Showing posts with label ಕೋರೆಗಾವ. Show all posts
Showing posts with label ಕೋರೆಗಾವ. Show all posts

Friday, November 21, 2014

'ಕೋರೆಗಾಂವ...' ನಾಟಕದ ಒಂದು ಸಂಭಾಷಣೆ

ಡಾ. ಸಿದ್ರಾಮ ಕಾರಣಿಕ
----------------------------------
 

ಮುದುಕ : ಯಾಕಿಲ್ಲೋ ಹುಡುಗಾ ! ನಿಮ್ಮ ನಡುವ ಕುಂತಾನಲ್ಲ ಈ ಸಿದ್ಧನಾಕ... ಇವರ ಅಜ್ಜ ಸಂಭಾಜಿ ಮಾರಾಜರ ಸತ್ತ ನಂತರದ ಕಾಲದಾಗ ಅಂವ್ನೂ ನಿಮ್ಮಂಥವ್ರ ಟೋಳಿ ಕಟ್ಕೊಂಡ ಮರಾಠಾ ಸೇನಾದಾಗ ಇದ್ದ. ನಿಮಗ ಗೊತ್ತಿಲ್ಲ... ಅಂವ್ನ ಹೆಸರೂ ಸಿದ್ಧನಾಕನss ! ದಿಲ್ಲಿ ಮುಸಲೇರ ಸುದ್ದಾ ಅಂವ್ಗ ಅಂಜತಿದ್ರು ! ಸಾಹು ಮಾರಾಜನ ಕಾಲದಾಗ ಆ ಸಿದ್ಧನಾಕ ತನ್ನ ಪರಾಕ್ರಮ ತೋರಿ ಸನ್ಮಾನ ಪಡ್ಕೊಂಡಿದ್ದ... ಪಲ್ಲಕ್ಕಿಯೊಳಗ ಕುಂಡ್ರಿಸಿ ಅಂವ್ನನ್ನ ಮೆರವಣಿಗಿ ಮಾಡಿದ್ರು ಸಾಹು ಮಾರಾಜರು... ಜಾಗೀರದಾರಕೀ ಇನಾಮ ಪಡ್ಕೊಂಡಿದ್ದ ಅಂವಾ...

ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?

ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...

ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.

ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...

