Sunday, March 04, 2012

ಅಂಬೇಡ್ಕರ್ ಎಂಬ ಕರಗದ ಬಂಡೆ !



  ರಘೋತ್ತಮ ಹೊ. ಬ


ಹುಶಃ ಹೀಗೆಂದರೆ ಯಾರಾದರೂ ನಗಾಡಬಹುದು. ಏನು? ಅಂಬೇಡ್ಕರರನ್ನು ಹೀಗೆಲ್ಲಾ ಹೋಲಿಸಬಹುದೇ? ಅಥವಾ ಅವರ ಸಿದ್ಧಾಂತವನ್ನು ಹೇಗೆಂದರೆ ಹಾಗೆ ಹೇಳಬಹುದೇ ಎಂದು ಯಾರಾದರೂ ಕೇಳಬಹುದು. ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ? ಅವರ ಇತಿಹಾಸವನ್ನು, ಅವರ ಜೀವನದ ಒಂದೊಂದು ಘಟನೆಗಳನ್ನು, ಆ ಘಟನೆಗಳ ಒಂದೊಂದು ಕ್ಷಣವನ್ನು ಅವಲೋಕಿಸಿದರೆ ಹೌದಾ! ಎಂದು ಚಕಿತರಾಗಿ ನೋಡುತ್ತಿದ್ದರೆ! ಅವರೊಂದು ವಿಸ್ಮಯದ ಕರಗದ ಬಂಡೆ ಎಂಬುದು ತಿಳಿಯುತ್ತದೆ. ಈ ದೇಶದ ವಿವಿಧ ವಾದಗಳು ಎಂಬ ನದಿಗಳ ದಿಕ್ಕನ್ನೇ ಬದಲಿಸಿದ ಬಂಡೆ ಎಂಬುದು ಅರ್ಥವಾಗುತ್ತದೆ. ಅಂದಹಾಗೆ ಅಂಬೇಡ್ಕರ್‌ರವರಿಗೆ ಇದರ ಅರಿವು ಇರಲಿಲ್ಲವೇ? ಅಂದರೆ ನಾನು ಮಾಡುತ್ತಿರುವುದೆಲ್ಲ ಈ ದೇಶದ ಸ್ಥಾಪಿತ ವ್ಯವಸ್ಥೆಗೆ ವಿರುದ್ಧವಾದುದು, ಈ ದೇಶದ ಪಟ್ಟಭದ್ರಶಾಹಿಗೆ ವಿರುದ್ಧವಾದುದು. ಎಂಬುದರ ಅರಿವಿರಲಿಲ್ಲವೇ? ಖಂಡಿತ ಇತ್ತು.
ಅದನ್ನು ಅಂದರೆ ತಮ್ಮ ಈ ತಮ್ಮತನವನ್ನು ಬಿಟ್ಟುಕೊಡದ ನಡೆಯನ್ನು ಗಮನಿಸಿಯೇ ಅವರು I am like a rock which does not melt but turns the course of the river” ಎಂದಿರುವುದು. ಹೌದು, ಅಂಬೇಡ್ಕರ್ ಈ ದೇಶದ ‘‘ನದಿಗಳ’’ ದಿಕ್ಕುಗಳನ್ನೇ ಬದಲಿಸಿದ ಸರದಾರ, ಏಕಾಂಗಿ ವೀರ. ಅವರು ಆ ವಾಕ್ಯವನ್ನು ಅಂದರೆ ‘‘ನಾನೊಂದು ಕಲ್ಲು ಬಂಡೆಯಂತೆ ಕರಗುವುದಿಲ್ಲ! ಆದರೆ ನದಿಯ ದಿಕ್ಕನ್ನೇ ಬದಲಿಸುವವನು’’ ಎಂದಿರುವುದು ಅವರ ವ್ಯಕ್ತಿತ್ವವನ್ನು ಅವರು ಗಟ್ಟಿಯಾಗಿ ಕಾಪಾಡಿಕೊಂಡದ್ದಕ್ಕೆ ಅವರ ನಿಲುವನ್ನು ಅವರು ಬದಲಿಸದ್ದಕ್ಕೆ.
