ಕತೆ
ಮೂಲ ಮರಾಠಿ : ಅಡ್ವೋಕೇಟ್ ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ-------------------------------------------------------------------------------------------------------------
ಪ್ರತಾಪರಾವ್ ಸರನೋಬತ್ !
ಮುರಕಟ್ಟೆವಾಡಿ ಎಂಬೋ ಊರಿನಲ್ಲಿ ಇರುವ ಒಬ್ಬ ಡಾಕ್ಟರು !
ಪದವಿ ಪಡೆಯುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೆ ತಕ್ಕಂತೆ ಡಾಕ್ಟರೀತನ ಮಾಡುವ ಡಾಕ್ಟರು ! ಒಬ್ಬ ಪ್ರಾಮಾಣಿಕ ಡಾಕ್ಟರು ಎಂದೇ ಜನಮನ್ನಣೆ ಗಳಿಸಿದ್ದ ಅಸಾಮಿ !
ಆ ದಿನ ಆ ಡಾಕ್ಟರಲ್ಲಿಗೆ ಬಂದವನು ಒಬ್ಬ ರೋಗಿ ; ಹೆಸರು ಗುಂಡೂ ಸಾವಂತ !
ಉಚಗಾವಿಯ ಗ್ರಾಮದೇವತೆ ಉಗ್ರಸ್ವರೂಪಿಣಿ. ಆ ದೇವತೆಗೊಂದು ದೇವಸ್ಥಾನ. ವರ್ಷದಲ್ಲಿ ಶ್ರಾವಣ ಮಾಸವೊಂದನ್ನು ಬಿಟ್ಟು ಉಳಿದ ಹನ್ನೊಂದು ತಿಂಗಳಿನ ನಲವತ್ತ್ನಾಲ್ಕು ವಾರಗಳಲ್ಲಿ ಎಂಬತ್ತೆಂಟು ಸಲ ಅಲ್ಲಿ ಜಾತ್ರೆ ನೆರೆಯುತ್ತದೆ !
ಬಂಧುಗಳ ಕರೆಯನ್ನು ಮನ್ನಿಸಿ ಗುಂಡೂ ಸಾವಂತ ಗ್ರಾಮದೇವತೆಯ ಜಾತ್ರೆಗೆಂದು ಉಚಗಾವಿಗೆ ಹೋಗಿದ್ದ ! ಅಲ್ಲಿಯ ದೇವಿಗೆ ಮಾಂಸಾಹಾರವೇ ನೈವೇದ್ಯ ! ಊರಿನ ಪ್ರತಿಯೊಬ್ಬರೂ ಊರದೇವಿಗೆ ಕುರಿಯನ್ನು ಬಲಿ ನೀಡಿ, ರಾತ್ರಿಯಲ್ಲಿ ಭರ್ಜರಿ ಮಾಂಸದಡುಗೆ ಮಾಡುತ್ತಿದ್ದರು ! ಊರಿಗೆ ಊರೇ ಮಸಾಲೆ ಮಾಂಸದ ವಾಸನೆಯಲ್ಲಿ ಪಾವನವಾಗುತ್ತಿತ್ತು ! ಮಾಂಸದಡುಗೆ ಇದೆ ಎಂದರೆ ಸಾರಾಯಿ ಇಲ್ಲದಿದ್ದರೆ ನಡೆಯುತ್ತದೆಯೇ ? ಸಾರಾಯಿ ತುಂಬಿ ಹರಿಯುತ್ತಿತ್ತು !
ಮಂಗಳವಾರ ಮತ್ತು ಶುಕ್ರವಾರ ಆ ದೇವಿಯ ವಾರಗಳು. ಆ ದಿನಗಳಲ್ಲಿ ಸಾರಾಯಿ ಮಾರಾಟಗಾರರಿಗೆ ಶುಕ್ರದೆಸೆ ! ಬುಕ್ಯಾಳದ ಸಾರಾಯಿ ತುಂಬಿದ ಟ್ಯೂಬ್‍ಗಳು ಊರ ಹೊರಗಿನ ಮಾವಿನ ತೋಪಿನಲ್ಲಿ ಒಟ್ಟಿದ್ದ ಬಣವೆಗಳಲ್ಲಿ ಅಥವಾ ಗೂಡುಗಳಲ್ಲಿ ತುಂಬಿರುತ್ತಿದ್ದವು ! ಜೊತೆಗೆ ಸರಕಾರಿ ಪರ್ಮಿಟ್ಟಿನ ಸಾರಾಯಿ ಕೂಡ ಇರುತ್ತಿತ್ತು !
ತಾವು ಆಮಂತ್ರಿಸಿದ ಬಂಧು-ಬಾಂಧವ-ಮಿತ್ರರನ್ನು ಆ ಊರಿನ ಮಂದಿ ಗ್ಲಾಸಿನ ಮೂಲಕವೇ ಸ್ವಾಗತಿಸುತ್ತಿದ್ದರು ! ಗುಂಡೂ ಸಾವಂತನಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತ್ತು ! ಸ್ವಂತ ದುಡ್ಡಿನಲ್ಲಿ ಸಾರಾಯಿ ಕುಡಿಯಲು ಹಿಂದುಮುಂದೆ ನೋಡುತ್ತಿದ್ದ ಗುಂಡೂ ಜಾತ್ರೆಯ ನಿಮಿತ್ಯವಾಗಿ ಪುಕ್ಕಟೆ ಸಿಕ್ಕ ಸಾರಾಯಿಯನ್ನು ಮನಸೋ ಇಚ್ಚೆ ಕುಡಿದೇ ಕುಡಿದ ! ಆಮೇಲೆ ಸಾಕೆನಿಸುವಷ್ಟು ಮಟನ್ ಊಟ !
ಸಾರಾಯಿ ಕುಡಿದು, ಕುರಿಯ ಮಾಂಸದುಟವನ್ನು ಮುಗಿಸಿಕೊಂಡು ತನ್ನ ಮನೆಗೆ ಮರಳಿದ ಗುಂಡೂ ನೆಲ ಹಿಡಿದು ಮಲಗಿಯೇ ಬಿಟ್ಟ ! ಅತಿಯಾದರೆ ಅಮೃತವೂ ವಿಷವಾಗುತ್ತದೆಯಲ್ಲವೆ ? ಪುಕ್ಕಟೆಯಾಗಿ ಸಿಕ್ಕ ಸಾರಾಯಿ ಮತ್ತು ಕುರಿ ಮಾಂಸದ ಫೀಸುಗಳ ಭರ್ಜರಿ ಊಟ ! ಅತಿಯಾಗಲು ಇನ್ನೇನು ಬೇಕು ?
ವಾಂತಿ-ಭೇದಿ ಸುರುವಾಗಿ ಸುಸ್ತಾಗಿ ಹೋದ ಗುಂಡೂ !
ಗಂಡನ ಆವಸ್ಥೆ ಕಂಡ ಆತನ ಹೆಂಡತಿ ಶಟುಲಿ ಕೈ-ಕಾಲು ಕಳೆದುಕೊಂಡಂತಾದಳು ! ದುಃಖತಪ್ತ ಆಕೆ ಅಕ್ಕ-ಪಕ್ಕದವರ ಸಹಾಯದಿಂದ ಗಂಡನನ್ನು ಡಾ. ಸರನೋಬತ್ ಕಡೆ ಕರೆದುಕೊಂಡು ಬಂದಿದ್ದಳು !
*****
ಗುಂಡೂನನ್ನು ಪರೀಕ್ಷೆ ಮಾಡಿದ ಡಾ. ಸರನೋಬತ್ ಏನೋ ಹೇಳಬೇಕು ಎನ್ನುವಷ್ಟರಲ್ಲಿಯೇ ಅಲ್ಲಿಗೆ ನಾರಾಯಣ ಪಾಟೀಲನ ಆಗಮನವಾಯಿತು !
ಪಂಢರಪುರದ ವಾರಕರಿಯಾದ ನಾರಾಯಣ ಪಾಟೀಲ ಕೊರಳಲ್ಲಿ ತುಳಸಿ ಮಾಲೆ, ಹಣೆಗೆ ಗಂಧ ಧರಿಸಿಕೊಂಡು ಮಹಾರಾಜನಂತೆ ಬೈಕಿನ ಮೇಲೆ ಅಲ್ಲಿಗೆ ಬಂದಿದ್ದ ! ನಿಜವಾಗಿಯೂ ಆತನನ್ನು ಎಲ್ಲರೂ ಸಾಧು-ಸಂತರಿಗೆ ಕರೆಯುವಂತೆ ಮಹಾರಾಜ ಎಂದೇ ಕರೆಯುತ್ತಿದ್ದರು !
ಆತನ ಜೊತೆಯಲ್ಲಿ ಸುಂದರವಾದ ಹರೆಯದ ಹುಡುಗಿ ಬೇರೆ ಇದ್ದಳು !
ಆಕೆ ಆತನ ಹೆಂಡತಿಯ ತಂಗಿ !
