Showing posts with label ಡಾ. ಸಿದ್ರಾಮ ಕಾರಣಿಕ. Show all posts
Showing posts with label ಡಾ. ಸಿದ್ರಾಮ ಕಾರಣಿಕ. Show all posts

Thursday, March 05, 2015

ಕೃತಿಚೌರ್ಯ : 'ಅದು ಬ್ಯಾರೆ ಐತಿ'

ನಾನು 1993-94 ರಲ್ಲಿ ಬರೆದ 'ಅದು ಬ್ಯಾರೆ ಐತಿ' ಅನ್ನುವ ಹಾಡು ನಾಡು ಸುತ್ತಿ ತುಂಬ ಪ್ರಸಿದ್ಧವಾಗಿದೆ. ಆದರೆ ಬರುಬರುತ್ತ ಕೆಲವರು ಅದನ್ನು ತಾವೇ ಬರೆದುದಾಗಿ ಹೇಳಿಕೊಳ್ಳುತ್ತ ತಿರುಗಾಡಿ ಹಾಡಿದರು. ನನ್ನ ಸಮ್ಮುಖದಲ್ಲಿ ಅಂಥ ಪ್ರಸಂಗ ಬಂದಾಗ ನಾನು ಆಕ್ಷೇಪ ವ್ಯಕ್ತಪಡಿಸಿ ತಿಳಿ ಹೇಳಿದ್ದೇನೆ. ಇಂತಹ ಗೊಂದಲ ಬೇಡ ಎಂದು 2003 ರಲ್ಲಿ ನನ್ನ 'ಮೋಡ ಕಟ್ಟೇತಿ' ಕವನ ಸಂಕಲನದಲ್ಲಿ ಈ ಹಾಡನ್ನು ಸೇರಿಸಿ ಸುಮ್ಮನಾಗಿದ್ದೆ. ಆದರೆ ಇತ್ತೀಚೆಗೆ ಯಾರೋ ಒಬ್ಬ ವ್ಯಕ್ತಿ ಆ ಹಾಡನ್ನು ತನ್ನ ಹೆಸರು ಹಾಕಿಕೊಂಡು ಸಿ.ಡಿ. ಮಾಡಿ ಹೆಸರು ಮಾಡಿದ್ದಾನೆ. ಸಾಕಷ್ಟು ದುಡ್ಡೂ ಹೊಡೆದುಕೊಂಡಿದ್ದಾನೆ ಎಂದು ತಿಳಿದುಕೊಂಡಿರುವೆ. ಹಾಡನ್ನೂ ಸಾಕಷ್ಟು ಹದಗೆಡಿಸಿದ್ದಾನೆ. ಇದು ಅಕ್ಷಮ್ಯವಾಗಿದೆ. ಕೃತಿಚೌರ್ಯ ಮಾಡಿದ್ದಕ್ಕೆ ಆತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಡಿನಲ್ಲಿ ಆತ ನೀಡಿದ ಮೊಬೈಲ್ ನಂಬರ್ ಗೆ ನಾನು ಸಾಕಷ್ಟು ಸಲ ಕಾಲ್ ಮಾಡಿದರೂ 'ನಾಟ್ ರೀಚೇಬಲ್' ಆಗಿದೆ. ದಯವಿಟ್ಟು ನನ್ನ ಹಾಡನ್ನು ಕೃತಿಚೌರ್ಯ ಮಾಡಿ ಐನಾಪುರದ ಸುರೇಶ ಎನ್ನುವಾತನ ಸರಿಯಾದ ವಿಳಾಸ ಸಿಕ್ಕಿದರೆ, ಆ ಹಾಡನ್ನು ಹೊರತಂದ ರೀಕಾರ್ಡಿಂಗ್ ಸಂಸ್ಥೆಯ ವಿಳಾಸವನ್ನು ಯಾರಾದರೂ ನೀಡಿದರೆ ನಾನು ಕೈಗೊಳ್ಳುವ ಮುಂದಿನ ಕ್ರಮಕ್ಕೆ ಅನುಕೂಲವಾಗುತ್ತದೆ.
2003 ರಲ್ಲಿ ನಾನು ಪ್ರಕಟಿಸಿದ ಹಾಡಿನ ಪೂರ್ಣಪಾಠವನ್ನು ಇಲ್ಲಿ ನೀಡುತ್ತಿರುವೆ :
 

