Showing posts with label ಕವಿತೆ. Show all posts
Showing posts with label ಕವಿತೆ. Show all posts

Friday, December 13, 2013

ಸುಂದರವಾದ ಕನ್ಯೆ ಬೇಕಾಗಿದ್ದಾಳೆ... !

ಡಾ. ಸಿದ್ರಾಮ ಕಾರಣಿಕ

ಸುಂದರವಾದ ಕನ್ಯೆ ಬೇಕಾಗಿದ್ದಾಳೆ
ದಯವಿಟ್ಟು ಕ್ಷಮಿಸಿ
ಸುಂದರತೆಯ ಬಗೆಗೆ ನನಗೆ 
ವ್ಯಾಖ್ಯಾನ ಬರೋದಿಲ್ಲ !
ಬಣ್ಣದ ಬಗೆಗೆ ತಕರಾರು ಇಲ್ಲ
ಉದ್ದ-ಗಿಡ್ಡ, ದಪ್ಪ-ತೆಳು 
ಯಾವ ಸಮಸ್ಯೆಯೂ ಇಲ್ಲ
ಮನಸ್ಸನ್ನು ಅರ್ಥ ಮಾಡಿಕೊಳ್ಳೋಳು
'ಅರ್ಥ'ದ ಗೊಡವೆಗೆ ಬೀಳದವಳು
ಹೇಗಿದ್ದರೂ ನಡೇದೀತು ;
ದಯವಿಟ್ಟು ಗಮನಿಸಿ
ಕನ್ಯೆ ಬೇಕಾಗಿದ್ದಾಳೆ
ಮುದ್ಧಣನಿಗೆ ಮನೋರಮೆಯಂತವಳು ಬೇಕಾಗಿದ್ದಾಳೆ !
ರಾಗಮನಂತೆ ನಾನು ತೊಡ ಸಂಧಿ, 
ಮೊಲೆ, ಮೂಗು ನೋಡುಗನಲ್ಲ !
ಅನಂತಮೂರ್ತಿಯಂತೆ ಸಿಕ್ಕಾಗ ಸೀರುಂಡೆ ಎನ್ನೋನಲ್ಲ !
ಬೇಂದ್ರೆಯ ಗೆಣೆಯ ಆಗಲಾಗದು ;
ಕುವೆಂಪು ಬರೆದ ನಾಯಿ ಕೂಡ ಅಲ್ಲ !
ಕಣವಿಯ ರೇಲು, ನಮಾಜು 
ಸಮಜೋತಿಯಲ್ಲ ನನಗೆ !
ನಗಬೇಕು ; ನಗಿಸುತ್ತ ಇರಬೇಕು
ಅಂದ್ರೆ ಧಾರವಾಡ ಬಸ್ಟ್ಯಾಂಡಿನ ಬದಿಯವಳೂ ಅಲ್ಲ
ಬೇಕಾಗಿದ್ದಾಳೆ ನನ್ನೊಂದಿಗೆ ಸಂಗಾತ ಬಯಸೋಳು ;
ಮತ್ತಿನಲ್ಲೂ ಗತ್ತುಗಾರಿಕೆ ತೋರುವಂಥವಳು !
ಯಾರಾದರೂ ಇದ್ದೀರಾ ? ಯಾರಿಗಾದರೂ ಗೊತ್ತಾ ?
ಹುಡುಕಿ ಕೊಡಿ ; ನನ್ನ ಗೆಳೆಯನಿಗೆ ಇನ್ನೂ ಮದುವೆಯಾಗಿಲ್ಲ !

Thursday, November 14, 2013

ನಾನು-ನೀನು ಮತ್ತು ಕ್ರಾಂತಿ...


ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬರೆದ ಪಾಡಿನ ಹಾಡು ಹೀಗಿದೆ ;

ಡಾ. ಸಿದ್ರಾಮ ಕಾರಣಿಕ
--------------------------------
ನನ್ನನ್ನೀಗ ಕಾಡಬೇಡ ಗೆಳತಿ
ನಾನೀಗ ಕ್ರಾಂತಿಯ ಬೆನ್ನ ಹತ್ತಿರುವೆ
ಆಕೆಯ ತೋಳ್ತೆಕ್ಕೆಯಲ್ಲಿ  ಸಿಲುಕಿ
ಸುಖದ ಸವಿಯಲ್ಲಿರುವೆ !

ನನ್ನನ್ನೀಗ ಕಾಡಬೇಡ ಗೆಳತಿ
ನಿನ್ನ ನೆನಪು ಮರುಕಳಿಸಿದರೂ
ಕ್ರಾಂತಿಯ ಬಿಸಿಯಪ್ಪುಗೆ
ನರನಾಡಿಗಳಲ್ಲಿ ತುಸು ನೆಮ್ಮದಿಗೆ
ಅನುವಾಗಿ ನಿನ್ನ ಚಿತ್ರ ಅಸ್ಪಷ್ಟವಾಗುತ್ತಿದೆ !

