Friday, January 18, 2013

ಧಾರವಾಡ ಸಾಹಿತ್ಯ ಸಂಭ್ರಮ : ಅಧ್ಯಕ್ಷರಿಗೊಂದು ಅಶೋಕ ಶೆಟ್ಟರ್ ಬಹಿರಂಗ ಪತ್ರ

 ಡಾ. ಗಿರಡ್ಡಿ ಗೋವಿಂದರಾಜ
ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
ಇವರಿಗೆ


ಡಿಯರ್ ಸರ್,

ಇದೇ (ಜನವರಿ, ೨೦೧೩) ೨೫, ೨೬, ೨೭ ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.

ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ, ಗುಂಪು, ಜಾತಿ, ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ, ಸಂಗೀತ, ವಿಮರ್ಶೆ, ಚಿತ್ರಕಲೆ, ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು, ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ, ಪ್ರೀತಿ, ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ-ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ. ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವುದಿಲ್ಲ.

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕಣೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ-ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು ? ಏಕೆ ಇಂಥ ಹಾಸ್ಯಾಸ್ಪದ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ ?

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ; ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ; ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ..... ! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
ಅಶೋಕ ಶೆಟ್ಟರ್
 ಧಾರವಾಡ
 ೧೬ ಜನವರಿ ೨೦೧೩

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.