ಬೆಂಗಳೂರು, ಜ.1: ದೇಶದಲ್ಲಿ ದಲಿತರ ಹಾಗೂ
ಬಡವರ ಇತಿಹಾಸವನ್ನು ಪ್ರಜ್ಞಾಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಅದಕ್ಕೆ
ಮಹಾರಾಷ್ಟ್ರದಲ್ಲಿ ನಡೆದ ಕೋರೆಗಾಂವ್ ಘಟನೆಯೇ ಉದಾಹರಣೆಯಾಗಿದೆ ಎಂದು ಬೆಂಗಳೂರು ನಗರ
ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಮಂಗಳವಾರ ನಗರದ
ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋರೆಗಾಂವ್ ವಿಜಯ
ದಿನದ ಅಂಗವಾಗಿ ಏರ್ಪಡಿಸಿದ್ದ ‘ಮಹಾರ್ ವೀರ ಯೋಧರ ಬಲಿದಾನದ ನೆನಪಿಗಾಗಿ ರಕ್ತದಾನ
ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋರೆಗಾಂವ್ ಯದ್ಧವು ದಲಿತ
ಮಹಾರ್ ಸೈನಿಕರು ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ಪೇಶ್ವೆಯ ಬೃಹತ್ ಸೈನ್ಯದ ವಿರುದ್ಧ
ನಡೆಸಿದ ಹೋರಾಟವಾಗಿದೆ. ಆದರೆ ಭಾರತೀಯ ಇತಿಹಾಸದಲ್ಲಿ ದಲಿತರ ಈ ದಿಗ್ವಿಜಯವನ್ನು
ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದ್ದು, ಈ ಬಗ್ಗೆ ಹೆಚ್ಚು ಮಾಹಿತಿಗಳೇ ಇಲ್ಲ ಎಂದು
ರವಿಕಾಂತೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಬ್ರಿಟಿಷರು ತಮ್ಮ ದೊಡ್ಡ
ರೆಜಿಮೆಂಟ್‌ನ್ನು ವಿಸರ್ಜಿಸಿ ದಲಿತ ಸೈನಿಕರಿಗೆ ಆದ್ಯತೆ ನೀಡಲು ಸಾಧ್ಯವಾದದ್ದು
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರಿಂದ. ಈ ಘಟನೆ ನಮ್ಮ ಪರಂಪರೆಗೆ ಸಿಕ್ಕ
ದೊಡ್ಡ ಗೌರವವಾಗಿದೆ. ನಾವು ನಮ್ಮ ಇತಿಹಾಸ ಪರಂಪರೆಗಳ ಕಡೆಗೆ ಮತ್ತೆ ತಿರುಗಿ
ನೋಡಬೇಕಿದೆ. ಇತಿಹಾಸದ ಸತ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದ್ದು, ಈ
ಬಗ್ಗೆ ಗಂಭೀರ ಚಿಂತನೆಯಾಗಬೇಕು. ಈ ನಿಟ್ಟಿನಲ್ಲಿ ದಲಿತಾರ ಸೈನಿಕರ ಈ ದಿಗ್ವಿಜಯ
ನಮ್ಮೆಲ್ಲರ ಕಣ್ಣುಗಳನ್ನು ಇತಿಹಾಸದ ಕಡೆಗೆ ತೆರೆಸುವ ಮೂಲಕ ಸ್ವಾಭಿಮಾನದೆಡೆಗೆ
ಕೊಂಡೊಯ್ಯಲಿ ಎಂದು ರವಿಕಾಂತೇಗೌಡ ಆಶಿಸಿದರು.