ಬಂದದ್ದು ಒಂದು ಸಿರೀಯಸ್ ಕೇಸು ಎಂಬುದು ಆ ಹುಡುಗಿಯ ಮುಲುಕಾಟದಿಂದಲೇ ಕಂಡುಬರುತ್ತಿತ್ತು ! ಡಾಕ್ಟರ್ ಸರನೋಬತ್ ತಡ ಮಾಡದೇ, ತನ್ನ ಸಹಾಯಕಿಗೆ ಗುಂಡೂನನ್ನು ನೋಡಿಕೊಳ್ಳಲು ಹೇಳಿ, ನಾರಾಯಣ ಪಾಟೀಲನ ಕಡೆ ಬಂದ. ಇಬ್ಬರನ್ನೂ ಒಳಗಿನ ರೂಮಿಗೆ ಕರೆಯಿಸಿಕೊಂಡ ಡಾ. ಸರನೋಬತ್ ವಿಚಾರಿಸತೊಡಗಿದ.
“ಏನ್ ಅಂತೀರಿ ನಾರಾಯಣರಾವ್, ಏನ್ ಸಮಾಚಾರಾ ?”
“ನೋಡ್ರಿ ಡಾಕ್ಟರ್ ಸಾಹೇಬ್ರ, ನಾ ಈ ತುಳಸೀ ಮಾಲಿ ಮ್ಯಾಲ ಆಣಿ ಮಾಡ್ಯ ಹೇಳ್ತೇನಿ... ..”
ಡಾಕ್ಟರು ನಗುತ್ತಲೇ ಹೇಳಿದ, “ಅಲ್ರಿ, ನೀವ್ ಮಹಾರಾಜ ಅದೇರಿ. ಮಾಲಿ ಮ್ಯಾಲ ಆಣೀ ಮಾಡೂ ಅವಶ್ಯಕತಾನ ಇಲ್ಲ. ಈಗ ಹೇಳ್ರಿ ನಿಮ್ಮ ಇಬ್ಬರದಾಗ ಯಾರ್ಗೆ ಏನಾಗೇದ ?
“ಡಾಕ್ಟರ್ ಸಾಹೇಬ್ರ, ಈಕೀ ನನ್ನ ಮೇವಣ್ಯಾಳ್ತಿ. ದ್ರೌಪತಿ ವಾಘಮಾರೆ ಅನ್ನೂದು ಈಕೀ ಹೆಸ್ರು. ಈಗ ಎರಡ್ಮೂರ ದಿವ್ಸದಿಂದ ಈಕೀ ಭಾssಳ ತ್ರಾಸ ಮಾಡ್ಕೊಳ್ಳಾಕತ್ತಾಳು. ಒಮ್ಮಿಂದೊಮ್ಮಲೇ ಚೀರಾಕss ಸುರು ಮಾಡ್ತಾಳು !”
“ಅಂಥಾದ್ದೇನಾಗೇದ ಹೇಳ್ರ್ಯಲಾ ?”
“ಹೊಟ್ಟಿ ನೋಯ್ಸತೇತಿ ಅಂತ ಹೇಳ್ತಾಳ್ರಿ. ಭಾಳ ನೋಸತೇತಿ. ಹೊಟ್ಟ್ಯಾಗ ಗಂಟಾಗೇತಿ ಅಂತಾಳು ! ಯಾಡ್ ದಿವ್ಸದಿಂದ ಬರೀ ಇದನ ನೋಡ್ಯss ನೋಡ್ಯ ನಂಗೂ ಅದss ಸಂಸೇ ಬರಾಕತ್ತೇತಿ. ಡಾಕ್ಟರ್ ಸಾಹೇಬ್ರ, ಏನಾರ ಮಾಡ್ರಿ, ಮದಲ ಈಕೀ ಹೊಟ್ಟ್ಯಾಗಿಂದ ಗಂಟ ತಗದ ಹಾಕ್ರಿ. ಖಾಲಿ ಫುಕ್ಕಟ ಕಿರಿಕಿರಿ ಸಾಕಾಗೇತಿ !”
“ಈಕೀ ನಿಮ್ಮ ಮನ್ಯಾಗ ಇರ್ತಾಳೇನ್ರಿ ?”
