‘‘ಬಿಜೆಪಿಯ
ಕುರಿತಂತೆ ಜನರು ನಿರಾಶೆಗೊಂಡಿದ್ದಾರೆ. ಭ್ರಮನಿರಸನ ಹೊಂದಿದ್ದಾರೆ’’ ಈ ಮಾತನ್ನು
ಆಡಿರುವುದು ಯಾವುದೇ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರಲ್ಲ. ಸ್ವತಃ ಬಿಜೆಪಿಯ ಅಧಿನಾಯಕ
ಎಲ್. ಕೆ. ಅಡ್ವಾಣಿ. ಇದೊಂದು ರೀತಿಯಲ್ಲಿ ಬಿಜೆಪಿಯನ್ನು ಅಧಿಕಾರದೆಡೆಗೆ ತಂದ
ಅಡ್ವಾಣಿಯ ನಿಟ್ಟುಸಿರಿನಂತಿದೆ. ಪ್ರಧಾನಿ ಹುದ್ದೆಗಾಗಿ ಕಾದು, ಬಳಲಿ ಬೆಂಡಾಗಿ, ಆ
ಕುರಿತ ಎಲ್ಲಾ ಆಸೆಯನ್ನು ಕೈ ಚೆಲ್ಲಿದ ವೃದ್ಧ ನಾಯಕನೊಬ್ಬನ ಅಸಹಾಯಕತೆಯಂತೆಯೂ ಇದೆ.
ಒಂದು ಕಾಲದಲ್ಲಿ ಬಿಜೆಪಿಯ ರಥವನ್ನು ಮುನ್ನಡೆಸಿ, ಅದನ್ನು ಅಧಿಕಾರದೆಡೆಗೆ ತಂದು, ಇದೀಗ
ಅದೇ ಬಜೆಪಿ ಮಂದಿಯ ನಿರ್ಲಕ್ಷ ಕ್ಕೊಳಗಾಗಿರುವ ಅಡ್ವಾಣಿ ಮಹಾಭಾರತದ ಭೀಷ್ಮನನ್ನು
ಹೋಲುತ್ತಾರೆ. ದ್ವಿಗ್ವಿಜಯಗಳನ್ನು ಮಾಡಿ, ದುರ್ಯೋಧನನ್ನು ಅಧಿಕಾರಕ್ಕೇರಿಸಿದ
ಭೀಷ್ಮನಿಗೆ, ಕೊನೆಯ ದಿನಗಳಲ್ಲಿ ಅದೇ ದುರ್ಯೋಧನನ ಹೀನ ಮಾತುಗಳನ್ನು ಕೇಳುತ್ತಾ ಬದುಕುವ
ಸ್ಥಿತಿ ಎದುರಾಯಿತು. ಇಲ್ಲಿ ಅಡ್ವಾಣಿಯ ಕತೆಯೂ ಅದನ್ನೇ ಹೋಲುತ್ತದೆ. ರಥಯಾತ್ರೆಯನ್ನು
ಹಮ್ಮಿಕೊಳ್ಳುವ ಮೂಲಕ, ಇದೇ ಅಡ್ವಾಣಿ ದೇಶಾದ್ಯಂತ ವಿಜಯಂಗೈದು, ಅಮಾಯಕರ ರಕ್ತದಲ್ಲಿ
ಓಕುಳಿಯಾಡಿದರು. ಆ ಕಳಂಕ ಇಂದಿಗೂ ಅಡ್ವಾಣಿಯನ್ನು ಅಂಟಿಕೊಂಡಿದೆ. ಆದರೆ,
ಅಧಿಕಾರಕ್ಕೇರಿದ್ದು ಮಾತ್ರ ಅಟಲ್ ಬಿಹಾರಿ ವಾಜಪೇಯಿ. ಈ ದೇಶ ಕಂಡ ಅತ್ಯಂತ ದುರ್ಬಲ
ಮತ್ತು ದ್ವಂದ್ವ ಮನಸ್ಥಿತಿಯನ್ನೊಳಗೊಂಡ ವಾಜಪೇಯಿಯ ವೈಫಲ್ಯಗಳು ಅಡ್ವಾಣಿಗೆ ಚೆನ್ನಾಗಿ
ಗೊತ್ತಿತ್ತು. ಆದರೆ ವಾಜಪೇಯಿಯ ಬೆನ್ನಿಗಿದ್ದ ಆರೆಸ್ಸೆಸ್ ನಾಯಕರು ಮತ್ತು ವಾಜಪೇಯಿಯ
ಸೆಕ್ಯುಲರ್ ಮುಖವಾಡದ ಮುಂದೆ ಅಡ್ವಾಣಿ ಅಸಹಾಯಕ ರಾಗಿದ್ದರು. ಕೊನೆಗೂ ಅಡ್ವಾಣಿಗೆ
ಅಧಿಕಾರ ದಕ್ಕಲೇ ಇಲ್ಲ.
