Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

Saturday, July 27, 2013

‘ಅನಂತನ್‌’ ಅವಾಂತರ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗುದಮುರುಗಿ !

RCUB Anantan-Cartoon
ಅವಧಿ ಮುಗಿದರೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಪ್ರೊ.ಬಿ.ಆರ್. ಅನಂತನ್ ವಿರಾಜಮಾನರಾಗಿದ್ದಾರೆ.
ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಆದೇಶದನುಸಾರ ಅನಂತನ್ ಅವರ ಅಧಿಕಾರಾವಧಿ 2013ರ ಮೇ 2ಕ್ಕೆ ಮುಗಿದಿದೆ.
ಆದರೆ ಕಳೆದ 2 ತಿಂಗಳಿಂದ ಅನಧಿಕೃತವಾಗಿ ಕುಲಪತಿ ಹುದ್ದೆಯಲ್ಲಿ ಅನಂತನ್ ಮುಂದುವರಿದಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರು ಮಾತ್ರ ಕುಲಪತಿ ನೇಮಕ ಹಾಗೂ ಶೋಧನಾ ಸಮಿತಿ ರಚನೆ ಕುರಿತಂತೆ ಮೌನವಹಿಸಿದ್ದಾರೆ.
ಕಳೆದ 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪ್ರೊ. ಅನಂತನ್ ಅವರು 4 ವರ್ಷದ ಅವಧಿಗೆ ಅಥವಾ 65 ವರ್ಷ ಆಗುವವರೆಗೆ ರಾಣಿ ಚೆನ್ನಮ್ಮ ವಿವಿಯ ಪ್ರಥಮ ಕುಲಪತಿಯಾಗಿರುತ್ತಾರೆ. ಇದಲ್ಲದೇ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, 4 ವರ್ಷದ ಸೇವಾವಧಿ ಅಥವಾ 65 ವರ್ಷಗಳಲ್ಲಿ ಯಾವುದು ಮೊದಲಾಗುತ್ತದೆಯೋ ಅದನ್ನು ಪರಿಗಣಿಸಲಾಗುವುದು ಎಂದು. ಆದರೆ ಪ್ರೊ.ಅನಂತನ್ ಅವರು ಬೇರೆ ಲೆಕ್ಕಾಚಾರ ಮಾಡುತ್ತಿದ್ದು, ತಮ್ಮ ಸೇವಾವಧಿ ಇನ್ನು 2 ವರ್ಷವಿದೆ ಎಂದು ಅಕ್ರಮವಾಗಿ ವಿವಿಯಲ್ಲಿ ಠಿಕಾಣಿ ಹೂಡಿದ್ದಾರೆ.
ವಿಚಿತ್ರವೆಂದರೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ. ನೂತನ ವಿಶ್ವವಿದ್ಯಾಲಯದ ಮೊದಲ ಕುಲಪತಿಯೇ ಇಂತಹ ನೀತಿಗಳಿಗೆ ನಾಂದಿ ಹಾಡಿದರೆ ವಿವಿಯ ಸ್ಥಿತಿ ಅಧೋಗತಿಗೆ ತಲುಪುವುದರಲ್ಲಿ ಅನುಮಾನವಿಲ್ಲ ಎಂಬುದುದ ಅವರ ಅಭಿಪ್ರಾಯ.
ಸರ್ಕಾರದ ಆದೇಶದಲ್ಲೇನಿದೆ?: ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಯು.ಬಿ.ಉಳವಿ ಅವರು 2010ರ ಅಗಸ್ಟ್ 16ರಂದು ಹೊರಡಿಸಿದ ಆದೇಶ ಹೀಗಿದೆ, ‘ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ಪ್ರಕಾರ ಪ್ರೊ.ಬಿ.ಆರ್. ಅನಂತನ್ ಅವರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ಅಥವಾ ಸದರಿಯವರಿಗೆ 65ವರ್ಷಗಳು ವಯಸ್ಸಾಗುವುವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ’.
ಈ ಆದೇಶದಲ್ಲಿ ಒಂದಂಶವನ್ನು ಸರ್ಕಾರ ಸೇರಿಸಿದೆ. ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂದು ಹೇಳಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ತಿದ್ದುಪಡಿಯೇನು?: ಕಳೆದ 2011ರ ಫೆಬ್ರುವರಿಯಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತಂದು, ಕುಲಪತಿಯಾಗಲು ಇರುವ ವಯೋವುತಿಯನ್ನು 67ಕ್ಕೆ ಏರಿಸಲಾಯಿತು. ಇದನ್ನೇ ನೆಪವಾಗಿರಿಸಿಕೊಂಡಿರುವ ಅನಂತನ್ ಇನ್ನು ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯೊಬ್ಬರು ಹೇಳಿದ ಪ್ರಕಾರ, ‘ಅನಂತನ್ ಅವರ ನೇಮಕವು 2010ರಲ್ಲಿ ಆಗಿದೆ. ಆದರೆ ಈ ತಿದ್ದುಪಡಿಯಾಗಿರುವುದು 2011ರಲ್ಲಿ. ಆದ್ದರಿಂದ ಅವರ ಅಧಿಕಾರವಧಿ 2013ರ ಮೇ ತಿಂಗಳಿನಲ್ಲಿಯೇ ಕೊನೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಈ ಗೊಂದಲದ ಅರಿವಿದ್ದರೂ ಯಾವುದೆ ಕ್ರಮ ತೆಗೆದುಕೊಂಡಿಲ್ಲ’.
ಆದರೆ 2010ರ ಅ.16 ರಂದು ಹೊರಡಿಸಿದ ಅಧಿಸೂಚನೆ ಹಾಗೂ ಅ.17ರಂದು ಹೊರಡಿಸಿದ ಸರ್ಕಾರಿ ಆದೇಶವು ವಿಭಿನ್ನವಾಗಿದೆ. ಅ.17ರಂದು ಪ್ರಕಟವಾಗಿರುವ ಸರ್ಕಾರಿ ಆದೇಶದಲ್ಲಿ ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂಬಂಶ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಂತನ್ ಅವರ ವಾದಕ್ಕೆ ಮನ್ನಣೆ ದೊರಕುವುದಿಲ್ಲ.
ಹುಟ್ಟಿದ ದಿನಾಂಕದ ದಾಖಲೆ ನೀಡಿಲ್ಲ!
ವಿವಿಯ ವಿಶೇಷಾಧಿಕಾರಿ ಹಾಗೂ ಕುಲಪತಿಗಳಾಗಿ ನೇಮಕವಾದ ಬಳಿಕ ಹುಟ್ಟಿದ ದಿನಾಂಕದ ಮಾಹಿತಿಯನ್ನು ಇಲಾಖೆಗೆ ನೀಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಾರಣದಿಂದ ಅವರ ನಿವೃತ್ತಿ ವಯಸ್ಸು ತಿಳಿದಿಲ್ಲ ಎಂಬ ವಾದವನ್ನು ಇಲಾಖೆ ಹೇಳುತ್ತಿದೆ. ಆದರೆ ‘ಕನ್ನಡಪ್ರಭ’ಕ್ಕೆ ಈ ಕುರಿತ ದಾಖಲೆಗಳು ದೊರೆತಿದ್ದು, 1948ರ ಮೇ 2ರಂದು ಪ್ರೊ.ಅನಂತನ್ ಅವರು ಜನಿಸಿದ್ದಾರೆ.
ಕೃಪೆ : ಕನ್ನಡಪ್ರಭ 16 Jul 2013 02:00:00 AM IST

Tuesday, July 23, 2013

ಮ್ಹಾಳಸಾ : ಅಪರೂಪದ ಭಕ್ತೆ !

ಮೂಲ ಮರಾಠಿ : ಡಾ. ವಿನೋದ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
--------------------------------------------- 
(ಸಧ್ಯದಲ್ಲೇ ಪ್ರಕಟಗೊಳ್ಳುವ ನಾನು ಅನುವಾದಿಸಿದ ಸಾಯಿ ಕಥಾ ಆಧಾರಿತ ಮಹಾಕಾದಂಬರಿಯ ಒಂದು ಕತೆ)

ಮ್ಹಾಳಸಾ !
ಮ್ಹಾಳಿ...
ಕುಬ್ಜ ದೇಹ, ಕೆದರಿದ ಕೂದಲು, ಒಣಗಿದ ಮುಖ, ಹರಿದ ಬಟ್ಟೆ, ಅಲ್ಲಲ್ಲಿ ಚಿಂದಿ ಕಟ್ಟಿಕೊಂಡಿರುವ ಮ್ಹಾಳಸಾ...
ಹುಚ್ಚಳಂತೆ ಕಾಣುತ್ತಿದ್ದಳು... ಅಲ್ಲಲ್ಲ ಹುಚ್ಚಳೇ !
ತುಂಬ ಅಚ್ಚರಿಗೊಳ್ಳುವ ಹೃದಯ ಹಿಂಡುವ ಕತೆ ಆಕೆಯ ಬೆನ್ನಿಗಿತ್ತು...
ಸಂಗಮನೇರ ಊರಿನ ಸಮೀಪ ಕಸರವಾಡಿ ಸಣ್ಣ ಹಳ್ಳಿಯೊಂದಿದೆ. ಆ ಹಳ್ಳಿಯೇ ಮ್ಹಾಳಸಾಳ ಹುಟ್ಟೂರು... ಜಾತಿಯಿಂದ ಮರಾಠಾ ಹೆಣ್ಣುಮಗಳು...
ತಂದೆ-ತಾಯಿ ತುಂಬು ಪ್ರೀತಿಯಿಂದಲೇ ಆಕೆಗೆ ಹೆಸರಿಟ್ಟಿದ್ದರು...
ರಾಧಾ...
ಜನರೆಲ್ಲ ಮುದ್ದಿನಿಂದ ‘ರಾಧೀ’ ಎಂದೇ ಕರೆಯುತ್ತಿದ್ದರು...
ರಾಧಿ ತುಂಬ ಮಾತುಗಾರ್ತಿ, ಹಠಗಾರ್ತಿಯಾಗಿದ್ದರೂ ಎಲ್ಲ ಕೆಲಸವನ್ನೂ ಮಾಡಿ ಮುಗಿಸುತ್ತಿದ್ದಳು.
ಯಾರಾದರೂ ತನಗೆ ಕೆಲಸ ಹೇಳಬೇಕು... ತಾನು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು ಎಂಬ ಹಂಬಲ ಆಕೆಯದು ! ಬೇರೆಯವರ ಕೆಲಸ ಮಾಡುವುದರಲ್ಲೇ ಆಕೆ ಖುಷಿ ಪಡೆಯುತ್ತಿದ್ದಳು...
“ರಾಧೇ...”ಯಾರಾದರೂ ಕರೆಯುತ್ತಿದ್ದರು...
“ಏನ್ರೀಪಾ ?”
“ನೀ ಯಾರಾಕೀ ?”
“ನಾ ನಮ್ಮವ್ವನ ಪೈಕಿ ಅಲ್ಲ” ಆಕೆಯ ಉತ್ತರ ನೀಡುವ ರೀತಿಯೇ ವಿಚಿತ್ರವಾಗಿತ್ತು. ಸುತ್ತು ಬಳಸಿ ‘ತಾನು ಯಾರಾಕಿ’ ಎಂದು ಹೇಳುವ ಮೊದಲು ‘ತಾನು ಯಾರಾಕಿ ಅಲ್ಲ’ ಎಂಬುದನ್ನು ಹೇಳುವಲ್ಲಿ ಆಕೆಗೆ ಗಮ್ಮತ್ತೆನಿಸುತ್ತಿತ್ತು...
“ಮತ್ತ ಯಾರಾಕಿ ?”
“ನಾ ಅಪ್ಪನ ಪೈಕಿನೂ ಅಲ್ಲ !”
“ಮತ್ತ ?”
“ಕಾಕಾ-ಕಾಕೂನಾಕೀ ಅಲ್ಲ...”
“ಮತ್ತ ಯಾರಲೇ ನೀ ?”
ಆಕೆ ಮನುಷ್ಯರಿಂದ ಗಿಡ-ಮರಗಳತ್ತ, ಅಲ್ಲಿಂದ ಸೂರ್ಯ-ಚಂದ್ರ ಮೊದಲಾದ ಗ್ರಹ ತಾರೆಗಳತ್ತ ಹೊರಳುತ್ತಿದ್ದಳು... !
ಕೇಳುತ್ತಿರುವವರಿಗೆ ಏನೋ ಗಮ್ಮತ್ತಿಲ್ಲ ಎನಿಸಿ ಬೇಸರವಾಗಬೇಕು... ಅವರು ಅಲ್ಲಿಂದ ಜಾಗ ಖಾಲಿ ಮಾಡುವಾಗಲೇ ಆಕೆ ಅವರ ಕೈ ಹಿಡಿದು ಜಿಗಿಯುತ್ತ ಹೇಳುತ್ತಿದ್ದಳು... “ಹೆಂಗ ಗಮ್ಮತ್ತ ಮಾಡ್ನಿ ? ... ಆದರ ಈಗ ನಾ ಖರೇ ಖರೇನ ಹೇಳ್ತೇನ ಹ್ಞಾಂ...”
“ಹೇಳ ನೋಡೂಣು ?”
“ರಾಧಾ ಯಾರಾಕಿ ಇರ್ತಾಳು ?” ಆಕೆ ಮರಳಿ ಪ್ರಶ್ನೆ ಹಾಕುತ್ತಿದ್ದಳು...
“ಲೇ, ಇಲ್ಲಿ ನೋಡ... ನನಗೀಗ ವ್ಯಾಳಿ ಇಲ್ಲ... ಹೇಳೋದಿತ್ತಂದ್ರ ಸರಳ ಹೇಳ... ಇಲ್ಲಂದ್ರ ಹೇಳಬ್ಯಾಡ...ಆದರ ಉಲ್ಟಾ-ಸುಲ್ಟಾ ಪ್ರಶ್ನಾ ಮಾತ್ರ ಕೇಳಬ್ಯಾಡಾ...”
“ನಿಲ್ರಿ... ನಿಲ್ರಿ... ಕುದರ್ಗಿ ಭಾಳ ಅವಸ್ರ ನೋಡ... ! ನಾ ಹೇಳ್ತೇನಿ...”
“ಹೇಳ ...”
“ರಾಧಾ ಕೃಷ್ಣನಾಕಿ ಇರ್ತಾಳು...”
‘ಹ್ಞೂಂ !”
“ನಾನೂ ಸುದ್ದಾ ಕೃಷ್ಣನ ರಾಧಾ ಅದೇನಿ...” ಆಕೆ ಆಕಾಶದತ್ತ ನೋಡುತ್ತ ಎಲ್ಲಿಯೋ ಕಳೆದು ಹೋಗುತ್ತಿದ್ದಳು...
“ಆದರ ನಿನ್ನ ಕೃಷ್ಣ ಎಲ್ಲಿ ಅದಾನು ?”
ಆಕೆ ತಟ್ಟನೇ ವಾಸ್ತವಕ್ಕೆ ಬಂದು ಮರಳಿ ಹೇಳುತ್ತಿದ್ದಳು, “ಬರಾಂವ ಅದಾನು ನನ್ನ ಕೃಷ್ಣ... ನನ್ನ ದೇವ್ರು...”
“ಬರ್ತಾನಲೇ... ಖರೇನ ಬರ್ತಾನು ! ಈಗ ಮೊದಲ ನನ್ನ ಕೈ ಬಿಡ... ಹೋಗ್ತೇನ ನಾ...”
“ಹೋಗ್ರಿ”
ಹೀಗೆ ಹುಚ್ಚಿ ಎನಿಸುವ, ವಟಗುಟ್ಟುವ ರಾಧಾ ತುಂಬ ಮುದ್ದಾದ ಹುಡುಗಿ !
ಮನ ಸೆಳೆಯುವ ಪೋರಿ...
ಆದರೆ...
ಆಕೆಯ ಬದುಕಿನಲ್ಲಿ ಒಂದು ತಿರುವು ಬಂತು...
ಬಾಲ್ಯದಲ್ಲೇ ಆಕೆಗೆ ಮದುವೆಯಾಯಿತು...
ಆಕೆಯ ಮನದ ಧ್ಯಾನದಲ್ಲಿ ಕೃಷ್ಣ ಇದ್ದ... ಆದರೆ ಆಕೆಯ ಬದುಕಿನಲ್ಲಿ ನಾಮದೇವ ಆಬಾ ಸಾವಂತ ಹೆಸರಿನ ಅತ್ಯಂತ ಸಾಮಾನ್ಯ ಮತ್ತು ದುರಂಹಕಾರಿ ಮನುಷ್ಯ ಗಂಡನಾಗಿ ಬಂದ ! ಆಕೆಯ ಭಾವ ಜಗತ್ತು ಮುರಿದು ಬಿತ್ತು...
ಗಂಡನ ಮನೆಯಲ್ಲಿ ಆಕೆಯ ಹೆಸರೂ ಬದಲಾಯಿತು...
‘ರಾಧಾ’ ರೇವೂ’ ಆದಳು !
ರೇವೂ...
ಆಕೆಗೆ ಆ ಹೆಸರು ಇಷ್ಟವಾಗಲಿಲ್ಲ... ಗಂಡನೂ ಇಷ್ಟವಾಗಲಿಲ್ಲ... ಇಡೀ ಗಂಡನ ಮನೆಯೇ ಆಕೆಯನ್ನು ಹರಿದು ಮುಕ್ಕುವಂತಿತ್ತು...
ಹೀನಾಯವಾದ ವರ್ತನೆ...
ತಿಳುವಳಿಕೆರಹಿತ ನಡತೆ...
ಎಲ್ಲದಕ್ಕೂ ತಪ್ಪು ತಿಳುವಳಿಕೆ... ಅಜ್ಞಾನ...
ದನದಂತೆ ದುಡಿತ ಮತ್ತು ಮೈ ತುಂಬ ಹೊಡೆತ !
ಎಲ್ಲಿಯೂ ಹನಿ ಪ್ರೀತಿಯೂ ಇರಲಿಲ್ಲ...
ಒಂದಿಷ್ಟೂ ಆತ್ಮೀಯತೆಯ ಸೋಂಕು ಇರಲಿಲ್ಲ...
ಅಲ್ಲಿ ತನ್ನವರು ಎನ್ನುವವರು ಯಾರೂ ಇರಲಿಲ್ಲ...
ಮನುಷ್ಯರು ಇದ್ದರೂ ಮನುಷ್ಯತ್ವ ಇರಲಿಲ್ಲ...
ರಾಧಾ ಬೇಸರಿಸಿಕೊಂಡಳು... ನೊಂದುಕೊಂಡಳು...
ಒಂದು ಆಕೆ ತವರಿಗೆ ಬಂದವಳೇ ಇನ್ನೆಂದೂ ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಳು...
ಕೆಲವು ತಿಂಗಳು ಗತಿಸಿದವು...
ಒಂದು ದಿನ ಆಕೆಯ ಅಪ್ಪ ಆಕೆಯನ್ನು ಕರೆದ...
“ರಾಧೇ...”
“ಏನ ಬಾಬಾ ?”
“ನೀ ಗಂಡನ ಮನೀಗಿ ಮತ್ತ ಹೋಗೂದಿಲ್ಲೇನ... ?”
“ಇಲ್ಲ...”
“ಅದss ಯಾಕ ಅಂತೇನಿ ?”
“ಅದನ್ನss ಎಷ್ಟ ಸಲಾ ಹೇಳ್ಬೇಕ ಬಾಬಾ ? ನಿನಗೆಲ್ಲಾ ಗೊತ್ತss ಏತ್ಯಲ್ಲಾ ಬಾಬಾ ?”
“ಏತಿ ಪೋರಿ... ಎಲ್ಲಾ ಗೊತ್ತೇತಿ... ಆದ್ರ ಅದss ನಿನ್ನ ಖರೇ ಮನಿ !”
“ನನಗ ಹಂಗ ಅನ್ನಿಸೂದಿಲ್ಲ ಬಾಬಾ !”
“ಎಷ್ಟ ತಿಳಿಸಿ ಹೇಳಬೇಕವಾ ನಿನಗ ?”
“ಹೇಳಬ್ಯಾಡ್ರಿ ಬಿಡ್ರ್ಯಲಾ...”
“ಹಂಗಲ್ಲವಾ... ನಾನರೇ ಎಷ್ಟ ದಿವ್ಸ ಇರಾಂವದೇನಿ... ? ಲಗ್ನ ಆದ ಹೆಣ್ಮಗಳ ಮನ್ಯಾಗಿದ್ರ ಅಪ್ಪನ ಎದಿ ಮ್ಯಾಲೀನ ಕಲ್ಲ ಇದ್ದಾಂಗ !”
“ಬಾಬಾ, ನಾ ನಿನಗ ಭಾರ ಆಗೇನಿ ಅಂತ ಹೇಳಿ ಬಿಡಲಾ... ! ಅದ ದಿನಾ ನಾ ಮನಿ ಬಿಟ್ಟ ಹೋಗ್ತೇನಿ...!”
“ಎಲ್ಲಿಗ್ಯಂತ ಹೋಗ್ತೀ ಮಗಳ ?”
“ಎಲ್ಲ್ಯರೇ ಹೋಗ್ತೇನ ಬಿಡ...”
“ಹಂಗ ಅನ್ನಬಾರ್ದವಾ...”
“ಬಾಬಾ, ಮತ್ತ ಇನ್ನ ಬ್ಯಾರೆ ನಾ ಏನ ಹೇಳ್ಲಿ ?”
“ಗಂಡನ ಕಡೀ...”
“ಅಂವ್ನ ಹೆಸ್ರ ತೆಗಿಬ್ಯಾಡ... !” ಆಕೆ ಕೆಟ್ಟದಾಗಿ ಕಿರುಚಿದಳು. ಕೈ ಮೇಲೆ ಎತ್ತಿ ಥೈ ಥೈ ಎಂದು ಕುಣಿಯತೊಡಗಿದಳು...
ಕೆಳಗೆ ಬಿದ್ದು ಅಳತೊಡಗಿದಳು... ನಿಜಕ್ಕೂ ಆಕೆ ಆಗ ಅರಿವು ಕಳೆದುಕೊಂಡಳು... !
ಕೆಲ ವರ್ಷ ಹಾಗೆಯೇ ಕಳೆದು ಹೋದವು...
ಒಂದು ದಿನ ಊರು, ಮನೆ, ತಂದೆ, ತಾಯಿ... ಎಲ್ಲರನ್ನೂ... ಎಲ್ಲವನ್ನೂ ಬಿಟ್ಟು ಯಾರಿಗೂ ಹೇಳದೇ ಆಕೆ ಹೊರಟು ಹೋದಳು !
ಎಲ್ಲಿ ಹೋಗಬೇಕು ಎಂಬ ನಿರ್ಧಾರವಿರಲಿಲ್ಲ...
ಏನು ಮಾಡಬೇಕು ಎಂಬುದೂ ಗೊತ್ತಿರಲಿಲ್ಲ...
ಬೆಕ್ಕು-ನಾಯಿಗಳಿಗಾದರೂ ಒಂದು ಧ್ಯೇಯ ಇರುತ್ತದೆ...
ರಾಧೆಗೆ ಅದೂ ಇರಲಿಲ್ಲ... !
ಆದರೆ ಆಕೆಯ ಅಂತರಂಗದಲ್ಲಿ ಕೃಷ್ಣನಿದ್ದ...
ಆತ ಆಕೆಯೊಳಗೆ ಆಳಕ್ಕಿಳಿದು ಬಿಟ್ಟಿದ್ದ...
ಆಕೆ ಸಹಜವಾಗಿಯೇ ತೀರ್ಥಸ್ಥಳಗಳತ್ತ ನಡೆದಳು... ಅದರಲ್ಲೇ ಆಕೆ ನೆಮ್ಮದಿ ಕಾಣತೊಡಗಿದಳು...
ಪಂಢರಪುರ...
ಆಳಂದಿ...
ಜೇಜೂರಿ...
ನಿಧನೆ...
ನೇವಾಸೆ...
ಕೃಷ್ಣ, ವಿಠ್ಠಲ, ಮಹಾದೇವ, ಜ್ಞಾನದೇವ, ಚಾಂಗದೇವ...
ಆಕೆಯ ಭೇಟಿ ನಿರಂತರವಾಯಿತು...
ಮೈ ಮೇಲಿನ ಬಟ್ಟೆಗಳು ಹರಿದು  ಚಿಂದಿಯಾಗಿದ್ದವು...ಚಿಂದಿಗಳೂ ಹಾರಿ ಹೋದವು...
ವರ್ಷಗಳು ಮಾತ್ರ ಯಾವುದನ್ನೂ ತಲೆಗೇರಿಸಿಕೊಳ್ಳದೇ ಓಡುತ್ತಲೇ ಇದ್ದವು...
ಆಗ ರಾಧೆಯ ಕೂದಲು ಜಡೆಗಟ್ಟಿದ್ದವು...
ಮುಖದ ಮೇಲೆ ಸುರಿಯಾಕಾರದ ನೆರಿಗೆ ಮೂಡಿದ್ದವು...
ಬಾಯಿ ಮಾತ್ರ ನಿರಂತರವಾಗಿ ಏನನ್ನೋ ಬಡಬಡಿಸುತ್ತಿತ್ತು...
ಆಕೆಯ ಮಾತು-ವರ್ತನೆಗೆ ಯಾವುದೂ ತಳ-ಬುಡ ಇರಲಿಲ್ಲ ! ಯಾವುದೇ ವಿಷಯವಿರುತ್ತಿರಲಿಲ್ಲ... ಯಾವುದೇ ತರ್ಕವೂ ಇರಲಿಲ್ಲ...
ನಾಲಿಗೆ ಅಲ್ಲಾಡುತ್ತಿತ್ತು... ಕಂಠದಿಂದ ಧ್ವನಿ ಹೊರ ಬೀಳುತ್ತಿತ್ತು... ಆಮೇಲೆ ಬಡಬಡಿಕೆ ಹೆಚ್ಚಾಗುತ್ತಿತ್ತು !
ಆಕೆ ಎಲ್ಲಿ ಬೇಕಲ್ಲಿ ಕುಳಿತುಕೊಳ್ಳುತ್ತಿದ್ದಳು...
ಸಿಕ್ಕಿದ್ದನ್ನೇ ತಿನ್ನುತ್ತಿದ್ದಳು...
ಆದರೆ ಯಾವಾಗಲೂ ನಗುತ್ತಲೇ ಇರುತ್ತಿದ್ದಳು !
ಆಕೆಗೆ ದುಃಖದ ಅರಿವೆ ಇಲ್ಲವೇನೋ ಎನಿಸುತ್ತಿತ್ತು... ಅಥವಾ ಬದುಕಿನ ದುಃಖವನ್ನೆಲ್ಲ ಆಕೆ ಕಳೆದುಕೊಂಡಿದ್ದಳೇನೋ ಎನಿಸುತ್ತಿತ್ತು ... ಜೀರ್ಣಿಸಿಕೊಂಡಿದ್ದಳೇನೋ ಎನಿಸುತ್ತಿತ್ತು...
ದೇವರು ಆಕೆಗೆ ಕಾಣುತ್ತಿರಲಿಲ್ಲ ; ಭೇಟಿಯೂ ಆಗುತ್ತಿರಲಿಲ್ಲ...  ಮನಸ್ಸಿನ ಕಳವಳ ಒಮ್ಮೊಮ್ಮೆ ಹೆಚ್ಚಾಗುತ್ತಿತ್ತು... ಹೀಗಿರುವಾಗ ಆಕೆಗೆ ಯಾರೋ ಶಿರಡಿಯ ಸಾಯಿಬಾಬಾ ಬಗ್ಗೆ ಹೇಳಿದರು...
ಆಕೆಯ ಕಿವಿಗಳು ನೆಟ್ಟಗಾದವು...
ಸಾಯೀ...
ಸಾಯಿಬಾಬಾ...
ಆಕೆಯ ಮನದ ತಳದೊಳಗೆ ಅನುಭೂತಿಯ ಲಹರಿಗಳು ಹುಟ್ಟಿಕೊಂಡವು... ಆಕೆಗೆ ಏನೋ ಒಂದು ರೀತಿಯ ಸಮಾಧಾನ ಎನಿಸತೊಡಗಿತು... ಸಾಯಿಯೇ ನಿನ್ನೆಲ್ಲ ದುಃಖಗಳನ್ನು ಕಡಿಮೆ ಮಾಡಬಲ್ಲವನು ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿತ್ತು...
ಮತ್ತೇ...
ಆಕೆಯ ಹೆಜ್ಜೆಗಳು ಶಿರಡಿಯತ್ತ ಹೊರಳಿದವು...
ಆಕೆ ಶಿರಡಿ ತಲುಪಿದಳು...
ಆಕೆಯ ಅವತಾರ ನೋಡಿದರೆ ಹುಚ್ಚಿಯಂತೆಯೇ ಇತ್ತು... ಜನ ಆಕೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ...
ಆದರೆ...
ಸಾಯಿ ಆಕೆಯನ್ನು ನೋಡಿದರು...
ಇಬ್ಬರ ದೃಷ್ಟಿಗಳೂ ಸೇರಿದವು...
ಸಾಯಿ ನಗುತ್ತಲೇ ಹೇಳಿದರು... “ಶಾಮ್ಯಾ, ಮ್ಹಾಳಸಾ ಬಂದಳ ನೋಡೋ... ! ಕಾಲಿಗಿ ಚಿಂದಿ ಅರಿವಿ ಕಟ್ಕೊಂಡ ತಿರ್ಗಿ ತಿರ್ಗಿ ಆಕೀ ದಣಿದಾಳು... ಈಗ ಸೀದಾ ಇಲ್ಲಿಗೀ ಬಂದಾಳ ನೋಡ... ಮ್ಹಾಳೇss... ಮ್ಹಾಳೇ... ಬಾರss ಬಾ...”
ಆಕೆ ಸಾಯಿಯನ್ನು ನಿಟ್ಟಿಸಿದಳು...

(ಮುಂದಿನ ಕತೆಯನ್ನು ಕಾದಂಬರಿಯಲ್ಲಿಯೇ ಓದಿ)

Sunday, July 21, 2013

ಬಯಲಾಯ್ತು ಮೋದಿ ಯಶಸ್ಸಿನ ಗುಟ್ಟು !

  • ದೇಶದಲ್ಲಿ 28 ಮಂದಿ ಮುಖ್ಯಮಂತ್ರಿಗಳಿದ್ದರೂ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಅತಿಯಾದ ಪ್ರಚಾರ ಸಿಗುತ್ತಿದೆ ಎಂದು ನಿಮಗೂ ಅನ್ನಿಸಿರಬಹುದು. ಆದರೆ ಅದು ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು, ಮೋದಿ ಅವರ ಪ್ರಚಾರದ ರಹಸ್ಯವನ್ನು ಬಯಲು ಮಾಡಿರುವುದಾಗಿ ರಾಷ್ಟ್ರೀಯ ನಿಯತಕಾಲಿಕೆಯೊಂದು ಹೇಳಿಕೊಂಡಿದೆ. ಅದರ ಕಿರು ಪರಿಚಯ ಇಲ್ಲಿದೆ... 
    ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ಅವರು ತಮ್ಮನ್ನು ಮಾಧ್ಯಮಗಳಲ್ಲಿ ಉತ್ತಮವಾಗಿ ಬಿಂಬಿಸಿಕೊಳ್ಳಲು ಎರಡು ಪತ್ರಿಕಾ ಪ್ರಚಾರ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಒಂದು ಸಂಸ್ಥೆ ದೇಶೀಯ ಮಟ್ಟದಲ್ಲಿ ಮೋದಿ ಅವರಿಗೆ ಪ್ರಚಾರ ನೀಡಿದರೆ, ಮತ್ತೂಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ದೊರಕಿಸಿಕೊಡುತ್ತಿದೆ. ಇದಲ್ಲದೆ, ಬೆಂಗಳೂರು ಹಾಗೂ ಮುಂಬೈನಲ್ಲಿ ಇರುವ ಬಿಜೆಪಿಯ ಇನ್ಫೋಟೆಕ್‌ ತಂಡಗಳು ಆನ್‌ಲೈನ್‌ ಸಾಮಾಜಿಕ ತಾಣಗಳಲ್ಲಿ ಮೋದಿ ಅವರ ಪರವಾಗಿ ಅಭಿಪ್ರಾಯ ಮೂಡಿಸುತ್ತಿವೆ. ಮೋದಿ ಅವರ ಅಭಿಮಾನಿ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರಿಂದಲೂ ಅವರಿಗೆ ಪ್ರಚಾರ ಸಿಗುತ್ತಿದೆ ಎಂದು 'ಓಪನ್‌' ನಿಯತಕಾಲಿಕೆ ವರದಿ ಪ್ರಕಟಿಸಿದೆ. 
    ತಮ್ಮನ್ನು ಮಾಧ್ಯಮಗಳಲ್ಲಿ ಚೆನ್ನಾಗಿ ಬಿಂಬಿಸಲಿ ಎಂಬ ದೂರದೃಷ್ಟಿಯಿಂದ ಹಿರಿಯ ಪತ್ರಕರ್ತರನ್ನು ಮೋದಿ ಅವರು ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ. ಪತ್ರಕರ್ತರ ಪ್ರತಿಷ್ಠೆ ಹೆಚ್ಚಿಸುವಂತೆ ಮೋದಿ ಅವರ ಆಸುಪಾಸಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರಲಾಗುತ್ತದೆ. ಮೋದಿ ಪರವಾಗಿ ದುಡಿಯುತ್ತಿರುವ ಖಾಸಗೀ ಪತ್ರಿಕಾ ಪ್ರಚಾರ ಸಂಸ್ಥೆಗಳು ಇಲ್ಲಿವರೆಗೂ ನರೇಂದ್ರ ಮೋದಿ ಅವರ ಜತೆ ಹಲವಾರು ದಿನಪತ್ರಿಕೆ ಹಾಗೂ ನಿಯತಪಾಲಿಕೆ ಸಂಪಾದಕರನ್ನು ಭೇಟಿ ಮಾಡಿಸಿವೆ. ಮೋದಿ ಅವರ ವಿದೇಶ ಪ್ರವಾಸದ ವೇಳೆ ಪತ್ರಕರ್ತರನ್ನೂ ಕರೆದೊಯ್ಯುವ ಸಲುವಾಗಿ ಈ ವರ್ಷ ಗುಜರಾತ್‌ ಸರ್ಕಾರ ಬಜೆಟ್‌ನಲ್ಲಿ ಅನುದಾನ ಸಹ ಮೀಸಲಿಟ್ಟಿದೆ. ಮೋದಿ ಜತೆ ವಿದೇಶ ಪ್ರವಾಸ ಮುಗಿಸಿ ಬಂದ ಪತ್ರಕರ್ತರು ಅಸಲಿ ಬಿಲ್‌ಗ‌ಳನ್ನು ತೋರಿಸಿದರೆ, ಹಣ ಪಾವತಿಸುವ ವ್ಯವಸ್ಥೆ ಕೂಡ ಇದೆ ಎಂದು ವರದಿ ತಿಳಿಸಿದೆ. 

    ಹೊಸ ಪಿಆರ್‌ ಏಜೆನ್ಸಿ ನೇಮಕ 
    ಪತ್ರಿಕಾ ಪ್ರಚಾರ ಸಂಸ್ಥೆ (ಪಿಆರ್‌ ಏಜೆನ್ಸಿ)ಗಳನ್ನು ನೇಮಿಸಿಕೊಂಡಿಲ್ಲ ಎಂದು ನರೇಂದ್ರ ಮೋದಿ ಹಾಗೂ ಬಿಜೆಪಿ ಎಷ್ಟೇ ಹೇಳಿಕೊಂಡರೂ ಕಳೆದ ಐದು ವರ್ಷಗಳಿಂದ ಗುಜರಾತ್‌ ಸರ್ಕಾರ ಪಿಆರ್‌ ಏಜೆÕನಿಗಳನ್ನು ಇಟ್ಟುಕೊಂಡಿದೆ. ದೇಶೀಯ ಮಟ್ಟದಲ್ಲಿ ಪ್ರಚಾರ ಪಡೆಯುವ ಸಲುವಾಗಿ ಮೋದಿ ಅವರು ದೆಹಲಿ ಮೂಲದ ಮ್ಯೂಚುವಲ್‌ ಪಿಆರ್‌ ಎಂಬ ಕಂಪನಿಯನ್ನು ನೇಮಿಸಿಕೊಂಡಿದ್ದಾರೆ. ಆ ಕಂಪನಿಯ ಗುತ್ತಿಗೆ ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ. ಇಷ್ಟು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಪ್ರಚಾರ ಹೊಣೆ ಹೊತ್ತಿದ್ದ ಆಪ್ಕೋ ಎಂಬ ಅಮೆರಿಕದ ಲಾಬಿ ಕಂಪನಿಯ ಗುತ್ತಿಗೆ ಅವಧಿ ಕಳೆದ ಮಾರ್ಚ್‌ಗೇ ಮುಕ್ತಾಯಗೊಂಡಿದೆ. ಈ ಕಂಪನಿಗೆ ಮಾಸಿಕ 13 ಲಕ್ಷ ರೂ. ಹಣವನ್ನು ಗುಜರಾತ್‌ ಸರ್ಕಾರ ಸಂದಾಯ ಮಾಡುತ್ತಿತ್ತು ಎಂದು ಪತ್ರಿಕೆ ತಿಳಿಸಿದೆ. 
    ಹೊಸ ಪಿ.ಆರ್‌. ಏಜೆನ್ಸಿ ನೇಮಕಕ್ಕೆ ಗುಜರಾತ್‌ ಸರ್ಕಾರ 'ಕೋರಿಕೆ ಪ್ರಸ್ತಾಪ' ಸಿದ್ಧಪಡಿಸಿದ್ದು, ಗುಜರಾತ್‌ನಲ್ಲಿ ಆಗುವ ಧನಾತ್ಮಕ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಕಾಲಕಾಲಕ್ಕೆ ಅಥವಾ ಗುಜರಾತ್‌ ಮಾಹಿತಿ ಆಯುಕ್ತರು ಸೂಚಿಸಿದಾಗ ಕಷ್ಟಪಟ್ಟು ಬಿಂಬಿಸಲು ಯತ್ನಿಸಬೇಕು ಎಂದು ಹೇಳುತ್ತದೆ. 

    ಪ್ರಸ್ತಾಪದಲ್ಲಿ ಏನೇನಿದೆ?: 
    ಮೋದಿ ಅವರಿಂದ ಪ್ರಚಾರದ ಗುತ್ತಿಗೆ ಪಡೆಯಬಯಸುವ ಪಿಆರ್‌ ಏಜೆನ್ಸಿಗಳಿಗೆ ಕೋರಿಕೆ ಪ್ರಸ್ತಾಪದಲ್ಲಿ ಗುಜರಾತ್‌ ಸರ್ಕಾರ ಹಲವಾರು ಬೇಡಿಕೆಗಳನ್ನು ಇಟ್ಟಿದೆ. ಅವೆಂದರೆ, 
    ರಾಜ್ಯ ಸರ್ಕಾರ ನೀಡಿದ ಮಾಹಿತಿಯನ್ನು ಆಧರಿಸಿ ಪ್ರತಿ ತ್ತೈಮಾಸಿಕಕ್ಕೊಮ್ಮೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕನಿಷ್ಠ ಆರು ದೊಡ್ಡ ವರದಿಗಳನ್ನು ಪ್ರಕಟಿಸಬೇಕು. 
    ರಾಜ್ಯ ಸರ್ಕಾರದ ಮಾಹಿತಿಯನ್ವಯ ಪ್ರಾದೇಶಿಕ ಪತ್ರಿಕೆಗಳಲ್ಲಿ ತ್ತೈಮಾಸಿಕಕ್ಕೊಮ್ಮೆ ಕನಿಷ್ಠ ಆರು ದೊಡ್ಡ ವರದಿಗಳು ಪ್ರಕಟವಾಗುವಂತೆ ನೋಡಿಕೊಳ್ಳಬೇಕು. 
    ಕನ್ನಡ, ಹಿಂದಿ, ತಮಿಳು ಸೇರಿದಂತೆ ಪ್ರಮುಖ ಭಾಷಾ ಪತ್ರಿಕೆಗಳಲ್ಲಿ ತ್ತೈಮಾಸಿಕಕ್ಕೊಮ್ಮೆ ಕನಿಷ್ಠ ಆರು ವರದಿಗಳು ಪ್ರಕಟವಾಗಬೆಕು. 
    ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಒಂದಾದರೂ ವರದಿ ಪ್ರಕಟವಾಗಬೇಕು. 
    ಪ್ರತಿ ತಿಂಗಳು ಒಂದು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಗುಜರಾತ್‌ ಪರವಾಗಿ ಒಂದು ದೊಡ್ಡ ವರದಿಯಾದರೂ ಪ್ರಕಟವಾಗಬೆಕು. 

    ವಿದೇಶಗಳಲ್ಲಿ ಪ್ರಚಾರ ಹೇಗೆ? 
    ಅಂತಾರಾಷ್ಟ್ರೀಯ ಮಟ್ಟದ ಪಿ.ಆರ್‌. ಏಜೆನ್ಸಿಗೆ ಗುತ್ತಿಗೆ ನೀಡಲಾಗುತ್ತದೆ. 
    ಗುಜರಾತ್‌ ದೇಶದ ಮುಂಚೂಣಿ ರಾಜ್ಯ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವಂತೆ ಸೂಚಿಸಲಾಗುತ್ತದೆ. 
    ಹೂಡಿಕೆದಾರರಿಗೆ ಗುಜರಾತೇ ಅಚ್ಚುಮೆಚ್ಚಿನ ತಾಣವೆಂದು ಪ್ರಚಾರ ಪಡೆಯುವಂತೆ ನೋಡಿಕೊಳ್ಳಲಾಗುತ್ತದೆ. 

