ಡಾ. ಸಿದ್ರಾಮ ಕಾರಣಿಕ
(ಯುಗಾರಂಭ ಅನುವಾದದ ಬಗೆಗೆ ವಿಚಿತ್ರವಾದ ಕೆಲವು ಸತ್ಯಗಳು)
... ವಿಷಯ ತುಂಬ ಸ್ವಾರಸ್ಯಕರವಾದುದು. ಯಾವುದನ್ನು ನಾನು ನಿರೀಕ್ಷಿಸಿರಲಿಲ್ಲವೋ ಅದೇ ಆಗಿತ್ತು ! ಮರಾಠಿಯಲ್ಲಿ ಡಾ. ವಿನೋದ ಗಾಯಕವಾಡ ಅವರು ಮಹಾತ್ಮಾ ಫುಲೆಯವರ ಬಗ್ಗೆ ಕಾದಂಬರಿಯನ್ನು ಬರೆಯುತ್ತಿರುವುದಾಗಿಯೂ ಅದನ್ನು ಕನ್ನಡದಲ್ಲಿ ನಾನು ಮಾಡಬೇಕೆಂದೂ ಒತ್ತಾಯಿಸಿದರು. ಅದೂ ಹಸ್ತಪ್ರತಿಯಲ್ಲೇ ಇರುವ ಕೃತಿ. ನಾನೂ ಒಪ್ಪಿಕೊಂಡೆ. ಹದಿನೈದು ದಿನ ನಿರಂತರ ಕೆಲಸ ಮಾಡಿದೆ. 27ನೇ ಮಾರ್ಚ್ 2008 ರಂದು ಅನುವಾದವನ್ನೂ ಮಾಡಿ, ಡಿಟಿಪಿಯನ್ನೂ ಮಾಡಿ ಪ್ರಕಟಣೆಗೆ ಸಿದ್ಧ ಮಾಡಿದೆ. ಎರಡು ಸಿ.ಡಿ.ಗಳಲ್ಲಿ ರೈಟ್ ಮಾಡಿ ಡಾ. ಗಾಯಕವಾಡ ಅವರಿಗೂ ನೀಡಿದೆ. ಅವರು ಅವುಗಳನ್ನು ಬೆಂಗಳೂರಿಗೆ ಪ್ರಕಟಣೆಗೆಂದು ಕಳುಹಿಸಿ ಕೊಟ್ಟೆ ಎಂದು ಹೇಳಿದರು. ಬಹು ದಿನಗಳಾದರೂ ಪುಸ್ತಕ ಪ್ರಕಟವಾಗಲಿಲ್ಲ. ಆಗ ಮತ್ತೇ ನಾನು ಮೇಲಿಂದ ಮೇಲೆ ಡಾ. ಗಾಯಕವಾಡ ಅವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಅವರು ಹೇಳಿದ್ದು ಏನೆಂದರೆ ಪ್ರಕಟಣೆಯ ಜವಾಬ್ದಾರಿ ಹೊತ್ತ ವ್ಯಕ್ತಿ ನುಣುಚಿಕೊಂಡರಂತೆ !