ದುರಂತವೆಂದರೆ, ಇಂದು ಅಡ್ವಾಣಿಯ ಮುಂದೆಯೇ ಚೆಲ್ಲರೆ
ನಾಯಕರು ಬಾಲ ಬಿಚ್ಚುತ್ತಿದ್ದಾರೆ.ನಿಜಕ್ಕೂ ಅಡ್ವಾಣಿಗೆ ಬಿಜೆಪಿಯ ಭ್ರಷ್ಟರ ಕುರಿತಂತೆ
ಆಕ್ರೋಶವಿದೆಯೆ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಅವರ ಆಕ್ರೋಶಕ್ಕೆ
ಬಿಜೆಪಿಯೊಳಗಿನ ಭ್ರಷ್ಟತೆ ಮಾತ್ರ ಕಾರಣವಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ
ಅಡ್ವಾಣಿಯ ಮಾತುಗಳಿಗೆ ಪ್ರಾಧಾನ್ಯತೆ ದೊರಕುತ್ತಿಲ್ಲ. ಗುಜರಾತ್‌ನಲ್ಲಿ ನರೇಂದ್ರ ಮೋದಿ
ಸೆಡ್ಡು ಹೊಡೆದಿದ್ದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಸೆಡ್ಡು ಹೊಡೆದಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಅಡ್ವಾಣಿಯ ಹಿಡಿತ
ಸಡಿಲಾಗುತ್ತಿದೆ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕವನ್ನೇ ಉದಾಹರಣೆ ಯಾಗಿ
ತೆಗೆದುಕೊಳ್ಳೋಣ. ಕರ್ನಾಟಕದಲ್ಲಿ ಬಿಜೆಪಿ ಹೇಗೆ ಅಧಿಕಾರ ಹಿಡಿಯಿತು ಎನ್ನುವುದು
ಅಡ್ವಾಣಿಗೆ ತಿಳಿಯದ ಸಂಗತಿಯಲ್ಲ. ರೆಡ್ಡಿಗಳ ಹಣದ ತಳಹದಿಯಲ್ಲಿ ರಾಜ್ಯದಲ್ಲಿ ಬಿಜೆಪಿ
ಅಧಿಕಾರ ಹಿಡಿಯಿತು. ವಿರೋಧ ಪಕ್ಷಗಳ ಶಾಸಕರನ್ನು ಕೋಟಿ ಕೋಟಿ ಹಣಕೊಟ್ಟು ಬಿಜೆಪಿ
ಕೊಂಡುಕೊಂಡಿತು. ಆಗೆಲ್ಲ ಅಡ್ವಾಣಿ ಬಾಯಿ ಮುಚ್ಚಿ ಕೂತಿದ್ದರು. ಅಂದರೆ ವೌನವಾಗಿ ಅದನ್ನು
ಸಮ್ಮತಿಸಿದ್ದರು. ಅದರ ಫಲವನ್ನು ಈಗ ಅಡ್ವಾಣಿ ಉಣ್ಣುತ್ತಿದ್ದಾರೆ.