Wednesday, January 02, 2013

ಕೋರೆಗಾವ ವಿಜಯ ದಿನ

ಬೆಂಗಳೂರು, ಜ.1: ದೇಶದಲ್ಲಿ ದಲಿತರ ಹಾಗೂ ಬಡವರ ಇತಿಹಾಸವನ್ನು ಪ್ರಜ್ಞಾಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಅದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಕೋರೆಗಾಂವ್ ಘಟನೆಯೇ ಉದಾಹರಣೆಯಾಗಿದೆ ಎಂದು ಬೆಂಗಳೂರು ನಗರ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಮಂಗಳವಾರ ನಗರದ ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋರೆಗಾಂವ್ ವಿಜಯ ದಿನದ ಅಂಗವಾಗಿ ಏರ್ಪಡಿಸಿದ್ದ ‘ಮಹಾರ್ ವೀರ ಯೋಧರ ಬಲಿದಾನದ ನೆನಪಿಗಾಗಿ ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋರೆಗಾಂವ್ ಯದ್ಧವು ದಲಿತ ಮಹಾರ್ ಸೈನಿಕರು ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ಪೇಶ್ವೆಯ ಬೃಹತ್ ಸೈನ್ಯದ ವಿರುದ್ಧ ನಡೆಸಿದ ಹೋರಾಟವಾಗಿದೆ. ಆದರೆ ಭಾರತೀಯ ಇತಿಹಾಸದಲ್ಲಿ ದಲಿತರ ಈ ದಿಗ್ವಿಜಯವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದ್ದು, ಈ ಬಗ್ಗೆ ಹೆಚ್ಚು ಮಾಹಿತಿಗಳೇ ಇಲ್ಲ ಎಂದು ರವಿಕಾಂತೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಬ್ರಿಟಿಷರು ತಮ್ಮ ದೊಡ್ಡ ರೆಜಿಮೆಂಟ್‌ನ್ನು ವಿಸರ್ಜಿಸಿ ದಲಿತ ಸೈನಿಕರಿಗೆ ಆದ್ಯತೆ ನೀಡಲು ಸಾಧ್ಯವಾದದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರಿಂದ. ಈ ಘಟನೆ ನಮ್ಮ ಪರಂಪರೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ನಾವು ನಮ್ಮ ಇತಿಹಾಸ ಪರಂಪರೆಗಳ ಕಡೆಗೆ ಮತ್ತೆ ತಿರುಗಿ ನೋಡಬೇಕಿದೆ. ಇತಿಹಾಸದ ಸತ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದ್ದು, ಈ ಬಗ್ಗೆ ಗಂಭೀರ ಚಿಂತನೆಯಾಗಬೇಕು. ಈ ನಿಟ್ಟಿನಲ್ಲಿ ದಲಿತಾರ ಸೈನಿಕರ ಈ ದಿಗ್ವಿಜಯ ನಮ್ಮೆಲ್ಲರ ಕಣ್ಣುಗಳನ್ನು ಇತಿಹಾಸದ ಕಡೆಗೆ ತೆರೆಸುವ ಮೂಲಕ ಸ್ವಾಭಿಮಾನದೆಡೆಗೆ ಕೊಂಡೊಯ್ಯಲಿ ಎಂದು ರವಿಕಾಂತೇಗೌಡ ಆಶಿಸಿದರು.
