Saturday, July 27, 2013

‘ಅನಂತನ್‌’ ಅವಾಂತರ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗುದಮುರುಗಿ !

RCUB Anantan-Cartoon
ಅವಧಿ ಮುಗಿದರೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಪ್ರೊ.ಬಿ.ಆರ್. ಅನಂತನ್ ವಿರಾಜಮಾನರಾಗಿದ್ದಾರೆ.
ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಆದೇಶದನುಸಾರ ಅನಂತನ್ ಅವರ ಅಧಿಕಾರಾವಧಿ 2013ರ ಮೇ 2ಕ್ಕೆ ಮುಗಿದಿದೆ.
ಆದರೆ ಕಳೆದ 2 ತಿಂಗಳಿಂದ ಅನಧಿಕೃತವಾಗಿ ಕುಲಪತಿ ಹುದ್ದೆಯಲ್ಲಿ ಅನಂತನ್ ಮುಂದುವರಿದಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರು ಮಾತ್ರ ಕುಲಪತಿ ನೇಮಕ ಹಾಗೂ ಶೋಧನಾ ಸಮಿತಿ ರಚನೆ ಕುರಿತಂತೆ ಮೌನವಹಿಸಿದ್ದಾರೆ.
ಕಳೆದ 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪ್ರೊ. ಅನಂತನ್ ಅವರು 4 ವರ್ಷದ ಅವಧಿಗೆ ಅಥವಾ 65 ವರ್ಷ ಆಗುವವರೆಗೆ ರಾಣಿ ಚೆನ್ನಮ್ಮ ವಿವಿಯ ಪ್ರಥಮ ಕುಲಪತಿಯಾಗಿರುತ್ತಾರೆ. ಇದಲ್ಲದೇ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, 4 ವರ್ಷದ ಸೇವಾವಧಿ ಅಥವಾ 65 ವರ್ಷಗಳಲ್ಲಿ ಯಾವುದು ಮೊದಲಾಗುತ್ತದೆಯೋ ಅದನ್ನು ಪರಿಗಣಿಸಲಾಗುವುದು ಎಂದು. ಆದರೆ ಪ್ರೊ.ಅನಂತನ್ ಅವರು ಬೇರೆ ಲೆಕ್ಕಾಚಾರ ಮಾಡುತ್ತಿದ್ದು, ತಮ್ಮ ಸೇವಾವಧಿ ಇನ್ನು 2 ವರ್ಷವಿದೆ ಎಂದು ಅಕ್ರಮವಾಗಿ ವಿವಿಯಲ್ಲಿ ಠಿಕಾಣಿ ಹೂಡಿದ್ದಾರೆ.
ವಿಚಿತ್ರವೆಂದರೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ. ನೂತನ ವಿಶ್ವವಿದ್ಯಾಲಯದ ಮೊದಲ ಕುಲಪತಿಯೇ ಇಂತಹ ನೀತಿಗಳಿಗೆ ನಾಂದಿ ಹಾಡಿದರೆ ವಿವಿಯ ಸ್ಥಿತಿ ಅಧೋಗತಿಗೆ ತಲುಪುವುದರಲ್ಲಿ ಅನುಮಾನವಿಲ್ಲ ಎಂಬುದುದ ಅವರ ಅಭಿಪ್ರಾಯ.
ಸರ್ಕಾರದ ಆದೇಶದಲ್ಲೇನಿದೆ?: ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಯು.ಬಿ.ಉಳವಿ ಅವರು 2010ರ ಅಗಸ್ಟ್ 16ರಂದು ಹೊರಡಿಸಿದ ಆದೇಶ ಹೀಗಿದೆ, ‘ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ಪ್ರಕಾರ ಪ್ರೊ.ಬಿ.ಆರ್. ಅನಂತನ್ ಅವರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ಅಥವಾ ಸದರಿಯವರಿಗೆ 65ವರ್ಷಗಳು ವಯಸ್ಸಾಗುವುವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ’.
ಈ ಆದೇಶದಲ್ಲಿ ಒಂದಂಶವನ್ನು ಸರ್ಕಾರ ಸೇರಿಸಿದೆ. ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂದು ಹೇಳಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ತಿದ್ದುಪಡಿಯೇನು?: ಕಳೆದ 2011ರ ಫೆಬ್ರುವರಿಯಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತಂದು, ಕುಲಪತಿಯಾಗಲು ಇರುವ ವಯೋವುತಿಯನ್ನು 67ಕ್ಕೆ ಏರಿಸಲಾಯಿತು. ಇದನ್ನೇ ನೆಪವಾಗಿರಿಸಿಕೊಂಡಿರುವ ಅನಂತನ್ ಇನ್ನು ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯೊಬ್ಬರು ಹೇಳಿದ ಪ್ರಕಾರ, ‘ಅನಂತನ್ ಅವರ ನೇಮಕವು 2010ರಲ್ಲಿ ಆಗಿದೆ. ಆದರೆ ಈ ತಿದ್ದುಪಡಿಯಾಗಿರುವುದು 2011ರಲ್ಲಿ. ಆದ್ದರಿಂದ ಅವರ ಅಧಿಕಾರವಧಿ 2013ರ ಮೇ ತಿಂಗಳಿನಲ್ಲಿಯೇ ಕೊನೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಈ ಗೊಂದಲದ ಅರಿವಿದ್ದರೂ ಯಾವುದೆ ಕ್ರಮ ತೆಗೆದುಕೊಂಡಿಲ್ಲ’.
ಆದರೆ 2010ರ ಅ.16 ರಂದು ಹೊರಡಿಸಿದ ಅಧಿಸೂಚನೆ ಹಾಗೂ ಅ.17ರಂದು ಹೊರಡಿಸಿದ ಸರ್ಕಾರಿ ಆದೇಶವು ವಿಭಿನ್ನವಾಗಿದೆ. ಅ.17ರಂದು ಪ್ರಕಟವಾಗಿರುವ ಸರ್ಕಾರಿ ಆದೇಶದಲ್ಲಿ ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂಬಂಶ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಂತನ್ ಅವರ ವಾದಕ್ಕೆ ಮನ್ನಣೆ ದೊರಕುವುದಿಲ್ಲ.
ಹುಟ್ಟಿದ ದಿನಾಂಕದ ದಾಖಲೆ ನೀಡಿಲ್ಲ!
ವಿವಿಯ ವಿಶೇಷಾಧಿಕಾರಿ ಹಾಗೂ ಕುಲಪತಿಗಳಾಗಿ ನೇಮಕವಾದ ಬಳಿಕ ಹುಟ್ಟಿದ ದಿನಾಂಕದ ಮಾಹಿತಿಯನ್ನು ಇಲಾಖೆಗೆ ನೀಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಾರಣದಿಂದ ಅವರ ನಿವೃತ್ತಿ ವಯಸ್ಸು ತಿಳಿದಿಲ್ಲ ಎಂಬ ವಾದವನ್ನು ಇಲಾಖೆ ಹೇಳುತ್ತಿದೆ. ಆದರೆ ‘ಕನ್ನಡಪ್ರಭ’ಕ್ಕೆ ಈ ಕುರಿತ ದಾಖಲೆಗಳು ದೊರೆತಿದ್ದು, 1948ರ ಮೇ 2ರಂದು ಪ್ರೊ.ಅನಂತನ್ ಅವರು ಜನಿಸಿದ್ದಾರೆ.
ಕೃಪೆ : ಕನ್ನಡಪ್ರಭ 16 Jul 2013 02:00:00 AM IST

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.