Sunday, January 08, 2012

ಬಸವಣ್ಣ ಐಕ್ಯವಾಗಲಿಲ್ಲ; ಕೊಲೆಯಾದರು: ಭಗವಾನ್

ಜಾತ್ಯತೀತ ನಿಲುವನ್ನು ಹೊಂದಿದ್ದ ಬಸವಣ್ಣರನ್ನು ಮೂಲಭೂತವಾದಿ ಗಳು ಕೊಲೆ ಮಾಡಿದರೇ ಹೊರತು, ಅವರು ಐಕ್ಯವಾಗಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.ಮಾನಸ ಗಂಗೋತ್ರಿಯ ಸಂಶೋಧನಾ ವಿದ್ಯಾರ್ಥಿ ವೇದಿಕೆ ಹಾಗೂ ವಿದ್ಯಾರ್ಥಿ ಬಳಗವು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರ 120ನೆ ಜಯಂತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಬಸವಣ್ಣನ ವಚನಗಳಲ್ಲಿ ಎಲ್ಲಿಯೂ ಜೀವನದ ಬಗ್ಗೆ ನಿರಾಸಕ್ತಿ ಕಂಡುಬರುವುದಿಲ್ಲ. ಅಂತಹ ಬಸವಣ್ಣ ಕೂಡಲ ಸಂಗಮದಲ್ಲಿ ಹೋಗಿ ಐಕ್ಯವಾದರು ಎಂದು ಇತಿಹಾಸ ಹೇಳುತ್ತದೆ. ಇದನ್ನು ಹೇಗೆ ನಂಬುವುದು?. ಜಾತಿ ವ್ಯವಸ್ಥೆಯ ಬಗ್ಗೆ ನಿಷ್ಠುರಿಯಾಗಿದ್ದ ಅವರನ್ನು ಮೂಲಭೂತವಾದಿಗಳು ಕೊಲೆ ಮಾಡಿದರು. ಇತಿಹಾಸ ರಚನೆಕಾರರು ಸಹ ಮೂಲ ಇತಿಹಾಸವನ್ನು ತಿರುಚಿದ್ದಾರೆ ಎಂದರು.

ಬಸವಣ್ಣರ ನಂತರ ಈ ದೇಶದಲ್ಲಿ ಮತ್ತೊಬ್ಬ ಮಾನವತಾವಾದಿಯಾಗಿ ಅಂಬೇಡ್ಕರ್ ಹುಟ್ಟಿದರು. ಪ್ರಪಂಚದ ಐದು ಪ್ರಮುಖ ವಿದ್ವಾಂಸರಲ್ಲಿ ಅಂಬೇಡ್ಕರ್ ಒಬ್ಬರು ಎಂಬುದು ಈ ದೇಶದ ಹೆಮ್ಮೆ. ಅವರ ವಿಚಾರಧಾರೆಗಳು ಸಾರ್ವಕಾಲಿಕ ಚರ್ಚಿತ ವಸ್ತುಗಳು. ಮೀಸಲಾತಿ ಎಂಬುದು ಅಂಬೇಡ್ಕರ್‌ರ ಕನಸಿನ ಕೂಸು. ಆದರೆ ಇದು ಸರಕಾರಿ ಕಚೇರಿಗಳಿಗೆ ವಾತ್ರ ಸೀಮಿತವಾಗಿದೆ. ಸರಕಾರದ ಅಧೀನದಲ್ಲಿ ನಡೆಯುತ್ತಿರುವ ದೇವಸ್ಥಾನಗಳಿಗೂ ಮೀಸಲು ಅನುಸಾರ ಲಿಂಗಬೇಧವಿಲ್ಲದೆ ಅರ್ಚಕರನ್ನು ನೇಮಕ ಮಾಡಬೇಕಾದ ಅಗತ್ಯವಿದೆ ಎಂದು ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.

ಶೋಷಿತರ ಬಾಯಿ ಮುಚ್ಚಿಸಲಾಗುತ್ತಿದೆ: ಬಂಜಗೆರೆಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಬೇಡ್ಕರ್ ಜಯಂತಿಯನ್ನು ತೋರಿಕೆಗಾಗಿ ಆಚರಿಸಿ, ಶೋಷಿತರ ಬಾಯಿ ಮುಚ್ಚಿಸಲು ಪ್ರಯತ್ನ ಮಾಡುತ್ತಿವೆ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ದೇಶದ ಪಟ್ಟಭದ್ರರಿಗೆ ಬ್ರಿಟಿಷ ರಿಂದ ಸ್ವಾತಂತ್ರ್ಯ ಮುಖ್ಯವಾಗಿತ್ತು. ಆದರೆ ಅಂಬೇಡ್ಕರ್‌ಗೆ ಸ್ವಾತಂತ್ರ್ಯ ನಂತರ ದೇಶದ ದಲಿತರ ಸ್ಥಿತಿಗತಿ ಮುಖ್ಯವಾಗಿತ್ತು. ಸಂವಿಧಾನ ದಲ್ಲಿ ಅಳವಡಿಸಿದ ಅಂಶಗಳು ಯಥಾವತ್ತಾಗಿ ಜಾರಿಯಾಗಲಿಲ್ಲ ಎಂಬ ಕೊರಗು ಕೊನೆಯ ದಿನಗಳಲ್ಲಿ ಅಂಬೇಡ್ಕರ್‌ರನ್ನು ಕಾಡಿತು ಎಂದರು.

