Wednesday, February 01, 2012

ಅಂಬೇಡ್ಕರ್ ಮತ್ತು ಗಾಂಧಿ: ದೇವನೂರು ಮಾತುಗಳು


ದೇವನೂರ ಮಹಾದೇವ
ಗಾಂಧಿಯವರ ಪ್ರತಿ ಹೆಜ್ಜೆಯಲ್ಲೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವವನೊಬ್ಬ ಮಾಡುವ ಪ್ರಯತ್ನದಂತೆ ಕಾಣಿಸುತ್ತದೆ. ಅವರು ಮಾಡಿದ ಎಲ್ಲಾ ಕೆಲಸಗಳ ಆಳದ ತುಡಿತವು ತನ್ನ ಬಿಡುಗಡೆಗಾಗೇ, ತನ್ನ ಮೋಕ್ಷಕ್ಕಾಗೆ ಎಂಬಂತೆ ಇವೆ. ಗಾಂಧಿ ತಮ್ಮ ಆತ್ಮಕತೆಯ ಕೊನೆಯಲ್ಲಿ ಒಂದು ಕಡೆ ‘ಸಕಲ ಜೀವಿಗಳಲ್ಲೂ ದೇವರನ್ನು ಕಾಣುವ ನಮ್ರ ಪ್ರಯತ್ನ ತಮ್ಮ ಜೀವನ’ ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಈ ನುಡಿಗೆ ಪ್ರಜ್ಞಾಪೂರ್ವಕವಾಗಿ ನಡೆಯುತ್ತ ಮುಂದಿಡುವ ಪ್ರತಿ ಹೆಜ್ಜೆಗಳನ್ನೂ ಪರೀಕ್ಷಿಸಿಕೊಳ್ಳುತ್ತ ನಡೆವವನಂತೆ ಗಾಂಧಿ ಕಾಣಿಸುತ್ತಾರೆ. -ಹೀಗೆ ನಡೆವವನೊಬ್ಬನಿಗೆ ಜಗತ್ತು ಹೇಗೆ ಕಾಣಿಸಬಹುದು? ಐಕ್ಯತೆ ದೈವದಂತೆ, ಭಿನ್ನತೆ ದೆವ್ವದಂತೆ, ಜಗತ್ತು ಒಂದು ಕುಟುಂಬದಂತೆ. ಹೀಗೆ ಭಾವಿಸಿದಾಗ ಮಾತ್ರವೆ ‘ಉಪವಾಸ’ವನ್ನು ‘ಸತ್ಯಾಗ್ರಹ ’ವನ್ನಾಗಿ ಮಾಡಲು ಆಗುತ್ತದೆ. ಯಾಕೆಂದರೆ ತನ್ನವನೊಡನೆ ಅಥವಾ ತನ್ನವನೆಂಬ ಭಾವನೆ ಇದ್ದಲ್ಲಿ ಮಾತ್ರ ಉಪವಾಸವು ಸತ್ಯಾಗ್ರಹವಾಗಿ ಆಗುವುದು.

ಇಂಥ ಗ್ರಹಿಕೆಯು ಈ ಸೆಮಿನಾರಿನಲ್ಲಿ ನಡೆಯುತ್ತಿರುವ ಸಂಸ್ಕೃತಿ ಪರಿಕಲ್ಪನೆಯನ್ನೂ ಕೂಡಾ ಹೀಗೆ ನೋಡುತ್ತಿತ್ತು: ಈ ಸಂಸ್ಕೃತಿ ಚರ್ಚೆ ಐಕ್ಯತೆ ಕಡೆಗೆ ಅಂದರೆ ದೈವದತ್ತ ಇಡುತ್ತಿರುವ ಹೆಜ್ಜೆಯೋ ಅಥವಾ ಭಿನ್ನತೆ ತಾರತಮ್ಯದ ಕಡೆಗೆ ಅಂದರೆ ದೆವ್ವದ ಕಡೆಗೆ ಇಡುತ್ತಿರುವ ಹೆಜ್ಜೆಗಳೋ ಎಂದು ನೋಡುತ್ತಿತ್ತು. ಒಂದು ಗುಡಿ, ಚರ್ಚ್, ಮಸೀದಿ, ಮಠಗಳಲ್ಲಿ ಭಿನ್ನತೆ ತಾರತಮ್ಯ, ಅಸ್ಪೃಷ್ಯತೆ ಇದ್ದರೆ ಅವರು ಪೂಜಿಸುತ್ತಿರುವುದು ದೆವ್ವವನ್ನು ಎಂಬುದು ಕಾಣುತ್ತಿತ್ತು. ಬಾಬರಿ ಮಸೀದಿ ಬೀಳಿಸಿದವರು ದೇವರ ನಾಮ ಜಪಿಸುತ್ತಿದ್ದರೂ ಭಿನ್ನತೆಗಾಗಿ ಆ ಕ್ರಿಯೆ ನಡೆದ ದೆಸೆಯಿಂದಾಗಿ ಅವರ ಎದೆಯೊಳಗೆ ದೆವ್ವ ಕುಣಿಯುವುದು ಕಾಣಿಸುತ್ತಿತ್ತು. ತಾರತಮ್ಯ ಅಂತರ ಹೆಚ್ಚಿಸುವ ಒಂದು ಕಾನೂನು ಅಥವಾ ಒಂದು ಕಾರ್ಯಕ್ರಮ ದೈವದಿಂದ ದೂರವಾಗುತ್ತಿರುವ ಪ್ರಕ್ರಿಯೆಯಾಗಿ ಕಂಡು ಅದಕ್ಕಾಗಿ ಅದನ್ನು ಪ್ರತಿಭಟಿಸಲು ಪ್ರೇರೇಪಿಸುತ್ತಿತ್ತು.

