Friday, January 04, 2013

ಮೋದಿಗೆ ಉತ್ತರ ಉವೈಸಿಯಲ್ಲ ...


ಬಶೀರ್ ಬಿ.ಎಂ.
ವಾರ್ತಾಭಾರತಿ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಸಂಪಾದಕೀಯ
ಖಾಲಿ ಮಡಕೆಯೊಳಗೆ ಒಂದು ಸಣ್ಣ ಕಲ್ಲು ಹಾಕಿದರೂ ಅದು ಭಾರೀ ಸದ್ದು ಮಾಡುತ್ತದೆ. ರಾಜಕಾರಣಿಗಳಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಉದ್ವಿಗ್ನಕಾರಿ, ಪ್ರಚೋದನ ಕಾರಿ ಭಾಷಣ ಮಾಡುವವರನ್ನೆಲ್ಲ ನಾವು ಈ ಖಾಲಿ ಮಡಕೆಗಳಿಗೆ ಹೋಲಿಸಬಹುದಾಗಿದೆ. ಇಂತಹ ಖಾಲಿಗಳೇ ಈ ದೇಶವನ್ನು ಅವನತಿಯೆಡೆಗೆ ನಡೆಸುತ್ತಾ ಬಂದಿದ್ದಾರೆ. ಪ್ರವೀಣ್ ತೊಗಾಡಿಯಾರಿಂದ ಹಿಡಿದು, ವರುಣ್ ಗಾಂಧಿಯವರ ವರೆಗೆ, ಇಂತಹ ಪ್ರಚೋದನಾಕಾರಿ ಭಾಷಣಗಳಿಂದ ಈ ದೇಶಕ್ಕಾದ ನಷ್ಟ ಅಷ್ಟಿಷ್ಟಲ್ಲ. ಇವರ ಭಾಷಣದಲ್ಲಿ ಅದೇನೋ ಇದೆ ಜನ ಹುಚ್ಚೆದ್ದು ಚಪ್ಪಾಳೆ ತಟ್ಟುತ್ತಾರೆ. ಅಮರೇರಿದವರಂತೆ ವರ್ತಿಸು ತ್ತಾರೆ. ಆದರೆ ಏರಿದ ಅಮಲು ಇಳಿದಾಗ, ಎಲ್ಲವೂ ಮುಗಿದಿರುತ್ತದೆ. ಇಂತಹ ಪ್ರಚೋದನಕಾರಿ ಭಾಷಣಗಳ ಮೂಲಕವೇ ದೇಶದಲ್ಲಿ ಹೆಚ್ಚಿನ ಕೋಮುಗಲಭೆಗಳು ಸಂಭವಿಸಿವೆ. ಗುಜರಾತ್ ಗಲಭೆಗೆ ಮುನ್ನ, ಪ್ರವೀಣ್ ತೊಗಾಡಿಯಾ ಮಾಡಿದ ಭಾಷಣ ಅಲ್ಲಿನ ಜನರನ್ನು ಹುಚ್ಚರನ್ನಾಗಿ ಮಾಡಿತು. ಮುಂದೆ ಅದು ಭಾರೀ ಕೋಮುಗಲಭೆಗಳಿಗೆ ಕಾರಣವಾಯಿತು. ಮುಂಬಯಿ ಗಲಭೆಯಿಂದ ಹಿಡಿದು ಸುರತ್ಕಲ್ ಗಲಭೆಗಳವರೆಗೆ ನಾವು ಅವಲೋಕಿಸುತ್ತಾ ಬಂದರೆ, ಖಾಲಿ ಮಡಕೆಗಳ ಪ್ರಚೋದನಕಾರಿ ಭಾಷಣಗಳೇ ಜನರನ್ನು ಹಾದಿ ತಪ್ಪಿಸಿದವು. ಹಿಂಸೆಗಳಿಗೆ ಕಾರಣವಾದವು. ರಾಜದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ನಾಯಕರಾದುದು, ಇಂತಹ ವಿಷಪೂರಿತ ಭಾಷಣಗಳನ್ನು ಕಕ್ಕುವ ಮೂಲಕ. ಯಾವುದೇ ಮಾರಕ ಆಯುಧಗಳಿಗಿಂತ, ಯಾವುದೇ ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಪಾಯಕಾರಿ ಈ ಭಾಷಣಗಳು.