ಮಾತು ಆಡಿದರೆ ಮುತ್ತು ಒಡೆದರೆ
ಮತ್ತೇ ಸಿಗುವುದಿಲ್ಲೋ/ ಅದು ಬ್ಯಾರೆ ಐತಿ
ದುನ್ಯಾದಾಗ ದೊಡ್ಡವರಾಗಿ ಮೆರಿತಾರು
ಬೆವರಿನ ದುಡಿತಲ್ಲೋ / ಅದು ಬ್ಯಾರೆ ಐತಿ


ಹುಟ್ಟಿಸಿದ ದೇವರು ಹುಲ್ಲು ಮೇಯ್ಸೋದಿಲ್ಲ
ಅನ್ನುತ್ತಾರೋ ಎಲ್ಲ / ಅದು ಬ್ಯಾರೆ ಐತಿ
ತಮ್ಮ ಕೆಲಸಕ ದೇವರ ಹೆಸರ
ಹೇಳತಾರೋ ಮಂದಿ / ಅದು ಬ್ಯಾರೆ ಐತಿ

ಮಾಸ್ತರು ಇಲ್ಲ ಮಕ್ಕಳು ಇಲ್ಲ
ಸಾಲಿ ನಡಿಯೋದ್ಯಾಂಗೋ / ಅದು ಬ್ಯಾರೆ ಐತಿ
ಸಂಪೂರ್ಣ ಸಾಕ್ಷರ ಅಂತ ಹೇಳತಾರು
ಕಲಿತಾವರ್ಯಾರಿಲ್ಲೋ / ಅದು ಬ್ಯಾರೆ ಐತಿ

ನೌಕರಿ ಇಲ್ಲ ಚಾಕರಿ ಇಲ್ಲ
ಅನ್ನತಾರೋ ಎಲ್ಲ / ಅದು ಬ್ಯಾರೆ ಐತಿ
ತಿಂದುಂಡ ತಿರುಗಾಡಿ ಮಜಾ ಮಾಡತಾರು
ಬರ್ತೈತೆಲ್ಲಿಂದ / ಅದು ಬ್ಯಾರೆ ಐತಿ

ತುಂಬಿದ ಸಂತ್ಯಾಗ ಕಳ್ಳರು ಬಂದರ
ಪೋಲೀಸ್ರು ನೋಡಲ್ಲೋ / ಅದು ಬ್ಯಾರೆ ಐತಿ
ರೊಕ್ಕ ಕಳ್ಕೊಂಡ್ರ ಸುಮ್ಮನಿರಬೇಕು
ತಿರುಗಿ ಬರವುದಿಲ್ಲೋ / ಅದು ಬ್ಯಾರೆ ಐತಿ

ರೇಶನ್ ಇದ್ರೂ ನಮಗ ಸಿಗುವುದಿಲ್ಲ
ಹೋಗ್ತೈತಿ ಎಲ್ಲೋ / ಅದು ಬ್ಯಾರೆ ಐತಿ
ತಿನ್ನೋ ಕೂಳಿನ್ಯಾಗ ಕಲಬೆರಕಿ ಮಾಡಿ
ಮಣ್ಣ ತಿನಸತಾರೋ / ಅದು ಬ್ಯಾರೆ ಐತಿ

ಪೂಜಾರಿ ಮನಿ ಬಂಗ್ಲೆಯಾಗತೈತಿ
ದೇವರು ಮಾಡಿಲ್ಲೊ / ಅದು ಬ್ಯಾರೆ ಐತಿ
ಎಲ್ಲಾ ಬಿಟ್ಟ ಸ್ವಾಮಿಗೋಳ ಇಂದು
ಭಾನಗಡಿ ಮಾಡತಾರೋ / ಅದು ಬ್ಯಾರೆ ಐತಿ

