Saturday, February 16, 2013

ಕನಕದಾಸರ ಹರಿಭಕ್ತಸಾರ : ವೈಚಾರಿಕ ವಿವೇಚನೆ


                      ಡಾ. ಸಿದ್ರಾಮ ಕಾರಣಿಕ
ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕೀರ್ತನೆಗಳ ಜೊತೆಗೆ ಕೀರ್ತನೇತರ ಹೃದಯಸ್ಪರ್ಷಿ ಸಾಹಿತ್ಯ ಸಂಪತ್ತನ್ನು ಸೃಷ್ಟಿಸಿ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ; ಅನುಪಮವಾದುದು.  ಒಂದು ಕಾಲದಲ್ಲಿ ಊರೊಂದರ ಒಡೆಯನಾಗಿ, ನಾಯಕನಾಗಿ ಬಾಳಿ ಜನಮನ್ನಣೆ ಗಳಿಸಿದ ಕನಕದಾಸರು ದೈಹಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವೇ ಮಿಗಿಲೆಂದು ಭಾವಿಸಿ ದೈವದ ಹುಡುಕಾಟದಲ್ಲಿ ದಾಸರಾದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಸುಮಾರು 1550 ರಲ್ಲಿದ್ದ ಕನಕದಾಸರ ಬಗ್ಗೆ ಹಲವಾರು ದಂತಕತೆಗಳು, ಪವಾಡ ಕತೆಗಳು ಜನಮಾನಸದಲ್ಲಿ ಹುಟ್ಟಿಕೊಂಡಿವೆ.  ಆ ಎಲ್ಲ ಮೂಲಗಳ ಜೊತೆಗೆ ಅವರ ಸಾಹಿತ್ಯದಲ್ಲಿ ದೊರೆತ ಕೆಲವು ಅಂಶಗಳನ್ನು ಇಟ್ಟುಕೊಂಡು ಅವಿಭಾಜಿತ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು ಎಂಬುದನ್ನು ಸಂಶೋಧಕರು ಸಾದರಪಡಿಸಿದ್ದಾರೆ. ಕನಕದಾಸರ ಮೂಲ ಹೆಸರು ತಿಮ್ಮಪ್ಪ (ತಿಮ್ಮಪ್ಪಗೌಡ). ತಂದೆ, ಬೀರಗೌಡ (ಬೀರಪ್ಪ), ತಾಯಿ ಬಚ್ಚಮ್ಮ. ತಂದೆ ಬೀರಪ್ಪ ಊರಗೌಡನೂ ವಿಜಯನಗರ ಅರಸರ ಪಾಳೆಯಗಾರನೂ ಆಗಿದ್ದ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ಕನಕದಾಸರು ಬಾಲಕನಾಗಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಪುರಾಣ-ಶಾಸ್ತ್ರಗಳ ಜೊತೆಗೆ ಯುದ್ಧಕೌಶಲವನ್ನೂ ಕಲೆತ್ತಿದ್ದರು. ಅವರಿಗೆ ಮದುವೆಯಾಗಿ ಒಂದು ಗಂಡುಮಗುವೂ ಇತ್ತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ.  ಹೊಲ ಊಳುವಾಗ ಸಿಕ್ಕ ಏಳು ಕೊಪ್ಪರಿಗೆ ಚಿನ್ನವನ್ನು ಜನೋಪಯೋಗಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ ಕಾರಣ ತಿಮ್ಮಪ್ಪ ನಾಯಕ ಕನಕಪ್ಪ, ಕನಕನಾಯಕ ಎಂಬ ಹೆಸರಿಗೆ ಭಾಜನರಾದರು. ತಂದೆ-ತಾಯಿ, ಹೆಂಡತಿ-ಮಗ ಎಲ್ಲರೂ ತೀರಿಕೊಂಡ ನಂತರದಲ್ಲಿ ವೈರಾಗ್ಯದತ್ತ ವಾಲಿದ ಕನಕದಾಸರು ರಕ್ಕಸತಂಗಡಿ ಕಾಳಗದ ದುಷ್ಪರಿಣಾಮವನ್ನು ಕಣ್ಣಾರೆ ಕಂಡು ಸಂಪೂರ್ಣವಾಗಿ ವೈರಾಗ್ಯ ಹೊಂದಿದರು. ತಮ್ಮ ಕೀರ್ತನೆಗಳ ಮೂಲಕ ನಾಡನ್ನು ಸುತ್ತಿ ಜನಜಾಗರವನ್ನು ಮಾಡುತ್ತ ಕಾಗಿನೆಲೆಯ ಕೇಶವ ದೇವಾಲಯದ ಸಮೀಪ ಬದುಕನ್ನು ಕಳೆದರು ಅಲ್ಲಿ ಕನಕದಾಸರ ಸಮಾಧಿ ಇದೆ. ಕನಕದಾಸರ ಮನೆತನದವರು ಇಂದಿಗೂ ಅಲ್ಲಿ ನೆಲೆಸಿದ್ದಾರೆ.