    ದೇಶೀಯವಾಗಿ ಹೇಗೆ ಸಿಗುತ್ತೆ ಪ್ರಚಾರ? 
    1 ದೇಶೀ ಮಟ್ಟದಲ್ಲಿ ಒಂದು ಪತ್ರಿಕಾ ಪ್ರಚಾರ ಸಂಸ್ಥೆ (ಪಿ.ಆರ್‌.)ಯನ್ನು ಮೋದಿ ನೇಮಿಸಿಕೊಳ್ಳುತ್ತಾರೆ. ಇದಕ್ಕೆ ಗುಜರಾತ್‌ ಸರ್ಕಾರ ಮಾಹಿತಿಗಳನ್ನು ನೀಡಿ, ಯಾವ ಮಾಧ್ಯಮಗಳಲ್ಲಿ ಎಷ್ಟು ವರದಿ ಪ್ರಕಟವಾಗಬೇಕು ಎಂಬ ಆದೇಶ ನೀಡುತ್ತದೆ. ಅದರಂತೆ ವರದಿಗಳು ಪ್ರಕಟವಾಗುವಂತೆ ಪಿ.ಆರ್‌. ಏಜೆನ್ಸಿ ನೋಡಿಕೊಳ್ಳುತ್ತದೆ. 
    2 ಹಿರಿಯ ಪತ್ರಕರ್ತರನ್ನು ಮೋದಿ ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ. 
    3 ಹಿರಿಯ ಪತ್ರಕರ್ತರನ್ನು ತಮ್ಮ ಜತೆ ವಿದೇಶಕ್ಕೂ ಕರೆದೊಯ್ಯುತ್ತಾರೆ. ಇದಕ್ಕಾಗಿ ಗುಜರಾತ್‌ ಬಜೆಟ್‌ನಲ್ಲಿ ಹಣ ಕೂಡ ಮೀಸಲಿಟ್ಟಿದ್ದಾರೆ. 
    4 ಆನ್‌ಲೈನ್‌ ಸಾಮಾಜಿಕ ತಾಣಗಳಲ್ಲಿ ತಮ್ಮ ಪರ ಪ್ರಚಾರಕ್ಕೆ ಬೆಂಗಳೂರು, ಮುಂಬೈನಲ್ಲಿ ಇನ್ಫೋಟೆಕ್‌ ಸೆಲ್‌ ಹೊಂದಿದ್ದಾರೆ.

    ಕೃಪೆ :
    Udayavani | Jul 20, 2013

ಮಾತ್ಗವಿತೆ-138

ಒಂದು ಎಳೆಯ ಹಂಬಲದಲ್ಲಿ ನೂರ
ಸಾವಿರದ ಸುಖಗಳ ಕನವರಿಕೆ !
ಸವಿದ, ಸವೆಸಿದ ನೆನಪುಗಳ ಸಾಗರ
ಮತ್ತೇ ಮತ್ತೇ ಕರೆದಾಗ ಇಲ್ಲವೆನ್ನಲಾಗದು
ಸಂಬಂಧಗಳ ಹಳತು-ಹೊಸತುಗಳ ಸೂತಕ ಬೇಡ !

Sunday, July 14, 2013

ಕರ್ನಾಟಕ ಕಾದಂಬರಿ : ಮಹಾಶ್ವೇತೆಯ ವೃತ್ತಾಂತ

ತಪೋನಂದನ : ಮಹಾಶ್ವೇತೆಯ ತಪಸ್ಸು


ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ್ಷತ್ರಯಾತ್ರೆಯ ಸಾಹಸಕ್ಕೆ ಮೊದಲನೆಯ ಸಾಕ್ಷಿ ಚರಿತ್ರೆ; ಎರಡನೆಯ ಸಾಕ್ಷಿ ಕಲೆ. ಒಂದು ಬಹಿರ್ಮುಖದ ಸಾಹಸವಾದರೆ ಮತ್ತೊಂದು ಅಂತರ್ಮುಖದ ಸಾಹಸ. ದಾರಿಗಳೆರಡಾದರೂ ಗುರಿಗಳೆರಡಲ್ಲ. ಇಂದಿಲ್ಲದಿದ್ದರೂ ಮುಂದೆ ಕೈಗೂಡಬಹುದೆಂದು ನಂಬಿರುವ ಸುಖಶಾಂತಿಗಳ ಸಂಪಾದನೆಯೆ ಮಾನವಸಾಹಸಕ್ಕೆ ಪರಮಗಂತವ್ಯ. ಆ ಸಾಹಸ ಅಲೆಕ್ಸಾಂಡರನ ದಂಡಯಾತ್ರೆಯಾಗಿ, ಕಾಳಿದಾಸನ ಮೇಘದೂತವಾಗಿ, ಶ್ರವಣಬೆಳ್ಗೊಳದ ಗೋಮಟೇಶ್ವರನಾಗಿ ನಾನಾರೂಪಿಯಾಗಿ ವ್ಯಕ್ತವಾಗುತ್ತದೆ. ಆ ಸಾಹಸದ ಫಲವಾಗಿಯೆ ಕ್ರಿಸ್ತ ಬುದ್ಧರೂ ಆವಿರ್ಭವಿಸುತ್ತಾರೆ.

ಎಲ್ಲ ಕಲೆಗಳ ಗುರಿಯೂ ಆನಂದ, ರಸಾನುಭೂತಿ. ಆ ಆನಂದದ ಸ್ವರ್ಗಕ್ಕಾಗಿಯೆ ನಿರಂತರವೂ ಮರ್ತ್ಯವು ಅಮರ್ತ್ಯದ ಕಡೆಗೆ ಮುಖಚಾಚಿ ನೋಡುತ್ತದೆ, ಕೈನೀಡಿ ಬೇಡುತ್ತದೆ. ಒಮ್ಮೊಮ್ಮೆ, ಕಲ್ಪನೆ ಐಹಿಕ ಯಥಾರ್ಥವನ್ನೆ ಶೃಂಗರಿಸಿ ತನ್ನ ಸ್ವಪ್ನಸ್ವರ್ಗವನ್ನು ರಚಿಸಲು ಪ್ರಯತ್ನಿಸುತ್ತದೆ. ಒಮ್ಮೊಮ್ಮೆ, ಮರ್ತ್ಯದಿಂದ ಅಮರ್ತ್ಯಕ್ಕೆ ವರ್ಣವರ್ಣದ ಸ್ವರ್ಣಸೇತುವನ್ನು ಬೀಸಿ, ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಪಯಣ ಸೌಕರ್ಯವನ್ನು ಕಲ್ಪಿಸಿ, ಕಾಮಧೇನುವಿನ ಕೆಚ್ಚಲಸೋನೆಗೊಂದು ಕಾಲುವೆ ಮಾಡಿ, ಆ ಸೊದೆ ಮನೆಯಂಗಳದಲ್ಲಿರುವ ಹೊಂಗಿಂಡಿಗೆ ದುಮುಕುವಂತೆ ಮಾಡುತ್ತದೆ. ಆ ಕವಿಪ್ರತಿಭೆಯ ಭಾಗೀರಥಿಯಲ್ಲಿ ರಸಸ್ನಾನ ಮಾಡಿ, ಕ್ಷಣಿಕಮರ್ತ್ಯದ ಮಣ್ಣು ದೂಳು ಬಿಸಿಲು ಕೆಸರುಗಳಿಂದ ಪಾರಾದ ಸಹೃದಯನ ಆತ್ಮಕ್ಕೆ ಗೋಚರವಾಗುತ್ತದೆ ಶಾಶ್ವತವಾದ ಆನಂದಾನುಭೂತಿ.

ಮಹಾಕವಿಪ್ರತಿಭೆಯ ಸ್ವಪ್ನಸುಂದರ ಸಾಹಸಗಳಲ್ಲಿ ಕಾದಂಬರೀ ಕಾವ್ಯವೂ ಒಂದದ್ಭುತ ಕೃತಿ. ಅದೊಂದು ಮೇಘಚುಂಬಿಯಾದ ಶೃಂಗಾರ ಗೋಪುರ. ಅದರ ತಳಹದಿ ಭೂಮಿಯ ಮೇಲಿರುವಂತೆ ಕಾಣುತ್ತದೆ. ಅದರ ತುದಿ ಬೆಳ್ಮುಗಿಲಿನ ಮುದ್ದಾಟದಲ್ಲಿ ಅರೆಮರೆಯಾಗಿದೆ. ಅದರ ಜಗತ್ತು ಹೊಸ ಮಳೆಯಲ್ಲಿ ಮಿಂದ ಮಲೆಗಳ ಮೇಲೆ ಮೂಡುವ ಸೂರ್ಯೋದಯದ ಚೈತ್ರಕಾನನ ಪಂಕ್ತಿಯ ವರ್ಣವೈವಿಧ್ಯದಿಂದಲೂ ಖಚಿತರಚನಾವೈಖರಿಯಿಂದಲೂ ಶೋಭಿಸುತ್ತಿದ್ದರೂ ಬೆಳ್ದಿಂಗಳ ರಾತ್ರಿಯಂತೆ ಹೊಂಗನಸಿನ ಹೊದಿಕೆಯಲ್ಲಿ ಧ್ಯಾನಶೀಲವಾಗಿದೆ.

ಮಹತ್ತಾದ ಕಲೆಗೆ ಅತಿಸ್ಪಷ್ಟತೆ ಒಂದು ನ್ಯೂನತೆ; ಅತಿ ಅಸ್ಪಷ್ಟತೆ ಒಂದು ದೋಷ. ಕಾದಂಬರಿಯ ಕಥೆ ಆ ಕೊರತೆಯಿಂದಲೂ ಈ ಕುಂದಿನಿಂದಲೂ ಪಾರಾಗಿ, ಒಂದರ ಸೌಂದರ್ಯದಿಂದಲೂ ಮತ್ತೊಂದರ ಸತ್ಯದಿಂದಲೂ ಶೋಭಿಸುತ್ತಿದೆ.

ನರನಿಗೆ ಅಮರನಾಗಬೇಕೆಂಬ ಆಸೆ. ಆದರೆ ಮರ್ತ್ಯದ ಸುಖ ಸೌಂದರ್ಯಗಳನ್ನು ಕೈಬಿಡಲಾರದ ಮೋಹ. ಮತ್ತು ಐತಿಕದ ಪ್ರೇಮ, ಸೌಂದರ್ಯ, ಸುಖ, ಭೋಗ ಇವುಗಳಿಗೆ ಸ್ವರ್ಗದ ಅಜರತೆ, ಅಮರತೆ, ನಿತ್ಯಯೌವನ ಮತ್ತು ಶಾಶ್ವತಾನಂದಗಳನ್ನು ಹೇಗಾದರೂ ಕೊಳ್ಳೆಹೊಡೆದು ತಂದು ಗಂಟು ಹಾಕಬೇಕೆಂಬ ವೀರಸಾಹಸ. ಮಾನವನ ಆ ಬಯಕೆ ಪ್ರಪಂಚದ ಅನೇಕ ಕಲಾಕೃತಿಗಳಲ್ಲಿ ರೂಪಧಾರಣೆ ಮಾಡಿದೆ. ಕಾದಂಬರಿಯೂ ಆ ಹಂಬಲದೊಂದು ಹೊಂಗನಸು; ಆ ಮೋಹದ ಒಂದು ಐಂದ್ರಜಾಲಿಕ ಸೃಷ್ಟಿ.

ಮಾನವನ ಸಂಕಲ್ಪ ಸಮಸ್ತಕ್ಕೂ ಪ್ರತಿನಿಧಿಯಾದ ಕವಿಪ್ರತಿಭೆ ಮಣ್ಣಿನಿಂದ ಮುಗಿಲಿಗೆ ಬೀಸಿರುವ ಆ ರಸಸೇತುವೆಯ ಕೃಪಾಶ್ರಯದಲ್ಲಿ ಮರ್ತ್ಯರಾದ ನರರು ಅಮರರಿಗೆ ಹೆಗಲೆಣೆಯಾಗಿದ್ದಾರೆ. ಮನುಷ್ಯರು ಗಂಧರ್ವ ಲೋಕಕ್ಕೆ ಏರಿದ್ದಾರೆ. ಗಂಧರ್ವರು ತಮ್ಮ ಮೇಘಜಗತ್ತಿನ ಹಮ್ಮುಬಿಮ್ಮುಗಳನ್ನು ನೀಗಿ ಪೃಥ್ವಿಗಿಳಿದು ಬಂದು ನರರಿಗೆ ನಂಟರಾಗಿದ್ದಾರೆ. ದೇವತಪಸ್ವಿಯಾದ ಪುಂಡರೀಕನಂತೆಯೆ ತ್ರಿಲೋಕ ವಂದಿತನಾದ ಚಂದ್ರನೂ ಮನುಷ್ಯ ಸತಿಯ ಗರ್ಭದಲ್ಲಿ ಅವತರಿಸಿದ್ದಾನೆ. ಕುಮಾರ ತಾಪಸ ಕಪಿಂಜಲನು ಗೆಳೆತನದ ಹಿರಿಮೆಗಾಗಿ ಕುದುರೆಯತನಕ್ಕೂ ಬಿದ್ದುಬಿಟ್ಟಿದ್ದಾನೆ. ಗಂಧರ್ವ ಕನ್ಯೆಯರಲ್ಲಿ ಅನರ್ಘ್ಯರತ್ನಗಳಾಗಿದ್ದ ಮಹಾಶ್ವೇತೆ ಮತ್ತು ಕಾದಂಬರಿಯರು ನಮ್ಮ ಭೂಮಿಯ ಗೃಹಿಣೀ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿ, ಮನುಷ್ಯತ್ವಕ್ಕೆ ಗೌರವವನ್ನು ನಿವೇದಿಸಿದ್ದಾರೆ. ಸ್ವರ್ಗಮರ್ತ್ಯಗಳನ್ನು ಒಂದುಮಾಡಿರುವ ಕಾವ್ಯಸೇತುವೆಯಲ್ಲಿ ಹಿಂದಕ್ಕೂ ಮುಂದಕ್ಕೂ ತಿರುತಿರುಗಾಡುವ ನಮಗೆ ಮರ್ತ್ಯರಿಗೂ ಗಂಧರ್ವರಿಗೂ ತಾರತಮ್ಯವೆ ಮರೆತುಹೋಗುತ್ತದೆ. ಅಮರರೂರಿಗೆ ನಂಟರಾಗಿ ಹೋದವರು ಅಮೃತಪಾನ ಮಾಡದೆ ಹಿಂತಿರುಗುವುದಿಲ್ಲವಾದ್ದರಿಂದ ನಾವು ಅಲ್ಲಿಗೆ ಹೋಗುವಾಗ ಮರ್ತ್ಯರೆ ಹೊರತು ಮರಳಿ ಬರುವಾಗ ಅಲ್ಲ.

ಮನುಷ್ಯನು ಸ್ವರ್ಗಕ್ಕೇರಿ, ಸ್ವರ್ಗವನ್ನು ಭೂಮಿಗೆ ಎಳೆತರುವ ಸಾಹಸ ಚಿತ್ರಗಳನ್ನು ಪರಂಪರೆಯಾಗಿ ಪ್ರದರ್ಶಿಸುವ ಕಾದಂಬರೀ ಕಾವ್ಯ ಒಂದು ರಮಣೀಯ ಚಿತ್ರಶಾಲೆಯಾಗಿದೆ.

ಕಾದಂಬರಿ ಪ್ರೇಮದ ವಿಜಯಕಥೆ. ವೈರಾಗ್ಯವು ಶೃಂಗಾರಕ್ಕೆ ಶರಣಾದ ಕಥೆ. ದೈಹಿಕಕಾಮ ಜನ್ಮಜನ್ಮಾಂತರಗಳ ಕ್ಲೇಶ ಕಷ್ಟ ವಿರಹಗಳ ಉಗ್ರತಪಸ್ಸಿನಿಂದ ಕಾಳಿಕೆಯನ್ನು ಕಳೆದುಕೊಂಡು ಅಚ್ಚ ಹೊನ್ನಾಗಿ ದೈವಿಕ ಪ್ರೇಮದಲ್ಲಿ ಸಾರ್ಥಕತೆಯನ್ನು ಸಂಪಾದಿಸಿದ ಪುಣ್ಯಕಥೆ. ಆ ಕಥೆ ಅಗ್ನಿ ಜ್ವಾಲೆಯಲ್ಲಿ ಬೇರ್ಗೊಂಡು ಚಂದ್ರಜ್ಯೋತ್ಸ್ನೆಯಾಗಿ ಹಣ್ಗೊಂಡಿದೆ. ಅಲ್ಲಿಯ ಶೃಂಗಾರವೂ ತಪೋಮಯವಾಗಿದೆ; ತಪಸ್ಸೂ ಶೃಂಗಾರಪೂರ್ಣವಾಗಿದೆ.

ಮೌನವನ್ನೇ ಮಿಸಿಮಿಡಿದು ಮಹಾಸಂಗೀತವನ್ನಾಗಿ ಮಾಡಿರುವ ಕವಿಪ್ರತಿಭ ನಮ್ಮನ್ನು ಬೆರಗುಗೊಳಿಸುತ್ತದೆ: ಎನಿತು ಕಿರಿದಾದ ಕನಸಿನಲ್ಲಿ ಎನಿತು ಹಿರಿದಾದ ಕಾವ್ಯಮಂದಿರವನ್ನು ಕಂಡರಿಸಿದ್ದಾನೆ! ಸಣ್ಣದೊಂದು ಪ್ರಣಯದ ಕಿಡಿಯಿಂದ ಪ್ರೇಮದಾವಾಗ್ನಿಯ ಮಹಾಜ್ವಾಲೆಯನ್ನು ಹೊತ್ತಿಸಿ, ಶಿಲಾಪರ್ವತವನ್ನು ಕೊರೆದು ಬೃಹತ್ತಾದ ವಿಹಾರಗಳನ್ನು ನಿರ್ಮಿಸುವ ದೈತ್ಯಶಿಲ್ಪಿಯಂತೆ, ಕವಿ ಆ ಜ್ವಾಲೆಯನ್ನೇ ಕೊರೆದು ಕಡೆದು ಮಹಾಕಾವ್ಯದ ಸುಧಾಸೌಧವನ್ನು ಸೃಜಿಸಿದ್ದಾನೆ.

ಕಾದಂಬರಿಯ ಕಥೆ ಕ್ರಿಯೆಗಿಂತಲೂ ಹೆಚ್ಚಾಗಿ ಕನಸನ್ನು ಹೋಲುತ್ತದೆ. ಅದರಲ್ಲಿ ಬರುವ ಕ್ರಿಯೆಯೂ ಸ್ವಪ್ನಕ್ರಿಯೆ. ರಾಮಾಯಣ ಮಹಾಭಾರತಗಳಂತೆ ಅದು ಪರ್ವತಕಂದರಗಳಲ್ಲಿ ಧುಮ್ಮಿಕ್ಕಿ, ನೆಲವನ್ನಪ್ಪಳಿಸಿ ಕೊಚ್ಚಿ ಕೆಡಹುತ್ತಾ ಅನೇಕ ಉಪನದಿಗಳನ್ನು ಕೂಡಿಕೊಳ್ಳುತ್ತಾ ನುಗ್ಗಿ ಹರಿಯುವ ಭೀಷ್ಮ ಪ್ರವಾಹವಾಗಿಲ್ಲ. ಅಲ್ಲಿ ಮನುಷ್ಯ ಹೃದಯದ ಭಯಂಕರ ಭಾವಗಳ ಘರ್ಷಣೆಘೋಷಣೆಗಳಿಲ್ಲ.

ಕಾದಂಬರಿಯ ಕವಿಯ ದರ್ಶನಕ್ಕೆ ಎರಡು ಕಣ್ಣುಗಳಿವೆ. ಒಂದು: ಸರಳ ಗಂಭೀರ ಅನಶ್ಲೀಲ ಸುಂದರ ಶೃಂಗಾರ. ಮತ್ತೊಂದು: ಸದ್ಯಃಫಲಕಾಂಕ್ಷಿಯಲ್ಲದ, ಜನ್ಮಜನ್ಮಾಂತರದವರೆಗೂ ಕಾಯುವ ಸಾಮರ್ಥ್ಯವೂ ತಾಳ್ಮೆಯೂ ಶ್ರದ್ಧೆಯೂ ಇರುವ, ಪ್ರೇಮದ ನೀರವಧ್ಯಾನಮಯವಾದ ತಪಸ್ಸು. ಕಣ್ಣುಗಳೆರಡಾದರೂ ಕಾಣಿಕೆಯೆರಡಲ್ಲ. ಒಂದಕ್ಕೆ ಮತ್ತೊಂದು ಪೂರಕ ಮತ್ತು ಪೋಷಕ. ಪ್ರೇಮವು ತಪಸ್ಸಿನಿಂದಲೆ ಶುದ್ಧವಾಗಿ ಶಾಶ್ವತವಾಗಿ ಸಾರ್ಥಕವಾಗುತ್ತದೆ. ಭೋಗಕ್ಕೆ ತ್ಯಾಗದಿಂದಲೆ ಸಿದ್ಧಿ.

ಕಾದಂಬರೀ ಕಾವ್ಯದಲ್ಲಿ ಶೃಂಗಾರಕ್ಕೆ ತಪಸ್ಸು ಸಾಧನರಂಗವಾಗಿದೆ. ಅಲ್ಲಿ ಘಟನಾಪರಂಪರೆಗಳ ಅಟ್ಟಹಾಸಕ್ಕಿಂತಲೂ ಅನುಭೂತಿಯ ದೀರ್ಘತೆಯೆ ಉಜ್ವಲವಾಗಿದೆ. ಅಲ್ಲಿ ಕೌತುಕದ ಘಟನೆಗಳಿಗೇನೋ ಕಡಮೆಯಿಲ್ಲ. ಆದರೆ ಆ ಘಟನೆಗಳ ಚಲನೆ ಹೃದಯಾನುಭವದ, ಮನೋವೇದನೆಯ, ವ್ರತಪೂರ್ಣ ತಪಸ್ಸಿನ ನಿಶ್ಚಲತೆಯಲ್ಲಿ ಸಮಾಧಿಹೊಂದಿದೆ. ಉರಿಯುತ್ತಿರುವ ಹಣತೆಯ ಸೊಡರು ಓಡಿಯಾಡುವುದಿಲ್ಲ, ಗಲಭೆ ಮಾಡುವುದಿಲ್ಲ. ಆದರೂ ಅದರ ನಿಶ್ಚಲತೆ ನೀರವತೆಗಳು ಅಕರ್ಮಸೂಚಕವಲ್ಲ. ಹೊಕ್ಕುನೋಡುವ ವಿಜ್ಞಾನಿಯ ಕಣ್ಣಿಗೆ ಅಲ್ಲಿ ಭಯಂಕರ ಕರ್ಮರಂಗವೊಂದು ಗೋಚರಿಸುತ್ತದೆ. ಅದರಂತೆಯೆ ಮಹಾಶ್ವೇತೆಯ ತಪಸ್ಸಿನ ನಿಶ್ಚಲತೆಯಲ್ಲಿ ವಿಶ್ವಶಕ್ತಿಗಳನ್ನೆ ತಿರ್ರನೆ ತಿರುಗಿಸುವ ಮಹಾಶಕ್ತಿಯನ್ನು ದರ್ಶಿಸುತ್ತೇವೆ. ಯಾವುದು ಸುಲಭ ಸಿದ್ಧಿಯಿಂದ ಕ್ಷಣಿಕವಾಗುತ್ತಿತ್ತೋ, ಯಾವುದು ಶೀಘ್ರತೃಪ್ತಿಯಿಂದ ತನ್ನ ಚಿರಚೇತನವನ್ನು ದೈನಂದಿನ ಬೇಸರಕ್ಕೆ ಸಮರ್ಪಿಸಿ ಅಲ್ಪವಾಗಿ ವಿಸ್ಮೃತವಾಗುತ್ತಿತ್ತೋ ಆ ಪ್ರಣಯವು ಕಾದಂಬರೀ ಕಾವ್ಯದಲ್ಲಿ ತಪಸ್ಸಿನಿಂದ ಶಾಶ್ವತವಾಗಿದೆ; ಮತ್ತು ಮಹತ್ತಾಗಿದೆ. ಕ್ಷಣಿಕಕಾಮ ಕಷ್ಟದ ಮೂಷೆಯಲ್ಲಿ ಕರಗಿ, ಕಾಲದ ಒರೆಗಲ್ಲಿನಲ್ಲಿ ಪರೀಕ್ಷಿತವಾಗಿ, ಶಾಶ್ವತಪ್ರೇಮದಲ್ಲಿ ಪರಿಣಮಿಸಿದುದಕ್ಕೆ ಪುಂಡರೀಕ ಮಹಾಶ್ವೇತೆಯರ ಕಥೆ ನಿದರ್ಶನವಾಗಿದೆ.

ಆ ನಿದರ್ಶನದಲ್ಲಿ ಕವಿಯ ‘ದರ್ಶನ’ ಇಂಗಿತವಾಗಿದೆ.


ಆ ದರ್ಶನ ನಮಗೆ ಅಪರಿಚಿತವಾದುದಲ್ಲ. ನಮ್ಮ ಪ್ರಾಚೀನ ಮಹಾಕವಿಗಳೆಲ್ಲರೂ ತಮ್ಮ ಅಮರಕಾವ್ಯಗಳಲ್ಲಿ ಅದೇ ದರ್ಶನವನ್ನು ಪ್ರತಿಪಾದಿಸಿದ್ದಾರೆ. ಉಪನಿಷತ್ತಿನ ಋಷಿಗಳಿಂದ ಪ್ರಣೀತವಾದ ನಮ್ಮ ಸಂಸ್ಕೃತಿ ತ್ಯಾಗಶೀಲವಲ್ಲದ ಭೋಗವನ್ನು ಅಲ್ಪವೆಂದು ಪರಿಗಣಿಸುತ್ತದೆ. ಅದು ಭೋಗವನ್ನು ಅಲ್ಲಗಳೆಯುವುದಿಲ್ಲ. “ಯೋ ವೈ ಭೂಮಾ ತತ್ಸುಖಂ; ನಾಲ್ಪೇ ಸುಖಮಸ್ತಿ” “ತೇನ ತ್ಯಕ್ತೇನ ಭುಂಜೀಥಾ”-ಯಾವುದು ಭೂಮವೋ, ಎಂದರೆ ಮಹತ್ತಾದುದೊ, ಅದೇ ಸುಳ. ಅಲ್ಪದಲ್ಲಿ ಸುಖವಿಲ್ಲ. ಸಮಸ್ತ ಭೋಗವೂ ಭೂಮಕ್ಕೆತ್ತಿದ ತ್ಯಾಗದಾರತಿಯಾಗಬೇಕು. ಆಗ ಕ್ಷಣಿಕ ಭೋಗವೂ ಬ್ರಹ್ಮಾನಂದವಾಗಿ ಮಾರ್ಪಡುತ್ತದೆ.

ಕ್ಷುಧೆ ಮತ್ತು ಕಾಮ ಇವೆರಡೂ ಪ್ರಕೃತಿಯಲ್ಲಿ ಬಹು ದೊಡ್ಡ ರಂಗಗಳನ್ನು ನಿರ್ಮಿಸಿಕೊಂಡಿರುತ್ತವೆ. ಸರಸವಾದಾಗ, ಸಮರಸವಾದಾಗ, ಮೈತ್ರಿಯ ಔತಣಕೂಟಗಳೂ ಶೃಂಗಾರದ ವೈವಾಹಮಂಟಪಗಳೂ ನಿರ್ಮಾಣವಾಗುತ್ತವೆ. ವಿರಸವಾಗಿ, ಸ್ಪರ್ಧೆ ಪ್ರಾರಂಭವಾಯಿತೆಂದರೆ ರಣಚಂಡಿಯ ಭೈರವಲೀಲೆ ನಡೆದುಹೋಗುತ್ತದೆ: ರಾಮಾಯಣ, ಮಹಾಭಾರತ, ಈಲಿಯಡ್ ಮತ್ತು ಒಡಸ್ಸಿಗಳಿಗೆ ಸಾಮಗ್ರಿಯೊದಗುತ್ತದೆ. ಆಗ ನಿಸರ್ಗದ ರಾಜ್ಯದ ಜೊತೆಗೆ ಮಾನವನ ಮನಸ್ಸಾಮ್ರಾಜ್ಯವೂ ಗೋಚರವಾಗುತ್ತದೆ. ದೇಹಕ್ಕೂ ಧ್ಯೇಯಕ್ಕೂ ಹೋರಾಟ ನಡೆದು, ಧ್ಯೇಯಕ್ಕಾಗಿ ದೇಹ ಸಮರ್ಪಿತವಾದಾಗ ಅಥವಾ ಶರಣಾದಾಗ ಆತ್ಮದ ‘ದರ್ಶನ’ ವ್ಯಕ್ತವಾಗುತ್ತದೆ.

ಪ್ರಾಚೀನ ಯುಗದಲ್ಲಿ ಮನುಷ್ಯನ ಕ್ಷುಧಾಕಾಮಗಳು ಈಗಿರುವಂತೆಯೆ ಇದ್ದುವಾದರೂ ಜನಸಂಖ್ಯೆ ವಿರಳವಾಗಿದ್ದುದರಿಂದಲೂ ಭೂವಿಸ್ತಾರವು ವಿಫುಲವಾಗಿದ್ದುದರಿಂದಲೂ ಈಗ ನಡೆಯುತ್ತಿರುವಂತೆ ಕ್ಷುಧಾಕಾರಣಕ್ಕಾಗಿ ಮಹಾಸಮರಗಳು ಜರುಗುತ್ತಿದ್ದುದು ಕಡಮೆಯೆಂದೇ ತೋರುತ್ತದೆ. ಅಥವಾ ನಡೆದಿದ್ದರೂ ಸಾಹಿತ್ಯ ಅಂಥವುಗಳನ್ನು ಶಾಶ್ವತಗೊಳಿಸಲು ಇಷ್ಟಪಟ್ಟಿಲ್ಲ. ಆದರೆ ಕಾಮಕಾರಣಕ್ಕಾಗಿ ಬಹು ದೊಡ್ಡ ಯುದ್ಧಗಳು ಬಹುಕಾಲದವರೆಗೆ ನಡೆದಿರುವುದಕ್ಕೆ ಎಲ್ಲ ದೇಶಗಳ ಮಹಾಪುರಾಣಗಳೂ ಸಾಕ್ಷಿಯಾಗಿವೆ. ಇಂದು ಕಾಮಕ್ಕಾಗಿ ಅಂಥಾ ಮಹಾಯುದ್ಧಗಳು ನಡೆಯುವುದಿಲ್ಲ; ಎಂದರೆ, ದೇಶದೇಶದ ಜನರೇ ಪಕ್ಷ ಪ್ರತಿಪಕ್ಷಗಳಾಗಿ ನಿಂತು ಒಬ್ಬರನ್ನೊಬ್ಬರು ಕೊಲ್ಲುವುದಿಲ್ಲ. ಆದರೆ ಸಾಮಾನ್ಯವ್ಯಕ್ತಿಗಳ ಜೀವಿತದಲ್ಲಿ ಮನ್ಮಥನ ಮಥನಕೋಲಾಹಲವು ಯಥೇಚ್ಛವಾಗಿರುತ್ತದೆ. ಆ ಪ್ರಪಂಚವನ್ನು ಕುರಿತು ಬರೆದು ಬಣ್ಣಿಸುವ ಕಾರ್ಯ ಈಗ ಕಾದಂಬರಿಗಳಿಗೆ ಮೀಸಲಾಗಿದೆ. ಹಿಂದಿನ ಮಹಾಪುರಾಣಗಳ ಸ್ಥಾನದಲ್ಲಿ ಇಂದು ಮಹಾಕಾದಂಬರಿಗಳು ನಿಂತಿವೆ.

ಮಹಾಪುರಾಣಗಳೆಲ್ಲವೂ ಒಂದೊಂದು ರೀತಿಯಲ್ಲಿ ಪ್ರಣಯ ಕಥೆಗಳಾಗಿವೆ. ಪ್ರಾಣಿಯ ಪ್ರಣಯ ಮೊದಲುಗೊಂಡು ಪರಮೇಶ್ವರನ ಪ್ರಣಯದವರೆಗೂ ಅಲ್ಲಿ ಚಿತ್ರಿತವಾಗಿದೆ. ಅಂತಹ ಚಿತ್ರಗಳಲ್ಲಿ ನಮ್ಮ ಆರಾಧನೆಗೆ ಪಾತ್ರವಾಗಿ, ನಮ್ಮ ಸಾಧನೆಗೆ ಸೂತ್ರವಾಗಿ, ಚಿರಕಾಲವೂ ನಮ್ಮ ಪ್ರೇಯಸ್ಸು ಶ್ರೇಯಸ್ಸುಗಳಿಗೆ ಆದರ್ಶವಾಗಿ ದೇವವೇದಿಕೆಯ ಮೇಲೆ ನಿಂತಿರುವ ದೇವಿಯರು ಕೆಲವರಿದ್ದಾರೆ: ಸೀತೆ, ಸಾವಿತ್ರಿ, ದಮಯಂತಿ, ಪಾರ್ವತಿ, ಚಂದ್ರಮತಿ, ಊರ್ಮಿಳೆ, ಶಕುಂತಳೆ, ವಾಸವದತ್ತೆ, ಇತ್ಯಾದಿ.

ಅವರ ಕೀರ್ತಿಗಳಲ್ಲಿ ತರತಮಾಂತರಗಳಿರಬಹುದು. ಅವರು ಸಹಿಸಿದ ಕಷ್ಟಗಳಲ್ಲಿ ರೂಪವ್ಯತ್ಯಾಸಗಳಿರಬಹುದು. ಆದರೆ ಅವರ ತಪಸ್ಸಿನ ಹೃದಯದಲ್ಲಿ ಸ್ಪಂದಿಸುವ ಭಾವತೀಕ್ಷ್ಣತೆಯಲ್ಲಿ ಹಿರಿಕಿರಿಯಿಲ್ಲ, ಮೇಲುಕೀಳಿಲ್ಲ. ಅವರಲ್ಲಿ ಒಬ್ಬೊಬ್ಬರ ಪ್ರೇಮವೂ ಒಂದೊಂದು ರೀತಿಯಲ್ಲಿ ವಿಧಿಯ ನಿಷ್ಠುರ ನಿರ್ದಾಕ್ಷಿಣ್ಯ ಪರೀಕ್ಷೆಗೆ ಒಳಗಾಗಿದೆ. ಒಬ್ಬೊಬ್ಬರೂ ಉತ್ತೀರ್ಣರಾಗಿ ಉಜ್ಜ್ವಲರಾಗಿದ್ದಾರೆ. ಇನಿಯರೊಡಗೂಡಿದ ಮೇಲೆ ಕೆಲವರ ತಪಸ್ಸು ಪ್ರಾರಂಭವಾಗುತ್ತದೆ. ಕೆಲವರದ್ದು ಅದಕ್ಕೆ ಪೂರ್ವದಲ್ಲಿಯೆ ಮೊದಲಾಗುತ್ತದೆ. ಜನಕನಂದಿನಿ ಸೀತೆ ರಾಮನೊಡಗೂಡಿ ಅಯೋಧ್ಯೆಯ ಅರಮನೆಯಲ್ಲಿ ಕೆಲಕಾಲ ಸುಖವಾಗಿದ್ದು, ತರುವಾಯ ಅರಣ್ಯವಾಸ ಮತ್ತು ಲಂಕಾವಾಸಗಳ ಅಗ್ನಿಸ್ನಾನದಿಂದ ಜಗದ್ವಂದ್ಯೆಯಾಗಿದ್ದಾಳೆ. ಗಿರಿರಾಜನಂದಿನಿ ಪಾರ್ವತಿಯಾದರೊ ತಪ್ಪಸ್ಸಿನ ತರುವಾಯ ಅದರ ಫಲರೂಪವಾಗಿಯೆ ಚಂದ್ರಮೌಳಿಗೆ ಅರ್ಧಾಂಗಿಯಾಗುತ್ತಾಳೆ. ಇನಿಯನ ಕೊರಳಿನಲ್ಲಿ ಮೃತ್ಯುಪಾಶದ ಛಾಯೆಯನ್ನು ಕಂಡೂ ಅವನನ್ನು ವರಿಸಿ, ತನ್ನ ಪ್ರೇಮದ ತಪಸ್ಸಿನಿಂದ ಯಮನನ್ನೂ ಒಲಿಸಿ, ತನ್ನ ಪ್ರಾಣೇಶ್ವರನನ್ನು ಗೆದ್ದುಕೊಂಡಿದ್ದಾಳೆ ಸಾವಿತ್ರಿ. ಪತಿ ತನ್ನ ಆದರ್ಶಕ್ಕಗಿ ಕೈಕೊಂಡ ತಪಸ್ಸಿನಲ್ಲಿ ಮನಃಪೂರ್ವಕವಾಗಿ ಭಾಗಿಯಾಗಿ, ಆತನಿಗೊಂದು ಬೆಂಬಲವಾಗಿ, ರಾಣಿಯಾಗಿದ್ದರೂ ಪಡಬಾರದ ಕಷ್ಟಾವಮಾನಗಳನ್ನೆಲ್ಲ ಸಹಿಸಿ, ಪೂಜಾರ್ಹಳಾಗಿದ್ದಾಳೆ ಚಂದ್ರಮತಿ. ಆಕೆಯ ತಂಗಿ-ದಮಯಂತಿ. ಊರ್ಮಿಳೆಯ ತಪಸ್ಸು ಎಲ್ಲರಗಿಂತಲೂ ಕಷ್ಟಕರ. ಏಕೆಂದರೆ ಅದೊಂದು ಅನಂತ ನಿರೀಕ್ಷೆ. ಇತರರ ತಪಸ್ಸಿನಲ್ಲಿ ಕ್ರಿಯೆಯ ಮತ್ತು ಸಾಹಸದ ವಿರಾಮವಿದೆ. ಊರ್ಮಿಳೆಯ ತಪಸ್ಸಾದರೊ ನಿಶ್ಚಲತೆಯಿಂದಲೂ ನೀರವತೆಯಿಂದಲೂ ನಿರೀಕ್ಷೆಯ ದೀರ್ಘತೆಯಿಂದಲೂ ಅವಿರಾಮವಾಗಿದೆ. ಆಕೆಯದು ಅಹಲ್ಯೆಯ ತಪಸ್ಸಿನಂತೆ ಶಿಲಾ ತಪಸ್ಸು. ಶಕುಂತಳೆಯ ತಪಸ್ಸಿನಲ್ಲಿರುವಂತೆ ಕುಮಾರನ ಕಣ್ಬೆಳಕಿನ ತಂಪಿಲ್ಲ; ವಾಸವದತ್ತೆಯ ತಪಸ್ಸಿನಲ್ಲಿರುವಂತೆ ಪತಿಯ ಸಾಮೀಪ್ಯದ ಅಲಂಪಿಲ್ಲ. ಶಕುಂತಳೆಯ ಕಷ್ಟದ ಕಾರ್ಮೋಡಕ್ಕೆ ಸಂತಾನವಾತ್ಸಲ್ಯದ ಮಿಂಚಿನಂಚಿದೆ. ವಾಸವದತ್ತೆಯ ಸಂಕಟದ ಸಮೀಪದಲ್ಲಿಯೆ ವೆಂಕಟರಮಣನಿದ್ದಾನೆ. ಆ ದೃಷ್ಟಿಯಿಂದ ನೋಡಿದರೆ ಊರ್ಮಿಳೆಯ ತಪಸ್ಸು ಅತ್ಯುಗ್ರವೂ ಅಸಹನೀಯವೂ ಆಗಿ ತೋರುತ್ತದೆ. ಆಕೆಯನ್ನು ಹೋಲುವ ಮತ್ತೊಬ್ಬ ಮಹಾ ಮಹಿಳೆಯೆಂದರೆ ಕಾದಂಬರಿಯ ಮಹಾಶ್ವೇತೆ.

ಅಂತೂ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಪ್ರಸಿದ್ಧರೂ ಪೂಜ್ಯರೂ ಆಗಿರುವ ಮಹಿಳೆಯರೆಲ್ಲರೂ ತಪಸ್ಸಿಲ್ಲದೆ ಆ ಮಹತ್ತಿಗೇರಿಲ್ಲ ಎಂಬುದು ನಿರ್ವಿವಾದವಾಗಿದೆ.