ಅಂದಹಾಗೆ ಅಂಬೇಡ್ಕರ್‌ರವರು ಈ ಮಾತನ್ನು ಹೇಳಿದ್ದು ಅವರು ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದೂ ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ. ಆದರೆ ‘‘ನದಿಯ ದಿಕ್ಕನ್ನೇ ಬದಲಿಸಿದೆ’’ ಎಂಬ ಅವರ ಬಾಯಿಯಿಂದ ಹೊರಟ ಆ ಮಾತು? ಭಾರತದ ಇತಿಹಾಸದಲ್ಲೇ ಅವರು ಆಡಿದ ಪ್ರಮುಖ ಪಾತ್ರದ ಬಗ್ಗೆ, ಹಾಗೆ ಆಡಿಯೂ ಬೇರೆ ಪಾತ್ರಗಳ ಆಟಾ ಟೋಪದಲ್ಲಿಯೂ ಅವರು ಕಳೆದುಹೋಗದೇ ಉಳಿದುಕೊಂಡ ಬಗೆ, ಹಾಗೆ ಉಳಿದು ತನ್ನ ಜನರನ್ನು ಅಂತಹ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು.
ಯಾರಿಗೆ ಗೊತ್ತಿತ್ತು? ದಲಿತರಲ್ಲಿಯೂ ಅಂಬೇಡ್ಕರ್‌ರಂತಹ ಕ್ರಾಂತಿಕಾರಿ ಹುಟ್ಟುತ್ತಾರೆಂದು? ಹುಟ್ಟಿ ಈ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುತ್ತಾರೆಂದು? ಯಾವ ಜಡ್ಡು ಗಟ್ಟಿದ ಅಂತಹ ವ್ಯವಸ್ಥೆಯನ್ನೆ ಬುಡಮೇಲು ಗೊಳಿಸುತ್ತಾರೆಂದು? ಆದರೆ ಅಂತಹದೊಂದು ಭಾರತದ ಇತಿಹಾಸದಲ್ಲಿ 1891ರಿಂದ 1956ರ ನಡುವೆ ನಡೆದು ಹೋಗಿದೆ. ಹುಟ್ಟಿನಿಂದ ಹಿಡಿದು ಮರಣದವರೆಗೆ ಅಂಬೇಡ್ಕರ್ ಬದುಕಿದ ಬಗೆ ರೋಚಕ, ವಿಸ್ಮಯಕಾರಿ, ಕುತೂಹಲಭರಿತ. ಇದಕ್ಕಿಂತ ಹೆಚ್ಚಾಗಿ 65 ವರ್ಷಗಳ ತಮ್ಮ ತುಂಬು ಜೀವನದಲ್ಲಿ ಅವರು ಹಿಂದೂವಾದ, ಕಮ್ಯುನಿಸ್ಟ್ ವಾದ, ಸಮಾಜವಾದ, ಗಾಂಧಿವಾದ ಇತ್ಯಾದಿ ನದಿಗಳಲ್ಲಿ ಕರಗಲೇ ಇಲ್ಲ. ಬದಲಿಗೆ ಅಂತಹ ನದಿಗಳು ಅಂಬೇಡ್ಕರ್‌ರನ್ನು ಕೊಚ್ಚಿ ಕೊಂಡು ಹೋಗಲು, ಕರಗಿಸಲು ಪ್ರಯತ್ನಿಸಿದವಾದರೂ ಅವುಗಳಿಗೆ ಅದುಸಾಧ್ಯವಾಗಲೇಇಲ್ಲ
ಯಾಕೆಂದರೆ ಅವರೇ ಹೇಳಿಕೊಂಡಿರುವ ಹಾಗೆ ಅವರು ಕರಗದ ಬಂಡೆ! ಬೇಕಿದ್ದರೆ ‘ನದಿ’ ಆ ‘ಬಂಡೆ’ಯನ್ನು ನೋಡಿ ಕೋಪದಿಂದ ಮತ್ತಷ್ಟು ಉಕ್ಕಿ ಹರಿದಿರಬಹುದೇ ಹೊರತು ಅದನ್ನು ಮುಳುಗಿಸಲು ಅವುಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಹಾಗಿದ್ದರೆ ಆ ನದಿಗಳು ಆಡಿರುವ ಪಾತ್ರ? ಮೊಟ್ಟಮೊದಲಿಗೆ ನಾವು ‘ಹಿಂದೂ ನದಿ’ಯ ಬಗ್ಗೆ ಹೇಳಲೇ ಬೇಕು. ‘ಹಿಂದೂ’ ಬಹುಶಃ ಅಂತಹ ‘ನದಿ’ಯೇ ಇಲ್ಲ ಎಂದು ಅಂಬೇಡ್ಕರರು ಒಂದೆಡೆ ಹೇಳುತ್ತಾರೆ. ಯಾಕೆಂದರೆ ಅವರು ಹೇಳಿರುವುದು There is no Hinduism ಎಂದು.