ಕನಕದಾಸರು, ದಾಸಶ್ರೇಷ್ಟರಾಗಿ ಕೀರ್ತನೆಗಳಲ್ಲದೇ ಮುಂಡಿಗೆಗಳನ್ನೂ ರಚಿಸಿದ್ದಾರೆ. ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ ; ತಾವು ಬರೆದ ಸಾಹಿತ್ಯದಿಂದ ಜನ ಜಾಗೃತಿಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕೃತಿಯಲ್ಲಿಯೂ ಕನಕದಾಸರು ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಅವರ ಭಕ್ತಿಯಿಂದ ಭಜಿಸಿದ ‘ಹರಿಭಕ್ತಿಸಾರ’ ಕೂಡ ಆ ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿಯೇ ಮೂಡಿರುವುದು ಗಮನೀಯ.
ಹರಿಭಕ್ತಿಸಾರವು ಭಾಮಿನಿ ಷಟ್ಪದಿಯಲ್ಲಿದ್ದು 111 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಶತಕ ಗ್ರಂಥ ಎಂದೂ ಕರೆಯಲಾಗಿದೆ. ಶತಕ ಸಾಹಿತ್ಯವನ್ನು ಮುಖ್ಯವಾಗಿ ಯಾವುದಾದರೂ ಒಂದು ತತ್ವವನ್ನೋ ನೀತಿಯನ್ನೋ ಹೇಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ನಿರ್ದಿಷ್ಟವಾದ ಕಥಾವಸ್ತು ಇಲ್ಲದಿದ್ದರೂ ಕವಿಯ ಮನೋಧರ್ಮದ ಸ್ವಾತಂತ್ರ್ಯ ಇರುತ್ತದೆ.
ಹರಿಭಕ್ತಿಸಾರದಲ್ಲಿ ಕನಕದಾಸರು ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರತಿ ಪದ್ಯವೂ ‘ರಕ್ಷಿಸು ನಮ್ಮನನವರತ’ ಎಂಬುದಾಗಿ ಕೊನೆಗೊಳ್ಳುತ್ತದೆ. ತಮಗೊದಗಿದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ಹರಿಭಕ್ತಿಯ ಹಿರಿಮೆ-ಗರಿಮೆಗಳನ್ನು, ಆತ್ಮನ ಅನಿತ್ಯಾಭಾವ ಮತ್ತು ಅನನ್ಯವಾದ ಶರಣಾಗತಿಯನ್ನು ಇಲ್ಲಿಯ ಪದ್ಯಗಳಲ್ಲಿ ಅಳವಟ್ಟಿವೆ. ಸಾಮಾನ್ಯವಾದ ನಿಯಮದಂತೆ ಹರಿಯ ಸ್ತ್ರೋತ್ರ, ರಚನೆಯ ಉದ್ದೇಶ, ಹರಿಯ ಅವತಾರಗಳ ಕಲ್ಪನೆ, ಮನುಷ್ಯನ ನಿಸ್ಸಹಾಯಕತೆ ಮತ್ತು ಕೃತಿವಾಚಕರಿಗೆ, ಶ್ರವಣರಿಗೆ ಸಿಗುವ ಫಲಶೃತಿಗಳನ್ನು ಇಲ್ಲಿಯೂ ನಿರೂಪಿಸಲಾಗಿದೆ. ಹಾಗೆ ನಿರೂಪಿಸುತ್ತಲೇ ವ್ಯಂಗ್ಯ, ಅಣಕಗಳನ್ನೂ ಮಾಡುವ ಮೂಲಕ ವೈಚಾರಿಕ ದೃಷ್ಟಿಕೋನಕ್ಕೆ ಇಲ್ಲಿ ಎಡೆ ದೊರೆತಿದೆ.
