Monday, January 07, 2013

ಅಕ್ಷರಹೀನ ವಚನಕಾರರು ?


                                ಡಾ. ಸಿದ್ರಾಮ ಕಾರಣಿಕ
                           
    ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಂಭವಿಸಿತು. ಜಾತಿ-ಜಾತಿಗಳಲ್ಲಿದ್ದ ಅಂತರವನ್ನು ದೂರ ಮಾಡಿ, ಪುರೋಹಿತಶಾಹಿ ವರ್ಗದ ವಿರುದ್ಧ ಸಿಡಿದು ನಿಂತು ಮಾಡಿದ ಕ್ರಾಂತಿಯ ಹೆಜ್ಜೆ ಯಾವತ್ತಿಗೂ ಅನುಕರಣೀಯವೇ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯ ಕೂಡ ಅಕ್ಷರ ಕಲಿತು ವಚನ ರಚಿಸಿದರು ಎಂಬುದು ಒಪ್ಪತಕ್ಕ ಮಾತು ಅಲ್ಲ ; ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹೀಗೆ ಹೇಳುತ್ತಿರುವುದನ್ನು ಒಪ್ಪದ ಕೆಲ `ಬುದ್ಧಿಜೀವಿಗಳು', `ಪಂಡಿತರು', ವಿದ್ವಾಂಸರು' ಅಪಸ್ವರ ಎತ್ತಿ ಹಾಡಲು ಸುರು ಮಾಡಬಹುದು ! ಈ ವಾದವು ಪರಾಂಪರಾಗತ ನಂಬಿಕೆಯೊಂದನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹುಯಿಲೆಬ್ಬಿಸಬಹುದು ! ಆದರೆ ವಾಸ್ತವ ವಾಸ್ತವೇ ! ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
    ವೈದಿಕ ಧರ್ಮದಲ್ಲಿ ದಲಿತರು, ಶೂದ್ರರು ಅಕ್ಷರ ಕಲಿಯುವಿಕೆಯನ್ನು ನಿರಾಕರಿಸಲಾಗಿದೆ. ಕೇವಲ ಪಠನ ಮಾಡಿದರೆ ಸಾಕು ನಾಲಿಗೆಯನ್ನೇ ಕಿತ್ತಿ ಹಾಕುವ, ವೇದ-ಮಂತ್ರಗಳನ್ನು ಕೇಳಿದರೆ ಸಾಕು ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ಪರಿಕ್ರಮಕ್ಕೆ ಹನ್ನೆರಡನೇ ಶತಮಾನವೂ ಕೂಡ ಹೊರತಾಗಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಬಸವಣ್ಣ ತೋರಿದ ಕ್ರಾಂತಿಕಾರಿ ನಿಲುವಿಗೆ ಸನಾತನವಾದಿಗಳು ತೋರಿದ ತೀವ್ರ ವಿರೋಧವನ್ನು ಗಮನಿಸಬೇಕು. ಹೀಗೆಲ್ಲ ಇರುವಾಗ ಒಂದು ಸೀಮಿತ ಅವಧಿಯಲ್ಲಿ ಅಕ್ಷರ ಹೀನ ದಲಿತರು, ಶೂದ್ರರು ಮತ್ತು ಮಹಿಳೆಯರು ಅಕ್ಷರ ಕಲಿತು ಪಾಂಡಿತ್ಯ ಗಳಿಸಿದರು ಎಂದರೆ ಅದೇನು ಪವಾಡವೇ ?
    `ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದುರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದದ್ದು ತೀವ್ರ ಗಮನಿಸಬೇಕಾದ ಅಂಶವಾಗಿದೆ.'1 ಎನ್ನುವ ಡಾ. ಎಂ. ಎಂ. ಕಲ್ಬುರ್ಗಿಯವರ ಮಾತಿನಲ್ಲಿರುವ `ಸಾಹಿತ್ಯ ನಿರ್ಮಿತಿ' ಬಂದದ್ದು ಕೇವಲ ಅನುಭಾವದಿಂದಾಗಿಯೇ ಹೊರತು ಅಕ್ಷರಜ್ಞಾನದಿಂದ ಅಲ್ಲವೇ ಅಲ್ಲ.
