* ಡಾ|ಎಸ್. ನಟರಾಜ ಬೂದಾಳು
- ಕನ್ನಡದ ಬೌದ್ಧ ಧಾರ್ಮಿಕ/ತಾತ್ವಿಕ ಪಠ್ಯಗಳ ಅವಲೋಕನ ಅನೇಕ ಪ್ರಮುಖ ಸಂಗತಿಗಳನ್ನು ಅನಾವರಣ ಮಾಡುತ್ತದೆ. ಸಾಮಾನ್ಯವಾಗಿ ಸಮುದಾಯಗಳು ತಾತ್ವಿಕ ಪಠ್ಯಗಳನ್ನು ಆಯ್ಕೆ ಮಾಡಿಕೊಂಡರೆ, ಧಾರ್ಮಿಕ ಸಂಸ್ಥೆಗಳು ಪಾಂಥಿಕ ಪಠ್ಯಗಳನ್ನು ಮುಂದಿಡುತ್ತನ್ನಡದ ಬೌದ್ಧ ಧಾರ್ಮಿಕ/ತಾತ್ವಿಕ ಪಠ್ಯಗಳ ಅವಲೋಕನ ಅನೇಕ ಪ್ರಮುಖ ಸಂಗತಿಗಳನ್ನು ಅನಾವರಣ ಮಾಡುತ್ತದೆ. ಸಾಮಾನ್ಯವಾಗಿ ಸಮುದಾಯಗಳು ತಾತ್ವಿಕ ಪಠ್ಯಗಳನ್ನು ಆಯ್ಕೆ ಮಾಡಿಕೊಂವೆ. ಆದ್ದರಿಂದ ದರ್ಶನವೊಂದರ ಪೂರ್ಣಪಠ್ಯಕ್ಕಾಗಿ ಧಾರ್ಮಿಕ ಸಂಸ್ಥೆಗಳು ಮುಂದಿಡುವ ಪಠ್ಯಗಳನ್ನು ಅವಲಂಬಿಸುವಾಗ ಎಚ್ಚರಿಕೆ ಅಗತ್ಯ.
ಪೂರ್ವ ದೇಶಗಳ ಪ್ರಾಚೀನ ಜ್ಞಾನ ಪ್ರಸ್ಥಾನಗಳ ಅಧ್ಯಯನದಲ್ಲಿ ಎರಡು ಧಾರೆಗಳಿವೆ. ಪಾಶ್ಚಾತ್ಯ ವಿದ್ವಾಂಸರ 'ಓರಿಯಂಟಲ್' ಅಧ್ಯಯನಗಳು ಪ್ರಧಾನವಾಗಿ ಸಂಸ್ಕೃತ ಪಠ್ಯಗಳನ್ನು ತತ್ಸಮ' ವ್ಯಾಖ್ಯಾನಗಳನ್ನು ಆಧರಿಸಿರುತ್ತವೆ. ಭಾರತದ ಇಂಡಾಲಜಿಸ್ಟರ ಅಧ್ಯಯನಗಳು ವೇದೋಪನಿಷತ್ತುಗಳನ್ನು ಪ್ರಧಾನ ಆಕರಗಳನ್ನಾಗಿಯೋ, ಉಳಿದವನ್ನು ಅವುಗಳ ಒಡನಾಟದ (ಪರ/ವಿರುದ್ಧದ) ಉಪಉತ್ಪನ್ನಗಳೆಂದೋ ಪರಿಭಾವಿಸಿರುತ್ತವೆ. ಇವೆರಡೂ ಮೌಖಿಕ ಪರಂಪರೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮಧ್ಯಯುಗೀನ ಭಾರತದ ತಾತ್ವಿಕ ಸಂಘರ್ಷವನ್ನು ಅತ್ಯಂತ ಸೂಕ್ಷ್ಮ ಸ್ತರದಲ್ಲಿ ಸಂಸ್ಕೃತದ 'ತತ್ಸಮ' ವಿದ್ವಾಂಸರು ನಿರ್ವಹಿಸುತ್ತಾರೆ. ಅವರ ಸಂಕಲನಾನುಸಂಧಾನದ (ಒಳಗೇ ಸೇರಿಕೊಂಡು ವಿರೋಧಿಸುವ ಕ್ರಮ) ಪರಿಣಾಮಗಳನ್ನು ಓರಿಯಂಟಲಿಸ್ಟರು ಗೊತ್ತಿಲ್ಲದೆ ನಿರ್ಲಕ್ಷಿಸಿದರೆ, ಇಂಡಾಲಜಿಸ್ಟರು ಅರಿವಿದ್ದೂ ನಿರ್ಲಕ್ಷಿಸುತ್ತಾರೆ.