ಹರಿಭಕ್ತಿಸಾರದ ಮೊದಲ ಹದಿನೇಳು ಪದ್ಯಗಳು ಹರಿಯ ನೆಲೆ-ನಿಲುವುಗಳನ್ನು ಹೇಳಲಾಗಿದ್ದು, ಕೊನೆಯ ಪದ್ಯವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸಂಸ್ಕøತಭೂಯಿಷ್ಟವಾಗಿವೆ. ಇದು ಕನಕದಾಸರ ಸಂಸ್ಕøತ ಪಾಂಡಿತ್ಯವನ್ನೂ ತೋರಿಸುತ್ತದೆ. ಆನಂತರದಲ್ಲಿ ಸುರಪುರದ ಉಲ್ಲೇಖ ಕೂಡ ಬರುತ್ತದೆ.  ಇದರ ಆಧಾರದ ಮೇಲೆಯೇ ಈ ಕೃತಿ ಕನಕದಾಸರದು ಎಂದು ಸಾಬೀತಾಯಿತು. ಸುರಪುರವನ್ನು ಬಿಟ್ಟರೆ ಎಲ್ಲಿಯೂ ತಮ್ಮ ಹೆಸರನ್ನು, ವೈಯಕ್ತಿಕ ವಿಷಯಗಳನ್ನು ಕನಕದಾಸರು ಹೇಳಿಕೊಂಡಿಲ್ಲ.  ಈ ಸುರಪುರವೇ ವರಪುರ, ಬೇಲೂರು ಎಂದುಕೊಂಡ ವಿದ್ವಾಂಸರು ಕನಕದಾಸರು ಬೇಲೂರಿನಲ್ಲಿಯೇ ಈ ಕೃತಿಯನ್ನು ರಚಿಸಿರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಬೇರೆ ಕಡೆ ಇದ್ದ ಕನಕದಾಸರು ಸುರಪುರ ಚೆನ್ನಿಗರಾಯನ ಪ್ರಭಾವದಿಂದ ಈ ಉಲ್ಲೇಖವನ್ನು  ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ದಶಾವತಾರಗಳನ್ನು ಹೇಳುತ್ತಲೇ ಕೃಷ್ಣಾವತಾರವನ್ನು ಹೇಳಿ, ಭಾರ್ಗವರಾಮ (ಪರಶುರಾಮ), ಹಲಧರರಾಮ (ಬಲರಾಮ) ಮತ್ತು ದಶರಥರಾಮನಾಗಿ ಹರಿಯ ಅವತಾರವಾಗಿದೆ ಎಂದು ಹೇಳಿರುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ಬರುವ ಹಲಧರರಾಮ ದಶಾವತಾರಗಳಲ್ಲಿ ಬರುವುದಿಲ್ಲ. ಹಾಗೆಯೇ ಕೃಷ್ಣವತಾರದಲ್ಲಿ ಕೃಷ್ಣ ಮಾಡಿದ ಕಾರ್ಯಗಳನ್ನು ತಿಳಿದುಕೊಳ್ಳದೇ ಆತನನ್ನು ಭಜಿಸಲರಿಯದ ವಿಷಯಸುಖಿಗಳ ಬಿಟ್ಟು ರಕ್ಷಿಸು ನಮ್ಮನನವರತ ಎಂದಿರುವುದು ಕೂಡ ಸರಿಯೆನಿಸುವುದಿಲ್ಲ. ಎಲ್ಲವನ್ನೂ ಕ್ಷಮಿಸುವನು ಹರಿ ಎಂದು ಒಂದು ಕಡೆ ತಿಳಿಸುವ ಕನಕದಾಸರು ಇಲ್ಲಿ ‘ಕೆಲವರನ್ನು ಬಿಟ್ಟು’ ಎಂದದ್ದು ದ್ವಂದ್ವ ನಿಲುವನ್ನು ಸೂಚಿಸುತ್ತದೆ.
18 ರಿಂದ 23ನೇ ರವರೆಗಿನ ಪದ್ಯಗಳಲ್ಲಿ ಹರಿಭಕ್ತಿಸಾರವನ್ನು ರಚಿಸುವ ಉದ್ದೇಶಕ್ಕೆ ಹರಿಯೇ ಮಾರ್ಗದರ್ಶಕನಾಗಬೇಕು ಎಂಬ ಬೇಡಿಕೆಯಿದೆ. ‘ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದಂ ನಿನ್ನ ನಾಮಾವಳಿ’ ಎಂಬ ಬೇಡಿಕೆಯೊಂದಿಗೆ ‘ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರು ಹಿರಿಯರರಿಯದ ಮೂಢಮತಿ’ ತಾನು ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದಿನ ಪದ್ಯದಲ್ಲಿ ‘ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮಂ ನೀನೆಂದುಸಿರುತಿವೆ ವೇದಗಳು’ ಎಂಬುದನ್ನು ದಾಖಲಿಸಿದ್ದಾರೆ ! ವೇದಗಳು ಗೊತ್ತಿಲ್ಲ ಎಂದು ಒಂದು ಕಡೆ ಹೇಳಿದ್ದರೆ, ವೇದಗಳು ಹೀಗೆ ಉಸಿರುತ್ತಿವೆಯಲ್ಲ ಎಂದು ಅಚ್ಚರಿ ಪಡುವುದು ಸಮಂಜಸವೆನಿಸಲಾರದು.
