Saturday, January 14, 2012

ಬಸೂ ಅವರ : ವಿಕ್ಷಿಪ್ತ ಮನಸ್ಸು !

1

ನಿನ್ನಾಸೆಯ ಹಾಗೆ ಜೀವನವಿಡೀ ಬದುಕಿದ ಸಮಾದಾನ
ಕೊನೆ ಗಳಿಗೆಯ ತನಕ ನನ್ನತನ ಕಳೆದುಹೋದ ಯಾತನೆಯಾಗಿ ಉಳಿಯಿತು

2

ಬೀಜವನು ಬಳಿರಿಸಿಕೊಂಡವನಲ್ಲಿ
ಇದ್ದೇ ಇರುವುದು ಅಡವಿಯ ಕನಸು

3

ಬದುಕಿಗಾಗುವ ಆ ವಿಚಾರ ಕನಸು ದೂರದ್ದೆಂದು ನಿರಾಕರಿಸುವ ಕಂಗಳರಸಿ ಬರುವುದು ದುಃಖಬಯಕೆಯ ಮನೆ ನನ್ನದೆಂದು ಬಾಗಿಲು ಕಿಡಕಿ ತೆರೆಯದಂಗೈಯಲಿ ಕತ್ತಲಷ್ಟೆ ಉಳಿಯುವುದು

4

ರಕ್ತದ ಹನಿ ಜಿನುಗಿ ಕೆಂಪಡರಿದ ರೆಪ್ಪೆಯ ದೂರುಗಳೇನಿರಲಿ ಯಾವಪಾದನೆಯನೂ ಮುನ್ನಲೆಗೆ ತರಲಾರೆ
ಎಷ್ಟು ಬೆಳಕಾದರೂ ಆ ಸೂರ್ಯ ಮುಳುಗಿದ ಮೇಲೆ ಬೆನ್ನಿಗೆ ಕತ್ತಲೆಯ ಅಪಾದನೆ ಇದ್ದೇ ಇರುವುದು

5

ಏಕಾಂಗಿ ಮುಂಜಾವು ಸಿಂದಿ ಅಂಗಡಿಯ ಚಪ್ಪರದಡಿ ಖಾಲಿ ಬಟ್ಟಲಲಿ ಮೂಡಿತು ನಿನ್ನಬಿಂಬ
ಅಲೆಮಾರಿ ಹಗಲು ಹೂ ಅರಳಿದ ತೋಟದಲಿ ವಸಂತ ಋತುವಿನ್ನಲ್ಲೂ ಕತ್ತಲಾವರಿಸುವುದು

6

ಊರದಾರಿಗೆ ಹಡದಿಯಾದ ಕುರುಹಿಲ್ಲದ ಸೀರೆಯಾತ್ಮಕತೆ ಊರ ಶೃಂಗಾರದಲಿ ಹುಟ್ಟಿತು
ಇರುಳೆಲ್ಲ ಘಮಾಡಿಸಿದ ರಾತ್ರಿರಾಣಿ ಕೊನೆಯ ಜಾವ ಉದುರಿದಾಗ ಚಿಟ್ಟೆ ವಿಷಾದವಿಲ್ಲದೆ ಹಾರಿಹೋಯಿತು

7

ನಿರ್ಜನ ಅಂಗಳದ ಹೆಜ್ಜೆ ನರಳಿ ಅಂಗಾಲಿನ ಗಾಯ ನೆತ್ತಿಗೆ ತಲುಪುವುದು
ದೇಹದ ಭಾಷೆ ಹೀಗಿದೆಯಲ್ಲ ನೀ ಹಚ್ಚಿದ ಮುಲಾಮು ಅಂಗಾಲಿನ ಗಾಯವನ್ನಷ್ಟೆ ಕಳೆಯುವುದು

8

ಲೋಕದ ಭಾಷೆಗೆ ಹೊಂದಿಕೊಳ್ಳದೆದೆಯ ದನಿ ಲೋಕದ ಬೆತ್ತಲೆಗೆ ಬಟ್ಟೆಯುಡಿಸಿತು
ನಿನ್ನಂಗೈ ಬಿಳಿಜೋಳದ ರೊಟ್ಟಿಯಲಿ ಜಾರಿಬಿದ್ದ ಹನಿಯಿಂದ ನಿನ್ನೆರಾತ್ರಿಯ ಕನಸು ಹೂತುಹೋಯಿತು

9

ಎದೆಯೊಳಗೆ ಮನುಕುಲದ ಆತಂಕವೆಲ್ಲ ಎಚ್ಚರಾಯಿತು ಮುಚ್ಚಿದ ಬಾಗಿಲು ಸದ್ದಾಗಿ
ಕರ್ಪ್ಯೂ ಜಾರಿಯಾದ ದಿನ ಊರ ನಿರಾಚರ ಬೀದಿಗಳಲಿ ಹೆಜ್ಜೆಗಳು ಸತ್ತುಹೋಗಿದ್ದವು

10

ನಿನಗಾಗಿ ಇರುಳದಿಬ್ಬದಲಿ ನನ್ನ ಅರಸುವಿಕೆ ನೋಡಿ ಲೋಕ ಬರಿದೇ ನಕ್ಕಿತು
ರೆಕ್ಕೆ ಸುಟ್ಟ ಪತಂಗಗಳ ತುಳಿದು ನಡೆಯುವುದು ನನ್ನಿಂದಾಗದೆ ದೀಪವಾರಿಸಿದೆ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.