ಕನ್ನಡದಲ್ಲಿ ಬೌದ್ಧ ಸಾಹಿತ್ಯದ ಪ್ರಕಟಣೆ 1907ರಿಂದಲೇ ಪ್ರಾರಂಭವಾಗಿದೆ. ಬಿದರೆ ಅಶ್ವತ್ಥನಾರಾಯಣರ ಬೌದ್ಧಾವತಾರ, ದಮ್ಮಪದ, ಬುದ್ಧಗೀತೆ, ಜಾತಕ ಕತೆಗಳಿಂದ ಪ್ರಾರಂಭವಾಗಿ ಗೋವಿಂದ ಪೈ ಅವರ ಸಿಗಾಲಸುತ್ತ, ದಮ್ಮಪದ; ಎಂಆರ್‌ಶ್ರೀ, ಸಾಲಿ ರಾಮಚಂದ್ರರಾಯರ ಜಾತಕ ಕತೆಗಳು, ಎಸ್. ನರಸಿಂಹ ಶಾಸ್ತ್ರಿಗಳ ಬುದ್ಧ ಗೀತಾವಳಿ, ರಾಜರತ್ನಂ ಅವರ ಚೀನಾ ದೇಶದ ಬೌದ್ಧ ಯಾತ್ರಿಕರು, ಬೌದ್ಧ ಧರ್ಮದ ಇತಿಹಾಸ; ಕಡವ ಶಂಭು ಶರ್ಮ, ಎಸ್.ವಿ. ಪರಮೇಶ್ವರ ಭಟ್ಟ ಮತ್ತು ಎಲ್.ಬಸವರಾಜು ಅವರು ಬೇರೆಬೇರೆಯಾಗಿ ಕನ್ನಡಕ್ಕೆ ತಂದ ಸೌಂದರನಂದ, ಬುದ್ಧ ಚರಿತೆಗಳು ಮತ್ತು ನಾನು ಕನ್ನಡಕ್ಕೆ ತಂದಿರುವ ನಾಗಾರ್ಜುನನ ಮೂಲಮಧ್ಯಮಕ ಕಾರಿಕಾ ಇತ್ಯಾದಿ ಕೃತಿಗಳು ಕನ್ನಡಕ್ಕೆ ಬಂದಿವೆ. ಮೂಲಮಧ್ಯಮಕ ಕಾರಿಕಾ, ಜಾತಕ ಕತೆಗಳು ಮತ್ತು ದಮ್ಮಪದಗಳ ಹೊರತಾಗಿ ಉಳಿದವೆಲ್ಲ ಸರ್ವಾಸ್ತಿವಾದದ ಪಠ್ಯಗಳೇ ಆಗಿವೆ. ವಸ್ತುವಾದಿಯಾದ ಸರ್ವಾಸ್ತಿವಾದವು ಸಾಂಖ್ಯಕ್ಕೆ ಹತ್ತಿರವಾಗಿರುವುದರಿಂದ ಮತ್ತು ಹಿಂದೂ ತಾತ್ವಿಕತೆಗೆ ಅದನ್ನು ನಿಭಾಯಿಸಲು ಸಾಧ್ಯವಾಗಿರುವುದರಿಂದ ಸರ್ವಾಸ್ತಿವಾದದ ಪಠ್ಯಗಳನ್ನು ಬೌದ್ಧ ತಾತ್ವಿಕತೆಯ ಕೇಂದ್ರ ಪಠ್ಯಗಳನ್ನಾಗಿ ಎದುರಿಗೆ ಇಟ್ಟುಕೊಳ್ಳುವರೇ ವಿನಾ ನಿಜವಾದ ಬೌದ್ಧ ತಾತ್ವಿಕತೆಯಾದ ವಿಜ್ಞಾನವಾದ (ಯೋಗಾಚಾರ) ಮತ್ತು ಮಧ್ಯಮ ಮಾರ್ಗಗಳ ಪಠ್ಯಗಳನ್ನು ಎದುರಾಗಲು ಹೋಗುವುದಿಲ್ಲ.
