Tuesday, January 31, 2012

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು ?


ದಿನೇಶ್ ಅಮೀನ್ ಮಟ್ಟು
`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ.

ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ...`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಆ ಘಟನೆ ನಡೆದ ನಂತರ 1948ರ ಜನವರಿ 21ರಂದು ದೆಹಲಿಯ ಬಿರ್ಲಾ ಭವನದಲ್ಲಿಯೇ ಗಾಂಧೀಜಿ ಹತ್ಯೆಗೆ ಮತ್ತೊಂದು ಪ್ರಯತ್ನ ನಡೆದಿತ್ತು. ಅದರಿಂದಲೂ ಅವರು ಪಾರಾಗಿದ್ದರು. ಕೊನೆಗೆ 1948ರ ಜನವರಿ 30ರಂದು ಅವರು ಸಾವಿಗೆ ಶರಣಾದರು.

ಪ್ರಾಣದ ಆಸೆ ಇಲ್ಲದ ಕೊಲೆಗಡುಕ, ಕೊಲೆ ಮಾಡುವುದನ್ನು ತಡೆಯುವುದು ಎಷ್ಟು ಕಷ್ಟವೋ, ಪ್ರಾಣದ ಆಸೆ ಇಲ್ಲದ ವ್ಯಕ್ತಿಯನ್ನು ಕೊಲೆಗಡುಕನಿಂದ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಗಾಂಧೀಜಿ ಹತ್ಯೆ ನಡೆಯುವ ಹೊತ್ತಿಗೆ ಕೊಲೆಗಡುಕ ನಾಥುರಾಮ್ ಗೋಡ್ಸೆ ಮಾತ್ರವಲ್ಲ, ಕೊಲೆಯಾಗಿದ್ದ ಗಾಂಧೀಜಿ ಕೂಡಾ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು.


ಅವರ ಹತ್ಯೆಯ ದಿನವೇ ತನ್ನೆರಡು `ಊರುಗೋಲು`ಗಳಾದ ಆಭಾ ಮತ್ತು ಮನು ಜತೆ ಮಾತನಾಡುತ್ತಾ ಒಂದಲ್ಲ ಎರಡು ಬಾರಿ ತನ್ನ ಸಾವಿನ ಬಗ್ಗೆ ಗಾಂಧೀಜಿ ಮಾತನಾಡಿದ್ದರು. ತಾನು ನಂಬಿದವರೇ ತನ್ನ ಜತೆ ಇಲ್ಲವೇನೋ ಎಂಬ ಅನಾಥಪ್ರಜ್ಞೆಯೇ ಅವರಿಂದ ಈ ಮಾತುಗಳನ್ನು ಆಡಿಸಿತ್ತೋ ಏನೋ? ಹಿಂದೆ ಏಳು ಬಾರಿ ಅವರ ಹತ್ಯೆಗೆ ಪ್ರಯತ್ನ ನಡೆದಾಗ ಭಾರತೀಯರು ಶತ್ರುಗಳೆಂದು ತಿಳಿದುಕೊಂಡಿದ್ದ ಬ್ರಿಟಿಷರು ಅಧಿಕಾರದಲ್ಲಿದ್ದರು. ಹಾಗಿದ್ದರೂ ಆ ಪ್ರಯತ್ನಗಳು ವಿಫಲವಾಗಿದ್ದವು.

ಆದರೆ ಅವರ ಹತ್ಯೆ ನಡೆದಾಗ ಅವರ ಶಿಷ್ಯೋತ್ತಮರೇ ಅಧಿಕಾರದಲ್ಲಿದ್ದರು. ಅವರಿಗೂ ಬಾಪುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶಿಷ್ಯಂದಿರ ವರ್ತನೆಯ ಸುಳಿವು ಸಿಕ್ಕಿಯೇ ಗಾಂಧೀಜಿ ಬದುಕುವ ಆಸೆ ಕಳೆದುಕೊಂಡಿದ್ದರೇ?