ಇದೀಗ ಹೈದರಾಬಾದ್‌ನಲ್ಲಿ ಶಾಸಕನೊಬ್ಬ ಇಂತಹದೇ ಭಾಷಣವನ್ನು ಮಾಡುವ ಮೂಲಕ, ತನ್ನನ್ನು ತಾನು ಮುಸ್ಲಿಮರ ನಾಯಕನಾಗಿ ಬಿಂಬಿಸಲು ಹೊರಟಿದ್ದಾನೆ. ಆತನ ಹೆಸರು ಅಕ್ಬರುದ್ದೀನ್ ಉವೈಸಿ. ಅಖಿಲ ಭಾರತ ಮಜ್ಸಿಸ್ ಎ ಇತ್ತೆಹಾದ್ ಮುಸ್ಲಿಮೀನ್(ಎಂಐಎಂ) ವರಿಷ್ಠ ಅಸಾಸುದ್ದೀನ್ ಉವೈಸಿಯವರ ಸೋದರ ಈತ. ಮೋದಿಯವರನ್ನು ಕಟುವಾಗಿ ಟೀಕಿಸುವ ನೆಪದಲ್ಲಿ, ಈತ ಪರೋಕ್ಷವಾಗಿ ತನ್ನ ಭಾಷಣದಲ್ಲಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಪೊಲೀಸರಿಗೆ ಕೆಲವು ನಿಮಿಷ ಬಿಡುವು ಕೊಟ್ಟರೆ, ಈತ ಅದೇನೋ ಮಾಡಿ ತೋರಿಸುತಾರಂತೆ. ಈತ ಕಕ್ಕಿದ ವಿಷಕಾರಿ ಭಾಷಣ ಇದೀಗ ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದೆ. ಈತನ ಭಾಷಣವನ್ನು ಮುಂದಿಟ್ಟುಕೊಂಡು, ಸಂಘ ಪರಿವಾರದ ಕೆಲವು ವಿಷಪೂರಿತ ಹಾವುಗಳು ಹೆಡೆ ಬಿಚ್ಚಲು ಮುಂದಾಗಿವೆೆ. ಈತನಿಗೆ ಭಾಷಣ ಮಾಡಿ ಮುಗಿಸಲು ಕೆಲವು ನಿಮಿಷಗಳು ಸಾಕಾಗಿರಬಹುದು. ಆದರೆ ಉಳಿಸಿ ಹೋದ ಪರಿಣಾಮವನ್ನು ಈ ದೇಶದ ಅಲ್ಪಸಂಖ್ಯಾತರು ವರ್ಷವಿಡೀ ಅನುಭವಿಸ ಬೇಕಾಗುತ್ತದೆ.

