Saturday, July 21, 2012

ಜಾತಿಸೂತಕ ಆತಂಕಗಳು !


ಡಾ. ಸಿದ್ರಾಮ ಕಾರಣಿಕ
ಭಾರತೀಯ ಸಮಾಜದಲ್ಲಿ ಸನಾತನಾವಾದಿ ಬೇರುಗಳು ಸಡಿಲುಗೊಳ್ಳುವಂತೆ ಘರ್ಜಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರ ವೈಚಾರಿಕ ಸಿದ್ಧಾಂತಗಳು, , ವಸ್ತುನಿಷ್ಟ ವಿಮರ್ಶೆಗಳು, ವೈಜ್ಞಾನಿಕ ವ್ಯಾಖ್ಯಾನಗಳು ಭಾರತ ದೇಶದ ವೈದಿಕ ಸಂಪ್ರದಾಯವನ್ನು ಅಲುಗಾಡಿಸಿದ್ದು ನಿಜ. ಆದರೆ ವರ್ತಮಾನದಲ್ಲಿ ನಿಂತುಕೊಂಡು ಇಂದಿನ ವ್ಯವಸ್ಥೆಯನ್ನು ಅವಲೋಕಿಸಿದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದ ಸಾರ್ಥಕತೆಗೆ ಅಡ್ಡಗಾಲಾಗಿ ನಿಂತ ದೊಡ್ಡ ಪಡೆಯೊಂದು ರೂಪ ಬದಲಾಯಿಸುತ್ತ ಮುಂದುವರಿಯುತ್ತಿರುವ ವಾಸ್ತವ ಕಣ್ಣಿಗೆ ರಾಚುತ್ತದೆ.
ಜಾತಿಯನ್ನು ಮೂಲವಾಗಿಟ್ಟುಕೊಂಡು ಸದಾ ಸಂಶಯ ಮತ್ತು ಅಪನಂಬಿಕೆಗಳ ಮೂಲಕ ದಲಿತರನ್ನು ಇಂದಿಗೂ ವ್ಯವಸ್ಥಿತವಾಗಿ ತುಳಿಯುವ ಹುನ್ನಾರಗಳು ನಿರಾಂತಕವಾಗಿ ನಿರಂತರವಾಗಿ ನಡೆಯುತ್ತಿರುವುದು ಈ ದೇಶದ ಸನಾತನಿ ಸಂಪ್ರದಾಯದ ಶೋಕಿಯಾಗುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಆತಂಕಕಾರಿಯಾಗಿದೆ. ಮನುಷ್ಯನನ್ನು, ಮನುಷ್ಯನನ್ನಾಗಿ ಪರಿಗಣಿಸದ ಧರ್ಮಗಳಿಗೆ ಜೋತು ಬಿದ್ದ ಮಂದಿಯು ಹೊಸ ಹೊಸ ಪರಿಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ಚಾಲ್ತಿಯಲ್ಲಿ ಇಟ್ಟಿರುವುದು ವಾಸ್ತವದ ವರ್ತಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಬದಲಾವಣೆಗಳಿಗೂ ಆಸ್ಪದ ಇರಬಾರದು ಎಂಬ ಆಸಕ್ತಿಯನ್ನೇ ಇಟ್ಟುಕೊಂಡು ವರ್ತಿಸುವುದನ್ನು ಕಂಡುಂಡು ವಿವೇಚಿಸಿದಾಗ ವಿಷಾದ ತುಂಬಿಕೊಳ್ಳುತ್ತಲೇ ಆವೇಶದ ವಿಚಾರಗಳೂ ಮನದಲ್ಲಿ ಮೂಡುತ್ತವೆ.