ವೋಟು ಹಾಕದಿದ್ರು ಮಂತ್ರಿಯಾಗತಾರು
ಮಾಯ ಅನ್ನಬ್ಯಾಡ್ರೋ / ಅದು ಬ್ಯಾರೆ ಐತಿ
ಕಾಗದ ಮ್ಯಾಲ ಕಾರ್ಯ ಮಾಡತಾರು
ಬಳಕೆಗೆ ಬಂದಿಲ್ಲೋ / ಅದು ಬ್ಯಾರೆ ಐತಿ

ಚೆಂದಾನ ಚೆಲ್ವೇರ ಬಿಸಿಲಾಗ ಬಂದರ
ಸುಕ್ಕಗಟ್ಟತಾರೋ / ಅದು ಬ್ಯಾರೆ ಐತಿ
ನಡಾ ಬಳುಕಿಸಿ ನಡಿಯುವರೆಲ್ಲ
ನಾರಿಯರಲ್ಲವೋ / ಅದು ಬ್ಯಾರೆ ಐತಿ

ಪರಾದ ವಯದಾಗ ಹಾರಾಡಿ
ಹಾಳ ಆಗತಾರೋ / ಅದು ಬ್ಯಾರೆ ಐತಿ
ಪ್ರೀತಿ-ಪ್ರೇಮದ ನಾಟಕವಾಡಿ
ಕೈಯ ಬಿಡತಾರೋ / ಅದು ಬ್ಯಾರೆ ಐತಿ

ಮಂದ ಬೆಳಕಿನ್ಯಾಗ ಬಸ್ಟ್ಯಾಂಡ್ ಮ್ಯಾಗ
ಲಲನೇರ ಬರ್ತಾರೋ / ಅದು ಬ್ಯಾರೆ ಐತಿ
ರೊಕ್ಕ ಕೊಟ್ಟ ಮ್ಯಾಗ ರೋಗ ಹಚ್ಚತಾರು
ತಪ್ಪು ಅವರದಲ್ಲೋ / ಅದು ಬ್ಯಾರೆ ಐತಿ

ಹಾಡಿನ ಅರ್ಥ ತಿಳಿಲಿಲ್ಲಂದ್ರ
ಕೇಳಬ್ಯಾಡ್ರಿ ತಿರುಗಿ / ಅದು ಬ್ಯಾರೆ ಐತಿ
ಹಾಡಿನ ಅರ್ಥ ತಿಳಿದಿತ್ತಂದ್ರ
ದಿಂಗಾಗಿ ನಿಲ್ಲಬ್ಯಾಡ್ರಿ / ಅದು ಬ್ಯಾರೆ ಐತಿ

Wednesday, February 25, 2015

ಮಾತ್ಗವಿತೆ-179

ಕುದಿ ಕುದಿವ ಯಾತನೆಯ
ಅನುಭವ ಇರುವಲ್ಲಿ
ಬೆದೆ ಬಂದಂತೆ ಕಾರಿಕೊಳ್ಳುವ
ಉರವಣಿಗೆ ತರವಲ್ಲ
ಹಂಚಿಕೊಂಡು ಹಗುರಾಗಬೇಕು
ಅದೂ ಸಾಧ್ಯವಾಗದಿದ್ದರೆ
ಮುಚ್ಚಿಕೊಂಡು ಸುಮ್ಮಿರಬೇಕು !