ನಾವೆಲ್ಲ ಯದ್ಧ ವಿರೋಧಿಗಳಾಗಿದ್ದು, ಯದ್ಧಗಳನ್ನು ಮಾಡಿ ರಕ್ತ ಸುರಿಸುವುದಕ್ಕಿಂತ, ಮಡಿದ ವೀರ ಯೋಧರ ನೆನಪಲ್ಲಿ ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಪೊಲೀಸ್ ಇಲಾಖೆ ಸಹ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ರಕ್ತದ ತುರ್ತು ಅಗತ್ಯವಿರವವರು ಸಂಪರ್ಕಿಸಿದರೆ, ಪೊಲೀಸ್ ಸಿಬ್ಬಂದಿ ರಕ್ತ ನೀಡಲಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಸಿದ್ದರಾಮ ಕಾರ್ಣಿಕ್, ಅಂಬೇಡ್ಕರ್ ನಮಗೆಲ್ಲ ಕೇವಲ ಹೆಸರಾಗಿದ್ದಾರೆಯೇ ಹೊರತು, ಉಸಿರಾಗಿಲ್ಲ. ನಮಗೆ ಅವರು ಹೆಸರು ಹಾಗೂ ಉಸಿರಾದಾಗ ಮಾತ್ರ ದಲಿತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ಶಿವಾಜಿ, ಸಾಂಬಜಿ ಸೇರಿದಂತೆ ಹಲವು ನಾಯಕರ ಸಮಾಧಿಗಳನ್ನು ಸರಕಾರ ಅಭಿವೃದ್ಧಿಪಡಿಸಿದೆ. ಆದರೆ ಸ್ವಾಭಿಮಾನಕ್ಕಾಗಿ ಹುತಾತ್ಮರಾದ ಮಹರ್ ಯೋಧರ ಸ್ಮಾರಕ ಶಿಥಿಲಗೊಂಡಿದ್ದು, ಸರಕಾರ ನಿರ್ಲಕ್ಷಿಸಿದೆ. ಆದುದರಿಂದ ಮಹಾರಾಷ್ಟ್ರ ಸರಕಾರ ಕೋರೆಗಾಂವ್ ಸ್ಮಾರಕವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ದಲಿತರು ಎಚ್ಚೆತ್ತುಕೊಳ್ಳದ ಕಾರಣ ಕೋರೆಗಾಂವ್‌ನಂತಹ ಹಲವು ಐತಿಹಾಸಿಕ ಘಟನೆಗಳು ಮುಚ್ಚು ಹೋಗುತ್ತಿವೆ. ನಾವು ಎದ್ದು ನಿಲ್ಲದಿದ್ದರೆ ನಮ್ಮ ಅವಸಾನವಾಗಲಿದೆ. ಆದುದರಿಂದ ಕೋರೆಗಾಂವ್ ಯೋಧರ ತ್ಯಾಗ, ಬಲಿದಾನ, ಸ್ವಾಭಿಮಾನಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಮುಂದುವರಿ ಯಬೇಕು. ಆ ಮೂಲಕ ಅಧಿಕಾರದ ಕೇಂದ್ರ ಸ್ಥಾನಗಳ ಗದ್ದುಗೆ ಏರಬೇಕು ಎಂದು ಡಾ.ಸಿದ್ದರಾಮ ಕಾರ್ಣಿಕ್ ನುಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ರಂಗಸ್ವಾಮಿ, ಅಂಬೇಡ್ಕರ್‌ರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸೋಣ ಎಂದರು.
ಅಧ್ಯಕ್ಷತೆಯನ್ನು ಡಿಎಸ್‌ಎಸ್‌ನ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಕಿವಿ, ಸಾಹಿತಿ ರುದ್ರಪ್ಪ ಹನಗವಾಡಿ, ಪ್ರಜಾವಿಮೋಚನಾ ಚಳವಳಿಯ ಮುಖಂಡ ಪಟಾಪಟ್ ನಾಗರಾಜ್, ಟಿಪ್ಪು ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್ ಖುರೇಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಪೆ : ವರ್ತಮಾನ ಭಾರತಿ

