ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಬೈದೆ
ಆತ ಫಕ್ಕೆಂದು ನಕ್ಕ
ನೆರೆಮನೆಯ ಬೋರು ಬಹಾದ್ದೂರ್ ಕಂಗಾಲಾಗಿ
ಹರಳೆಣ್ಣೆ ಕುಡಿದವನಂತೆ ಮುಖ ಮಾಡಿ
"ಏನೋ ಮಾರಾಯಾ ನೀನು ಆ ನಿರ್ಗುಣ ನಿರಾಕಾರ
ಅನಾಥ ಜಗನ್ನಾಥನಿಗೆ ಹೀಗೇಕೆ
ವಿನಾಕಾರಣ ಬೈಯುತ್ತಿ" ಎಂದು ಕೇಳಿದ
ಇನ್ನೊಮ್ಮೆ ನಾನು ಬೈದೆ
ಯುನಿವ್ಹರ್ಸಿಟಿಯ ಕಟ್ಟಡ ಸೊಂಟದವರೆಗೆ
ಕುಸಿದು ಬಿದ್ದಂತಾಯಿತು
ನನ್ನ ಬೈಗುಳದ ಬಗ್ಗೆ ಹಾಗೂ
ಮನುಷ್ಯನಿಗೇಕೆ ಸಿಟ್ಟು ಬರುತ್ತದೆಂಬುದರ ಬಗ್ಗೆ
ಅಲ್ಲೀಗ ರೀಸರ್ಚ್ ನಡೆದಿದೆಯಂತೆ
ನನ್ನ ಹುಟ್ಟುಹಬ್ಬದ ದಿನ ಮತ್ತೆ
ನಾನು ದೇವರಿಗೆ ಬೈದೆ
ಇನ್ನಷ್ಟು ಮತ್ತಷ್ಟು
ಬೈಗುಳಗನ್ನು ಬೈದೇ ಬೈದೆ
"ಮಗನೇ ತುಂಡು ರೊಟ್ಟಿಗಾಗಿ ಎಂದಾದರೂ
ನೀನು ಚಕ್ಕಡಿ ತುಂಬ ಕಟ್ಟಿಗೆ ಒಡೆದಿದ್ದಿಯಾ ?
ಚಿಂದಿ ತೊಟ್ಟ ಅವ್ವನ ಮಾನವನ್ನು
ಎಂದಾದರೂ ನೀನು ಕಾಯ್ದಿದ್ದಿಯಾ ?
ಅಪ್ಪನಿಗೆ ಬೇಕಾಗುವ ಬೀಡಿಯನ್ನು
ಎಂದಾದರೂ ನೀನು ತಂದುಕೊಟ್ಟಿದ್ದೀಯಾ ?
ಅವನಿಗೆ ಬೇಕಾದ ಶೆರೆಗಾಗಿ
ಎಂದಾದರೂ ಚಮಚಾಗಿರಿ ಮಾಡಿದ್ದೀಯಾ ?
ಇಂಪಾಸಿಬಲ್ ; ನಿನಗಿದು ಅಸಾಧ್ಯ
ಅದಕ್ಕೆ ಬೇಕು ; ಅವಮಾನಿತವಾದ ಬದುಕು
ಎಲ್ಲರಿಂದ 'ಛೀ' 'ಥೂ' ಅನ್ನಿಸಿಕೊಳ್ಳುವಂಥ ಜೀವನ
ಮಣ್ಣಿನ ಜೊತೆ ಮಣ್ಣಾಗಿ ದುಡಿಯುವ
ನನ್ನ ಅವ್ವನಂಥ ಅವ್ವ
ಇವುಗಳಲ್ಲಿ ಯಾವುದೂ ಅವನಿಗಿಲ್ಲದಿದ್ದುರಿಂದ
ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಎಲ್ಲರೆದುರೇ ಬೈದೆ !
ಮೂಲ ಮರಾಠಿ : ಕೇಶವ ಮೇಶ್ರಾಮ
ಕನ್ನಡಕ್ಕೆ : ಡಾ. ಸರಜೂ ಕಾಟ್ಕರ್
No comments:
Post a Comment