Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.