ಗೆಳತಿ, ಕ್ರಾಂತಿಯ ಬಗೆಗಿನ ನಿನ್ನ ಮತ್ಸರ
ಸಮಝಾಯಿಸಿಗೆ ನಿನ್ನ ನಿರುತ್ತರ ಮೌನ
ಅಳು - ಜಗಳ ಅತಿರೇಕಕ್ಕೇರಿದಾಗ
ಓಹ್ ! ನಾನು ಕ್ರಾಂತಿಯನ್ನು ಬಿಡಲಾರೆ ಗೆಳತಿ !

ತೀವ್ರ ಭಾವನೆಗಳ ಬದಿಗೊತ್ತು ; ಕ್ಷಣಕಾಲ
ಕ್ರಾಂತಿಯ ನಡೆಯನ್ನು ನೋಡು ; ಗುರುತಿಸು !
ನಾನು ನಿನಗೆ ಬೇಕು ; ನನಗೆ ಕ್ರಾಂತಿ ಬೇಕು
ಅಬಸೋತಾದರೆ ನೀನೂ ಬೇಕು
ಯೋಚಿಸು ಗೆಳತಿ ಆಯ್ಕೆ ನಿನ್ನದು !

(ಮೋಡ ಕಟ್ಟೇತಿ ಕವನ ಸಂಕಲನದಿಂದ)

Monday, November 04, 2013

ಬಿಳಿ ಕಾಗದ ಇದು ಬರೀ ಕಾಗದ ... !

ಬಿಳಿ ಕಾಗದ ಇದು ಬರೀ ಕಾಗದ
ಮೂಡಿಸು ನೀನು ಬಣ್ಣದ ಚಿತ್ತಾರ
ಒಲವು ಚೆಲವು ಕಾಣಲೇ ಇಲ್ಲ
ಸೆಲೆಯ ಜಲವು ಚಿಮ್ಮಲೇ ಇಲ್ಲ
ಹೊತ್ತಿದ ಜ್ವಾಲೆ ನಂದಲೇ ಇಲ್ಲ
ಬತ್ತಿದ ಬಾವಿ ತುಂಬಲೇ ಇಲ್ಲ //1//

ಬಿಕ್ಕಿದ ದುಃಖ ಬಯಲಿಗೆ ಇಲ್ಲ
ಕುಕ್ಕುವ ಕಣ್ಣೊಳು ಕಾಂತಿಯು ಇಲ್ಲ
ಮಿಕ್ಕಿದ ಮಾತು ಅರಳಲೇ ಇಲ್ಲ
ದಕ್ಕಿದ ಬೀಜ ಚಿಗುರಲೇ ಇಲ್ಲ ! //2//


ನಾನು ಸುಮಾರು 1998 ರಲ್ಲಿ ಬರೆದ ಪದ್ಯ (ನನ್ನ ಮೋಡ ಕಟ್ಟೇತಿ ಕವನ ಸಂಕಲನದಲ್ಲಿ ಇದೆ) ನೆನಪಾಯಿತು. ಈ ಹಾಡಿಗೆ ನಾನೇ ಸ್ವರ ಸಂಯೋಜನೆ ಮಾಡಿ, ಖಂಜರಿ ಹಿಡಿದು ತಾಳ ಹಾಕಿ ಹಾಡುತ್ತಿದ್ದೆ ! ಮಿತ್ರ ಮಂಡಲಿಗಾಗಿ ದಾಖಲಿಸಿದ್ದೇನೆ. ಓದಿಕೊಳ್ಳಿ ; ಇಲ್ಲವೆ ಹಾಡಿಕೊಳ್ಳಿ !

Sunday, September 15, 2013

ಹೌದು ! ಜಾತಿ ಎಂಬುದೇ ಇರಲಿಲ್ಲ !


Manju Rade 

ಹೌದು ಸ್ವಾಮೀ....

ಸ್ವಾಮೀ ಜಾತಿಯೆಂಬುದೇ ಇಲ್ಲ, ಇರಲಿಲ್ಲ
ಎಂಬ ನಿಮ್ಮ ವಾದವೇ ದಿಟ !

