-ಬಿ. ಶ್ರೀಪಾದ್ ಭಟ್
ನಿನ್ನೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಹುಡುಗರು ಹೆಣ್ಣುಮಕ್ಕಳ ಮೇಲೆ ನಡೆಸಿದ
ಹಲ್ಲೆ ಅಮಾನವೀಯವಾದದ್ದು ಹಾಗೂ ಅತ್ಯಂತ ಕ್ರೌರ್ಯವಾದದ್ದು. ಆದರೆ ಇದು ಹೊಸದಾಗಿ
ನಡೆಯುತ್ತಿದೆ ಎಂದು ನಾವು ಗಾಬರಿಗೊಂಡರೆ ಅದು ನಮ್ಮ ಆತ್ಮವಂಚನೆಯಷ್ಟೆ. ಕಳೆದ ಇಪ್ಪತ್ತು
ವರ್ಷಗಳಲ್ಲಿ ಇದು ದೇಶಾದ್ಯಾಂತ ನೂರಾರು ಬಾರಿ ನಡೆದಿದೆ. ಈ ಮತೀಯವಾದಿ ಆರೆಸ್ಸೆಸ್
ಸಂಘಟನೆ “ಗರ್ವ್ ಸೆ ಕಹೋ ಹಂ ಹಿಂದೂ ಹೈ” ಎನ್ನುವ ಘೋಷಣೆಯನ್ನು ಹುಟ್ಟು ಹಾಕಿದಾಗಲೇ ಈ
ಹಲ್ಲೆಯ ಕ್ರೌರ್ಯದ ಬೀಜಗಳು ಮೊಳಕೆಯೊಡೆದದ್ದು.. ನಂತರ “ಏಕ್ ಧಕ್ಕ ಔರ್ ದೋ” ಎನ್ನುವ
ಫ್ಯಾಸಿಸ್ಟ್ ಮನಸ್ಥಿತಿ ಚಲನಶೀಲಗೊಂಡಾಗ ಈ ಕ್ರೌರ್ಯದ ಅನೇಕ ಮುಖಗಳು ಅನಾವರಣಗೊಂಡವು. ಈ
ಬಗೆಯ ಕ್ರೌರ್ಯಕ್ಕೆ ನೀರೆರೆದು ಪೋಷಿಸಿದ ಅಡ್ವಾನಿ ಹಾಗೂ ಮತ್ತೊಬ್ಬ ಫ್ಯಾಸಿಸ್ಟ್
ನರೇಂದ್ರ ಮೋದಿ ಇಂದು ಭವಿಷ್ಯದ ಪ್ರಧಾನಿ ಪಟ್ಟದ ಸ್ಪರ್ಧೆಗಳು. ಇವರನ್ನು ಹಾಗೂ ಇವರ
ಫ್ಯಾಸಿಸ್ಟ್ ಮಾತೃ ಪಕ್ಷ ಆರೆಸ್ಸೆಸ್ ಅನ್ನು ಸಹಿಸಿಕೊಂಡ ಘೋರವಾದ ತಪ್ಪಿಗೆ ಸಮಾಜ ಈ
ಬಗೆಯ ಹಲ್ಲೆಗಳನ್ನು ಕಾಲಕಾಲಕ್ಕೆ ಎದುರುನೋಡಬಹುದು. ಇವರ ಹಿಂದುತ್ವದ ಕ್ರೌರ್ಯದ
ಹುಸಿಚಿಂತನೆಗೆ ದೇಶವೊಂದರ, ರಾಜ್ಯವೊಂದರ ಸಾಂಸ್ಕೃತಿಕ ಸಮಾಜ ಹಾಗೂ
ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ವ್ಯವಸ್ಥೆ ತೆರಬೇಕಾದ ಬೆಲೆ ಅಪಾರವಾದದ್ದು. ಚಿಂತಕ
ಗ್ರಾಮ್ಷಿ ಹೇಳಿದ ಹಾಗೆ “ನಾವು ಮೇಲ್ನೋಟಕ್ಕೆ ವೇದಾಂತಿಗಳಾಗಿಯೂ,ಸಿದ್ಧಾಂತವಾದಿಗಳಾಗಿ