ಪ್ರಸ್ತುತ ಕೃತಿ ಥಿಯೋಡೋರ್ ಷೆರ್ಬಾಸ್ಕಿ ಎಂಬ ರಷ್ಯನ್ ವಿದ್ವಾಂಸ 1922ರಲ್ಲಿ ಪ್ರಕಟಿಸಿದ The Central Conception of Buddhism and the Meaning of the Word Dharmaದ ಕನ್ನಡಾನುವಾದ. ಇದು ಬೌದ್ಧ ಸರ್ವಾಸ್ತಿವಾದ ಪ್ರಸ್ಥಾನದ ನಿಲುವನ್ನಾಧರಿಸಿ ಲೋಕಾನುಸಂಧಾನ ನಡೆಸಿದ ತಾತ್ವಿಕ ಪಠ್ಯ. ಎದುರಿಗಿನ ಲೋಕಸತ್ತೆ ಸ್ವತಂತ್ರವಾಗಿದೆ ಎನ್ನುತ್ತದೆ ಸರ್ವಾಸ್ತಿವಾದ. ಈ ನಿಲುವನ್ನು ಹಿನ್ನೆಲೆಗಿಟ್ಟುಕೊಂಡು ಬೌದ್ಧ ಪರಿಕಲ್ಪನೆಗಳಾದ ಧರ್ಮ, ಅನಾತ್ಮವಾದ, ದುಃಖ, ಪ್ರತೀತ್ಯಸಮುತ್ಪಾದ ಮುಂತಾದವನ್ನು ವಿವರಿಸುವ ಪ್ರಯತ್ನ ಮಾಡುತ್ತದೆ. ಬುದ್ಧ ತನ್ನ ಕಾಲದ 63 ಚಿಂತನಾ ಪ್ರಸ್ಥಾನಗಳನ್ನು ಅಧ್ಯಯನ ಮಾಡಿ ಅವನ್ನು ಎರಡು ಗುಂಪುಗಳನ್ನಾಗಿ ಮಾಡಲು ಸಾಧ್ಯವೆಂದು ತೋರಿಸುತ್ತಾನೆ.
ಒಂದು ಗುಂಪು ಲೋಕದ ಈ ಸಮಸ್ತವೂ ಸ್ವತಂತ್ರವಾಗಿ 'ಇದೆ' ಎಂದು ನಂಬುತ್ತದೆ ಮತ್ತು ಇನ್ನೊಂದು ಗುಂಪು 'ಇಲ್ಲ' ಎನ್ನುತ್ತದೆ. ಆದರೆ ಬುದ್ಧ ಹೀಗೆ ಲೋಕವನ್ನು ಇದೆ ಎನ್ನಲೂ ಬರುವುದಿಲ್ಲ, ಇಲ್ಲ ಎನ್ನಲೂ ಬರುವುದಿಲ್ಲ. ಇದೆ, ಇಲ್ಲ, ಇದೆ ಇಲ್ಲ ಎರಡೂ ಅಲ್ಲ, ಇದೆ ಇಲ್ಲ ಎರಡೂ ಹೌದು (ಇದನ್ನು ಚತುಷ್ಕೋಟಿ tetralemma ಎನ್ನುತ್ತಾರೆ.)- ಈ ಕ್ರಮದಲ್ಲಿ ಲೋಕವನ್ನು ವಿವರಿಸಲಾಗದು ಎನ್ನುತ್ತಾನೆ. ವಿಜ್ಞಾನವು ಇಂದಿಗೂ ಲೋಕದ ಬಗೆಗೆ ಇದೇ ನಿಲುವನ್ನು ಹೊಂದಿದೆ. ಲೋಕದ ಪ್ರತಿ ವಿದ್ಯಮಾನವೂ ಸಂಬಂಧದಲ್ಲಿ ಉಂಟಾಗಿ ಸಂಬಂಧ ಭಂಗಗೊಂಡಾಗ ವಿಸರ್ಜನೆಗೊಳ್ಳುತ್ತದೆ ಎನ್ನುವ ಪ್ರತೀತ್ಯ ಸಮುತ್ಪಾದ ತತ್ವವನ್ನು ಲೋಕ ವಿವರಣೆಗೆ ಬುದ್ಧ ಮುಂದಿಟ್ಟನು. ಹಾಗೆ ವಿವರಿಸುವಾಗ ಲೋಕವನ್ನು ಇದೆ ಎನ್ನುವವರಿಗೆ ಇಲ್ಲವೆಂದೂ, ಇಲ್ಲವೆನ್ನುವವರಿಗೆ ಇದೆ ಎಂದೂ, ಇದೆ ಇಲ್ಲ ಎರಡೂ ಸರಿ ಎನ್ನುವವರಿಗೆ ಇದೆ ಇಲ್ಲ ಎರಡೂ ಸರಿಯಲ್ಲವೆಂದೂ, ಇದೆ ಇಲ್ಲ ಎರಡೂ ಸರಿಯಲ್ಲ ಎನ್ನುವವರಿಗೆ ಇದೆ ಇಲ್ಲ ಎರಡೂ ಸರಿ ಎಂದೂ ವಿವರಿಸಿ ಆ ನಿಲುವುಗಳನ್ನು ನಿರಾಕರಿಸುವುದರ ಮೂಲಕ ನಿವಾರಿಸಿದನು. ಈ ನಿರಾಕರಣೆ ಮತ್ತು ನಿವಾರಣೆಗಳು ಪಾಂಥಿಕ ಶಠತ್ವದ ವಿದ್ವಾಂಸರಿಂದಾಗಿ ಒಂದೊಂದು ಪಂಥಗಳಾಗಿ ಸ್ಥಾಪಿತವಾದವು. (ನೋಡಿ: ಜೆ ಜೆ ಕಲೂಪಹಾನ : ನಾಗಾರ್ಜುನನ ಮೂಲಮಧ್ಯಮಕಕಾರಿಕಾದ ಪ್ರಸ್ತಾವನೆ ಪುಟ 6).