ಆಧುನಿಕ ನಾಗರಿಕತೆಗೆ ತಪಸ್ಸಿನಲ್ಲಿ ನಂಬುಗೆ ತಪ್ಪಿಹೋಗಿದೆ. ನಿಜವಾಗಿಯೂ ವಾಸ್ತವ ಜೀವನದಲ್ಲಿ ಅದು ತಪ್ಪಿಹೋಗಿಲ್ಲ. ತಪ್ಪುವುದಾದರೂ ಹೇಗೆ? ಪ್ರಕೃತಿಸಿದ್ಧವಾದ ನಿಯಮವದು. ಆದರೆ ಹೆಂಡಕುಡುಕನಿಗೆ ಪರಿಣಾಮದ ದುರಂತತೆಯ ಕಡೆಗೆ ಲಕ್ಷವಿರುತ್ತದೆಯೆ? ಯಾರಾದರೂ ಎಚ್ಚರಿಸಿದರೂ ಅದು ಅವನಿಗೆ ರುಚಿಸುತ್ತದೆಯೆ? ಅವನು ಬುದ್ಧಿವಂತನಾಗಿದ್ದರಂತೂ ಕುಡಿಯುವುದರ ಪರವಾಗಿ ನೂರಾರು ವಾದಗಳನ್ನು ತಂದೊಡ್ಡಿ ಎದುರಾಳಿಯನ್ನು ಮದ್ಯದ ಮಧ್ಯದಲ್ಲಿಯೆ ಮುಳುಗಿಸಿಬಿಡುತ್ತಾನೆ. ಅದರಂತೆಯೆ ಇಂದ್ರಿಯ ಸುಖಗಳ ವಿಷಯದಲ್ಲಿ ಅಸಂಯಮಿಯಾದವನಿಗೆ ಅವನ ರುಚಿ ಅವನ ‘ದರ್ಶನ’ಕ್ಕೆ ಮೂಲವಾಗುತ್ತದೆ. ಅಂಥವನು ಆಸೆಯನ್ನೇ ಆಲೋಚನೆ ಎಂದು ಭ್ರಮಿಸುತ್ತಾನೆ. ಚೆನ್ನಾಗಿ ಕುಡಿದಾಗ ಮದ್ಯಪಾಯಿಗೆ ತನ್ನ ಮನಸ್ಸು ಪೂರ್ಣವಾದಂತೆ ತೋರುತ್ತದೆ; ತನ್ನ ಆತ್ಮಕ್ಕೆ ಚಿರಂತನ ತೃಪ್ತಿ ಲಭಿಸಿದಂತೆ ತೋರುತ್ತದೆ; ತನಗೆ ಪ್ರಪಂಚದಲ್ಲಿ ಇನ್ನೇನೂ ಬೇಕಾಗಿಲ್ಲ ಎಂಬಂತೆ ತೋರುತ್ತದೆ. ತನ್ನ ಪ್ರಾಣಪಾತ್ರೆ ಪೂರ್ಣವಾಯಿತು ಎಂದುಕೊಳ್ಳುತ್ತಾನೆ. ಶೃಂಗಾರರಸ ಪೂರ್ಣವಾಗಿಯೂ ಸುಪ್ರಸಿದ್ಧವಾಗಿಯೂ ಇರುವ ರವೀಂದ್ರನಾಥಕೃತ ‘ಚಿತ್ರಾ’ ನಾಟಕದ ಕೊನೆಯಲ್ಲಿ ಚಿತ್ರಾಂಗದೆಯ ಆಲಿಂಗನದಿಂದ ಅಮರರಸಪಾನ ಮಾಡಿದಂತೆ ಸುಖಮೂರ್ಛೆಗೆ ಸಂದ ಅರ್ಜುನನು “ಕಮಲನೇತ್ರೆ, ಪೂರ್ಣವಾಯ್ತಿಂದು ನನ್ನ ಪ್ರಾಣ ಪಾತ್ರೆ!” ಎಂಬರ್ಥದ ವಾಕ್ಯವನ್ನು ಹೇಳುತ್ತಾನೆ. ಆ ವಾಕ್ಯದಿಂದಲೇ ಆ ನಾಟಕ ಮುಗಿಯುತ್ತದೆ. ಅದನ್ನು ಓದಿದಾಗಲೆಲ್ಲ ನನಗೆ ಕಂಠಪೂರ್ತಿಯಾಗಿ ಕುಡಿದ ಮದ್ಯಪಾಯಿಯ ನೆನಪಾಗುತ್ತದೆ. “ಮುಂದೆ?” ಎಂಬ ಪ್ರಶ್ನೆ ಅನಿವಾರ್ಯವಾಗಿ ತುಟಿಮೀರುತ್ತದೆ. ಆ ಪ್ರಶ್ನೆಗೆ ಲಕ್ಷ್ಮೀಶಕವಿ ಒಂದು ರೀತಿಯಾಗಿ ಉತ್ತರ ಹೇಳಿದ್ದಾನೆ. ಆ ಉತ್ತರದಲ್ಲಿ ಪ್ರಾಣಪಾತ್ರೆ ಅಷ್ಟು ಸುಲಭವಾಗಿ ಪೂರ್ಣವಾಗುವುದಿಲ್ಲ ಎಂಬುದು ವ್ಯಕ್ತವಾಗುತ್ತದೆ. ಎಷ್ಟೇ ಪರಿಶುದ್ಧವಾದುದಾಗಲಿ, ಎಷ್ಟೇ ಮುಗ್ಧವಾದುದಾಗಲಿ, ತಪಸ್ಸಿನಿಂದ ಪರೀಕ್ಷಿತವಾಗಿ ಚಂಚಲತಾ ವಿಮುಕ್ತವಾಗದಿದ್ದರೆ, ಪರಿಷ್ಕೃತವಾಗಿ ಪರಿಪಕ್ವವಾಗದಿದ್ದರೆ, ತಾರುಣ್ಯದ ತರಳಭೋಗಕ್ಕೆ ಚಿರಪ್ರೇಮದ ಮಹತ್ತಾಗಲಿ ಗೌರವವಾಗಲಿ ದೊರೆಯುವುದಿಲ್ಲ: ಅದು ನಮ್ಮ ಪ್ರಾಚೀನ ಕವಿದರ್ಶನದ ಕಾವ್ಯವಾಣಿ.

ಹೊಸ ಕಲೆ ಒಪ್ಪದಿದ್ದರೂ ಹೊಸ ಬಾಳು ಆ ದರ್ಶನವನ್ನು ಹುಸಿಗೈಯಲಾಗಲಿ ವಂಚಿಸಲಾಗಲಿ ಸಮರ್ಥವಾಗಿಲ್ಲ. ತರುಣರಾದ ಪ್ರಿಯ ಪ್ರೇಯಸಿಯರು ತಮ್ಮ ಪಿತೃಗಳಿಗೆ ತಿಳಿಯದಂತೆ ಓಡಿಹೋಗಿ ಆಲಿಂಗಿಸುವ ಅಥವಾ ಚುಂಬಿಸುವ ಚಿತ್ರವನ್ನೇ ಕೊನೆಯ ವಿಷಯವನ್ನಾಗಿ ಮಾಡಿ ಸಾಹಿತ್ಯವನ್ನು ಕೊನೆಮುಟ್ಟಿಸುವ ಕಿರಿಯ ಕಥೆಗಳೂ ಕಿರಿಯ ನಾಟಕಗಳೂ ಅಗ್ಗದ ಚಲಚ್ಚಿತ್ರಗಳೂ ಸತ್ಯವನ್ನು ಮರೆಮಾಚಿದರೂ, ಕೋರ್ಟಿನಲ್ಲಿ ನಡೆಯುವ ಮೊಕದ್ದಮೆಗಳ ಪತ್ರಿಕಾವರದಿಗಳಾದರೂ ಪ್ರಾಚೀನ ಕವಿದರ್ಶನದ ಅಬಾಧಿತ ಸತ್ಯಕ್ಕೆ ಸಾಕ್ಷಿಗಳಾಗಿರುತ್ತವೆ.


ಕಲ್ಪನೆಯ ಬೆನ್ನೇರಿ ಸೌಂದರ್ಯವನ್ನು ಬೆನ್ನಟ್ಟಿ ಬೇಟೆಯಾಡುತ್ತಾ ಮುನ್ನುಗ್ಗುವ ಕವಿಯಾತ್ಮಕ್ಕೆ ತನ್ನ ಪ್ರಯತ್ನ ವಿಫಲವಾದಂತೆ ತೋರುತ್ತದೆ; ಆ ಬೇಟೆಯನ್ನುಳಿದು, ಆ ಬೆನ್ನಿಂದಿಳಿದು, ಸೋತು, ದಣಿದು ತಟಸ್ಥವಾಗುತ್ತದೆ; ಹಾಗಿರುವಾಗಲೆ ತಟಕ್ಕನೆ ಅದಕ್ಕೆ ಕೇಳಿಸುತ್ತದೆ ಸತ್ಯದ ರಸವಾಣಿ. ಅದರಂತೆ, ಕಿನ್ನರ ಮಿಥುನವನಟ್ಟಿ, ಸೋತು, ಇಂದ್ರಾಯುಧದಿಂದಿಳಿದು, ಹರನ ನೋಟಕ್ಕೆ ಕೈಲಾಸವೇ ಕರಗಿದಂತೆ ಹಬ್ಬಿಯೂ, ರುದ್ರಾಟ್ಟಹಾಸವೆ ಜಲವಾದಂತೆ ಬೆಳಗಿಯೂ, ತ್ರೈಲೋಕ್ಯ ಲಕ್ಷ್ಮೀಮಣಿಮುಕುರದಂತೆ ನೈರ್ಮಲ್ಯ ಶೋಭಾಕಲಿತವಾಗಿಯೂ ಇದ್ದ ಅಚ್ಛೋದ ಸರೋವರದ ತೀರದ ಲಲಿತಲತಾಗೃಹದ ಇಂದೂಪಲದ ಮೇಲೆ ಪಟ್ಟಿರ್ದ ಚಂದ್ರಾಪೀಡನಿಗೆ ಕೇಳಿಸಿತು-ವೀಣಾಧ್ವನಿ! ತನ್ನ ತೇಜಿಯೆ ಮುರಿದ ಕೊರಲಾಗಿ, ಬಳಲ್ದೆಳಪಲಾಟಿಪ ಮೆಯ್ಯಾಗಿ, ಕಡೆವಾಯ ಲೋಳೆಯೊಳ್ ಪೊರೆದುಗುತರ್ಪ ಪಚ್ಚಪಸಿಯಚ್ಚಗಱುಂಕೆಯಾಗಿ, ಮರಲ್ದ ದಿಟ್ಟಿಯಾಗಿ, ಕತ್ತರಿಮೊನೆಗೊಂಡೆಳಲ್ವ ಕಿವಿಯಾಗಿ ಸೋಲ್ತ ಭಾವವನ್ನು ಸೂಚಿಸುತ್ತಿತ್ತು ಎಂದಮೇಲೆ ವೀಣಾ ವಿದ್ಯಾಧರನಾದ ರಾಜಕುಮಾರನಿಗೆ ಆ ವಿಪಂಚೀನಾದ ಪೆಣ್ದುಂಬಿಯ ಗಾವರಂಬೊರೆದು ಪೊಣ್ಮುತ್ತಿರ್ದ ಪುಪ್ಪಾಸ್ತ್ರಚಾಪಲತಾ ಜ್ಯಾರವದಂತೆ ಅಮಾನುಷವಾದ ಓಜೆಯಿಂದ ಗಂಧರ್ವರನ್ನು ಸೋಲಿಸುತ್ತಾ ಪಳಂಚಲೆದಂತೆ ಇಂಪಾದುದರಲ್ಲಿ ಅಚ್ಚರಿಯೇನಿದೆ? ಅದೂ ಅಲ್ಲದೆ ಮನುಜರಿಗೆ ಅಗೋಚರವಾದ ಹರಾದ್ರಿಯ ತಪ್ಪಲಿನಲ್ಲಿ ಆ ಗೇಯದ ದನಿ! ಕುತೂಹಲಿತ ಮಾನಸನಾದ ಆ ನರೇಂದ್ರನಂದನನು ಕುದುರೆಯ ಬೆನ್ಗೆ ಬಂದು ಮುಂದುವರಿದನು-ಮೃಗಸೂಚಿತ ಗೇಯಮಾರ್ಗದಿಂ.

ಚಂದ್ರಾಪೀಡ ಮಹಾಶ್ವೇತೆಯರ ಸಂದರ್ಶನದ ಸನ್ನಿವೇಶಕ್ಕೆ ಕವಿಪ್ರತಿಭೆ ಉದಾರವೂ ಉತ್ತುಂಗವೂ ತುಷಾರಶುಭ್ರವೂ ಆಗಿರುವ ಎಂತಹ ಅಭ್ರವೇದಿಕೆಯನ್ನು ವಿರಚಿಸಿದೆ!

ಕಾದಂಬರೀ ಕಾವ್ಯದಲ್ಲಿ ಪ್ರಧಾನ ಸನ್ನಿವೇಶಗಳು ಮಾತ್ರವಲ್ಲದೆ ಸಮಗ್ರ ಕಥಾಭಿತ್ತಿಯೂ ತಪೋವನಗಳ ಪರಿವೇಷದಿಂದ ಸಂವೃತವಾಗಿದೆ. ಶೂದ್ರಕನ ಆಸ್ಥಾನವಾಗಲಿ, ತಾರಾಪೀಡನ ರಾಜಧಾನಿಯಾಗಲಿ, ಅಥವಾ ಗಂಧರ್ವಲೋಕದ ಹೇಮಕೂಟದ ಕಾದಂಬರಿಯ ಕನ್ಯಾಂತಃಪುರದ ಕಾಂಚನಮಯ ತೋರಣಗಳ ಮಂಟಪವಾಗಲಿ ನಮ್ಮ ಮನಸ್ಸನ್ನು ಚಿರಕಾಲವೂ ಸೆಳೆದಿಡಲು ಸಮರ್ಥವಾಗುವುದಿಲ್ಲ. ಅವೆಲ್ಲವೂ ಸೋಪಾನಗಳೆ ಹೊರತು ದೇವಮಂದಿರವಲ್ಲ. ಸೋಪಾನಪಂಕ್ತಿಯ ಮನೋಹರತೆ ದೇವನಿಕೇತನದ ಪವಿತ್ರತೆಗೆ ಸಮರ್ಪಿತ. ಬಾಗಿಲಲ್ಲಿ ಕಣ್ಗೊಳಿಸುವ ತೋರಣ ಕಾಂಚನದ್ದಾದರೂ ಅದು ಅಂತರ್ವಲಯದ ಗರ್ಭಗುಡಿಯಲ್ಲಿರುವ ಭಗವದಿಂದುಮೌಳಿಯ ಹಾಲ್ಗಲ್ಲಿನ ಪ್ರತಿಮೆಗೆ ಪ್ರತೀಹಾರಿ.

ಕಾವ್ಯಲೋಕದಲ್ಲಿ ನಮ್ಮ ಮನಸ್ಸು ಅಲೆಯುವ, ಒಲಿಯುವ, ವಿಹರಿಸುವ, ವ್ರತಗೈಯುವ ಸ್ಥಾನಗಳೆಂದರೆ: ಅರಣ್ಯ, ಆಕಾಶ, ನದಿ, ನಿರ್ಝರ, ಪರ್ವತ, ತಪೋವನ. ನಮ್ಮ ಕಲ್ಪನೆ ತೀರ್ಥಸ್ನಾನ ಮಾಡುವುದು ಅಚ್ಛೋದ ಪಂಪಾ ಸರೋವರಗಳಲ್ಲಿ. ನಮ್ಮ ಹೃದಯ ಧ್ಯಾನವಿಹಾರಿಯಾಗುವುದು ಜಾಬಾಲಿ ಮತ್ತು ಮಹಾಶ್ವೇತೆಯರ ಆಶ್ರಯಮಗಳಲ್ಲಿ. ನಮ್ಮ ಚೇತನ ಸಾಷ್ಟಾಂಗ ಪ್ರಣಾಮ ಮಾಡುವುದು ಶ್ವೇತಕೇತು ವ್ರತಿಗಳ ಚರಣತಲದಲ್ಲಿ. ಅಲ್ಲಿ ನಮ್ಮ ಪ್ರಾಣಕ್ಕೆ ನಿತ್ಯಸಂಗಿ ಕಪಿಂಜಲ ಮಹರ್ಷಿ. ಈ ಮಹಾ ಶ್ವೇತವಾತಾವರಣದ ಸಂಪೂತ ಮಹಿಮೆಯಿಂದಲೇ ಕಾದಂಬರಿಯ ಓಕುಳಿಯ ವರ್ಣವೂ ಹಾಲ್‌ಬೆಳ್ಳಿಗೆ ತಿರುಗಿದೆ; ರುಚಿರಶೃಂಗಾರದ ಅಚಿರತೆಯೂ ಅಕ್ಷಯಶಾಂತಿಯ ಕ್ಷೀರಕಾಂತಿಯಿಂದ ಶೋಭಿಸುತ್ತಿದೆ.

ಮಹಾಶ್ವೇತೆಯ ಮಹಾಶ್ವೇತಾಶ್ರಮ: ಹೆಸರಾಲಿಸಿದರೆ ವಿಷಯಬೋಧೆಯಾಗುತ್ತದೆ!

ಪೃಥ್ವಿಯ ದೈನಂದಿನ ಜೀವನದ ಧೂಳೀ ಧೂಸರ ವಕ್ಷಸ್ಥಲದಿಂದ ಬಹುದೂರವಾಗಿದ್ದೇವೆ. ಬಹು ಎತ್ತರಕ್ಕೇರಿದ್ದೇವೆ. ಹೈಮಾಚಲದ ಸ್ಫಟಿಕನಿಕಾಶ ಅನಿಲಮಂಡಲ. ಅಚ್ಛೋದ ಸರೋವರದ ಶೀತಲನಿರ್ಮಲ ವಾರಿವಿಸ್ತಾರ. ಕಂಪಿಂಪು ತಂಪಿಡಿದು ತೀಡುತಿದೆ ಬೈಗುಗಾಳಿ:

ಕುಮುದರಜಂಗಳೊಳ್ ಪೊರೆದು ವಾಃಕಣಜಾಲಮನಾಂತು ಕೂಡೆ ವಿ
ಶ್ರಮಿಸಿ ತರಂಗಮಾಲಿಕೆಗಳೊಳ್ ಕಲಹಂಸನಿನಾದ ಬಂಭ್ರಮದ್
ಭ್ರಮರರವಂಗಳೊಳ್ ಬೆರಸಿ ಮಾರುತನೊಯ್ಯನೆ ಬಂದು ತೀಡಿದ
ತ್ತಮರ್ದೊಸೆದಪ್ಪಿಕೊಂಡು ಕರೆವಂತೆವೊಲಾ ಮನುಜೇಂದ್ರ ಚಂದ್ರನಂ.
ಅಂಚೆಗಳಿಂಚರದಿಂ ತಣ್ಪಿಂ ಚೆಲ್ವಿಂ ಸವಿಯಿನಬ್ಜಘನಸೌರಭದಿಂ
ಕಾಂಚನಕಮಳಾಕರಮಿದು ಪಂಚೇಂದ್ರಿಯಸುಖಮನೆನಗೆ ಪಡೆದಪುದೀಗಳ್.

ವೈರಾಗಿಗಳ ಆದರ್ಶದೇವನಾದ ಗೌರೀವಲ್ಲಭನಿಗೂ ಮೋಹ ಹುಟ್ಟಿಸುವಂತಿದೆ ಆ ಚೇತೋಹಾರಿಯಾದ ದೃಶ್ಯ.

ಎಲ್ಲಿ ನೋಡಿದರೂ ಬಿಳಿಯ ಬಣ್ಣ. ಎತ್ತ ಕಣ್ಣೋಡಿದರೂ ರಜತನವನೀತ ಶುಭ್ರ ತುಹಿನರಾಶಿ. ಆ ಶ್ವೇತಶುಭ್ರತೆಯಲ್ಲಿ ಮಿಂದು ಶುದ್ಧಚೇತನನಾದ ಚಂದ್ರಾಪೀಡನು ಬೀಣೆಯಿಂಚರದ ಬಟ್ಟೆವಿಡಿದು ಮುಂಬರಿದು ನೋಡುತ್ತಾನೆ: ಅದೊ ಸಿದ್ಧಾಯತನಂ ಮನಂಗೊಳಿಸಿ ತೋರುತ್ತಿರ್ಪುದು! ಅಲ್ಲಿ ರತ್ನಪೀಠಘಟಿತವೂ ದೇದೀಪ್ಯಮಾನಪ್ರಭವೂ ಚತುರ್ವಕ್ತ್ರಸುಂದರವೂ ಆದ ನಿರ್ಮಲ ದಿವ್ಯಮೌಕ್ತಿಕ ಶಿಲಾಲಿಂಗವೊಂದು ಗೋಚರಿಸುತ್ತದೆ. ಇಲ್ಲಿ ಕವಿಯ ವರ್ಣನೆ, ಬೆಳ್ಪಿನ ಮೇಲೆ ಬೆಳ್ಪನ್ನು ಹೇರಿ, ಬೆಳ್ಳಿಯ ಬೆಟ್ಟಕ್ಕೆ ಪ್ರತಿಸ್ಪರ್ಧಿಯಾಗಿ ನಿಂತಿದೆ: ಹರಹಾಸನದ ಅವಯವಗಳಂತೆ! ಅನಂತಾನಂತ ಭೋಗಗಳಂತೆ! ಪೂರ್ಣೇಂದು ಕಲಾಳಿಯಂತೆ! ಮುತ್ತಿನ ಶಿಲೆಯ ದಿವ್ಯ ಲಿಂಗವನ್ನು ಮುತ್ತಿವೆಯಂತೆ ಬೆಳ್ದಾವರೆಯ ಸೇನೆ!

ಆ ಸಿದ್ಧಾಯತನವನ್ನಾಗಲಿ ಆ ಮೌಕ್ತಿಕಶಿಲಾಲಿಂಗವನ್ನಾಗಲಿ ಚಿತ್ರಿಸಿಕೊಳ್ಳುವುದರಲ್ಲಿ ಕಾರ್ಪಣ್ಯ ದೂರವಾಗಿರಬೇಕು ನಮ್ಮ ಕಲ್ಪನೆ. ಅಲ್ಲಿ ಅಲ್ಪಕ್ಕೆ ಸ್ಥಾನವಿಲ್ಲ. ಎಲ್ಲವೂ ಹೈಮಾಚಲಸಂಗಿಗಳೆ.

“ಎಲ್ಲವು ಎಲ್ಲಿಯು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!”

ಎಂಬಂತೆ ಅಸೀಮದ ಸೀಮೆಯಲ್ಲಿ ಭೂಮವೇ ಸಾಧಾರಣ ಮತ್ತು ಸಾಮಾನ್ಯ. ಚರಾಚರಗುರುವಪ್ಪ ಶೂಲಪಾಣಿ ದೇವರ ಮಹಾಪ್ರತಿಮೆಯ ಧವಳಬೃಹತ್ತು ಎಷ್ಟು ವಿರಾಟಾಗಿತ್ತೆಂದರೆ ಅದನ್ನು ಆಶ್ರಯಿಸಿ ‘ಭಕ್ತಿಯೆ ಭವಸನ್ನಿಧಿಯಲ್ಲಿ ರೂಪು ಗೊಂಡಂತಿರ್ದ’ ಮಹಾಶ್ವೇತೆ ರಾಜಕುಮಾರನ ಕಣ್ಣಿಗೆ ತಟಕ್ಕನೆ ಬೀಳಲಿಲ್ಲ!

ಆ ತಪಸ್ವಿನಿಯ ವರ್ಣನೆಯಲ್ಲಿಯೂ ಕವಿಯ ಕುಂಚಿಕೆ ಅಮೃತದಲ್ಲಿ ಅದ್ದಿಹೋಗಿದೆ. ಅಮೃತಾಂಭೋರಾಶಿ ಪೂರಪ್ರತಿಮ ನಿಜ ತಪಸ್ಸಂಚಯಂ ಪರ್ವಿತೋ ಲೋಕಮನ್-ಎಂಬಂತಿದೆ ಆಕೆಯ ದೇಹಾಂಶು. ಆತನು ಹರನನ್ನು ಆರಾಧಿಸುತ್ತಿರ್ದ ಆ ‘ಅತ್ಯುತ್ತಮ ದಿವ್ಯಾಕಾರೆ’ ಶಂಖದಿಂದ ಕಡೆದಂತಿದ್ದಾಳೆ; ಮುತ್ತಿನಿಂದ ತೆಗೆದಂತಿದ್ದಾಳೆ; ಮೃಣಾಳದಿಂದ ಪಡೆದಂತಿದ್ದಾಳೆ. ಅಮೃತಾಂಶು ರಶ್ಮಿಗಳ ಕುಂಚಿಗೆಯಿಂದಮೆ ಕರ್ಚಿ ಪಾರದಂದೊಡೆದರೊ-ಎಂಬಂತಿದ್ದಾಳೆ.

ಆಗತಾನೆ ಮಿಂದು ಮಡಿಯುಟ್ಟು ಬಂದಿದ್ದಾಳೆ ಆಕೆ. ಎಳಮಿಂಚಿನ ಒಳ್ದಳಿರ್ಗಳ ಬಣ್ಣದ ಕೂದಲನ್ನು ಕೆದರಿಬಿಟ್ಟಿದ್ದಾಳೆ. ಆ ತಪಸ್ವಿನಿಯ ಚೆದರ್‌ಮುಡಿ ಬಾಚದೆ, ಹಿಕ್ಕದೆ, ಜಡೆಗೊಂಡು, ನಸುಕೆಂಬಣ್ಣಕ್ಕೂ ತಿರುಗಿದೆ. ಹೊಸ ಮೀಹದ ತುಂತುರು ಹನಿಗಳೂ ಅಲ್ಲಲ್ಲಿ ಸಿಕ್ಕಿಕೊಂಡಿವೆ. ಆಕೆ ಹಿಡಿದಿದ್ದ ಜಪಸರವೂ ಮುತ್ತಿನದು. ಆಕೆಗೆ ಬ್ರಹ್ಮಸೂತ್ರವೂ ಇದೆ. ವಯಸ್ಸು? ದೇವತೆಗಳಿಗೆ ವಯಸ್ಸೆ? ವಯಸ್ಸಿಲ್ಲ. ಆದರೂ

ದಿವಿಜತೆಯಿಂ ದಿವಸಂಗಳ
ಪವಣಱೆಯಲ್ಬಾರದಾಡೊಡಂ ಸೊಗಯಿಸಿ ತೋ
ರ್ಪವಯವದಿಂದಂ ಪದಿನೆಂ
ಟು ವರಿಸದಾಕೃತಿಯಿನಬ್ಜಮುಖಿ ಕಣ್ಗೆಸೆದಳ್.

ಮನುಷ್ಯರೀತಿಯಾಗಿ ಆಕಾರವನ್ನು ನೋಡಿ ವಯಸ್ಸು ಹೇಳಬಹುದಾದರೆ: ಆಕೆಗೆ ಹದಿನೆಂಟು ತುಂಬಿತ್ತು.

ಆಕೆಯಲ್ಲಿ ತರಳೆಯ ಲಾವಣ್ಯವಿದ್ದಿತೆ ಹೊರತು ಲಾಘವವಿರಲಿಲ್ಲ. ಆ ತಪಸ್ವಿನಿಯನ್ನು ನೋಡಿದೊಡನೆ ಚಕ್ರೇಶ್ವರನ ಕುಮಾರನಾಗಿದ್ದ ಚಂದ್ರಾಪೀಡನ ಹೃದಯದಲ್ಲಿಯೂ ಭಯಮಿಶ್ರಿತ ಭಕ್ತಿಸಂಚಾರವಾಗುತ್ತದೆ. ಅವಿವಾಹಿತನಾಗಿದ್ದರೂ ಯೌವನ ತುಂಬಿದವನಾಗಿದ್ದರೂ ಶಕುಂತಳೆಯನ್ನು ಕಂಡ ದುಷ್ಯಂತನಂತಾಗಲಿಲ್ಲ. ಮುಂದೆ ಹೇಮಕೂಟದಲ್ಲಿ ಕಾದಂಬರಿಯನ್ನು ಕಂಡಾಗ ಯಾವ ಭಾವಸಂಚಾರದಿಂದ ಆತನ ಮನಸ್ಸು ಉಲ್ಲೋಲಕಲ್ಲೋಲವಾಯಿತೋ ಆ ಭಾವಕ್ಕೆ ಇಲ್ಲಿ ಎಡೆಯೆಲ್ಲಿ?

ಅತಿ ಗಂಭೀರೆಯನೂರ್ಜಿತ
ಮತಿಯಂ ನಿರ್ಮಳೆಯನಮಲ ಧೈರ್ಯಾದಿ ಗುಣಾ
ನ್ವಿತೆಯಂ ದೃಢಪಾಶುಪತ
ವ್ರತೆಯಂ ಕನ್ಯಕೆಯನಂದು ಕಂಡಂ ಕ್ಷಿತಿಪಂ.

ಕಂಡು, ಕುದುರೆಯಿಂದಿಳಿದು, ಅದನ್ನೊಂದು ಮರದ ಕೊಂಬೆಗೆ ಕಟ್ಟಿ, ದೂರದಿಂದಲೆ ಭಗವದಿಂದುಮೌಳಿಗೆ ಪೊಡವಟ್ಟು, ರಮಣೀಯ ದೇವಾಯತನದ ನೂತ್ನಸ್ತಂಭವನ್ನು ನೆಮ್ಮಿನಿಂದು, ಆ ದಿವ್ಯ ಕಾಂತೆಯನ್ನು ಮತ್ತೆ ಸಂವೀಕ್ಷಿಸುತ್ತಾನೆ. ಭಗವದಾರಾಧನೆಯಲ್ಲಿ ತಲ್ಲೀನೆಯಾಗಿದ್ದಾಕೆಯಲ್ಲಿ ರಾಜಕುಮಾರನಿಗೆ ಹೊಳೆದ ಗುಣಗಳೆಂದರೆ: ರೂಪಸಂಪತ್ತಿ, ಕಾಂತಿ, ಉಪಶಾಂತಿ.

ವಿಸ್ಮಯ ಕುತೂಹಲಗಳಿಂದ ನೋಡುತ್ತಿದ್ದ ಚಂದ್ರಾಪೀಡನಿಗೆ ಏನೇನೊ ಆಲೋಚನೆ: ಆರ್ಗೆ ಸತಿ? ಪೆಸರೇನ್? ಇಂತು ತೋರ್ಪ ಜವ್ವನದೊಳಗೆ ಈ ತಪಕ್ಕೆ ಗುರಿಮಾಡಿದ ಉಬ್ಬೆಗಮಾವುದು? ಮನುಜನನ್ ಎನ್ನನ್ ಈಕ್ಷಿಸಿ ಭವಾದ್ರಿಯ ನೇರದಿರ್ದೊಡೆ, ಅಥವಾ ತೊಟ್ಟನೆ ಕೊಳೆ ಮಾಯವಾಗದಿರ್ದೊಡೆ ಒಯ್ಯನೆ ಬೆಸಗೊಳ್ವೆನ್.

ಹೀಗೆಲ್ಲಾ ಬಗೆಯುತ್ತಾ ನಿಂತಿರುವಾಗಲೆ ಆ ತಪಸ್ವಿನಿಯ ಪೂಜೆ ಪೂರೈಸುತ್ತದೆ. ಆಕೆ ಆಕಾಶಕ್ಕೆ ಒಗೆಯಲೂ ಇಲ್ಲ, ಮಾಯವಾಗಲೂ ಇಲ್ಲ. ಅದಕ್ಕೆ ಬದಲಾಗಿ

ಒಸೆದಾಶ್ವಾಸಿಸುವಂತೆ ಪುಣ್ಯತತಿಯಿಂದಂ ಮುಟ್ಟುವಂತಚ್ಛ ತೀ
ರ್ಥ ಸಮೂಹಾಂಬುಗಳಿಂದವಂದಭಿಷವಂ ಮಾೞ್ಪಂತೆ ಪೂತತ್ವಮಂ
ಪಸರಿಪ್ಪಂತೆ ಬರಂಗಳಂ ಪದಪಿನಿಂದೀವಂತೆ ದೃಕ್ತೃಪ್ತಿ ರಾ
ಜಿಸೆ ದಿವ್ಯಾಂಗನೆ ನೋಡಿದಳ್ ತಗುಳ್ದು ಚಂದ್ರಾಪೀಡಭೂಪಾಲನಂ.

ಕಣ್ಣಿನ ಆಮಂತ್ರಣವೆ ಅನಿತೊಂದು ಹಿತಕರವಾಗಿತ್ತು. ಜೊತೆಗೆ ಅತ್ಯುತ್ತಮವಾದ ಸಂಸ್ಕೃತಿಯ ಜೇನು ಸೋರುವಂತೆ ಸವಿನುಡಿಯ ಸ್ವಾಗತವೂ ಬೆಂಬಲವಾಯಿತು:

ಸ್ವಾಗತಮೇ ನಿನಗೆ ಮಹಾ
ಭಾಗನೆ ಮದ್ಭೂಮಿಗೆಂತು ಬಂದಯ್ ನೀನ
ಭ್ಯಾಗತನಾಗಲ್ವೆೞ್ಕೆಂ
ದಾಗಳ್ ನೃಪಸುತನನೞ್ಕಱೆರಿಂ ಸತಿ ನುಡಿದಳ್

ಮಾತನಾಡಿಸಿದುದೆ ಸಾಕು ಕೃತಾರ್ಥನಾದೆನೆಂದು ರಾಜಕುಮಾರನೂ “ದೇವಿಯರ್ ಬೆಸಸಿದಂತೆ ಗೆಯ್ವೆನ್” ಎಂದು ‘ಬೆಂಬಳಿವಿಡಿದು ನಡೆಯುವ ಶಿಷ್ಯನಂತೆ’ ಆಕೆಯನ್ನು ಹಿಂಬಾಲಿಸುತ್ತಾನೆ.

ಆ ಜೋಗಿನಿಯ ನೋಂಪಿಯ ಗುಹೆಯಲ್ಲಿ ಆಕೆಯ ಆತಿಥ್ಯದಿಂದ ಅನುಗ್ರಹೀತನಾಗಿ ಚಂದ್ರಾಪೀಡನು ‘ತನ್ನ ಬಂದ ವೃತ್ತಾಂತಮನೆಲ್ಲಮಂ ನೆರೆಯೆ ಪೇಳ್ದು’ ಬಹಳ ಸಂಕೋಚದಿಂದಲೆಂಬಂತೆ ಆಕೆಯ ವಿಚಾರವನ್ನು ಪ್ರಸ್ತಾಪಿಸುತ್ತಾನೆ. ಅಲ್ಲಿಯೂ ಎಷ್ಟು ವಿನಯ: ಹಿರಿದಾದ ತಮ್ಮ ಪ್ರಸಾದವನ್ನು ಪಡೆದ ಒಂದು ಗರ್ವದಿಂದ ಪರಿಚಿತನಂತೆ ಬಿನ್ನವಿಸಲು ಪ್ರಯತ್ನಿಸುತ್ತಿದ್ದೇನೆ. ‘ಅಧೀರರಪ್ಪ ಮನುಜರ್ ಪ್ರಭುಗಳ್ ದಯೆಯಿಂದ ತಮ್ಮನ್ ಆದರಿಸಿದೊಡೆ, ಆಗಳ್ ಅಂತೆ ಗಳಪಲ್ ಬಗೆದರ್ಪುದಿದಾವ ವಿಸ್ಮಯಂ!’ ನಾನು ಮನುಜ. ಮನುಜನಾದವನಿಗೆ ನಾ ಕಂಡ ಇದೆಲ್ಲವೂ ಅತ್ಯಾಶ್ಚರ್ಯಕರ ಮಾತ್ರವಲ್ಲದೆ ಕೌತುಕಾವಹವೂ ಆಗಿದೆ………

ಆಕೆ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಮೌನವಾದಳು. ಅತಿಯಾದ ಯಾತನೆಯನ್ನು ಸಂಯಮಿಸುವಂತೆ ಕಣ್‌ಮುಚ್ಚಿದಳು. ಕಣ್ಣೀರು ಬಳಬಳನೆ ಹನಿ ಹರಿಯಿತು. ಇಕ್ಕಿದ ಬಿರ್ದ್ದನುಂಡು ತೆಪ್ಪಗಿರುವುದು ಬಿಟ್ಟು ‘ಇದೆತ್ತೆತ್ತಲೀಗಳ್ ಬೆಸಗೊಂಡೆನ್’ ಎಂದು ಚಂದ್ರಾಪೀಡನು ತನ್ನನ್ನು ತಾನೆ ಹಳಿದುಕೊಂಡನು.

ಅಷ್ಟೇ ಅಲ್ಲ, ಅವನಿಗೆ ಇನ್ನೊಂದು ಆಶ್ಚರ್ಯ. ಯಾವ ವ್ಯಕ್ತಿಯನ್ನು ನೋಡಿದೊಡನೆ ಶಾಂತಿಯ ನಿಧಿ ಎಂದು ಭಾವಿಸಿದ್ದನೋ, ಯಾರ ವಾಣಿಯನ್ನು ಆಲಿಸಿದಂದು ಪರಮತೃಪ್ತಿಯ ಧ್ವನಿ ಎಂದು ಊಹಿಸಿದ್ದನೋ, ಯಾರ ಕಣ್ಣಿನ ಬೆಳಕಿನಲ್ಲಿ ದುಃಖಾತೀತವಾದ ಆನಂದದ ಕಾಂತಿಯನ್ನು ಸಂದರ್ಶಿಸಿದೆನೆಂದು ತಿಳಿದಿದ್ದನೋ ಅಂತಹ ಮಹಾಶ್ವೇತೆ ಅಳುತ್ತಿದ್ದಾಳೆ! ‘ಇಂತಪ್ಪವರುಂ ಅಳುವಂದಂ ಅದ್ಭುತಂ!’

ಎಂತಹರಿಗೂ ಒಮ್ಮೊಮ್ಮೆ ಹಾಗೆನ್ನಿಸುತ್ತದೆ: ಇಂತಪ್ಪವರುಂ ಅಳುವಂದಂ ಅದ್ಭುತಂ.


ಇದೇ, ಕವಿ ತನ್ನ ತಪೋಮಯ ಶೃಂಗಾರದ ಕಥೆಗೆ ಕಟ್ಟಿರುವ ಹಿನ್ನೆಲೆ: ಸಿದ್ಧಾಯತನದಲ್ಲಿ, ವಿರೂಪಾಕ್ಷದೇವನ ಮಹಿಮಾಯಮ ಸಾನ್ನಿಧ್ಯದಲ್ಲಿ, ಗುಹಾಂಗಣದ ತಪಸ್ಸಾಧನ ರಂಗದಲ್ಲಿ ತಪಸ್ವಿನಿಯಾಗಿದ್ದ ಮಹಾಶ್ವೇತೆ ತನ್ನ ಪ್ರಣಯ ಕಥೆಯನ್ನು ತಾನೇ ಹೇಳುವಂತೆ ಮಾಡಿದ್ದಾನೆ.

ಕಥೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ಗಿಳಿಯ ರೂಪದ ಪುಂಡರೀಕನ ಸಮ್ಮುಖದಲ್ಲಿ ವಾಚಂಯಮಿ ವರೇಣ್ಯನಾದ ಜಾಬಾಲಿ ಮಹರ್ಷಿಯ ಗಂಭೀರ ವಾಣಿಯನ್ನು ಕೇಳುತ್ತಿರುವ ಕುಮಾರತಾಪಸ ಸಂಘದಂತೆ ಚಂದ್ರಾಪೀಡನೂ ಕಿವಿಯಾಗಿ ಕೇಳಿದುದರಲ್ಲಿ ಆಶ್ಚರ್ಯವೇನಿದೆ?

ಮಹಾಶ್ವೇತೆ ಬರಿದೆ ವರದಿಯೊಪ್ಪಿಸುವುದಿಲ್ಲ. ಪುನರನುಭವಿಸಿ ಹೇಳುತ್ತಾಳೆ. ಅನುಭವಿಸಿ ಹೇಳಿದುದೆಲ್ಲ ಸಾಹಿತ್ಯ. ಉಳಿದುದೆಲ್ಲ ವರದಿ.

ಆ ಆತ್ಮಕಥೆಯಲ್ಲಿ ಎಳೆಯ ಒಲವು ಮೊತ್ತಮೊದಲು ಮೊಳೆಯಿಣುಕಿದುದು ಚಿತ್ರಿತವಾಗಿದೆ. ಅಲ್ಲಿಯ ಶೃಂಗಾರ ತಪಸ್ಸಿನಲ್ಲಿ ಇರ್ಮೆ ಸೋಸಿ ಬರುತ್ತದೆ. ಮಹಾಶ್ವೇತೆಯ ಅನುರಾಗದ ತಪಸ್ಸಿನಲ್ಲಿ ಒಮ್ಮೆ; ಕುಮಾರ ತಪಸ್ವಿಗಳಿಗೆ ಕಥೆ ಹೇಳುವ ಜಾಬಾಲಿಯ ವಿರಾಗದ ಸಂಯಮದಲ್ಲಿ ಮತ್ತೊಮ್ಮೆ. ಆದ್ದರಿಂದಲೆ ಕಾವ್ಯದುದ್ದಕ್ಕೂ ಪ್ರೇಮದ ಜಯಡಿಂಡಿಮಕ್ಕಿಂತಲೂ ಅದನ್ನು ತೂರಿ ಮೀರಿ ನಮಗೆ ಕೇಳಿಬರುತ್ತದೆ-ತಪಸ್ಸಿನ ವೀಣಾಧ್ವನಿ. ಕಟ್ಟಕಡೆಯಲ್ಲಿಯೂ ಕಾವ್ಯಕೈಲಾಸದ ನೆತ್ತಿಯಮೇಲೆ ಶೃಂಗಾರದ ದಿಗ್ವಿಜಯದ ಧ್ವಜವೇನೋ ಹಾರಾಡುತ್ತದೆ. ಆದರೆ ಕಣ್ಣಿಟ್ಟು ನೋಡುವವರಿಗೆ ಗೊತ್ತಾಗುತ್ತದೆ-ಆ ಧ್ವಜವಸ್ತ್ರ ವಲ್ಕಲದ್ದು; ಅದರ ಬಣ್ಣ ಕಾವಿ!