ಹಾಗೆ ಹೇಳುವ ಮೂಲಕ ಅವರು ‘ಅದು’ ತಮ್ಮ ಹತ್ತಿರ ಸುಳಿಯದ ಹಾಗೆ ತಮ್ಮ ಸುತ್ತಲಿನ ಇತರೆ ಬಂಡೆಗಳನ್ನು ಸೋಕದ ಹಾಗೆ ಬದುಕಿದ್ದಾರೆ. ಅದೂ ಎಂತಹ ಬದುಕು? ಅಂತಹ ಬದುಕನ್ನು ಅಂಬೇಡ್ಕರರು ಆ ಕಾಲದಲ್ಲಿ ಬದುಕಿದ್ದರೆ? ಎಂಬುದೇ ಒಂದು ರೋಚಕ, ವಿಸ್ಮಯಕಾರಿ ಸಂಶೋಧನೆಗೆ ಸರಕಾಗುತ್ತದೆ. ಬಹುಶಃ ಅಂಬೇಡ್ಕರ್‌ರ ಬದುಕಿನ ಅಂತಹ ಒಂದು ಸಮಗ್ರ ಸಂಶೋಧನೆ ಏನಾ ದರೂ ನಡೆದು ಅದು ಬರಹದ ರೂಪದಲ್ಲಿ ದಾಖಲಾದರೆ ಹಿಂದೂ ಧರ್ಮ ಈ ಕಾಲಕ್ಕೆ ರಿಪೇರಿ ಆಗಲು ಖಂಡಿತ ಸಾಧ್ಯವಿಲ್ಲ! ಅಷ್ಟೊಂದು ಪ್ರಬಲ ಪ್ರತಿರೋಧವನ್ನು ಒಡ್ಡಿದ್ದಾರೆ ಅಂಬೇಡ್ಕರ್‌ರವರು! ಏಕೆಂದರೆ 1929ರ ಆ ಕಾಲದಲ್ಲೇ ಹಿಂದೂ ಧರ್ಮದ ಆಧಾರ ಸ್ತಂಭವಾದ ಮನುಸ್ಮೃತಿಯನ್ನು ಸುಟ್ಟವರು ಅಂಬೇಡ್ಕರ್‌ರವರು.
1935ರಲ್ಲಿ ‘‘ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯಲಾರೆ’’ ಎಂದು ಗುಡುಗಿದರು ಮತ್ತು ಅವರು ಹಾಗೇ ಸಾಧಿಸಿ ತೋರಿಸಿದರು ಕೂಡ! ಇವಿಷ್ಟೇ ಸಾಕು ಅಂಬೇಡ್ಕರ್‌ರನ್ನು ‘ಹಿಂದೂ’ ಎಂಬ ‘ನದಿ’ ಏಕೆ ಸೋಕಲಾಗಲಿಲ್ಲ. ಅಥವಾ ಆ ‘ಅದ್ಭುತ ಅಗ್ನಿ ಪರ್ವತ’ವನ್ನು ನೋಡಿ ಅದು ಏಕೆ ತನ್ನ ದಿಕ್ಕನ್ನೇ ಬದಲಿಸಿಕೊಂಡಿತು ಎಂಬುದಕ್ಕೆ. ಅಂದಹಾಗೆ ‘ಹಿಂದೂ ಧರ್ಮದ ಒಗಟುಗಳು’, ‘ಕ್ರಾಂತಿ ಮತ್ತು ಪ್ರತಿ ಕ್ರಾಂತಿ’, ‘ಶೂದ್ರರು ಯಾರು?’ ‘ಜಾತಿ ನಿರ್ಮೂಲನೆ’ ಇತ್ಯಾದಿ ಕೃತಿಗಳೆಂಬ ಸಿಡಿತಲೆಗಳು ಆ ‘ಅಗ್ನಿಪರ್ವತ’ದಿಂದ ಅರ್ಥಾತ್ ಬೆಂಕಿಯ ಬಂಡೆಯಿಂದ ಹೊರ ಬಿದ್ದಿವೆ. ಆದರೆ ಅವಷ್ಟೆ ಅಲ್ಲ. ಅವರ ಜೀವನದ ಪ್ರತಿಯೊಂದು ಕ್ಷಣವು ಹಿಂದೂ ಧರ್ಮದ ವಿರುದ್ಧ ನಿತ್ಯ ಸೆಣಸಿದ ಅಮೃತ ಘಳಿಗೆಗಳಂತೆ ಇವೆ. ಅಂತಹ ಅಮೃತ ಘಳಿಗೆಗಳಿಂದಲೇ ಬಾಬಾ ಸಾಹೇಬ್ ಎಂಬ ಅಮೃತ ಶಿಲೆ ಹುಟ್ಟಿರುವುದು ಎಂದರೆ ಅತಿಶಯೋಕ್ತಿಯೇನಲ್ಲ.