24 ರಿಂದ 46ನೇ ಪದ್ಯಗಳವರೆಗೆ ಪುರಾಣ ಕತೆಗಳಲ್ಲಿ ನಿರೂಪಿತವಾದ ಹರಿಯ ಮಹಿಮೆಯನ್ನು ಕೊಂಡಾಡಲಾಗಿದೆ. ಆದರೆ ಇಲ್ಲಿಂದ ಮುಂದೆ ಕನಕದಾಸರ ಲೇಖನಿ ಮೊನಚು ಪಡೆಯುತ್ತದೆ. ವಾಸ್ತವದ ವಿಚಾರಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಅವರು ನಿರೂಪಿಸಲು ಮುಂದಾಗಿದ್ದಾರೆ. ಈರೇಳು ಲೀಕದ ಹೆಬ್ಬೆಳೆಸು ಬೆಳೆವಂತೆ ಕಾರಣಿಕನಾದ ಮನ್ಮಥ ಮತ್ತು ಅದನ್ನು ಬರೆಯುತ್ತ ಹೋಗುವ ಕರಣಿಕ ಬ್ರಹ್ಮ ಹರಿಯ ಮಕ್ಕಳು, ಲಕ್ಷ್ಮಿ ಕುಲಸತಿಯಾದರೆ, ಶಾರದೆ ಸೊಸೆ. ಗಿರಿಜೆ ಸಹೋದರಿ, ಶಂಕರ ಮೈದುನ, ಸುರರೆಲ್ಲ ಕಿಂಕರರು, ಮಾಯೆಯೇ ದಾಸಿ - ಹೀಗೆ ಸಂಬಂಧಗಳ ಪರಿಚಯವನ್ನು ನೀಡುತ್ತಲೇ ‘ಉದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲ್ಲಿ ಭಾಗವತರಾದವರ ಸಲಹುವನಾಗಿ ಸಂಚರಿಸುವುದು’ ಎಂದು ತಿಳಿಸಿದ್ದು, ಹರಿಯು ತನ್ನ ಭಕ್ತರು ಅಥವಾ ತನ್ನನ್ನು ಸ್ತುತಿಸುವವರ ಹೊಟ್ಟೆ ಹೊರೆದುಕೊಳ್ಳಲು ಅಡ್ಡಾಡಿಕೊಂಡಿದ್ದಾನೆ ; ಹೊರತು ಆತನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿಲ್ಲ ಎಂಬ ಧ್ವನಿ ಇರುವುದನ್ನು ಗಮನಿಸಬೇಕು.
‘ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ’
ಎನ್ನುವಲ್ಲಿ ಶಿವ ಮತ್ತು ಬ್ರಹ್ಮ ಇಬ್ಬರೂ ¨ವರಗಳನ್ನು ನೀಡಲು ಮಾತ್ರ ಶಕ್ತರು. ವಿನಃ ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲು ಅರಿಯರು. ಆ ಶಕ್ತಿ ಹರಿಗೆ ಮಾತ್ರ ಉಂಟು ಎಂಬ ವ್ಯಾಖ್ಯಾನವಿದೆ. ಇದು ಶೈವ ಮತ್ತು ಬ್ರಹ್ಮ ಸಂಸ್ಕøತಿಯ ವಿರೋಧಿಯಾಗಿ ಬೆಳೆದ ಭಕ್ತಿಯುಗದ ವೈಷ್ಣವ ನಿಲುವನ್ನು ತೋರುತ್ತದೆ. ಹರಿಯನ್ನು ಇಲ್ಲಿ ಶಿವ-ಬ್ರಹ್ಮರಿಗಿಂತ ಮಿಗಿಲು ಎಂದು ಸಾರಲಾಗಿದೆ. ಧರ್ಮದ ಹೆಗ್ಗಳಿಕೆಯನ್ನು ಹೇಳಿಕೊಳ್ಳುವ ಪರಂಪರೆ ಕನಕದಾಸರನ್ನೂ ಬಿಡದಿರುವುದು ವಿಚಿತ್ರವೆನಿಸುತ್ತದೆ.
ಹರಿಯು ನಾನಾ ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದನ್ನೂ ಶಿಷ್ಟ ರಕ್ಷಣೆ ಮಾಡಿದ್ದನ್ನೂ ನಿರೂಪಿಸುವ ಕನಕದಾಸರು ಮಹಾಭಾರತದಲ್ಲಿ ಕೃಷ್ಣನಾಗಿ ಮಾಡಿದ ಕುಟೀಲತನವನ್ನೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಕುಲನಾಶಕನಾಗಿ, ಕರ್ಣನ ಜನ್ಮವೃತ್ತಾಂತ ತಿಳಿದಿದ್ದರೂ ಮುಂದಿಟ್ಟುಕೊಂಡು ಕೊಲ್ಲಿಸಿ, ‘ಕೊಲ್ಲ ಬಗೆದವನಾಗಿ ನೀ ಹಗೆಯಲ್ಲಿ ಸಖ್ಯ ಬೆಳೆಸಲದು ಹಿತವಲ್ಲ’ ಎಂದು ವಿಡಂಬಿಸಿ ಕನಕದಾಸರು ಅಚ್ಚರಿ ಮೂಡಿಸುತ್ತಾರೆ.
‘ಮಗನ ಕೊಂದವನಾಳುವಂತಾ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆ ಬಗೆಯ ರತಿಕಲೆಗಳಲಿ ಕೂ
ರುಗುರು ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ’
ನರಕಾಸುರನನ್ನು ಕೊಂದು ಆತನ ಹದಿನಾರು ಸಾವಿರು ಹೆಂಡಿತಿಯರಿಗೆ ವಿಟನಾಗಿ ಮೆರೆದ ಎಂದು ಇಲ್ಲಿ ಹೇಳಿರುವುದು ಭಕ್ತಿ ಸ್ತುತಿಯ ಪರಾಕಾಷ್ಠತೆ ಎಂದು ಕೆಲವರು ಹೇಳಬಹುದು. ಆದರೆ ವೈಚಾರಿಕ ಬದ್ಧತೆಯುಳ್ಳ ಕನಕದಾಸರು ಇಲ್ಲಿ ಹರಿಯನ್ನು ವ್ಯಂಗ್ಯ ಮಾಡಿರುವಂತೆ ತೋರುತ್ತದೆ.
ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುವ ಕನಕದಾಸರು ರಾಮಾಯಣದಲ್ಲಿ ರಾವಣನನ್ನು ಕೊಂದದ್ದು, ವಿಭೀಷಣನನ್ನು ಮಿತ್ರನಾಗಿಸಿಕೊಂಡಿದ್ದು, ಹನುಮಂತನನ್ನು ಮಗನೆಂದು ಸ್ವೀಕರಿಸಿದ್ದನ್ನು ಉಲ್ಲೇಖಿಸುತ್ತಾರೆ. ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲ;ಎ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಗಮನೀಯವಾದ ಅಂಶವೆಂದರೆ ದೇವತೆಗಳು ಮಾಡಿದ ಹಾದರವನ್ನು ಯಾವುದೇ ಭಿಡೆಯಿಲ್ಲದೇ ಹೇಳಿದ ಪರಿ.
47 ರಿಂದ 101ನೇ ಪದ್ಯಗಳವರೆಗೆ ಮನುಷ್ಯನ ನಿಸ್ಸಹಾಯಕತೆ, ಮನುಷ್ಯ ತಾಯಿಯ ಹೊಟ್ಟೆಯಲ್ಲಿ ಮಾಂಸ-ರಕ್ತಗಳ ಮಧ್ಯ ಇದ್ದು ಇದ್ದು ಹೊರಕ್ಕೆ ಬಂದ ಸ್ಥಿತಿ, ದೇಹದ ನಶ್ವರತೆ, ಭಗವಂತನ ಕರುಣೆ, ಹರಿಯ ಶಕ್ತಿ ಮೊದಲಾದವುಗಳನ್ನೆಲ್ಲ ಹೇಳುತ್ತ ಮನುಷ್ಯನಾದವನು ಬಹಿರ್ ಆಚರಣೆಗೆ ಹೆಚ್ಚು ಮಹತ್ವ ನೀಡದೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.
‘ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡು ... ...’
ಇಲ್ಲಿ ದೈವದ ನೆಲೆಗಳನ್ನು ಮೊದಲಿಗೆ ಹೇಳಿದ್ದು, ಆನಂತರದಲ್ಲಿ ಭಾಗವತರಿಗೆ ವಂದಿಸದಿದ್ದರೆ ಸದ್ಗತಿಯಿಲ್ಲ ಎಂಬ ಮಾತನ್ನು ಹೇಳಿದ್ದು ವಿಚಿತ್ರವೆನಿಸುತ್ತದೆ. ಯಾಕೆಂದರೆ ಎಂಥ ನೀಚ ಕೆಲಸ ಮಾಡಿದವರಿಗೂ ಹರಿ ಸದ್ಗತಿ ನೀಡುತ್ತಾನೆ ಎಂದು ಈ ಮೊದಲು ತಿಳಿಸಿರುವ ಕನಕದಾಸರು ಇಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಬೇಕಾಗುತ್ತದೆ ! ವಿರೋಧ ಮತ್ತು ಶರಣಾಗತಿ ಈ ಎರಡೂ ಪ್ರಕಾರದ ವಿಚಾರಗಳ ದ್ವಂದ್ವ ಇಡೀ ಕೃತಿಯಲ್ಲಿ ಕಂಡುಬರುವ ಅಂಶವಾಗಿದೆ.
‘ದೀನ ನಾನು, ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು’ ಕನಕದಾಸರು,
‘ತರಳತನದಲಿ ಕೆಲವು ದಿನದುರು
ಭರದ ಗರ್ವದಿ ಕೆಲವು ದಿನ ಮೈ
ಮರೆತು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜಕನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ...’