ಪುಂಡರೀಕ ಮಹಾಶ್ವೇತೆಯರ ಕಥೆಯಲ್ಲಿ ಪ್ರತಿಪ್ಠಿತಿವಾಗಿರುವುದು-ಕರ್ಮಫಲರೂಪಿಯಾದ ವಿಧಿಯ ವಜ್ರನಿಯತಿ. ಆ ಋತದ ನಿಷ್ಠೆಗೆ ಕಾಲತ್ರಯವೇದಿ ಶ್ವೇತಕೇತು ವ್ರತಿಗಳ ಕುಮಾರನೆಂಬ ದಾಕ್ಷಿಣ್ಯವಿಲ್ಲ. ಜೇಡನ ಜಟಿಲಕಲೆಯ ತಂತುಕೃತಿಯಲ್ಲಿ ಸೆರೆಯಾದ ಉಷಃಕಾಲದ ಹಿಮಬಿಂದುವಿನಂತೆ ಲಲಿತೆ, ಕೋಮಲೆ, ಗಂಧರ್ವಕನ್ಯ ಎಂಬ ಪಕ್ಷಪಾತವಿಲ್ಲ. ಪ್ರಣಯಿಗಳಿಬ್ಬರೂ ತುದಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ: ಕಷ್ಟ ರೂಪದಲ್ಲಿ ತಪಸ್ಸಿನ ರೂಪದಲ್ಲಿ ತಪ್ಪುಗಾಣಿಕೆ ತೆತ್ತು ಅರ್ಹರಾದಮೇಲೆ. ವ್ರತಭ್ರಷ್ಟತೆ ಎಷ್ಟು ಲಲಿತವಾಗಿದ್ದರೇನು? ಎಷ್ಟು ರುಚಿಕರವಾಗಿದ್ದರೇನು? ಮತ್ತೆಷ್ಟು ಕಲಾಪೂರ್ಣವಾಗಿದ್ದರೇನು? ಅದಕ್ಕೆ ತಪ್ಪಿದ್ದಲ್ಲ ಋತದ ಶಿಕ್ಷೆ.

ಕಥೆ ಹೇಳುತ್ತಿದ್ದ ಗುರು ಜಾಬಾಲಿಯ ಕಣ್ಣಿನ ಕಾಂತಿಯಲ್ಲಿ ಮತ್ತು ಮುಖದ ಶಾಂತಿಯಲ್ಲಿ ಹಾರೀತ ಮೊದಲಾದ ತರುಣ ತಪಸ್ವಿಗಳಿಗೆ ಏನು ದರ್ಶನವಾಗುತ್ತದೆ? ಪವಿತ್ರಪ್ರೇಮದ ಮಹಿಮೆ ಮಾತ್ರವಲ್ಲ; ಸಂಯಮದ ಹಿರಿಮೆ ಮತ್ತು ಋತದ ಗರಿಮೆ.

ಆ ಆತ್ಮಕಥೆಗೂ ಅಚ್ಛೋದ ಸರಸ್ತೀರವೇ ರಂಗಭೂಮಿ. ತಾಯೊಡನೆ ಮಜ್ಜನಕ್ಕೆಂದು ಅಲ್ಲಿ ಬಂದಿದ್ದ ಗಂಧರ್ವಕನ್ನೆ, ಮಹಾಶ್ವೇತೆ, ಕುಮಾರ ತಪಸ್ವಿಯಾದ ಪುಂಡರೀಕನನ್ನೂ ಅವನಿಗೆ ಅನುರೂಪವೆಂಬಂತೆ ಜತೆಯೊಳಿದ್ದ ಕೆಳೆಯ ಕಪಿಂಜಲನನ್ನೂ ನೋಡುತ್ತಾಳೆ. ನೋಡಿದೊಡನೆ ಪುಂಡರೀಕನಲ್ಲಿ ಪ್ರೇಮಪರವಶೆಯಾಗುತ್ತಾಳೆ, ಉಚಿತ ಅನುಚಿತಗಳ ಎಣಿಕೆಯಿಲ್ಲದೆ. ಪುಂಡರೀಕನ ಕೈಯಲ್ಲಿದ್ದ ಪಟಿಕದ ಮಣಿಯ ಜಪಸರವೂ ಮಹಾಶ್ವೇತೆಗೆ ‘ಮನೋಜವಿನಾಶದಿನಳ್ವ ತನ್ಮನೋಹರಿಯ ಪೊದಳ್ದ ಕಣ್ಣನಿಗಳಂತೆ’ ತೋರುತ್ತದೆ.

ನಿಯತೇಂದ್ರಿಯನೊಳ್ ತೇಜೋಮಯನೊಳ್ ರೂಪೈಕಪಕ್ಷಪಾತದೆ ನೆಱೆ ನೀ
ತಿಯನೞೆದು ಮುನಿಪನೊಳ್ ನಿರ್ಭಯನಂಗಜನೆನ್ನನಿಂತಿರಲ್ ಸೋಲಿಕುಮೇ?

ತನ್ನೊಳೆಸೆದ ಮನ್ಮಥವಿಕಾರವನ್ನು ನೋಡಿ ಮುನಿಕುಮಾರನು ಎಲ್ಲಿ ಶಪಿಸುತ್ತಾನೆಯೊ ಎಂದು ಗಂಧರ್ವಕನ್ಯೆ ಹೆದರುತ್ತಾಳೆ. ಆದರೂ ಪೂಜಾರ್ಹರನ್ನು ಅವಜ್ಞೆಗೆಯ್ಯಲಾಗದೆಂದು ‘ಎವೆಯಿಕ್ಕದಾಂ ಮನಂಗೊಳಿಪ ಮುನೀಂದ್ರ ನಾನನವನೀಕ್ಷಿಸುತುಂ ಪೊಡೆವಟ್ಟೆನಳ್ಕರಿಂ.’ ಪರಿಣಾಮ: ‘ಗಾಳಿಗೊಡ್ಡಿದ ದೀಪಾಂಕುರದಂತೆ ತನ್ಮುನಿಯುಮಂ ಕಾಮಂ ಚಲಂ ಮಾಡಿದಂ.’

ಮುಂದೆ ನಡೆದ ಕಥೆಯನ್ನು ಮಹಾಶ್ವೇತೆ, ಸ್ವತಃ ಅನುಭವಿಸಿದವರಿಗೆ ಮಾತ್ರ ಸಾಧ್ಯವಾಗುವ ಮುದ್ದುಮೋಹದಿಂ ವರ್ಣಿಸುತ್ತಾಳೆ. ಕೃತ್ತಿಕಾತಾರಾಸ್ತಬಕಾನು ಕಾರಿಣಿಯಾದ ತನ್ನ ಕರ್ಣಪೂರದ ಪುಷ್ಪಮಂಜರಿಯನ್ನು ಮಹಾಶ್ವೇತೆಗೆ ತೊಡಿಸುವ ಅವಸರದಲ್ಲಿ ಉಂಟಾದ ಕದಂಪಿನ ನಸು ಸೋಂಕಿಗೆ ಸೋತ ಮುನಿಕುಮಾರನ ಕೈಯಿಂದ ಅಕ್ಷಮಾಲೆ ಬಿದ್ದುಹೋಗುತ್ತದೆ. ನೆಲಕ್ಕೆ ಬೀಳುವ ಮೊದಲೇ ಅದನ್ನು ಕರಪಲ್ಲವದೊಳಾಂತು ‘ತೊಳಗುವ ಹಾರಮಂ ತಳೆವಂತೆ ಕೊರಲೊಳ್ ತಳೆದು’ ಸುಖಿಸುತ್ತಿರುವ ವ್ಯತಿಕರದಲ್ಲಿ ಕೆಳದಿಯರು ಆಕೆಯನ್ನು ಮೀಹಕ್ಕೆ ಕರೆದೊಯ್ಯುತ್ತಾರೆ, ‘ಪೊಸತಪ್ಪದೊಂದು ಪಿಡಿಗಂಕುಶವಿಟ್ಟು ಮರಳ್ಚುವಂದದಿಂ.’

ಪುಂಡರೀಕನ ಧೈರ್ಯಸ್ಖಲನೆಯನ್ನು ಕಂಡು ಕಪಿಂಜಲನು ವ್ರತಿಯನ್ನು ಎಚ್ಚರಿಸುತ್ತಾನೆ. ಆ ಉಪದೇಶವೂ ಕೆರೆ ನಿಂತ ಅವಿವೇಕಕ್ಕೆ ಕೋಡಿ ಹೊಡೆಯುವ ಕೆಲಸವನ್ನೇ ಮಾಡುತ್ತದೆ. ಶ್ವೇತಕೇತು ಮಹಾಮುನಿಗಳ ಕುಮಾರನು ಜಪಸರವನ್ನು ಇಸುಕೊಳ್ಳಲು ಹೋಗಿ ಗಂಧರ್ವಕನ್ಯೆಯ ಕೊರಳಹಾರವನ್ನು ತಳೆಯುತ್ತಾನೆ. ಅಂತೂ ಅಕ್ಷಮಾಲೆಯೆ ಪ್ರಣಯಪಾಶವಾಗಿ ಪರಿಣಮಿಸುತ್ತದೆ. ಜಪಸರ ಮತ್ತು ಹಾರಗಳ ಅದಲು ಬದಲಾವಣೆಯಿಂದ ಒಬ್ಬರ ‘ವೃತ್ತಿ’ಯನ್ನು ಮತ್ತೊಬ್ಬರು ಕೈಕೊಳ್ಳುವ ‘ಧ್ವನಿ’ ಇಂಗಿತವಾಗಿದೆ.

ಆಜನ್ಮಮಿತ್ರನ ಪ್ರಾಣರಕ್ಷಣೆಗಾಗಿ ಕಪಿಂಜಲನು ಪ್ರಣಯ ರಾಯಭಾರವನ್ನು ನಿರ್ವಹಿಸುತ್ತಾನೆ. ತುಂಬು ಬೆಳ್ದಿಂಗಳ ಗಾಂಧರ್ವ ರಾತ್ರಿಯಲ್ಲಿ ಮಹಾಶ್ವೇತೆ ಕೆಳದಿ ತರಳಿಕೆಯೊಡನೆ ಪ್ರಿಯನ ಪ್ರಾಣಪಾಲನೆಗಾಗಿ ಗುಪ್ತ ಯಾತ್ರಿಯಾಗುತ್ತಾಳೆ. ಆದರೇನು? ದುಂಬಿ ಹೋಗುವುದರಲ್ಲಿಯೆ ಮಕರಂದ ಬತ್ತಿರುತ್ತದೆ. ಪುಂಡರೀಕನು ಪರಾಸುವಾಗಿರುತ್ತಾನೆ.

ನಡೆದ ಸಂಗತಿಯೆಲ್ಲವನ್ನೂ ಕಪಿಂಜಲನಿಂದ ತಿಳಿದು ಚಿತಾರೋಹಣ ಗೆಯ್ಯಲು ಪ್ರಯತ್ನಿಸುತ್ತಿರುವ ಮಹಾಶ್ವೇತೆಗೆ ಚಂದ್ರಮಂಡಲದಿಂದ ಮೈದೋರಿದ ಪ್ರಭಾಮೂರ್ತಿ

ಬಗೆಗೆಟ್ಟು ಸಾವ ಬಗೆಯಂ
ಮಗಳೆ ಮಹಾಶ್ವೇತೆ ಬಗೆಯದಿರ್ ಕೂಡುವೆ ನೀಂ
ಮಗುಳೆಯುಮೀತನನೆನುತುಂ
ಮಗುಳ್ದಾತಂಬೆರಸು ಗಗನಮಾರ್ಗಕ್ಕೊಗೆದಂ.

ಕಪಿಂಜಲನೂ ಸಖನ ಶರೀರವನ್ನು ಒಯ್ಯುತ್ತಿದ್ದಾತನ ಬೆಂಬಾಲಿಸಿ ಅಂತರಿಕ್ಷಕ್ಕೆ ಚಿಮ್ಮುತ್ತಾನೆ. ಆಮೇಲೆ ಮಹಾಶ್ವೇತೆ ಆ ಆಕಾಶಪುರುಷನ ಆಶಾವಾಣಿಯನ್ನು ನೆಮ್ಮಿ, ಪ್ರಿಯನ ಅಕ್ಷಾವಳಿಯನ್ನೂ ವಲ್ಕಲವನ್ನೂ ಕಮಂಡಲುವನ್ನೂ ತಳೆದು ತಪಸ್ವಿನಿಯಾಗುತ್ತಾಳೆ:

ಮನಮಂ ನಿಗ್ರಹಿಸುತ್ತಸದ್ವಿಷಯದತ್ತಲ್ ಪೊರ್ದಂದಂತಾಗಿ ಮಾ
ಡಿ ನಿರುದ್ಧೇಂದ್ರಿಯೆಯಾಗಿ ಬಂಧುಜನಮಂ ತಾಯ್ತಂದೆಯಂ ಪತ್ತುವಿ
ಟ್ಟೆನಗಿನ್ನೊರ್ವರುಮೇವರೆಂಬ ಬಗೆಯಂ ನಿಶ್ಚೈಸಿ ಲೋಕೈಕನಾ
ಥನನಾನಾಗಳನಾಥೆಯೆಂ ಶರಣೆನುತ್ತಾಶ್ರೈಸಿದೆಂ ಸ್ಥಾಣುವಂ.

ಕಥೆ ಹೇಳಿದ ಮಹಾಶ್ವೇತೆ ಪೂರ್ವದುಃಖವನ್ನೆಲ್ಲ ಮತ್ತೊಮ್ಮೆ ಅನುಭವಿಸಿ ಅತಿ ದಾರುಣವಾಗಿ ರೋದಿಸುತ್ತಾಳೆ. ಚಂದ್ರಾಪೀಡನು ಹಲವಾರು ಸಂತೈಕೆಗಳಿಂದ ಹೊಗೆ ಸುತ್ತಿದ್ದ ಆಕೆಯ ಪ್ರತ್ಯಾಶೆಯ ಕೊಳ್ಳಿ ಹೊತ್ತಿಕೊಳ್ಳುವಂತೆ ಮಾಡುತ್ತಾನೆ.


ಯಾವ ವ್ರತವಾದರೂ ಆತ್ಮದ ಶ್ರೇಯಸ್ಸಿಗೆ ಅವಶ್ಯಕವಾಗಿದ್ದರೆ ಜಯಶೀಲವಾಗುತ್ತದೆ. ಒಬ್ಬರು ಮಾಡಿದ್ದಾರೆಂದು ಮತ್ತೊಬ್ಬರು ಅನುಕರಿಸುವ ವ್ರತ ಹುಟ್ಟಿಬಂದ ಮೀಸೆಯಂತಿರುವುದಿಲ್ಲ, ಕಟ್ಟಿಕೊಂಡ ಗಡ್ಡದಂತಿರುತ್ತದೆ. ನಸು ಜಗ್ಗಿದರಾಯ್ತು ಕಿತ್ತುಬರುತ್ತದೆ.

ಮಹಾಶ್ವೇತೆ ತಾನು ಕೈಗೊಂಡಿದ್ದ ಬೆಂಕಿನೋಂಪಿಯನ್ನು ಅನುಕರಿಸಲು ತೊಡಗಿದ್ದ ತನ್ನ ತಂಗಿ ಕಾದಂಬರಿಗೆ ಮೊದಲು ಬುದ್ಧಿಹೇಳಿ ಕಳುಹಿಸುತ್ತಾಳೆ. ಕಡೆಗೆ, ತಂಗಿಯ ತರಳ ಮುಗ್ಧ ವ್ರತರೂಪಿಯಾದ ಛಲಕ್ಕೆ ಅಪ್ರತಿಹತ ಪ್ರತಿವಾದರೂಪವಾಗಿ ಚಂದ್ರಾಪೀಡನನ್ನೆ ಹೇಮಕೂಟಕ್ಕೆ ಕರೆದೊಯ್ಯುತ್ತಾಳೆ.

ಅಲ್ಲಿ ಕವಿ ರಾಜಕುಮಾರನನ್ನೆಂತೊ ನಮ್ಮನ್ನೂ ಅಂತೆಯೆ ಶೃಂಗಾರ ಮಂಚದ ಉಯ್ಯಾಲೆಯಲ್ಲಿಟ್ಟು ತೂಗುತ್ತಾನೆ. ಕಾಮನಬಿಲ್ಲಿನ ಬಣ್ಣಬಣ್ಣದೋಕುಳಿ ಎರಚುತ್ತಾನೆ. ನಯ ಮತ್ತು ಸಂಸ್ಕೃತಿಗಳ ಅಮರಕಲಾಜಾಲವನ್ನೆ ನೇಯುತ್ತಾನೆ. ಆ ಸಂಸ್ಕೃತಿಯ ಸ್ನಿಗ್ಧಚ್ಛಾಯೆಯಲ್ಲಿ ಕಂಚುಕಿಯಾಗಲಿ ಪ್ರತೀಹಾರಿಯಾಗಲಿ ಆಳಾಗಲಿ ಅರಸಾಗಲಿ ನಯಮೂರ್ತಿಗಳಾಗಿ ಕಾಣುತ್ತಾರೆ. ಕುಮಾರವ್ಯಾಸನ ಕೃತಿಯ ವೀರವೊರಟಾಗಲಿ ಚಾಮರಸನ ಪ್ರಭುಲಿಂಗಲೀಲೆಯ ಬೀದಿಯೊರಟಾಗಲಿ ಅಲ್ಲಿ ಸುಳಿಯುವುದಿರಲಿ, ಇಣುಕುವುದ ಕೂಡ ಇಲ್ಲ. ಅಲ್ಲಿಯ ಶ್ರೀಮಂತತೆಯ ಸಿಹಿ ಅತಿಯಾಗಿ ಅತಿಥಿಗಳಿಗೆ ಎಲ್ಲಿ ಅರೆಯಾಗುತ್ತದೆಯೊ ಎಂದು ಹೆದರಿಕೆಯಾಗುತ್ತದೆ.

ಗಂಡುಹೆಣ್ಣುಗಳಿಬ್ಬರೂ ಒಬ್ಬರನೊಬ್ಬರು ನೋಡಿ, ಮೆಚ್ಚಿ ಒಲಿಯುತ್ತಾರೆ. ಚಂದ್ರಾಪೀಡನು ತಂದೆಯಾಣತಿಯನ್ನೆ ಇಂದ್ರಾಯುಧಕ್ಕೆ ವಾಘೆರಾಘೆಯನ್ನಾಗಿ ಮಾಡಿಕೊಂಡು ಉಜ್ಜಯಿನಿಗೆ ಹಿಂತಿರುಗಿದ ಮೇಲೆ, ಕಾದಂಬರಿಯ ಪೊಳ್ಳುನೋಂಪಿಯ ಕೊನೆಗಾಣ್ಕೆಗೆ ಮನಸ್ಸು ನೆಮ್ಮದಿಯಾದರೂ ರಾಜ ಕುಮಾರನು ಯಾವುದನ್ನೂ ಸ್ಪಷ್ಟಗೊಳಿಸದಿದ್ದುದಕ್ಕೆ ಅಳಲಿಂದ ‘ಇಂತುಟೆವಲಂ’ ಎಂದುಕೊಂಡು ಮಹಾಶ್ವೇತೆ ಮರಳಿ ತನ್ನಾಶ್ರಮಕ್ಕೆ ತೆರಳಿ ಘೋರತರ ತಪಶ್ಚರಣೆಯಲ್ಲಿ ನಿರತಳಾಗುತ್ತಾಳೆ.


ಕುಮಾರನೊಬ್ಬನು ಕನ್ಯೆಯೊಬ್ಬಳನ್ನು ನೋಡಿ ಮೋಹಗೊಂಡ ಮಾತ್ರಕ್ಕೆ ಅದು ಮಹಾಪರಾಧವಾಗುವುದಿಲ್ಲ. ಅದಕ್ಕೆ ಪ್ರಾಯಶ್ಚಿತ್ತದ ಆವಶ್ಯಕತೆಯೂ ಅನಿವಾರ್ಯವಾಗುವುದಿಲ್ಲ. ಆದರೆ ಪುಂಡರೀಕನು ವ್ರತಿ. ನಿಯತಿಯ ವಜ್ರ ದೃಷ್ಟಿಯಲ್ಲಿ ವ್ರತಚ್ಯುತಿ ಶಿಕ್ಷಾರ್ಹ. ಶಿಕ್ಷೆಗೋಸ್ಕರ ಶಿಕ್ಷೆಯಲ್ಲ. ಅದರಲ್ಲಿ ಪ್ರತೀಕಾರ ಭಾವನೆಯಿಲ್ಲ; ಶುದ್ಧೀಕರಣ ಭಾವನೆಯಿದೆ. ಪುಂಡರೀಕನ ಮನಸ್ಸಿನಲ್ಲಿ ಮಹಾಶ್ವೇತೆಯನ್ನು ಕಂಡೊಡನೆ ತಟಕ್ಕನೆ ಸಂಭವವಿಸಿದ್ದು ಶರೀರಜ ಕಾಮವೋ ಅಥವಾ ಆತ್ಮಜ ಪ್ರೇಮವೋ ಪರೀಕ್ಷೆಯಾಗಬೇಕು. ಆ ಪರೀಕ್ಷೆ ಕಾಲವಿಳಂಬನ ರೂಪದಿಂದ ಮಾತ್ರವಲ್ಲದೆ ಕಷ್ಟರೂಪದಿಂದಲೂ ನಡೆದಿದೆ. ಮಹಾಶ್ವೇತೆಯ ತಪಸ್ಸು ಕಾಲರೂಪಿ ಮತ್ತು ಸ್ಥಾಣುಶೀಲ. ಪುಂಡರೀಕನದು ಭ್ರಮಣೆ, ಭ್ರಮಣೆ, ಮತ್ತೂ ಭ್ರಮಣೆ. ಜನ್ಮಜನ್ಮಾಂತರಗಳಲ್ಲಿ ಭ್ರಮಣೆ: ದೇವತ್ವದಿಂದ ಮನುಷ್ಯತ್ವಕ್ಕೆ; ಮನುಷ್ಯತ್ವದಿಂದ ತಿರ್ಯಗ್ಜಾತಿಗೆ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಉರುಳಿದರೂ ಆತನ ಪ್ರೇಮ ಪ್ರಜ್ವಲಿಸುತ್ತದೆಯೆ ಹೊರತು ಒಮದಿನಿತೂ ಮಸುಳುವುದಿಲ್ಲ. ಜಾಬಾಲಿ ಮಹರ್ಷಿ ಕಥೆ ಹೇಳಿದುದನೆಲ್ಲ ಕೇಳಿ ಜಾತಿಸ್ಮರತೆಯುಂಟಾದ ಮೇಲೆ ಗಿಳಿಯಾಗಿದ್ದ ಪುಂಡರೀಕನು ಹೇಳುವುದೇನು? “ಭವದೀಯ ಪದಾಸನ್ನತೆಯಿಂದ ಮುನ್ನಿನ ಭವಗಳನ್ನೂ ಬಂಧುಗಳನ್ನೂ ನೆಱೆ ತಿಳಿವಱೆತಮಾಯ್ತು. ಆದೊಡಮೇಂ, ಮುನೀಂದ್ರ, ನಾಣ್ಚದೆ ಮತ್ತಂ ಬಿನ್ನವಿಸಿದಪೆನ್”

ಜಾತಿಸ್ಮರತೆ ವಿರಕ್ತಿಗೆ
ಹೇತುವೆನುತ್ತಿರ್ಪರದುವ ಪುಸಿಯಾಗಿ ಮಹಾ
ಶ್ವೇತೆಯೊಳಾದೊಂದನುರಾ
ಗಾತಿಶಯಂ ಪೆರ್ಚಿದಪುದು ಮುನ್ನಿಂದೀಗಳ್.

ವಿರಕ್ತಿಗೆ ಹೇತುವಾಗಬೇಕಾಗಿದ್ದ ಜಾತಿಸ್ಮರತೆ ಮಹಾಶ್ವೇತೆಯ ಮೇಲಣ ರಾಗಾತಿಶಯಕ್ಕೆ ಕಾರಣವಾಗುತ್ತದೆ. ಆದರೂ ರಾಗವು ವಿರಾಗದ ನಿಷ್ಠೆಗೆ ಸಿಲುಕಿ ಅದರಿಂದ ಹದಗೊಳ್ಳುವವರೆಗೂ ಪುಂಡರೀಕನಿಗೆ ಇಷ್ಟಾರ್ಥ ಸಿದ್ಧಿಯಾಗಲಿ ಕಷ್ಟವಿಮುಕ್ತಿಯಾಗಲಿ ಕೈಗೂಡುವುದಿಲ್ಲ.

ಪುಂಡರೀಕನ ಉದ್ಧಾರಕ್ಕೆ ಎಷ್ಟು ಕಡೆಗಳಲ್ಲಿ ಪ್ರಯತ್ನ ನಡೆಯುತ್ತಿದೆ! ಮತ್ತೆಷ್ಟು ದಿಕ್ಕುಗಳಿಂದ ಸಹಾಯ ಒದಗುತ್ತದೆ! ಹಲವರ ಆಕಾಂಕ್ಷೆ, ಹಲವರ ಆಶೀರ್ವಾದ, ಹಲವರ ತಪಸ್ಸು. ಆ ಕೃಪಾಹಸ್ತವು ಕೈಯಾನದಿದ್ದರೆ ಅವನ ಪತನದ ಹಾದಿಯ ಇಳಿಜಾರು ಇನ್ನೂ ಎಷ್ಟು ಕಡಿದಾಗುತ್ತಿತ್ತೊ? ಅವನ ಏಳ್ಗೆ ಮತ್ತೆಷ್ಟು ದೂರಾಂತರವಾಗುತ್ತಿತ್ತೊ ಹೇಳಬಲ್ಲವರಾರು? ಒಂದುಕಡೆ ಮಹಾಶ್ವೇತೆ, ಒಂದುಕಡೆ ಕಪಿಂಜಲ; ಒಂದುಕಡೆ ತಾಯಿ ಲಕ್ಷ್ಮಿ, ಮತ್ತೊಂದು ಕಡೆ ತಂದೆ ಶ್ವೇತಕೇತುವ್ರತಿ; ಜೊತೆಗೆ ತಾರಾಪೀಡಾದಿಗಳ ಕ್ಷೇಮಚಿಂತನೆಯ ನೋಂಪಿ ಬೇರೆ. ಅವನ ಉದ್ಧಾರಕ್ಕೆ ಮಿತ್ರಸ್ನೇಹ, ಪುತ್ರವಾತ್ಸಲ್ಯ, ಸತೀಪ್ರೇಮ ಎಲ್ಲವೂ ಕಂಕಣಕಟ್ಟಿ ನಿಲ್ಲುತ್ತವೆ. ಮತ್ತು, ಆತನ ಹೃದಯರಾಗದ ನಿಶ್ಚಲ-ಉತ್ಕಟ-ಏಕಾಗ್ರತೆಯೂ ತನ್ನ ಶ್ರೇಯಸ್ಸಿಗಾಗಿ ವಿಧಿಯ ಮುಷ್ಟಿಯೊಡನೆ ಹಣಾಹಣಿಯಾಗಿ ಹೋರಾಡುವುದನ್ನೂ ನೋಡುತ್ತೇವೆ.

ಚಂಡಾಲವನಿತೆಯ ವೇಷದಲ್ಲಿದ್ದ ಅವನ ತಾಯಿ ಅವನನ್ನು ಪಂದೊವಲಿನ ಪಂಜರದಲ್ಲಿಟ್ಟು ‘ಕಾಮಪರತೆಯಿಂದಮ್ ಕೆಟ್ಟಯ್’ ಎಂದು ಭರ್ತ್ಸನೆ ಮಾಡುತ್ತಾಳೆ. ಬರಿಯ ಬುದ್ಧಿವಾದದಿಂದ ಯಾರುತಾನೆ ತಿದ್ದು ಪಡೆಯುತ್ತಾರೆ? ಅನುಭವ ಮಾಗಿದಾಗ ಚಿಕ್ಕದೊಂದು ನುಡಿ ಬಾಳಬಟ್ಟೆಯನ್ನೆ ಬದಲಾಯಿಸಲು ಸಮರ್ಥವಾಗುತ್ತದೆ. ತನ್ನ ಹಿಂದಿನ ದುರಂತ ಕಥೆಯೆಲ್ಲವನ್ನೂ ಮರಳಿ ತಿಳಿದ ಶುಕರೂಪಿಗೆ ಆಗ ಅರಿವು ಮೊಳೆಯುತ್ತದೆ. ಆಗ ಜಾನಿಸುತ್ತಾನೆ:

ಸುರಲೋಕಭ್ರಷ್ಟನೆಂ ಮರ್ತ್ಯರೊಳುದಯಿಪ ತಿರ್ಯಕ್ತ್ವದೊಳ್ ನಿಲ್ವ ಚಂಡಾ
ಲರ ಕಯ್ಯೊಳ್ ಬೀಳ್ವ ತೋಲ್ಪಂಜರದ ಪಡಕೆಯೊಳ್ ನಿಲ್ವ ದುರ್ವಾರದುಃಖೋ
ತ್ಕರಮೆಲ್ಲಂ ನೋಡಲೆನ್ನಿಂದ್ರಿಯನಿವಹದ ದೋಷಂ ದಲಿನ್ ಮೀರದಂತಾ
ಗಿರಿಸಲ್ವೇಳ್ಕೆಂದವಂ ನಿಗ್ರಹಿಪ ನಿಯಮದಿಂ ಮೌನದಿಂದಿರ್ದೆನಾಗಳ್.

ನಿಖಿಲೇಂದ್ರಿಯ ನಿಗ್ರಹಕ್ಕೆ ನಿಶ್ಚಯಂಗೆಯ್ದ ಮೇಲೆಯೆ ಪುಂಡರೀಕನ ಜೀವನಪಥವು ಅಧಃಪತನವನ್ನುಳಿದು ಊರ್ಧ್ವಗಾಮಿಯಾಗುತ್ತದೆ: ಕಾಮದ ಹಂದೊವಲಿನ ಹೇಸಿಗೆಯ ಪಂಜರವು ಪ್ರೇಮದ ಕನತ್ಕನಕ ಪಂಜರವಾಗಿ ಪರಿಣಮಿಸುತ್ತದೆ. ‘ಅನಂತರಮೆ ತೋರಿತಿಂದ್ರಪುರದಂತಿರಾ ಪಕ್ಕಣಂ.’


ಕಾವ್ಯದ ಉತ್ತರಭಾಗದಲ್ಲಿ ಮಹಾಶ್ವೇತೆಯ ತಪಸ್ಸು ಕಾದಂಬರಿಯ ತಪಸ್ಸಿಗೆ ಶ್ರದ್ಧೆ ಜೀವ ಉತ್ಸಾಹಗಳನ್ನು ದಾನಮಾಡುವ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಪುಂಡರೀಕನು ಎರಡು ಜನ್ಮವೆತ್ತಿ, ಬಾಳಿ, ಮರಳಿ, ಹಿಂತಿರುಗುವವರೆಗೂ ಕಾಯಬೇಕಾದ ಬಹು ದೀರ್ಘಕಾಲಾವಕಾಶದಲ್ಲಿ ಸ್ವತಃ ಮಹಾಶ್ವೇತೆಯೂ ಕೂಡ ಕೆಲವೊಮ್ಮೆಯಾದರೂ ಸಂದೇಹಗ್ರಸ್ತಳಾಗಿದ್ದಳೆಂದರೆ ಅದರಿಂದ ಆಕೆಯ ತಪಸ್ಸಿನ ಮೇಲ್ಮೆ ಒಂದಿನಿತೂ ಕೀಳ್ಪಡುವುದಿಲ್ಲ. ಏಕೆಂದರೆ ಧರ್ಮಜೀವನದಲ್ಲಿ ಶ್ರದ್ಧೆ ಉಚ್ಛ್ವಾಸದಂತಿದ್ದರೆ ಸಂದೇಹ ನಿಃಶ್ವಾಸದಂತೆ. ಸಾಮಾನ್ಯರ ಬಾಳಿನಲ್ಲಿ ಕೆಲವರ್ಷಗಳ ನಿರೀಕ್ಷಣೆಯೇ ಅತಿ ಕಠೋರವಾಗಿ ಕಾಣುತ್ತದೆ. ಅನೇಕ ನರಪ್ರಾಣಿಗಳು ಸೋತು, ಮನಸ್ಸು ಸೋತು, ಪ್ರಾಣಿಗಳಾಗಿ, ಆದರ್ಶದ ಅತೃಪ್ತಿಯಿಂದ ಪಾರಾಗುತ್ತಾರೆ. ತಮಗೆ ಅತಿಯೂ ಅಸಹ್ಯವೂ ಆಗಿರುವ ಮೇಲ್ಮಟ್ಟದ ಕುದಿಹದಿಂದ ಕೆಳಮಟ್ಟದ ತಣ್ಣೆಗಿಳಿದು ಸಂಸ್ಕೃತಿಯ ಸಾಹಸವನ್ನು ಪ್ರಕೃತಿಯ ಸಾಧಾರಣತೆಗೆ ಶರಣು ಮಾಡುತ್ತಾರೆ. ಆ ದೃಷ್ಟಿಯಿಂದ ನೋಡಿದರೆ, ಜನ್ಮಾಂತರಗಳವರೆಗೂ ಕಾಯುವ ಮಹಾಶ್ವೇತೆಯ ಶ್ರದ್ಧೆ ಸಾಹಸಗಳ ಚರಣತಲದಲ್ಲಿ ಆದರ್ಶೋನ್ಮುಖಿಗಳೆಲ್ಲರೂ ಚಂದ್ರಾಪೀಡನಂತೆ ಶಿಷ್ಯತ್ವವನ್ನು ಅಂಗೀಕರಿಸಿ ಹಣೆಮಣಿಯಬೇಕಾಗುತ್ತದೆ.

ಮಹಾಶ್ವೇತೆಯ ಅನುರಾಗವು ಬರಿಯ ಅತನುರಾಗವಾಗಿ ಇದ್ದಿದ್ದರೆ, ಆಕೆಯ ಪ್ರೇಮವು ಅಳೀಕಕಾಮವಾಗಿ ಇದ್ದಿದ್ದರೆ, ಆಕೆಗೆ ತನ್ನ ಗುರಿಯಲ್ಲಿ ಆಶಂಕೆ ಸಂಜನಿಸಿ ನಂಬುಗೆ ಸಡಿಲವಾಗಿದ್ದಿದ್ದರೆ, ವೈಶಂಪಾಯನನು ಬಂದು ತನ್ನೆದುರು ಶೃಂಗಾರ ಭಿಕ್ಷುವಾಗಿ ನಿಂತಂದೇ ಕಥೆಗೂ ವ್ಯಥೆಗೂ ಆದರ್ಶತೆಗೂ ಎಲ್ಲಕ್ಕೂ ತಿಲಬಲಿಯಾಗುತ್ತಿತ್ತು.

ವೈಶಂಪಾಯನನು ಪುಂಡರೀಕನೇ ಎಂದು ಕಟ್ಟಕಡೆಗೆ ಗೊತ್ತಾಗಿದ್ದರೂ ಮೇಲಿನ ವಿಮರ್ಶೆ ನಿಲ್ಲುತ್ತದೆ.

ಸೌಂದರ್ಯದಲ್ಲಾಗಲಿ ತೇಜಸ್ಸಿನಲ್ಲಾಗಲಿ ವೈಶಂಪಾಯನನು ಪುಂಡರೀಕನಿಗೆ ಕಡಮೆಯಿಲ್ಲ. ಮಹಾಶ್ವೇತೆ ಮಾಡಿರುವ ಅವನ ವರ್ಣನೆಯೆ ಅದಕ್ಕೆ ಸಾಕ್ಷಿ.

ಅವನು ತನ್ನನ್ನು ನೋಡಿದ ರೀತಿಯನ್ನೂ ತನ್ನನ್ನು ಮಾತನಾಡಿಸಿದ ರೀತಿಯನ್ನೂ ಮಹಾಶ್ವೇತೆ ಹೇಗೆ ಚಿತ್ರಿಸಿ ಬಣ್ಣಿಸಿದ್ದಾಳೆ! ಆದರೂ ಆಕೆ ‘ಪುಂಡರೀಕದೇವನ ವೃತ್ತಾಂತದಿಮದ ಅಪೇತಕೌತುಕೆ ಮತ್ತು ಅಪಗತಸುಖೆ.’ ಆದ್ದರಿಂದ ಅವನು ಯಾರು ಏನು ಎಂದು ಕೂಡ ವಿಚಾರಿಸಲೆಳಸಲಿಲ್ಲ. ಅವನನ್ನು ನಿವಾರಿಸುವಂತೆ ತರಳಿಕೆಗೆ ಆಣತಿಯಿತ್ತಳಷ್ಟೆ.

ಆ ಇರುಳು ‘ನಿರ್ಮಲ ಚಂದ್ರದ್ಯುತಿ ವರ್ಷಹರ್ಷಿತ ಚಕೋರಾನಂದವಾರ್ಬಿಂದು ಸಂಕುಲದೊಳ್’ ಮಿಂದು ಬಂದ ತಂಗಾಳಿಗೆ ತನುವೊಡ್ಡಿ ಶಿಲಾಪಟ್ಟದಲ್ಲಿ ಪಟ್ಟಿರ್ದು, ‘ಮಿಸುಗುವ ಚಂದ್ರಮಂಡಲದಿನ್ ಅಂದು ಇಳಿತಂದನ ದಿವ್ಯವಾಣಿಯುಂ ಪುಷಿಯೆನಿಸಿತು ಮಾಯ್ದೆನೆಗೆ ಪಾಪಿಗೆ’ ಎಂದು ಮೊದಲಾಗಿ ಆಶಂಕೆಯ ಆಂದೋಳನದಲ್ಲಿ ಆಲೋಚಿಸುತ್ತಿದ್ದಾಗಲೆ ಆ ದ್ವಿಜಕುಮಾರನೂ ಅಲ್ಲಿಗೆ ಐತರುತ್ತಾನೆ:

“ಅಪ್ಪುವೞೆಯಾಸೆಯಿಂ ದೂರದೊಳ್ ನಿಮಿರ್ವ ನಿಡುದೋಳ್ಗಳುಂ ತನ್ನೊಳ್ ತೋಱೆ ಯುಕ್ತಾಯುಕ್ತ ವಿವೇಕಕ್ಕೆ ಪಿಂತೆಗೆದುನ್ಮತ್ತನಂತೆ ಅಚ್ಚ ಬೆಳ್ದಿಂಗಳೊಳೊಯ್ಯನೆ ಬರುತಿರ್ದನ್.”

ಆಗ ಮಹಾಶ್ವೇತೆ “ಇವನೆನ್ನಂ ಕಯ್ಯೆಳಂ ಬಂದು ಮುಟ್ಟಲೊಡಂ ಪತ್ತುವಿಡಲ್ಕೆವೇಳ್ಕುವಸುವಂ………ನಿಷ್ಫಲಮಾಯ್ತಕ್ಕಟ ಮಂದಭಾಗ್ಯಗೆನಗೀ ಪ್ರಾಣಸಂಧಾರಣಂ” ಎಂದು ಕಳವಳಿಸುತ್ತಿರಲು ಜನ್ಮಜನ್ಮಾಂತರದ ಪ್ರೇಮದಿಂದ ಪ್ರೇರಿತನಾಗಿ ವೈಶಂಪಾಯನನು ಹುಚ್ಚನಂತೆ ಮುಂಬರಿದುಕೋರುತ್ತಾನೆ:

“ಎಲೇ ಕುಮುದನೇತ್ರೆ ಮನ್ಮಥ ಸಹಾಯನೀ ಚಂದ್ರಮಂ
ಕೊಲಲ್ ಬಗೆದನೆನ್ನನಾರ್ತನನನಾಥನಂ ದುಃಖಿಯಂ
ಪಲುಂಬಿ ಮರೆವೊಕ್ಕೆನಾಂ ನಿನಗಧೀನಮೀ ಜೀವಿತಂ
ವಿಲಂಬಿಸದೆ ರಕ್ಷಿಸೆನ್ನನಱೆಯೆಂ ಪ್ರತೀಕಾರಮಂ

ಅದನ್ನು ಕೇಳಲೊಡನೆ ನೆತ್ತಿಯಲ್ಲಿ ಉರಿ ಮಸಗಿತು. ಕಿನಿಸು ಕಯ್ಗಣ್ಮಿತು. ‘ಕಣ್ಬನಿಗಿಡಿಗಳಿಂದುರಿಪುವಂತವನಂ ನೀಡುಂ ನೋಡುತ್ತಾವಿಷ್ಟೆಯಂತೆನ್ನನ್ ಆನಱೆಯದೆ

ನುಡಿವನ್ನಮೆನ್ನನೀ ಪರಿ
ಸಿಡಿಲೇತಕೆ ಕೆಡೆದುದಿಲ್ಲ ನಿನ್ನಯ ಸಿರದೊಳ್
ಉಡುಗಿದುದಿಲ್ಲಮುಸಿರ್ ನೂ
ರ್ಮಡಿಯೆನಲೀ ಜಿಹ್ವೆ ಬಿರಿದುದಿಲ್ಲ ದುರಾತ್ಮಾ’

ಎಂದು ನುಡಿದು, ಚಂದ್ರಾಭಿಮುಖಿಯಾಗಿ ಕಯ್ಗಳಂ ಮುಗಿದು ‘ಮಹಾಭಾಗ, ಸಕಲ ಭುವನ ಚೂಡಾಮಣಿಯಪ್ಪ ರೋಹಿಣೀರಮಣ, ಪುಂಡರೀಕನನಾಂ ನೋಡಿದಂದಿನಿಂ ಮತ್ತೊರ್ವ ಪುರುಷನಂ ಮನದೊಳಾದೊಡಂ ಭಾವಿಸದಿರ್ದುದು ನನ್ನಿಯಪ್ಪೊಡೆ ಈ ಅಳೀಕಕಾಮಿ ಗಿಳಿಯಾಗಿ ಪುಟ್ಟುಗೆ’ ಎಂದು ಶಪಿಸಿದಳು. ಮದನಜ್ವರ ವೇಗದಿಂದಿಲೋ ಪಾಪಪರಿಹಾಕದಿಂದಲೋ ಅಥವಾ ತೀವ್ರಶಾಪವಾಙ್ಮಹಿಮೆಯಿಂದಲೋ ಆತನಂದು ‘ಕಡಿದಿಕ್ಕಿದ ಪೆರ್ಮರನಂತೆವೋಲದೇನಹಹ ನಿರೂಪಿಪೆಂ ಕೆಡೆದು ಪೊಂದಿದನಾ ಯಿಳೆಯಲ್ಲಚೇತನಂ.’