ಅಂಬೇಡ್ಕರ್‌ರನ್ನು ಮುಳುಗಿಸಲಾಗದೇ, ಕರಗಿಸಲಾಗದೇ ತನ್ನ ದಿಕ್ಕನ್ನೇ ಬದಲಿಸಿದ ಮತ್ತೊಂದು ನದಿಯೆಂದರೆ ಅದು ಗಾಂಧಿವಾದ. ಗಾಂಧಿವಾದ ಬಹುಶಃ ಅಂಬೇಡ್ಕರ್‌ರು ಹೇಳುವ ಹಾಗೆ ಅದು ಆ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ವಾದ. ಅವರನ್ನು ಅಂದರೆ ಗಾಂಧೀಜಿಯ ವರನ್ನು ಇಂದ್ರ, ಚಂದ್ರ ಎಂದು ಹೊಗಳಿ ಅವರಿಂದಾಗಿಯೇ ಈ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ವರ್ಣಿಸುವ ವಾದ ಅದು. ಅಂತಹ ವರ್ಣನೆಯನ್ನು ತೆಗಳಲು ಹೋಗುತ್ತಿಲ್ಲ. ಆದರೆ ಅಂತಹ ವಾದ ಅಂಬೇಡ್ಕರ್‌ರನ್ನು ಮುಳುಗಿಸಲಾಗಲಿಲ್ಲ, ಅಲು ಗಾಡಿಸಲು ಸಾಧ್ಯವಾಗಲಿಲ್ಲ. ಎಂಬುದನ್ನಷ್ಟೆ ಇಲ್ಲಿ ಹೇಳಲು ಬಯಸುತ್ತಿರುವುದು. ಹೌದು ಗಾಂಧಿವಾದ ಅಂಬೇಡ್ಕರ್‌ರ ವಿರುದ್ಧ ಹಿಂದೂ ವಾದದಷ್ಟೆ ಪ್ರಬಲವಾಗಿ ಅಪ್ಪಳಿಸಿದ ವಾದ.
ಒಂದರ್ಥದಲ್ಲಿ ಅವರನ್ನು ಅವರ ಜೀವನದಲ್ಲಿ ನಿರಂತರವಾಗಿ ಕಾಡಿದ ವಾದ. ಅದರ ಪ್ರವಾಹ ಮತ್ತು ಪ್ರಭಾವ ಅದೆಷ್ಟು ತೀಕ್ಷ್ಣವೆಂದರೆ ಬಹುಶಃ ಕೆಲವು ದಲಿತರು ಈಗಲೂ ಗಾಂಧಿವಾದವೆಂಬ ಆ ವಾದವನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಿ ದ್ದಾರೆ. ಅಷ್ಟೊಂದು ವೇಗದ್ದು, ಘಾತುಕಕಾರಿ ಯಾದದ್ದು ಗಾಂಧಿವಾದವೆಂಬ ಆ ವಾದ. ಆದರೆ ಅದೃಷ್ಟವಶಾತ್ ಅಂಬೇಡ್ಕರ್ ಅದಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದರ ವಿರುದ್ಧ ಸಿಡಿದು ನಿಂತರು. ಯಾವ ಪರಿ ಎಂದರೆ ಸ್ವತಃ ಗಾಂಧೀಜಿಯೇ ತಮ್ಮ ಪ್ರಾಣಕ್ಕಾಗಿ ಅಂಬೇಡ್ಕರ್‌ರ ಬಳಿ ಭಿಕ್ಷೆ ಬೇಡುವಷ್ಟರ ಮಟ್ಟಿಗೆ! ಪ್ರಾಯಶಃ ಆ ಒಂದು ದಿನ ಅಂಬೇಡ್ಕರ್ ನಕಾರ ಸೂಚಿಸಿ ದ್ದರೆ ಗಾಂಧಿ ಇರುತ್ತಿರಲಿಲ್ಲ.
