Thursday, January 26, 2012

ಅಣ್ಣಾ ಹಝಾರೆ ಹಿಟ್ಲರ್ ಆಗುತ್ತಿಲ್ಲ ತಾನೆ ?

ಭ್ರಷ್ಟಾಚಾರ ಮೇರೆ ಮೀರಿದಾಗ ಸಹನೆ ಕಳೆದುಕೊಳ್ಳುವ ಯಾವುದೇ ವ್ಯಕ್ತಿಗೆ ಕಪಾಳಮೋಕ್ಷ ನಡೆಸದೇ ಬೇರೆ ವಿಧಿಯಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಗುಡುಗಿದ ಸುದ್ಧಿ ಪ್ರಜಾವಾಣಿ ಪತ್ರಿಕೆಯಲ್ಲಿದೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗೆ ಯುವಕನೊಬ್ಬ ಈಚೆಗೆ ಕಪಾಳಮೋಕ್ಷ ಮಾಡಿದ್ದ ಸಂದರ್ಭದಲ್ಲಿ `ಕೇವಲ ಒಂದೇ ಏಟು ಬಿತ್ತೇ` ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದ ಹಝಾರೆಯ ಈ ಹೇಳಿಕೆ ಈಗ ಇನ್ನೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಭ್ರಷ್ಟಾಚಾರ ವಿರುದ್ಧದ ಜನಸಾಮಾನ್ಯನ ಹಕ್ಕುಗಳ ವಿವರ ಒಳಗೊಂಡ ಹಿಂದಿ ಚಲನಚಿತ್ರ `ಗಲಿ ಗಲಿ ಚೋರ್ ಹೈ` ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ, `ಜನರ ಸಹನೆಗೂ ಮಿತಿ ಇದೆ. ಸಹನೆ ಕಳೆದುಕೊಂಡ ಯಾರೇ ಆಗಲಿ, ಎದುರಿಗಿರುವವರ ಕಪಾಳಕ್ಕೆ ಹೊಡೆದಾಗಲೇ ಅವರ ಮೆದುಳಿಗೆ ಚುರುಕು ಮುಟ್ಟುವುದು. ಅದೇ ಈಗ ಉಳಿದಿರುವ ಮಾರ್ಗ` ಎಂದು ಪ್ರತಿಕ್ರಿಯಿಸಿದ್ದು ಅವರ ಸರ್ವಾಧಿಕಾರಿ ತೆವಲನ್ನು ಮನದಟ್ಟು ಮಾಡುವಂತಿದೆ.
ಅಣ್ಣಾ ಹಝಾರೆ ಟೋಳೀಯು ನೋಡಲೆಂದೇ ರಾಳೇ ಗಣಸಿದ್ಧಿಯಲ್ಲಿ ಚಲನಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಝಾರೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಪಾಳಮೋಕ್ಷವನ್ನು ಸಮರ್ಥಿಸಿಕೊಂಡಿರುವ ಅಣ್ಣಾ ಹಜಾರೆ ತಮ್ಮನ್ನು ತಾವು ಗಾಂಧಿವಾದಿ ಎಂದು ಹೇಗೆ ಕರೆದುಕೊಳ್ಳುತ್ತಾರೆ? ಎಂದು ಪ್ರಶ್ನಿಸಿದೆ.
`ಇಷ್ಟೆಲ್ಲಾ ಅನುಭವವಿರುವ ವ್ಯಕ್ತಿಯೊಬ್ಬರು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಕಪಾಳಮೋಕ್ಷದಂತಹ ಸಂಗತಿ ಗಾಂಧಿ ತತ್ವಕ್ಕೆ ವಿರುದ್ಧವಾದುದು` ಎಂದು ಪಕ್ಷದ ವಕ್ತಾರೆ ರೇಣುಕಾ ಚೌಧರಿ ಟೀಕಾಪ್ರಹಾರ ನಡೆಸಿದರೆ, `ನಾನು ಅಣ್ಣಾ ಅವರನ್ನು ಇದುವರೆಗೆ ಗಾಂಧಿವಾದಿ ಎಂದೇ ಪರಿಗಣಿಸಿದ್ದೆ. ಆದರೆ ಹಿಂಸೆಗೆ ಕುಮ್ಮಕ್ಕು ನೀಡುವ ಇಂತಹ ಹೇಳಿಕೆಗಳಿಂದ ಅವರ ಮೇಲಿನ ಗೌರವ ಕಡಿಮೆಯಾಗಿದೆ. ಮಾತ್ರವಲ್ಲ, ಅಣ್ಣಾ ಸಂಘ ಪರಿವಾರದ ಜತೆ ಸೇರಿಕೊಂಡಿರುವುದನ್ನು ಈ ಮಾತುಗಳು ಧ್ವನಿಸುತ್ತವೆ. ಅವರ ಹೇಳಿಕೆಯನ್ನು ನಾನು ಖಂಡಿತಾ ವಿರೋಧಿಸುತ್ತೇನೆ` ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು  ಪ್ರತಿಕ್ರಿಯಿಸಿದ್ದಾರೆ.
`ಕಪಾಳ ಮೋಕ್ಷ ನಡೆಸುವುದಾಗಲಿ, ಬೂಟು ಎಸೆಯುವುದಾಗಲಿ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು` ಎಂದು ಕೇಂದ್ರ ಸಚಿವ ಸಚಿನ್ ಪೈಲಟ್ ಅಭಿಪ್ರಾಯಪಟ್ಟಿದ್ದಾರೆ.
`ಅಣ್ಣಾ ಅವರ ಈ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ` ಎಂದು ಮಹಾರಾಷ್ಟ್ರ ಎನ್‌ಸಿಪಿ ಘಟಕದ ಮುಖ್ಯಸ್ಥ ಮಧುಕರ್ ಪಿಚಡ್ ಹೇಳಿದ್ದಾರೆ.
ಹಝಾರೆ ಮಾತುಗಳನ್ನು ಸೂಕ್ಷ್ಮವಾಗಿ ಅರಿಯಬೇಕು. ತಾನು ಹೇಳಿದಂತೆಯೇ ಎಲ್ಲರೂ ಕೇಳಬೇಕು ; ತಮ್ಮ ಮೂಲಕವೇ ಕಾನೂನು ರೂಪಿತವಾಗಬೇಕು ಎಂಬ ಧೋರಣೆ ಇಲ್ಲಿ ಕಂಡುಬರುತ್ತದೆ. ಈ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿರುವ ಹಝಾರೆ ಟೋಳಿ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಗಂಡಾಂತರವನ್ನು ತರಬಹುದು. ಇದು ಸಾಮಾನ್ಯ ಜನರನ್ನು ಮತ್ತಷ್ಟು ಸಂಕಟಕ್ಕೀಡು ಮಾಡುತ್ತದೆ ಎಂಬುದನ್ನು ನಾವು ಮರೆಯಬಾರದು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರು ಎಂದು ಹೇಳಿದ ಗಾಂಧಿಯ ಅಪರಾವತಾರದಂತೆ ಉಪವಾಸ-ಸತ್ಯಾಗ್ರಹ ಎಂಬ ಮುಖವಾಡ ಧರಿಸಿದ್ದ ಹಝಾರೆ ಟೋಳಿಯ ಬಣ್ಣ ಈಗ ಬದಲಾಗಿದೆ. ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಳೇ ಅಲ್ಲೀಗ ತಾಂಡವಾಡುತ್ತಿವೆ. ಭಾರತಕ್ಕೆ ಹಿಟ್ಲರ್ ಬರುತ್ತಿದ್ದಾನೆ ಎಚ್ಚರ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.