Friday, March 30, 2012


ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.
ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.
Anna_Hazare (Pic courtesy: wikipedia)
ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)
Anna_Hazareನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?
ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.
ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.
ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?
ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.
ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.
ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?
ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.
ಕೃಪೆ : ವರ್ತಮಾನ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.