ಹಿಂದೆಲ್ಲಿಯೂ ಮಹಾಶ್ವೇತೆಯ ಕೋಪವನ್ನು ಕಂಡರಿಯದ ನಾವು ಭಯಭ್ರಾಂತರಾಗುತ್ತೇವೆ. ಇದ್ದಕ್ಕಿದ್ದ ಹಾಗೆ ಕೋಮಲ ಹೂವು ಕಠೋರ ಸಿಡಿಲಾಗುತ್ತದೆ. ಪವಿತ್ರ ಪ್ರೇಮಕ್ಕಾಗಿಯೇ ಮಹಾಶ್ವೇತೆ ತೆಕ್ಕನೆ ಮಹಾಕಾಳಿಯಾಗುತ್ತಾಳೆ. ತಪಸ್ವಿನಿಯಾದ ಅಬಲೆಯ ಬಲವೇನೆಂಬುದನ್ನು ತೋರುತ್ತಾಳೆ. ಮಹಾಶ್ವೇತೆ ಬರಿಯ ಜಲಜಮುಖಿ ಮಾತ್ರವಲ್ಲ; ಸಮಯ ಬಂದರೆ ಪ್ರಲಯಮುಖಿಯೂ ಆಗುತ್ತಾಳೆ. ಈಗ ಆಕೆಯ ಲಾವಣ್ಯವು ಭವ್ಯತೆಗೇರುತ್ತದೆ. ಲಾಲಿತ್ಯವು ರೌದ್ರಸಂಗಿಯಾಗಿ ಭಕ್ತಿಗೌರವ ಭಾಜನವಾಗುತ್ತದೆ. ಅಲ್ಪತೆ ಮಹತ್ತಿಗೇರುತ್ತದೆ: ಯಾವುದು ಅಪರೀಕ್ಷಿತವಾಗಿದ್ದಿದ್ದರೆ ಸುರಕ್ಷಿತವಾದ ಅಲ್ಪತೆಯೇ ಆಗಿ ಉಳಿಯುತ್ತಿತ್ತೋ ಅದೇ ಪರೀಕ್ಷಿತವಾಗಿ ಮಹತ್ತಿಗೇರುತ್ತದೆ.

ಆಹಾರ ಲಭಿಸದಿದ್ದುರಿಂದ ಹೊಟ್ಟೆಗಿಲ್ಲದೆ ಸತ್ತರೆ ಅದನ್ನು ನಿರಶನವ್ರತ ವೆಂದಾಗಲಿ ಪ್ರಾಯೋಪವೇಶವೆಂದಾಗಲಿ ವಿಷಯ ತಿಳಿದವರಾರೂ ಕರೆಯುವುದಿಲ್ಲ. ಉಣಿಸು ಬಳಿಸಾರಿ ಉಣ್ಣೆಂದು ಬೇಡುತ್ತಿದ್ದರೂ ಹಸಿವೆಯ ಯಮಯಾತನೆಯನ್ನು ತೆಗೆದುಕೊಂಡು ವ್ರತಾಚಾರಿಯಾಗಿರುವಾತನೆ ನಿಜವಾದ ವ್ರತಿ. ಪ್ರಲೋಭದ ಸೆಳೆತವಿಲ್ಲದಿದ್ದರೆ ಇಂದ್ರಿಯನಿಗ್ರಹವೂ ಜಡರೂಢಿಯಾಗಬಹುದು; ಪಾತಿವ್ರತ್ಯವೂ ಪದ್ಧತಿಯಾಗಬಹುದು; ವ್ಯಾಕುಲತೆಯೂ ಆಕಳಿಸಬಹುದು.

ಸ್ವರ್ಗವೇಷಿಯಾದ ಪ್ರಲೋಭನವು ಅಪ್ಪು ಬಾ ಎಂದು ತೋಳ್‌ನೀಡಿ ಮುಂದೆ ನಲಿದಂದು ಅದನ್ನು ಕಡೆಗಣ್ಣಿನಿಂದಲೂ ನೋಡದೆ ವಿಸರ್ಜಿಸಿದಾಗ ಮಾತ್ರ ಸಾಮಾನ್ಯಸ್ತ್ರೀ ಮಹಾಮಹಿಳೆಯಾಗುತ್ತಾಳೆ. ಲಂಕೇಶ್ವರನನ್ನು ಜುಗುಪ್ಸಾಗದೆಯಿಂದ ಚೂರ್ಣೀಕೃತನನ್ನಾಗಿ ಮಾಡಿ, ತಿರಸ್ಕಾರದ ಸಮ್ಮಾರ್ಜನಿಯಿಂದ ಗುಡಿಸಿ, ಕಸದ ಮೂಲೆಗೊತ್ತಿದಂದು ಸೀತೆ ಲೋಕ ಪೂಜ್ಯೆಯಾಗಿದ್ದಾಳೆ. ಸ್ಫುರದ್ರೂಪಿಯಾದರೂ ಅಳೀಕಕಾಮಿಯಾದ ವೈಶಂಪಾಯನನನ್ನು ವಿಸರ್ಜಿಸಿ ಈ ಮಹಾಶ್ವೇತೆ ಜನಕಕನ್ಯೆಗೆ ಹೆಗಲೆಣೆಯಾಗಿದ್ದಾಳೆ.


ವಿವಾಹ ತತ್ವಗಳಲ್ಲಿಯೂ ನರನಾರಿಯರ ಸಂಬಂಧದ ವಿಷಯಗಳಲ್ಲಿಯೂ ಹೊಸಹೊಸ ಬಿರುಕುಗಳೂ ಸಡಿಲಗಳೂ ಸಂದೇಹಗಳೂ ಮೊಗದೋರುತ್ತಿರುವ ಈ ಸಮಯದಲ್ಲಿ ನಮ್ಮ ಮನಸ್ಸು ಪ್ರಾಚೀನಕಾಲದ ಮಹಾ ಮಹಿಳೆಯರ ಚರಣತಲ ಕ್ಷೇತ್ರಕ್ಕೆ ಯಾತ್ರೆ ಹೋಗಲು ನಾಚುತ್ತಿರುವುದೇನೊ ಅರ್ಥವಾಗುತ್ತದೆ. ಆದರೆ ಆ ಯಾತ್ರೆ ಸಂಪೂರ್ಣವಾಗಿ ನಿಂತುಹೋದರೆ ಎಲ್ಲಿ ಅನರ್ಥವುಂಟಾಗುತ್ತದೆಯೋ ಎಂದು ಹೆದರಿಕೆಯೂ ಆಗುತ್ತದೆ.

ಕಾವ್ಯಗಳನ್ನೆಲ್ಲ ಗಂಡಸರು ಬರೆದಿದ್ದಾರೆ; ಅಲ್ಲಿ ಬರುವ ಹಿರಿಯ ಹೆಣ್ಣುಗಳೆಲ್ಲ ಅವರ ಕೈಗಾರಿಕೆ; ಸೀತೆ, ಸಾವಿತ್ರಿ, ದಮಯಂತಿ, ಮಹಾಶ್ವೇತೆಯರೆಲ್ಲ ಪುರಷಹೃದಯದ ಆಶಾಸೂಚಿಗಳೇ ಹೊರತು ಸ್ತ್ರೀಹೃದಯದ ವಿಷಯಸೂಚಿಗಳಲ್ಲ. ಸ್ತ್ರೀಯರೇ ಕಾವ್ಯಗಳನ್ನು ಬರೆದಿದ್ದ ಪಕ್ಷದಲ್ಲಿ ಅಥವಾ ಬರೆಯುವ ಪಕ್ಷದಲ್ಲಿ ಕಥಾನಾಯಿಕೆಯರ ರೀತಿ ಬೇರೆಯಾಗಿರುತ್ತಿತ್ತು. ಅದೂ ಅಲ್ಲದೆ, ಗಂಡಸರೆಲ್ಲ ಹೆಂಗಸರು ಸೀತೆ ಮಹಾಶ್ವೇತೆಯರಾಗಿರಬೇಕೆಂದು ಬೋಧಿಸುತ್ತಾರೆಯೆ ಹೊರತು ತಾವು ಶ್ರೀರಾಮ ಪುಂಡರೀಕರಂತೆ ಇರಬೇಕೆಂದು ಆಗ್ರಹಪಡುವುದಿಲ್ಲ.-ಇಂತಹ ಟೀಕೆಯಲ್ಲಿ ಸ್ವಲ್ಪಮಟ್ಟಿಗೆ ಸತ್ಯವಿರಬಹುದಾದರೂ ಶ್ರೇಯಸ್ಸಿನ ದೃಷ್ಟಿಯಿಂದ ಅದು ಅಪ್ರಕೃತ. ಇಬ್ಬರೂ ರೋಗಿಗಳೆಂದು ಆರೋಗ್ಯವನ್ನೆ ಹಳಿಯುವುದೂ, ಇಬ್ಬರೂ ಸುಳ್ಳುಗಾರರೆಂದು ಸತ್ಯವನ್ನೆ ಅಲ್ಲಗಳೆಯುವುದೂ, ನಿದರ್ಶನಗಳು ಅಪೂರ್ವವೆಂದು ಆದರ್ಶವನ್ನೆ ತಿರಸ್ಕರಿಸುವುದೂ ಪ್ರೇಮದ ದಿವ್ಯತೆಗೆ ಲಕ್ಷಣವಲ್ಲ. ಮತ್ತು ಬಹುಸಂಖ್ಯೆಯ ಜನರು ಅನುಸರಿಸಲಾರದ ಮಾತ್ರಕ್ಕೆ ಬಹುಕಾಲದಿಂದ ಸಮೆದುಬಂದ ಒಂದು ದಾರಿಯನ್ನೆ ತ್ಯಜಿಸುವುದು ಕ್ಷೇಮಂಕರ ಬುದ್ಧಿಯಲ್ಲ. ಎತ್ತರಗಳಿರುವುದು ಎಲ್ಲರೂ ಹತ್ತುತ್ತಾರೆಂದಲ್ಲ, ಎಲ್ಲರೂ ಹತ್ತಬೇಕೆಂದು.

ತನ್ನ ಪ್ರಾಣಮಿತ್ರ ವೈಶಂಪಾಯನನು ಮಹಾಶ್ವೇತೆಯ ಶಾಪದಿಂದ ತೀರಿಕೊಂಡುದನ್ನು ನೋಡಿ ವಿಗತಪ್ರಾಣನಾದ ಚಂದ್ರಾಪೀಡನಿಗಾಗಿ ರೋದಿಸುತ್ತಿದ್ದ ತಂಗಿ ಕಾದಂಬರಿಗೆ ಹೀಗೆಂದು ಉಪದೇಶಿಸುತ್ತದೆ ಮಹಾಶ್ವೇತೆಯ ಶ್ರದ್ಧೆ:

ಎನಗಿದು ದೈವಮೆಂದು ಮನದೊಳ್ ಪರಿಭಾವಿಸಿ ಕಲ್ಲ ಮಣ್ಣ ರೂ
ಪನೆ ಗಡ ಪೂಜಿಸುತ್ತುಮಿರೆ ಸನ್ನಿದವಾದಪುದೆಂದೊಡಕ್ಕ ನೆ
ಟ್ಟನೆ ಮನುಜೇಂದ್ರಚಂದ್ರವೆಸರಿಂದೆಸೆವಗ್ಗದ ಚಂದ್ರಮೂರ್ತಿಯಂ
ಮನಮೊಸೆದರ್ಚಿಸುತ್ತಮಿರೆ ಸನ್ನಿದನಪ್ಪುದಿದಾವ ಸಂದೆಗಂ?
****
ಅಪರಿಮಿತೋಕ್ತಿಯೊಳೇಂ ಸ
ತ್ವಪರೀತನೆ ಮದನದಾವದಹನಂ ತಳ್ತಿ
ರ್ದಪುದಿಲ್ಲ ನಿನ್ನನದಱಂ
ದುಪದೇಶಂಗೆಯ್ಯುತಿರ್ದಪುದಿದು ಸುಖಮಲ್ತೇ            ೧೧೫

ಆವಂಗಿಂದ್ರಿಯವರ್ಗಮುಂಟು ಮನಮುಂಟಾವಂ ದಿಟಂ ಕಾಣ್ಬನಿ
ನ್ನಾವಂ ಕೇಳ್ವನದಂತೆ ಕೇಳ್ದ ನುಡಿಯಂ ಕೈಕೊಳ್ವನಂತಲ್ಲದಿ
ನ್ನಾವಂ ಪೊಲ್ಲದಿದೊಳ್ಳಿತೆಂದಱವನಾತಂ ಕೇಳ್ದಪಂ ನಿನ್ನ ಸ
ದಾವಂಬೆತ್ತುಪದೇಶಮಂ ಕೆಳೆಯ ಪೇೞೆನ್ನಂದಿಗಂ ಕೇಳ್ವನೇ      ೧೧೬

ಪೆಱತೇನಾನಿರ್ಪವಸ್ಥಾಂತರದೊಳೆನಗೆ ನಿನ್ನನ್ನರಾರ್ ಬಂಧುಗಳ್ ನೀಂ
ಪೊಱಗಾಗೀ ಮಾರ್ಗದಿಂದಂ ನಿಯಮಿಸುವರಾರೆನ್ನನೇಗೆಯ್ವೆನಾನಿ
ನ್ನಱಯೆಂ ನೋಡೆನ್ನನಾಂ ಸಂವರಿಸಲಣಮುಮಾರ್ತಪ್ಪೆನಿಲ್ಲೀಗಳಿಂತೀ
ತೆಱನಂ ಕಂಡಿರ್ದು ನೀನೀಯೆಡೆಗಿದುಚಿತವೆಂಬಂತುಟಂ ನೀನೆ ಬಲ್ಲೆ      ೧೭೭

ವ|| ಅದೆಂತೆಂದೊಡೆ ಕಲ್ಪಾಂತೋದಿತ ದ್ವಾದಶ ದಿನಕರಕಿರಣಾತಪರ್ತಿವ್ರಮಪ್ಪ ಮದನಸಂತಾಪಕ್ಕುಪಶ ಮನೋಪಾಯಮನಾಂ ಪ್ರಾಣಂಬೆರಸೆನಿತು ಬೇಗಮಿರ್ಪನನ್ನೆವರಮ ಪೇಕ್ಷಿಸದಪ್ಪೆನಲ್ಲದೆಯುಂ

ಅಡುವಂತಾದಪುದೀಗಳೆನ್ನವಯವಂಗಳ್ ಕೂಡೆ ಕಣ್ಣಾಲಿಗಳ್
ಸುಡುವಂತಾದಪುದೇವೆನೆಯ್ದೆ ಹೃದಯಂ ಬೇವಂತುಟಾದಪ್ಪುದೀ
ವೊಡಲೋರಂತುರಿವಂದವಾದಪುದಿದಂ ನೀಂ ಮಾಣಿಸಲ್ಕಾರ್ಪೆಯ
ಪ್ಪೊಡೆ ದಲ್ ಮಾಣಿಪುದೆಂಬಿದಂ ನುಡಿದು ಮಾತಂ ಮಾಣ್ದನಬ್ಜಾನನೇ    ೧೧೮

ವ|| ಅಂತುಸಿರದಿರೆ ಮತ್ತಮಾನಾತನಂ ಸಂಬೋಸಲೆಂದು

ಎನಿತು ಪುರಾಣೋಕ್ತಿಗಳಿಂ
ದೆನಿತಾಗಮವಿಷಯವಚನದಿಂದೆನಿತು ನಿದ
ರ್ಶನದಿನನುನಯದೆ ಪೇೞ್ದೆನ
ದನಿತುಂ ಕಿವಿವೊಕ್ಕುದಿಲ್ಲ ತನ್ಮುನಿವರನಾ     ೧೧೯

ನನ್ನ ಮಾತನ್ನು ತಡೆದು ಒತ್ತಾದ ಕಣ್ಣುರೆಪ್ಪೆಗಳಿಂದ ಇಳಿದುಬರುತ್ತಿರುವ ದಪ್ಪ ದಪ್ಪ ಕಣ್ಣೀರಿನ ಹನಿಗಳನ್ನು ತೊಡೆದುಕೊಳ್ಳುತ್ತಾ ಹೀಗೆ ಹೇಳಿದನು. ೧೧೫. “ನೆಮ್ಮದಿಯಿಂದ ಕೂಡಿಕೊಂಡಿರುವ ಗೆಳೆಯ, ಹೆಚ್ಚು ಮಾತುಗಳಿಂದ ಏನು ಪ್ರಯೋಜನ?” ನಿನ್ನನ್ನು ಮನ್ಮಥನೆಂಬ ಕಾಡುಕಿಚ್ಚು ಆವರಿಸಿಲ್ಲ. ಅದರಿಂದ ನನಗೆ ಸುಖವಾಗಿ ಉಪದೇಶ ಮಾಡುತ್ತಿರುವೆ? ೧೧೬. ಮಿತ್ರ, ಯಾರಿಗೆ ಇಂದ್ರಿಯಗಳು ಇವೆಯೊ, ಯಾರಿಗೆ ಮನಸ್ಸು ಇದೆಯೊ, ಯಾರು ನಿಜವಾಗಿಯೂ ನೋಡುತ್ತಾರೊ, ಯಾರು ಕೇಳುತ್ತಾರೊ, ಹಾಗೆಯೆ ಕೇಳಿದ ಮಾತನ್ನು ಅರ್ಥಮಾಡಿಕೊಳ್ಳುತ್ತಾರೊ, ಅದಲ್ಲದೆ ಯಾರು ಇದು ಒಳ್ಳೆಯದು ಇದು ಕೆಟ್ಟದ್ದು ಎಂಬುದನ್ನು ತಿಳಿದುಕೊಳ್ಳುತ್ತಾರೊ, ಅವರು ನಿನ್ನ ಸದ್ಭಾವನೆಯಿಂದ ಕೂಡಿದ ಉಪದೇಶವನ್ನು ಕೇಳುತ್ತಾರೆ. ನನ್ನಂತಹವನು ಕೇಳುತ್ತಾನೊ? ಹೇಳಯ್ಯ! ೧೧೭. ಬೇರೆ ಹೇಳುವುದು ಏನಯ್ಯ? ಈಗ ನಾನು ಇರುವ ಈ ಅವಸ್ಥೆಯಲ್ಲಿ ನನಗೆ ನಿನ್ನಂತಹ ಬಂಧುಗಳು ಯಾರಿದ್ದಾರೆ? ನಿನ್ನನ್ನು ಬಿಟ್ಟು ಈ ದಾರಿಯಲ್ಲಿ ಹೋಗುವುದನ್ನು ತಪ್ಪಿಸಿ ನನ್ನನ್ನು ತಹಬಂದಿಗೆ ತರುವವರು ಯಾರಿದ್ದಾರೆ? ನಾನೇನು ಮಾಡಲಿ? ನನಗೇನೂ ತೋಚುವುದಿಲ್ಲ. ನೋಡು, ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳಲು ಖಂಡಿತ ಸಮರ್ಥನಲ್ಲ. ಈ ಎಲ್ಲ ಬಗೆಯನ್ನೂ ನೀನು ತಿಳಿದುಕೊಂಡಿದ್ದೀಯೆ. ಈ ಸಂದರ್ಭಕ್ಕೆ ಇದು ಸರಿಯೆಂಬುದೆಲ್ಲವನ್ನೂ ನೀನೇ ತಿಳಿದಿದ್ದೀಯೆ. ವ|| ಅದು ಹೇಗೆಂದರೆ, ಪ್ರಳಯ ಕಾಲದಲ್ಲಿ ಹುಟ್ಟುವ ಹನ್ನೆರಡು ಸೂರ್ಯಮಂಡಲಗಳ ಕಿರಣಗಳಿಂದ ಉಂಟಾಗುವ ಬಿಸಿಲಿನಂತೆ ತೀಕ್ಷ ವಾದ ಈ ನನ್ನ ಕಾಮಜ್ವರಕ್ಕೆ ನಿವಾರಣೋಪಾಯವನ್ನು ನಾನು ಬದುಕಿರುವಷ್ಟರಲ್ಲೆ ಬೇಗನೆ ನೀನು ಮಾಡಬೇಕೆಂದು ಅಪೇಕ್ಷಿಸುತ್ತೇನೆ. ಅಲ್ಲದೆ ೧೧೮. ಈಗ ನನ್ನ ದೇಹದ ಅಂಗಾಂಗಗಳೆಲ್ಲ ಬೇಯಿಸಿದಂತೆ ಆಗುತ್ತಿದೆ. ನನ್ನ ಕಣ್ಣುಗುಡ್ಡೆಗಳು ಸುಟ್ಟುಹೋಗುವಂತೆ ಆಗುತ್ತಿದೆ. ಏನು ಮಾಡಲಿ? ಹೃದಯವು ಬೆಂದು ಹೋಗುತ್ತಿರುವಂತಿದೆ. ಈ ಶರೀರವು ಒಂದೇಸಮನೆ ಉರಿದುಹೋಗುವಂತಿದೆ. ಇದನ್ನು ನೀನು ನಿಜವಾಗಿಯೂ ತಪ್ಪಿಸಲು ಶಕ್ತನಾಗಿದ್ದರೆ, ತಪ್ಪಿಸು” ಎಂದು ಹೇಳಿ. ಎಲೈ ತಾವರೆಮೊಗದವಳೆ, ಎಂದವನೇ ಮಾತನ್ನು ನಿಲ್ಲಿಸಿದನು. ವ|| ಹೀಗೆ ಮಾತನಾಡದಿರಲಾಗಿ ಮತ್ತೆ ನಾನು ಅವನಿಗೆ ಬುದ್ಧಿವಾದ ಹೇಳಬೇಕೆಂದು ೧೧೯. ಅವನಿಗೆ ಒಳ್ಳೆಯ ಮಾತಿನಿಂದಲೇ ಅನೇಕ ಪುರಾಣವಚನಗಳನ್ನೂ ಅನೇಕ

ವ|| ಅಂತು ಮೆಯ್ಯಱಯದಿರ್ದನಂ ಕಂಡು ಭಯಂಗೊಂಡುಪದೇಶಕ್ಕೆಡೆಯಿಲ್ಲದೆ ಪ್ರಾಣರಕ್ಷಣೋಪಾಯಮಾನಾದೊಡಂ ಮಾೞ್ಪೆನೆಂದಲ್ಲಿಂದಮೆೞ್ದಚ್ಚೋದಸರೋವರಮಂ ಪೊಕ್ಕು ಸರಸಮೃಣಾಳನಾಳಂಗಳುಮಂ ಜಲಲವಲಾಂಭಿತಂಗಳಪ್ಪ ನಳಿನೀದಳಂಗಳುಮಂ ಪರಾಗಪರಿಮಳಮನೋಹರಂಗಳಪ್ಪ ಕುಮುದ ಕುವಲಯಂಗಳುಮಂ ತಂದಾ ಲತಾಮಂದಿರದೊಳಗಣ ಚಂದ್ರಕಾಂತಶಿಲಾತಲಂಗಳೊಳ್ ಪಲವುಮನಲ್ಪತಲ್ಪಂಗಳುಮಂ ಮಾೞ್ಪುದುಮಾತನಲ್ಲಿಗೆ ಮೆಯ್ಯನೀಡಾಡಿ ಕೆಲದೊಳಿರ್ದ ಚಂದನಪಲ್ಲವದೆಳದಳಿರ್ಗಳಂ ಕರತಳದಿಂ ಪಿೞದು ನಿಸರ್ಗ ಪರಿಮಳಮಂ ತಳೆದ ಹೈಮದಂತೆ ಕುಳಿರ್ಕೋಡುವ ತದ್ರಸದಿಂ ಲಲಾಟಂ ಮೊದಲಾಗಿ ಚರಣ ತಳಂಬರಂ ಅಂಗಚರ್ಚೆಯನೆಡೆವಿಡದೊಡರ್ಚಿಯುಂ ಅಭ್ಯರ್ಣಪಾದಪಸುಟಿತ ವಲ್ಕಲಂಗಳೊಳಂ ಕಟ್ಟಿದ ಕರ್ಪೂರರಜದ ಪೊಟ್ಟಣಂಗಳೊಳಂ ಸ್ವೇದಪ್ರತೀಕಾರಮನನವರತಂ ಮಾಡಿಯುಂ ತಿಳಿನೀರ ತುಂತುರ್ವನಿಗಳಿಂ ಪೊರೆದೆಳವಾೞ ಯ ಸುೞಯ ಬಿಜ್ಜಣಿಗೆಗಳಿನಡಿಗಡಿಗೆ ಬೀಸಿಯುಂ ಮತ್ತಮನೇಕ ಶಿಶಿರೋಪಚಾರಂಗಳಂ ಮಾಡಿಯುಮವೆಲ್ಲಮುಂ ಪುಂಡರೀಕಂಗುದ್ದೀಪನಪಿಂಡದಂತೆ ಕೇವಲಂ ಸಂತಾಪಮಂ ಮಾೞ್ಪುದುಮೆನ್ನೊಳಿಂತೆಂದೆಂ

ಜನಕಂ ಗಂಧರ್ವರಾಜಂ ತನಗೆನಿಸಿದ ವಿಖ್ಯಾತಿಯಂ ತಾಳ್ದಿ ಕಾಂತಾ
ಜನರತ್ನಂ ತಾನೆನಲ್ ಸಂದತಿಚತುರೆ ಮಹಾಶ್ವೇತೆ ತಾನೇತ್ತದೆಂದುಂ
ವನವಾಸೈಕಾಗ್ರಚಿತ್ತಂ ಮೃಗಶಿಶುವಿನವೋಲ್ ಮುಗ್ಧನಪ್ಪೀತನೆತ್ತೆಂ
ಬಿನಿತಂ ತಾಂ ನೋಡದೇಂ ಮಾಡಿದನೊ ವಿರಹಸಂತಾಪಮಂ ಪುಷ್ಪಚಾಪಂ       ೧೨೦

ವ|| ಅಂತು ದುರ್ಯಶಪದಮುಂ ದುಷ್ಕರಮುಂ ದುಸ್ಸಾಧ್ಯಮುಂ ದುರ್ಘಟಮು ಮೆನಿಪೆಡೆಯೊಳೆರ್ದೆಗೊಟ್ಟದೊಂದ ವeಯಿಂದೆಸಗಿಪಂ ವಿಷಮಾಸ್ತ್ರನದು ಕಾರಣದಿಂ

ಆವುದು ಮಾೞ್ಪುದೋ ಶರಣಮಾವುದೊ ಪೋಪೆಡೆಯಾವುದಿಲ್ಲಿಗಿ
ನ್ನಾವುದೊ ಕೌಶಲಂ ನೆರವದಾವುದುಪಾಯಮದಾವುದೋವೊ ತಾ
ನಾವುದೊ ಬುದ್ಧಿ ಮತ್ಸಖನ ಜೀವಮನಾಂ ಪಿಡಿವಂದಮಾವುದಿ
ನ್ನೇವೆನೆನುತ್ತಮಿಂತಿರೆ ವಿಕಲ್ಪಸಿದೆಂ ಪಲವುಂ ಪ್ರಕಾರಮಂ       ೧೨೧

ಶಾಸ್ತ್ರವಚನಗಳನ್ನೂ ಉದಾಹರಿಸಿ ಉಪದೇಶ ಮಾಡಿದೆ. ಅದೊಂದೂ ಅವನ ಕಿವಿಗೆ ಬೀಳಲೇ ಇಲ್ಲ. ವ|| ಹೀಗೆ ದೇಹದ ಮೇಲೆ ಪ್ರeಯೇ ಇಲ್ಲದಿರುವ ಅವನನ್ನು ನೋಡಿ ನನಗೆ ಭಯವುಂಟಾಯಿತು. ಉಪದೇಶಕ್ಕೆ ಅವಕಾಶವೇ ಇರಲಿಲ್ಲ. ಅದರಿಂದ ಅವನ ಪ್ರಾಣರಕ್ಷಣೆಗಾದರೂ ತಕ್ಕ ಪ್ರಯತ್ನವನ್ನು ಮಾಡಬೇಕೆಂದು ಅಲ್ಲಿಂದ ಎದ್ದು ಅಚ್ಛೋದಸರೋವರಕ್ಕೆ ಹೋಗಿ ಅಲ್ಲಿಂದ ತಂಪಾದ ತಾವರೆದಂಟುಗಳನ್ನೂ ನೀರು ಹನಿಗಳಿಂದ ಕೂಡಿದ ತಾವರೆ ಎಲೆಗಳನ್ನೂ ಪರಾಗದಿಂದ ಸುವಾಸನೆಯನ್ನು ಪಡೆದು ಸೊಗಸಾದ ಬಿಳಿತಾವರೆಯ ಮತ್ತು ಕನ್ನೈದಿಲೆಯ ಹೂವುಗಳನ್ನೂ ತಂದೆನು. ಆ ಬಳ್ಳಿ ಮನೆಯ ಒಳಗಿರುವ ಚಂದ್ರಕಾಂತಶಿಲೆಯ ಮೇಲೆ ಅವುಗಳನ್ನು ಹರಡಿ ಉತ್ತಮವಾದ ಹಾಸಿಗೆಯನ್ನು ಏರ್ಪಡಿಸಿದೆನು. ಅವನು ಅಲ್ಲಿ ಮಲಗಿಕೊಂಡನು. ಬಳಿಕ ನಾನು ಪಕ್ಕದಲ್ಲಿ ಇದ್ದ ಗಂಧದ ಮರದ ಎಳೆಚಿಗುರುಗಳನ್ನು ಕೈಯಿಂದ ಹಿಂಡಿ, ಸ್ವಭಾವವಾಗಿಯೇ ಪರಿಮಳದಿಂದ ಕೂಡಿಕೊಂಡಿರುವ ಮತ್ತು ಮಂಜಿನಂತೆ ತಂಪನ್ನುಂಟುಮಾಡುವ ಆ ರಸದಿಂದ ಹಣೆಯಿಂದ ಹಿಡಿದು ಕಾಲಿನವರೆಗೂ ಲೇಪನವನ್ನು ಒಂದೇ ಸಮನೆ ಮಾಡಿದೆನು. ಹತ್ತಿರದಲ್ಲೇ ಇದ್ದ ಒಂದು ಮರದ ತೊಗಟೆಯನ್ನು ಸುಲಿದು ತಂದು ಅದರಲ್ಲಿ ಕರ್ಪೂರದ ಪುಡಿಗಳನ್ನು ಸೇರಿಸಿ ಕಟ್ಟಿ ಉಂಡೆಮಾಡಿಕೊಂಡು ಮೈಮೇಲೆ ಒಂದೇ ಸಮನೆ ಒತ್ತುತ್ತಾ (ಉಪ್ಪು ಮೊದಲಾದ ಶಾಖವನ್ನು ಕೊಡುವಂತೆ) ಬರುತ್ತಿದ್ದ ಬೆವರನ್ನು ತಪ್ಪಿಸುತ್ತಿದ್ದೆನು. ತಿಳಿನೀರಿನ ತುಂತುರು ಹನಿಗಳಿಂದ ಕೂಡಿಕೊಂಡಿರುವ ಎಳೆಯ ಬಾಳೆಯ ಸುಳಿಯನ್ನು ಬೀಸಣಿಗೆಯನ್ನಾಗಿ ಮಾಡಿಕೊಂಡು ಮತ್ತೆ ಮತ್ತೆ ಬೀಸುತ್ತಿದ್ದೆನು. ಹೀಗೆ ಇನ್ನೂ ಅನೇಕ ಬಗೆಯ ತಂಪುಮಾಡುವ ಚಿಕಿತ್ಸೆಗಳನ್ನು ಮಾಡಿದರೂ ಅವೆಲ್ಲವೂ ಪುಂಡರೀಕನಿಗೆ ಶಾಖವನ್ನುಂಟುಮಾಡುವ ಗುಳಿಗೆಯಂತೆ ಕೇವಲ ತಾಪವನ್ನೇ ಉಂಟುಮಾಡುತ್ತಿದ್ದುವು. ಅದನ್ನು ನೋಡಿ ನಾನು ಮನಸ್ಸಿನಲ್ಲೇ ಅಂದುಕೊಂಡೆನು.

೧೨೦. “ತನಗೆ ತಂದೆ ಗಂಧರ್ವರಾಜ” ಎಂಬ ಪ್ರಖ್ಯಾತಿಗೆ ಪಾತ್ರಳಾದ ಮಹಿಳಾರತ್ನವೆನಿಸಿ ಕೊಂಡಿರುವ ಹಾಗೂ ಚತುರೆಯಾದ ಆ ಮಹಾಶ್ವೇತೆ ಎಲ್ಲಿ? ಯಾವಾಗಲೂ ಅರಣ್ಯವಾಸದಲ್ಲೆ ನಿರತನಾದ ಜಿಂಕೆಮರಿಯಂತೆ ಮೊದ್ದುತನದಿಂದ ಕೂಡಿರುವ ಈ ಪುಂಡರೀಕನೆಲ್ಲಿ! ಇದನ್ನು ನೋಡಿದರೆ ಮನ್ಮಥನು ಇವನಿಗೆ ವಿರಹಸಂತಾಪವನ್ನು ಏತಕ್ಕೆ ಉಂಟುಮಾಡಿಬಿಟ್ಟನೋ? ವ|| ಹಾಗೆ ಅಪಕೀರ್ತಿಯನ್ನುಂಟುಮಾಡುವ, ಕಷ್ಪಕರವಾದ ಸಾಸಲಸಾಧ್ಯವಾದ ನಿರ್ವಹಿಸಲಾಗದಿರುವ ವಿಷಯದಲ್ಲೂ ತೊಡಗಿ, ಮನ್ಮಥನು ಕನಿಕರವಿಲ್ಲದೆ ನಿರ್ಲಕ್ಷ ದಿಂದಲೇ ಮಾಡಿಬಿಡುತ್ತಾನೆ. ಆ ಕಾರಣದಿಂದ, ೧೨೧. ಏನು ಮಾಡುವುದು? ಕಾಪಾಡುವವರು ಯಾರು? ಹೋಗುವ ಸ್ಥಳ ತಾನೆ ಯಾವುದು? ಈ ವಿಷಯದಲ್ಲಿ ಯಾವ ಜಾಣತನವನ್ನು ಮಾಡಬಹುದು? ಯಾವ ಸಹಾಯವಿದೆ? ಯಾವ

ವ|| ಅಂತು ಚಿಂತಿಸುತ್ತಮಿರ್ದುಮೆನ್ನೊಳಿಂತೆಂದೆಂ

ದೆಸೆಗೆಟ್ಟೇನಾನುಮಂ ಚಿಂತಿಸುತಿರೆ ಫಲಮೇಂ ಪೊಲ್ಲದಿನ್ನೊಳ್ಳಿತೆಂಬು
ದ್ದೆಸಮಂ ಮಾಣ್ದೀಗಳೆಲ್ಲಂದದೊಳಮೆನಗೆ ಮಾತೇಂ ಸುಹೃತ್ಪ್ರಾಣಮಂ ರ
ಕ್ಷಿಸವೇೞ್ಕುಂ ರಕ್ಷಿಸುವ ತೆಱನುಮೆಂತೆಂದೊಡಂ ನಿಶ್ಚಯಂ ಭಾ
ವಿಸಿ ನೋೞ್ಪಂದಾಕೆಯಂ ತರ್ಪುದನುೞಯೆ ಬೞಕ್ಕಿಲ್ಲ ಬೇಂದುಪಾಯಂ   ೧೨೨

ಅಱಯಂ ಕೇಣದಿನೇನುಮಂ ಮುನಿಕುಮಾರಂ ಪೆಂಡಿರಿಂತೆಂದು ಬಾ
ಯ್ದೆಯಲ್ ನಾಣ್ಚುವನೊಂದು ಮಾತನವಳತ್ತಲ್ ಸಾರ್ದು ಮಾತಾಡಲ
ೞ್ಕಱುವಿತ್ತಲ್ ವಿಷಮೇಷು ಕೊಂದಪನಿದಂ ಕಂಡಿರ್ದು ಮತ್ತೀಗಳಾಂ
ಪೆಱತೇಂ ಭಾವಿಪೆನೆನ್ನ ಮಿತ್ರನಸುವಂ ಕಾಯಲ್ಕೆವೇೞ್ಕುಂ ದೃಢಂ          ೧೨೩

ವ|| ಅದಱಂದಿನ್ನಾಕೆಯಲ್ಲಿಗೆಂತಾದೊಡಂ ಪೋಗೀತನವಸ್ಥಾಂತರಮಂ ಪೇೞಲ್ವೇಡಿದಪ್ಪುದೆಂದು ಮತ್ತಂ.