Saturday, June 16, 2012

ಕೋರೆಗಾವ ಕದನ-ಇತಿಹಾಸದ ಒಳಸುಳಿ

ಈ ದೇಶದ ಜಾತೀಯತೆಯ ಒಳಸುಳಿಗಳನ್ನು ಬಿಚ್ಚಿಡುವ ಕೃತಿ ‘ಕೋರೆಗಾವ ಕದನ: ದಲಿತ ದಿಗ್ವಿಜಯ’. ಸುಧಾಕರ ಖಾಂಬೆ ಅವರ ಮರಾಠಿ ಕೃತಿ ‘ಶೌರ್ಯ ಆಣಿ ಪರಾಕ್ರಮಾಚೆ ಪ್ರತೀಕ: ಭೀಮಾ ಕೋರೆಗಾವಾಚಾ ವಿಜಯ ಸ್ತಂಭ’ ಕೃತಿಯನ್ನು ಸಿದ್ರಾಮ ಕಾರಣಿಕ ಅವರು ಕನ್ನಡಕ್ಕೆ ತಂದಿದ್ದಾರೆ. ಸ್ಫೋಟಕ ಅಂಶಗಳನ್ನು ಹೊರಗಿ ಡುವ ಈ ಪುಟ್ಟ ಕೃತಿ, ಈ ದೇಶದ ಪೂರ್ವಾಗ್ರಹ ಪೀಡಿತ ಇತಿಹಾಸ, ವರ್ಣಸಂಘರ್ಷ ಮತ್ತು ಸ್ವಾತಂತ್ರದ ವಿರೋಧಾಭಾಸಗಳನ್ನು ತೆರೆದಿಡು ತ್ತದೆ. ಕೃತಿಯ ಕುತೂಹಲಕಾರಿ ಅಂಶವೆಂದರೆ, ಇಲ್ಲಿ ಕದನ ನಡೆಯುವುದು ಬ್ರಿಟಿಷರು ಮತ್ತು ಪೇಶ್ವೆಗಳ ನಡುವೆ.
ಈ ಕದನದಲ್ಲಿ ಮಹಾರ ದಲಿತ ಕಲಿ ಗಳು ಬ್ರಿಟಿ ಷರ ಪರವಾಗಿ ನಿಂತು ಎರಡನೆ ಬಾಜಿ ರಾಯನ ವಿರುದ್ಧ ಖಡ್ಗ ಬೀಸುತ್ತಾರೆ. ಮೇಲ್ನೋಟಕ್ಕೆ ಇದು ಬ್ರಿಟಿಷರ ವಿರುದ್ಧ ಪೇಶ್ವೆಗಳ ಕದನ ದಂತೆ ಕಂಡರೂ, ತಳದಲ್ಲಿ ಇದು ಈ ದೇಶದ ಜಾತೀ ಯತೆ ಮತ್ತು ಅಸ್ಪಶತೆಯ ವಿರುದ್ಧ ನಡೆಯುವ ಕದನದ ರೂಪ ಪಡೆಯುತ್ತದೆ. ವಿಶೇಷವೆಂದರೆ, ಇಲ್ಲಿ ದೇಶದ ಜಾತೀ ಯತೆ, ಶೋಷಕ ಸಮಾಜವನ್ನು ಪೇಶ್ವೆಗಳು ಪ್ರತಿನಿಧಿಸಿದರೆ, ಬೆನ್ನಿಗೆ ನಿಂತ ದಲಿತರ ಕಾರಣದಿಂದ, ಬ್ರಿಟಿ ಷರು ಜಾತೀಯತೆಯ ವಿರೋಧಿಗ ಳಾಗಿ ಗುರುತಿಸಲ್ಪಡುತ್ತಾರೆ. ಸ್ವಾತಂತ್ರ ಹೋರಾಟದ ವ್ಯಾಖ್ಯೆ ಇಲ್ಲಿ ವಿಸ್ತರಿಸಿ ಕೊಳ್ಳುತ್ತದೆ.
ಬ್ರಿಟಿಷರಿಂದ ರಾಜಕೀ ಯವಾಗಿ ಬಿಡುಗಡೆ ಪಡೆದರಷ್ಟೇ ದಲಿತರಿಗೆ ಸ್ವಾತಂತ್ರ ಸಿಕ್ಕಂತಾಗುವು ದಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿ ಡುವ ಮುಂಚೆಯೇ, ಶತ ಶತಮಾನ ಗಳ ಹಿಂದೆಯೇ ಈ ನೆಲದಲ್ಲಿ ದಲಿ ತರು ಪಾರತಂತ್ರವನ್ನು ಅನುಭ ವಿಸುತ್ತಿದ್ದರು. ಶೋಷಣೆಯನ್ನು ಅನು ಭವಿಸುತ್ತಿದ್ದರು. ಸಾರ್ವಜನಿಕ ಕೆರೆ, ಬಾವಿಗಳನ್ನು ಮುಟ್ಟುವುದಕ್ಕೂ ಅವ ಕಾಶವಿರಲಿಲ್ಲ. ಇಂತಹ ಹೀನ ಸ್ಥಿತಿ ಯಲ್ಲಿ ಬದುಕಿದ ದಲಿತರ ಪಾಲಿಗೆ, ಬ್ರಿಟಿಷರ ಪ್ರವೇಶ ಒಂದು ವರವಾ ಯಿತು. ಬ್ರಿಟಿಷರ ಶಿಕ್ಷಣ, ಕಾನೂನು ದಲಿತರ ಬದುಕಿನಲ್ಲಿ ಬದಲಾವಣೆ ತಂದಿತು.