ನಾವೆಲ್ಲ ಯದ್ಧ ವಿರೋಧಿಗಳಾಗಿದ್ದು,
ಯದ್ಧಗಳನ್ನು ಮಾಡಿ ರಕ್ತ ಸುರಿಸುವುದಕ್ಕಿಂತ, ಮಡಿದ ವೀರ ಯೋಧರ ನೆನಪಲ್ಲಿ ರಕ್ತದಾನ
ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಪೊಲೀಸ್ ಇಲಾಖೆ ಸಹ ಈ ನಿಟ್ಟಿನಲ್ಲಿ ಕಾರ್ಯ
ಪ್ರವೃತ್ತವಾಗಿದ್ದು, ರಕ್ತದ ತುರ್ತು ಅಗತ್ಯವಿರವವರು ಸಂಪರ್ಕಿಸಿದರೆ, ಪೊಲೀಸ್
ಸಿಬ್ಬಂದಿ ರಕ್ತ ನೀಡಲಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ
ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಸಿದ್ದರಾಮ ಕಾರ್ಣಿಕ್, ಅಂಬೇಡ್ಕರ್ ನಮಗೆಲ್ಲ
ಕೇವಲ ಹೆಸರಾಗಿದ್ದಾರೆಯೇ ಹೊರತು, ಉಸಿರಾಗಿಲ್ಲ. ನಮಗೆ ಅವರು ಹೆಸರು ಹಾಗೂ ಉಸಿರಾದಾಗ
ಮಾತ್ರ ದಲಿತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ
ಶಿವಾಜಿ, ಸಾಂಬಜಿ ಸೇರಿದಂತೆ ಹಲವು ನಾಯಕರ ಸಮಾಧಿಗಳನ್ನು ಸರಕಾರ ಅಭಿವೃದ್ಧಿಪಡಿಸಿದೆ.
ಆದರೆ ಸ್ವಾಭಿಮಾನಕ್ಕಾಗಿ ಹುತಾತ್ಮರಾದ ಮಹರ್ ಯೋಧರ ಸ್ಮಾರಕ ಶಿಥಿಲಗೊಂಡಿದ್ದು, ಸರಕಾರ
ನಿರ್ಲಕ್ಷಿಸಿದೆ. ಆದುದರಿಂದ ಮಹಾರಾಷ್ಟ್ರ ಸರಕಾರ ಕೋರೆಗಾಂವ್ ಸ್ಮಾರಕವನ್ನು
ರಕ್ಷಿಸಬೇಕು ಎಂದು ಆಗ್ರಹಿಸಿದರು.
ದಲಿತರು ಎಚ್ಚೆತ್ತುಕೊಳ್ಳದ ಕಾರಣ
ಕೋರೆಗಾಂವ್‌ನಂತಹ ಹಲವು ಐತಿಹಾಸಿಕ ಘಟನೆಗಳು ಮುಚ್ಚು ಹೋಗುತ್ತಿವೆ. ನಾವು ಎದ್ದು
ನಿಲ್ಲದಿದ್ದರೆ ನಮ್ಮ ಅವಸಾನವಾಗಲಿದೆ. ಆದುದರಿಂದ ಕೋರೆಗಾಂವ್ ಯೋಧರ ತ್ಯಾಗ, ಬಲಿದಾನ,
ಸ್ವಾಭಿಮಾನಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಮುಂದುವರಿ ಯಬೇಕು. ಆ ಮೂಲಕ ಅಧಿಕಾರದ
ಕೇಂದ್ರ ಸ್ಥಾನಗಳ ಗದ್ದುಗೆ ಏರಬೇಕು ಎಂದು ಡಾ.ಸಿದ್ದರಾಮ ಕಾರ್ಣಿಕ್ ನುಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ರಂಗಸ್ವಾಮಿ, ಅಂಬೇಡ್ಕರ್‌ರ
ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸೋಣ ಎಂದರು.
ಅಧ್ಯಕ್ಷತೆಯನ್ನು
ಡಿಎಸ್‌ಎಸ್‌ನ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಕಿವಿ, ಸಾಹಿತಿ
ರುದ್ರಪ್ಪ ಹನಗವಾಡಿ, ಪ್ರಜಾವಿಮೋಚನಾ ಚಳವಳಿಯ ಮುಖಂಡ ಪಟಾಪಟ್ ನಾಗರಾಜ್, ಟಿಪ್ಪು
ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್ ಖುರೇಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೃಪೆ : ವರ್ತಮಾನ ಭಾರತಿ
No comments:
Post a Comment