ಕಾಣಿಸಿಕೊಳ್ಳುತ್ತೇವೆ. ಆದರೆ ಈ ಮುಗ್ಧ ವೇದಾಂತಗಳೇ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ
ನಮ್ಮೊಳಗೆ ಫ್ಯಾಸಿಸ್ಟ್ ಸಂಸೃತಿಯನ್ನು ಹುಟ್ಟಿಹಾಕುತ್ತವೆ”. ಈ
ಮಾತುಗಳು ನಾಗರಿಕ ಸಮಾಜದಲ್ಲಿ ಅತ್ಯಂತ ಕ್ರೌರ್ಯದಿಂದ ಅಸಹಾಯಕ ಹೆಣ್ಣುಮಕ್ಕಳ ಮೇಲೆ
ಅನಾಗರಿಕವಾಗಿ ಹಲ್ಲೆ ನಡೆಸಿದ ಆ ಘಾತುಕ ಹುಡುಗರಿಗೂ ಅನ್ವಯಿಸುತ್ತದೆ, ಈ
ಅಮಾನವೀಯ,ಅನಾಗರೀಕ ಹಲ್ಲೆಯನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ
ಸಮರ್ಥಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೂ ಅನ್ವಯಿಸುತ್ತದೆ, ನಮ್ಮ ಕಾಲಘಟ್ಟದಲ್ಲಿ ಈ
ತರಹದ ಅನಾಗರಿಕ ಘಟನೆಗಳು ನಡೆದಾಗಲೆಲ್ಲ ಅಸಹಾಯಕತೆಯಿಂದ ಪತ್ರಿಕಾ ಹೇಳಿಕೆಗಳ ಮೂಲಕ,
ಲೇಖನಗಳ ಮೂಲಕ ಖಂಡಿಸುವ ನಮಗೂ ಅನ್ವಯಿಸುತ್ತದೆ.
ಈ ಫ಼್ಯಾಸಿಸ್ಟ್ ಧೋರಣೆಗಳಿಂದ ಮುಕ್ತಿಗಾಗಿ ರಾಜಕೀಯ ಚಿಂತಕ ’ಗ್ರಾಮ್ಷಿ’ ಯು
“ಸಾಂಸ್ಕೃತಿಕ ಯಜಮಾನ್ಯ”ವನ್ನು ಪ್ರತಿಪಾದಿಸುತ್ತಾನೆ (Cultural hegemony). ಈ
ಸಾಂಸ್ಕೃತಿಕ ಯಜಮಾನ್ಯದಲ್ಲಿ ಗ್ರಾಮ್ಷಿಯು ದುಡಿಯುವ ವರ್ಗಗಳು ಕೇವಲ ಆರ್ಥಿಕ ಬೆಳವಣಿಗೆಯ
ಮುಖಾಂತರವಾಗಲೀ, ಕೇವಲ ರಾಜಕೀಯ ಅಧಿಕಾರದ ಮುಖಾಂತರವಾಗಲೀ ಒಂದು ಸಮಾಜವನ್ನು ಕಟ್ಟಲು
ಸಾಧ್ಯವಿಲ್ಲ, ಬದಲಾಗಿ ಈ ದುಡಿಯುವ ಜನತೆ ಸಾಂಸ್ಕೃತಿಕವಾಗಿ ಬುದ್ಧಿಜೀವಿಗಳಾಗಿಯೂ
ರೂಪಗೊಂಡಾಗ ಆಗ ವ್ಯವಸ್ಥೆಯಲ್ಲಿ ಸಮತೋಲನ, ಸಹನೆ ಒಡಮೂಡುತ್ತದೆ ಎಂದು ಚಿಂತಿಸುತ್ತಾನೆ.
