ಧಾರವಾಡ: ಭಾರತಕ್ಕೆ ಸ್ವಾತಂತ್ರ್ಯ ಬಂದ ಮೂರು ವರ್ಷಕ್ಕೇ (1950) ಆರಂಭವಾದ, ರಾಜ್ಯದ
ಅತ್ಯಂತ ಹಳೆಯ ವಿವಿಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಇದೀಗ
ಪ್ರಾಧ್ಯಾಪಕರು/ ಉಪನ್ಯಾಸಕರ ಕೊರತೆಯಿಂದ ನಲುಗುತ್ತಿದೆ.
ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಕವಿವಿ ವ್ಯಾಪ್ತಿ
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದು 300
ಕಾಲೇಜುಗಳು ಕವಿವಿಯೊಂದಿಗೆ ಸಂಯೋಜನೆ ಹೊಂದಿವೆ. ಕವಿವಿಯು ಹಾವೇರಿ, ಕಾರವಾರ ಹಾಗೂ ಗದಗ
ನಗರಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿದ್ದು, ಅಲ್ಲಿಯೂ ಪೂರ್ಣ ಪ್ರಮಾಣದ
ಕಾಯಂ ಉಪನ್ಯಾಸಕರಿಲ್ಲ.
ಕೆಲ ಉಪನ್ಯಾಸಕರು ಧಾರವಾಡದಿಂದಲೇ ಆಯಾ ಸ್ನಾತಕೋತ್ತರ ಕೇಂದ್ರಗಳಿಗೆ ಹೋಗಿ ತರಗತಿಗಳನ್ನು
ನಡೆಸುತ್ತಿದ್ದಾರೆ.ಒಂದು ಅಂದಾಜಿನಂತೆ ವಿವಿಯ ಸ್ನಾತಕೋತ್ತರ ವಿಭಾಗಗಳಿಗೆ 157 ಹಾಗೂ
ಪದವಿ ಕಾಲೇಜುಗಳಿಗೆ 67 ಮಂಜೂರಾದ ಹುದ್ದೆಗಳು ಖಾಲಿ ಉಳಿದಿವೆ. ಪ್ರಾಧ್ಯಾಪಕರು
ನಿವೃತ್ತಿ ಹೊಂದುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ
ಬೀರುತ್ತಿದೆ ಎಂದು ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕರೊಬ್ಬರು ಆತಂಕ
ವ್ಯಕ್ತಪಡಿಸಿದರು.
ಕಳೆದ ತಿಂಗಳು 43 ಬ್ಯಾಕ್‌ಲಾಗ್ ಹುದ್ದೆಗಳಲ್ಲಿ 30 ಹುದ್ದೆಗಳನ್ನು ಭರ್ತಿ
ಮಾಡಿದ್ದರಿಂದ ಬೋಧಕರ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದೆ. ಉಳಿದ 13 ಹುದ್ದೆಗಳಿಗಾಗಿ
ನಡೆದ ಸಂದರ್ಶನದಲ್ಲಿ ಸೂಕ್ತ ಅಭ್ಯರ್ಥಿಗಳು ದೊರೆಯದಿರುವುದರಿಂದ ಮತ್ತೆ ಪ್ರಕಟಣೆ ನೀಡಿ
ಭರ್ತಿ ಮಾಡಿಕೊಳ್ಳಲು ವಿವಿ ನಿರ್ಧರಿಸಿದೆ.
ಒಂದು ವಿಭಾಗಕ್ಕೆ ಕನಿಷ್ಟ ಆರು ಮಂದಿ ಬೋಧಕ ಸಿಬ್ಬಂದಿ ಅಗತ್ಯವಿದೆ. ಆದರೆ ಇದೀಗ ಸರಾಸರಿ
ಮೂರರಿಂದ ನಾಲ್ಕು ಮಂದಿ ಪ್ರಾಧ್ಯಾಪಕ/ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಉದಾಹರಣೆಗೆ ವಿವಿಯ ಇಂಗ್ಲಿಷ್ ವಿಭಾಗದಲ್ಲಿ ನಾಲ್ಕು ಮಂದಿ ಕಾಯಂ ಬೋಧಕ ಸಿಬ್ಬಂದಿ
ಇದ್ದಾರೆ.
