`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.
ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.
ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.
ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.
ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.
ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.
1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.
ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.
ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.
ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.
ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.
ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.
1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.
ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.
ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.
ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.
ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು. ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.
1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.
ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.
ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.
ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.
ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.
ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.
ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.

ಕೃಪೆ : ಪ್ರಜಾವಾಣಿ
No comments:
Post a Comment