ಇಲ್ಲದೇ ಹೋದಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳ ಪ್ರಭುತ್ವವು ತನ್ನದೇ ಆದ ಬೂರ್ಜ್ವಾ
ಯಜಮಾನಿಕೆಯನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮಾಜದ ಮೇಲೆ ಹೇರುತ್ತದೆ ಎಂದು ಗ್ರಾಮ್ಷಿಯ
ಖಚಿತವಾದ ಅಭಿಪ್ರಾಯ.
ಇಂದು ದೇಶದಲ್ಲಿ, ನಿನ್ನೆ ಹಾಗೂ ನಿರಂತರವಾಗಿ ಕೆಲವು ವರ್ಷಗಳಿಂದ ಮಂಗಳೂರು ಹಾಗು
ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ನಡೆದ ಹಲ್ಲೆಯ ಹಿಂದಿನ
ಕ್ರೌರ್ಯದ ಮನಸ್ಥಿತಿಯನ್ನು ಈ ಸಾಂಸ್ಕೃತಿಕ ಯಜಮಾನ್ಯದ ಪರಿಭಾಷೆಯಲ್ಲಿ ಅರ್ಥೈಸಬೇಕು.
ನಾವೆಲ್ಲ ನಮ್ಮ ನೆಲದ ಮಾನವೀಯ ಸಂಸ್ಕೃತಿಯನ್ನು, ಜೀವಪರವಾದ ಅವೈದಿಕ ಸಂಸ್ಕೃತಿಯ
ಯಜಮಾನ್ಯವನ್ನು ವ್ಯವಸ್ಥೆಯೊಳಗೆ ಚಲನಶೀಲವಾಗಿ, ನಿರಂತರವಾಗಿ ನೆಲೆಗೊಳ್ಳಲು
ಪ್ರಯತ್ನಿಸಿಲ್ಲದ ತಪ್ಪಿಗಾಗಿ ಇಂದು ಸಂಘಪರಿವಾರದ ವಿಕೃತಿ ಚಿಂತನೆಯನ್ನು ಮೈಗೂಡಿಸಿಕೊಂಡ
ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾದ ಹಲ್ಲೆ ಇಂದು ನಮ್ಮ ಕಣ್ಣೆದುರಿಗೆ
ನಡೆಯುತ್ತಿದೆ. ಇಲ್ಲಿ ಆಧುನಿಕ ಬುದ್ಧಿಜೀವಿಗಳು ಕೇವಲ ಮಾತುಗಾರರಾಗದೆ ಬಹಿರಂಗವಾಗಿ
ಸಾಮಾನ್ಯ ಜನತೆಯೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವಲ್ಲಿ ಸೋತಂತಹ
ಜಾಗದಲ್ಲಿ ಸಂಘಪರಿವಾರದ ವಿಕೃತಿ ಚಿಂತನೆಗಳು ಆ ಖಾಲಿಯಾದ ಜಾಗವನ್ನು
ಆಕ್ರಮಿಸಿಕೊಳ್ಳುತ್ತವೆ ಹಾಗೂ ತಮ್ಮ ಯಜಮಾನಿಕೆಯನ್ನು ಪ್ರತಿಷ್ಠಾಪಿಸುತ್ತವೆ. ಇಂದು
ಅಸಹಾಯಕ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ ಆ ಅನಾಗರಿಕ ಯುವಕರು, ಹಿಂದೂ ಸಂಘಟನೆಗಳು
ಮತ್ತು ಜನಸಾಮಾನ್ಯರು ಆ ದುಷ್ಕೃತ್ಯವನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಪದೇ ಪದೇ
ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕಾರಣ ನಮ್ಮೆಲ್ಲರ ಸಾಂಸ್ಕೃತಿಕ ನಿಷ್ಕ್ರಿಯತೆ ಮತ್ತು
ಸಿನಿಕತೆ. ನಾವೆಲ್ಲ ಸಾಂಸ್ಕೃತಿಕವಾಗಿ ನಿಷ್ಕ್ರಿಯಗೊಂಡಾಗ ಸಂಘಪರಿವಾರ ಪ್ರೇರಿತ ಬಲು
ಸುಲಭವಾಗಿ ಸರಳೀಕೃತಗೊಂಡ ದೇವರುಗಳನ್ನು,
ನಂಬಿಕೆಗಳನ್ನು ಒಳಗೊಂಡ ಏಕರೂಪಿ ಕಲ್ಪಿತ ಹಿಂದೂ ಸಂಸ್ಕೃತಿ ಬಂದು ನೆಲೆಯೂರುತ್ತದೆ.