ಈ ದೇಶದಲ್ಲಿ ಮುಸ್ಲಿಮ್ ನಾಯಕರಿಗೆ ಮಾತನಾಡಲು ಬೇಕಾದಷ್ಟು ಮುಸ್ಲಿಮರ ಸಮಸ್ಯೆಗಳಿವೆ. ಶಿಕ್ಷಣ, ಬಡತನ, ಅನಾರೋಗ್ಯ ಸೇರಿದಂತೆ ಮುಸ್ಲಿಮರ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಒಂದೋ ಎರಡೋ. ಭಾರತೀಯ ಮುಸ್ಲಿಮರನ್ನು ಸಾಚಾರ್ ಸಮಿತಿ ಆಧುನಿಕ ದಿನಗಳ ನವ ದಲಿತರು ಎಂದು ಕರೆದಿದೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮೇಲೆತ್ತಲು ಮುಸ್ಲಿಮ್ ನಾಯಕರ ಪಾತ್ರ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಎಂಬ ಖಾತೆಯಲ್ಲಿ ಎಂಎಲ್‌ಎ, ಎಂಪಿಗಳಾದ ನಾಯಕರು ಬೀದಿಗಿಳಿದು ಹೋರಾಟ ಮಾಡಿದ್ದಿದ್ದರೆ, ತಮ್ಮ ಸಮುದಾಯದ ಏಳಿಗೆಗಾಗಿ ತನು ಮನ ಧನವನ್ನು ಮೀಸಲಿಟ್ಟು ಕೆಲಸ ಮಾಡಿದ್ದರೆ ದೇಶದ ಮುಸ್ಲಿಮರ ಸ್ಥಿತಿ ಈ ರೀತಿ ದಯನೀಯವಾಗುತ್ತಿರಲಿಲ್ಲ. ಮೋದಿಯ ವರಂಥವರು ಬಾಲ ಬಿಚ್ಚುವುದಕ್ಕೂ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂದು ಮುಸ್ಲಿಮ್ ನಾಯಕರೇ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿರುವುದರಿಂದ, ಅವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಉವೈಸಿ ಸಾರ್ವಜನಿಕವಾಗಿ ಮೋದಿಯವ ರನ್ನು ಟೀಕಿಸುವ ಮೊದಲು, ತಾನು ಮುಸ್ಲಿಮರಿಗಾಗಿ, ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನು ಮಾಡಿದ್ದೇನೆ ಎನ್ನುವುದನ್ನು ಹೇಳಬೇಕಾಗಿತ್ತು. ಇತರ ಜಾತಿ, ಧರ್ಮಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವುದರಿಂದ, ಮುಸ್ಲಿಮರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಅದರಿಂದ ಅವರು ಇನ್ನಷ್ಟು ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಉವೈಸಿಯ ಉದ್ವಿಗ್ನಕಾರಿ ಭಾಷಣವು ಪರೋಕ್ಷವಾಗಿ ಮೋದಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾಗಳನ್ನು ಸಮರ್ಥಿಸಿ ದಂತಾಗುತ್ತದೆ. ಒಂದು ರೀತಿಯಲ್ಲಿ ಉವೈಸಿ ಭಾಷಣದಿಂದ ಸಂಘಪರಿವಾರದ ಮಂದಿ ಸಂತೋಷದಿಂದ ಕುಣಿದಾಡಿದ್ದಾರೆ. ಈ ಭಾಷಣದೆಡೆಗೆ ಬೊಟ್ಟು ಮಾಡಿ, ಕೋಮುವಾದವನ್ನು ಹರಡಲು ಇವರಿಗೆ ಪರವಾನಿಗೆ ಸಿಕ್ಕಿದಂತಾಗಿದೆ. ಮುಸ್ಲಿಮರ ಕುರಿತಂತೆ ಯಾವುದೇ ಅಭಿವೃದ್ಧಿಯ ಮುನ್ನೋಟವಿಲ್ಲದ ಉವೈಸಿಯಂತಹವರು, ಮುಸ್ಲಿಮ್ ಸಮುದಾಯದ ನಡುವೆ ಆತ್ಮವಿಶ್ವಾಸ ತುಂಬುವ ಬದಲು ಅವರನ್ನು ಇನ್ನಷ್ಟು ಅನ್ಯಾಯದೆಡೆಗೆ ತಳ್ಳಿದ್ದಾರೆ. ಅಕ್ಬರುದ್ದೀನ್ ಉವೈಸಿ ಒಬ್ಬ ವಿಧಾನಸಭಾ ಶಾಸಕ. ಅವರಿಗೆ ಅವರದೇ ಜವಾಬ್ದಾರಿಗಳಿವೆ. ಹೊಣೆಗಾರಿಕೆಗಳಿವೆ. ಆದರೆ ಅದನ್ನು ಮರೆತು, ಜನರನ್ನು ಆಕರ್ಷಿಸಲು ಸಾರ್ವಜನಿಕವಾಗಿ ಉದ್ವಿಗ್ನಕಾರಿ ಮಾತನಾಡಿದುದು ಅಕ್ಷಮ್ಯ ಅಪರಾಧ. ಅವರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಮೋದಿಯವ ರಂತಹ ಕೋಮುವಾದಿನಾಯಕರಿಗೆ ಪ್ರತಿ ಕೋಮುವಾದ ಉತ್ತರವಲ್ಲ. ಬದಲಿಗೆ, ಈ ದೇಶದ ಜಾತ್ಯತೀತತೆಯನ್ನು ಗಟ್ಟಿ ಮಾಡಿಕೊಂಡು, ಹಿಂದೂ, ಮುಸ್ಲಿಮ್ ಕ್ರೈಸ್ತರನ್ನು ಒಟ್ಟುಗೂಡಿಸುವುದೇ ಮೋದಿಯ ವರಿಗೆ ಈ ದೇಶ, ಸಂವಿಧಾನ ನೀಡುವ ಪ್ರತಿ ಉತ್ತರ. ಹಾಗಾದಲ್ಲಿ ಈ ದೇಶ ಎಂದೆಂದೂ ಅಖಂಡವಾಗಿ ಉಳಿದೀತು. ಅಭಿವೃದ್ಧಿಯತ್ತ ಮುನ್ನಡೆದೀತು.

 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.