ವಚನ-42

ಬೊಲ್ಲನಾಗಿದ್ದರೆ ಕುಮಾರ ರಾಮನ
ಸಾಂಗತ್ಯ ಅಂತ ಸುಮ್ಮಿರಬೋದಿತ್ತು
ತಲ್ಲಣಗೊಂಡಿದ್ದರೆ ಸಮಾಧಾನಿಸಬೋದಿತ್ತು
ಮಲ್ಲನಾಗಿದ್ದರೆ ಅಖಾಡದಲ್ಲಿಯೇ ಕೆಡವಬೋದಿತ್ತು
ಸೊಲ್ಲು ಕೇಳಿ ಸುಖಾಸುಮ್ಮ ಓಡಿ ಹೋಗುವ
ಬೆಲ್ಲ ಮಾತುಗಳ ಹೊಲ್ಲಗಳ ಹರಿಹಾಯ್ದು ಪರಿಣಾಮವಿಲ್ಲ
ಕಾರಣಿಕ ಸಿದ್ಧರಾಮ ತಿಳಿ ತಿಳಿಯಾಗು
ಹೊಲಬುಗೆಟ್ಟವರು ಹಾದರದಲ್ಲಿದ್ದಾರೆ !

Friday, January 30, 2015

ಮಾತ್ಗವಿತೆ-178

ಅದು ಯಾವುದು ಕಣ್ಣೋ
ಕಾಡಿನ ನಡುವೆ ಅರಳಿದ
ಕೆರೆಯ ಕಣ್ಣೋ
ಕಣ್ಣುಗಳ ಆಸೆಗೆ ಕಣ್ಣಿಲ್ಲದವನಂತೆ
ಮಣ್ಣು ಸೇರುವ ಪರಿಯಲ್ಲಿ ಹಲಬುವಿಕೆ !
ನಿನ್ನ ಒಳಗಿನ ಕಣ್ಣು ತೆರೆ
ರೇತು-ರಜಸ್ಸುಗಳ ಮಹಾಪೂರ ಕನಸಿನಲ್ಲಿದೆ
ಅಕ್ಷಿ ಅಕ್ಷಿ ಎಂದು ಅರಸು
ಮತಲಬಿಗಳ ಹಿಂಡೇ ಕಾಣುತ್ತದೆ !

Saturday, December 06, 2014

ಮಾತ್ಗವಿತೆ-177

ತಟವಟದೊಳಗೆ ತಟ ತಟ ತಡಾಡಿಸಿ
ತುಯ್ತಕ್ಕೆ ತೊಡೆದ ನನ್ನ ಜನ
ತಳ-ಬುಡ ಇಲ್ಲದಂತೆ ಮಾತಾಡಿ
ಮರೆವಿನೊಳಗೆ ಕೆರೆದುಕೊಳ್ಳುತ್ತಿದ್ದಾರಲ್ಲ !
ಅನುಭವ ಅನುಭಾವ ಆಗಬೇಕು ;

ಬೆರಕಿ ಮಂದಿ ಗುದುಮುರಿಗೆ ಹಾಕುತ್ತಾರೆ
ತದಕಬೇಕೆಂದರೂ ಆಗೋದಿಲ್ಲ
ಅವರು ನನ್ನ ಜನ
!

Friday, November 21, 2014

'ಕೋರೆಗಾಂವ...' ನಾಟಕದ ಒಂದು ಸಂಭಾಷಣೆ

ಡಾ. ಸಿದ್ರಾಮ ಕಾರಣಿಕ
----------------------------------
 

ಮುದುಕ : ಯಾಕಿಲ್ಲೋ ಹುಡುಗಾ ! ನಿಮ್ಮ ನಡುವ ಕುಂತಾನಲ್ಲ ಈ ಸಿದ್ಧನಾಕ... ಇವರ ಅಜ್ಜ ಸಂಭಾಜಿ ಮಾರಾಜರ ಸತ್ತ ನಂತರದ ಕಾಲದಾಗ ಅಂವ್ನೂ ನಿಮ್ಮಂಥವ್ರ ಟೋಳಿ ಕಟ್ಕೊಂಡ ಮರಾಠಾ ಸೇನಾದಾಗ ಇದ್ದ. ನಿಮಗ ಗೊತ್ತಿಲ್ಲ... ಅಂವ್ನ ಹೆಸರೂ ಸಿದ್ಧನಾಕನss ! ದಿಲ್ಲಿ ಮುಸಲೇರ ಸುದ್ದಾ ಅಂವ್ಗ ಅಂಜತಿದ್ರು ! ಸಾಹು ಮಾರಾಜನ ಕಾಲದಾಗ ಆ ಸಿದ್ಧನಾಕ ತನ್ನ ಪರಾಕ್ರಮ ತೋರಿ ಸನ್ಮಾನ ಪಡ್ಕೊಂಡಿದ್ದ... ಪಲ್ಲಕ್ಕಿಯೊಳಗ ಕುಂಡ್ರಿಸಿ ಅಂವ್ನನ್ನ ಮೆರವಣಿಗಿ ಮಾಡಿದ್ರು ಸಾಹು ಮಾರಾಜರು... ಜಾಗೀರದಾರಕೀ ಇನಾಮ ಪಡ್ಕೊಂಡಿದ್ದ ಅಂವಾ...

ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?

ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...

ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.

ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...

ವಚನ-41

ದ್ರವಕ್ಕೆ ದ್ರವ ಸೇರಿ ಘನವಾಯಿತು !
ಘನದ ಘನತೆ ಗುಲ್ಲಾಗಿ
ಮೆಲ್ಲಗೆ ಮೂಲಕ್ಕೆ ತಿರುಗಿತ್ತು
ಕಾರಣಿಕ ಸಿದ್ಧರಾಮ ಕಟ್ಟೆ ಕಲ್ಲು
ಕಟ್ಟೆಗಲ್ಲದೆ ಕಳಸಕ್ಕೆ ಸಲ್ಲದು !

Saturday, November 15, 2014

ಮಾತ್ಗವಿತೆ-176

ಇದು ಆಗಲೇಬೇಕಿತ್ತು ; ಆಗುತ್ತಿದೆ
ನಾನೇಕೆ ಸುಮ್ಮನಿರಬೇಕು ಧಿಮ್ಮಾನಗಳನ್ನಿಟ್ಟುಕೊಂಡು ?
ನೀವು ಆಡಿದ ಆಟಕ್ಕೆ ಬದ್ಧತೆಯ ಹೆಸರು ಕೊಟ್ಟು
ಉಸಿರು ನಿಲ್ಲಿಸಿದ ಇತಿಹಾಸ ಮರೆತಿಲ್ಲ ನಾನು !
ಸದ್ದಾಗದಂತೆ ನೀಡಿದ ಏಟಿಗೆ ಚಿಗಿತ್ತಿದ್ದೇನೆ ನಾನು
ಬಲಿತು ಬಸವಿಳಿದಿದ್ದೇನೆ
ನಾನು ಬದ್ಧತೆಯನ್ನು ಬಿಡುತ್ತಿಲ್ಲ !
ನೀವು ಸವೆಸಿದ ಹಾದಿಯನ್ನು ಬಿಟ್ಟಿದ್ದೇನೆ ನಾನು !
ಎಲ್ಲವನ್ನೂ ಒಳಗಿಟ್ಟುಕೊಂಡು
ಬುದ್ಧನಾಗಿದ್ದು ಸಾಕೆನಿಸಿದೆ ನನಗೆ !

Monday, October 06, 2014

ಮಾತ್ಗವಿತೆ-175

ಜೀರ್ಣವಾಗುವಂತಿದ್ದರೆ ತಿನ್ನಬೇಕು
ಜೀರ್ಣವಾಗುವಷ್ಟೇ ತಿನ್ನಬೇಕು
ಬಕಾಬೋರಲು ಬಿದ್ದು ಉಳ್ಳಾಡಿದರೆ
ಬಳ್ಳೊಳ್ಳಿ ಮೂಗಿಗೆ ಇಡುವವರು ಇದ್ದಾರೆ
ಎಂಬ ಎಚ್ಚರಿಕೆಯಾದರೂ ಇರಬೇಕು !
ಧಿಮಾಕಿಗೆ ದೀಡಪೈಸೆಯ ಕಿಮ್ಮತ್ತೂ ಇಲ್ಲ !