ಇಂತಹ ವ್ಯವಸ್ಥೆಯಲ್ಲಿ ಒಂದು ಬಗೆಯ ಒಪ್ಪಿತ ಗುಲಾಮಿಗಿರಿ ನೆಲೆಗೊಳ್ಳುತ್ತದೆ. ಈ
ಗುಲಾಮಿಗಿರಿ ಧರ್ಮವನ್ನು ಸಾರ್ವಜನಿಕವಾಗಿ ಚರ್ಚಿಯನ್ನು ಆರಂಭಿಸಲು ಪ್ರೇರೇಪಿಸುತ್ತದೆ. ಈ
ಬಗೆಯ ಪಟ್ಟಭದ್ರ ನೆಲೆಯಲ್ಲಿ ಚರ್ಚೆಗೊಂಡ ಧಾರ್ಮಿಕತೆಯು ಕಡೆಗೆ ಸನಾತನ ಧರ್ಮಗಳ
ಸಂಕೇತಗಳಾಗಿ ರೂಪಗೊಂಡು ಕ್ರಮೇಣವಾಗಿ ಜೀವವಿರೋಧಿ ಸಂಕೇತಗಾಗಿ ಬಿಡುತ್ತವೆ. ಆಗಲೇ
ಗ್ರಾಮ್ಷಿ ಹೇಳಿದ ಹಾಗೆ ನಮ್ಮ ಕಾಲ ಬುಡದಲ್ಲಿ ನೆಲ ಕುಸಿಯುತ್ತಿದ್ದರೂ ನಾವು ಅದನ್ನು
ಅರಿಯಲಾರದಷ್ಟು ಮೈಮರೆತಿರುತ್ತೇವೆ. ಆಗ ಈ ಜೀವ ವಿರೋಧಿ ಕ್ಷುಲ್ಲಕತನದ ಧಾರ್ಮಿಕತೆಯು
ಕ್ರಮೇಣವಾಗಿ ಇಡೀ ಸಮಾಜವನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡುಬಿಡುತ್ತದೆ. ಇದರ
ಸಾಕ್ಷಿಯಾಗಿ ಮಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಜನತೆಯು ಸಮರ್ಥಿಸಿಕೊಳ್ಳುವಂತಹ
ಅನಾಗರಿಕ ಮಾನವವಿರೋಧಿ ವ್ಯವಸ್ಥೆ ಸೃಷ್ಟಿಗೊಂಡಿರುವುದು. ಇಲ್ಲಿ ’ದಯವೇ ಧರ್ಮದ
ಮೂಲವಯ್ಯ’ ಎಂದು ಹೇಳಿದ ವಚನಕಾರರ ಜೀವಪರ ಮಾತುಗಳು ನಾಮಾವಶೇಷಗೊಳ್ಳುತ್ತವೆ. ಆಗ
ಸಮಾಜದಲ್ಲಿ ಪ್ರಗತಿಪರರಾಗುವ ಹಂಬಲ ಮತ್ತು ತುಡಿತ ಕ್ರಮೇಣವಾಗಿ ಕಣ್ಮರೆಯಾಗುತ್ತದೆ.