ಈಗ ದೈವ ಮತ್ತು ದೆವ್ವವನ್ನು ಕೈಬಿಟ್ಟು ಐಕ್ಯತೆ ಹಿಡಿದುಕೊಂಡು ಇಂದಿನ ಅಗತ್ಯವಾದ ಗಾಂಧಿ, ಅಂಬೇಡ್ಕರ್ ಬಳಿಗೆ ಬರುವೆ.

ಇಂದು ಗಾಂಧಿ ಮತ್ತು ಅಂಬೇಡ್ಕರ್ ಅವರ ಕೃತಿ ಮತ್ತು ವ್ಯಕ್ತಿತ್ವಗಳು ಪ್ರಭಾವಿಸುತ್ತಿರುವ ರೀತಿಗಳು ಬೇರೆ ಬೇರೆಯಾಗೇ ಇವೆ. ಇದನ್ನು ಅರ್ಥ ಮಾಡಿಕೊಳ್ಳಲು ಗೆಳೆಯ ಸಿದ್ಧಲಿಂಗಯ್ಯನವರ ಗ್ರಹಿಕೆ ಸಹಕಾರಿಯಾಗುತ್ತದೆ. ಅಜ್ಜ ಮೊಮ್ಮಗನಿಗೆ ಗಾಂಧಿಯ ಬಗ್ಗೆ ಹೇಳುತ್ತಾನೆ -‘ನಮ್ಮ ಕಾಲದಲ್ಲಿ ಮಹಾತ್ಮಾಗಾಂಧಿ ಅಂತ ಇದ್ದರು. ಅವರು ಬ್ರಿಟೀಷರನ್ನು ಓಡಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟರು. ನಾವು ಈಗ ಇರುವ ಸ್ಥಿತಿಗತಿಗೆ ಗಾಂಧಿನೇ ಕಾರಣ’. ಅದೇ ಅಂಬೇಡ್ಕರ್ ಬಗ್ಗೆ ಮೊಮ್ಮಗ ಅಜ್ಜನಿಗೆ ಹೇಳುತ್ತಾನೆ -‘ಅಜ್ಜಾ ನೀನು ಚಿಕ್ಕವನಿದ್ದಾಗ ಅಂಬೇಡ್ಕರ್ ಅಂತ ನಮ್ಮವರೊಬ್ಬರು ಇದ್ದರು. ಅವರು ನಮ್ಮ ಜನಾಂಗಕ್ಕಾಗಿ ತುಂಬಾ ಹೋರಾಡಿದರು. ನಾವು ಈಗ ಇರುವ ಸ್ಥಿತಿಗತಿಗೆ ಅಂಬೇಡ್ಕರ್ ಕಾರಣ.’ ಗಾಂಧಿ ಬಗ್ಗೆ ಮಾಗಿದ ಹಣ್ಣು ಈಚಿಗೆ ಹೇಳಿದರೆ, ಅಂಬೇಡ್ಕರ್ ಬಗ್ಗೆ ಈಚು ಮಾಗಿದ ಹಣ್ಣಿಗೆ ಹೇಳುತ್ತದೆ. ಹಾಗಾಗಿ ಮೊದಲದರದಲ್ಲಿ ನಿಧಾನತೆ ಇದ್ದರೆ ಎರಡನೆಯದರಲ್ಲಿ ವೇಗ ಇದೆ. ಈ ನಡಿಗೆಯಿಂದಾಗಿ ಒಂದೇ ಆಶಯವು ಪರಸ್ಪರ ವಿರುದ್ಧವಾಗಿ ಕಾಣಲೂ ಬಹುದು. ದಲಿತರ ಮೊದಲ ವಿದ್ಯಾವಂತ ತಲೆಮಾರು ಗಾಂಧಿ ಅಂಬೇಡ್ಕರರ ಆಶಯಗಳ ನಾಡಿ ಹಿಡಿದು ಈ ಬಿಕ್ಕಟ್ಟಿನಿಂದ ಪಾರಾಗಿತ್ತು ಎಂದು ಕಾಣುತ್ತದೆ. ಯಾಕೆಂದರೆ ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋಗಳನ್ನೂ ಇಟ್ಟುಕೊಂಡಿರುತ್ತಿತ್ತು.

