಸಿದ ಉತ್ತಮ ಕಾಂಬಳೆಯವರ ಬದುಕು ಹೋರಾಟದ ಹಾದಿ. ಅವರು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಾಗ ಅನುಭವಿಸಿದ ಆನಂದ ಹೇಳತೀರದಷ್ಟು ! ಯಾಕೆಂದರೆ ಅವರ ಮನೆತನದಲ್ಲಿಯೇ ಶಾಲೆ ಕಲಿತ ವೊದಲ ವ್ಯಕ್ತಿ ಅವರು !
ಬದುಕಿನ ಹಾದಿಯನ್ನು ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ದಿನಪತ್ರಿಕೆಯ ಸಾಮಾನ್ಯ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡ ಉತ್ತಮ ಕಾಂಬಳೆಯವರು ಇಂದು ಮರಾಠಿಯ ಪ್ರಮುಖ ದಿನಪತ್ರಿಕೆ `ಸಕಾಳ’ ಸಮೂಹದ ಪ್ರಧಾನ ಸಂಪಾದಕರಾಗಿದ್ದಾರೆ ! ಹತ್ತು ಪೈಸೆ ಕಮಿಶನ್ ಸಿಗುತ್ತದೆ ಎಂದು ಪತ್ರಿಕೆಗಳ ಕಟ್ಟನ್ನು ಹಿಡಿದು ಒದರುತ್ತ ಪತ್ರಿಕೆ ಮಾರುತ್ತಿದ್ದ ಹುಡುಗನೊಬ್ಬ ಇಂದು ಪ್ರಮುಖ ಪತ್ರಿಕೆಯೊಂದ ಮುಖ್ಯಸ್ಥನಾಗುತ್ತಾನೆ ಎಂದರೆ ಅದಕ್ಕೆ ಆತನ ಪ್ರಯತ್ನ, ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯನ್ನು ಸಾಧಿಸುವ ಛಲವೇ ಕಾರಣ. ಇದು ಉತ್ತಮ ಕಾಂಬಳೆಯವರ ಬದುಕಿನ ಪರಿ. ಅಷ್ಟೇ ಅಲ್ಲ ಸಾಹಿತ್ಯ ಕ್ಷೇತ್ರದಲ್ಲೂ ಅವರ ಕೃಷಿ ಬಹುದೊಡ್ಡದು. ಇದೀಗ  81ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರೆ ಅವರ ಕಾರ್ಯವ್ಯಾಪ್ತಿ ಕಣ್ಮುಂದೆ ಸುಳಿಯಬಲ್ಲದು.
ಇಲ್ಲಿಯವರೆಗೆ ಎರಡು ಕಾದಂಬರಿಗಳು, ಐದು ಕಥಾಸಂಕಲನಗಳು, ಐದು ಸಂಶೋಧನಾತ್ಮಕ ಕೃತಿಗಳು, ಎರಡು ಕಾವ್ಯ ಸಂಕಲನಗಳು, ಏಳು ಸಂಪಾದಿತ ಕೃತಿಗಳು, ತಮ್ಮ ಆತ್ಮಕತೆಯನ್ನೇ ಹೊಂದಿರುವ ಮೂರು ಕೃತಿಗಳು ಹೀಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಉತ್ತಮ ಕಾಂಬಳೆಯವರು ರಚಿಸಿದ್ದಾರೆ ಎಂದರೆ ಬರವಣಿಗೆಯ ಅಗಾಧತೆ ಅರಿವಿಗೆ ನಿಲುಕುತ್ತದೆ.
ಪತ್ರಕರ್ತನಾಗಿ 23 ಮತ್ತು ಸಾಹಿತಿಯಾಗಿ 30 ಒಟ್ಟು ನಲವತ್ಮೂರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸಧ್ಯ ಮಹಾರಾಷ್ಟ್ರದ ನಾಶಿಕದಲ್ಲಿ `ಚಾರ್ವಾಕಾಶಯ’ ಹೆಸರಿನ ಮನೆಯಲ್ಲಿ ವಾಸವಾಗಿರುವ ಉತ್ತಮ ಕಾಂಬಳೆಯವರು ಸವ್ಮೋಹಕ ವ್ಯಕ್ತಿತ್ವದವರಾಗಿದ್ದಾರೆ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.