ಎಂಬಲ್ಲಿ ಹರೆಯದಲ್ಲಿ ವಿಷಯಕೇಳಿ, ಪರಸತಿಗೆ ಮನ ಹರಿದ ಪಾಪ, ಪರಧನದ ಆಸೆಬುರುಕತನ ಇವುಗಳಿಂದ ಆವೃತ್ತನಾಗಿ ಹರಿಯನ್ನು ಮರೆತುದ್ದಕ್ಕೆ ಪಶ್ಚಾತ್ತಾಪಪಡುತ್ತಿರುವಂತೆ ಕನಕದಾಸರು ಕಾಣಿಸುತ್ತಾರೆ. ಈ ಪದ್ಯವನ್ನು ಮೂಲ ಆಕರವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಕನಕದಾಸರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ದಾಸರಾಗುವುದಕ್ಕಿಂತ ಮುಂಚಿನ ಕನಕದಾಸರ ಗುಣಾವಗುಣಗಳ ಉಲ್ಲೇಖ ಇಲ್ಲಿ ದೊರೆಯಬಲ್ಲದು. ‘ಮರೆದನಭ್ಯುದಯದಲಿ’ ಎನ್ನುವ ಮೂಲಕ ತಮ್ಮ ಪಶ್ಚಾತ್ತಾಪದ ಉರಿಯನ್ನು ತನ್ನ ದೈವದ ಮುಂದೆ ಬಿತ್ತರಿಸಿ ತನ್ನನ್ನು ಉದ್ದರಿಸಬೇಕು ಎಂದು ಆರ್ತಸ್ವರದಲ್ಲಿ ಅಂಗಲಾಚಿಸಿರುವುದು ಕೂಡ ಇದೇ ಎಳೆಯನ್ನು ತೋರುತ್ತದೆ. ಯಾವುದನ್ನೇ ಮುಚ್ಚಿಡದೆ ತಮ್ಮ ನಿಜವೃತ್ತಾಂತವನ್ನು ಹೇಳಿಕೊಂಡ ಕನಕದಾಸರು ದೈವಿಕತೆ ಮತ್ತು ವಾಸ್ತವಿಕತೆ ಮಹತ್ವ ನೀಡಿದ ಕವಿಯಾಗಿದ್ದಾರೆ.
ಭೂಮಿಯಲ್ಲಿ ನಳ, ಹರಿಶ್ಚಂದ್ರ, ಪುರುಕುತು, ಪ್ರರೂರವಸ, ಸಗರ ಮತ್ತು ಕಾರ್ತವೀರ್ಯ ಎಂಬ ಪ್ರಸಿದ್ಧ ಚಕ್ರವರ್ತಿಗಳಲ್ಲದೆ ಹಿಂದೆ ಎಷ್ಟೋ ಜನರಿದ್ದರೂ ಅವರನ್ನೆಲ್ಲ ಬಿಟ್ಟು ಭೂಮಿ, ಹರಿಯ ಬೆನ್ನು ಹತ್ತಿದ್ದಾಳೆ ಎಂದು ತಿಳಿಸುವ ಕನಕದಾಸರು ವೈಜ್ಞಾನಿಕವಾದ ವಿಚಾರವನ್ನು ಪ್ರತಿಪಾದನೆಗೆ ಯತ್ನಿಸಿದ್ದಾರೆ. ಭೂಮಿ, ಅಗ್ನಿ, ನೀರು, ವಾಯು, ಆಕಾಶಗಳೆಂಬ ಪಂಚಭೂತಗಳಿಂದ ಒಡಗೂಡಿರುವ ದೇಹವು ಪೂರ್ವಸಂಚಿತ ಫಲ ಎನ್ನುವುದು ಸರಿಯಲ್ಲ ಎಂಬುದು ಕನಕದಾಸರ ವಾದವಾಗಿದೆ. ಪಂಚಭೂತಗಳಿಂದ ಕೂಡಿ ಜನ್ಮ ತಳೆಯುವ ದೇಹದ ಹುಟ್ಟಿಗೆ ಹಿಂದಿನ ಜನ್ಮದ ಫಲ ಕಾರಣವಲ್ಲ ಎನ್ನುವ ಮೂಲಕ ವೈದಿಕ ಧರ್ಮದ ಕರ್ಮಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. ಆದರೆ ಹರಿಯನ್ನು ಸ್ತುತಿಸುವಾಗ ಮಾತ್ರ ಮತ್ತೇ ಮತ್ತೇ ಕರ್ಮದ ಪಾಪವ ತೊಳೆದು ಪಾವನ ಮಾಡು ಎಂದು ಅಂಗಲಾಚುತ್ತಾರೆ ! ಯಾಕೆಂದರೆ ‘ಎತ್ತಿದೆನು ನಾನಾ ಶರೀರವ’ ಎನ್ನುವಲ್ಲಿ ಪುನರ್‍ಜನ್ಮದ ಸಿದ್ಧಾಂತದಲ್ಲಿ ಅವರು ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇನ್ನೂ ತಮ್ಮನ್ನು ಕಾಡುತ್ತಿರುವವು