ಹಾಗಾದರೆ ದಲಿತರ ಹಿಂದಿನ ತಲೆಮಾರು ಗಾಂಧಿ, ಅಂಬೇಡ್ಕರ್‌ರ ಜಗಳವನ್ನು ಹೇಗೆ ಕಂಡಿತ್ತು? ಮಕ್ಕಳ ಹಿತಕ್ಕಾಗಿ ಎಂದುಕೊಂಡು ಜಗಳಮಾಡುವ ಅಪ್ಪ ಅಮ್ಮನಂತೆ? ಹೀಗಲ್ಲದಿದ್ದರೆ ಇಬ್ಬರ ಫೋಟೋಗಳನ್ನು ಒಟ್ಟಿಗೆ ಹೇಗೆ ಇಟ್ಟುಕೊಳ್ಳಲು ಸಾಧ್ಯ? ಉದಾ: ಮಗುವನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಬೇಕು ಅಂತ ಅಪ್ಪ ವಾದಿಸುತ್ತಾನೆ. ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಬೇಕು ಅಂತ ಅಮ್ಮ ವಾದಿಸುತ್ತಾಳೆ. ಜಗಳವಾಗುತ್ತದೆ. ಆದರೆ ಜಗಳದಲ್ಲಿ ಏನಿದೆ? ಮಗುವಿನ ಹಿತವೇ ಅಲ್ಲವೆ?

ಪೂನಾ ಒಪ್ಪಂದದಲ್ಲೂ ಏನಿದೆ? ‘ನನ್ನಲ್ಲಿ ತಪ್ಪಿದೆ. ನಿಜ ಹಾಗಂತ ಡೈವೋರ್ಸ್ ಕೊಡಬೇಡ ’ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ಪರಸ್ಪರ ವಿರೋಧಿಗಳನ್ನಾಗಿಸುತ್ತೇವೆ. ಅಂಬೇಡ್ಕರ್ ಅವರದು ತಾರ್ಕಿತ ದೃಷ್ಟಿಕೋನವಾದರೆ ಗಾಂಧಿಯವರು ತರ್ಕಾತೀತ ದೃಷ್ಟಿಕೋನದವರು. ಹಾಗಾಗಿ ಸಮಕಾಲೀನರ ನಡುವೆ ಜಗಳವೂ ನಡೆಯಬಹುದು. ಇದು ನಮಗಲ್ಲ ನಾವು ಪರಿಣಾಮದಲ್ಲಿ ನೋಡಬೇಕು. ಯಾಕೆ ಉಗ್ರಹಿಂದೂ ಗೋಡ್ಸೆ ಗಾಂಧಿ ಕೊಂದ? ಗಾಂಧಿ ಸತ್ತಾಗ ಬ್ರಾಹ್ಮಣ ವಠಾರವು ‘ವರ್ಣಸಂಕರ ಮಾಡುವ ಕಲ್ಕಿಯ ಅವತಾರ ಸಧ್ಯ ಕೊನೆಗೊಂಡಿತು’ ಎಂದು ಯಾಕೆ ಸಮಾಧಾನ ಪಟ್ಟಿತು? ಹೀಗಾದರೆ ಗಾಂಧಿ ಹಿಂದೂ ಧರ್ಮದಲ್ಲಿ ಮಾಡುತ್ತಿದ್ದುದು ಏನು? ಗಾಂಧಿ ಅಸಮಾನತೆಯ ಹಿಂದೂಧರ್ಮ ಎಂಬ ಬಚ್ಚಲ ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಚಿಟ್ಟೆಯಾಗಲಾರದ ಬಚ್ಚಲು ಹುಳುಗಳಿಗೆ ಉಸಿರು ಕಟ್ಟಿತ್ತು. ಇದನ್ನು ಹೀಗಲ್ಲದೆ ಬೇರೆ ಯಾವ ರೀತಿ ಅರ್ಥಮಾಡಿಕೊಳ್ಳಲು ಸಾಧ್ಯ? ಕೊನೆ ಕೊನೆಯಲ್ಲಿ ಅಂತರ್ಜಾತೀಯ ಮದುವೆಗಳಿಗೆ ಮಾತ್ರ ಭಾಗವಹಿಸುವೆ ಎಂಬ ನಿಲುವಿಗೆ ಬರುವ ಗಾಂಧಿಯನ್ನು ಮತ್ತೆ ಹೇಗೆ ಅರ್ಥಮಾಡಿಕೊಳ್ಳಬೇಕು?
ಹೀಗೆ ಕಾಣಿಸುತ್ತದೆ: ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾತೆಯ ಮನೆಗೆ ಕಲ್ಲೆಸೆಯುವವರಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಗಾಂಧಿಯವರಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಲೋಕ ಗಾಂಧಿಗೂ, ಅಂಬೇಡ್ಕರ್‌ಗೂ ಮಾರಾಮಾರಿ ಹೊಡೆದಾಟ ಅನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಒಂದೇ ಕೆಲಸವನ್ನಲ್ಲವೇ?