ಕೋರೆಗಾವ ಕದನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಬ್ರಿಟಿಷರ ಪರವಾಗಿ ನಿಂತ ದಲಿತರನ್ನು ‘ದೇಶದ್ರೋಹಿ’ ಗಳಾಗಿ ಗುರುತಿಸುವ ಅಪಾಯವಿದೆ. ಶಿವಾಜಿಯ ಕಾಲದಲ್ಲಿ ಧೈರ್ಯ, ಸಾಹ ಸಕ್ಕೆ ಹೆಸರಾಗಿದ್ದ ಮಹಾರ ಯೋಧರು ಪೇಶ್ವೆಗಳ ಕಾಲದಲ್ಲಿ ಅವರ ವಿರುದ್ಧ ಬಂಡೆದ್ದರೂ. ಶಿವಾಜಿ ಶೂದ್ರನಾಗಿದ್ದ. ಇದೇ ಸಂದರ್ಭದಲ್ಲಿ, ಶಿವಾಜಿಯ ನಂತರ ಆಡಳಿತ ಚುಕ್ಕಾಣಿ ಹಿಡಿದ ಪೇಶ್ವೆಗಳು ಮೇಲ್ವರ್ಣವನ್ನು ಪ್ರತಿನಿಧಿಸು ತ್ತಿದ್ದರು. ಶಿವಾಜಿಗಾಗಿ ಎಲ್ಲವನ್ನು ತೊರೆದ ಮಹಾರರನ್ನು ಈ ಪೇಶ್ವೆಗಳು ಹೀನಾಯವಾಗಿ ಕಾಣಲಾರಂಭಿಸಿ ದರು.
ಅನುಮಾನ, ಶಂಕೆ, ಅಸ್ಪಶತೆ ಇತ್ಯಾದಿಗಳ ಮೂಲಕ, ಮಹಾರ ಯೋಧರಿಗೆ ಪೇಶ್ವೆಯ ಆಡಳಿತ ನರಕ ವಾಯಿತು. ಕೋರೆಗಾವ್ ಕದನದ ಸಂದರ್ಭದಲ್ಲಿ ಈ ಮಹಾರ ಯೋಧರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದರೆ ಅವರು ಬಾಜೀರಾ ಯನ ಪರವಾಗಿಯೇ ನಿಲ್ಲುತ್ತಿ ದ್ದರೋ ಏನೋ. ಆದರೆ ಅವರನ್ನು ಸಂಪೂರ್ಣವಾಗಿ ಪೇಶ್ವೆಗಳು ನಿರ್ಲ ಕ್ಷಿಸಿದರು. ಪರಿಣಾಮವಾಗಿ ಮಹಾರ್ ಯೋಧರು ಪೇಶ್ವೆಗಳ ವಿರುದ್ಧ ನಿಂತರು. ಬ್ರಿಟಿ ಷರ ಸೇನೆ ಸೇರಿದರು. ಅವರಿಗೆ ಹೋರಾಡ ಬೇಕಾಗಿದ್ದದ್ದು ಪೇಶ್ವೆಗಳ ಜಾತೀ ಯತೆಯ ವಿರುದ್ಧ, ಅವರ ಅಸ್ಪ ಶತೆಯ ವಿರುದ್ಧ.
ಅವರ ಶೋಷ ಣೆಯ ವಿರುದ್ಧ. ಬ್ರಿಟಿಷರು ಕೊಟ್ಟ ಮನ್ನಣೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತು. ಪರಿಣಾಮವಾಗಿ, ಪೇಶ್ವೆ ಗಳ ಮಹಾಸೇನೆಯನ್ನು ಮಹಾರರು ಎದುರಿಸಲು ಸಿದ್ಧರಾದರು. ಒಂದು ಹಂತದಲ್ಲಿ ಬ್ರಿಟಿ ಷರು ಸೋಲುವ ಸನ್ನಿವೇಶವಿದ್ದಾಗ, ಮಹಾರರ ಹೋರಾಟ, ಬಲಿದಾನ ದಿಂದ ಫಲಿತಾಂಶ ಬದಲಾಯಿತು. ಬ್ರಿಟಿ ಷರು ಗೆದ್ದರು. ಬಾಜೀರಾಯ ತನ್ನ ಕಾರಣದಿಂದಲೇ ಯುದ್ಧದಲ್ಲಿ ಸತ್ತ. (ಇದೇ ಪೇಶ್ವೆಗಳು ಟಿಪ್ಪು ಸುಲ್ತಾ ನನ ವಿರುದ್ಧ ಯುದ್ಧದಲ್ಲಿ ಬ್ರಿಟಿಷರ ಪರವಾಗಿದ್ದರು ಎನ್ನು ವುದನ್ನು ಇಲ್ಲಿ ನೆನೆಯಬೇಕು). ಕೋರೆಗಾವ ಯುದ್ಧ ದಲ್ಲಿ ಅಸ್ಪಶತೆ, ಜಾತೀಯತೆ ಹೀನಾ ಯವಾಗಿ ಸೋತಿತು. ದಲಿತರು ಗೆದ್ದರು.
ಶಬ್ದ ಶಬ್ದದ ಅನುವಾದ ಇದಲ್ಲ ವಾದುದರಿಂದ ಓದಿಸಿಕೊಂಡು ಹೋಗುತ್ತದೆ. ಬರೇ ಒಣ ಇತಿಹಾ ಸದ ದಾಖಲೆಯೂ ಇದಲ್ಲ. ಬರಹ ಕಥನ ಗುಣವನ್ನು ಹೊಂದಿದೆ. ಅನುವಾದ ಸೃಜನಾತ್ಮಕವಾಗಿದೆ.
ಮೂಲಭೂತವಾದಿಗಳು ಈ ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಗದಗದ ಲಡಾಯಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿರುವುದು ಶ್ಲಾಘನೀಯವಾಗಿದೆ. ಕೃತಿಯ ಮುಖಬೆಲೆ 40 ರೂ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.