ಗಾಂಧೀಜಿ ಹತ್ಯೆ ಮುಗಿದ ಅಧ್ಯಾಯ ಎಂದೇ ಹೆಚ್ಚಿನವರು ನಂಬಿದ್ದಾರೆ. ಕೊಲೆಗಡುಕರು ಯಾರೆಂದು ಗೊತ್ತಾಗಿದೆ, ಅವರಿಗೆ ಶಿಕ್ಷೆಯೂ ಆಗಿದೆ, ಇನ್ನೇನು ಎಂದು ಕೇಳುವವರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ವಿಚಾರವಷ್ಟೇ ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿತ್ತೇ? ಇಲ್ಲವೇ ಬೇರೆ ಕಾರಣಗಳೂ ಇದ್ದವೇ? ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವುದಿಲ್ಲ.

ಹತ್ಯೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಗೊತ್ತಿದ್ದರೂ ಗಾಂಧೀಜಿಯವರನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ನ್ಯಾಯಾಲಯದಲ್ಲಿನ ವಿಚಾರಣೆಯ ದಾಖಲೆಗಳು ಹಾಗೂ ಕೊಲೆಗಾರರಿಗೆ ಶಿಕ್ಷೆಯಾದ ನಂತರ ಎದ್ದ ವಿವಾದದಿಂದಾಗಿ ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ ಕಪೂರ್ ಆಯೋಗದ ವರದಿಗಳ ಪುಟಗಳನ್ನು ತಿರುವಿಹಾಕಿದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ಹೊರತು ಉತ್ತರ ಸಿಗುವುದಿಲ್ಲ.

ಗಾಂಧೀಜಿ ಹತ್ಯೆಗೆ ನಡೆದ ಐದು ಪ್ರಯತ್ನಗಳನ್ನು ದೃಢೀಕರಿಸುವ ದಾಖಲೆಗಳು ಲಭ್ಯ ಇವೆ. ಈ ಐದೂ ಪ್ರಯತ್ನಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿದ್ದ ಉಲ್ಲೇಖಗಳಿವೆ.

ಈ ಕಾರಣದಿಂದಾಗಿಯೇ ಪೊಲೀಸರು ಆತನನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದು 1934ರ ಜೂನ್ 25ರಂದು ಪುಣೆಯಲ್ಲಿ. `ಹರಿಜನ ಯಾತ್ರೆ`ಯಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಅಲ್ಲಿಗೆ ಹೋಗಿದ್ದರು. ಅಲ್ಲಿ ದುಷ್ಕರ್ಮಿಗಳು ಎಸೆದ ಬಾಂಬು ಗಾಂಧಿ ವಿರೋಧಿ ಅಣ್ಣಾಸಾಹೇಬ್ ಬೋಪಟ್ಕರ್ ಕಾರು ಮೇಲೆ ಬಿದ್ದ ಕಾರಣ ಗಾಂಧೀಜಿ ಪಾರಾಗಿದ್ದರು.

ಈ ಪ್ರಕರಣದ ಆರೋಪಿಗಳ್ಯಾರು ಎನ್ನುವ ಬಗ್ಗೆ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ. ಅಲ್ಲೆಲ್ಲೂ ಗೋಡ್ಸೆ ಹೆಸರು ಬರುವುದಿಲ್ಲ. ಆದರೆ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಎರಡು ಸಂಪುಟಗಳಲ್ಲಿ ಬರೆದಿರುವ ಪ್ಯಾರೇಲಾಲ್ ಅವರು ಗಾಂಧೀಜಿ ಹತ್ಯೆಯ ಮೊದಲ ಪ್ರಯತ್ನದ ಬಗ್ಗೆ ಬರೆಯುತ್ತಾ `ಈ ಪ್ರಯತ್ನದಲ್ಲಿ ಭಾಗಿಯಾಗಿದ್ದವರೇ 1948ರಲ್ಲಿ ಗಲಭೆಗ್ರಸ್ತ ದೆಹಲಿಯಲ್ಲಿ ಶಾಂತಿಪಾಲನೆಗಾಗಿ ಹೋರಾಡುತ್ತಿದ್ದ ಗಾಂಧೀಜಿಯವರ ಕೊಲೆಗೈದರು` ಎಂದು ಹೇಳಿದ್ದಾರೆ.