ಹೀಗಿದ್ದೂ ಗಾಂಧಿ ಯಾಕೆ ಅಪಾರ್ಥಕ್ಕೆ ಒಳಗಾದರು? ಒಂದು ಊಹೆ ಮಾಡುವೆ. ಗಾಂಧಿ ಅಸ್ಪೃಷ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಈ ವರ್ತನೆಯನ್ನು ಉಲ್ಟಾ ಮಾಡಿದರೆ ಅಂದರೆ ಗಾಂಧಿ ಅಸ್ಪೃಷ್ಯರನ್ನು ತಂದೆತಾಯಿಗಳಂತೆ ಭಾವಿಸಿ ವರ್ತಿಸಿದ್ದರೆ ಈ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ನನಗನ್ನಿಸುತ್ತದೆ. ಇದು ಮೇಲ್ನೋಟಕ್ಕೆ ಸರಳವಾಗಿ ಒಂದೇ ಎಂಬಂತೆ ಕಂಡರೂ ಇದು ನಡಾವಳಿಯನ್ನೇ ಬದಲಿಸುತ್ತದೆ. ಉದಾಹರಣೆಗೆ ಅಸ್ಪೃಷ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಸವಾಲು ಬಂದಾಗ - ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ಎಲಾ ನಾನು ಸಾಕಿದವನ ಕೊಬ್ಬೆ ’ ಎಂದು ಕ್ರೋಧ ಅಸಹನೆ ಉಂಟಾಗುತ್ತದೆ. ಅದೇ ತಂದೆತಾಯಿಯಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ನನ್ನನ್ನು  ಸಾಕಿದವನು ಏನೋ ಇರಲಿ’ ಎಂದು ಸಹನೆ ಕಳೆದುಕೊಳ್ಳುವುದಿಲ್ಲ. ದಲಿತರು ಆದಿಮ ಜನಾಂಗವಾದ್ದರಿಂದ ಪಿತೃ ಭಾವನೆಯೇ ಚಾರಿತ್ರಿಕವಾಗೂ ಸರಿ ಅನ್ನಿಸುತ್ತದೆ.

ಇಂಥ ಗಾಂಧಿಯನ್ನು ದಲಿತರು ಹೇಗೆ ಸ್ವೀಕರಿಸಬೇಕು? ಗಾಂಧಿಗೆ ತಾನು ಹರಿಜನನಾಗಿ ಹುಟ್ಟಬೇಕು ಎಂಬ ಆಸೆ ಇತ್ತಂತೆ. ಹುಟ್ಟಿದರೆ ಒಳ್ಳೆಯದು ಹುಟ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಒಂದು ಮಾಡಬಹುದು.- ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಇಟ್ಟುಕೊಂಡರೆ ಅಲ್ಲಿಂದ ಗಾಂಧಿ ಮತ್ತೆ ಹುಟ್ಟುತ್ತಾನೆ. ಇಡೀ ಜಗತ್ತಿನ ಹಿತ ಇದರೊಳಗೆ ಇರಬಹುದು.