ಆದರೆ? ಅಂದರೆ ಪೂನಾ ಒಪ್ಪಂದದ ಆ ಸಂದರ್ಭದಲ್ಲಿ ಗಾಂಧೀಜೀಯವರ ಪ್ರಾಣ ಪಕ್ಷಿ ಹಾರಿ ಹೋಗಿ ದ್ದರೆ ಗಾಂಧಿವಾದ ಅಂಬೇಡ್ಕರ್‌ರನ್ನು ಮತ್ತು ಅವರ ಜನರನ್ನು ಕೊಚ್ಚಿಕೊಂಡು ಹೋಗಿರುತ್ತಿತ್ತು. ಇತಿಹಾಸದಲ್ಲಿ ಅಂಬೇಡ್ಕರ್‌ರ ಸಣ್ಣ ಕುರುಹು ಸಹ ಇರುತ್ತಿರಲಿಲ್ಲ. ಆದರೆ ಪೂನಾ ಒಪ್ಪಂದದ ಆ ಸಂಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್‌ರು ಗಾಂಧೀಜಿಯವರನ್ನು ಬದುಕಿಸಿದರು! ಆದರೆ ಗಾಂಧಿವಾದವನ್ನು ಸಾಯಿಸಿದರು!! ಗಾಂಧೀಜಿಯ ಬಗ್ಗೆ ಇಂದು ಯಾರು ಎಷ್ಟೇ ಮಾತನಾಡಲಿ. ಆದರೆ ಪೂನಾ ಒಪ್ಪಂದದ ಪ್ರಶ್ನೆ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ಅರ್ಥಾತ್ ಗಾಂಧಿ ವಾದಕ್ಕೆ full stop ಬೀಳುತ್ತದೆ.
ಗಾಂಧಿವಾದವನ್ನು ಹೇಳಲಾಗದೇ, ಸಮರ್ಥಿಸಲಾಗದೇ ಅಂತಹವರ ವಾದ ಅಕ್ಷರಶಃ ಸಾಯುತ್ತದೆ. ಯಾಕೆಂದರೆ ಗಾಂಧೀಜಿಯನ್ನು ಮತ್ತವರ ಸಿದ್ದಾಂತಗಳನ್ನು ಇಂದ್ರ, ಚಂದ್ರ ಎಂದು ಹೊಗಳಿ ಹಾಗಿದ್ದರೆ ಅವರು ಯಾಕೆ ಆ ಬಡಪಾಯಿ ದಲಿತರ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹವೆಂಬ ತಮ್ಮ ಕತ್ತಿ ಝಳಪಿಸಿದರು? ಎಂದು ಕೇಳಿದರೆ ಯಾರು ತಾನೇ ಉತ್ತರಿಸಲು ಸಾಧ್ಯ? ಉತ್ತರಿಸುವುದಿರಲಿ, ಹೌದಲ್ಲವಾ, ಗಾಂಧೀಜೀ ಹಾಗೆ ಏಕೆ ಮಾಡಿದರು? ಎಂದು ತಡವರಿಸುತ್ತಾರೆ. ತನ್ಮೂಲಕ ಆ ವಾದವನ್ನು ಹಳ್ಳ ಹಿಡಿಸುತ್ತಾರೆ.
ಒಂದರ್ಥದಲ್ಲಿ ಅಂಬೇಡ್ಕರ್ ಪೂನಾ ಒಪ್ಪಂದದಲ್ಲಿ ಸೋತು ಗೆದ್ದಿದ್ದಾರೆ. ಗಾಂಧೀಜಿ ಗೆದ್ದು ಸೋತಿದ್ದಾರೆ! ಅವರು ಸೋತಿದ್ದಾರೆ ಎಂದರೆ ಅಂಬೇಡ್ಕರ್‌ವಾದ ಗಾಂಧಿವಾದ ಎಂಬ ವಾದವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದರ್ಥ. ಅಥವಾ ಅದು ಮುಂದೆ ಚಲಿಸಿದೆ ಎಂದರೆ ಅಂಬೇಡ್ಕರ್ ಅದರಲ್ಲಿ ಅಂದರೆ ಗಾಂಧಿವಾದದಲ್ಲಿ ಮುಳುಗಲಿಲ್ಲ, ಕರಗಲೂ ಇಲ್ಲ. ಬೃಹತ್ ಬಂಡೆಯ ಹಾಗೆ ನಿಂತುಕೊಂಡರು ಎಂದು ಅರ್ಥ. ಅಕಸ್ಮಾತ್ ಹಾಗೆ ನಿಲ್ಲದೆ ಕೊಚ್ಚಿಕೊಂಡು ಹೋದರು ಎನ್ನುವುದಾದರೆ ಕಡೇ ಪಕ್ಷ ಗಾಂಧಿವಾದವನ್ನು ಹೊತ್ತುಕೊಂಡು ಸಾಗುತ್ತಿರುವ ಕಾಂಗ್ರೆಸ್‌ನಲ್ಲಾದರೂ ಅವರು ಸೇರಬೇಕಿತ್ತು ತಾನೇ?