***
ಬೌದ್ಧ ತಾತ್ವಿಕ ಪಠ್ಯಗಳ ಅನುವಾದದ ದೊಡ್ಡ ತೊಡಕೆಂದರೆ ಸಮಾನ ಪಾರಿಭಾಷಿಕ ಪದಗಳನ್ನು ಹೊಂದಿಸಿಕೊಳ್ಳುವುದು. ಉದಾಹರಣೆಗೆ ಬುದ್ಧಗುರು 'ಆಸೆಯೇ ದುಃಖಕ್ಕೆ ಮೂಲ' ಎಂದೂ ಎಲ್ಲೂ ಹೇಳಿಲ್ಲ. ಆದರೆ ಪಾಳಿ ಭಾಷೆಯ 'ತನ್ಹಾ' ಎನ್ನುವ ಪದವನ್ನು 'ಆಸೆ' ಎಂದು ತಪ್ಪಾಗಿ ಅನುವಾದಿಸಿದ್ದರಿಂದ (ಇದು ಆಕಸ್ಮಿಕವಾಗಿ ಆಗಿರುವ ಪ್ರಮಾದವಲ್ಲ) ಇಂತಹ ತಾತ್ವಿಕ ಅಪವ್ಯಾಖ್ಯಾನಗಳಾಗಿವೆ. ಪಾಳಿಯ ದುಃಖ ಎನ್ನುವ ಪದಕ್ಕೆ ಸಮಾನವಾದ ಪದ ಕನ್ನಡದಲ್ಲಾಗಲಿ, ಇಂಗ್ಲಿಷ್‌ನಲ್ಲಾಗಲಿ ಇಲ್ಲ. ಇಂಥ ಕಡೆ ಪ್ರಸ್ತುತ ಅನುವಾದಕರು ಅತ್ಯಂತ ನಿಷ್ಠ ಅನುವಾದವನ್ನು ಮಾಡಿದ್ದಾರೆ. ತಾತ್ವಿಕತೆಯ ಸೂಕ್ಷ್ಮ ಒಂದು ಕಡೆ, ಪಾರಿಭಾಷಿಕ ಪದಗಳ ತೊಡಕು ಮತ್ತೊಂದು ಕಡೆ ಇವೆರಡನ್ನೂ ನಿರ್ವಹಿಸುವುದು ತುಂಬಾ ಆಯಾಸಕರ ಕೆಲಸ. ಅದೆಷ್ಟು ಆಯಾಸದ ಕೆಲಸವೆಂಬುದಕ್ಕೆ ಈ ಲೇಖನದ ಓದೇ ಒಂದು ಸಮರ್ಥನೆ! ಬೌದ್ಧ ತಾತ್ವಿಕತೆಯ ಹಂತಗಳನ್ನು ಅಧ್ಯಯನ ಮಾಡಲು ಇಂತಹ ಕೃತಿಗಳು ಅನಿವಾರ್ಯ. ಕನ್ನಡಿಗರನ್ನು ಈ ಸಂಕೀರ್ಣ ತಾತ್ವಿಕತೆಯ ದಾರಿಯಲ್ಲಿ ಹೆಚ್ಚು ಆಯಾಸವಿಲ್ಲದ ಹಾಗೆ ಕರೆದುಕೊಂಡು ಹೋಗುವ ಕೃತಿ ನೀಡಿರುವ ಬಿ.ಆರ್. ಜಯರಾಮರಾಜೇ ಅರಸ್ ಅವರನ್ನು ಮತ್ತು ಪ್ರಕಟಿಸಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಅಭಿನಂದಿಸುತ್ತೇನೆ.
-----------------------------------
ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ
ಮೂಲ: ಥಿಯೋಡೋರ್ ಷೆರ್ಬಾಸ್ಕಿ
ಅನುವಾದ ಬಿ.ಆರ್. ಜಯರಾಮರಾಜೇ ಅರಸ್
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು-560 056
ಬೆಲೆ: ರೂ.75/
ಕೃಪೆ : ವಿಜಯ ಕರ್ನಾಟಕ
No comments:
Post a Comment