ವಚನ-40

ಅದೆಂಥ ಗಾಳಿ !
ತೂರಿಕೊಂಡವರೂ
ಮಾರಿಕೊಂಡವರೂ
ನಡುವೆ ಆಣೆ ಲೆಕ್ಕ ಇಟ್ಟುಕೊಂಡವರೂ
ಸುಗ್ಗಿ ಮಾಡುವಾಗಲೇ
ಬೀಸಿತಲ್ಲಾ !
ತಂಗಾಳಿ ಎನಿಸಿದ್ದು ಸುಳಿಗಾಳಿ, 
ಬಿರುಗಾಳಿ, ಎದುರ್ಗಾಳಿಯಾಗಿ
ಬಗ್ಗು ಬಡಿಯುತ್ತಿದೆಯಲ್ಲ !
ಸಿಡಿಲಾಗಿ ಸಿಡಿದು ಜೋರು ಮಳೆಯಾದರೆ
ಬೆಳೆದದ್ದು ಮುಗ್ಗು ಹಿಡಿಯದಿರದೇ ?
ಕಾರಣಿಕ ಸಿದ್ಧರಾಮ ಕಾಲಕ್ಕೆ ಕಾಲನ ಭಯ ಇಲ್ಲ !  

Tuesday, September 30, 2014

ಮಾತ್ಗವಿತೆ-174


ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವವರು
ಮಬ್ಬಿನಲಿ ಗರುಡನ ಮೇಲೆ ಬಿಟ್ಟಿದ್ದಾರೆ !
ನಿಮ್ಮ ತೀಟೆಗೆ ; ಗುಂಗಿಗೆ
ಹುಳ ಬಿಡುತ್ತಿದ್ದೇನೆ ! ಸಾಧ್ಯವಾದರೆ ಸಹಿಸಿ
ಇಲ್ಲವೇ ನಿಮಗೆ ನನ್ನನ್ನೇ ನೀಡಿದ್ದೇನೆ
ಎಲುವಿನ ಇಂಚೂ ಬಿಡದಂತೆ ದಹಿಸಿ ಬಿಡಿ !
ಆಟ ಆಡುವವರ ನಡುವೆ ಆತನೂ ಇದ್ದಾನೆ ;
ಹೆಚ್ಚೇನು ಬಿಡಿ ಆಕೆಯೂ ಇದ್ದಾಳೆ !

Thursday, September 18, 2014

ವಚನ-39

ಹುಟ್ಟಿನ ಮೂಲ ಅರಿಯದವ
ತಾಯಿ ಪ್ರೀತಿ ಎಂತು ಅರಿತಾನು ?
ಗುಡಿಸಲ ತಡಿಕೆ ದಾಟಿ
ಮಹಲು ಸೇರಿದವಗೆ ಮೂಲ ನೆನಪಿರಬೇಕಲ್ಲವೆ ?
ಮಾನ ಮರ್ಯಾದೆ ಉಳಿಸಿಕೊಂಡು
ಅಸ್ಮಿತೆಯನ್ನೇ ಕಳೆದುಕೊಂಡವರ  ಏನೆಂಬೆ ?
ಕಾರಣಿಕ ಸಿದ್ಧರಾಮ ವಾಸನೆಗೆ ಕೊಟ್ಟ ಹೂವು
ಹೂಸಿನ ಜಾಗಕ್ಕೆ ಇಟ್ಟುಕೊಳ್ಳುವವರ
ಕಾಸಿನಾಸೆ ಕಂಡು ಕಸಿವಿಸಿಗೊಂಡ !



Sunday, August 31, 2014

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಕೆಡಿಸುವ ಹುನ್ನಾರ !