ಯಡಿಯೂರಪ್ಪ
ಅವರನ್ನು ಭ್ರಷ್ಟ ಎಂದು ಅಡ್ವಾಣಿ ಹೊರಗಿಟ್ಟಿದ್ದಾರೆ. ಸಂತೋಷ. ಆದರೆ ಅವರು ತನ್ನ
ಮಡಿಲಲ್ಲಿಟ್ಟು ಸಾಕುತ್ತಿರುವುದು ಅನಂತಕುಮಾರ್ ಎಂಬ ಇನ್ನೊಬ್ಬ ಭ್ರಷ್ಟನನ್ನು. ಹುಡ್ಕೋ
ಹಗರಣದಲ್ಲಿ, ನೀರಾ ರಾಡಿಯಾ ಪ್ರಕರಣದಲ್ಲಿ ಈತನ ಪಾತ್ರವೇನು ಎನ್ನುವುದು ದೇಶಕ್ಕೆ
ಚೆನ್ನಾಗಿ ಗೊತ್ತು. ನಿಜಕ್ಕೂ ಭ್ರಷ್ಟಾಚಾರದ ಕುರಿತಂತೆ ಅಡ್ವಾಣಿಗೆ ಆಕ್ರೋಶವಿದೆಯಾದರೆ,
ಈ ಅನಂತಕುಮಾರ್‌ನನ್ನು ಬಗಲಲ್ಲಿ ಬೆಳೆಸುತ್ತಿರಲಿಲ್ಲ. ಅಡ್ವಾಣಿಯ ಈ ಸ್ವಜನ ಪಕ್ಷಪಾತದ
ಅರಿವುದ್ದುದರಿಂದಲೇ, ಬಿಜೆಪಿ ರಾಷ್ಟ್ರಮಟ್ಟದಲ್ಲಿ ಒಡೆದಿದೆ. ಇಂದು ಭಾರತ ಬಂದ್
ಸಂದರ್ಭದಲ್ಲಿ ಯುಪಿಎ ಸರಕಾರಕ್ಕೆ ಏನು ನಷ್ಟವಾಯಿತೋ, ಆದರೆ ಬಿಜೆಪಿಗಂತೂ ದೊಡ್ಡ
ನಷ್ಟವಾಗಿದೆ. ಭಾರತ ಬಂದ್‌ನ ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಲು ಬಿಜೆಪಿಯ ಪಕ್ಷ
ಕಚೇರಿಯಲ್ಲಿ ಕರೆದ ಸಭೆಗೆ ಅಡ್ವಾಣಿ ಗೈರು ಹಾಜರಾಗುವ ಮೂಲಕ ಬಿಜೆಪಿಗೆ ಭಾರೀ ದೊಡ್ಡ
ನಷ್ಟ ಮಾಡಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಮುಖಭಂಗವುಂಟಾಗಿದೆ.