`ಗಾಂಧೀಜಿ ಮುಸ್ಲಿಮ್ ಪಕ್ಷಪಾತಿಯಾಗಿದ್ದರು, ಭಾರತದ ವಿಭಜನೆಗೆ ಕಾರಣರಾಗಿದ್ದರು. ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದ್ದರು. ಇದನ್ನು ಕಂಡು ಕ್ರುದ್ಧರಾದ ಹಿಂದೂ ಮಹಾಸಭಾಕ್ಕೆ ಸೇರಿದ್ದ ಗೋಡ್ಸೆ ಮತ್ತು ಆಪ್ಟೆ ಗಾಂಧೀಜಿಯವರ ಹತ್ಯೆಗೆ ಮುಂದಾದರು` ಎನ್ನುವ ಸಾಮಾನ್ಯ ಅಭಿಪ್ರಾಯ ಜನಜನಿತವಾಗಿದೆ. ಅಪರಾಧಿಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳು ಮತ್ತು ನ್ಯಾಯಾಲಯದ ತೀರ್ಪು ಕೂಡಾ ಇದನ್ನೇ ಹೇಳುತ್ತವೆ.

ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದಾಗ ಭಾರತದ ವಿಭಜನೆ ಆಗಿರಲಿಲ್ಲ, ಮುಸ್ಲಿಮ್ ಪಕ್ಷಪಾತಿ ಎಂಬ ಆರೋಪ ಕೂಡಾ ಅವರ ಮೇಲೆ ಇರಲಿಲ್ಲ. ಆಗಿನ್ನೂ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಅನಿಷ್ಟವಾದ ಅಸ್ಪೃಶ್ಯತೆ ಮತ್ತು ಕಂದಾಚಾರಗಳ ವಿರುದ್ಧ ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹರಿಜನರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕೆಂದು ಚಳವಳಿ ಪ್ರಾರಂಭಿಸಿದ್ದರು.

ಗಾಂಧೀಜಿಯವರ ಈ ವಿಚಾರಗಳೇ ಅವರ ವಿರೋಧಿಗಳ ಸಿಟ್ಟಿಗೆ ಕಾರಣವಾಗಿತ್ತೇ?
ಗಾಂಧಿ ಹತ್ಯೆಯ ಎರಡನೇ ಪ್ರಯತ್ನ ಮಹಾರಾಷ್ಟ್ರದ ಪಂಚಗಣಿಯಲ್ಲಿ 1944ರ ಜುಲೈ ತಿಂಗಳಲ್ಲಿ ನಡೆದಿತ್ತು.

ಮಲೇರಿಯಾ ಪೀಡಿತರಾಗಿದ್ದ ಗಾಂಧೀಜಿ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಹೋಗಿ ಪ್ರತಿಭಟನೆ ನಡೆಸಿದ್ದ. ಆತನನ್ನು ಮಾತುಕತೆಗೆ ಗಾಂಧೀಜಿ ಕರೆದಾಗ ಹೋಗದ ಗೋಡ್ಸೆ ಪ್ರಾರ್ಥನೆಯ ಸಮಯದಲ್ಲಿ ಕೈಯಲ್ಲಿ ಕಠಾರಿ ಝಳಪಿಸುತ್ತಾ ಗಾಂಧೀಜಿ ಕಡೆ ನುಗ್ಗಿದ್ದ.

ಆಗ ಗಾಂಧಿ ಅನುಯಾಯಿಗಳು ಆತನನ್ನು ತಡೆದು ಹೊರಗೆ ಒಯ್ದಿದ್ದರು. `ಕೊಲೆ ಮಾಡಲು ಬಂದವನು ನಾಥುರಾಮ್ ಗೋಡ್ಸೆ` ಎಂದು ಆತನ ಯತ್ನವನ್ನು ವಿಫಲಗೊಳಿಸಿದ್ದ ಅಲ್ಲಿನ ವಿಶ್ರಾಂತಿಗೃಹದ ಮಾಲೀಕ ಮಣಿಶಂಕರ್ ಪುರೋಹಿತ್ ಮತ್ತು ಸತಾರದ ಡಿ.ಬಿಲಾರೆ ಗುರೂಜಿ ಅವರು ಕಪೂರ್ ಆಯೋಗದ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ಮೂರನೇ ಪ್ರಯತ್ನ 1944ರ ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಯ ಮೊದಲು, ಸೇವಾಗ್ರಾಮದಲ್ಲಿಯೇ ನಡೆದಿತ್ತು. ಆ ಮಾತುಕತೆಗೆ ಹೋಗದಂತೆ ತಡೆಯಲು ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಗಾಂಧೀಜಿ ಉಳಿದುಕೊಂಡಿದ್ದ ಸೇವಾಗ್ರಾಮಕ್ಕೆ ಹೋಗಿದ್ದ. ಗಾಂಧೀಜಿ ಕಡೆ ನುಗ್ಗಿ ಬರುತ್ತಿದ್ದ ಗೋಡ್ಸೆಯನ್ನು ಆಶ್ರಮವಾಸಿಗಳು ತಡೆದು ನಿಲ್ಲಿಸಿದ್ದರು.