28 ವರ್ಷಗಳಷ್ಟು ಹಳೆಯದಾದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ಈಗಲೂ ಮೂರು
ಮಂದಿ ಕಾಯಂ ಪ್ರಾಧ್ಯಾಪಕ/ ಉಪನ್ಯಾಸಕರು ಇದ್ದು, ಒಬ್ಬರು ಅತಿಥಿ ಉಪನ್ಯಾಸಕರಿದ್ದಾರೆ.
ನಿರ್ವಹಣಾ ವಿಭಾಗ (ಎಂಬಿಎ)ದಲ್ಲಿ ಏಳು ಮಂಜೂರಾತಿ ಹುದ್ದೆಗಳಿದ್ದರೆ, ನಾಲ್ಕು ಮಂದಿ
ಕಾಯಂ ಹಾಗೂ ಮೂವರು ಅತಿಥಿ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರಿಗೆ ವಿವಿ ತನ್ನ
ಆಂತರಿಕ ನಿಧಿಯನ್ನು ಬಳಸಿಕೊಂಡು ವೇತನ ಪಾವತಿ ಮಾಡುತ್ತಿದೆ.
ಹುದ್ದೆ ಭರ್ತಿಗೆ ಪ್ರಸ್ತಾವನೆ: ಪ್ರೊ.ವಾಲೀಕಾರ
ಉಪನ್ಯಾಸಕರ ಕೊರತೆಯ ಕುರಿತು `ಪ್ರಜಾವಾಣಿ`ಯೊಂದಿಗೆ ಮಾತನಾಡಿದ ಕರ್ನಾಟಕ ವಿವಿ ಕುಲಪತಿ
ಪ್ರೊ.ಎಚ್.ಬಿ.ವಾಲೀಕಾರ, `ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡುವಂತೆ ಈಗಾಗಲೇ ಉನ್ನತ
ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ
ಸಿದ್ದಯ್ಯ ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಹೆಚ್ಚು ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಿ ಯುಜಿಸಿಗೂ ಮನವಿ ಸಲ್ಲಿಸಲಾಗಿದೆ.
ಉಪನ್ಯಾಸಕರಿಗೆ ವಿವಿ ಧನಸಹಾಯಕ ಆಯೋಗವು ವೇತನ ನೀಡಿದರೂ ಸಾಕು, ಉಳಿದದ್ದನ್ನು ವಿವಿಯೇ
ನಿರ್ವಹಣೆ ಮಾಡಲಿದೆ` ಎಂದರು.
`ಬೋಧಕರ ಕೊರತೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕಾಗಬಾರದು ಎಂದು ಉದ್ದೇಶದಿಂದ ಅತಿಥಿ
ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಣಕಾಸು ಪ್ರಸ್ತಾವನೆಯಿಂದ ಹುದ್ದೆ
ನೇಮಕಕ್ಕೆ ಅನುಮತಿ ದೊರೆತ ಕೂಡಲೇ ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ. ಕಾಯಂ
ಸಿಬ್ಬಂದಿ ನೇಮಕವಾಗಬೇಕಾದರೆ ಕನಿಷ್ಟ ಒಂದು ವರ್ಷ ಬೇಕಾಗಬಹುದು` ಎಂದು ತಿಳಿಸಿದರು.
ಕೃಪೆ : ಪ್ರಜಾವಾಣಿ ವಾರ್ತೆ/ಮನೋಜ್‌ಕುಮಾರ್ ಗುದ್ದಿ May 03, 2012
No comments:
Post a Comment