ನಮಗೆ ಹುಚ್ಚು ನಾಯಿ ಕಚ್ಚಿತ್ತು
ಊರಿಂದ ಹೊರಗೆ ಜೋಪಡಿಗಳಲ್ಲಿ ಬದುಕಿದೆವು
ನಿಮ್ಮ ಮನೆಯಂಗಣದ ತಿಪ್ಪೆ ತೆಗೆದೆವು
ನೀವು ಮಾಡಿದ ಕಕ್ಕ ಬಾಚಿದೆವು
ನೀವು ಹಚ್ಯಾ ಅಂದಾಗ ನಾಯಿಗಳಂತೆ ಬಾಲ ಮುದುರಿಕೊಂಡೆವು

ನಿಮ್ಮ ಮನೆಗಳಲ್ಲಿ, ಹೋಟೇಲುಗಳಲ್ಲಿ
ಕೇಳಿದ್ದರೆ ನಮಗೆ ಬೆಳ್ಳಿಯ ಲೋಟವನ್ನೇ ಕೊಡುತ್ತಿದ್ದರು
ಹುಚ್ಚುನಾಯಿ ಕಚ್ಚಿತ್ತು ನೋಡಿ, ಪ್ಲಾಸ್ಟಿಕ್ ಲೋಟದಲ್ಲಿ ಕಾಫಿ ಕುಡಿದೆವು
ಕೆಲವೆಡೆ ಅದೂ ಇಲ್ಲದಂತೆ ವಾಪಾಸು ಬಂದೆವು

ನಮ್ಮನ್ನು ಯಾರೂ ಜೀತಕ್ಕೆ ಇಟ್ಟುಕೊಂಡಿರಲಿಲ್ಲ
ನಾವೇ ನಮ್ಮ ಖುಷಿಗಾಗಿ ಜೀತ ಮಾಡಿದೆವು
ಆಹಾ ! ಜೀತವಲ್ಲ ಅದು, ಪರಿಚಾರಿಕೆ... ನಾವೇ ಧನ್ಯರು
ನಿಮ್ಮ ಬಾರುಕೋಲುಗಳ ಏಟು ನಮಗೆ ಮಲ್ಲಿಗೆ ಸುರಿದಂತೆ
ಭಾರತದ ಆಧ್ಯಾತ್ಮದಲ್ಲಿ ಯೋಗದೃಷ್ಟಿ ಅಂತ ಒಂದಿದೆ ನೋಡಿ
ಹಾಗಾಗಿ ನಾವು ಮಾಡಿದ್ದು ಜೀತ ಎಂದೆನಿಸಲೇ ಇಲ್ಲ !

ವಿದ್ಯೆ ನಾವು ಕಲಿತರಲ್ಲವೇ ?
ಪಾಪ, ಗುರುಕುಲಗಳು ಬೋರ್ಡು ತಗುಲಿಸಿಕೊಂಡು
ಅನೌನ್ಸ್ ಮೆಂಟು ಕೊಟ್ಟು ನಮ್ಮನ್ನು ಸೇರಿಸಿಕೊಳ್ಳಲು ಯತ್ನಿಸಿದವು
ಕೈಹಿಡಿದು     ಕಲಿಸಲು ಬಂದರೂ ನಾವು ವಿದ್ಯೆ ಕಲಿಯಲಿಲ್ಲ
ಹಾಳಾದ್ದು ದಡ್ಡಮುಂಡೇವು ನೋಡಿ ವಿದ್ಯೆ ಹತ್ತಲಿಲ್ಲ

ಜಾತಿ ಕಾರಣಕ್ಕೆ ಲಕ್ಷಲಕ್ಷ ಜನರನ್ನು ಕೊಚ್ಚಿ ಕೊಲ್ಲಲಾಯಿತು
ಕ್ಷಮಿಸಿ, ಕೊಲ್ಲಲಾಯಿತು ಎಂದರೆ ಅದು ವಸಾಹತುಶಾಹಿ ಭಾಷೆ !
ನಮ್ಮ ಆಧ್ಯಾತ್ಮದ ಭಾಷೆಯಲ್ಲಿ ಹೇಳುವುದಾದರೆ
ನಮಗೆ ಮುಕ್ತಿ, ಪೂರ್ಣ ಸಾಯುಜ್ಯ ದೊರಕಿಸಿಕೊಡಲಾಯಿತು
ಕೊಂದವರೇ ನಮ್ಮ ಪಾಲಿನ ದೇವರು !

ಖೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ಬೆತ್ತಲಾದವರು, ಸುಟ್ಟು ಹೋದವರು
ಅವರ ಬಗ್ಗೆ ಮಾತನಾಡುವುದೇ ವೇಸ್ಟು ಬಿಡಿ !
ಬೆಂಡಿಗೇರಿಯಲ್ಲಿ ನಮಗೆ ತಿನ್ನಿಸಲಾಗಿದ್ದು ಮಲವಲ್ಲ ; ಮೈಸೂರು ಪಾಕು !
ವಸಾಹತುಶಾಹಿ ದೃಷ್ಟಿಕೋನ ನೋಡಿ
ಹಳದಿಯೆಲ್ಲ ಮಲದಂತೇ ಕಾಣುತ್ತದೆ !