ಪೊಲೀಸರು ಬಂದು ತಪಾಸಣೆ ಮಾಡಿದಾಗ ಆತನ ಅಂಗಿಯ ಕಿಸೆಯಲ್ಲಿ ಕಠಾರಿ ಇದ್ದದ್ದು ಗೊತ್ತಾಗಿತ್ತು. ರೈಲು ಅಪಘಾತದ ಮೂಲಕ ಗಾಂಧೀಜಿಯವರನ್ನು ಕೊಲ್ಲುವ ನಾಲ್ಕನೇ ಪ್ರಯತ್ನ ಪುಣೆಯಲ್ಲಿಯೇ 1946ರ ಜೂನ್ 29ರಂದು ನಡೆದಿತ್ತು.ಗಾಂಧೀಜಿಯವರು ಪ್ರಯಾಣಿಸುತ್ತಿದ್ದ `ಗಾಂಧೀ ವಿಶೇಷ` ಎನ್ನುವ ಹೆಸರಿನ ರೈಲು ಪುಣೆಗೆ ಹೋಗುತ್ತಿರುವಾಗ ಹಳಿಗಳ ಮೇಲೆ ಕಲ್ಲುಬಂಡೆಗಳನ್ನು ಇಟ್ಟು ಅಪಘಾತ ನಡೆಸುವ ಪ್ರಯತ್ನ ನಡೆಸಲಾಗಿತ್ತು.

ಆದರೆ ರೈಲಿನ ಚಾಲಕ ವಹಿಸಿದ್ದ ಎಚ್ಚರಿಕೆಯಿಂದಾಗಿ ಆ ಅಪಘಾತ ನಡೆಯಲಿಲ್ಲ. ಈ ಘಟನೆ ನಡೆದ ಮರುದಿನವೇ ಗಾಂಧೀಜಿ ಪುಣೆಯಲ್ಲಿ ನಡೆದ ಸಭೆಯಲ್ಲಿ `ನಾನು 125 ವರ್ಷ ಬದುಕುತ್ತೇನೆ...`ಎಂದು ಹೇಳಿದ್ದು. ಅದನ್ನು ಕೇಳಿ ಆ ಸಭೆಯಲ್ಲಿದ್ದ ನಾಥುರಾಮ್ ಗೋಡ್ಸೆ `ಅಷ್ಟುದಿನ ನಿಮ್ಮನ್ನು ಬದುಕಲು ಯಾರು ಬಿಡುತ್ತಾರೆ` ಎಂದು ಪ್ರತಿಕ್ರಿಯಿಸಿದ್ದನ್ನು ಆತನ ಜತೆಯಲ್ಲಿದ್ದವರು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆಯ ಕೊನೆಯ ಪ್ರಯತ್ನ ವಿಫಲಗೊಂಡದ್ದು 1948ರ ಜನವರಿ 20ರಂದು. ತಾವು ನಂಬಿದ್ದ `ಗುರುಹಿರಿಯರ` ಆಶೀರ್ವಾದದೊಂದಿಗೆ ಸರ್ವಸನ್ನದ್ಧರಾಗಿ ದೆಹಲಿಗೆ ಬಂದಿದ್ದ ನಾಥೂರಾಮ್ ಗೋಡ್ಸೆ ಮತ್ತು ಸಂಗಾತಿಗಳು, ಸಂಜೆ ಹೊತ್ತಿಗೆ ಬಿರ್ಲಾ ಭವನದೊಳಗೆ ಸೇರಿಕೊಂಡಿದ್ದರು. ಮೊದಲು ಮದನ್‌ಲಾಲ್ ಪಹವಾ ಗಾಂಧೀಜಿ ಪ್ರಾರ್ಥನೆ ಮಾಡುವ ಸ್ಥಳದ ಹಿಂದಿನ ಗೋಡೆಯಲ್ಲಿ ಬಾಂಬು ಇಟ್ಟು ಸ್ಫೋಟಿಸಬೇಕು.