ಬಿಜೆಪಿ
ಜನರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಅಡ್ವಾಣಿಯೇ ತಪ್ಪೊಪ್ಪಿಕೊಂಡ ಮೇಲೆ, ಉಳಿದ
ನಾಯಕರು ತಮ್ಮನ್ನು ತಾವು ಸಮರ್ಥಿಸಿ ಕೊಳ್ಳುವುದಾದರೂ ಹೇಗೆ?ಬಿಜೆಪಿ ಹಣ, ಹಣ, ಹಣ
ಎನ್ನುವ ವೌಲ್ಯವನ್ನು ತನ್ನಗಾಸಿಕೊಂಡಿದೆ ಮಾತ್ರವಲ್ಲ, ಭ್ರಷ್ಟಾಚಾರದಿಂದ ಅದು ಕೊಳೆತು
ನಾರುತ್ತಿದೆ. ಜೊತೆಗೆ ಬಿಜೆಪಿಯನ್ನು ಮುನ್ನಡೆಸುವ ರಾಷ್ಟ್ರಮಟ್ಟದ ನಾಯಕರೂ ಅದಕ್ಕೆ
ಇಲ್ಲವಾದಂತಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮೋದಿಯ ಕಡೆಗೆ ನೋಡುತ್ತಿರುವುದು
ವಿಪರ್ಯಾಸ. ರಾಷ್ಟ್ರಮಟ್ಟದಲ್ಲಿ ರಾಜಕೀಯ ನಡೆಸಿದ ಬಿಜೆಪಿ ನಾಯಕರೆಲ್ಲ
ಅಪ್ರಸ್ತುತರೆನಿಸಿದ್ದಾರೆ. ಇದೀಗ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಆರೆಸ್ಸೆಸ್
ಒಪ್ಪಿಕೊಳ್ಳುತ್ತದೆಯೆ? ಎನ್ನುವುದು ಬಹುದೊಡ್ಡ ಪ್ರಶ್ನೆ. ಈಗಾಗಲೇ ಬಿಜೆಪಿಯ ಹಿರಿಯ
ನಾಯಕರ ನಿಷ್ಟುರ ಕಟ್ಟಿಕೊಂಡಿರುವ ಮೋದಿಯನ್ನು ಪ್ರಧಾನಿಯಾಗಿ ಮಾಡುವುದು ಕಷ್ಟ ಸಾಧ್ಯ.
ಒಟ್ಟಿನಲ್ಲಿ ಇಂದು ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದಿದೆ.
ಇಂತಹ
ಪರಿಸ್ಥಿತಿಯಲ್ಲಿ ಬಿಜೆಪಿ ಯುಪಿಎ ಸರಕಾರದ ಕುರಿತಂತೆ ಮಾಡುವ ಟೀಕೆಗಳು ಆರ್ತನಾದದಂತೆ
ಕೇಳಿಸುತ್ತಿದೆ.ಅಡ್ವಾಣಿ ಏನಿದ್ದರೂ ಶರಶಯ್ಯೆ ಏರುವ ಕಾಲ ಹತ್ತಿರ ಬಂದಿದೆ ಎನ್ನುವುದರ
ಸೂಚನೆಗಳು ಬಿಜೆಪಿಯೊಳಗೆ ಕಾಣಿಸಿಕೊಳ್ಳುತ್ತಿದೆ. ಹಣದಿಂದಲೇ ಎಲ್ಲವನ್ನು
ಕೊಳ್ಳಬಲ್ಲೆವು ಎನ್ನುವ ಆತ್ಮವಿಶ್ವಾಸ ವಿರುವ ನಾಯಕರ ಸಂಖ್ಯೆ ಬಿಜೆಪಿಯೊಳಗೆ
ಅಧಿಕವಾಗುತ್ತಿದೆ. ಹಣವೇ ನಾಯಕತ್ವದ ಪ್ರಧಾನಗುಣಗಳು ಎಂದು ನಂಬಿದವರ ನಡುವೆ
ವೌಲ್ಯಗಳನ್ನು ಹುಡುಕುವುದು ಮೂರ್ಖತನ. ಬಿಜೆಪಿ ತಾನು ಮಾಡಿದ ಪಾಪದ ಫಲವನ್ನು
ಉಣ್ಣುತ್ತಿದೆ. ಕೊಂದ ಪಾಪ ತಿಂದು ಪರಿಹಾರವಾಗಬೇಕು. ರಥಯಾತ್ರೆಯಲ್ಲಿ ಸತ್ತ
ಮನುಷ್ಯರೆಷ್ಟು ಎನ್ನುವುದನ್ನು ಎಣಿಸಲು ಅಡ್ವಾಣಿಗೆ ಇದು ಸಕಾಲ.
- Chethan Ka
No comments:
Post a Comment