ಆಮೇಲೆ ನಾನೂ ಸುಮ್ಮನಾದೆ. ಆದರೆ ಈ ವರ್ಷ ಅಂದರೆ ನಾನು ಅನುವಾದ ಮಾಡಿದ ಎರಡು ವರ್ಷಗಳ ನಂತರ ನನಗೆ ಒಂದು ಆಘಾತದ ಸುದ್ದಿ ತಿಳಿಯಿತು. ಮಹಾತ್ಮಾ ಫುಲೆಯವರ ಬಗ್ಗೆ ಬೆಂಗಳೂರಿನ ಮಹನೀಯರೊಬ್ಬರು ಕೃತಿಯನ್ನು ರಚಿಸಿ, ಪ್ರಕಟಪಡಿಸಿದ್ದಾರೆ. ಅದನ್ನು ಓದಿದೆ. ಯಾಕೋ ಸಂಶಯ ! ಓದುತ್ತ ಹೋದಂತೆ ನನ್ನ ಸಂಶಯ ಬಲಗೊಂಡಿತು. ಹೌದು. ಆ ಕೃತಿ ನನ್ನ ಅನುವಾದದ ಮಾದರಿಯಲ್ಲೇ ಇದೆ. ಅಲ್ಲಿ ಬರುವ ಸಂಭಾಷಣೆಗಳು ನಾನೇ ಬರೆದವುಗಳು ಎಂಬುದು ನನಗೆ ದೃಢವಾಯಿತು ! ಯಾಕೆಂದರೆ ನನ್ನ ಶೈಲಿ ನನಗೆ ಗೊತ್ತಾಗುವುದಿಲ್ಲವೇ ? ಅನುವಾದವಾದರೂ ನಾನು ಬಳಸುವ ಶಬ್ದಗಳು, ನುಡಿಗಟ್ಟುಗಳು ಭಿನ್ನವೇ ಆಗಿರುತ್ತವೆ. ಅನುವಾದ ಎನ್ನುವುದಕ್ಕಿಂತಲೂ ಕೆಲವೊಂದಿಷ್ಟು ವಿಚಾರಗಳನ್ನೂ ಹೆಚ್ಚಿನ ವಿವರಗಳನ್ನೂ ನಾನು ಬಳಸಿಕೊಂಡಿರುತ್ತೇನೆ. ಇದನ್ನು ಹಲವರಲ್ಲಿ ನಾನು ಪ್ರಸ್ತಾಪ ಮಾಡಿದೆ. ಯಾವುದೋ ಗುಮಾನಿಯಿಂದ ಮೂಲ ಲೇಖಕರನ್ನೂ ಸಂಪರ್ಕಸಿದೆ. ಅವರೂ ತಮಗೇನೂ ತಿಳಿದಿಲ್ಲ ಎಂದರು. ಕೃತಿಚೌರ್ಯ ನಡೆದಿರುವುದಂತೂ ಸ್ಪಷ್ಟವಾಗಿತ್ತು. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡುವ ವಿಚಾರ ನನ್ನದಾಗಿರಲಿಲ್ಲ. ಹೀಗಾಗಿ ರೂಪ ಪ್ರಕಾಶನದ ಆತ್ಮೀಯ ಮಹೇಶ ಅವರನ್ನು ಸಂಪರ್ಕಿಸಿದೆ. ಅವರು ಕೃತಿಯನ್ನು ಪ್ರಕಟಿಸಲು ಮುಂದೆ ಬಂದರು.
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಕೃತಿಚೌರ್ಯ ಮಾಡುವವರು ಹೇಗೆ ಎಲ್ಲ ಕಡೆ ತುಂಬಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿಕ್ಕೆಂದು ಎಂದರೆ ಆಶ್ಚರ್ಯವಾದೀತು ! ಯಥಾವತ್ತ ನಕಲು ಮಾಡದೇ ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಯಾರದೋ ಪುಸ್ತಕವನ್ನು ಇನ್ನ್ಯಾರೋ ತಮ್ಮ ಹೆಸರಿನಲ್ಲಿ ಪ್ರಕಟಸುವುದು ಮತ್ತು ಹೆಸರು ಮಾಡುವುದು ಎಷ್ಟು ಸರಿ. ಈ ಬಗ್ಗೆ ಯಾರೇ ಬಂದರೂ ಮುಖಾಮುಖಿ ಉತ್ತರ ನೀಡಲೂ ನಾನು ಸಿದ್ಧನಾಗಿಯೇ ಇದ್ದೇನೆ. ಆದರೂ ಮಹಾತ್ಮ ಜ್ಯೋತಿಬಾ ಫುಲೆಯವರ ಬಗ್ಗೆ ಇರುವ ಈ ಕಾದಂಬರಿ ಕನ್ನಡದಲ್ಲಿ ಮೊಟ್ಟ ಮೊದಲನೆಯದು ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚೆ ಪಡುತ್ತೇನೆ.
No comments:
Post a Comment