ಊಹೂಂ ಅಂಬೇಡ್ಕರ್‌ರವರು ಗಾಂಧೀಜಿಯಿಂದ ಎಷ್ಟು ದೂರ ಇದ್ದರೋ ಅಷ್ಟೆ ದೂರ ಕಾಂಗ್ರೆಸ್‌ನಿಂದಲೂ ಸಹ ಇದ್ದರು. ಯಾವುದೇ ಕಾರಣಕ್ಕೂ ಆ ಪಕ್ಷದ ಸದಸ್ಯರಾಗಲಿಲ್ಲ. ಸದಸ್ಯರಿರಲಿ ಅದರ ಸಿದ್ಧಾಂತದತ್ತ ಸಹ ಕಣ್ಣೆತ್ತಿ ನೋಡಲಿಲ್ಲ. ಈ ನಿಟ್ಟಿನಲ್ಲಿ ತನ್ನ ಸಮುದಾಯವು ಸಹ ತನ್ನದೇ ಹಾದಿಯಲಿ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಾಬಾ ಸಾಹೇಬರು ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕುರಿತು “what Congress and Gandhi have done to untouchables? ಎಂಬ ಬೃಹತ್ ಗ್ರಂಥವನ್ನೇ ಬರೆದರು!
ಹಾಗೆ ಬರೆದು ಅದನ್ನು ತನ್ನವರಿಗೆ ‘‘ತಾನು ಹೇಗೆ ಗಾಂಧಿವಾದದಲ್ಲಿ ಕರಗಲಿಲ್ಲ’’ ಎಂಬುದನ್ನು ವಿವರಿಸಿ ಸಾಕ್ಷಿಯಾಗಿ ಇಟ್ಟು ಹೋದರು! ಸಮಾಜವಾದ ಅಥವಾ ಕಮ್ಯುನಿಸ್ಟ್‌ವಾದ ಬಹುಶಃ ಅಂಬೇಡ್ಕರ್‌ರನ್ನು ಮುಳುಗಿಸಲು ಬಂದ ಮತ್ತೊಂದು ವಾದ. ಕಾರ್ಲ್‌ಮಾರ್ಕ್ಸ್, ಲೆನಿನ್, ಮಾವೋ ಇತ್ಯಾದಿಗಳು ಇದರ ಪ್ರತಿಪಾದಕರಿರಬಹುದು. ಆದರೆ ಭಾರತದಲ್ಲಿ ಇದರ ಹೊಣೆ ಹೊತ್ತವರು ಬ್ರಾಹ್ಮಣರು! ಅಕ್ಷರಶಃ ಮಾರ್ಕ್ಸ್‌ವಾದ ದುಡಿಯುವ ವರ್ಗಗಳ ಬಡವರ ಪರ ಇತ್ತಾದರೂ ಅದು ಭಾರತದ ಕೆಳ ಜಾತಿಗಳ ಪರ ಇರಲಿಲ್ಲ! ಯಾಕೆಂದರೆ ಮಾರ್ಕ್ಸ್‌ಗೆ ಜಾತಿ ಗೊತ್ತಿರಲಿಲ್ಲವಲ್ಲ! ಹಾಗಂತ ಆತ ‘ಸಮಾಜವಾದ’ ಎಂಬ ಆ ಅಡುಗೆ ಮಾಡಿದ್ದು ಕೂಡ ಜಾತಿಪೀಡಿತ ಭಾರತಕ್ಕಲ್ಲ. ಪಾಶ್ಚಿಮಾತ್ಯ ಮತ್ತಿತರ ರಾಷ್ಟ್ರಗಳಿಗಷ್ಟೆ.
ಈ ನಿಟ್ಟಿನಲ್ಲಿ ಅದು ಭಾರತಕ್ಕೆ ಕಾಲಿಟ್ಟಿತ್ತಾದರೂ ಅಂಬೇಡ್ಕರ್ ಅದರ ಪ್ರಭಾವಕ್ಕೆ ಒಳಗಾಗಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು. ಜಾತಿ ತಾರತಮ್ಯಕ್ಕೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ ಎಂಬುದು. ಒಟ್ಟಿನಲ್ಲಿ ದಲಿತರ ಸಮಸ್ಯೆಗಳಿಗೆ ಮೇಲ್ನೋಟಕ್ಕೆ ಮಾರ್ಕ್ಸ್‌ವಾದದಲ್ಲಿ ಉತ್ತರ ಸಿಗುತ್ತದೆ ಎಂದೆನಿಸಿದರೂ ವಾಸ್ತವದಲ್ಲಿ ಅದು ಹಿಂದೂಗಳ ಕೈಗೆ ವರ್ಗ ಹೋರಾಟದ ಹೆಸರಿನಲ್ಲಿ ಸಿಗುವ ಮತ್ತೊಂದು ಶೋಷಣೆಯ ಅಸ್ತ್ರವೆಂಬುದು ಅಂಬೇಡ್ಕರ್‌ರಿಗೆ ಚೆನ್ನಾಗಿ ತಿಳಿದಿತ್ತು. ಆ ಕಾರಣಕ್ಕೆ ಅವರು ಮಾರ್ಕ್ಸ್‌ವಾದ ಅಥವಾ ಸಮಾಜವಾದದ ಪ್ರವಾಹಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದಕ್ಕೂ ಕೂಡ ‘‘ಬುದ್ಧ ಅಥವಾ ಕಾರ್ಲ್ಸ್‌ಮಾರ್ಕ್ಸ್’’ ಕೃತಿಯ ಮೂಲಕ ಒಂದು ಸವಾಲೆಸೆದರು.