    `........ಪ್ರಾಚೀನ ಮಹಿಳಾ ಶಿಕ್ಷಣವನ್ನು ಗಮನಿಸಿದರೆ ಹೆಣ್ಣು ಸಾಂಸ್ಕøತಿಕವಾಗಿ ದಾಖಲಾಗಿರುವುದು ಗಮನಾರ್ಹ ವಸ್ತವಾಗಿದೆಯೇ ಹೊರತು ವಿದ್ಯಾವತಿಯಾಗಿ ಅಲ್ಲ'2 ಎನ್ನುವ ಡಾ. ಚೆನ್ನಕ್ಕ ಪಾವಟೆಯವರ ಮಾತುಗಳನ್ನು ದಲಿತ ಮತ್ತು ಶೂದ್ರರಿಗೂ ಅನ್ವಯಿಸಿಕೊಂಡು ಅವಲೋಕಿಸಿದಾಗ ಲೇಖನದ ಈ ವಾದಕ್ಕೆ ಸಾಕ್ಷ್ಯ ದೊರೆಯುತ್ತದೆ. ಆದರೆ ಈ ಮಟ್ಟಿಗಿನ ವಾದವನ್ನು ಬೆಳೆಸಲು ಬಹಳಷ್ಟು ಜನ ಹಿಂಜರಿಯುವುದೇ ಹೆಚ್ಚು. ಮತಾಂಧತೆಯ ಭಾರತದಲ್ಲಿ ಇದು ಸಹಜ ಕೂಡ !
    `ಯಾವ ದಲಿತರು ಅಜ್ಞಾನಿಗಳಾಗಿದ್ದರೋ ಅಂಥವರು ವಚನ ಚಳುವಳಿಯ ಸಂದರ್ಭದಲ್ಲಿ ವಿಚಾರವಂತರಾದರು. ವಿಚಾರವಾದಕ್ಕೆ ವ್ಯಾಖ್ಯೆಯನ್ನು ಬರೆದರು. ಯಾರನ್ನು ಈ ವ್ಯವಸ್ಥೆಯಲ್ಲಿ ಪಶು-ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತೋ ಅಂತಹವರೇ ಹೊಸ ಸಂಸ್ಕøತಿಯ ಹರಿಕಾರರಾದರು. ಯಾರು ಭಯದಿಂದ ತತ್ತರಿಸಿ, ಕೀಳರಿಮೆಯಿಂದ ಮುದುಡಿಕೊಂಡಿದ್ದರೋ ಅಂಥವರೇ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಝಳಪಳಿಸುವ ಖಡ್ಗಗಳಾದರು. ಇದು ವಚನ ಚಳುವಳಿಯ ಅತ್ಯಂತ ಮಹತ್ವದ ಸಾಧನೆ.'3 ಎನ್ನುವ   ಡಾ. ಬಸವರಾಜ ಸಬರದ ಅವರ ವಿವರಣೆ ಪಾರಂಪರಿಕವಾಗಿ ಪ್ರಚುರಪಡಿಸುತ್ತ ಬಂದಿರುವಂಥದ್ದೇ ಆಗಿದೆ. ಈ ಮೊದಲು ನಾವು ಕೂಡ ಈ ವಿಚಾರವನ್ನೇ ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದೇವು. ಆದರೆ ಇಲ್ಲಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದಾಗ ವಚನ ಚಳುವಳಿ ಮೌಖಿಕ ಪರಂಪರೆಯ ಸಾಧನೆಯೇ ಆಗಿದೆ ಎಂಬುದು ಸಾಧಿತ ಅಂಶವಾಗಿ ಹೊರಹೊಮ್ಮುತ್ತದೆ.