ಭಾರತಕ್ಕೆ ಸಿಕ್ಕಿರುವುದು ಕೇವಲ ಹಲ್ಲಿಲ್ಲದ ಸ್ವಾತಂತ್ರ್ಯ. ಇಲ್ಲಿ ಪ್ರಜಾಪ್ರಭುತ್ವ ಎಂಬುದು ಉಳ್ಳವರ ಸೋತ್ತು. ಭಾರತದ ಸಂಸ್ಕೃತಿಯಲ್ಲಿ ಚಾತುರ್ವರ್ಣ ಪದ್ಧತಿ ಹಾಸುಹೊಕ್ಕಾಗಿದೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ ಎಲ್ಲಾ ವರ್ಗದವರಿಗೂ ಉದ್ಯೋಗ ನೀಡುತ್ತಿದ್ದಾರೆ ಎಂಬುದು ಸಮಾಧಾನಕರ. ಆದರೆ ಆ ಹುದ್ದೆಗಳು ಜಾತಿಗೆ ಅನುಸಾರವಾಗಿ ಹಂಚಿಕೆಯಾಗಿವೆ. ಯಾವ ಐಟಿ ಕಂಪೆನಿಗಳಲ್ಲೂ ಶೋಷಿತರು ಸಿಇಓ ಹುದ್ದೆ ತಲುಪಲು ಸಾಧ್ಯವಾಗಿಲ್ಲ ಎಂದವರು ವಿಷಾದಿಸಿದರು.

ಹಿಂದೆ ನೇರವಾಗಿ ಅಸ್ಪಶ್ಯತೆ ಆಚರಿಸುತ್ತಿದ್ದ ವರು ಈಗ ಖಾಸಗೀಕರಣದ ಹೆಸರಿನಲ್ಲಿ ದಲಿತರಿಗೆ ಸಾಮರ್ಥ್ಯ ಇಲ್ಲ ಎಂದು ಉನ್ನತ ಹುದ್ದೆಗಳಿಂದ ದೂರವಿಟ್ಟಿದ್ದಾರೆ. ಯಥೇಚ್ಛವಾಗಿ ಹರಿದು ಬರುತ್ತಿರುವ ವಿದೇಶಿ ಬಂಡವಾಳದಿಂದ ಮನುವಾದಿಗಳು ಕೊಬ್ಬಿದ್ದಾರೆ. ಇಂತಹ ಸಂದರ್ಭದಲ್ಲಿ ದಲಿತರು ಸ್ವಾಭಿಮಾನಿಗಳಾಗಿ ಬದುಕನ್ನು ಕಟ್ಟಿಕೊಳ್ಳುವುದು ಅನಿವಾರ್ಯ. ಅಂಬೇಡ್ಕರ್ ಓದುವ ಸಂದರ್ಭದಲ್ಲಿ ಯಾವ ಮೀಸಲು ಇರಲಿಲ್ಲ. ಆದರೂ ಮುಂದೆ ಬರಲು ಅವರ ಸ್ವಾಭಿಮಾನ ಕಾರಣವಾಗಿತ್ತು. ಪ್ರತಿಷ್ಠಿತ ಮನೆತನ, ಶ್ರೀಮಂತಿಕೆ, ಉನ್ನತ ವ್ಯಾಸಂಗ, ಜಾತಿ ಬಲದ ಕಾರಣದಿಂದ ಜವಾಹರ ಲಾಲ್ ನೆಹರು ಬಹುಬೇಗ ಪ್ರಧಾನಿಯಾದರು.

ಆದರೆ ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದೆ, ಇಡೀ ದೇಶದಲ್ಲಿ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಂಬೇಡ್ಕರ್ ಇಂದಿಗೂ ಬಹು ಚರ್ಚಿತ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವುದು ಅವರ ಸ್ವಾಭಿಮಾನದ ಸಂಕೇತ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘದ ಸಂಚಾಲಕ ವೆಂಕಟರಾವ್‌ಜಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಕೆ.ಎನ್.ಗಂಗಾನಾಯಕ್ ಉಪಸ್ಥಿತರಿದ್ದರು.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.