ನದಿಗೆ ಬದುಕು ರೂಪಕವೊ?
ಬದುಕಿಗೆ ನದಿ ರೂಪಕವೊ?
ಪ್ರಶ್ನೆ ಅದಲ್ಲ
ತೇಲಿದರೆ ಕಾಣುವುದೊಂದು
ಒಳಗಿಳಿದರೆ ಸಿಗುವುದೊಂದು... ಎಂಬುದಷ್ಟೇ ಮುಖ್ಯ
ಹರಿದು ನದಿಯಾಗುವ
ತೆರೆದು ಬದುಕಾಗುವಲ್ಲಿ
ಮುಚ್ಚಿಡುವ ಮಾತು ತೀರ ಎಳಸು
ನನಗೆ ಅರ್ಥವಾಗಲಿ ಎಂದು
ಅದೇ ಹಳೆ ಶಬ್ದಗಳಲ್ಲೆ
ನಾನಿದನ್ನು ಗುರುತಿಟ್ಟುಕೊಂಡಿದ್ದೇನೆ
ಬದುಕಿಸುವ ಭಾಷೆಗೆ
ಬೇರೆ ರೂಪ, ಅರ್ಥ ಇರುವುದುಂಟೆ?
ಹರಿವ ನದಿಗೆ ಮುಚ್ಚಿಟ್ಟುಕೊಳ್ಳಲು ಬರುವುದುಂಟೆ?
ಹತ್ತಿರ ನಡೆ
ಕನ್ನಡಿ ದೂರವಾದಷ್ಟೂ ನಿನ್ನದೇ
ಮುಖ ಅಸ್ಪಷ್ಟವಾಗುವುದು
ಕತ್ತಲಾಗುವುದು ಎಂದೂ ಅಸಹಜವಲ್ಲ
ಕತ್ತಲಾದ ಮೇಲೆ ಹಣತೆ ಹಚ್ಚದಿರುವುದಷ್ಟೇ ಅಸಹಜ
ಹೇಳಲು ಇನ್ನೇನೂ ಉಳಿದಿಲ್ಲ
ಸಹಜ ಅಸಹಜಗಳ ದಂಡೆಗಳ ಮೇಲೆಯೇ ಬದುಕು ಕಾಲೂರಿದೆ
No comments:
Post a Comment