    ಬಸವಣ್ಣನ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ಆರಂಭವಾದಾಗ ಕೆಲವು ದಲಿತರು, ಶೂದ್ರರು ಮತ್ತು ಮಹಿಳೆಯರು ಸಾಂಪ್ರದಾಯಿಕ ಸಮಾಜವನ್ನು ಧಿಕ್ಕರಿಸಿ, ಹೊಸ ಸಮಾಜದ ಅಸ್ತಿತ್ವಕ್ಕಾಗಿ ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದರಷ್ಟೇ ಅಲ್ಲ, ತಮ್ಮ ವಿಚಾರಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಇನ್ನುಳಿದ ತಮ್ಮ ಬಾಂಧವರಿಗೆ ಅರಿವನ್ನುಂಟು ಮಾಡಲು ಮುಂದಾದರು. ಆದರೆ ಅವರಿಗೆ ಅಕ್ಷರದ ಅರಿವು ಇರಲಿಲ್ಲ. ಅವರ ಹೆಸರಿನಲ್ಲಿರುವ ವಚನಗಳು ಬೇರೆ ಯಾರೋ ಲಿಪೀಕರಣ ಮಾಡಿದರ ಫಲ ಮಾತ್ರ. ಆದರೆ ಆ ವಚನಗಳಲ್ಲಿ ಇರುವ ವಿಚಾರ ಮಾತ್ರ ಆ ವಚನಕಾರರದೇ ಆಗಿದೆ. ಅಂದರೆ ವಚನಕಾರರೆಲ್ಲ ಪ್ರಾಜ್ಞರೇ ಆಗಿದ್ದರೂ ಅಕ್ಷರವನ್ನು ಬಲ್ಲವರಾಗಿರಲಿಲ್ಲ.
    ಜಾನಪದ ಪರಂಪರೆಯನ್ನು ಗಮನಿಸಿದಾಗ ಈ ಪ್ರಕ್ರಿಯೆ ಬಹು ಹಿಂದಿನಿಂದಲೇ ಹೊರಹೊಮ್ಮಿ ಬಂದಿದೆ ಎನ್ನುವದು ಸ್ಪಷ್ಟವಾಗುತ್ತದೆ. ಈ ವಿಚಾರದಿಂದ ಜನಪದರು ಸೃಷ್ಟಿಸಿದ ಜಾನಪದ ಸಾಹಿತ್ಯ ಕೂಡ ಗಟ್ಟಿಕಾಳೇ ಆಗಿದೆ ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಹನ್ನೆರಡನೇ ಶತಮಾನದ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಆಯ್ದ ಕೆಲವರನ್ನು ಬಿಟ್ಟರೆ ಇನ್ನುಳಿದವರೆಲ್ಲ ಮೌಖಿಕ ಪರಂಪರೆಯವರು ಎಂಬುದು ಖಚಿತ.
    ಈ ವಾದಕ್ಕೆ ಇನ್ನಷ್ಟು ನಿಖರತೆಯನ್ನು ನೀಡಲು ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ಅವರನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಪುರಾಣ, ಕಥೆ, ಐತಿಹ್ಯ ತೆಗೆದು ನೋಡಿದರೂ ಅವುಗಳಲ್ಲಿ ಈ ಇಬ್ಬರು ಒಂದೇ ಕಡೆ ಹೆಚ್ಚು ಕಾಲ ಸ್ಥಾಯಿಯಾಗಿ ನೆಲೆ ನಿಂತವರಲ್ಲ ಎಂಬ ಪ್ರಸ್ತಾಪ ಕಂಡು ಬರುತ್ತದೆ. ಮಾಯಾ ಮೋಹವನ್ನೇ ತಿರಸ್ಕರಿಸಿ, ವಿಚಿತ್ರ ವೇಷದಲ್ಲಿ ದೇಶ ಸಂಚಾರ ಮಾಡಿದ ಅಲ್ಲಮ ಮತ್ತು ಭವದ ಬದುಕನ್ನೇ ತಿರಸ್ಕರಿಸಿ, ಕೇಶಾಂಬರಿಯಾಗಿ ಸಂಚಾರ ಮಾಡಿದ ಅಕ್ಕಮಹಾದೇವಿ ಜಂಗಮತ್ವವನ್ನು ಅಪ್ಪಿಕೊಂಡವರು. ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ ! ಅಲೆದಾಟದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದ ಇವರು ಸಂದರ್ಭಕ್ಕೆ ತಕ್ಕಂತೆ ಅನುಭಾವದ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸುತ್ತ ಹೋಗಿದ್ದಾರೆ. ಅವೆಲ್ಲ ಅವರು ಬರೆದಿಟ್ಟ ವಿಚಾರಗಳಲ್ಲ ಅಥವಾ ಆನಂತರದಲ್ಲಿ ಅವುಗಳನ್ನು ಬರೆದುಕೊಂಡವರೂ ಅಲ್ಲ. ಬರೆದಿಡುವುದು ಸಾಧ್ಯವೂ ಇರಲಿಲ್ಲ.