ಹೀಗೆ ಮಾಡುವಾಗ ಒಂದು ಎಚ್ಚರಬೇಕು. ನಿನ್ನೆಯ ಗಾಂಧಿ ಇಂದಿಗೆ ಬದಲಾಯಿಸಿರುತ್ತಾರೆ. ಇಂದಿನ ಗಾಂಧಿ ನಾಳೆಗೆ ಬದಲಾಯಿಸಿರುತ್ತಾರೆ. ಒಬ್ಬ ಮನುಷ್ಯ ನಡೆಯುತ್ತಿರುವ ಕ್ರಮದಲ್ಲೇ ಗಾಂಧಿ ಆಸೆ ಚಿಂತನೆಗಳಿಗೂ ನಡಿಗೆ ಇದೆ. ಇಡೀ ಸಮುದಾಯವನ್ನು ತನ್ನ ಜತೆಯಲ್ಲೇ ಕರೆದೊಯ್ಯುವವನ ಕಷ್ಟ ಇದಾಗಿರಬಹುದು. ಇದರಿಂದಾಗಿ ಬೇಕಾದವರು, ಬೇಕಾದ್ದನ್ನು ತೆಗೆದುಕೊಂಡು ಇದೇ ಗಾಂಧಿ ಎನ್ನುವ ಸಾಧ್ಯತೆಗಳು, ದುರುಪಯೋಗ ಹೆಚ್ಚಿವೆ. ಆದ್ದರಿಂದ ಗಾಂಧಿಯ ಗುರಿ ಹಾಗೂ ಗಾಂಧಿ ಇಟ್ಟ ಕೊನೆಯ ಹೆಜ್ಜೆಗಳ ಗುರುತು ಹಿಡಿದು ಗಾಂಧಿಯನ್ನು ರೂಪಿಸಬೇಕು. ಇದಕ್ಕೆ ಲೋಹಿಯಾ ವಿವೇಕ ಚಿಂತನೆ ಸಹಾಯಕವಾಗುತ್ತವೆ. ಹೀಗೆ ಗಾಂಧಿಗೆ ಲೋಹಿಯಾ ಕೂಡಿಸಿದ ಮೇಲೆ ಲೋಹಿಯಾಗೆ ಅಂಬೇಡ್ಕರ್ ಕೂಡಿಸಿ ಒಂದು ಸಾಮರಸ್ಯ ಪಡೆಯಬಹುದು. ಆಗ ನಮ್ಮ ಮುಂದೆ - ಅಂಬೇಡ್ಕರ್ ಅಧ್ಯಕ್ಷರಾಗಿ, ಲೋಹಿಯಾ ಕಾರ್ಯದರ್ಶಿಯಾಗಿ ರಾಜಕೀಯ ಪಕ್ಷ ರೂಪಿಸಬೇಕೆಂದು ಆ ಇಬ್ಬರೂ ನಡೆಸಿದ್ದ ಪ್ರಯತ್ನ - ಆ ಪ್ರಯತ್ನ ನಮಗೆ ಮುಂದಿನ ದಾರಿಯಾಗುತ್ತದೆ.