ಎನಗಂ ಕೃತ್ಯಮಿದಲ್ಲದಿರ್ದೊಡಮವಶ್ಯಂ ಪೋಪೆನೆಂತಾನುಮೆ
ನ್ನನಿವಂ ಕುತ್ಸಿತವೃತ್ತಿ ಕಷ್ಟಮಿದು ಬೇಡೆಂದೆಂಗುಮೋ ಲಬ್ಧಚೇ
ತನನೆಂದಾತನ ಪಕ್ಕದಿಂದುಸಿರದಿರ್ದಾನಾಗಳೇನಾನುಮೊಂ
ದು ನೆವಂ ಮಾಡಿ ಮಹೋತ್ಕಟತ್ವದೆ ದಿಟಂ ಬಂದೆಂ ಚಕೋರೇಕ್ಷಣೇ      ೧೨೪

ಇದು ಮನ್ಮಿತ್ರನವಸ್ಥೆ ತದ್ವಿರಹಸಂತಾಪಾನುರಾಗಕ್ಕೆ ತ
ಕ್ಕುದನಾಂ ಬಂದೆಡೆಗಂ ಮೃಗಾಕ್ಷಿ ನಿನಗಂ ಪೋಲ್ವಂತುಟಂ ನೀನೆ ಬ
ಲ್ಲೆ ದಲಿಂದಿಂತಿದಕೇನನೆಂದಪಳೊ ಕೇಳ್ವೆಂ ಮಾತನೆಂದೇನುಮೆ
ನ್ನದೆ ಮದ್ವಕ್ತ್ರಮನಾ ಕಪಿಂಜಳಕನಾಗಳ್ ನೋಡುತಿರ್ದಂ ನೃಪಾ          ೧೨೫

ಅದನಾಂ ಕೇಳ್ದು ಸುಖಾಮೃತಾರ್ಣವದೊಳೞ್ದಂತಾನುಮಂತೆಯ್ದೆ ಕೂ
ಟದೊಳಾದೊಂದನುರಾಗಮಂ ಪಡೆದೆನೆಂಬಂತಾನುಮಂತೆಯ್ದೆ ಸ
ಮ್ಮದಸಂದೋಹಮನಾನೆ ಪೆತ್ತೆನಿದನೆಂಬಂತಾನುಮಂತಯ್ದೆ ದೋ
ಹದಮೆಲ್ಲಂ ನೆಬಂದು ಕೂಡಿತು ಗಡೆಂಬಂತಾನುಮಾದೆಂ ನೃಪಾ            ೧೨೬

ಉಪಾಯವಿದೆ? ಯಾವ ಯುಕ್ತಿಯನ್ನು ಮಾಡಬಹುದು? ನನ್ನ ಸ್ನೇಹಿತನ ಪ್ರಾಣವನ್ನು ಉಳಿಸುವ ರೀತಿ ಹೇಗೆ? ಇನ್ನೇನು ಮಾಡಲಿ! ಎಂಬುದಾಗಿ ನಾನಾಬಗೆಯಾಗಿ ಯೋಚಿಸಿದೆನು. ವ|| ಹಾಗೆ ಆಲೋಚಿಸುತ್ತಾ ಇದ್ದು ನನ್ನಲ್ಲೇ ನಾನು ಮತ್ತೆ ಹೀಗೆ ಯೋಚಿಸಿದೆನು. ೧೨೨. ಹೀಗೆ ನಾನು ದಿಕ್ಕೆಟ್ಟು ಏನೇನನ್ನೋ ಯೋಚಿಸುತ್ತಾ ಕುಳಿತಿದ್ದರೆ ಫಲವೇನು? ಇದು ಒಳ್ಳೆಯದು, ಇದು ಕೆಟ್ಟದ್ದು ಎಂಬ ಭಾವನೆಯನ್ನು ಬಿಟ್ಟು ಯಾವ ರೀತಿಯಿಂದಲಾದರೂ ನನ್ನ ಸ್ನೇಹಿತನ ಪ್ರಾಣವನ್ನು ಉಳಿಸಲೇಬೇಕು. ಹೆಚ್ಚು ಮಾತೇಕೆ? ಬೇಗನೆ ನಾನು ಅವನ ಪ್ರಾಣಗಳನ್ನು ಉಳಿಸುವ ಬಗೆ ಹೇಗೆ? ಎಂದು ಯೋಚಿಸಿ ನೋಡಿದರೆ, ಅವಳನ್ನು ಇಲ್ಲಿಗೆ ಕರೆದುಕೊಂಡು ಬರುವುದನ್ನು ಬಿಟ್ಟರೆ ಮತ್ತೆ ಬೇರೆ ಉಪಾಯವೇ ಇಲ್ಲ. ೧೨೩. ಈ ಋಷಿಕುಮಾರನು ಇದು ತಪಸ್ಸಿಗೆ ವಿರುದ್ಧವಾದುದೆಂಬ ಒಂದು ಆಲೋಚನೆಯಿಂದ ಏನು ಮಾಡಲೂ ಅರಿಯದವನಾಗಿದ್ದಾನೆ. ಅಲ್ಲದೆ “ಹೆಣ್ಣು” ಎಂಬ ಶಬ್ದವನ್ನು ಬಾಯಿಂದ ಹೇಳುವುದಕ್ಕೂ ನಾಚುತ್ತಾನೆ. ತಾನಾಗಿಯೇ ಅವಳ ಹತ್ತಿರ ಹೋಗಿ ಒಂದು ಮಾತನ್ನು ಹೇಳುವುದಕ್ಕೂ ಭಯ ಬೇರೆ. ಈ ಕಡೆ ಮನ್ಮಥನು ಇವನನ್ನು ಕೊಲ್ಲುತ್ತಿದ್ದಾನೆ. ಇದನ್ನೆಲ್ಲಾ ನಾನು ಕಣ್ಣಾರೆ ನೋಡಿಕೊಂಡಿದ್ದು, ಬೇರೆ ಏನು ತಾನೇ ಆಲೋಚನೆ ಮಾಡಲಿ? ಒಟ್ಟಿನಲ್ಲಿ ನನ್ನ ಗೆಳೆಯನ ಜೀವವನ್ನು ಖಂಡಿತವಾಗಿಯೂ ಉಳಿಸಲೇಬೇಕು. ವ|| ಅದರಿಂದ ಇನ್ನು ಅವಳ ಹತ್ತಿರಕ್ಕೆ ಹೇಗಾದರೂ ಹೋಗಿ ಇವನ ಅವಸ್ಥೆಯನ್ನು ಹೇಳಲೇಬೇಕು ಎಂದು ತೀರ್ಮಾನಿಸಿ ಮತ್ತೆ, ೧೨೪. “ಎಲೈ ಚಕೋರಪಕ್ಷಿಯ ಕಣ್ಣಿನಂತೆ ಕಣ್ಣುಳ್ಳವಳೆ, ನನಗೂ ಇದು ಮಾಡಲು ಯೋಗ್ಯವಾದ ಕಾರ್ಯವಲ್ಲ. ಹಾಗಿದ್ದರೂ ಹೋಗಲೇಬೇಕಾದ್ದರಿಂದ ಹೋಗಿಬರುತ್ತೇನೆ. ಇವನಿಗೇನಾದರೂ ಮೈಮೇಲೆ ಅರಿವುಂಟಾಗಿ ಗೊತ್ತಾದರೆ, ಇದು ಹೇಯವಾದ ಕೆಲಸ ಮತ್ತು ಕಷ್ಟಸಾಧ್ಯವಾದುದು. ಅದರಿಂದ ಹೋಗಬೇಡ ಎಂದು ಹೇಳಿಬಿಡಬಹುದು ಎಂದು ಚಿಂತಿಸಿ, ಅವನಿಗೆ ಏನನ್ನೂ ಹೇಳದೆ, ಏನೋ ನೆವಮಾಡಿಕೊಂಡು ಬಹಳ ತ್ವರೆಯಿಂದ ಬಂದೆ, ೧೨೫. ಎಲೈ ಹರಿಣಾಕ್ಷಿ, ಇದು ನನ್ನ ಸ್ನೇಹಿತನ ಸ್ಥಿತಿ. ಈಗ ಇಷ್ಟು ವಿರಹವೇದನೆಗೆ ಕಾರಣವಾದ ನಿನ್ನ ಮೇಲಿನ ಪ್ರೀತಿಗೆ ಯಾವುದು ಉಚಿತವೋ ಮತ್ತು ನಾನು ಇಷ್ಟುದೂರ ಬಂದಿರುವುದಕ್ಕೂ ನಿನಗೂ ಯಾವುದು ಯೋಗ್ಯವೋ ಅದನ್ನು ಮಾಡುವುದು ನಿನಗೆ ಸೇರಿದೆ. ಇದು ಸತ್ಯ” ಎಂದು ಹೇಳಿ, ಎಲೈ ರಾಜನೆ, ಇದಕ್ಕೆ ಇವಳು ಏನು ಹೇಳುತ್ತಾಳೋ ಕೇಳೋಣ ಎಂದು ನನ್ನ ಮುಖವನ್ನೇ ಮೌನವಾಗಿ ನೋಡುತ್ತಿದ್ದನು. ೧೨೬. ಎಲೈ ರಾಜನೆ, ಅದನ್ನು

ವ|| ಅಂತತೀಂದ್ರಿಯಸೌಖ್ಯಪರಮಕೋಟಿಯನೆಯ್ದಿ ನಾಣೆಱಕದಿಂದಿನಿತುಬೇಗಂ ತಲೆಯಂ ಬಾಗಿರಲೆಮೆಯಂ ಕಪೋಲತಲಮುಮಂ ಮುಟ್ಟದೊಂದಱ ಪಿಂದೊಂದಡಸಿ ಗುಡುಗುಡನೆ ಸುರಿವಾನಂದಜಲಬಿಂದುಗಳೆನ್ನ ನಿರತಿಶಯಹರ್ಷಮಂ ಪ್ರಕಟಿಸುತ್ತಿರಲೆನ್ನೊಳಿಂತೆಂದೆಂ

ಎನಗೆಂತಂತಿರೆ ದೈವದಿಂ ಪ್ರಿಯನೊಳಂ ಸಂತಾಪಮಂ ಮಾಡಿ ತ
ನ್ನನುಕೂಲತ್ವಮನೊಂದು ಮೆಯ್ಯೊಳೆನಗೀಗಳ್ ತೋಱದಂ ನೆಟ್ಟನಾ
ತನೆ ಮುಂ ತಾನಿನಿತೊಂದವಸ್ಥೆಗೊಳಗಾಗಲ್ ಕಾಮನಂ ಬಿಟ್ಟು ಮ
ತ್ತೆನಗಾರ್ ಬಂಧುಗಳಾರ್ ಸಹಾಯಕರುಪಕಾರಂಗೆಯ್ವರಾರಿರ್ದಪರ್     ೧೨೭

ಕನಸಿನೊಳಮೀ ಕಪಿಂಜಲ
ಮುನಿವದನದೊಳನೃತಭಾಷೆ ಪೊಱಮಡದದಱಂ
ದೆನಗಾವುದಿಲ್ಲಿಗುತ್ತರ
ಮೆನುತುಂ ಬಗೆವುತ್ತಮಿರ್ದೆನಿರ್ಪನ್ನೆವರಂ      ೧೨೮

ವ|| ಆಗಳೊರ್ವಳತಿಸಂಭ್ರಮಂಬೆರಸು ದೌವಾರಿಕೆ ಬಂದು ಪೊಡಮಟ್ಟು ರಾಜಪುತ್ರಿ ನೀನಸ್ವಸ್ಥಶರೀರಿಣಿಯಾಗಿರ್ದುದಂ ಪರಿಜನದಿಂ ಕೇಳ್ದು ಮಹಾದೇವಿಯರ್ ನಿನ್ನಲ್ಲಿಗೆ ಬಿಜಯಂ ಗೆಯ್ದಪರೆಂಬುದಂ ಕಪಿಂಜಲಂ ಕೇಳ್ದು ನೆರವಿ ಕವಿತರ್ಪುದೆಂದಂಜಿ ಬೇಗಮೆೞ್ದು

ತಡೆದಿರಬಾರದು ನೇಸೞ್
ಪಡುತಂದುದು ಪೊೞ್ತು ಪೋಯ್ತು ಪೋದಪೆನೆಂತಾ
ದೊಡಮೆನ್ನ ಕೆಳಯನಸುವಂ
ಪಿಡಿವುದು ಸೆಱಗೊಡ್ಡಿ ಬೇಡಿದೆಂ ಮೃಗನಯನೇ          ೧೨೯

ವ|| ಎಂದು ನುಡಿದು ಮಱುಮಾತುಗುಡಲವಸರಮಿಲ್ಲದಿರೆ ಮದೀಯಾಂಬಿಕೆಯ ಮುಂದೆ ಪರಿತರ್ಪ ದೌವಾರಿಕೆಯರಿಂ ಸಹವಾಸಿಗಳಿಂ ಚಾಮರದಡಪದ ಕನ್ನಡಿಯ ಪರಿಚಾರಿಕೆಯರಿಂ ಕೂಡೆ ಸಂದಣಿಸಿದ ಬಾಗಿಲೊಳೆಂತಾನುಂ ನುಸುಳ್ದು ಪೋದನನ್ನೆಗಮಿತ್ತಲ್

ದೀನಾಸ್ಯೆ ಜನನಿ ಬಂದೆನಿ
ತಾನುಂ ಪೊೞರ್ದು ಮನೆಗೆ ಪೋದಳ್ ಗಡ ತಾ
ನೇನೆಂದಳದೇಗೆಯ್ದಳ
ದೇನಾಯ್ತೆಂದಱಯೆನಾಗಳೆರ್ದೆಗೆಟ್ಟವಳೆಂ     ೧೩೦

ನಾನು ಕೇಳಿ ಸುಖವೆಂಬ ಅಮೃತ ಸಮುದ್ರದಲ್ಲಿ ಮುಳುಗಿದವಳಂತೆಯೂ, ಪರಸ್ಪರ ಸಮಾಗಮದಿಂದ ಒದಗಿ ಮಿಗಿಲಾದ ಪ್ರಣಯವನ್ನು ಪಡೆದವಳಂತೆಯೂ, ಅತಿಶಯವಾದ ಆನಂದಸಮೂಹವನ್ನು ಅನುಭವಿಸುತ್ತಿರುವವಳಂತೆಯೂ, ಎಲ್ಲ ಮನೋರಥಗಳೂ ಒಟ್ಟಿಗೆ ಕೈಗೂಡಿದವಳಂತೆಯೂ ಆದೆನು. ವ|| ಹೀಗೆ ಇಂದ್ರಿಯಗಳಿಂದ ಅನುಭವಿಸಲಾರದಷ್ಟು ಸುಖದ ಪರಾಕಾಷ್ಠೆಯನ್ನು ಪಡೆದು, ಲಜ್ಜೆಯಿಂದ ಕೂಡಿದ ಪ್ರೀತಿಯಿಂದ ಸ್ವಲ್ಪಕಾಲ ತಲೆಯನ್ನು ಬಗ್ಗಿಸಿಕೊಂಡಿರಲಾಗಿ ರೆಪ್ಪೆಯನ್ನೂ ಕೆನ್ನೆಯನ್ನೂ ಮುಟ್ಟದೆ, ಒಂದರ ಹಿಂದೆ ಒಂದು ದಟ್ಟವಾಗಿ ಗಳಗಳನೆ ಸುರಿಯುತ್ತಿರುವ ಆನಂದಬಾಷ್ಟದ ಹನಿಗಳು ನನ್ನ ನಿರತಿಶಯವಾದ ಹರ್ಷವನ್ನು ಪ್ರಕಟಪಡಿಸುತ್ತಿರಲಾಗಿ ನನ್ನಲ್ಲಿ ಹೀಗೆ ಆಲೋಚಿಸಿದೆನು. ೧೨೭. ಅದೃಷ್ಟವಿಶೇಷದಿಂದ ಮನ್ಮಥನು ನನಗೆ ಮಾಡಿದಂತೆಯೆ ನನ್ನ ಇನಿಯನಿಗೂ ವಿರಹ ಸಂತಾಪವನ್ನುಂಟುಮಾಡಿ ಒಂದು ಬಗೆಯಿಂದ ನನಗೆ ಸಹಾಯಕತ್ವವನ್ನೇ ಈಗ ತೋರ್ಪಡಿಸಿದ್ದಾನೆ. ನನಗಿಂತ ಮೊದಲು ಅವನೇ ಇಷ್ಟೊಂದು ವಿರಹವ್ಯಥೆಗೆ ಒಳಗಾಗುವಂತೆ ಮಾಡಿರಬೇಕಾದರೆ, ಆ ಕಾಮನನ್ನು ಬಿಟ್ಟು ನನಗೆ ಬೇರೆ ಬಂಧುಗಳು ಯಾರು? ಸಹಾಯಕರು ಯಾರು? ಉಪಕಾರ ಮಾಡುವವರು ತಾನೆ ಯಾರಿದ್ದಾರೆ? ೧೨೮. ಈ ಕಪಿಂಜಲಮುನಿಯ ಬಾಯಿಂದ ಸುಳ್ಳುಮಾತೆಂಬುದು ಕನಸಿನಲ್ಲೂ ಹೊರಡುವುದಿಲ್ಲ. ಅದರಿಂದ ಈಗ ಇವನಿಗೆ ಏನು ಉತ್ತರವನ್ನು ಕೊಡಲಿ ಎಂದು ಆಲೋಚಿಸುತ್ತ ಇರುವಷ್ಟರಲ್ಲಿ, ವ|| ಆಗ ಬಾಗಿಲು ಕಾಯುವವಳೊಬ್ಬಳು ಬಹಳ ಸಡಗರದಿಂದ ಬಂದು ನಮಸ್ಕರಿಸಿ, “ದೊರೆಯ ಮಗಳೆ, ನಿನ್ನ ದೇಹಾರೋಗ್ಯವು ಚೆನ್ನಾಗಿಲ್ಲವೆಂಬುದನ್ನು ಪರಿಜನರಿಂದ ಕೇಳಿ ಮಹಾರಾಣಿಯವರು ನಿನ್ನಲ್ಲಿಗೆ ದಯಮಾಡಿಸುತ್ತಿದ್ದಾರೆ” ಎಂದು ಹೇಳಿದಳು, ಕಪಿಂಜಲನು ಇದನ್ನು ಕೇಳಿಗುಂಪು ಮುತ್ತಿಕೊಳ್ಳುವುದೆಂದು ಹೆದರಿ ಬೇಗನೆ ಎದ್ದು, ೧೨೯. “ಎಲೈ ಮೃಗನಯನೆ, ನಾನು ಇನ್ನು ತಡಮಾಡಬಾರದು. ಸೂರ್ಯನಾಗಲೇ ಮುಳುಗುವುದರಲ್ಲಿದ್ದಾನೆ. ಬಹಳ ಹೊತ್ತಾಯಿತು. ಹೋಗಿಬರುತ್ತೇನೆ. ಹೇಗಾದರೂ ಮಾಡಿ ನನ್ನ ಗೆಳೆಯನ ಜೀವವನ್ನು ಉಳಿಸಮ್ಮ. ನಿನ್ನನ್ನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ವ|| ಎಂದು ಹೇಳಿ ನನಗೆ ಪ್ರತ್ಯುತ್ತರವನ್ನು ಕೊಡಲು ಅವಕಾಶವನ್ನೇ ಕೊಡದೆ ನನ್ನ ತಾಯಿಯ ಮುಂದೆ ಬರುತ್ತಿರುವ, ಬಾಗಿಲುಕಾಯುವ ಹೆಂಗಸರಿಂದಲೂ, ಪರಿಜನರಿಂದಲೂ, ಚಾಮರದ, ಸಂಚಿನ, ಕನ್ನಡಿಯ ಊಳಿಗ ಮಾಡುವ ಹೆಂಗಸರಿಂದಲೂ ತುಂಬಿಹೋಗಿದ್ದ ಬಾಗಿಲಿನಿಂದ ಹೇಗೋ ನುಣುಚಿಕೊಂಡು ಹೊರಟುಹೋದನು. ಅಷ್ಟರಲ್ಲಿ ಈ ಕಡೆ, ೧೩೦. ನನ್ನ ಅನಾರೋಗ್ಯದ ಚಿಂತೆಯಿಂದ ಬಾಡಿದ ಮುಖವುಳ್ಳ ನನ್ನ ತಾಯಿಯು ಬಂದು ಎಷ್ಟೋ ಹೊತ್ತು

ವ|| ಅನ್ನೆಗಮಿತ್ತಲಂಭೋನೀಜೀವಿತೇಶ್ವರನಸ್ತಂಗತನಪ್ಪುದುಂ ಪಾತಾಳಪಂಕಕಲುಷಿತ ಮಹಾಪ್ರಳಯಜಲಗಳ್ ಮೇರೆದಪ್ಪಿ ಕವಿದು ಭುವನಂಗಳೆಲ್ಲಮನೊಳಕೆಯ್ಯಲುಕ್ಕಿ ದುವೆಂಬಂತಿಡಿದಡರೆಗೊಂಡು ಕೞ್ತಲೆ ಕವಿಯೆ ಕಿಂಕರ್ತವ್ಯತಾಮೂಢೆಯೆನಾಗಿ ತರಳಿಕೆಯನಿಂತೆಂದೆಂ

ಮನಮುಮಖಿಳೇಂದ್ರಿಯಂಗಳು
ಮಿನಿಸಪ್ಪೊಡಮೆನ್ನವಲ್ಲಮೇಗೆಯ್ವೆನೊ ಪೇ
ೞೆನಗೀಗಳಾ ಕಪಿಂಜಲ
ಮುನಿ ನಿನ್ನಯ ಮುಂದೆ ನುಡಿದು ಪೋದುದನಱಯಾ     ೧೩೧

ವ|| ಎಂದು ತಾನಿತರಕನ್ಯಕೆಯಂತೆ ನಾಣ್ಗೆಟ್ಟು ಸೈರಣೆಯಂ ಬಿಟ್ಟು ವಿನಯಮನೊಕ್ಕು ಜನಾಪವಾದಮಂ ಮಿಕ್ಕು ನಿಜಾಚಾರಮಂ ಮದು ಶೀಲಮಂ ತೊದು ಕುಲಕ್ರಮಮಂ ಪಾಲಿಸದೆ ರಾಗಾಂಧೆಯೆನಾಗಿ

ಗುರುಜನಮೀಯದೆಯುಂ ಮು
ನ್ನೆರೆವಾತನನೆಯ್ದಿಯೈದೆಯಪ್ಪೊಡೆ ದೋಷಂ
ಪರಿಭಾವಿಸಲೆನಗಿನ್ನದ
ಪರಿಹಾರ್ಯಮೆನಿಪ್ಪುದೊಂದು ಮರಣಂ ಶರಣಂ         ೧೩೨

ಮನೆಗೆ ಬರಲ್ ಕಪಿಂಜಲಮಹಾಮುನಿಗಂ ಮಱುಮಾತನಿತ್ತೆನಿ
ಲ್ಲೆನಗದಱಂದಮಿಂ ಪ್ರಣಯಭಂಗಮದಾವುದೊ ಕೆಟ್ಟೆನತ್ತಲೋ
ಪನುಮಿದನಿಂತೆ ಕೇಳ್ದೊಡೆ ನಿರಾಶೆಯೊಳಕ್ಕಟ ಸಾಗಮಂತಱಂ
ಮುನಿವಧದೋಷಮಾವ ತೆಱದಿಂ ಕಳೆಗುಂ ಕಮಲಾಯತೇಕ್ಷಣ             ೧೩೩

ವ|| ಎಂದು ನುಡಿಯುತ್ತಮಿರ್ಪನ್ನೆಗಂ

ಮುಳಿದು ತಿಮಿರೇಭಕುಂಭ
ಸ್ಥಳಮಂ ಶಶಿಸಿಂಹಮೊತ್ತಿ ಸೀಳಲ್ ಮುಕ್ತಾ
ವಳಿ ಮೇಗೆ ನೆಗೆದುವೆನೆ ಕ
ಣಳಿಸಿದುವತಿವಿಮಲತರಳತಾರಾನೀಕಂ       ೧೩೪

ಕುಳಿತಿದ್ದು, ತನ್ನ ಮನೆಗೆ ಹೊರಟುಹೋದಳು. ಅವಳು ಏನು ಹೇಳಿದಳು? ಏನು ಮಾಡಿದಳು? ಏನು ನಡೆಯಿತು? ಎಂಬುದು ಆಗ ಶೂನ್ಯಹೃದಯಳಾಗಿದ್ದ ನನಗೆ ಗೊತ್ತಾಗಲೇ ಇಲ್ಲ. ವ|| ಅಷ್ಟರಲ್ಲಿ ಈ ಕಡೆ ತಾವರೆಗಳಿಗೆ ಪ್ರಾಣಪ್ರಿಯನಾದ ಸೂರ್ಯನು ಮುಳುಗಲಾಗಿ ಪಾತಾಳಲೋಕದ ಕೆಸರಿನಿಂದ ಕದಡಿಹೋದ, ಮಹಾ ಪ್ರಳಯಕಾಲದ ಸಮುದ್ರಗಳು ಎಲ್ಲೆ ಮೀರಿ ಆವರಿಸಿ, ಪ್ರಪಂಚವನ್ನೆಲ್ಲಾ ಆಕ್ರಮಿಸಿಕೊಳ್ಳಲು ಉಕ್ಕಿಬರುತ್ತಿವೆ ಎಂಬಂತೆವ್ಯಾಪಿಸಿ ಮೇಲೇರಿ ಕತ್ತಲೆಯು ಕವಿಯಲಾಗಿ ನಾನು ಏನು ಮಾಡಬೇಕೆಂದು ದಿಕ್ಕುತೋಚದವಳಾಗಿ ತರಳಿಕೆಯನ್ನು ಕುರಿತು ಹೀಗೆ ಹೇಳಿದೆನು. ೧೩೧. “ನನ್ನ ಮನಸ್ಸೂ ಎಲ್ಲಾ ಇಂದ್ರಿಯಗಳೂ ಈಗ ಸ್ವಲ್ಪವೂ ನನ್ನ ಸ್ವಾನದಲ್ಲಿಲ್ಲ. ನಾನೀಗ ಏನು ಮಾಡಲಿ ನೀನೇ ಹೇಳು. ಕಪಿಂಜಲಮುನಿಯು ನಿನ್ನ ಎದುರಿನಲ್ಲೇ ಹೇಳಿಹೋಗಿರುವುದು ನಿನಗೆ ಗೊತ್ತೇ ಇದೆಯಲ್ಲ.” ವ|| ಹೀಗೆ ನಾನು ನಾಡಾಡಿ ಹುಡುಗಿಯಂತೆ ನಾಚಿಕೆಯನ್ನು ಬಿಟ್ಟು, ವಿನಯವನ್ನು ದೂರಮಾಡಿ, ಜನಾಪವಾದವನ್ನು ದೂರೀಕರಿಸಿ, ನಮ್ಮ ಸಂಪ್ರದಾಯವನ್ನು ಮರೆತು, ಶೀಲವನ್ನು ಬಿಟ್ಟು, ಕುಲಪದ್ಧತಿಯನ್ನು ಪರಿಪಾಲಿಸದೆ, ಅನುರಾಗದಿಂದ ಕುರುಡಿಯಂತಾಗಿ, ೧೩೨. ಹಿರಿಯರು ಕನ್ಯಾದಾನ ಮಾಡುವುದಕ್ಕೆ ಮೊದಲೇ ಪ್ರಿಯಕರನನ್ನು ಸೇರಿ, ಮದುವೆ ಮಾಡಿಕೊಂಡರೆ ಅಧರ್ಮವುಂಟಾಗುತ್ತದೆ. ನನಗಂತೂ ಗುರುಹಿರಿಯರನ್ನು ಮೀರುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಆದುದರಿಂದ ಇನ್ನು ನನಗೆ ಮರಣವೇ ಗತಿ. ೧೩೩. ಕಪಿಂಜಲಮಹರ್ಷಿಯು ತಾನಾಗಿಯೇ ಮನೆಗೆ ಬಂದರೆ ಅವನಿಗೆ ನಾನು ಪ್ರತ್ಯುತ್ತರವನ್ನೇ ಕೊಡಲಿಲ್ಲ. ಅದಕ್ಕಿಂತಲೂ ಬೇರೆ ಪ್ರೀತಿಭಂಗವಿದೆಯೇ? ಆ ಕಡೆ ನನ್ನ ಇನಿಯನು ಈ ರೀತಿ ನಾನು ಮಾಡಿದ್ದನ್ನು ಹೀಗೆಯೆ ಕೇಳಿದರೆ, ನಿರಾಶೆಯಿಂದ ಪ್ರಾಣಬಿಡುತ್ತಾನೆ. “ಎಲೈ ಕಮಲದಂತೆ ವಿಶಾಲವಾದ ಕಣ್ಣುಳ್ಳವಳೆ, ಇದರಿಂದ ಉಂಟಾದ ಮುನಿಹತ್ಯಾದೋಷವನ್ನು ಹೇಗೆ ನಾನು ಪರಿಹರಿಸಿಕೊಳ್ಳಲಿ? ಅಂತೂ ನಾನು ಕೆಟ್ಟೆ”. ವ|| ಎಂದು ಮಾತನಾಡುತ್ತಿರಲಾಗಿ, ೧೩೪. ಕತ್ತಲೆಯೆಂಬ ಆನೆಯ ಕುಂಭಸ್ಥಳವನ್ನು ಚಂದ್ರನೆಂಬ ಸಿಂಹವು ಅಮುಕಿ ಸೀಳಲಾಗಿ ಅಲ್ಲಿದ್ದ ಮುತ್ತುಗಳು ಮೇಲಕ್ಕೆ ಸಿಡಿಯುತ್ತಿವೆಯೇ ಎಂಬಂತೆ ಬಹಳ
ಕುಸುಮರಜದಿಂದೆ ಸೊಗಯಿಪ
ವಸಂತವನರಾಜಿಯಂತೆ ಚಂದ್ರೋದಯಮಿ
ನ್ನೆಸೆದಪುದೆನೆ ನಸುವೆಳಗಿಂ
ಮಸಗಿದುದಿನಿಸಿಂದ್ರದಿಗ್ವಧೂಮುಖಬಿಂಬಂ    ೧೩೫

ವ|| ತದನಂತರಂ

ಇಳೆಯಂ ನೋಡಲ್ಕೆ ರಸಾ
ತಳದಿಂ ಪೊಱಮಡುವ ನಾಗರಾಜನ ಪೆಡೆಯೊಳ್
ಪೊಳೆವರುಣಕಿರಣಮಣಿಮಂ
ಡಳದಂದದಿನೆಸೆದುದಿಂದುಮಂಡಳಮಾಗಳ್             ೧೩೬

ಪುರುಡಿಂ ಕಾಯ್ದೊದೆಯಲ್ಕೆ ರೋಹಿಣಿಯ ಪಾದಾಲಕ್ತಕಂ ಮೆಯ್ಯೊಳಾ
ವರಿಸಿತ್ತೊ ವಿಕಟಾಬ್ದಿವಿದ್ರುಮಮಯೂಖಂ ತಳ್ತುದೋ ಪೂರ್ವಭೂ
ಧರಸಿಂಹಂ ಪೊಯೆ ನೊಂದುದೋ ಹರಿಣನೆಂಬಂತಾಗಳತ್ಯಂತ ಸುಂ
ದರಮಾಗಿರ್ದುದು ಕಣ್ಗೆ ರಕ್ತರುಚಿಯಂ ಬಿಂಬಂ ಸುಧಾಸೂತಿಯಾ           ೧೩೭

ವ|| ಅಂತಭಿನವೋದಯ ರಾಗರಂಜಿತನಪ್ಪ ರಜನಿಕರನಂ ನೋಡಲೊಡಮತ್ಯುಜ್ವಲ ಮದನಾನಲ ಜ್ವಾಲಾಕಲಾಪೆಯಾಗಿಯುಮಂಧಕಾರ ಹೃದಯೆಯೆನೆನ್ನಳಿಂತೆಂದೆಂ

ಇತ್ತ ವಸಂತನಿತ್ತ ಮಲಯಾನಲನಿತ್ತ ಮಧುವ್ರತಾಳಿ ಮ
ತ್ತಿತ್ತ ಮದೋತ್ಕ ಕೋಕಿಲಕದಂಬಕವೆಯ್ದೆ ವಿಜೃಂಭಿಸಿತ್ತು ತಾ
ನಿತ್ತಲಡರ್ದು ಚಂದ್ರಹತಕಂ ತಲೆದೋಱದನೋವೊ ಕೆಟ್ಟೆನೀ
ಚಿತ್ತಜತಾಪವಗ್ಗಲಿಸಿದಪ್ಪುದು ಮದ್ಧ ದಯಾಂತರಾಳದೊಳ್        ೧೩೮

ಉದಯಿಸಲಿಂದು ಚಂದ್ರಹತಕಂ ವಿಷಮಜ್ವರಿತಂಗೆ ಮತ್ತೆ ಕೆಂ
ಡದ ಮೞೆ ಕೊಂಡುದಗ್ಗಲಿಸಿದೈಕಿಲವಂಗೆ ಹಿಮಪ್ರಪಾತಮಾ
ದುದು ಪಿರಿದಪ್ಪ ನಂಜು ಪುಗುಳುರ್ಬಿದವಂಗಸಿತಾಹಿದಂಶಮಾ
ದುದು ದಿಟವೆಂದು ತಲ್ಲಣದಿನಾಗಳೆ ಬೋಂಕನೆ ಮೂರ್ಛೆವೋಪುದುಂ      ೧೩೯

ಸ್ವಚ್ಛವಾದ ಮಿರುಗುವ ನಕ್ಷತ್ರಪುಂಜವು ಕಂಗೊಳಿಸಿತು. ೧೩೫. ಹೂವುಗಳ ಪರಾಗದಿಂದ ಸುಂದರವಾಗಿ ಕಾಣುವ ಅರಣ್ಯಪಂಕ್ತಿಯಂತೆ ಪೂರ್ವದಿಕ್ಕೆಂಬ ರಮಣಿಯ ಮುಖವು ಉದಯಿಸಲಿರುವ ಚಂದ್ರನ ನಸುಬೆಳಕಿನಿಂದ ರಂಜಿಸಿತು. ವ|| ಬಳಿಕ, ೧೩೬. ಆಗತಾನೆ ಹುಟ್ಟಿದ ಚಂದ್ರಮಂಡಲವು ಭೂಮಿಯನ್ನು ನೋಡಬೇಕೆಂಬ ಕುತೂಹಲದಿಂದ ಪಾತಾಳಲೋಕದಿಂದ ಮೇಲಕ್ಕೆ ಬಂದ ಆದಿಶೇಷನ ಹೆಡೆಯಲ್ಲಿ ಹೊಳೆಯುವ ಕೆಂಪುಕಾಂತಿಯಿಂದ ಕೂಡಿಕೊಂಡಿರುವ ರತ್ನಗಳ ವರ್ತುಲದಂತೆ ಶೋಭಿಸಿತು. ೧೩೭. ಪ್ರಣಯಕಲಹದಲ್ಲಿ ಅಸೂಯೆಯಿಂದ ಕೋಪಿಸಿಕೊಂಡು ರೋಹಿಣಿಯು ಒದೆಯಲಾಗಿ ಅವಳ ಕಾಲಿನ ಅರಗಿನ ರಸವು ಶರೀರದಲ್ಲೆಲ್ಲಾ ಲೇಪಿಸಿಕೊಂಡಿರುವಂತೆಯೂ, ಅಗಾಧವಾದ ಸಮುದ್ರದ ಹವಳಗಳ ಕಾಂತಿಯು ಹರಡಿಕೊಂಡಿರುವಂತೆಯೂ, ಪೂರ್ವಪರ್ವತವೆಂಬ ಸಿಂಹವು ಹೊಡೆಯಲಾಗಿ ಚಂದ್ರಮಂಡಳದಲ್ಲಿದ್ದ ಜಿಂಕೆಯ ಶರೀರದಿಂದ ಹೊರಹೊಮ್ಮಿದ ರಕ್ತದಿಂದ ನೆನೆದಿದೆಯೋ ಎಂಬಂತೆ ಚಂದ್ರಬಿಂಬವು ಕೆಂಪುಕಾಂತಿಯಿಂದ ಕಣ್ಣಿಗೆ ಸುಂದರವಾಗಿ ಕಂಡಿತು. ವ|| ಹೀಗೆ ಹೊಸದಾದ ಉದಯರಾಗದಿಂದ ಕೆಂಪಾದ ಚಂದ್ರನನ್ನು ನೋಡಿದ ಕೂಡಲೆ ಅತಿಯಾಗಿ ಉರಿಯುತ್ತಿರುವ ಕಾಮಾಗ್ನಿ ಜ್ವಾಲೆಯ ಸಮೂಹದಿಂದ ಕೂಡಿದವಳಾಗಿದ್ದರೂ ಅಂಧಕಾರಮಯವಾದ ಹೃದಯವುಳ್ಳವಳಾಗಿ ನನ್ನಲ್ಲೇ ಹೀಗೆ ಆಲೋಚಿಸಿದೆನು. ಟಿ. ಬೆಂಕಿ ಉರಿಯುವ ಸ್ಥಳವು ಅಂಧಕಾರವಾದುದು ಹೇಗೆ? ಎಂಬ ವಿರೋಧವು ಅಂಧಕಾರವೆಂಬ ಪದಕ್ಕೆ ಏನೂ ತೋಚದ ಎಂಬ ಅರ್ಥ ಹೇಳುವುದರಿಂದ ಪರಿಹಾರವಾಗುತ್ತದೆ. ೧೩೮. ಈ ಕಡೆ ವಸಂತಋತು, ಈ ಕಡೆ ಮಲಯಮಾರುತ, ಈ ಕಡೆ ದುಂಬಿಗಳ ಗುಂಪು, ಈ ಕಡೆ ಮದವೇರಿ

ಮೈಮರೆತ ಕೋಕಿಲೆಗಳ ಗುಂಪು, ಇವೆಲ್ಲವೂ ಬಹಳವಾಗಿ ಮೆರೆಯುತ್ತಿವೆ. ಸಾಲದುದಕ್ಕೆ ಈ ನೀಚ ಚಂದ್ರನು ಮೇಲಕ್ಕೇರಿ ತಲೆದೋರಿದ್ದಾನೆ. ಅಯ್ಯೋ ಕೆಟ್ಟೆ. ಈ ವಿರಹಸಂತಾಪವು ನನ್ನ ಮನಸ್ಸಿನೊಳಗೆ ಹೆಚ್ಚುತ್ತಿದೆ. ೧೩೯. ಈಗ ನೀಚನಾದ ಚಂದ್ರನು ಹುಟ್ಟಲಾಗಿ ಮೊದಲೆ ವಿಷಮಜ್ವರಪೀಡಿತನಾದವನ ಮೇಲೆ ಕೆಂಡದ ಮಳೆ ಬೇರೆ ಸುರಿದಂತೆಯೂ, ಹೆಚ್ಚಾದ ಶೀತವುಳ್ಳವನ

ವ|| ಆಗಳತಿಸಂಭ್ರಮಂಬೆರಸು ತರಳಿಕೆ ತಂದ ಚಂದನದ ಚರ್ಚೆಗಳಿಂ ಮೆತ್ತಮನೇಕ ಶಿಶಿರೋಪಚಾರಂಗಳಿಂದುಪಚರಿಸಲದಱನೆಂತಾನುಂ ಮೂರ್ಛೆಯಿಂದೆಚ್ಚೆತ್ತು

ಅೞಲಗ್ಗಳಿಸಲ್ ಕಣ್ಣೀರ್
ಗೞಗೞಸಿ ಕಪೋಲಯುಗಳದಿಂ ಪೆರ್ಮೊಲೆಗಾ
ಗಿೞತರ್ಪಿನಮೆನ್ನಂ ಪಿಡಿ
ದೞುತಿರ್ದಳನಿನಿಸು ನೋಡಿದೆಂ ತರಳಿಕೆಯಂ           ೧೪೦

ವ|| ಅಂತು ನೋೞ್ಪುದುಂ ಚಂದನಪಂಕಾರ್ದ್ರಂಗಳಪ್ಪ ಕರಕಮಲಂಗಳಂ ಮುಗಿದು

ಇನಿತಂ ಪ್ರಾರ್ಥಿಪೆನಕ್ಕ ನಿನ್ನನುೞ ನೀಂ ಲಜ್ಜಾಭರಾವೇಶಮಂ
ನಿನಗೀ ತಂದೆಯ ತಾಯೊಳಪ್ಪ ಭಯಮೇಕೇೞ್ ಪೋಪಮಾನಾ ನಿ
ನ್ನೆನಿತಂ ನೋಡುತಮಿರ್ಪೆ ನೀನಕರುಣಂ ಮೇಣ್ ಪೋಗು ನೀನೆಂದು ಪೇೞ್
ಮನದಿಂ ಮುನ್ನಮೆ ಪೋಗಿ ನಿನ್ನಿನಿಯನಂ ತಂದಪ್ಪೆನಬ್ಜಾನನೇ             ೧೪೧

ವ|| ಎಂದು ತರಳಿಕೆ ನುಡಿಯೆ

ಇದನೇನೆಂದಪ್ಪೆ ನಾಣೇಂ ಗುರುಗಳುಮೆನಗಿನ್ನೇಕೆ ಪೇೞ್ ಮೃತ್ಯುವೋಲ್ ಮೂ
ಡಿದನಲ್ತೇ ಚಂದ್ರನುಂ ತಾನಿರದೆ ಕರುಣದಿಂದೊಯ್ವೊಡೇಳ್ ಪೋಪಮೀ ದೇ
ಹದೊಳಿಂದೀ ಪ್ರಾಣಮುಳ್ಳನ್ನೆಗಮೆ ತಡೆಯದಾತ್ಮೇಶನಂ ಕಾಣ್ಬೆನೋ ಪು
ಣ್ಯದಿನೆಂದಾಂ ಚೇ,ಟೆಗೆಟ್ಟಂದವಳನೆ ಪಿಡಿದಲ್ಲಿಂದಮೆಂತಾನುಮೆೞ್ದಂ       ೧೪೨

ವ|| ಅಂತೇೞಲೊಡನೆ

ಬಿದಿ ಮತ್ತೇನನಿದಂ ತೋ
ಱದಪನೊ ಪಾತಕಿಗೆನುತ್ತೆ ಭಯಮಂ ಚಿತ್ತ
ಕ್ಕೊದವಿಸಿ ಬಲಗಣ್ ಕೆತ್ತಲ್
ಮೊದಲಿಕ್ಕಿತು ದುರ್ನಿಮಿತ್ತಸೂಚಕಮಾರ್ಗಳ್           ೧೪೩

ಅದನೇವೇೞೆ ನನಂತರಂ ತ್ರಿಭವನಪ್ರಾಸಾದರಮ್ಯಪ್ರಣಾ
ಳದವೋಲ್ ಕಣ್ಗೆಸೆವಿಂದುಮಂಡಲದಿನೇಂ ಗಂಗಾಪ್ರವಾಹಂಗಳು
ಣ್ಮಿದುವೋ ಚಂದನವಾರಿಪೂರಮಿೞದತ್ತೋ ಕ್ಷೀರವಾರಾಶಿ ಪೊ
ಣ್ಮಿದುದೋ ಪೇೞೆನೆ ಲೋಕದೊಳ್ ಕವಿದು ಪರ್ವಿತ್ತಂದು ಚಂದಾತಪಂ    ೧೪೪

ಮೇಲೆ ಮಂಜು ಸುರಿದಂತೆಯೂ, ದೊಡ್ಡದಾದ ವಿಷದ ಗುಳ್ಳೆಯೆದ್ದವನಿಗೆ ಹಾವು ಕಚ್ಚಿದಂತೆಯೂ ನಿಜವಾಗಿ ಆದಂತಾಯಿತು ಎಂದು ತಲ್ಲಣಿಸುತ್ತ ನಾನು (ಮಹಾಶ್ವೇತೆ) ಮೂರ್ಛೆ ಹೋಗಲಾಗಿ, ವ|| ಆಗ ಬಹಳ ಚುರುಕಿನಿಂದ ಹೋಗಿ ತರಳಿಕೆ ತಂದ ಶ್ರೀಗಂಧಲೇಪನಗಳಿಂದಲೂ ಮತ್ತು ಅನೇಕ ಶೈತ್ಯೋಪಚಾರಗಳಿಂದಲೂ ಚಿಕಿತ್ಸೆ ನಡೆಯಲು ಅದರಿಂದ ಹೇಗೋ ಮೂರ್ಛೆಯಿಂದ ಎಚ್ಚೆತ್ತು ೧೪೦. ಮನಸ್ಸಿನ ವಿಷಾದವು ಹೆಚ್ಚಲಾಗಿ, ಕಣ್ಣೀರು ಗಳಗಳನೆ ಕೆನ್ನೆಗಳ ಮೇಲಿಂದ ಕುಚಗಳ ಮೇಲೆ ಇಳಿಯುತ್ತಿರಲಾಗಿ ನನ್ನನ್ನು ಹಿಡಿದುಕೊಂಡು ಅಳುತ್ತಿರುವ ತರಳಿಕೆಯನ್ನು ನೋಡಿದೆನು. ವ|| ಹಾಗೆ ನೋಡಲಾಗಿ ನನ್ನ ಶರೀರಕ್ಕೆ ಶ್ರೀಗಂಧವನ್ನು ಲೇಪನ ಮಾಡಿದ್ದರಿಂದ ಇನ್ನೂ ಒದ್ದೆಯಾಗಿರುವ ಕೈಗಳನ್ನು ಮುಗಿದು ೧೪೧. “ಅಕ್ಕ! ನಿನ್ನನ್ನು ಇಷ್ಟು ಮಾತ್ರ ಬೇಡಿಕೊಳ್ಳುತ್ತೇನೆ. ನೀನು ಅತ್ಯಕ ನಾಚಿಕೆಯನ್ನು ಬಿಟ್ಟುಬಿಡು. ನಿನಗೆ ಈ ತಂದೆ ತಾಯಿಗಳ ಭಯವಿನ್ನೇಕೆ? ಏಳು ಹೋಗೋಣ, ನಾನು ನೋಡಲಾರೆ ಇನ್ನೆಷ್ಟು ಹೊತ್ತು ಅವನ ಮೇಲೆ ಕನಿಕರವಿಲ್ಲದೆ ಹೀಗೆ ಸುಮ್ಮನೆ ನೋಡುತ್ತಿರುತ್ತೀಯೆ? ಎಲೈ ಕಮಲಮುಖಿ, ಅಥವಾ ನೀನು ಹೋಗಿ ಬಾ ಎಂದು ನನಗೆ ಹೇಳು. ನಾನು ಮನಸ್ಸಿಗಿಂತಲೂ ಮೊದಲೆ ಹೋಗಿ ನಿನ್ನ ನಲ್ಲನನ್ನು ಕರೆತರುತ್ತೇನೆ. ವ|| ಎಂದು ತರಳಿಕೆಯು ಹೇಳಲಾಗಿ ೧೪೨. ಇದೇನು ಹೇಳುತ್ತೀಯೆ? ನಾಚಿಕೆಯೇತಕ್ಕೆ? ಇನ್ನು ಹಿರಿಯರನ್ನು ಕಟ್ಟಿಕೊಂಡೇನು? ಹೇಳು. ಮೃತ್ಯುವಿನಂತೆ ಈ ಚಂದ್ರನೂ ಉದಯಿಸಿಬಿಟ್ಟಿದ್ದಾನೆ. ನೀನು ವಿಳಂಬಮಾಡದೆ ಕರುಣೆಯಿಂದ ನನ್ನನ್ನು ಕರೆದುಕೊಂಡು ಹೋಗುವುದಾದರೆ ಏಳು ಹೋಗೋಣ. ಇಂದು ನನ್ನ ದೇಹದಲ್ಲಿ ಪ್ರಾಣವಿರುವುದರೊಳಗಾಗಿ ಪುಣ್ಯದಿಂದ ಪ್ರಾಣಕಾಂತನನ್ನು ನೋಡಲಾಗುತ್ತದೆಯೊ ಇಲ್ಲವೊ ಕಾಣೆನಲ್ಲ! ಎಂದು ಚಲನಶಕ್ತಿಗುಂದಿ ಅವಳನ್ನೇ ಹಿಡಿದುಕೊಂಡು ಅಲ್ಲಿಂದ ಹೇಗೋ ಎದ್ದೆನು. ವ|| ಹಾಗೆ ಏಳಲಾಗಿ ಕೂಡಲೆ ೧೪೩. ಆಗ ನನ್ನ ಬಲಗಣ್ಣು ಹಾರಲು ಮೊದಲಿಕ್ಕಿತು. ಅದು ಅಪಶಕುನವಾದುದರಿಂದ ವಿಯು ಈ ಪಾಪಿಷ್ಠಳಿಗೆ ಮತ್ತಾವ ಅನಿಷ್ಠವನ್ನುಂಟುಮಾಡುತ್ತಾನೋ ಎಂಬ ಭಯವು ನನ್ನ ಮನಸ್ಸಿನಲ್ಲುಂಟಾಯಿತು. ೧೪೪. ಬಳಿಕ ಮೂರುಲೋಕವೆಂಬ ಉಪ್ಪರಿಗೆಮನೆಯ