ದಲಿತರ ವಿಷಯವನ್ನು ಎತ್ತಿಕೊಂಡು ರಾಜ್ಯ ಸರಕಾರವನ್ನು ವಿರೋಧಿಸಿ ಒಂದು ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಮಾಡಿ ಕೆಲವು ಸಮಸ್ಯೆಗಳ ಬಗ್ಗೆ ಸರಕಾರ ತೀವ್ರವಾಗಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಸರಿಯಾದರೂ ಅಲ್ಲಿರುವ ಮುಖಂಡರ ಹೇಳಿಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಸರಿಯಲ್ಲ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ (ದಿನಾಂಕ : 28-08-2014 : ನಮ್ಮ ಮಹಾನಗರ) ಈ ಸುದ್ದಿ ಪ್ರಕಟವಾಗಿದೆ.
‘ಗೋಮಾತೆಯನ್ನು ಪೂಜ್ಯನೀಯವಾಗಿ ಕಾಣುವ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೂ ಕೂಡ ಗೋ ಹತ್ಯೆ ನಿಷೇಧ ಜಾರಿಗೆ ಬಂದಿಲ್ಲ. ಕಾರಣ ರಾಜ್ಯ ಸರಕಾರ ಆದಷ್ಟು ಬೇಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಗೋಹತ್ಯೆ ನಿಷೇಧ'ದ ಬಗ್ಗೆ ಎಲ್ಲಿಯೂ ಹೇಳಿದ ಬಗ್ಗೆ ನಮಗಂತೂ ಗೊತ್ತಿಲ್ಲ. ಪ್ರತಿಭಟನೆ ಮಾಡಿದ ಪಕ್ಷದವರು ಅದನ್ನು ಹೇಳಿದರೆ ನಮಗೆ ಒಂದಿಷ್ಟು ಜ್ಞಾನ ಲಭ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೇಳುವ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ
ಅವಶ್ಯಕತೆಯಿಲ್ಲ ; ಹಾಗೇನಾದರೂ ಮಾಡಿದರೆ ಇತಿಹಾಸವನ್ನು ಮರೆಮಾಚುವ ಮಂದಿಯ ವಿರುದ್ಧ ಕೆಂಡ ಕಾರಲೇ ಬೇಕಾಗುತ್ತದೆ. ಯಾವ ಹಿಂದೂ ಧರ್ಮವನ್ನು ಪ್ರತಿಭಟಿಸಿ, ವಿರೋಧಿಸಿ, ಹೊಸದೊಂದು ಇತಿಹಾಸ ನಿರ್ಮಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು, ಅವರು ಹೇಳದೇ ಇರುವ ಸಂಗತಿಗಳನ್ನು ಅವರ ತಲೆಗೆ ಕಟ್ಟಿ ಅಪಪ್ರಚಾರ ಮಾಡುವ ಉಮೇದಿನಲ್ಲಿ
ಇರುವ ಮಂದಿಯನ್ನು ತಹಬಂದಿಗೆ ತರುವ ಹೋರಾಟ ಇನ್ನಷ್ಟು ತೀವ್ರವಾಗುವ ಅನಿವಾರ್ಯತೆ ಇದೆ.

Wednesday, August 27, 2014

ಮಾತ್ಗವಿತೆ-173

ಕಾಲಕ್ಕೆ ಕಾಯು ಎಂದವರೇ
ಕಾಲನಾಗಿ ಇಲ್ಲವೇ ಕಾಲನಾಗಿ
ಹಣ ಮಾಡುತ್ತ ಹೆಣ ಮಾಡಿದರೆ
ನಾಲಿಗೆ ಕಳೆದುಕೊಂಡ ಮೌನಗಳು
ಮಾತ ಬಾರದೆಂದೆಂದೂ ಎಂದು
ಹರುಷ ಪಡುವ ಅವಶ್ಯಕತೆಯಿಲ್ಲ !
ದೇಹವ ದಂಡಿಸಿದವರ ; ಒಳಗ ಇರಿದವರ
ನೊಸಲ ಮೆಟ್ಟಿ, ರಸಾತಳಕ್ಕೆ ಅಟ್ಟುವಷ್ಟು
ಅಡಿಸಿದ ಅಳಕವಿದೆ ; ಬೆಳಕು ಇದೆ !
ನದಿ ದಾಟಲು ಈಸು ಬರಬೇಕು ಅಂತಲ್ಲ
ನಾವೆ ಇದ್ದರೂ ಸಾಕಲ್ಲವೇ ?