ಎಂದು ಹೇಳುವಲ್ಲಿ ದಾಸರಾದರೂ ವಿಷಯಸುಖದೆಡೆಗೆ ಒಮ್ಮೊಮ್ಮೆ ಮನಸ್ಸು ಮುಖ ಮಾಡುವುದನ್ನು ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಕನಕದಾಸರು ಮೊದಲು ಮದುವೆಯಾಗಿ ಮಕ್ಕಳೊಂದಿಗೆ ಬಾಳಿದವರು. ‘ನಿನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಸಿಲುಕುತಡಿಗೆ’ ಎನ್ನುವಲ್ಲಿ ಈ ಬಗ್ಗೆ ಸಾಕ್ಷ್ಯ ದೊರೆಯುತ್ತದೆ. ಸತ್ವ. ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಹರಿ, ಬ್ರಹ್ಮ, ಹರ ಎಂಬ ಮೂರ್ತಿ ಧರಿಸಿ ಸ್ಥಿತಿ, ಸೃಷ್ಟಿ, ಸಂಚಾರ ಕಾರ್ಯವನ್ನು ಮಾಡುತ್ತವೆ. ಪ್ರಳಯ ಕಾಲದಲ್ಲಿ ಈ ಮೂರೂ ಗುಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿಸುವ ಕನಕದಾಸರು ‘ನೀರ ಮೇಲನ ಗುಳ್ಳೆ, ಬಿದ್ದು ಹೋಗುವ ಕಾಯದ ಪಾಶದಲ್ಲಿ ಬದ್ಧನಾಗಬಾರದು’ ಎಂಬುದಾಗಿ ಜೀವನದ ನಶ್ವರತೆಯನ್ನು ಸಾರಿ, ಸಂಸಾರ ಬಂಧನದಲ್ಲಿ ಸಿಲುಕದೆ, ಜನ್ಮದಿಂದ ಜನ್ಮಕ್ಕೆ ಜಿಗಿಯುವ ದೇಹಕ್ಕೆ ಊರು, ಮನೆ, ಮೋಹ ಇರಬಾರದು ಎಂಬುದನ್ನು ಬೋಧಿಸುತ್ತಾರೆ. ತಾಯಿಯ ಗರ್ಭದಿಂದ (ಜರಾಯುಜ), ಮೊಟ್ಟೆಯಿಂದ (ಅಂಡಜ), ಬೆವರಿನಿಂದ (ಸ್ವೇದಜ) ಮತ್ತು ಸಸ್ಯಗಳಿಂದ (ಉಧ್ಭಿಜ್ಯ) ಎಂಬ ನಾಲ್ಕು ಪ್ರಕಾರಗಳಲ್ಲಿ ಹುಟ್ಟುವ ಚೌಷಷ್ಠ (ಅರವತ್ತ್ನಾಲ್ಕು) ಜೀವಿಗಳು ಹರಿಯ ಪ್ರೇರಣೆಯಿಂದಲೇ ಹಲವು ರೀತಿಯ ಒಳಭೇದಗಳಿಂದ ತೊಗಲು ಬೊಂಬೆಗಳಂತೆ ವರ್ತಿಸುತ್ತವೆ. ಇಲ್ಲಿ ಹರಿಯೇ ಸೂತ್ರಧಾರ ಎನ್ನುವುದನ್ನು ಕನಕದಾಸರು ಹರಿಯ ಶ್ರೇಷ್ಟತ್ವವನ್ನು ಮನಗಾಣಿಸಲು ಪ್ರಯತ್ನಿಸಿದ್ದಾರೆ.
ಮೃತ್ಯು ತನ್ನ ಬೆನ್ನ ಹಿಂದೆಯೇ ಇರುತ್ತದೆ. ಜೊತೆಗೆ ಸತ್ತ ಮೇಲೆ ಯಾರೂ ಜೊತೆಗೆ ಬರುವುದಿಲ್ಲ ಎಂಬ ದೇಹದ ನಶ್ವರತೆಯನ್ನು ಪ್ರತಿಪಾದಿಸುವ ಕನಕದಾಸರು ಜನನ-ಮರಣದ ನಿಜ ಅರ್ಥವನ್ನು ತಿಳಿದು ಬದುಕಬೇಕು ಎಂದಿರುವುದಲ್ಲದೆ ‘ಹುಟ್ಟು ಸಾವಿನ ಮಧ್ಯ ತಾ ನಿಪುಣನೆಂಬುವದು ನಗೆಗೀಡು’ ಎಂಬ ಸತ್ಯವನ್ನು ಹೇಳುತ್ತಾರೆ.
ಬದುಕನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಸಾಮಾಜಿಕ ತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತಾರೆ.