ಅದಾದ ಕೂಡಲೇ ಗೋಡ್ಸೆ ಮತ್ತು ವಿಷ್ಣು ಕರಕರೆ ಗ್ರೆನೇಡ್ ಎಸೆಯಬೇಕು. ಅಂತಿಮವಾಗಿ ದಿಗಂಬರ ಬಡ್ಗೆ ಗಾಂಧೀಜಿಯವರ ಕಡೆ ರಿವಾಲ್ವರ್‌ನಿಂದ ಗುಂಡುಹಾರಿಸಬೇಕು-ಇದು ಮೂಲ ಯೋಜನೆ. ಆದರೆ ಬಾಂಬು ಸ್ಫೋಟವಾದ ಕೂಡಲೇ ಪೊಲೀಸರು ಮದನ್‌ಲಾಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ನೋಡಿದ ಕೂಡಲೇ ಉಳಿದವರು ಅಲ್ಲಿಂದ ಪಲಾಯನಗೈದರು.

ಮದನ್‌ಲಾಲನನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಅವಧಿಯಲ್ಲಿ ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನೆಲ್ಲ ಸಂಗ್ರಹಿಸಿದ್ದರು. ಪಂಜಾಬಿ ನಿರಾಶ್ರಿತ ಮದನ್‌ಲಾಲ್‌ಗೆ ಆಶ್ರಯ ನೀಡಿ ಸಾಕಿದ್ದವರು ಮಹಾರಾಷ್ಟ್ರದ ಪ್ರೊ.ಜಗದೀಶ್‌ಚಂದ್ರ ಜೈನ್ ಎಂಬ ಪ್ರಾಧ್ಯಾಪಕರು.

ತಾನು ಗಾಂಧಿ ಹತ್ಯೆಯ ಸಂಚಿನಲ್ಲಿ ಸೇರಿಕೊಂಡದ್ದನ್ನು ಆತ ಪ್ರೊ.ಜೈನ್ ಅವರಿಗೂ ತಿಳಿಸಿದ್ದ. ಮದನ್‌ಲಾಲ್ ಬಂಧನದ ಸುದ್ದಿ ಪತ್ರಿಕೆಯಲ್ಲಿ ಓದಿದ ಕೂಡಲೇ ಜಾಗೃತರಾದ ಪ್ರೊ.ಜೈನ್ ಆಗ ಮಹಾರಾಷ್ಟ್ರದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಸಂಚಿನ ವಿವರ ತಿಳಿಸಿದ್ದರು.

ಆ ಮಾತುಕತೆಯಲ್ಲಿ ವಿ.ಡಿ.ಸಾವರ್ಕರ್ ಮತ್ತು `ಕರ್ಕರೆ ಸೇಠ್` ಜತೆ ಮದನ್‌ಲಾಲ್ ಹೊಂದಿದ್ದ ಸಂಪರ್ಕವನ್ನು ಕೂಡಾ ಅವರು ಒತ್ತಿ ಹೇಳಿದ್ದರು. `ದಕ್ಷತೆಗೆ ಹೆಸರಾಗಿದ್ದ ಮತ್ತು ಗಾಂಧಿವಾದಿಯಾಗಿದ್ದ ಮೊರಾರ್ಜಿ ದೇಸಾಯಿ ವರ್ತನೆ ಆಶ್ಚರ್ಯಕರವಾಗಿತ್ತು. ಪ್ರೊ.ಜೈನ್ ಹೇಳಿದ್ದನ್ನು ಅವರು ದಾಖಲಿಸಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಚರ್ಚಿಸಿರಲಿಲ್ಲ. ಪ್ರೊ.ಜೈನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲು ಪೊಲೀಸರಿಗೆ ತಿಳಿಸಬಹುದಿತ್ತು.