ನಾವು ಮುಟ್ಟಿಸಿಕೊಳ್ಳಲಾರದವರು, ನೋಡಿದರೂ ಅಪಶುಕನವಾದವರು
ಹಾಗಂತ ದೂರುತ್ತ ಕುಳಿತುಕೊಳ್ಳಬಾರದು ನೋಡಿ
ಅದನ್ನೂ ಪರಂಪರೆಯ ಕಣ್ಣಲ್ಲಿ ನೋಡಬೇಕು, ಅದಕ್ಕೆ ಆಧ್ಯಾತ್ಮಸಿದ್ಧಿ ಬೇಕು

ಬಸವಣ್ಣನೂ ಸುಳ್ಳು, ಅವನ ವಚನಗಳೂ ಸುಳ್ಳು
ಅವನು ಇಂಟರ್ ಕ್ಯಾಸ್ಟ್ ಮದುವೆ ಮಾಡಿದ್ದೂ ಮಹಾಸುಳ್ಳು
ಕ್ಯಾಸ್ಟೇ ಇಲ್ಲ, ಇನ್ನು ಇಂಟರ್ ಕ್ಯಾಸ್ಟ್ ಎಲ್ಲಿಂದ ಬರುತ್ತದೆ ?
ಮುಠ್ಠಾಳ ವಸಾಹತುಶಾಹಿಗಳು ಏನೇನೋ ಸೃಷ್ಟಿಸಿಬಿಟ್ಟರು ನೋಡಿ !

ಕರ್ಮ ಮಾಡು ; ಫಲಕ್ಕೆ ನಿರೀಕ್ಷೆ ಮಾಡಬೇಡ ಎಂದ ಭಗವದ್ಗೀತೆ ಬರೆದವನು
ಎಂಥ ಅದ್ಭುತ ಮಾತು ! ಇದಲ್ಲವೇ ಯೋಗದೃಷ್ಟಿ
ಅವಮಾನವಾದವನಿಗೇ ಅವಮಾನ ಎನಿಸದಿದ್ದರೆ ಅವಮಾನವೇ ಅಲ್ಲ ಎನ್ನುತ್ತಾರೆ
ಫಾರಿನ್ ಫಂಡು ತಿನ್ನುವ ಆಧುನಿಕ ಮನುಗಳು !
ನಿಜ ಕಣ್ರೀ, ನಮ್ಮ ಕಣ್ಣಿಗೆ  ಯೋಗದೃಷ್ಟಿಯನ್ನು ಹಾಕಿಸಿಕೊಳ್ಳಬೇಕು
ಹೇಗೂ ಉಚಿತವಾಗಿ ಹಾಕಿಕೊಡಲು ಸಂಸ್ಕೃತಿ ರಕ್ಷಕರ, ಶೋಧಕರ ದಂಡೇ ಇದೆ
ಸಂಸ್ಕೃತಿ ಅಧ್ಯಯನಕಾರರ ಆಸ್ಪತ್ರೆಯಲ್ಲಿ ಆಪರೇಷನ್ ಖರ್ಚೂ ಫ್ರೀ ಕಣ್ರೀ !

ಹೌದೂ ಸ್ವಾಮಿ,
ಅಗ್ರಹಾರಗಳು, ಹೊಲಗೇರಿಗಳೇ ಸುಳ್ಳು 
ಮುಟ್ಟು, ಮಡಿ, ಮೈಲಿಗೆಯೇ ಸುಳ್ಳು
ಇಲ್ಲಿ ಜಾತಿ ಎಂಬುದೇ ಇರಲಿಲ್ಲ, ಇಲ್ಲ,
ಎಲ್ಲ ಸೃಷ್ಟಿಸಿದ್ದು  ಬಿಳಿತೊಗಲಿನ ಜನರು !

ಅಲ್ಲಿಯವರೆಗೆ  ಇಂಡಿಯಾ ಫಳಫಳಾಂತ ಹೊಳೆಯುತ್ತಿತ್ತು
ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಲೋಹಿಯಾ ಎಲ್ಲ ಸುಳ್ಳು
ಎಲ್ಲರ ಕಣ್ಣಿಗೂ ವಸಾಹತುಶಾಹಿಯ ಕನ್ನಡಕವಿತ್ತು
ಅವರಾಡಿದ ಮಾತುಗಳೆಲ್ಲ ಸುಳ್ಳು

ಹೌದು ಸ್ವಾಮೀ
ಅದೇನೋ ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ
ಯೋಗದೃಷ್ಟಿ ಅಂತ ಒಂದಿದೆಯಲ್ಲ..
ಅದೊಂದೇ ನಿಜ ಕಣ್ರೀ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.