‘ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಆಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ’
ಎನ್ನುವಲ್ಲಿ ಹೊಲೆಯೆಂದು ಪಂಚೆಯನ್ನೆತ್ತಿಕೊಂಡು ಪಕ್ಕಕ್ಕೆ ನೆಗೆಯುವ, ಮಡಿ ಮಡಿಯೆಂದು ಅಡಿಗಡಿಗೆ ಹಾರುವ ಮಂದಿಯ ಬಗ್ಗೆ ಮಾರ್ಮಿಕವಾದ ಮಾತಿದೆ. ಯಾರೂ ಮೇಲಲ್ಲ ; ಯಾರೂ ಕೀಳಲ್ಲ. ಹೊಲೆ ಹೊಲೆ ಎಂದು ಹಾರುವವರು ಕೀಳಾದ ಕಾರ್ಯ ಮಾಡಿ ಮೂಗನ್ನು ಹಿಡಿದು ನೀರಲ್ಲಿ ಮುಳುಗು ಹಾಕಿದಾಕ್ಷಣ ಮಾಡಿದ ಹೊಲೆಗೆಲಸ ಹೋಗಿ ಬಿಡುವುದಿಲ್ಲ. ಹುಟ್ಟಿನ ಹೊಲೆತನಕ್ಕಿಂತ ಉತ್ತಮರು ಎಂದುಕೊಂಡು ಹೊಲಸು ಕೆಲಸ ಮಾಡುವುದು ಕೆಟ್ಟದ್ದು ; ಹೇಯವಾದದ್ದು ಎಂದು ಕನಕದಾಸರು ತಿಳಿ ಹೇಳಿದ್ದಾರೆ. ತಾರತಮ್ಯ ನೀತಿಯನ್ನು ಖಂಡಿಸುವ ಕನಕದಾಸರು, ಪಾಂಡಿತ್ಯದಿಂದ ಪಾಪವನ್ನು ಕಳೆಯಲಾಗದು ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಅಹಂಕಾರಿಗಳು, ಸರಿಯಾದ ನಡೆಯನ್ನು ಹೊಂದದವರು ‘ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ?’ ಎಂದು ಪ್ರಶ್ನಿಸುತ್ತಾರೆ.
ಮಡಿ ಮಡಿ ಎಂದುಕೊಂಡು ನಿತ್ಯವೂ ದೇಹವನ್ನು ತೊಳೆದುಕೊಳ್ಳುವವರು ಮತ್ತು ಎಂಜಲು ಸಲ್ಲುವುದಿಲ್ಲ ಎಂದು ವ್ಯಾಖ್ಯಾನ ಮಾಡುವವರಿಗೂ ಕನಕದಾಸರು ವಾಸ್ತವವನ್ನು ಮನಗಾಣಿಸಿದ್ದಾರೆ. ಎಂಜಲು ಎಂಬುವವರ ನುಡಿಯೇ ಎಂಜಲು ಎನ್ನುವ ಅವರು, ನೀರು, ಅದರೊಳಗಿನ ಪ್ರಾಣಿಗಳ ಎಂಜಲು, ಹಾಲು ಕವರುವಿನ ಎಂಜಲು ! ವಿಚಾರ ಮಾಡಿದರೆ ಎಂಜಲಲ್ಲದ್ದು ಯಾವುದೂ ಇಲ್ಲ ; ನಮಗಾಗಿಯೇ ಮಾತ್ರ ಸೃಷ್ಟಿಯಾದದ್ದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ. ವೈದಿಕ ಸಾಮಾಜಿಕ ವಾತಾವರಣದಿಂದ ನಿರಂತರ ನೋವು ಉಂಡ ಅವರು ಇಂಥ ಡಂಭಾಚಾರಗಳನ್ನು ಕಂಡು ಸಿಡಿದೇಳುತ್ತಾರೆ ; ಪ್ರತಿಭಟಿಸುತ್ತಾರೆ ಮತ್ತು ಖಂಡಿಸುತ್ತಾರೆ. ತಮ್ಮ ದೈವದ ಮೂಲಕ ಹೊಸ ಬದುಕನ್ನು ಹಾರೈಸುತ್ತಾರೆ.
102 ರಿಂದ 108ನೇ ಪದ್ಯಗಳವರೆಗೆ ಕನಕದಾಸರು ಹರಿಭಕ್ತಿಸಾರವನ್ನು ಕೇಳಿದವರಿಗೆ ಆಗುವ ಫಲಶೃತಿಯನ್ನು ವಿವರಿಸಿದ್ದಾರೆ. ಪ್ರತಿ ಪುರಾಣ ಕಾವ್ಯಗಳ ಕೊನೆಯಲ್ಲಿ ಬರುವ ಫಲಶೃತಿ ಸಂಪ್ರದಾಯದ ಛಾಪು ಕನಕದಾಸರಲ್ಲೂ ಕಂಡುಬರುತ್ತದೆ. ಇಂಥಲ್ಲಿ ತಮ್ಮ ದೈವವನ್ನು ಪಾರಮ್ಯಕ್ಕೇರಿಸುವ ಗುರಿ ಮಾತ್ರ ಇರುತ್ತದೆ. ಮುಂದಿನ 109 ರಿಂದ 111ನೇ ಪದ್ಯಗಳಲ್ಲಿ ಮಂಗಲವನ್ನು ಹಾಡಲಾಗಿದೆ. ಇಲ್ಲಿ ಕೂಡ ಹರಿನಾಮಸ್ಮರಣೆಯೇ ಪ್ರಮುಖವಾಗಿದೆ. ಕೆಲ ವಿದ್ವಾಂಸರು ಈ ಮೂರು ಪದ್ಯಗಳನ್ನು ಬಿಟ್ಟು 108ನೇ ಪದ್ಯಗಳವರೆಗೆ ಮಾತ್ರ ಕೃತಿಯನ್ನು ಪರಿಗಣಿಸಿದ್ದಾರೆ.
ಒಟ್ಟಿನಲ್ಲಿ ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.


*****

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.