ಅದನ್ನೂ ಮಾಡಿರಲಿಲ್ಲ. ಅಹಮದಾಬಾದ್‌ಗೆ ಹೊರಟಿದ್ದ ಅವರು ರೈಲ್ವೆ ನಿಲ್ದಾಣಕ್ಕೆ ಡಿಸಿಪಿ ನಗರ್‌ವಾಲಾ ಅವರನ್ನು ಕರೆಸಿ ವಿಷಯವನ್ನಷ್ಟೇ ತಿಳಿಸಿದ್ದರು` ಎಂದು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ `ಲೆಟ್ ಅಸ್ ಕಿಲ್ ಗಾಂಧಿ` ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಮೊರಾರ್ಜಿ ಅವರಿಂದ ವಿಷಯ ತಿಳಿದುಕೊಂಡ ಡಿಸಿಪಿ ನಗರ್‌ವಾಲ್ ತನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಹೇಳುತ್ತಲೇ ಇದ್ದರೂ ಅದನ್ನು ಕೊನೆಗೂ ಬಹಿರಂಗಪಡಿಸಿದ್ದು ಗಾಂಧಿ ಹತ್ಯೆಯಾದ ಹನ್ನೆರಡು ಗಂಟೆಗಳ ನಂತರ. ಜನವರಿ 20ರಿಂದ 30ರ ವರೆಗಿನ ಹತ್ತು ದಿನಗಳ ಅವಧಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ಸಂಗಾತಿಗಳು ದೆಹಲಿ-ಮುಂಬೈ ನಡುವೆ ನಿರಾತಂಕವಾಗಿ ಓಡಾಡುತ್ತಾ ಗಾಂಧಿ ಹತ್ಯೆಯ ಕೊನೆಯ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದರು.

ಆಗ ಕೇಂದ್ರದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳ ಆಡಳಿತ ಗಾಂಧೀಜಿ ಅನುಯಾಯಿಗಳ ಕೈಯಲ್ಲಿಯೇ ಇತ್ತು. ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು `ಉಕ್ಕಿನ ಮನುಷ್ಯ` ಸರ್ದಾರ್ ವಲ್ಲಭಭಾಯಿ ಪಟೇಲ್. ಸಂಚು ರೂಪುಗೊಂಡ ಮಹಾರಾಷ್ಟ್ರದಲ್ಲಿ ಗೃಹಸಚಿವರಾಗಿದ್ದವರು ಮೊರಾರ್ಜಿ ದೇಸಾಯಿ. ಪ್ರಧಾನಿಯಾಗಿದ್ದವರು ಗಾಂಧೀಜಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜವಾಹರಲಾಲ್ ನೆಹರೂ.
ದೆಹಲಿ ಪೊಲೀಸರು ಮದನ್‌ಲಾಲ್ ನೀಡಿದ ಮಾಹಿತಿ ಆಧರಿಸಿ ಸಂಚುಕೋರರು ತಂಗಿದ್ದ ಹೊಟೇಲ್ ಕೋಣೆ ಜಾಲಾಡಿಸಿದ್ದರು.

ಅಲ್ಲಿ ಹಿಂದೂ ಮಹಾಸಭಾದ ಲೆಟರ್‌ಹೆಡ್ ಸಿಕ್ಕಿದ್ದರೂ ಆ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ವಿಚಾರಿಸಿರಲಿಲ್ಲ. ಕಪೂರ್ ಆಯೋಗದ ಮುಂದೆ ಮಹಾಸಭಾದ ಪದಾಧಿಕಾರಿ ಅಶೋಕ್ ಲಾಹಿರಿಯವರೇ ಇದನ್ನು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಮದನ್‌ಲಾಲ್ ಪ್ರಮುಖವಾಗಿ `ಅಗ್ರಾಣಿ` ಮತ್ತು `ಹಿಂದೂ ರಾಷ್ಟ್ರ` ಎನ್ನುವ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರ ಬಗ್ಗೆ ತಿಳಿಸಿದ್ದ.

ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಪೊಲೀಸರು ಹತ್ತು ದಿನಗಳ ಅವಧಿಯಲ್ಲಿ ಮಾಡಿರಲಿಲ್ಲ. ಕನಿಷ್ಠ ಆ ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಗಾಂಧಿ ಹತ್ಯೆಯ ಸಂಚನ್ನು ಭಗ್ನಗೊಳಿಸಬಹುದಿತ್ತು. ಯಾಕೆಂದರೆ ಆ ಸಂಪಾದಕರು ಮತ್ತು ಪ್ರಕಾಶಕರ ಹೆಸರು- ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಗಾಂಧೀಜಿಯವರನ್ನು ಕೇವಲ ನಾಥುರಾಮ್ ಗೋಡ್ಸೆ ಕೊಂದದ್ದು ಎಂದು ಹೇಗೆ ಹೇಳುವುದು?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.