ಬಸವರಾಜ್ ಸುಳೇಭಾವಿ ಇದು ಪತ್ರವೊ, ಪದ್ಯವೊ, ಬದುಕೊ ? ಏನೆಂಬುದನ್ನು ಕಾಲಕ್ಕೆ ಒಪ್ಪಿಸಿಬಿಡೋಣ ಎಲ್ಲವನ್ನು ತಕ್ಕಡಿಯಲ್ಲಿ ತೂಗುವುದು ಲೋಕದ ನಿಯಮ.. ಹೂ ,ಹಣ್ಣು, ನೀರು ಸಹ.. ತಕ್ಕಡಿ ಹಿಡಕೊಂಡವರು ಮನುಷ್ಯರೆ ಆಗಿರುವದರಿಂದ ಮನವ ತೂಗುವುದು ಅದೇನು ಕಷ್ಟ ? ಪರೀಕ್ಷಿಸದೆ ಏನನ್ನೂ ಒಳಗೆ ಬಿಟ್ಟುಕೊಳ್ಳಕೂಡದು ಎನ್ನುತ್ತದೆ ಜಗವು.. ಪರೀಕ್ಷೆ ಎಂದ ಮೇಲೆ ಅದು ಏಕ ಮುಖವಾಗಿಯೆ ಇರುತ್ತದೆ. ನಾನು ಪರೀಕ್ಷೆಗೆ ಸಿದ್ದವಾಗಿದ್ದೇನೆ .. ನಾನು ಕಳೆದುಹೋಗಿ ನೀನಾಗುವ ರೂಪಾಂತರದಲ್ಲಿ ನಿನ್ನದೆ ಸಮಯ ತಗೆದುಕೊಂಡು ನಿನ್ನತನದಲ್ಲಿ ಎಷ್ಟು ಸಲವಾದರೂ ಮನವ ಒರೆಗೆ ಹಚ್ಚಿಡು. ಲೋಕದ ಸತ್ಯ ಎಲ್ಲರಿಗೆ ತಿಳಿದಿದೆ. ನನ್ನೊಳಗಿನ ಸತ್ಯ ನಿನಗೆ ತಿಳಿದಿದೆ. ಸತ್ಯಗಳು ನಮ್ಮ ಮನಸಿನಂತೆ ಕಾಣುವದರಿಂದ ಸತ್ಯಕ್ಕೂ ರೂಪಗಳಿವೆ.. ನಾವೆಷ್ಟೆ ನನ್ನತನ ಉಳಿಸಿಕೊಂಡು ನಮ್ಮಿಷ್ಟದ ಹಾಗೆ ಬದುಕುತ್ತೇವೆಂದರೂ ಸಿದ್ದಮಾದರಿಯ ಬದುಕನ್ನು ಭಂಜನ ಮಾಡುವ ಕಾಲ ಬಂದಾಗ ನಮ್ಮಿಷ್ಟವನ್ನು ಮೀರಿ ದುಗುಡ ನಮ್ಮನ್ನಾವರಿಸುತ್ತದೆ.. ಲೌಕಿಕತನಕಷ್ಟೆ ಮೀಸಲಾಗಿ ಬದುಕಿದ ಜೀವದಲ್ಲೂ ತೀವ್ರ ಭಾವನಾತ್ಮಕ ಎಳೆಯೊಂದು ಸದಾ ಜೀವಂತವಿರುತ್ತದೆ.. ನಾನು ಹಾಗಿಯೆ ಎಂದು ನಿನಗೆ ಬಿಡಿಸಿಹೇಳಬೇಕಿಲ್ಲ. ನನ್ನಂಥವನಲ್ಲಿ ಬಂಡುಕೋರತನ ಇರುವುದೆ ಈ ಭಾವನಾತ್ಮಕ ಎಳೆಯಿಂದ. ಈ ಕಾರಣಕ್ಕೆ ಇರಬೇಕು ಭಾವನೆಗಳಲ್ಲಿ ತೀವ್ರತೆ ಬಂದುಬಿಟ್ಟಿದೆ. ನನಗೆ ನನಗೊಪ್ಪುವಂಥದ್ದನ್ನೆ ಆಯ್ಕೆ ಮಾಡಿಕೊಂಡು ಬದುಕಿದ ಅಭ್ಯಾಸ. ನನ್ನ ಮನದ ವೇವ್ ಲೆಂತ್ ಗೆ ಹೊಂದುವಂಥವಳೆಂದೆ ನಾನು ನಿನ್ನ ಬಳಿ ಬಂದೆ. ದೈಹಿಕ ಅಪೇಕ್ಷೆಗಳೆ ಮುಖ್ಯವೆನಿಸಿದ್ದರೆ, ಸರಳ ಹೊಂದಾಣಿಕೆ ಮಾಡಿಕೊಂಡಿದ್ದರೆ ಬದುಕಿನ ದಿಕ್ಕೆ ಬೇರೆಯಾಗಿ ಬಿಡುತಿತ್ತು.. ನಾನೇನು ಕಳಕೊಂಡೆ ಅನ್ನುವದಕ್ಕಿಂತ ನಾನೇನು ಪಡದೆ ಅನ್ನುವುದು ನನಗೀಗಲೂ ಮುಖ್ಯವೆನಿಸುವುದು. ನಾನು ನಿನ್ನೆದುರು ಇದ್ದ ರೂಪದಲ್ಲಿ ಪ್ರಕಟವಾಗವುದು ನಂಗಿಷ್ಟ .. ಅಗಾಧ ಪ್ರಮಾಣಿಕತೆ ಬೆತ್ತಲೆಗಷ್ಟೆ ಇದೆಂಬ ನಂಬುಗೆ ನನ್ನಲ್ಲಿದೆ.. ಅದರಷ್ಟು ಸುಂದರವಾದುದು ಇನ್ನ್ಯಾವುದಿದೆ ? ಹೂ , ನದಿ, ಬೆಟ್ಟ, ಉದಯಾಸ್ತದ ಸೂರ್ಯ , ಯಾವುದು ಮುಜುಗುರಕ್ಕಿಡಾಗದೆ ಬೆತ್ತಲಿದೆಯೊ ಅದೆಲ್ಲವೂ ಅನುಪಮ ಸುಂದರವಾಗಿದೆ . ಅಂಥ ಸೌಂದರ್ಯಕ್ಕೆ ಸಾವೆ ಇಲ್ಲವೆನ್ನುವುದು ನಿನಗೂ ಗೊತ್ತಿರುವ ಸಂಗತಿ. ಸಾವಿರುವ ನಾವು ಕೆಲ ಗಳಿಗೆಯಾದರೂ ಸಾವಿಲ್ಲದ ಹಾಗೆ ಬದುಕಬೇಕು. ಕವಿ ಮಹೆಜಬೀನ್ ಳ ಕವಿತಾ ಸಾಲು ನನಗೆ ಅಪ್ತವೆನಿಸುವುದು ಬಹುಶಃ ಮುಜುಗುರವಿಲ್ಲದೆ ಬೆತ್ತಲಾಗಿ ಬರೆಯುವ ಕಾರಣಕ್ಕೆ . ನೈಜ ಬೆತ್ತಲೆಯಷ್ಟೆ ಸತ್ಯ.. ಓಷೊ ಕೂಡ ಹೀಗೆ ಬರಿಯುತ್ತಾನೆ. ನನಗೆ ಓಷೊನ ಇಡಿ ಥೇಯರಿ ಇಷ್ಟವಾಗದು. ಮಹೆಜಬೀನ್ ಳ ಕವಿತೆ ಕೂಡ ನನ್ನ ಬಟ್ಟೆ ಭ್ರಮೆಯನ್ನು ಹರಿದುಹಾಕಿತು. ನಿನ್ನ ಪ್ರೀತಿಸುತ್ತೇನೆ ನಿನ್ನ ದೇಹವನ್ನು ಪ್ರೀತಿಸುತ್ತೇನೆ ನೀನೂ ಅಂದ್ರೆ ನಂಗಿಷ್ಟ ನಿನ್ನ ಮನಸು , ನಿನ್ನ ಮೆದುಳು ನಿನ್ನ ಸಿದ್ದಿ , ನಿನ್ನ ಬುದ್ದಿ... ನಿನ್ನೊಂದಿಗೆ ಬದುಕಿನನುಭವ ಬೇಕು ಅಂಥ ಸ್ಪಷ್ಟವಾಗಿ ಹೇಳಿಬಿಡಬೇಕು ನಿಜ ಹೇಳಬೇಕಾದವರ ಎದುರಿಗೆ ಒಳಗನ್ನು ತೆರೆಕೊಂಡ ಮಾತಷ್ಟೆ ಅಂತಿಮವಾಗಿ ಉಳಿಯುತ್ತದೆ, ಹಾಗೆ ಉಳಿಯದ ಬದುಕಿಗೆ ಏನು ಸಾರ್ಥಕತೆ ಇದೆ ಹೇಳು. ಎದೆಯ ಜೀವ ಮಿಡಿತ ನಿಂತ ಮೇಲೆ ಎದೆಯೊಳಗಿನ ಬೆಳಕನ್ನು ಯಾವ ಕಣ್ಣೂ ಉಳಿಸಿಕೊಳ್ಳದು ಎಲ್ಲವನ್ನು ಒಂದೇ ಸಾರಿಗೆ ಹೇಳಿ ಬಿಡಲು ಬರುವುದಿಲ್ಲ. ನೀನು ನಿನ್ನದೆ ಸಮಯವನ್ನು ತಗೆದುಕೊ. ಎಷ್ಟು ಸಾರಿಯಾದರೂ ಈ ಮನವ ಒರೆಗೆ ಹಚ್ಚಿಡು. ಬೆಂಕಿಗೆ ಹಾಕು. ಹಿಮದಲ್ಲಿ ನಿಲ್ಲಿಸು. ಸುರಿವ ಮಳೆಗೆ ದಬ್ಬು ಬದುಕಿಕೊಂಡರೆ ಒಳಗೆ ಬಿಟ್ಟಿಕೊ. ನಿನ್ನ ಪರೀಕ್ಷೆಯ ಮೊದಲೆ ನಾನು ಹಾಗಿದ್ದಿನಿ ನಿನ್ನ ನಂಬಿಸಲು ಹೊರಟನೇನೆ ನಾನು.. ಎಂದಿಗೂ ಹಾಗಾಗಬಾರದು ಅಂತಿಮವಾಗಿ ನಂಬಿಗೆ ಏನನ್ನೂ ಹುಟ್ಟಿಸದು ಪ್ರೇಮವನ್ನೂ ಸಹ ಸದಾ ನಿನ್ನ ಗೆಲ್ಲುವ ಪಟ್ಟುಗಳನ್ನು ಹುಡುಕಿಕೊಂಡು ಅಲಿಯಲಾರೆ. ಗೆದ್ದವರೇನೋ ಇತಿಹಾಸದಲ್ಲಿ ಉಳಿದುಹೋಗಬಲ್ಲರು.ಆದರೆ ಗೆಲುವಿನ ಇಗೋಗಿಂತ ಸೋಲಿನ ವಿನಯವೆ ಮನುಕುಲದ ಪ್ರೇಮವನ್ನುಉಲಿಸಿಕೊಂಡು ಬಂದಿದೆ . ಮನದಲ್ಲಿ ಉಳಿಯಲು ಗೆಲ್ಲಬೇಕೇನಿಲ್ಲ.. ಸ್ಪರ್ಧೆಯನ್ನು ನಿರಾಕರಿಸಿದವರನ್ನು ಸ್ಪರ್ಧೆಗೆ ತಳ್ಳುವುದು ಬದುಕಿಗೆ ಖುಷಿಕೊಡುವ ಸಂಗತಿ ಆಗಿದೆಯೇನೊ ? ಬದುಕನ್ನು ಸ್ಪರ್ಧೆಯಾಗಿಸಿದ ಮೇಲೆ ಒಬ್ಬರು ಗೆಲ್ಲಬೇಕು. ಆದರೇನು ಅದೇ ಬದುಕು ಗೆಲ್ಲುವ ಹುಚ್ಚಿಗೆ ಬಿದ್ದವರನ್ನು ವಂಚಿಸಿ ತಾನೆ ಗೆಲ್ಲುವುದು.. ನಾನು ನಿನ್ನ ಒಲವು ಸಂಪಾದಿಸಲಷ್ಟೆ ಹೊರಟವನು ಗೆಲ್ಲಲ್ಲ. ಗೆಲವು ಎಷ್ಟೆ ದೊಡ್ಡದಾದರೂ ಅದರ ಮಂದಹಾಸ ಬಹುಕಾಲ ಉಳಿಯದು. ಸೋಲಿನ ರೂಪವೆ ಬೇರೆ. ಸೋಲು ಎಷ್ಟೆ ಸಣ್ಣದಾದರೂ ಅದರ ನೋವು ಜೀವನ್ಪೂರ್ತಿ ಉಳಿಯುವುದು. ನೀನೊಡ್ಡಿದ ಪರೀಕ್ಷೆಯಲ್ಲಿ ನಾನು ಸೋತರೇನು ಹೀಗಾದರೂ ಸರಿಯೆ ನೀನು ನನ್ನೊಂದಿಗೆ ಜೀವನ್ಪೂರ್ತಿ ಉಳಿಯುವೆ. ನನ್ನೊಳಗಿನ ಮಾತು ಸತ್ತು ಹೋಗಿದೆ. ಉಳಿದದ್ದು ಮೌನವಷ್ಟೆ. ನಿನಗೆ ಏನೂ ಅನ್ನಿಸದ ಹಾಗೆ ನಿನ್ನ ಪ್ರೀತಿಸಲು ನನಗಿರುವ ಮಾರ್ಗ ಇದೊಂದೆ. ಏನಾದರೂ ಸರಿಯೆ ಪರೀಕ್ಷಿಸುವುದ ಕೈಬಿಡಬೇಡ ಈ ಪ್ರೇಮ ಇನ್ನೂ ಸೋಲೊಪ್ಪಿಕೊಂಡಿಲ್ಲ
No comments:
Post a Comment