    ಇದಕ್ಕೆ ಪೂರಕವಾಗಿ ಒಂದು ಮೂಲಭೂತವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ ; ಅಲೆದಾಟದಲ್ಲಿದ್ದ ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ತಾವಾಡಿದ ಮಾತುಗಳನ್ನು ಬರೆದಿಟ್ಟುಕೊಳ್ಳಲು ತಮ್ಮ ಹತ್ತಿರ ಬರೆಯುವ ಹಾಳೆ, ತಾಳೆಗರಿ, ಲೆಕ್ಕಣಿಕೆ, ದೌತಿಗಳನ್ನು ಖಾಯಮ್ಮಾಗಿ ಇಟ್ಟುಕೊಂಡಿರುತ್ತಿದ್ದರೆ ? ಅನುಭಾವದ ವಿಚಾರಗಳನ್ನು ಹೇಳಿಯಾದ ಮೇಲೆ ಅವುಗಳನ್ನು ಲಿಪಿಬದ್ಧಗೊಳಿಸುತ್ತಿದ್ದರೆ ? ಹಾಗಾದರೆ ಅವರು ತಾವು ಬರೆದ ವಚನಗಳನ್ನು ಎಲ್ಲಿ ಸಂಗ್ರಹಿಸಿ ಇಡುತ್ತಿದ್ದರು ? ತಮ್ಮ ಜೊತೆಯಲ್ಲಿಯೇ ಗಂಟು ಕಟ್ಟಿಕೊಂಡು ತಿರುಗುತ್ತಿದ್ದರೆ ? ಅರಿವೆಯ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ಇವರು ಹೀಗೆಲ್ಲ ಮಾಡಲು ಸಾಧ್ಯವೇ ?
    ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ. ಅದೂ ಅಲ್ಲದೇ `ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿಚರ್ಚೆಯನ್ನು ಬೆಳೆಯಿಸಿದ `ಶೂನ್ಯ ಸಂಪಾದನೆ'ಗಳಲ್ಲಿ ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟಕೀಯತೆಗಾಗಿ ನಿರ್ಮಿತಿಯಾದವುಗಳೇ ಹೊರತು ಅವು ಅಲ್ಲಮ ಹಾಗೂ ಅಕ್ಕನ `ಮೂಲ ವಚನ'ಗಳಾಗಿರಲಾರವು.'4 ಎನ್ನುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾತಿನಲ್ಲಿ ವಚನಗಳನ್ನು ಬರೆದಿರುವ ಬಗ್ಗೆ ಗುಮಾನಿ ಇದೆ. ಆ ಸಂದರ್ಭದಲ್ಲಷ್ಟೇ ಅಲ್ಲ ಅವರ ಹೆಸರಿನಲ್ಲಿರುವ ಯಾವ ವಚನಗಳೂ ಅವರ ಮೂಲ ವಚನಗಳೇ ಅಲ್ಲ. ಯಾಕೆಂದರೆ ಅವರು ಮೌಖಿಕ ಪರಂಪರೆಯ ಪ್ರತಿನಿಧಿಗಳು.
    ಹಾಗಾದರೆ ವಚನಗಳನ್ನು ಲಿಪೀಕರಣ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇಲ್ಲಿ ತಲೆ ತಿನ್ನುತ್ತದೆ. ಅದಕ್ಕೆ ಉತ್ತರವೂ ಇದೆ. ಪ್ರಾಚೀನ ಕಾಲದಲ್ಲಿ ಬರವಣಿಗೆ ಒಂದು ನಿರ್ದಿಷ್ಟ ಜಾತಿಯ ಕೆಲಸವಾಗಿತ್ತು. ಅವರು ಇತರರು (ಬರವಣಿಗೆಯ ಚೌಕಟ್ಟಿಗೆ ಸಂಬಂಧಿಸಿದವರು) ಹೇಳಿದ್ದನ್ನು ಲಿಪಿಬದ್ಧಗೊಳಿಸುತ್ತಿದ್ದರು. ಇದು ಒಂದು ವೃತ್ತಿಯೇ ಆಗಿತ್ತೆಂದರೆ ತಪ್ಪಾಗುವುದಿಲ್ಲ. ಇದರ ಜೊತೆಗೆ ಈ ಲಿಪೀಕರಣ ವ್ಯಕ್ತಿಯೊಬ್ಬನ ಆಸಕ್ತಿ ಕೂಡ ಆಗಿತ್ತು. ಬುದ್ಧನ ಕಾಲದಲ್ಲಿ ಬುದ್ಧನ ಆಚಾರ-ವಿಚಾರಗಳನ್ನು, ಬೋಧನೆಗಳನ್ನು ಬರೆದಿಡಲು `ಭಾಣಕರು' ಎನ್ನುವವರು ಇದ್ದರು. ಹನ್ನೆರಡನೇ ಶತಮಾನದಲ್ಲಿ ಕೂಡ ಇಂಥ ಪದ್ಧತಿ ಚಾಲ್ತಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು.
    ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಬರೆದಿಡುವ ಕಾಯಕದವರೂ ಇದ್ದರು. `ಪ್ರತಿಯೊಂದು ವಚನವೂ ಆಯಾ ವಚನಕಾರನ ಇಷ್ಟ ದೈವದ ಸಾಕ್ಷಿಯಲ್ಲಿ ನುಡಿದ ಮಾತು'5 ಆಗಿರುವುದರಿಂದ ಆ ವಚನಕಾರ ತನ್ನ ಮಾತನ್ನು ಇಷ್ಟದೈವದ ಹೆಸರಿನೊಂದಿಗೆ ನುಡಿಯುತ್ತಿದ್ದರಿರಬೇಕು. ಇಲ್ಲವೆ ವಚನಕಾರನ ಇಷ್ಟದೇವದ ಹೆಸರುಗಳನ್ನು ಅರಿತ ಲಿಪಿಕಾರ ವಚನಕಾರನ ಮಾತಿನ ಕೊನೆಯಲ್ಲಿ ಸೇರಿಸಿ ಬರೆಯುವ ರೂಢಿ ಇಟ್ಟುಕೊಂಡಿರಬೇಕು. ಇದನ್ನೇ ನಾವು ಮುದ್ರಿಕೆಗಳು ಎನ್ನುವುದು. ಈ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಆವಾಗ ಮೂಲ ಹಸ್ತಪ್ರತಿಯ ಲಿಪಿಕಾರ ಯಾರು ಎನ್ನುವುದು ತಿಳಿಯಲು ಸಾದ್ಯವಾಗಬಹುದು.
    ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿಯರ ವಚನಗಳಿಗೆ ಈ ಮಾತು ಸರಿ ಹೊಂದಲಾರದು. ಅವರು ಅನುಭವ ಮಂಟಪದಲ್ಲಿದ್ದಾಗ ಅವರ ನುಡಿಗಳನ್ನು ಲಿಪಿಬದ್ಧಗೊಳಿಸಿರುವ ಲಿಪಿಕಾರ ಇಷ್ಟದೈವದ ಸೇರಿಸಿದ್ದರೆ, ಅವರು ಜಂಗಮತ್ವವನ್ನು ಹೊಂದಿ ನಿರಂತರ ತಿರುಗಾಟದಲ್ಲಿ ಇದ್ದಾಗ ಅವರ ಅಂಕಿತ ಅವರ ವಚನಗಳಿಗೆ ಹೇಗೆ ಬಂತು ಎಂಬ ಪ್ರಶ್ನೆಯೂ ವಿದ್ವಾಂಸರಿಂದ ಉದ್ಭವಿಸುತ್ತದೆ.