Sunday, June 29, 2014

ವಚನ-38

ಒಮ್ಮೆ ಮಲ ತಿನ್ನುವ ಚಟ ಅಂಟಿಕೊಂಡರೆ ಮುಗೀತು
ನಾಯಿಗೂ ಮಿಗಿಲಾಗಿ ಬಾಲ ಅಲ್ಲಾಡತೊಡಗುತ್ತದೆ
ಬಾಲಕ್ಕೆ ಬೆಂಕಿ ಇಕ್ಕಿದರೆ ಲಂಕೆ ಹಾಳಾಗದು ಇಂದು
ಲಂಕೆಯ ಪಾವಿತ್ರ್ಯ ಹಾಳು ಮಾಡಿದವನಿಗೇ ಪೂಜೆ
ಕಾರಣಿಕ ಸಿದ್ಧರಾಮ ತಲೆ ಅಲ್ಲಾಡಿಸು
ಒಳಗಿನ ಹೇನು ಹೊರ ಹೋಗಲಿ !

Thursday, June 19, 2014

ಮಾತ್ಗವಿತೆ-172

ನಿನ್ನ ಕಣ್ಣಿಗೆ ಸೋತೆ ಎಂದರೆ ತಪ್ಪಾದೀತು
ನಿನ್ನ ಕೆನ್ನೆಗೆ ಸೋತೆ ಎಂದರೂ ತಪ್ಪಾದೀತು
ನಿನ್ನ ತುಟಿಯ ರಂಗಿನ ಗುಂಗು ಎಂದರೂ ತಪ್ಪು !
ನಿನ್ನ ಹಾರುವ ಮುಂಗುರುಳು ;
ಮೊದಲು ಅಂಟುವ ಮೂಗು
ತಣ್ಣಗಿನ ತುಟಿಯಂಚಿನ ನಗು
ಬಂಗಾರದ ಮೊಳೆ ಹೊಡೆದುಕೊಂಡ ಕಿವಿ
ನನ್ನ ಗಾಯಿಸಲಿಲ್ಲ ; ನೋಯಿಸಲಿಲ್ಲ
ಕೂಡಬೇಕು ; ಆಡಬೇಕು ಧಡಪಡಿಸಿ
ಉರಿಯೊಲೆಯ ಎಳ್ಳಾಗಿ ಸಿಡಿಯಬೇಕು
ಮುಗಮ್ಮಾಗಿ ಮೈ ಮರೆಯಬೇಕು
ಆಗ ನನ್ನ ಸೋಲು ; ನಿನ್ನ ಗೆಲುವು !

Tuesday, May 06, 2014

ಮಾತ್ಗವಿತೆ-171

ತಪ್ಪು ಮಾಡಿದವರನ್ನು ಕ್ಷಮಿಸಬಹುದು...
ಮತ್ತೇ ಮತ್ತೇ ತಪ್ಪು ಮಾಡಿದರೆ ?
ಅಯ್ಯೋ ! ನಾನು ಸಾಮಾನ್ಯ ಮನುಷ್ಯ
ಕ್ಷಮಿಸುವವರು ದೇವರಾಗುತ್ತಾರಂತೆ ;
ನಾನು ಕಲ್ಲಾಗಲು ಬಯಸುವುದಿಲ್ಲ !

Friday, March 14, 2014

ಮಾತ್ಗವಿತೆ-170


ನಾನು ನಿನ್ನ ಬಯಸುತ್ತಿದ್ದೇನೆ
ರೂಪ
-ರುಪಾಯಿಗಳ ಪರಿವೆ ಇದ್ದರೆ
ತಿಳಿಸು ; ಮೊದಲೇ ಮಾತಾಡಿದರೆ ಸೊಗಸಲ್ಲವೇ ?
ಸುಳ್ಳು-ಧಿಮಾಕುಗಳ ಜೊತೆಗೆ
ನಾನು ಯಾರೊಂದಿಗೆಯೂ ಸೇರಬಯಸುವುದು ಇಲ್ಲ !
ಕೊರಡು ಕೊನರಬೇಕು ; ಚಿಗುರು ಬೂದಿಯಾಗಬಾರದು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.