ಇಂದು ಈ ಬಿಜೆಪಿ ಪಕ್ಷದ ಫ್ಯಾಸಿಸ್ಟ್ ಧೋರಣೆಗೆ, ಅದರ ದಿಕ್ಕು ತಪ್ಪಿದ ಭ್ರಷ್ಟ
ಆಡಳಿತಕ್ಕೆ ವ್ಯಾಪಕವಾಗಿ ಖಂಡನೆಗಳು ವ್ಯಕ್ತವಾಗುತ್ತಿದೆ. ಆದರೆ ಈ ಅಸಹನೆ ಒಂದು ಜನಪರ
ಚಳುವಳಿಯಾಗಿ ರೂಪಿತವಾಗುತ್ತಿಲ್ಲ. ಇದರ ದುರ್ಲಾಭವನ್ನು ಆಡಳಿತ ಪಕ್ಷಗಳು ಮತ್ತು ಸಮಾಜದ
ಲುಂಪೆನ್ ಗುಂಪುಗಳು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತವೆ. ನಾಗರಿಕ ಸಮಾಜದ ಈ
ನಿಷ್ಕ್ರಿಯತೆಯ ಫಲವಾಗಿಯೇ ಮಂಗಳೂರಿನಲ್ಲಿ ಇಂತಹ ಅನಾಗರಿಕ ಕೃತ್ಯ ನಡೆದರೂ ಇಲ್ಲಿನ ಸೋ
ಕಾಲ್ಡ್ ಸಂಭಾವಿತ ಮುಖ್ಯಮಂತ್ರಿ ನಗುತ್ತಲೇ ಸಮಾಧಾನದಿಂದ ಉತ್ತರಿಸುತ್ತಾರೆ. ಇಲ್ಲಿನ
ಭ್ರಷ್ಟ ಗೃಹಮಂತ್ರಿಗಳು ಇದೇನು ಅಂತಹ ದೊಡ್ಡ ವಿಷಯವೇ ಎಂಬಂತೆ ಜಾರಿಕೊಳ್ಳುತ್ತಾರೆ. ಈ
ಅಧಪತನಕ್ಕೆ ನಾವೆಲ್ಲ ನಮ್ಮೊಳಗಿನ ಭಯವನ್ನು, ಹಿಂಜರಿಕೆಯನ್ನು ಮತ್ತು ಸಿನಿಕತನವನ್ನು
ಕಿತ್ತೊಗೆಯುವ ಮೂಲಕ ಉತ್ತರಿಸಬೇಕಾಗಿದೆ. ಇಲ್ಲಿ ಗಾಂಧಿ ಹೇಳಿದಂತೆ ಅಹಿಂಸೆಯೆಂದರೆ,
ಮಾನವೀಯತೆಯೆಂದರೆ ಹಿಂಸಾಕೃತ್ಯಗಳಲ್ಲಿ ತೊಡಗದಿರುವುದಷ್ಟೇ ಅಲ್ಲ, ಈ ಹಿಂಸೆಯನ್ನು
ವಿರೋಧಿಸುವುದು ಸಹ ಅಹಿಂಸೆಯಾಗುತ್ತದೆ. ಇಲ್ಲದಿದ್ದರೆ ಈ ಮೌನವು ಆ ದುಷ್ಕೃತ್ಯದಲ್ಲಿ
ಪಾಲ್ಗೊಳ್ಳುವಿಕೆಯ ಲಕ್ಷಣವೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಿಪ್ತತೆ ಎಂದರೆ ಮೂಕ
ಸಾಕ್ಷಿಗಳು ಮಾತ್ರವಲ್ಲ, ಈ ಹಿಂಸೆಯಲ್ಲಿ ಪಾಲುದಾರರೂ ಸಹ.
ಕೃಪೆ : ವರ್ತಮಾನ : (ಫೋಟೋ : ವಿಜಯ ಕರ್ನಾಟಕ)