ಬಸವರಾಜ ಸುಳೇಭಾವಿ
ನಿನ್ನ ರೆಪ್ಪೆಗಳ ತುದಿಯಲ್ಲಿ
ನೀನು ಕಡ ತಂದ
ನಾಲ್ಕು ನಿಮಿಷಗಳು ಚಲಿಸುವಾಗ
ನಾವು ಕೂಡುವ ಗಳಿಗೆ ನಿಗಧಿಯಾಗಿತ್ತು
ನೀನು ಎದೆಯಾಳಕ್ಕೆ ಬೇರು ಇಳಿಬಿಡುವಾಗ
ಒಂದು ನಿಮಿಷ ಹಳಹಳಿಕೆ -ಕಳವಳದಲ್ಲಿ
ಸರಿದು ಹೋಯಿತು
ಮೋಹ ಹುಟ್ಟಿಸಿದ ನಿನ್ನ ಮುಡಿ ಬಿಡಿಸಿ
ಕಟ್ಟುವಾಗ ಉಳಿದೊಂದು ನಿಮಿಷ ಅಳಿಯಿತು
ದೇಹವಿನ್ನು ನಾಚಿಗೆ ಬಿಟ್ಟಿರಲಿಲ್ಲ
ಕಡೆಯ ನಿಮಿಷಗಳು
ಕಡ ಕೊಟ್ಟವರ ನೆನಪಿನ ಕನ್ನಡಿಯಾದವು
ಅನುರಾಗದ ತುದಿ ತಲುಪಿದ
ನಿನ್ನ ಕಂಗಳು
ಏಕಾಂತದಲಿ ಯಾವುದೋ ನೆರಳು ತಾಗಿ
ಗಾಯಗೊಂಡವೇನೋ ?
ದೇಹದ ನಿರಾಶೆ ಗುಟ್ಟಾಗಿ ಉಳಿಯದ
ಸತ್ಯವಷ್ಟೇ ಹೊರಟ ನಿನ್ನ ಹೆಜ್ಜೆಯಲ್ಲಿತ್ತು
ಆಗಲೂ ಹಿಂತಿರುಗಿ ಹೇಳಿದ್ದೇನು ?
ಲೋಕ ಸಂಗಾತವು
ಕಡ ತಂದ ಸಮಯದಲ್ಲೇ ಉಸಿರಾಡಿಕೊಂಡಿದೆ
ಸಮಯ ಕೊಡು
ಈ ಕಡದ ಹಂಗಿನಾಚೆ ಚಾಚಿಕೊಳ್ಳುವೆ
ಹಾಗೆ ಚಾಚಿಕೊಳ್ಳದೆ ಹೋದರೆ
ನನ್ನದಲ್ಲ ಯಾವ ಒಲವು ಬದುಕಿಕೊಳ್ಳುವುದಿಲ್ಲ
No comments:
Post a Comment