ವ|| ಅಂತು ಪರ್ವಿದ ಬೆಳ್ದಿಂಗಳೊಳಖಿಳಜನಮೆಲ್ಲಂ ಶ್ವೇತದ್ವೀಪದೊಳಿರ್ದಂತಿರಲಾ ರಾತ್ರಿಯೊಳ್ ಮದನವಿಹ್ವಲತೆಯಿಂ ಮೂರ್ಛೆವೋದೆನ್ನನೆಚ್ಚಱಸಲೆಂದು ನೊಸಲೊಳಿಕ್ಕಿದ ಮಂದವಪ್ಪ ಚಂದನದಣ್ಪಿನಿಂ ಪತ್ತಿ ಪಗಿಲ್ತು ಬೆಳ್ಕರಿಸಿದಳಕನಿಕರಮುಂ ಮುನ್ನಮೆ ಕೊರಳೊಳಿಕ್ಕಿರ್ದಕ್ಷಾವಳಿಯುಂ ಕಿವಿಯೊಳಿಕ್ಕಿರ್ದ ಪಾರಿಜಾತಕುಸುಮಮಂಜರಿಯುಂ ಪದ್ಮರಾಗಮಣಿಕಿರಣದಂತಿರ್ದ ರಕ್ತಾಂಶಮುಮೆನ್ನೊಳಳವಡೆ ಗೃಹೀತ ವಿವಿಧ ಕುಸುಮ ತಾಂಬೂಲರಾಶಿಯುಮಪ್ಪ ತರಳಿಕೆವೆರಸು ಮದೀಯ ಪರಿಚಿತ ಪರಿಜನಮುಮಱಯದಂತು ಕರುಮಾಡದಿಂದವನಿತಳಕ್ಕವತರಿಸಿ

ಶ್ರವಣನತ ಪಾರಿಜಾತ
ಸ್ತವಕೋದ್ಗತ ಪರಿಮಳಕ್ಕೆ ನಂದನಭೃಂಗೀ
ನಿವಹಂ ಕವಿದೆನ್ನ ಮುಸುಂ
ಕುವಿನಂ ಪೊಱಮಟ್ಟೆನಾಗಳತಿಸಂಭ್ರಮದಿಂ     ೧೪೫

ವ|| ಅಂತು ತರಳಿಕೆವೆರಸು ಪ್ರಮದವನಪಕ್ಷದ್ವಾರದಿಂ ಪೊಱಮಟ್ಟು ಪೋಗುತ್ತುಂ ಪರಿಜನವಿರಹಿತೆಯೆನೆ ನ್ನೊಳಿಂತೆಂದೆಂ

ಸರಭಸವಾಗಳೇಱಸಿದ ಬಿಲ್ವೆರಸಂಗಜನೆನ್ನ ಪಕ್ಕದೊಳ್
ಬರುತಿರೆ ಲಜ್ಜೆ ಪಿಂದೆ ನಿಲೆ ಮುಂದೆ ಮದಿಂದ್ರಿಯವರ್ಗಮಾವಗಂ
ಪರಿಯೆ ನಿಶಾಕರಂ ನಿಜಕರೋತ್ಕರದಿಂ ಪಿಡಿದೊಯ್ಯೆ ಬೇಱ ಪೇೞ್
ಪರಿಜನಮೇವುದಿಂ ಮಱಸಿ ಪೋಪೆನಗಿಂತುಟೆ ದಲ್ ಪರಿಗ್ರಹಂ             ೧೪೬

ವ|| ಎಂದೆನ್ನೊಳ್ ಚಿಂತಿಸುತ್ತಂ ತರಳಿಕೆಯನಿಂತೆಂದೆಂ

ಎಂತೀಗಳೆನ್ನನೊಯ್ದಪ
ನಂತೋಪದೆ ಕರಕಚಗ್ರಹಂಗೆಯ್ದು ನಿಶಾ
ಕಾಂತಂ ತಡೆಯದೆ ನಮಗಿದಿ
ರೇಂ ತರ್ಕುಮೆ ಜೀವಿತೇಶನಂ ತರಳಾಕ್ಷೀ     ೧೪೭

ವ|| ಎಂಬುದುಂ ತರಳಿಕೆ ಮುಗುಳ್ನಗೆನಗುತ್ತುಮೆನ್ನನಿಂತೆಂದಳ್

ಮೇಲಿರುವ ನೀರು ಹೋರಕ್ಕೆ ಬರಲು ಮಾಡಿರುವ ರಮಣೀಯವಾದ ಗೋಳಾಕಾರದ ಕಂಡಿಯಂತೆ ಶೋಭಿಸುವ ಚಂದ್ರಮಂಡಲದಿಂದ ಗಂಗಾಫ್ರವಾಹಗಳು ಹೊರಹೊಮ್ಮುತ್ತಿವೆಯೋ ಎಂಬಂತೆಯೂ, ಗಂಧೋದಕದ ಪ್ರವಾಹವು ಇಳಿದುಬರುತ್ತಿದೆಯೋ ಎಂಬಂತೆಯೂ ಕ್ಷೀರಸಮುದ್ರವು ಉಕ್ಕುತ್ತಿದೆಯೋ ಎಂಬಂತೆಯೂ ಬೆಳದಿಂಗಳು ಲೋಕದಲ್ಲೆಲ್ಲಾ ಕವಿದು ಹರಡಿತ್ತು. ಅದನ್ನು ಏನು ಹೇಳಲಿ?

ವ|| ಹಾಗೆ ಹರಡಿರುವ ಬೆಳದಿಂಗಳಿನಲ್ಲಿ ಜನರೆಲ್ಲರೂ ಶ್ವೇತದ್ವೀಪದಲ್ಲಿರುವಂತೆ ಕಾಣುತ್ತಿರಲು ಆ ರಾತ್ರಿಯಲ್ಲಿ ವಿರಹವೇದನೆಯ ಕಳವಳದಿಂದ ಮೂರ್ಛೆ ಹೋಗಿದ್ದ ನನ್ನನ್ನು ಎಚ್ಚರಿಸುವುದಕ್ಕಾಗಿ ಹಣೆಗೆ ಬಳಿದಿದ್ದ ದಟ್ಟವಾದ ಬಿಳಿಗಂಧದ ಲೇಪನದಲ್ಲಿ ಸೇರಿ ಅಂಟಿಕೊಂಡು ಬಿಳುಪಾದ ಮುಂಗುರುಳೂ, ಮೊದಲೆ ಕೊರಳಲ್ಲಿ ಹಾಕಿಕೊಂಡಿದ್ದ ಜಪಸರವೂ, ಕಿವಿಯ ಮೇಲೆ ಏರಿಸಿದ್ದ ಪಾರಿಜಾತಕುಸುಮದ ಗೊಂಚಲೂ, ಪದ್ಮರಾಗಮಣಿಯ ಕಿರಣಗಳಂತಿದ್ದ ಕೆಂಪು ಮೇಲುಹೊದಿಕೆಯೂ ನನ್ನಲ್ಲಿ ಅಳವಟ್ಟಿರಲು ನಾನಾ ಬಗೆಯ ಹೂವು ತಾಂಬೂಲಗಳನ್ನು ತೆಗೆದುಕೊಂಡು ಹೊರಟಿರುವ ತರಳಿಕೆಯೊಂದಿಗೆ ಕೂಡಿಕೊಂಡು ನನ್ನ ಪರಿಜನರಾರೂ ಅರಿಯದಂತೆ ಮಹಡಿಯಿಂದ ಭೂಮಿಗೆ ಇಳಿದು ೧೪೫. ನನ್ನ ಕಿವಿಯಲ್ಲಿರುವ ಪಾರಿಜಾತಕುಸುಮದ ಗೊಂಚಲಿನಿಂದ ಹೊರಡುತ್ತಿರುವ ಪರಿಮಳಕ್ಕೆ ಉದ್ಯಾನವನದಲ್ಲಿರುವ ದುಂಬಿಗಳ ಸಮೂಹವು ಆವರಿಸಿ ಮುತ್ತುತ್ತಿರಲಾಗಿ ನಾನು ಬಹಳ ಸಡಗರದಿಂದ ಹೊರಟೆನು. ವ|| ಹಾಗೆ ತರಳಿಕೆಯಿಂದ ಕೂಡಿಕೊಂಡು ಉದ್ಯಾನವನದ ಪಕ್ಕದ ಬಾಗಿಲಿನಿಂದ ಮತ್ತಾವ ಊಳಿಗದವರನ್ನೂ ಕರೆದುಕೊಳ್ಳದೆ ಹೊರಟುಹೋಗುತ್ತಾ ನನ್ನಲ್ಲೇ ಹೀಗೆ ಆಲೋಚಿಸಿದೆನು. ೧೪೬. ಬಹಳ ವೇಗವಾಗಿ ಹೆದೆಯೇರಿಸಿದ ಬಿಲ್ಲಿನಿಂದ ಕೂಡಿಕೊಂಡಿರುವ ಮನ್ಮಥನು ನನ್ನ ಪಕ್ಕದಲ್ಲೇ ಬರುತ್ತಿದ್ದಾನೆ. ನಾಚಿಕೆಯು ನನ್ನ ಹಿಂದೆ ನಿಂತಿದೆ, ಮುಂದೆ ನನ್ನ ಇಂದ್ರಿಯಗಳು ಒಂದೇ ಸಮನೆ ಹೋಗುತ್ತಿವೆ. ಚಂದ್ರನು ತನ್ನ ಕಿರಣಗಳೆಂಬ ಕೈಗಳಿಂದ ಹಿಡಿದು ನಡೆಸಿಕೊಂಡು ಹೋಗುತ್ತಿದ್ದಾನೆ. ಇವರೆಲ್ಲ ನನ್ನ ಪರಿವಾರದವರಂತೆ ಇರುವಾಗ ನನಗೆ ಇನ್ನು ಬೇರೆ ಪರಿಜನರು ಏಕೆ? ಯಾರಿಗೂ ಕಾಣದಂತೆ ಇನಿಯನನ್ನು ಅರಸಿಕೊಂಡು ಹೋಗುವ ನನಗೆ ಇಂತಹುದೇ ಪರಿವಾರ. ವ|| ಎಂದು ನನ್ನಲ್ಲೇ ಆಲೋಚಿಸುತ್ತಾ ತರಳಿಕೆಯನ್ನು ಕುರಿತು ಹೀಗೆ ಹೇಳಿದೆನು. ೧೪೭. “ಎಲೈ ಚಂಚಲಾಕ್ಷಿ, ಈ ಚಂದ್ರನು ಹೇಗೆ ಈಗ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದಾನೊ ಹಾಗೆಯೆ ನನ್ನ ಪ್ರಾಣಕಾಂತನನ್ನೂ ದಾಕ್ಷಿಣ್ಯವಿಲ್ಲದೆ ಕೈಯನ್ನೂ ಕೂದಲನ್ನೂ ಹಿಡಿದುಕೊಂಡು ತಡಮಾಡದೆ ಕರೆದುಕೊಂಡು ಬಂದು ನಮ್ಮ ಮುಂದೆ ನಿಲ್ಲಿಸುತ್ತಾನೆಯೆ?” ವ|| ಎಂದು ಹೇಳಲು

ಎಲೆ ಮುಗ್ದೆ ಚಂದ್ರಮಂ ಕಾ
ದಲನಂ ತಂದಪನೆ ತಾನೆ ಮುನ್ನಿನ್ನಂ ಕಾ
ಣಲೊಡಂ ಮನ್ಮಥಶರವಿ
ಹ್ವಲಿತನವೋಲ್ ನೋಡ ನೆಗೞುತಿರ್ದಪನಲ್ತೇ           ೧೪೮

ವ|| ಅದೆಂತೆಂದೊಡೆ

ಪ್ರತಿಬಿಂಬವ್ಯಾಜದಿಂ ನಿನ್ನಯ ಕದಪುಗಳಂ ಚುಂಬಿಸುತ್ತಂ ಕಲಾಪಂ
ಚಿತ್ತರತ್ನಾನೀಕಮಂ ಸೋಂಕುತಮೆಸೆವ ಕುಚಾಭೋಗದೊಳ್ ನಿಂದು ಮೇಲ್ವಾ
ಯುತಮುದ್ಯತ್ಕಾಂತಿ ಚಂಚನ್ನಖಗತತನುವೆಂತುಂ ಬಿಡಂ ಪತ್ತಿ ಕಾಲಂ
ಸತಿ ಬೀೞರ್ದಪ್ಪನಿಂತೀತನ ತೆಱನನಿದಂ ಕಾಣೆ ನೀನುತ್ಪಲಾಕ್ಷೀ                       ೧೪೯

ವ|| ಅದಲ್ಲದೆಯುಂ ವಿರಹವಿಹ್ವಲತೆಯಿಂ ಚಂದನಾನುಲಿಪ್ತನಾದಂತೆ ಬೆಳರ್ಪಿನಾವರಿಸಿಯುಂ ಮಾರ್ತೊಳಪ ನೆವದಿಂ ಪಳುಕಿನ ಪಾಸರೆಗಳೊಳ್ ಮೆಯ್ಯನೀಡಾಡಿಯಂ ನೆಯ್ದಿಲ್ಗೊಳಂಗಳೊಳೋಲಾಡಿಯುಮೊಸರ್ವ ಚಂದ್ರಕಾಂತಶಿಲಾತಲಂಗಳೊಳ್ ಕರಂಗಳಿನೆಳವಿಯುಂ ವಿಘಟಿತ ಚಕ್ರವಾಕಂಗಳಪ್ಪ ಕಮಲವನಂಗಳೊಳ್ ಪಾಯ್ದುಮಿಂತು ಪಲತೆಱದೆ ಕೋಟಲೆ ಗೊಳುತಿರ್ದಪನಿಂತಿವು ಮೊದಲಾಗಿ ತತ್ಕಾಲೋಚಿತವಚನಂಗಳಂ ನುಡಿಯುತ್ತಮಿರಲಾಕೆವೆರಸಾ ಪ್ರದೇಶಮನೆಯ್ದಿವರ್ಪಾಗಳ್

ಮೊದಲೊಳೆ ಕೆತ್ತಿದತ್ತು ಬಲಗಣ್ಣೆನಗೇನನೊಡರ್ಚಲಿರ್ದುದೋ
ಬಿದಿಯೆನುತುಂ ಭಯಂಬೆರಸು ಮುನ್ನಮೆ ಶಂಕಿಸುತಿರ್ದೆನೋವೋ ಮ
ತ್ತಿದು ಪೆಱತೇನೆನುತ್ತಮೆರ್ದೆ ಪವ್ವನೆ ಪಾಱಲದೊಂದು ಕೇಳಲಾ
ದುದು ಪುರುಷಪ್ರಲಾಪರುದಿತಸ್ವನಮಾ ಗಹನಾಂತರಾಳದೊಳ್            ೧೫೦

ವ|| ಅದಂತೆಂದೊಡೆ

ಉರಿದೆಂ ಬೆಂದನಿದೇನನಿಂತು ನೆಗೞ್ದೆ  ನಿಸ್ತ್ರಿಂಶ ಪುಷ್ಪಾಸ್ತ್ರ ನಿ
ಷ್ಠುರ ಪೇೞ್ ಪೊಲ್ಲದನೇನನಾಚರಿಸಿದಳ್ ನಿನ್ನೊಳ್ ಮಹಾಶ್ವೇತೆ ಭೀ
ಕರ ದೋಷಾಕರ ಕೂಡಿತೇ ಬಗೆದುದುಂ ಚಂಡಾಳ ತಂಗಾಳಿ ಪೇೞ್
ಪಿರಿದೊಂದುತ್ಸವಮಾಯ್ತೆ ಕೇಡನಱದೈ ಹಾ ಶ್ವೇತಕೇತುವ್ರತೀ     ೧೫೧

ತರಳಿಕೆಯು ಮುಗುಳ್ನಗೆಯನ್ನು ತೋರಿಸುತ್ತಾ ಹೀಗೆಂದಳು. ೧೪೮. “ಅಯ್ಯೊ! ದಡ್ಡೆ, ಚಂದ್ರನು ನಿನ್ನ ಇನಿಯನನ್ನು ಕರೆತರುತ್ತಾನೆಯೆ? ತಾನೆ ಮೊದಲು ನಿನ್ನನ್ನು ಕಂಡಕೂಡಲೆ ಕಾಮನ ಬಾಣಗಳಿಂದ ಕಳವಳಗೊಂಡವನಂತೆ ಆಡುತ್ತಿದ್ದಾನೆ, ನೋಡು! ವ|| ಅದು ಹೇಗೆಂದರೆ. ೧೪೯. ಪ್ರತಿಬಿಂಬದ ನೆಪದಿಂದ ನಿನ್ನ ಕೆನ್ನಗಳಿಗೆ ಮುತ್ತು ಕೊಡುತ್ತಾನೆ. ಸೊಂಟದ ಡಾಬಿನ ರತ್ನಪಂಕ್ತಿಯನ್ನು ಮುಟ್ಟುತ್ತಾನೆ. ಸುಂದರವಾದ ತೋರ ಮೊಲೆಗಳನ್ನು ಮೇಲೇರಿ ಬಂದು ಹಿಡಿಯುತ್ತಾನೆ. ಕಾಂತಿಯನ್ನು ಬೀರುತ್ತಿರುವ ತಳತಳಿಸುವ ಕಾಲುಗುರುಗಳಲ್ಲಿ ಪ್ರತಿಫಲಿಸಿರುವ ದೇಹವುಳ್ಳವನಾದುದರಿಂದ ನಿನ್ನ ಕಾಲುಗಳಿಗೆ ಬಿದ್ದು ಅವುಗಳನ್ನು ಬಿಡದೆ ಹಿಡಿದುಕೊಂಡಿದ್ದಾನೆ ಎಂಬಂತೆ ಕಾಣುತ್ತಿದ್ದಾನೆ. ಎಲೈ ನೈದಿಲೆಯಂತೆ ಕಣ್ಣುಳ್ಳವಳೆ, ಇವನ ಬಗೆ ನಿನಗಿನ್ನೂ ಗೊತ್ತಿಲ್ಲ! ವ|| ಅದಲ್ಲದೆ ವಿರಹಪೀಡೆಯಿಂದಾಗಿ ಶ್ರೀಗಂಧದಿಂದ ಲೇಪನ ಮಾಡಿಕೊಂಡಿರುವವನಂತೆ ಬಿಳುಪಿನಿಂದ ಕೂಡಿಕೊಂಡಿದ್ದಾನೆ. ಪ್ರತಿಬಿಂಬಿಸುವ ನೆಪದಿಂದ ಸಟಿಕಶಿಲಾತಲದಲ್ಲಿ ಮಲಗುತ್ತಾನೆ. ಮತ್ತು ನೈದಿಲೆಗೊಳಗಳಲ್ಲಿ ಮುಳುಗುತ್ತಾನೆ. ನೀರು ಜಿನುಗುತ್ತಿರುವ ಚಂದ್ರಕಾಂತದ ಹಾಸುಗಲ್ಲಿನ ಮೇಲೆ ಕೈಯಾಡಿಸುತ್ತಾನೆ. ಚಕ್ರವಾಕಪಕ್ಷಿಗಳನ್ನು ಬೇರ್ಪಡಿಸಿರುವ ತಾವರೆಬಳ್ಳಿಗಳ ಪೊದುರುಗಳನ್ನು ಇಷ್ಟವಿಲ್ಲದಿರುವುದರಿಂದ ದಾಟಿ ಹೋಗುತ್ತಾನೆ. ಹೀಗೆ ಹಲವು ಬಗೆಯ ಕೋಟಿಲೆಗಳನ್ನು ಅನುಭವಿಸುತ್ತಿದ್ದಾನೆ”. ಇವೇ ಮೊದಲಾದ ತತ್ಕಾಲೋಚಿತವಾದ ಮಾತುಗಳನ್ನಾಡುತ್ತ ಅವಳ ಜೊತೆಯಲ್ಲಿ ಆ ಸ್ಥಳಕ್ಕೆ ಬರುತ್ತಿರಲಾಗಿ, ಟಿ, ಕಾಮಜ್ವರಪೀಡಿತರಾದವರು ಮಾಡಿಕೊಳ್ಳುವ ಶೈತ್ಯೋಪಚಾರವು ಇಲ್ಲಿ ಚಂದ್ರನು ಮಾಡಿಕೊಳ್ಳುತ್ತಿರುವನೆಂದು ವರ್ಣಿತವಾಗಿದೇ. ೧೫೦. ನಾನು ಮೊದಲು ಮನೆಯನ್ನು ಬಿಟ್ಟು ಹೊರಟಾಗಲೆ ನನ್ನ ಬಲಗಣ್ಣು ಹಾರಿತು ಇದರಿಂದ ವಿ ನನಗೆ ಏನನ್ನು ಉಂಟುಮಾಡುತ್ತಾನೋ ಎಂದು ಮನಸ್ಸು ಮೊದಲೆ ಭಯದಿಂದ ಅಳುಕುತ್ತಲೆ ಇತ್ತು. ಅಷ್ಟರಲ್ಲಿ ಕಾಡಿನ ಮಧ್ಯದಲ್ಲಿ ಗಂಡಸು ಅಳುವ ಧ್ವನಿ ಕಿವಿಗೆ ಬಿತ್ತು. ಅಯ್ಯೋ ಗ್ರಹಚಾರವೆ, ಇದೇನು ಮತ್ತೆ ಬಂತಪ್ಪ! ಎಂದು ನನ್ನ ಎದೆ ತಟ್ಟನೆ ಹಾರಿದಂತೆ ಆಯಿತು. ವ|| ಅದೇನೆಂದರೆ ೧೫೧. ಅಯ್ಯೊ, ಉರಿದುಹೋದೆ! ಬೆಂದುಹೋದೆ! ಎಲ್ಲೋ ಘಾತುಕ, ಮನ್ಮಥ, ನೀನೇನು ಮಾಡಿಬಿಟ್ಟೆ? ಎಲೈ ಕ್ರೂರನೆ, ಪಾಪ ಆ ಮಹಾಶ್ವೇತೆ ನಿನಗೇನು ಅನ್ಯಾಯ ಮಾಡಿದ್ದಳು? ಭಯಂಕರನಾದ

ಶರಣಾರೊ ತಪಮೆ ಭುವನಾಂ
ತರದೊಳ್ ಕೈಕೊಳ್ವರಾರೊ ಧರ್ಮಮೆ ನಿನ್ನಂ
ಸುರಲೋಕಮೆ ಪಾೞiದೈ
ಸರಸ್ವತೀದೇವಿ ರಂಡೆಯಾದೌ ಸತ್ಯಂ         ೧೫೨

ಪರಿಚಯಮಿಲ್ಲ ಕಂಡಱಯೆಯೋ ಸಖ ತೊಟ್ಟೆನಲಿಂತು ಬಿಟ್ಟು ಪೋ
ಪರೆ ಕಠಿನಾತ್ಮನಾದೆ ನೆರವಾರೆನಗಿರ್ದಪರೆತ್ತವೋಪೆನೊ
ರ್ಬರೂಮೆನಗಾಸೆಯಿಲ್ಲ ದೆಸೆ ಪಾೞ್ಮಸಗಿರ್ಪುದಂಧನಾದೆನಾರ್
ಶರಣೆನಗೆನ್ನ ಬಾೞ್ಕೆಯೆ ನಿರರ್ಥಕಮೆಂದೆನುತಂ ಪಲುಂಬುತಂ    ೧೫೩

ಉಸಿರದೆ ನೀನಿರಲ್ ನುಡಿವೆನಾರೊಡನಾಟಮನಾಡುತಿರ್ಪೆ ನೀ
ಪುಸಿಮುಳಿಸೇಕೆ ಪೇೞ್ ಕೆಳೆಯ ನಿನ್ನಯ ಕೂರ್ಮೆಯದೆತ್ತವೋಯ್ತು ನೋ
ಯಿಸದಿನಿಸೆೞ್ದ್ದು ನೋಡಿ ನುಡಿಯೆಂದೆನಿತುಂ ತೆಱದಿಂ ಕಪಿಂಜಲಂ
ದೆಸೆದೆಸೆಗಂದು ಬಾಯ್ವಿಡುತಮಿರ್ದುದನಾಲಿಸಿದೆಂ ಮಹೀಪತೀ            ೧೫೪

ಅದನಾಂ ಕೇಳ್ದೆರ್ದೆಗೆಟ್ಟು ಮೆಯ್ಮಱುಗಿ ಸತ್ತಂತಾಗಿ ಕಣ್ಣೀರೂ ಪೂ
ರದಗುರ್ವಿಂ ದೆಸೆಗಾಣದಂದೆಡಪುತಂ ತಾಗುತ್ತಮೋರಂತೆ ಮೇ
ಲುದಳ್ ಗುಲ್ಮಲತಾಳಿಗಳ್ ತೊಡರಲೊರ್ವಂ ನೂಂಕಿಕೊಂಡೊಯ್ವ ಮಾ
ರ್ಗದೆ ಪೋದೆಂ ಬಳಿಕಾತನಿರ್ದೆಡೆಗೆ ಹಾಹಾಕ್ರಂದನಂಗೆಯ್ವುತಂ            ೧೫೫

ವ|| ಅಂತು ಯಥಾಶಕ್ತಿತ್ವರಿತಗತಿಯಿಂ ಪೋದೆನನ್ನೆಗಂ

ಕೊಳದ ತಡಿಯಲ್ಲಿ ಸೀರ್ಪನಿ
ಗಳ ತುಱುಗಲನುಗುೞ್ವ ಚಂದ್ರಕಾಂತದ ಶಿಲೆಯೊಳ್
ಪೊಳೆವೆಳದಳಿರ್ಗಳ ಬಳಗದ
ಕುಳಿರ್ವಲರ್ದಲರೆಸಳ ಪಸೆಯ ಮೇಲೊಱಗಿರ್ದಂ       ೧೫೬

ಪೊಳೆವಿಂದುಗಳ್ಕಿ ಬೆಂಗುಡೆ
ಮೊಳೆದುವು ಬೆನ್ನಿಂದಮೆರ್ದೆಗೆ ಕದಿರ್ದುಱುಗಲೆನಲ್
ತೊಳಗಿದುವು ಮದನಶಿಖಿ ವಿ
ಹ್ವಳಹೃದಯನ್ಯಸ್ತಹಸ್ತನಖದೀತಿಗಳ್            ೧೫೭

ಚಂದ್ರನೆ, ನಿನ್ನ ಇಷ್ಟಾರ್ಥ ನೆರವೇರಿತೆ? ಎಲೋ ಚಂಡಾಲ! ತಾಂಗಾಳಿ! ನಿನಗೆ ಈಗ ಬಹಳ ಆನಂದವಾಯಿತೋ, ಹೇಳು, ಅಯ್ಯೋ ಶ್ವೇತಕೇತುಮಹರ್ಷಿಯೆ! ಇಂಥ ವ್ಯಸನವನ್ನು ನೀನು ಕಾಣುವಂತಾಯಿತೆ? ೧೫೨. ತಪಸ್ಸೆ! ಇನ್ನು ಈ ಜಗತ್ತಿನಲ್ಲಿ ನಿನಗೆ ರಕ್ಷಕರಾರು? ಧರ್ಮವೆ, ಇನ್ನು ನಿನ್ನನ್ನು ಕೈ ಹಿಡಿಯುವವರು ಯಾರು? ದೇವಲೋಕವೆ! ಹಾಳಾಗಿ ಹೋದೆಯಲ್ಲ! ಸರಸ್ವತಿ! ಇನ್ನು ನೀನು ನಿಜವಾಗಿಯೂ ವಿಧವೆಯಾದೆ! ೧೫೩. ಗೆಳೆಯ, ನಾನು ಅಪರಿಚಿತನೆ? ನೀನು ನನ್ನನ್ನು ನೋಡಿಯೇ ಇಲ್ಲವೆ? ಹೀಗೆ ತಟ್ಟನೆ ನನ್ನನ್ನು ಬಿಟ್ಟು ಹೋಗಬಹುದೆ? ಬಹಳ ಕಠಿನ ಮನಸ್ಸಿನವನಾಗಿ ಬಿಟ್ಟೆಯಲ್ಲ? ನನಗಿನ್ನಾರು ಸಹಾಯಕರಿದ್ದಾರೆ? ನಾನು ಇನ್ನು ಎಲ್ಲಿಗೆ ಹೋಗಲಿ? ಯಾರ ಮೇಲೂ ನನಗೆ ಆಸಕ್ತಿಯಿಲ್ಲ. ನನಗೆ ದಿಕ್ಕೆಲ್ಲ ಶೂನ್ಯವಾಗಿ ಕಾಣುತ್ತಿದೆ. ಕಣ್ಣೇ ಕಾಣುವುದಿಲ್ಲ. ನನಗಿನ್ನಾರು ದಿಕ್ಕು. ನನ್ನ ಜೀವನವೇ ಹಾಳಾಯಿತು -  ಎಂದು ಹಲುಬುತ್ತಾ ೧೫೪. “ಗೆಳೆಯಾ, ನೀನು ಮಾತನಾಡದಿದ್ದರೆ ನಾನು ಇನ್ನು ಯಾರ ಸಂಗಡ ಮಾತನಾಡಲಿ? ನೀನು ಯಾರೊಡನೆ ಆಡುತ್ತಿರುವೆ? ನನ್ನ ಮೇಲೆ ಈ ಹುಸಿ ಮುನಿಸೇತಕ್ಕೆ? ಹೇಳು. ಪುಂಡರೀಕ! ನಿನ್ನ ಸ್ನೇಹ ಎಲ್ಲಿಹೋಯಿತು? ನನ್ನನ್ನು ನೋಯಿಸದೆ ಸ್ವಲ್ಪ ಎದ್ದು ನೋಡಿ ಮಾತಾಡು” ಎಲೈ ರಾಜನೆ, ಹೀಗೆ ಕಪಿಂಜಲನು ದಿಕ್ಕು ದಿಕ್ಕಿಗೆ ಬಾಯಿ ಬಿಡುತ್ತಿರುವುದನ್ನು ನಾನು ಕೇಳಿದೆನು. ೧೫೫. ಅದನ್ನು ನಾನು ಕೇಳಿ ಧೈರ್ಯಗೆಟ್ಟು ವ್ಯಸನಪಟ್ಟು ಅಲ್ಲೆ ಪ್ರಾಣಹೋದವಳಂತೆ ಆದೆನು. ಕಣ್ಣೀರಿನ ಪ್ರವಾಹವು ಅತ್ಯಕವಾಗಿ ಹರಿಯತೊಡಗಿದ್ದರಿಂದ ಕಣ್ಣು ಕಾಣದೆ ದಾರಿ ಗೊತ್ತಾಗುತ್ತಿರಲಿಲ್ಲ. ಹಾಗೆ ಎಡವುತ್ತ ದಾಟುತ್ತ ಒಂದೇ ಸಮನೆ ಮೇಲುದವು ಪೊದರು ಬಳ್ಳಿಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿರಲು ಅಯ್ಯೋ! ಅಯ್ಯೋ! ಎಂದು ಅರಚುತ್ತಾ, ಯಾರೋ ಒಬ್ಬರು ನೂಕುತ್ತಾ ಎಳೆದುಕೊಂಡು ಹೋಗುತ್ತಿರುವ ರೀತಿಯಿಂದ ಅವನಿದ್ದ ಸ್ಥಳಕ್ಕೆ ಹೋದೆನು. ವ|| ಹಾಗೆ ನನ್ನ ಶಕ್ತಿ ಮೀರಿದ ವೇಗದಿಂದ ಅಲ್ಲಿಗೆ ಹೋಗುವಷ್ಟರಲ್ಲಿ, ೧೫೬. ಕೊಳದ ದಡದಲ್ಲಿ ನೀರಿನ ತುಂತುರುಗಳನ್ನು ಸ್ರವಿಸುತ್ತಿರುವ ಚಂದ್ರಕಾಂತಶಿಲೆಯಲ್ಲಿ ಶೋಭಿಸುತ್ತಿರುವ ಚಿಗುರುಗಳ ಗುಂಪಿನಿಂದ ಕೂಡಿದ ತಂಪಾದ ಅರಳಿದ ಹೂವಿನ ದಳಗಳ ಹಾಸಿಗೆಯ ಮೇಲೆ ನನ್ನ ಇನಿಯನು ಮಲಗಿದ್ದನು ೧೫೭. ಅವನು ಕಾಮಾಗ್ನಿಯಿಂದ ಬೆಂದ ಎದೆಯ ಮೇಲೆ ತನ್ನ ಕೈಯನ್ನು ಇರಿಸಿಕೊಂಡಿದ್ದನು. ಅದರ ಉಗುರುಗಳ
ಬಗೆಗೆಟ್ಟು ಸಾವ ಬಗೆಯಂ
ಮಗಳೆ ಮಹಾಶ್ವೇತೆ ಬಗೆಯದಿರ್ ಕೂಡುವೆ ನೀಂ
ಮಗುೞೆ ಯುಮೀತನನೆನುತಂ
ಮಗೞ್ದ್ದಾತಂಬೆರಸು ಗಗನಮಾರ್ಗಕ್ಕೊಗೆದಂ           ೧೮೫

ವ|| ಅಂತಾ ವ್ಯತಿಕರದೊಳೆನಗತಿಸಂಭ್ರಮಮುಂ ವಿಸ್ಮಯಮುಂ ಕೌತುಕಮುಮೊಗೆಯೆ ಪಿರಿದುಮಂಜಿ ಕಪಿಂಜಲನನಿದೇನೆಂದು ಬೆಸಗೊಳೆಯುಮಾತನೆನಗೆ ಮಱುಮಾತುಗುಡದುನ್ಮಖನಾಗಿ
ಎನಗಂ ಪೇೞದೆಯುಂ ಭೋಂ
ಕೆನಲೆನ್ನಯ ಸಖನನೆತ್ತವೊಯ್ದಪೆ ಮಾಣೆಂ
ದೆನುತಂ ಕೋಪದಿನಾ ಪುರು
ಷನ ಪೆಱಗನೆ ತಾನುಮಂತರೀಕ್ಷಕ್ಕೊಗೆದಂ   ೧೮೬

ವ|| ಅಂತು ಮೂವರುಂ ನೋಡೆ ನೋಡೆ ಚಂದ್ರಮಂಡಲಮಧ್ಯದೊಳ್ ಪುಗೆ ಕಪಿಂಜಲನ ಪೋಗಿಂಗೆ ಶೋಕವಿರ್ಮಡಿಯಾಗೆ ಕಿಂಕರ್ತವ್ಯತಾಮೂಢೆಯೆನಾಗಿ

ತರಳಿಕೆ ಪೇೞದೇನಱವೊ ನೀನೆನಲೆನ್ನವೊಲಾಗಳಳ್ಕಿನಿಂ
ಪರವಶೆಯಾಗಿ ನಿಂದುಮವಳೆನ್ನಯ ಸಾವಿನೊಳಾದ ಶಂಕೆಯಿಂ
ಕರುಣಮನಪ್ಪುಕೆಯ್ದುಸಿರ್ದಳಾನಱಯೆಂ ಸತಿ ಬಂದು ತಂದೆಯಂ
ತಿರೆ ಪದೆದಾ ಮಹಾಪುರುಷನಾಱಸಿದಂ ಭವದೀಯ ಶೋಕಮಂ            ೧೮೬

ಇನ್ನರ ನುಡಿ ಕನಸಿನೊಳಂ
ನನ್ನಿಯೆನಲ್ ಕೇಳ ದಿವ್ಯಪುರುಷಂ ಪ್ರತ್ಯ
ಕ್ಷಂ ನಿನ್ನ ಮುಂದೆ ನುಡಿಯ
ಲ್ಕಿನ್ನುಮದೇನೆಂಬೆ ಸಂದೆಗಕ್ಕೆಡೆಯುಂಟೇ    ೧೮೮

ನಿನ್ನಯ ಜೀವಿತೇಶ್ವರನ ಜೀವಮನಿಂ ಪಡೆದಟ್ಟಲೆಂದು ಲೋ
ಕೋನ್ನತನಪ್ಪ ದಿವ್ಯಪುರುಷಂ ವಿಗತಾಸುವನೊಯ್ದನೞ್ಕಱಂ
ನಿನ್ನುಮನೀಗಳಾಱಸಿದನಂತಿದಱಂದಿದು ನನ್ನಿಯಪ್ಪುದ
ಲ್ತೆನ್ನದೆ ಮಾಣ್ಬುದರ್ಕೆ ಪೆಱತೇಂ ಮರಣವ್ಯವಸಾಯಮೆಂಬುದಂ            ೧೮೯