ತನ್ಮೂಲಕ ದಲಿತರು ಮಾರ್ಕ್ಸ್‌ವಾದ ಬಲೆಯೊಳಗೆ ಬೀಳದ ಹಾಗೆ ನೋಡಿಕೊಂಡರು. ಅಂಬೇಡ್ಕರ್‌ರನ್ನು ಹಾದುಹೋದ ಮತ್ತೊಂದು ವಾದ ಹಿಂಸಾವಾದ. ಅದನ್ನು ಫ್ಯಾಸಿಸಂ ಎಂದಾದರೂ ಎನ್ನಿ, ನಕ್ಸಲಿಸಂ ಎಂದಾದರೂ ಎನ್ನಿ ಅಥವಾ ಇನ್ಯಾವುದೇ ಹೆಸರಿನಿಂದಾದರೂ ಕರೆಯಿರಿ. ಒಟ್ಟಿನಲ್ಲಿ ಹಿಂಸೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ವಾದಿಸುವ ವಾದವದು. ‘‘ಬಂದೂಕಿನ ನಳಿಕೆಯ ಮೂಲಕ ಅಧಿಕಾರ’’ ಎಂಬ ಸಿದ್ಧಾಂತವದು. ನಿಜ, ದಲಿತರ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ. ಹಿಂದೂಗಳ ದೌರ್ಜನ್ಯಕ್ಕೆ ದಬ್ಬಾಳಿಕೆಗೆ ಹಿಂಸೆಯೇ ಉತ್ತರ ಎಂದೆನಿಸುತ್ತದೆ. ಆದರೆ? ಒಮ್ಮೆ ದಲಿತರು ಬಂದೂಕು ಹಿಡಿದರೆ ಹಿಂದೂಗಳು ಸುಮ್ಮನಿರುತ್ತಾರೆಯೇ? ಅವರು Government Police ಮೂಲಕ ದಲಿತರ ಅಂತಹ ಬಂದೂಕನ್ನು ಬಂದ್ ಮಾಡಿಸುತ್ತಾರಷ್ಟೆ.
ಸಾಲದಕ್ಕೆ ದಲಿತರನ್ನೇನೂ ಬರೀ ಹಿಂಸೆಯ ಮೂಲಕವೇ ಈ ಸ್ಥಿತಿಗೆ ತಂದಿದ್ದಲ್ಲವಲ್ಲ. ಬದಲಿಗೆ ‘ಶಾಸ್ತ್ರ’ಗಳ ಮೂಲಕ, ಆ ‘ಶಾಸ್ತ್ರಗಳನ್ನು ಅದರ ವಿಧಿಗಳನ್ನು ಹೇಳುವುದರ ಮೂಲಕ, ಅವರನ್ನು ಅಕ್ಷರ, ಆಯುಧ ಇತ್ಯಾದಿ ಬದುಕಿನ ಆವಶ್ಯಕ ಅಂಶಗಳಿಂದ ದೂರವಿರಿಸಿ ನಿಷೇಧ ಹೇರಿದ್ದರಿಂದಷ್ಟೆ ಅಸ್ಪಶ್ಯತೆ ಬೆಳೆದಿದ್ದು. ಹೀಗಿರುವಾಗ ಅಂಬೇಡ್ಕರ್‌ರು ಅಂತಹ ಶಾಸ್ತ್ರಗಳನ್ನು, ಆ ಶಾಸ್ತ್ರಗಳನ್ನು ಬರೆಯುವ ಶಾಸನ ಸಭೆಗಳ ಸ್ಥಾನಗಳತ್ತ ಕಣ್ಣಿಟ್ಟರೆ ಹೊರತು ಸುಮ್ಮನೆ ಬಂದೂಕು ಹಿಡಿದು ಬೀದಿಯಲ್ಲಿ ನಿಂತು ರಕ್ತ ಚೆಲ್ಲುವುದರತ್ತಲ್ಲ. ಅಂತಿಮವಾಗಿ ಇದು“Budha and his Dhamma” ಕೃತಿಯ ಮೂಲಕ ಬಾಣ ಬಿಟ್ಟ ಅವರು ‘‘ದಲಿತರ ಸಮಸ್ಯೆಗಳಿಗೆ ಅಹಿಂಸಾವಾದಿ ಬುದ್ಧನಲ್ಲಿ ಪರಿಹಾರವಿದೆ’’ ಎಂದು ತಿಳಿಸಿ ಹಿಂಸಾವಾದದಲ್ಲಿ ತಾವು ಮುಳುಗುವುದನ್ನು ಅಥವಾ ಕರಗಿ ಹೋಗುವುದನ್ನು ತಪ್ಪಿಸಿಕೊಂಡರು.