ಪಾಶ್ಚಾತ್ಯರ ಪ್ರಭಾವ ಮತ್ತು ಸಂಪರ್ಕದಿಂದಾಗಿ ಭಾರತೀಯ ಸಮಾಜದಲ್ಲಿ ತುಂಬ ಕ್ರಾಂತಿಕಾರಿ ಎನಿಸುವಷ್ಟರಮಟ್ಟಿಗಿನ ಬದಲಾವಣೆಗಳೇನೋ ಆಗಿವೆ ನಿಜ. ಆದರೆ ಭಾರತೀಯ ಮನಸ್ಸುಗಳು ಮಾತ್ರ ಬದಲಾಗಿಲ್ಲ. ತೋರಿಕೆಯ ಹೂಟಗಳು ಹಲವು ಒಳಗೊಳಗೇ ಜಾತಿಯನ್ನು ಬಲವಾಗಿ ಹಿಡಿದುಕೊಂಡು ಹಠ ಹಿಡಿದಂತೆ ಕುಳಿತುಕೊಂಡಿರುವುದು ಸುಳ್ಳಲ್ಲ. ‘ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿದೆ ; ಹೃದಯ ವೈಶಾಲ್ಯತೆಯನ್ನು ಹಾಳು ಮಾಡಿದೆ ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ  ಮಾಡಿದೆ. ಹಿಂದುವಿನ ಸಮಾಜ  ಹಾಗೂ ಹೊಣೆಗಾರಿಕೆ ಅವರ ಜಾತಿಗೆ ಸೀಮಿತವಾದವು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ’ (ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು : ಸಂಪುಟ-5 : ಪು-) ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಯಾಕೆ ಮತ್ತೇ ಮತ್ತೇ ಪ್ರಸ್ತುತವಾಗುತ್ತವೆ ಎಂದರೆ ಪರಿಸ್ಥಿತಿಗಳು ಹಾಗಿವೆ. ಜಾತಿಯೆಂಬುದು ಒಂದು ಸೂತಕ ಎಂದು ಭಾವಿಸಿರುವ ಬಹಳಷ್ಟು ಮಂದಿ, ಆ ಜಾತಿಯೇ ಬಹಳಷ್ಟು ಅವಘಡಗಳನ್ನು ಸೃಷ್ಟಿಸಿದೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ.
ಶಿಕ್ಷಣದ ಹಕ್ಕು ದೊರೆತಾಗ ದಲಿತರು ಒಂದಿಷ್ಟು ಅತ್ತ ವಾಲಿಕೊಂಡು ಒಂದಿಷ್ಟು ಕಲಿತು, ಉದ್ಯೋಗ ಮಾಡುತ್ತ ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಳ್ಳಲು ದಾಪುಗಾಲು ಇಡುತ್ತಿರುವುದು ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಂಪಾದಿಸುತ್ತಿರುವುದನ್ನು ಗಮನಿಸಿದಾಗ ಭಾರತೀಯ ಸಮಾಜವು ನಿಜವಾಗಿಯೂ ಬದಲಾಗಿಯೇ ಬಿಟ್ಟಿತು ಎಂದು ಭ್ರಮಿಸಿದವರೂ ಸಂಭ್ರಮಿಸಿದವರೂ ಇದ್ದಾರೆ. ಆದರೆ ವಾಸ್ತವ ಹಾಗಿಲ್ಲ ಎಂದರೆ ಅಚ್ಚರಿಯಾದೀತು ! ದಲಿತನೊಬ್ಬ ಶಿಕ್ಷಣ ಪಡೆದುಕೊಂಡು ಉನ್ನತ ಹಂತ ತಲುಪಿದರೂ ವೈದಿಕಶಾಹಿ ಹೇರಿದ ಜಾತಿ ಸೂತಕ ಆತನನ್ನು ಬಿಡಲಾರದು. ಈ ದೇಶದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಆತನೊಡನೆ ಗೌರವಪೂರ್ವಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂಬುದು ನಿಜವಾಗಿದ್ದರೂ ಅವರ ಮನದ ಮೂಲೆಯಲ್ಲಿ ಜಾತಿ ಮನೆ ಮಾಡಿ ಕುಳಿತ್ತಿರುತ್ತದೆ. ಹೊರಗೆ ಏನೆಲ್ಲ ಮಾಡಿದರೂ ದಲಿತನೊಬ್ಬ ತಮ್ಮ ಮನೆಗೆ ಬಂದಾಗ ಮೇಲ್ಜಾತಿಯವರೆನಿಸಿಕೊಂಡವರ ಚಟುವಟಿಕೆಗಳು ಆಚರಣೆಗಳ ಹೆಸರಿನಲ್ಲಿ ‘ದೂರ’ ಇಡುವ ವರ್ತನೆಗಳಲ್ಲಿ ವ್ಯಕ್ತವಾಗುತ್ತವೆ. ಮನಸ್ಸುಗಳು ಇಂದಿಗೂ ಬದಲಾಗಿಲ್ಲ ಎನ್ನುವುದು ಈ ಕಾರಣಕ್ಕಾಗಿಯೇ.