ಎತ್ತಿಕೊಂಡು ೧೮೫. “ಮಗಳೆ, ಮಹಾಶ್ವೇತೆ, ಮನಸ್ಸನ್ನು ಕೆಡಿಸಿಕೊಂಡು ಸಾಯುವ ವಿಚಾರವನ್ನು ಮಾತ್ರ ಯೋಚಿಸಬೇಡ. ನೀನು ಮತ್ತೆ ಇವನೊಂದಿಗೆ ಸೇರುತ್ತೀಯೆ ಎಂದು ಹೇಳಿ ಹಿಂದಿರುಗಿ ಅವನನ್ನು ಎತ್ತಿಕೊಂಡು ಆಕಾಶಕ್ಕೇರಿದನು.” ವ|| ಹಾಗೆ ಆ ಸಂದರ್ಭದಲ್ಲಿ ನನಗೆ ಬಹಳ ಗಾಬರಿಯೂ ಆಶ್ಚರ್ಯವೂ ಕುತೂಹಲವೂ ಉಂಟಾಗಲು ಬಹಳ ಹೆದರಿ ಕಪಿಂಜಲನನ್ನು ಕುರಿತು ಇದೇನೆಂದು ಕೇಳಲು ಅವನು ನನಗೆ ಉತ್ತರವನ್ನು ಕೊಡದೆ ಮೇಲುಮುಖನಾಗಿ, ೧೮೬. “ನನಗೆ ಹೇಳದೆ ಕೇಳದೆ ನನ್ನ ಗೆಳೆಯನನ್ನು ತಟ್ಟನೆ ಎಲ್ಲಿಗೆ ಎತ್ತಿಕೊಂಡು ಹೋಗುತ್ತಿರುವೆ? ನಿಲ್ಲು?” ಎಂದು ಕೋಪದಿಂದ ಆ ಪುರುಷನನ್ನು ಹಿಂಬಾಲಿಸಿ ತಾನೂ ಆಕಾಶಕ್ಕೆ ಏರಿಹೋದನು. ವ|| ಹಾಗೆ ನೋಡುತ್ತಿರುವಂತೆಯೆ ಮೂವರೂ ಚಂದ್ರಮಂಡಲದ ಮಧ್ಯವನ್ನು ಪ್ರವೇಶಿಸಲಾಗಿ ಕಪಿಂಜಲನು ಹೊರಟುಹೋದುದರಿಂದ ದುಖವು ಇಮ್ಮಡಿಯಾಗಲು ಏನು ಮಾಡಬೇಕೆಂದು ತಿಳಿಯದವಳಾಗಿ ೧೮೭. “ತರಳಿಕೆ, ಇದೇನು ಹೇಳು. ನಿನಗೆ ಗೊತ್ತಾಯಿತೆ?” ಎಂದು ಅವಳನ್ನು ಕೇಳಿದೆನು. ಆಗ ಅವಳೂ ನನ್ನಂತೆಯೇ ಭಯದಿಂದ ಪರವಶಳಾಗಿದ್ದಳು. ಅದಲ್ಲದೆ ನಾನು ಪ್ರಾಣತ್ಯಾಗಮಾಡಿಬಿಡಬಹುದೆಂಬ ಶಂಕೆ ಬೇರೆ ಅವಳಿಗಿತ್ತು. ಅದರಿಂದ ಅವಳು ಕರುಣೆಯಿಂದ ಕೂಡಿ “ಅಮ್ಮನನಗೇನೂ ಗೊತ್ತಿಲ್ಲ. ಆದರೆ ಆ ಮಹಾಪುರುಷನು ಬಂದು ತಂದೆಯಂತೆ ನಿನ್ನ ಮೇಲೆ ವಾತ್ಸಲ್ಯವನ್ನು ತೋರಿಸಿ ನಿನ್ನ ದುಖವನ್ನು ಪರಿಹರಿಸಿದ್ದಾನೆ. ೧೮೮. ಇಂತಹವರು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದರೂ ಆ ಮಾತು ಸುಳ್ಳಾಗುವುದಿಲ್ಲ. ಹೀಗಿರಲು ಆ ದಿವ್ಯಪುರುಷನು ಪ್ರತ್ಯಕ್ಷನಾಗಿ ನಿನ್ನ ಮುಂದೆ ಹೇಳಿರಲಾಗಿ ಅಲ್ಲಿ ಸಂಶಯಕ್ಕೆ ಎಡೆಯೇ ಇಲ್ಲ. ಹೆಚ್ಚಿಗೆ ಹೇಳಬೇಕಾದ್ದೇ ಇಲ್ಲ ೧೮೯. ನಿನ್ನ ಪ್ರಾಣಕಾಂತನ ಹೋದ ಪ್ರಾಣವನ್ನು ಮರಳಿ ಬರುವಂತೆ ಮಾಡಿ, ಜೀವ ಬರಿಸಿ ಅವನನ್ನು ಕಳುಹಿಸಿಕೊಡಬೇಕೆಂಬ ಉದ್ದೇಶದಿಂದಲೆ ಈ ಲೋಕೋತ್ತರನಾದ ದಿವ್ಯಪುರುಷನು ಸಾವನ್ನಪ್ಪಿದ ಅವನನ್ನು ಕೊಂಡೊಯ್ದಿದ್ದಾನೆ. ಹಾಗೂ ನಿನ್ನನ್ನು ಸಮಾಧಾನಪಡಿಸಿದ್ದಾನೆ. ಅದರಿಂದ ಇದು ನಿಜವಲ್ಲವೆಂದು

ನಿಸದಂ ಕಪಿಂಜಲ ಜೀ
ವಿಸುತಿರೆ ನಿನ್ನಲ್ಲಿಗೆಯ್ದದಿರನದಱಂ ರ
ಕ್ಷಿಸವೇೞ್ಕುಮಾವ ತೆಱದಿಂ
ದಸುವಂ ನಿನ್ನಲ್ಲಿಗಾತನೆಯ್ತರ್ಪಿನೆಗಂ           ೧೯೦

ವ|| ಎಂದವಳ್ ಕಾಲ ಮೇಲೆ ಬೀೞ್ವುದುಂ

ಪಿರಿದುಮಿದಿಂತುಟೆಂದು ಬಗೆದುಂ ನೆ ಬಾೞ್ಕೆಯೊಳಾದ ತೃಷ್ಣೆಯಂ
ಪರಿಹರಿಸಲ್ಕಮಾರ್ಗಮಱದಾಗಿಯುಮುಕ್ಕೆವದಿಂದಮಂತೆ ಪೆಂ
ಡಿರ ಬಗೆ ಸಾಜದಿಂ ಕುಟಿಲಮಾಗಿಯುಮಿಂತು ದುರಾಸೆಯಿಂದಮೋ
ಸರಿಸದೆ ನನ್ನ ನಾನೆ ಬಿಡಲಾಱದ ಪಾತಕಿಯೆಂ ಮಹೀಪತೀ     ೧೯೧

ವ|| ಅನಂತರಮಾ ಸರೋವರದ ತೀರದೊಳೆಡೆವಿಡದೆ ಪೊರಳುತವೆ ಪರೆದ ಮುಡಿಯೊಳ್ ಪೊರೆದ ಕಣ್ಣ ನೀರಿಂ ನಾಂದು ಕದಂಪಿನೊಳ್ ಪಗಿಲ್ತು ಪತ್ತಿದುತ್ತರೀಯೆಯೆಂ ಆಕ್ರಂದನದಿಂ ಗಂಟಲೊಡೆದು ದನಿ ಕಿಡೆ ತರಳಿಕೆವೆರಸು ಬಿಡದೞುತ್ತುಮಿರಲಾ ಪಾಪಕಾರಿಣಿಯಪ್ಪ ಕಾಳರಾತ್ರಿಪ್ರತಿಮೆಯೆನಿಸಿದ ಮಹಾರಾತ್ರಿಯಾಗಲ್ ಶೋಕೋದ್ರೇಕದಿಂ ಯುಗಸಹಸ್ರಾಯಮಾನಮಾಗೆ

ಅಱುವೆನ್ನಂ ತರಳಿಕೆ ಮ
ಯ್ವೞಯಿಂ ಪಿಡಿಯೊಯ್ಯನೆತ್ತಿ ಮೆಲ್ಲನೆ ತಡಿಗಾ
ಗಿೞತಂದೀ ಕೊಳದೊಳ್ ನೀ
ರಿಱಯಿಸೆ ನೀರಿಱದೆನಿಲ್ಲಿ ಬೆಳಗಪ್ಪಾಗಳ್       ೧೯೨

ವ|| ಅಂತು ನೀರಿೞದು ನೀರಿೞದು ತದನಂತರಂ

ಆತನ ಪರಮಪ್ರೀತಿಯಿ
ನಾತನ ವಲ್ಕಲದಿನಾತನಕ್ಷಾವಳಿಯಿಂ
ದಾತನ ಕಮಂಡಲುವಿನಿಂ
ದಾತನ ವೇಷಮನೆ ತಾಳ್ದಿ ತಳೆದೆಂ ವ್ರತಮಂ            ೧೯೩

ವ|| ಅಂತು ತಳೆದು ಮದೀಯ ಮಂದಭಾಗ್ಯತೆಯುಮಂ ದೈವದ ದಾರುಣತೆಯುಮಂ ಶೋಕೋದ್ರೇಕಮುಮಂ ದುಖದ ದುಸಹತೆಯುಮಂ ಪದಾರ್ಥದನಿತ್ಯತೆಯುಮಂ ಭಾವಿಸಿ ನೋಡಿ

ಹೇಳದೆ ಮರಣಪ್ರಯತ್ನವನ್ನು ಕೈಬಿಡಬೇಕು. ಸಮಾಧಾನಪಡಿಸುವ ಆ ಮಾತಿಗಿಂತಲೂ ಬೇರೆ ಇನ್ನೇನು ಬೇಕು? ೧೯೦. ಕಪಿಂಜಲನು ಬದುಕಿದ್ದರೆ ನಿಜವಾಗಿಯೂ ನಿನ್ನಲ್ಲಿಗೆ ಬರದೆ ಇರುವುದಿಲ್ಲ. ಆದ್ದರಿಂದ ಅವನು ನಿನ್ನ ಸಮೀಪಕ್ಕೆ ಬರುವವರೆಗೂ ಯಾವ ರೀತಿಯಿಂದಲಾದರೂ ಜೀವವನ್ನು ಕಾಪಾಡಿಕೊಂಡೇ ತೀರಬೇಕು” ವ|| ಎಂದು ಅವಳು ನನ್ನ ಕಾಲಿನ ಮೇಲೆ ಬೀಳಲಾಗಿ

೧೯೧. ಎಲೈ ರಾಜನೆ, ಬಹುಶ ಇದು ಹೀಗೆಯೆ ಇರಬೇಕೆಂದು ಆಲೋಚಿಸಿಯೂ, ಮಿಗಿಲಾಗಿ ಬದುಕಿರಬೇಕೆಂಬ ಆಸೆಯನ್ನು ಬಿಡಲು ಯಾರಿಗೂ ಆಗದಿರುವುದರಿಂದಲೂ, ಅವನು ಮರಳಿ ಬರುತ್ತಾನೆಂಬ ಆಶಾಬಂಧದಿಂದಲೂ, ಹೆಂಗಸರ ಸ್ವಭಾವವು ಸಹಜವಾಗಿ ವಕ್ರವಾಗಿರುವುದರಿಂದಲೂ ಹೀಗೆ ದುರಾಸೆಗೆ ಅಂಟಿಕೊಂಡು ಪ್ರಾಣವನ್ನು ಬಿಡಲಾರದ ಪಾಪಿಷ್ಠಳಾಗಿದ್ದೇನೆ. ವ|| ಬಳಿಕ ಆ ಸರೋವರದ ದಡದಲ್ಲಿ ಎಡೆಬಿಡದೆ ಹೊರಳಾಡುತ್ತಾ ಚದುರಿರುವದ ಕೂದಲುಗಳಲ್ಲಿ ವ್ಯಾಪಿಸಿಕೊಂಡು (ಕೂಡಿಕೊಂಡು), ಕಣ್ಣೀರಿನಿಂದ ಒದ್ದೆಯಾಗಿ ಕೆನ್ನೆಯಲ್ಲಿ ಅಂಟಿಕೊಂಡಿರುವ ಹೊದೆಯುವ ವಸ್ತ್ರವುಳ್ಳವಳಾಗಿ, ರೋದನದಿಂದ ಗಂಟಲೊಡೆದು ದನಿ ಗಾರುಬೀಳಲು ತರಳಿಕೆಯೊಂದಿಗೆ ಒಂದೇಸಮನೆ ಅಳುತ್ತಿರಲಾಗಿ ಪ್ರಳಯಕಾಲದ ರಾತ್ರಿಗೆ ಸಮಾನವಾದ ಆ ಭಯಂಕರವಾದ ಪಾಪರಾತ್ರಿಯ ಶೋಕಾತಿಶಯದಿಂದ ಸಾವಿರಯುಗದಷ್ಟು ದೀರ್ಘವಾಗಲಾಗಿ, ೧೯೨. ಬೆಳಗಾಗಲು, ಅಳುತ್ತಿರುವ ನನ್ನನ್ನು ತರಳಿಕೆಯು ತನ್ನ ಶರೀರಾವಲಂಬನದಿಂದ ಹಿಡಿದುಕೊಂಡು (ಮೈಮೇಲೆ ಒರಗಿಸಿಕೊಂಡು) ಹಿಡಿದೆತ್ತಿ ಮೆಲ್ಲನೆ ದಡಕ್ಕೆ ಇಳಿಸಿ ಸ್ನಾನ ಮಾಡಿಸಲಾಗಿ ಸ್ನಾನ ಮಾಡಿದೆನು. ವ|| ಹಾಗೆ ಸ್ನಾನ ಮಾಡಿ ಬಳಿಕ, ೧೯೩. ಅವನ ಮೇಲಿನ ಅತ್ಯಕವಾದ ಪ್ರೀತಿಯಿಂದ ಅವನ ಉಡುತ್ತಿದ್ದ ನಾರುಬಟ್ಟೆಯನ್ನೇ ಉಟ್ಟುಕೊಂಡು, ಅವನ ಜಪಸರವನ್ನೇ ತೆಗೆದುಕೊಂಡು, ಅವನ ಕಮಂಡಲುವನ್ನೇ ಹಿಡಿದುಕೊಂಡು, ಅವನು ವೇಷವನ್ನೇ ತಾಳಿ ಬ್ರಹ್ಮಚರ್ಯವ್ರತವನ್ನು ಆರಂಭಿಸಿದೆನು. ವ|| ಹಾಗೆ ವ್ರತವನ್ನು ಹಿಡಿದು ನನ್ನ ಅದೃಷ್ಟಹೀನತೆಯನ್ನೂ, ದೈವದ ಕಠೋರತೆಯನ್ನೂ, ಅತಿಶಯವಾದ ಶೋಕವನ್ನೂ,

ಮನಮಂ ನಿಗ್ರಹಿಸುತ್ತ ಸದ್ವಿಷಯದತ್ತಲ್ ಪೊರ್ದದಂತಾಗೆ ಮಾ
ಡಿ ನಿರುದ್ಧೇಂದ್ರಿಯೆಯಾಗಿ ಬಂಧುಜನಮಂ ತಾಯ್ತಂದೆಯಂ ಪತ್ತುವಿ
ಟ್ಟೆನಗಿನ್ನೊರ್ವರುಮೇವರೆಂಬ ಬಗೆಯಂ ನಿಶ್ಚೆ ಸಿ ಲೋಕೈಕನಾ
ಥನ ನಾನಾಗಳನಾಥೆಯೆಂ ಶರಣೆನ್ನುತ್ತಾಶ್ರೆ ಸಿದೆಂ ಸ್ಥಾಣುವಂ ೧೯೪

ಜನನೀ ಜನಕರ್ ಬಾಂಧವ
ಜನಸಹಿತತ್ತೞುತೆ ಬಂದು ನಾನಾವಿಧ ಸಾಂ
ತ್ವನವಚನಸಹಿತಮುಸಿರ್ದರ್
ಮನೆಗೊಡಗೊಂಡೊಯ್ಯಲೆಂಬ ಬಗೆಯಿಂದೆನ್ನಂ         ೧೯೫

ಅಂತೆರವುಗೊಂಡಿದೇನಿವ
ಳೆಂತುಂ ಪೋ ಬಾರಳೇವೆನೆನುತಂ ದುಖಾ
ಕ್ರಾಂತಂ ಪಲವುಂ ದಿನಮಿ
ರ್ದೆಂತಾನುಂ ಮನೆಗೆ ಪೋದನೆನ್ನಯ ಜನಕಂ          ೧೯೬

ವ|| ಅಂತು ಪೋಗೆ

ಜಪದಿಂ ತಪದಿಂದೊಡಲಂ
ಕ್ಷಪಿಯಿಸಿದಪೆನೆಂಬೊಡದು ಕೃತಜ್ಞತೆ ಗಡ ಚಿ
ಜಪವೆಣಿಸುವ ನೆಪದಿಂದಂ
ನೃಪ ತದ್ಗುಣಗಣಮನೀಗಳೆಣಿಸುತ್ತಿರ್ಪೆಂ       ೧೯೭

ಅಯಶಕ್ಕೀಡಾದ ನಿರ್ಲಕ್ಷಣೆಯನಶುಭೆಯಂ ನಿಷಲೋತ್ಪನ್ನೆಯಂ ನಿ
ರ್ದಯೆಯಂ ನಿಸ್ನೇಹೆಯಂ ನಿಸ್ತ್ರಪೆಯನಸುಖೆಯಂ ನಿಂದ್ಯೆಯಂ ನಿಷ್ಪಲಪ್ರಾ
ಣೆಯನಾದಂ ಕ್ರೂರೆಯಂ ಬ್ರಾಹ್ಮಣಹನನ ಮಹಾಪಾಪಮಂ ಗೆಯ್ದ ನಿಸ್ತ್ರಿಂ
ಶೆಯನೆನ್ನಂ ಪಾಪೆಯಂ ನೀಂ ಬೆಸಗೊಳೆ ಫಲಮೇಂ ಪೇೞ್ ಮಹೀಪಾಲ ಚಂದ್ರಾ             ೧೯೮

ಸೊಗಯಿಪ ಸಸಿ ಶರದದ ಬೆ
ಳ್ಮುಗಿಲೊಳ್ ಪೊರೆಯಿಂದಮೆಯ್ದೆ ಮುಸುಕಿರ್ದುದೆನಲ್
ಸೊಗಯಿಪ ದುಗುಲದ ಸೆಱಗಂ
ಮೊಗಕ್ಕೆ ತೆಗೆದಾಗಳಿರದೆ ಗೋಳಿಟ್ಟೞ್ತಳ್     ೧೯೯

ಸಹಿಸಲಸಾಧ್ಯವಾದ ಮನೋವ್ಯಥೆಯನ್ನೂ, ಜಗತ್ತಿನ ವಸ್ತುಗಳ ಅನಿತ್ಯತೆಯನ್ನೂ ಆಲೋಚಿಸಿ ನೋಡಿ ೧೯೪. ಮನಸ್ಸನ್ನು ಕೆಟ್ಟ ವಿಷಯಗಳ ಕಡೆಗೆ ಹರಿಯದಂತೆ ಹತೋಟಿಯಲ್ಲಿಟ್ಟುಕೊಂಡು ಜಿತೇಂದ್ರಿಯಳಾಗಿ ನೆಂಟರಿಷ್ಟರನ್ನೂ ತಾಯಿತಂದೆಗಳನ್ನೂ ದೂರಮಾಡಿ, ನನಗೆ ಯಾರನ್ನು ಕಟ್ಟಿಕೊಂಡು ಏನಾಗಬೇಕೆಂದು ತೀರ್ಮಾನಿಸಿ ಅನಾಥಳಾದ ನಾನು ಜಗತ್ತಿಗೆಲ್ಲ ಒಡೆಯನಾದ ಆ ಪರಮೇಶ್ವರನನ್ನು ನೀನೇ ಗತಿ ಎಂದು ಆಶ್ರಯಿಸಿದೆನು. ೧೯೫. ನನ್ನ ತಾಯಿತಂದೆಗಳು ಬಂಧುಬಳಗ ಸಮೇತರಾಗಿ ಅಳುತ್ತಾ ಬಂದು ನನ್ನನ್ನು ಜೊತೆಯಲ್ಲಿ ಮನೆಗೆ ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಅನೇಕ ಬಗೆಯ ಸಮಾಧಾನಪಡಿಸುವ ಮಾತುಗಳನ್ನಾಡಿದರು. ೧೯೬. ಹೀಗೆ ಬೇಡಿಕೊಂಡು ‘ಅಯ್ಯೋ ಇವಳೇನಾದರೂ ಬರುವುದೇ ಇಲ್ಲವಲ್ಲ!’ ಎಂದು ನನ್ನ ತಂದೆಯು ಬಹಳ ದುಖಾಕ್ರಾಂತನಾದನು. ಹಾಗೂ ಕೆಲವು ದಿನಗಳು ಇಲ್ಲೇ ಇದ್ದು ಕೊನೆಗೆ ಬಹಳ ಕಷ್ಟದಿಂದಲೇ ಮನೆಗೆ ಮರಳಿದನು. ವ|| ಹಾಗೆ ಹೊರಟುಹೋಗಲಾಗಿ ೧೯೭. ಜಪದಿಂದಲೂ, ತಪಸ್ಸಿನಿಂದಲೂ ಶರೀರಶೋಷಣೆ ಮಾಡುತ್ತಿದ್ದೇನೆ. ಎಂದರೆ ಅದು ನನ್ನ ಸತ್ತ ಇನಿಯನಿಗೆ ತೋರಿಸುವ ಕೃತಜ್ಞತೆ ಮಾತ್ರ. ಛೆ! ಛೆ! ಜಪವೂ ಇಲ್ಲ ತಪವೂ ಇಲ್ಲ. ಎಲೈ ರಾಜನೆ, ಜಪಮಾಡುವ ನೆವದಿಂದ ಅವನ ಗುಣಸಮುದಾಯವನ್ನು ಲೆಕ್ಕ ಮಾಡುತ್ತಿದ್ದೇನೆ, ಅಷ್ಟೆ! ೧೯೮. ಎಲೈ ಚಂದ್ರನಂತಿರುವ ಅರಸನೆ, ಅಪಕೀರ್ತಿಗೆ ಪಾತ್ರಳಾದ, ಶುಭಲಕ್ಷಣಗಳಿಲ್ಲದಿರುವ, ಅಮಂಗಳಸ್ವರೂಪಳಾದ, ವ್ಯರ್ಥವಾಗಿ ಹುಟ್ಟಿರುವ, ದಯಾರಹಿತಳಾದ, ಪ್ರೀತಿಯೇ ಇಲ್ಲದ, ನಾಚಿಕೆಯಿಲ್ಲದ, ಸಂತೋಷವಿಲ್ಲದ, ನಿಂದೆಗೆ ಪಾತ್ರಳಾದ, ವ್ಯರ್ಥವಾಗಿ ಜೀವನವನ್ನು ಮಾಡುತ್ತಿರುವ ಕ್ರೂರಳಾದ, ಬ್ರಹ್ಮಹತ್ಯೆಯ ಮಹಾಪಾಪಕ್ಕೆ ಗುರಿಯಾಗಿರುವ ಘಾತುಕಿಯಾದ, ಪಾಷಿಷ್ಠಳಾದ ನನ್ನ ವಿಷಯವನ್ನು ಕೇಳಿದ್ದರಿಂದ ನಿನಗೆ ಏನು ಪ್ರಯೋಜನವಾಯಿತು? ಹೇಳು!” ೧೯೯. (ಎಂದು ಹೇಳಿ) ಮನೋಹರವಾದ ಚಂದ್ರನು ಶರತ್ಕಾಲದ ಬಿಳಿಯ ಮೋಡದ ಪದರದಿಂದ ಮುಚ್ಚಿಕೊಂಡಿರುವಂತೆ ಅವಳು ಸೊಗಸಾದ

ವ|| ಅಂತೞುತಿರ್ದಳನೆಂತಾನುಂ ಸಂತೈಸಿ

ಮೊದಲೊಳ್ ಗೌರವಮಂ ಮಾ
ಡಿದುದಲ್ಲದೆ ತನ್ನ ವಾರ್ತೆಯಂ ಸದ್ಭಾ
ವದಿನಾದ್ಯಂತಂ ಸತಿಪೇ
ೞ್ದುದರ್ಕೆ ಹೃತಹೃದಯನಾಗಿ ಚಂದ್ರಾಪೀಡಂ  ೨೦೦

ಇನಿಸೊಗೆತರ್ಪ ಕಣ್ಬನಿಗಳಿಂದಮೆ ನೇಹಮನುಂಟುಮಾಡುವಂ
ಗನೆಯರೊಳೇನಪಾರಭವಭೋಗಮನಿಂತಿರೆ ಪತ್ತುವಿಟ್ಟು ಕಾ
ನನದೊಳೆ ನಟ್ಟುನಿಂದು ಸುಕುಮಾರಮೆನಿಪ್ಪ ಶರೀರಮಂ ಕಱು
ತ್ತಿನಿವಿರಿದೊಂದು ಘೋರತಪಕೊಡ್ಡಿದೆ ನಿನ್ನವೊಲಾರ್ ಕೃತಜ್ಞೆಯರ್       ೨೧೦

ಸತ್ತವರೇೞ್ವರೆ ಪೇೞೊಡ
ಸತ್ತರೆ ತಮ್ಮೞಲನಳವಿಯಂ ಮೞಸಲೆಂ
ದುತ್ತವಳಿಕೆಯೊಳೆ ಸಾವರ್
ಸತ್ತವರವರ್ಗಾವ ಹಿತಮನಾಚರಿಸುವರೋ   ೨೦೨

ಅವರವರ್ಗಾದ ಕರ್ಮಘಲಮಿರ್ಪಡೆ ಬೇಱದಱಂದ ಮೇಲೆ ಕೂ
ಡುವರೊಡಸ್ತವರೆಂಬೊಡದು ಕೂಡದು ಕೇವಲಮಾತ್ಮಘಾತದೋ
ಷವೆ ಪೆಱತಿಲ್ಲ ಸತ್ತರೊಡಸಾಯದೆ ನಿಂದೊಡೆ ಮಾಡಲಕ್ಕುಮಿ
ತ್ತವರ್ಗೆ ಜಲಾಂಜಲಿಪ್ರಭೃತಿ ದಾನವಿಶೇಷ ಮಹೋಷಕಾರಮಂ ೨೦೩

ಸತ್ತಳೆ ಕಾಮದೇವನ ಪರೋಕ್ಷದೊಳಾ ರತಿ ಪಾಂಡು ಸತ್ತೊಡಂ
ಸತ್ತಳೆ ಕುಂತಿ ಮತ್ತಮಭಿಮನ್ಯುಕುಮಾರಕನಂದು ಸತ್ತೊಡೇ
ನುತ್ತರೆ ಸತ್ತಳೇ ನೆಗೞ್ದ ಸಿಂಧುನೃಪಾಲಕನಂದು ಸತ್ತೊಡಂ
ಸತ್ತಳೆ ದುಶ್ಯಳಾವನಿತೆಯಿಂತಿವು ನೀವರಿದಂದವಲ್ಲವೇ            ೨೦೪

ಬಿಳಿಯ ನಾರುಮಡಿಯ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ಒಂದೇಸಮನೆ ಗೋಳಾಡಿ ಅತ್ತಳು. ಟಿ. ದುಕೂಲ=ರೇಷ್ಮೆ ಬಟ್ಟೆ, ಉತ್ತಮವಾದ ಬಟ್ಟೆ ಎಂಬ ಅರ್ಥವಿದೆ. ಪ್ರಕೃತ ಸಂದರ್ಭಕ್ಕೆ ತಕ್ಕಂತೆ ಉತ್ತಮವಾದ ನಾರುಮಡಿ ಎಂದು ಹೇಳಬೇಕು. ವ|| ಹೀಗೆ ಅಳುತ್ತಿದ್ದ ಅವಳನ್ನು ಬಹಳ ಕಷ್ಟದಿಂದ ಸಮಾಧಾನಪಡಿಸಿ, ೨೦೦. ಚಂದ್ರಾಪೀಡನಿಗೆ ಮೊದಲೆ ಅವಳ ಸದ್ಗುಣಗಳಿಂದ ಗೌರವವುಂಟಾಗಿತ್ತು. ಈಗ ಅವಳು ತನ್ನ ವೃತ್ತಾಂತವನ್ನೆಲ್ಲಾ ಆದ್ಯಂತವಾಗಿ ಒಳ್ಳೆಯ ಮನಸ್ಸಿನಿಂದ ಹೇಳಿದ್ದಕ್ಕೆ ಅವನು ಆಕರ್ಷಿಸಲ್ಪಟ್ಟ ಮನಸ್ಸುಳ್ಳವನಾಗಿ ಹೀಗೆ ಹೇಳಿದನು. ೨೦೧. “ಪೂಜ್ಯಳೆ, ಲೋಕದಲ್ಲಿ ಒಂದಷ್ಟು ಕಣ್ಣೀರನ್ನು ಸುರಿಸಿ ಸ್ನೇಹವನ್ನು ತೋರ್ಪಡಿಸಿಕೊಳ್ಳುವ ಹೆಂಗಸರಲ್ಲಿ ವಿಶೇಷವೇನಿದೆ? ನೀನಾದರೋ ಅಪಾರವಾದ ಐಹಿಕ ಸುಖಭೋಗವನ್ನು ಹೀಗೆ ತೊರೆದು, ಕಾಡಿನಲ್ಲೆ ನೆಲೆಸಿ, ಕೋಮಲವಾದ ಶರೀರವನ್ನು ದಂಡಿಸಿ, ಇಷ್ಟೊಂದು ಕಠೋರವಾದ ತಪಸ್ಸಿಗೆ ಈಡುಮಾಡಿರುವೆ, ನಿನ್ನಂತೆ ಇನಿಯನಲ್ಲಿ ಕೃತಜ್ಞತೆಯುಳ್ಳ ಹೆಂಗಸರು ಯಾರಿದ್ದಾರೆ? ೨೦೨. ಒಂದು ವೇಳೆ ಸಹಗಮನವನ್ನು ಮಾಡಿದರೆ ಸತ್ತವರು ಏಳುತ್ತಾರೆಯೇ? ತಮ್ಮ ದುಖಭಾರವನ್ನು ಅಡಗಿಸಬೇಕೆಂಬ ಒಂದು ಕಾತರತೆಯಿಂದ ಕೆಲವರು ಜೊತೆಯಲ್ಲಿ ಸಾಯುತ್ತಾರೆ. ಅಂತಹವರು ಸತ್ತವರಿಗೆ ಯಾವ ಹಿತವನ್ನು ಮಾಡಿದಂತಾಗುತ್ತದೆ? ೨೦೩. ಸತ್ತವರು ಅವರವರು ಮಾಡಿದ ಕರ್ಮಕ್ಕೆ ಅನುಸಾರವಾಗಿ ಬೇರೆಬೇರೆ ಕಡೆಗಳಲ್ಲಿ ಜನ್ಮವನ್ನು ಪಡೆಯುತ್ತಾರೆ. ಅದರಿಂದ ಮೊದಲು ಸತ್ತವರೂ ಅವರ ಜೊತೆಯಲ್ಲಿ ಸತ್ತವರೂ ಸತ್ತ ಮೇಲೆ ಒಟ್ಟಿಗೆ ಸೇರುತ್ತಾರೆ ಎಂಬುದು ಸುತರಾಂ ಅಸಂಗತವಾಗುತ್ತದೆ. ಅಲ್ಲದೆ ಜೊತೆಯಲ್ಲಿ ಸತ್ತವರಿಗೆ ಆತ್ಮಹತ್ಯಾದೋಷವು ಬೇರೆ ಬರುತ್ತದೆ; ಬೇರೆ ಯಾವ ಪ್ರಯೋಜನವೂ ಇಲ್ಲ. ಅಲ್ಲದೆ ಸತ್ತವರ ಜೊತೆಯಲ್ಲಿ ಸಾಯದೆ ಬದುಕಿದ್ದರೆ, ಅವರಿಗೆ ತರ್ಪಣ ಮೊದಲಾದುವುಗಳನ್ನು ಕೊಡುವುದರಿಂದ ಮಹೋಪಕಾರವನ್ನು ಮಾಡಲು ಸಾಧ್ಯವಾಗುತ್ತದೆ. ೨೦೪. ಮನ್ಮಥನು ಸತ್ತು ಅಗಲಿದನಂತರ ಅವನ ಹೆಂಡತಿಯಾದ ರತಿಯು ಸತ್ತಳೇನು? ಪಾಂಡುಮಹಾರಾಜನು ಸತ್ತಾಗ ಕುಂತಿ ಸತ್ತಳೆ? ಮತ್ತು ಅಭಿಮನ್ಯು ಸತ್ತಾಗ ಉತ್ತರೆಯು ಸತ್ತಳೆ? ಸೈಂಧವನು ಸತ್ತಾಗ ದುಶ್ಯಳೆಯು ಸತ್ತಳೆ? ಇವೆಲ್ಲವೂ

ವ|| ಅಂತುಮಲ್ಲದೆಯುಂ

ಆನಾಶ್ವಾಸಿಸಿದನಿತಱ
ಳೇನಾ ಚಂದ್ರಮನೆ ನಿನ್ನನಾಶ್ವಾಸಿಸಿದಂ
ತಾನೆಂದೊಡದೇನೆಂಬುದೊ
ಮಾನಿನಿ ತದ್ವಿಧರ ವಚನಮವಿತಥಮೆ ವಲಂ             ೨೦೫

ವ|| ಅದಱನನಿಂದ್ಯಮಪ್ಪ ನಿಜಚರಿತಮಂ ನಿಂದಿಸಲಾಗದೆಂದನೇಕ ಪುರಾಣಕಥಾ ಪ್ರಕಥನದೊಳಂ ಬಹುಪ್ರಕಾರ ಸಾಂತ್ವವಚನ ದೊಳಮೆಂತಾನುಮರಸಂ ಸಂತೈಸಿ

ವಿನಯದೊಳೆ ಮತ್ತಮಂದೊ
ಯ್ಯನೆ ನಿರ್ಝರವಾರಿಯಂ ನಿಜಾಂಜಲಿಯಿಂ ತಂ
ದನುವಿಸಿ ವದನಪ್ರಕ್ಷಾ
ಳನಮಂ ಮಾಡಿಸಿದನಂದು ಚಂದ್ರಾಪೀಡಂ   ೨೦೬

ಅವಧರಿಸಿ ಮಹಾಶ್ವೇತಾ
ಪ್ರವೃತ್ತಿಯಂ ಶೋಕಭಾರಮಂ ತಾಳ್ದಿದವೋಲ್
ರವಿಯುಂ ದಿವಸವ್ಯಾಪಾ
ರವೆಲ್ಲಮಂ ಪತ್ತುವಿಟ್ಟಧೋಮುಖನಾದಂ      ೨೦೭

ವ|| ಅನಂತರಂ ರವಿಬಿಂಬಮಪರಾಂಭೋಗೆ ವಿಲಂಬಿಸುವುದುಂ

ಜಳಜಭವಾಂಡಂ ಜಂಬೂ
ಫಳರಸದಿಂ ತೀವಿತೆಂಬಿನಂ ಜಗಮಂ ಕೋ
ಕಿಳನಯನರುಚಿರುಚಿರ ಕ
ಣಳಿಸಿರೆ ಪರ್ವಿದುದು ಸಾಂದ್ರ ಸಂಧ್ಯಾರಾಗಂ            ೨೦೮

ವ|| ಆ ಸಂಧ್ಯಾಸಮಯದೊಳ್

ಬೞಕೆ ಪದಮಂ ಕಮಂಡಲು
ಜಳದಿಂದಂ ಕರ್ಚಿ ತೀರ್ಚಿ ಸಂಧ್ಯಾನಿಯಮಂ
ಗಳನೆಯ್ದಿ ಭಸ್ಮಶಯ್ಯಾ
ತಳದೊಳ್ ಬಿಸುಸುಯ್ದು ಮೆಯ್ಯನಿಕ್ಕಿದಳಾಗಳ್         ೨೦೯

ನಿಮಗೆ ತಿಳಿದಿರುವ ವಿಷಯವೇ ಅಲ್ಲವೆ? ವ|| ಅದಲ್ಲದೆ ೨೦೫. ನಾನು ಸಮಾಧಾನಪಡಿಸುವುದು ಏನು ಮಹಾ ದೊಡ್ಡ ವಿಚಾರ. ಆ ಚಂದ್ರನೇ ಬಂದು ನಿಮ್ಮನ್ನು ಸಮಾಧಾನಪಡಿಸಿದ್ದಾನೆ ಎಂದ ಮೇಲೆ ಅದರ ಅತಿಶಯವನ್ನು ಏನು ಹೇಳೋಣಮ್ಮ. ಅಂತಹವರ ಮಾತು ಖಂಡಿತವಾಗಿಯೂ ಸುಳ್ಳಾಗುವುದಿಲ್ಲ. ವ|| ಅದರಿಂದ ತೆಗಳಿಕೆಗೆ ತಕ್ಕುದಲ್ಲದ ನಿನ್ನ ನಡೆವಳಿಕೆಯನ್ನು ತೆಗಳಬಾರದು ಎಂದು ಅನೇಕ ಪುರಾಣಕಥೆಗಳನ್ನು ಹೇಳುವುದರಿಂದಲೂ, ಅನೇಕ ಪ್ರಕಾರವಾದ ಸಮಾಧಾನದ ಮಾತುಗಳಿಂದಲೂ ಹೇಗೋ ಸಮಾಧಾನ ಪಡಿಸಿ ೨೦೬. ಮತ್ತು ಆಗ ವಿನಯದಿಂದ ಮೆಲ್ಲನೆ ಹೋಗಿ ಝರಿಯ ನೀರನ್ನು ತನ್ನ ಬೊಗಸೆಯಿಂದ ತಂದು ಚಂದ್ರಾಪೀಡನು ಅವಳಿಗೆ ಇಷ್ಟವಿಲ್ಲದಿದ್ದರೂ ಬಲಾತ್ಕಾರಮಾಡಿಯೇ ಮುಖವನ್ನು ತೊಳೆದುಕೊಳ್ಳುವಂತೆ ಮಾಡಿದನು. ೨೦೭. ಈ ಮಹಾಶ್ವೇತಾವೃತ್ತಾಂತವನ್ನು ಕೇಳಿ ತಿಳಿದು ಮಹತ್ತರವಾದ ದುಖವನ್ನು ಪಡೆದಂತೆ ಸೂರ್ಯನೂ, ಹಗಲಿನ ಕೆಲಸವನ್ನು (ಬೆಳಕು ಕೊಡುವ, ಸಂಚರಿಸುವ ಕೆಲಸವನ್ನು) ತೊರೆದು ಅಧೋಮುಖನಾದನು. (ಕೆಳಕ್ಕೆ ಇಳಿದನು, ಮುಖವನ್ನು ತಗ್ಗಿಸಿದನು) ವ|| ಬಳಿಕ ಸೂರ್ಯಮಂಡಳವು ಪಶ್ಚಿಮಸಮುದ್ರಕ್ಕೆ ಇಳಿಯುತ್ತಿರಲಾಗಿ ೨೦೮. ಬ್ರಹ್ಮಾಂಡವು ನೇರಳೆಹಣ್ಣಿನ ರಸದಿಂದ ಲೇಪನ ಹೊಂದಿದಂತೆ ಕೋಕಿಲೆಯ ಕಣ್ಣಿನಂತೆ ಸುಂದರವಾದ ಕಾಂತಿಯುಳ್ಳ ದಟ್ಟವಾದ ಸಂಜೆಗೆಂಪು ಜಗತ್ತಿನಲ್ಲಿ ಹರಡಿತು. ವ|| ಆ ಸಂಧ್ಯಾಕಾಲದಲ್ಲಿ ೨೦೯. ಬಳಿಕ ಕಮಂಡಲುವಿನ ನೀರಿನಿಂದ ಕಾಲುಗಳನ್ನು ತೊಳೆದುಕೊಂಡು, ಸಂಧ್ಯಾಕಾಲದಲ್ಲಿ ಮಾಡಬೇಕಾದ ವಿಗಳನ್ನೆಲ್ಲಾ ಮುಗಿಸಿಕೊಂಡು ಭಸ್ಮಶಯ್ಯೆಯಲ್ಲಿ ನಿಟ್ಟುಸಿರುಬಿಟ್ಟು ಕುಳಿತುಕೊಂಡಳು. ಟಿ. ಕಟ್ಟುನಿಟ್ಟಾದ ಪಾಶುಪತವ್ರತವನ್ನು ತಾಳಿರುವವರು

ವ|| ಇತ್ತ ಕೃತಸಂಧ್ಯಾವಂದನಂ ನರೇಂದ್ರನಾತ್ಮೀಯ ಪ್ರಕಲ್ಪಿತ ಲತಾಪಲ್ಲವಶಯನದೊಳ್ ಕುಳ್ಳಿರ್ದು ಮನೋಭವವಿಜೃಂಭಿತಂಗಳಂ ಮನದೊಳ್ ಭಾವಿಸುತ್ತಂ ವಿಸ್ಮಯಾಕ್ಷಿಪ್ತಚಿತ್ತನಿಂತೆಂದಂ

ತರಳಿಕೆಯೆಂಬಳ್ ನಿಮ್ಮಯ
ಪರಿಚಾರಿಕೆಯೆತ್ತವೋದಳೆಲ್ಲಿರ್ದಪಳೆಂ
ದರಸಂ ಬೆಸಗೊಳ್ವುದುಮಾ
ದರದೆ ಮಹಾಶ್ವೇತೆ ಪೇೞಲುದ್ಯತೆಯಾದಳ್             ೨೧೦

ವ|| ಅದೆಂತೆನೆ

ವಿಭೂತಿಯಿಂದ ಏರ್ಪಡಿಸಿರುವ ಹಾಸಿಗೆಯ ಮೇಲೆ ಮಲಗುತ್ತಾರೆ. ಅದಕ್ಕೆ “ಭಸ್ಮಶಯ್ಯೆ” ಎಂದು ಹೆಸರು. ವ|| ಈ ಕಡೆ ಚಂದ್ರಾಪೀಡನು ಸಂಧ್ಯಾವಂದನೆಯನ್ನು ಮಾಡಿ ತಾನೆ ಬಳ್ಳಿಯ ಚಿಗುರಿನ ಹಾಸಿಗೆಯನ್ನು ಮಾಡಿಕೊಂಡು ಕುಳಿತುಕೊಂಡನು. ಅಲ್ಲಿ ಮನ್ಮಥನ ವಿಚಿತ್ರಚೇಷ್ಟೆಗಳನ್ನು ಮನಸ್ಸಿನಲ್ಲೇ ಆಲೋಚಿಸುತ್ತ ಆಶ್ಚರ್ಯದಿಂದ ಕೂಡಿದ ಮನಸ್ಸುಳ್ಳವನಾಗಿ ಹೀಗೆ ಹೇಳಿದನು. ೨೧೦. “ನಿಮ್ಮ ಊಳಿಗದವಳಾದ ತರಳಿಕೆ ಎಂಬುವಳು ಎಲ್ಲಿಗೆ ಹೋಗಿದ್ದಾಳೆ? ಎಲ್ಲಿದ್ದಾಳೆ?” ಎಂದು ಚಂದ್ರಾಪೀಡನು ಕೇಳಲು ಮಹಾಶ್ವೇತೆಯು ಆದರದಿಂದ ಹೇಳಲುಪಕ್ರಮಿಸಿದಳು. ವ|| ಅದು ಹೇಗೆಂದರೆ

ಪುಸ್ತಕ: ಕರ್ಣಾಟಕ ಕಾದಂಬರಿ
ಲೇಖಕರು: ನಾಗವರ್ಮ (ಗದ್ಯಾನುವಾದ: ಹ.ವೆ. ನಾರಾಯಣಶಾಸ್ತ್ರೀ)
ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು


ಕೃಪೆ : ಕಣಜ


ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.