ಒಟ್ಟಾರೆ ಹಿಂಸಾವಾದಕ್ಕೂ ಮೇಲೆ ಹೇಳಿದ ಉಳಿದ ವಾದಗಳಿಗೆ ಆದ ಗತಿಯನ್ನೇ ಕಾಣಿಸಿದರು! ಹಾಗಿದ್ದರೆ ಅಂಬೇಡ್ಕರ್ ಅದೆಂತಹ ವಾದಿ? ಅವರು ಅಪ್ಪಟ ಪ್ರಜಾಪ್ರಭುತ್ವವಾದಿ. ಪ್ರಜಾಪ್ರಭುತ್ವದ ಮಾರ್ಗದಿಂದಷ್ಟೆ ಅವರು ನ್ಯಾಯ ಪಡೆಯಬಹುದೆಂದರಿತ್ತಿದ್ದವರು. ಅದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಗೆಲ್ಲಲಿ ಸೋಲಲಿ ರಾಜಕೀಯವನ್ನೇ ಮಾಡುತ್ತಾ ಬಂದರು. "Political power is the master key through which you can unlock all doors of progress” ಎಂದು ತನ್ನ ಜನರಿಗೆ ನಿರಂತರ ಪಾಠ ಹೇಳುತ್ತಾ ಬಂದರು. ಮತ್ತು ಹಾಗೆಯೇ ಅಂತಹ ಪಾಠವನ್ನು ಇಡೀ ದೇಶಕ್ಕೆ ಹೇಳುವ ಅವಕಾಶ ಪಡೆದು ‘‘ಸಂವಿಧಾನ ಶಿಲ್ಪಿ’’ ಎನಿಸಿಕೊಂಡರು.
ಒಮ್ಮೆ ಅವರು ಸಂವಿಧಾನ ಶಿಲ್ಪಿ ಎನಿಸಿಕೊಂಡ ಮೇಲೆ, ಮೇಲೆ ಹೇಳಿದ ಹಿಂದೂವಾದ, ಗಾಂಧಿವಾದ, ಸಮಾಜವಾದ, ಹಿಂಸಾವಾದ ಇತ್ಯಾದಿ ವಾದಗಳು ಅವರ ಬಳಿ ಸುಳಿಯಲು ಸಾಧ್ಯವೇ? ಅವರು ಅದರಲ್ಲಿ ಕರಗಿ ಹೋಗಲು ಸಾಧ್ಯವೇ? ಖಂಡಿತ ಅಸಾಧ್ಯ. ಬದಲಿಗೆ ಅಂಬೇಡ್ಕರ್‌ರು ಹಾಗೆ ಬಂದ ಎಲ್ಲ ನದಿಗಳ ದಿಕ್ಕನ್ನೇ ಬದಲಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡರು. ಸ್ವಂತಿಕೆ ಎಂದ ಮೇಲೆ ಅವರ ಹೆಸರು ಆ ಸ್ವಂತಿಕೆಯ ವಾದಕ್ಕೆ ಬರಲೇ ಬೇಕಲ್ಲವೇ? ಹೌದು, ಅಂಬೇಡ್ಕರ್‌ರವರು ತಮ್ಮದೇ ಹೆಸರಿನ ಅಂಬೇಡ್ಕರ್‌ವಾದ ವಾದರು. ಈ ಜಗತ್ತಿಗೆ ತಾನೇ ಒಂದು ವಿಭಿನ್ನ ಮಾದರಿ ಎಂದು ತೋರಿಸಿಕೊಟ್ಟರು. ಆ ಮೂಲಕ ತಾನೇಕೆ ಕರಗದೇ ಆ ಎಲ್ಲಾ ನದಿಗಳ ದಿಕ್ಕನ್ನೇ ಬದಲಿಸಿ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡೆ ಎಂದು ಇಡೀ ಜಗತ್ತಿಗೆ ಸಾರಿ ಹೇಳಿದರು.
                                                                                    

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.