    ಇದಕ್ಕೂ ಸರಳವಾದ ಉತ್ತರವಿದೆ. ಮೇಲೆ ಹೇಳಿದಂತೆ ಇವರು ನುಡಿಯನ್ನು ಮುಗಿಸಬೇಕಾದರೆ ಇಷ್ಟದೈವದ ಹೆಸರನ್ನು ಹೇಳುತ್ತಿರಬೇಕು. ಹೀಗೆ ಅವರು ಹೇಳುತ್ತ ಹೋದಂತೆ ಆಸಕ್ತರಾಗಿರುವ ಕೆಲವು ಜನರು ಅವರ ವಿಚಾರಗಳಿಂದ ಪ್ರಭಾವಿತರಾಗಿ ಯಥಾವತ್ ಅಲ್ಲದಿದ್ದರೂ ನುಡಿಯ ಸಾರ ಮತ್ತು ಅಂಕಿತವನ್ನು ಲಿಪಿಬದ್ಧಗೊಳಿಸಿರಬೇಕು. ಈ ಕಾರಣದಿಂದಲೇ ವಚನಗಳ ಸಂಖ್ಯೆಯನ್ನು ನಿರ್ಣಯಿಸುವ ಕಾರ್ಯ ಇಂದಿಗೂ ಕಷ್ಟದಾಯಕವಾಗಿಯೇ ಇದೆ. ಯಾಕೆಂದರೆ ಭಿನ್ನ ಅಂಕಿತಗಳು ಇರುವ ಒಂದೇ ರೀತಿಯ ವಚನಗಳೂ ಇಂದು ನಮ್ಮ ನಡುವೆ ಇವೆ.ಯಾವುದು ಯಾರ ವಚನ ಎನ್ನುವುದನ್ನು ನಿರ್ಣಯಿಸುವಲ್ಲಿ ಇನ್ನೂ ಗೊಂದಲಗಳಿವೆ.  ಲಿಪಿಕಾರ ಮತ್ತು ಪ್ರತಿ ಲಿಪಿಕಾರನ ತಪ್ಪಿನಿಂದಲೇ ಇಂತಹ ಅವಘಡಗಳು ಸಂಭವಿಸಿವೆ.
    ಇದಕ್ಕಿಂತ ಮುಖ್ಯವಾಗಿ ವಚನಗಳನ್ನು ಸಾಮಾನ್ಯವಾಗಿ ನುಡಿ, ಮಾತು, ಸೂಳ್ನುಡಿ ಮೊದಲಾದವುಗಳಿಂದಲೇ ಸೂಚಿಸಲಾಗಿದೆ ಹೊರತು ಬೇರೆ ರೀತಿಯಲ್ಲಿ ಹೇಳಿಲ್ಲ. `ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುದಾಗಿ ಹೇಳಲಾಗಿದೆಯೇ ಹೊರತು `ಬರೆದರೆ.....' ಎಂದು ಹೇಳಲಾಗಿಲ್ಲ. ಈ ವಾದ ತುಂಬ ಬಾಲಿಶ ಎನಿಸಬಹುದಾದರೂ ಕೂಡ ಅದೇ ಸತ್ಯವನ್ನು ತೋರುವ ಮಾರ್ಗವೂ ಆಗಬಲ್ಲದು ಎಂಬುದನ್ನು ಮಾತ್ರ ನಾವು ಮರೆಯುವಂತಿಲ್ಲ.
    ಈ ಎಲ್ಲ ಅಂಶಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮಥಿಸಿದಾಗ ವಚನಕಾರರೆಲ್ಲರೂ ಅಕ್ಷರ ಕಲಿತವರಾಗಿರಲಿಲ್ಲ ಎಂಬ ವಾದ ಸಾಧಿತವಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ಮೌಖಿಕ ಪರಂಪರೆಯ ಜಾನಪದ ಸಾಹಿತ್ಯ ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ ಅಲ್ಲವೇ ?

ಅಡಿ ಟಿಪ್ಪಣಿಗಳು :
1. ಮಾರ್ಗ ಸಂ-1 : ಡಾ. ಎಂ.ಎಂ.ಕಲ್ಬುರ್ಗಿ : 1995 : ಪು-260
2. ಅನುಗ್ರಹ : ಡಾ. ಚೆನ್ನಕ್ಕ ಪಾವಟೆ : 1999 : ಪು-217
3. ಸಮುದಾಯ ಮತ್ತು ಸಂಸ್ಕøತಿ : ಡಾ. ಬಸವರಾಜ ಸಬರದ : 2002 : ಪು-130
4. ಸಾಹಿತ್ಯ ವಿಮರ್ಶೆ-1992 : ಸಂ-ಡಾ. ರಹಮತ್ ತರೀಕೆರೆ : 1993 : (ಅಡಿ ಟಿಪ್ಪಣಿ)      ಪು-124
                    ********

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.