ಇದು ಶಿಕ್ಷಣ ಪಡೆದ, ಉದ್ಯೋಗದಲ್ಲಿರುವ, ಆರ್ಥಿಕವಾಗಿ ಸಬಲರಾಗಿರುವ, ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಂಡಿರುವ ದಲಿತರನ್ನು ನಡೆಯಿಸಿಕೊಳ್ಳುವ ಪರಿಯಾದರೆ ಅಕ್ಷರದ ಅರಿವಿಲ್ಲದ, ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿರುವ ದಲಿತರು ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದು, ಇವರ ಬದುಕು ಇಂದಿಗೂ ಬದಲಾವಣೆಯಾಗಿಲ್ಲ. ಮೇಲ್ಜಾತಿಯವರೆನಿಸಿಕೊಂಡವರ ಶೋಷಣೆಗೆ ಇವರು ನಿರಂತರವಾಗಿ ಬಲಿಯಾಗುತ್ತಲೇ ಇದ್ದಾರೆ. ಇನ್ನೂ ಕೆಲವು ಕಡೆ ಅಸ್ಪೃಶ್ಯತೆ ತುಂಬ ಘೋರವಾಗಿಯೇ ಆಚರಣೆಯಲ್ಲಿದೆ. ಕುಡಿಯುವ ನೀರು, ತಿನ್ನುವ ಅನ್ನ, ಪೂಜಿಸುವ ದೈವಗಳ ಸಂದರ್ಭದಲ್ಲಿ ಇನ್ನೂ ಮೇಲು-ಕೀಳುತನ, ಮಡಿ-ಮೈಲಿಗೆಗಳು ಕಾಣಿಸಿಕೊಳ್ಳುತ್ತಲೇ ಇವೆ. ದಿನವೂ ದಿನಪತ್ರಿಕೆ ಓದುವವರಿಗೆ, ಟ.ವಿ. ನೋಡುಗರಿಗೆ ಈ ಸುದ್ದಿಗಳ ಮಾಹಿತಿ ಇದ್ದೇ ಇದೆ ; ಇದಕ್ಕೆ ಬೇರೊಂದು ಉದಾಹರಣೆ ನೀಡುವ ಅವಶ್ಯಕತೆಯಿಲ್ಲ. ದಲಿತರನ್ನು ಬಹಿಷ್ಕಾರ ಹಾಕುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಗುಂಡಾಗಿರಿ ಮಾಡಿ ಹಲ್ಲೆ ಮಾಡುವುದು, ನಿರ್ದಾಕ್ಷಣ್ಯವಾಗಿ ದಲಿತರ ಮಾರಣಹೋಮ ನಡೆಸುವುದು, ದಲಿತ ಮಹಿಳೆಯರನ್ನು ಬೆತ್ತಲೆ ಮಾಡುವುದು ಇಲ್ಲವೆ ಅತ್ಯಾಚಾರ ಮಾಡುವುದು ಇನ್ನೂ ನಿರಂತರವಾಗಿವೆ ಎಂದರೆ ಪ್ರಜಾಪ್ರಭುತ್ವದ ಈ ದೇಶದ ಪ್ರಜೆಗಳಿಗೆ ನಾಚಿಕೆಯಾಗಬೇಕು !
ಇವೆಲ್ಲವುಗಳ ನಡುವೆ ಮಾನಸಿಕ ಗುಲಾಮಗಿರಿಯನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವ ದಲಿತರೂ ಇದ್ದಾರೆ. ಅವರು ಕಲಿತವರಿರಬಹುದು, ಸ್ಥಿತಿವಂತರಿರಬಹುದು ಅಥವಾ ಏನೇನೂ ಇಲ್ಲದವರೂ ಆಗಿರಬಹುದು. ಈ ಮಾನಸಿಕ ಗುಲಾಮಗಿರಿಗೆ ಈಡಾಗಿರುವ ದಲಿತರು ಸಾಮಾಜಿಕ ಬದಲಾವಣೆಯನ್ನು ಬಯಸುವ ಸಂದರ್ಭದಲ್ಲಿ ತುಂಬ ಅಪಾಯಕಾರಿ. ತಮ್ಮದೇ ತಪ್ಪು ಎಂಬ ತಲಾಂತರದ ಕರ್ಮ ಸಿದ್ಧಾಂತಕ್ಕೆ ಬಲಿಯಾಗಿರುವ ಇಂಥ ದಲಿತರನ್ನು ಎಚ್ಚರಗೊಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ. ಯಾಕೆಂದರೆ ಮೇಲ್ಜಾತಿಯವರೆನಿಸಿಕೊಂಡವರೊಂದಿಗೆ ಗುರುತಿಸಿಕೊಳ್ಳುವ ಬಲಿತ ದಲಿತರೂ ಭೂಮಿತತ್ವವನ್ನು ಮರೆಯುತ್ತಾರೆ ಮತ್ತು ತಾವು ದಲಿತರೆಂದು ಹೇಳಿಕೊಳ್ಳಲು ಸಹ ಸಂಕೋಚಪಡುತ್ತಾರೆ. ಕನಿಷ್ಟ ದಲಿತರನ್ನು ಆದಷ್ಟು ದೂರ ಇಡುವ ಪ್ರಯತ್ನವನ್ನೂ ಬಲಿತ ದಲಿತರು ಮಾಡುತ್ತಾರೆ. ಬಲಿತ ದಲಿತರ ಈ ಗುಪ್ತ ಗುಲಾಮಗಿರಿಯಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ದೂರೀಕರಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ ಮತ್ತು ನಡೆಯುತ್ತಿವೆ.