ಈ ದಾರಿ ಡಿ.ಎಸ್.ಎಸ್, ರೈತಸಂಘದಂಥ ಸಂಘಟನೆಗಳಿಗೆ ಸಹಜದಾರಿ ಅನ್ನಿಸುತ್ತದೆ. ಈ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಚಾಲನೆ ಕೊಟ್ಟು ಒಂದು ಸುತ್ತು ನಡೆದುಬಂದು, ಈಗ ಜಡವಾಗಿ ಸುಸ್ತಾಗಿ ಮುಂಗಾಣದೆ ನಿಂತಿವೆ. ಈಗ ಇವು ಪೊರೆ ಕಳಚಬೇಕಾಗಿದೆ. ಇಲ್ಲಿ ಒಂದು ಮಾತು -ಈಗೀಗ ಬುದ್ಧ, ಬಸವ, ಅಲ್ಲಮ, ಗಾಂಧಿ ಇಂಥ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂಥವರ ಹೆಸರು ಹೇಳುವಾಗ ಸದಾ ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ - ಬುದ್ಧ, ಬಸವ, ಅಲ್ಲಮ, ಗಾಂಧಿಯಂಥವರು ತಮ್ಮ ಶತ್ರು ತಮ್ಮ ಒಳಗೇ ಇದ್ದಾನೆ ಎಂದು ಭಾವಿಸಿ ಹೆಣಗುತ್ತಿದ್ದರು. ಆಸೆ, ದ್ವೇಷ, ಅಸೂಯೆ, ನಾನತ್ವ ಇಂಥ ಹೊಟ್ಟೆ ಒಳಗಿನ ತಮ್ಮನ್ನೇ ಶತ್ರು ಎಂದು ಭಾವಿಸುತ್ತಿದ್ದರು. ಆದರೆ ಡಿ.ಎಸ್.ಎಸ್, ರೈತಸಂಘ, ಕಮ್ಯುನಿಷ್ಟ್ - ಮುಂತಾದವರು ತಮ್ಮ ಶತ್ರು ತಮ್ಮ ಹೊರಗೆ ಇದ್ದಾನೆ ಎಂದು ಹೋರಾಡುತ್ತಿದ್ದಾರೆ. ಡಿ.ಎಸ್.ಎಸ್‌ಗೆ ಸ್ಥೂಲವಾಗಿ ಭೂಮಾಲೀಕರು ಶತ್ರುವಾದರೆ, ರೈತಸಂಘಕ್ಕೆ ಕೈಗಾರಿಕೆ ಶತ್ರು - ಹೀಗೆ. ಇದು ಎಲ್ಲಿಗೆ ತಂದು ನಿಲ್ಲಿಸುತ್ತದೆ? ಇಂದಿನ ಭ್ರಷ್ಟಾಚಾರ ವಿರೋಧಿಯೇ ನಾಳಿನ ಭ್ರಷ್ಟ  ಎಂಬಲ್ಲಿಗೆ ಯಾವುದನ್ನು ನಾವು ಇಂದು ವಿರೋಧಿಸುತ್ತೇವೇಯೋ ನಾಳೆ ನಾವು ಆಗುವುದಾದರೆ ನಾವು ಮಾಡಿದ್ದಾದರೂ ಏನು?

ಅದಕ್ಕಾಗಿ ನಾವು ಒಂದು ಮಧ್ಯಮ ಮಾರ್ಗಕ್ಕೆ ಬಂದರೆ ಸರಿಯಾಗಬಹುದೆನ್ನಿಸುತ್ತದೆ. ನಮ್ಮ ಶತ್ರು ನಮ್ಮ ಒಳಗೂ ಅರ್ಧ ಇದ್ದಾನೆ, ನಮ್ಮ ಹೊರಗೂ ಅರ್ಧ ಇದ್ದಾನೆ. ಈ ತಿಳಿವು ಈ ಎಚ್ಚರ ನಮಗೆ ಡಿ.ಎಸ್.ಎಸ್, ರೈತಸಂಘಕ್ಕೆ ಹೊಸ ನಡಿಗೆ ನುಡಿ ಕೊಡಬಹುದೆ? ಆಗ ಬಹಿರಂಗದ ಹಾರಾಟಕ್ಕೆ ಕೊಟ್ಟ ಕಾಲದಷ್ಟನ್ನು ತನ್ನ ಅಂತರಂಗದ ಶತ್ರು ನಿರುಕಿಸಿ ಅದನ್ನೂ
ಚಿವುಟಿ ಹಾಕುವುದಕ್ಕೂ ಅಷ್ಟೇ ಕಾಲ ಕೊಡಬೇಕಾಗುತ್ತದೆ. ನಾವು ಯಾವ ವ್ಯಕ್ತಿ, ವಸ್ತು ಗುಣಗಳ ಬಗ್ಗೆ ಈಗ ಅಸಹನೆ ಪ್ರತಿಭಟನೆ ಮಾಡುತ್ತಿರುತ್ತೇವೆಯೋ ಅದೇ ನಮ್ಮೊಳಗೆ ಇರಬಹುದಾದ ಎಚ್ಚರ ನಮ್ಮದಾಗುತ್ತದೆ. ಇದಾಗುತ್ತದೆಯೆ? ಅಥವಾ ಇದು ಬಿಟ್ಟು ಬೇರೆ ದಾರಿ ಇದೆಯೇ ?
(ಮಣಿಪಾಲ್  ಗಾಂಧಿ ಸಂಸ್ಕೃತಿ ವಿಚಾರ ಸಂಕಿರಣದಲ್ಲಿ ಆಡಿದ ಮಾತುಗಳು)
ಕೃಪೆ : ಕೆಂಡಸಂಪಿಗೆ  ಬ್ಲಾಗ್


No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.