ಹೀಗಾಗಿಯೇ ಈ ದೇಶದಲ್ಲಿ ದಲಿತರು ಇನ್ನೂ ಶೋಷಣೆಯ ಅನುಭೋಗಿಗಳೇ ಆಗಿದ್ದಾರೆ. ತಿದ್ದಿಕೊಳ್ಳದಿದ್ದರೆ ಆ ಶೋಷಣೆ ಮುಂದುವರಿಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಮೇಲ್ಜಾತಿಯವರೆನಿಸಿಕೊಂಡವರು ದಲಿತರಲ್ಲಿ ಬಹಿಷ್ಕಾರದ ಭಯವನ್ನು ಬಿತ್ತುತ್ತಾರೆ ಮಾತ್ರವಲ್ಲ ಭಂಡತನಕ್ಕಿಳಿದು ಮೇಲ್ಮೆಯನ್ನು ಸಾಧಿಸಿಕೊಳ್ಳುತ್ತಾರೆ.
ಇದೆಲ್ಲವುಗಳ ಜೊತೆಗೆ ಇತ್ತೀಚೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಪರಾಕ್ರಮವನ್ನೂ ಸಾಧನೆ-ಸಿದ್ಧಿಯನ್ನೂ ಅಲ್ಲಗೆಳೆಯುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಆಗಿದೆ. ಇದಕ್ಕೆ ಕೇವಲ ದಲಿತೇತರರು ಮಾತ್ರವಲ್ಲ ಬಲಿತ ದಲಿತರೂ ಕಾರಣಕರ್ತರು ಎನ್ನುವುದು ಇನ್ನಷ್ಟು ಆತಂಕಕಾರಿಯಾದ ಸಂಗತಿಯೇ ಆಗಿದೆ. ಯಾರೋ ಒಬ್ಬರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದವರಲ್ಲಿ ಒಬ್ಬರೇ ಹೊರತು ಇಡೀ ಸಂವಿಧಾನ ರಚನೆಯನ್ನು ಅವರು ಮಾಡಿಲ್ಲ ಎಂಬುದನ್ನು ಮಾಧ್ಯಮಗಳಲ್ಲಿ ಹರಿಯಬಿಟ್ಟು ತಮ್ಮ ಉರಿಯನ್ನು ತಣ್ಣಗಾಗಿಸಿಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡರೆ, ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಾಷ್ಟ್ರವಿರೋಧಿ ಎನಿಸುವ ಕಾರ್ಯ ಮಾಡಿದ್ದಾರೆ ಎಂಬ ಪುಕಾರು ಎಬ್ಬಿಸುತ್ತಿದ್ದಾರೆ. ಮತ್ತೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೋರಾಟ 1930 ಆಸುಪಾಸಿನಲ್ಲಿ ಆರಂಭವಾಯಿತು ಎಂದು ಘೋಷಿಸಿ ಬೇರೆಯವರ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ !
ಇವೆಲ್ಲವುಗಳಿಗಿಂತಲೂ ಹೇಯವಾದ ನಡುವಳಿಕೆ ಎಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಇಂದಿಗೂ ತಮ್ಮ ಶುದ್ಧ ವೈರಿ ಎಂದು ಭಾವಿಸುವ ಗುಂಪೊಂದು ಡಾ. ಬಾಬಾಸಾಹೇಬರ ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚುತ್ತ, ಅವರ ಮೂರ್ತಿಗಳನ್ನು, ಸ್ಮಾರಕಗಳನ್ನು ಭಗ್ನಗೊಳಿಸುವಲ್ಲಿ ‘ಆತ್ಮ’ ತೃಪ್ತಿಯನ್ನು ಅನುಭವಿಸುತ್ತ ವಿಜ್ರಂಭಿಸುವ ಸ್ವರತಿಗೆ ಮುಂದಾಗುತ್ತಿರುವುದು ! ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ‘ಹೊಲೆಯ’ ಎಂಬುದನ್ನಷ್ಟೇ ಪರಿಗಣಿಸಿ, ಅವರ ಇಡೀ ಸಾಧನೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ‘ಸಂಘಟನೆ’ ಮಾಡಿಕೊಂಡು ಹುಯಿಲೆಬ್ಬಿಸುತ್ತ ದಲಿತ ಶಕ್ತಿಯನ್ನು ಹಾಳು ಮಾಡುವಲ್ಲಿ ಸಾಫಲ್ಯ ಸಾಧಿಸುವ ಹಠಮಾರಿತನದಲ್ಲಿ ಅಂಡಲೆಯುತ್ತಿದ್ದಾರೆ !
ಇಂಥವುಗಳೆಲ್ಲ ಯಾಕೆ ನಡೆಯುತ್ತಿವೆ ಎಂದರೆ ಅದು ನಮ್ಮಲ್ಲಿ ಇರುವ ಅರಿವಿನ ಅಭಾವ ಎನ್ನಬೇಕಾಗುತ್ತದೆ. ಅರಿವಿನ ಅಭಾವದಿಂದ ಉದ್ಭವಿಸಿದ ಅಸಹನೆಯೇ ಇಷ್ಟಕ್ಕೆಲ್ಲ ಕಾರಣ ಎನ್ನದೆ ಬೇರೆ ಮಾರ್ಗವಿಲ್ಲ. ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಘರ್ಷ-ಸಮನ್ವಯ ಸಿದ್ಧಾಂತ, ಸಾಂಘಿಕ ಬದುಕಿನ ಸದಾಶಯಗಳ ಫಲಾನುಭವಿಗಳಾಗಿರುವ ಬಹಳಷ್ಟು ಮಂದಿ ಬಲಿತ ದಲಿತರು ಉಂಡ ತಾಟಿನಲ್ಲೇ ಹೇಸಿಗೆ ಮಾಡಿಕೊಂಡು ಉಳ್ಳಾಡುತ್ತಿರುವುದು ಕೂಡ ಇಂತಹ ಅವಘಡಗಳಿಗೆ ಕೆಂಪು ಹಾಸಿಗೆ ಹಾಸಿದಂತಾಗಿದೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರ ಪರವಾಗಿ ಮಾತ್ರ ಹೋರಾಟ ಮಾಡಲಿಲ್ಲ. ದಲಿತ ಅಸ್ಮಿತೆಯ ಹೋರಾಟದೊಂದಿಗೆ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಪರವಾಗಿಯೂ ಬಹುದೊಡ್ಡ ಚಳುವಳಿಯನ್ನು ಹುಟ್ಟು ಹಾಕಿದವರು. ಈ ದೇಶದ ಪ್ರತಿಯೊಬ್ಬ ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿಯೂ ಹೋರಾಟ ಮಾಡಿ ಯಶಸ್ಸು ಗಳಿಸಿದವರು. ಜೊತೆಗೆ ಮಹಾತ್ಮ ಫುಲೆಯವರು ಆರಂಭಿಸಿದ ರೈತರ ಪರವಾದ ಉಗ್ರ ಹೋರಾಟವನ್ನೂ ಮಾಡಿ ನ್ಯಾಯ ದೊರಕಿಸಿ ಕೊಡುವ ಕೈಂಕರ್ಯ ತೊಟ್ಟವರು. ಇವೆಲ್ಲವುಗಳನ್ನೂ ಮರೆ ಮಾಚಿ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಕೆಲವು ಮನೋವಿಕಲ್ಪಕ್ಕೆ ಒಳಗಾದ ಜನರ ಚಟುವಟಿಕೆಗಳು ತೀರ ಅಕ್ಷಮ್ಯ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿದ ಸಾಧನೆ-ಸಿದ್ಧಿಗಳ ಅರಿವನ್ನು ಅಥವಾ ಕನಿಷ್ಟ ಪರಿಚಯವನ್ನಾದರೂ ಕಿಲುಬುಗಟ್ಟಿರುವ ಇಡೀ ಭಾರತೀಯ ಸಮಾಜಕ್ಕೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದವರೆಲ್ಲರೂ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅರ್ಥವಾಯಿತು ಅಂದುಕೊಂಡಿದ್ದೇನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.