“ಹೌಂದ್ರಿ. ಈಗ ನಮ್ಮ ಮನ್ಯಾಗ ಅದಾಳು. ನನ್ನ ಧರ್ಮಪತ್ನಿ ಮಂಜುಳಾ ಡೆಲಿವರಿ ಸಲುವಾಗಿ ತವರ್ಮನಿಗಿ ಹೋಗ್ಯಾಳು. ಮದಲ್ನೆ ಡೆಲಿವರಿ ನೋಡ್ರ್ಯ ತವರ್ಮನ್ಯಾಗ ಆಗಬೇಕನ್ನೂದು ಪ್ರಥಾ ಏತಿ. ಈಗ ಆಕೀ ಹೋಗಿ ಮೂರ ತಿಂಗ್ಳಾತ್ರಿ. ನಮ್ಮ ಮಾಂವ ಭಾಳ ಕಾಳಜಿ ಇರೂ ಮನಿಸ್ಯಾ. ಎಲ್ಲಾರ್ದೂ ಕಾಳಜಿ ಮಾಡ್ತಾನು ! ಜೋಡಿ ಇಲ್ಲದಿರಕ ಹೊಲಮನಿ ಕೆಲಸದಾಗ ನನ್ನ ಹೊಟ್ಟಿಪಾಡಿಂದ ಹೈರಾಣ ಆಗ್ತೇತಿ ಅಂತ, ಅವರss ಈ ದ್ರೌಪದೀನ ನಮ್ಮ ಮನ್ಯಾಗ ಇಟ್ಟ ಹೋಗ್ಯಾರು ! ಹಂಗಿದ್ರೂ ನಾ ಏನ ಸುಮ್ನಿಲ್ಲ. ಈಕೀ ಬಗ್ಗಿ ಭಾಳಂದ್ರ ಭಾಳ ಕಾಳಜಿ ಮಾಡ್ತೇನಿ. ಈಕೀನೂ ನಂದ ಭಾಳ ಕಾಳಜಿ ಮಾಡ್ತಾಳು ! ನೀವ್ ನೋಡಾಕತ್ತೇರಲ್ಲ, ನೋಡಾಕ ಎಷ್ಟ ಸುಂದರ ಅದಾಳು ಈಕಿ ! ಹೆಂಗ ಸುಂದರ ಅದಾಳೋ ಹಂಗ ಮನ್ಯಾಗೀನ ಎಲ್ಲಾ ಕೆಲಸಾನೂ ಮಾಡೋದ್ರಾಗ ಭಾssಳ ಹುಶಾರಿ !
ನಮ್ಮ ಮಾಂವ್ಗ ಕಂಡಾಪಟ್ಟಿ ಜಮೀನ ಏತಿ. ಕುಂತ ತಿಂದ್ರೂ ಕರಗುಲ್ಲದಷ್ಟ ಸಂಪತ್ತ ಏತಿ. ಆದರ ಅವ್ರಿಗಿ ಗಂಡ ಮಕ್ಳ ಇಲ್ರಿ. ಯಾಡ್ಡೂss ಹೆಣ್ಣಮಕ್ಕಳಾನ ಅದಾವು ! ನನ್ನ ಧರ್ಮಪತ್ನಿ ಮಂಜುಳಾ ಮತ್ತ ಈಕೀ ದ್ರೌಪದಿ. ಇಬ್ಬರ ! ಗಂಡಮಕ್ಕಳ ಇಲ್ಲಂತ ನಮ್ಮ ಮಾಂವ್ನ ಅಣತಮರು ಅಂವ್ನ ಆಸ್ತಿ ಕಸಗೊಳ್ಳಾಕ ತಯಾರ ಆಗ್ಯಾರು ! ಆ ಅಣತಮರು ಭಾಳ ಕೆಟ್ಟವ್ರ ಅದಾರು. ನಮ್ಮ ಮಾಂವಗ ಮ್ಯಾಲಿಂದ ಮ್ಯಾಲ ತ್ರಾಸ್ ಮಾಡ್ತಿರ್ತಾರು ! ಡಾಕ್ಟರ್ ಸಾಹೇಬ್ರ, ನೀವ್ ನೋಡ್ಬೇಕರಿ, ದರ ಅಮಾಸಿಗಿ ಅವ್ರು ಮಾಟಾ ಮಾಡ್ಸಿ ನಮ್ಮ ಮಾಂವನ ಮನಿ ಮುಂದ ಒಗಿತಾರು ! ಟೆಂಗಿನಕಾಯಿ, ಸೂಂಜಿ ಚುಚ್ಚಿದ ಲಿಂಬಿಕಾಯಿ, ಗುಲಾಲದಾಗ ಮಾಡಿದ ಅನ್ನ, ಕರೀಗೊಂಬಿ ಹೀಂಗ್ ಏನೇನೋ ವಿಚಿತ್ರ ವಿಚಿತ್ರ ವಸ್ತುಗೋಳ್ನ ನಮ್ಮ ಮಾಂವ್ನ ಮನಿ ಆಜೂಬಾಜೂ ಬಿದ್ದಿರ್ತಾವು ! ಹಿಂಗಾಗಿ ನಮ್ಮ ಮಾಂವ್ನ ಮನ್ಯಾಗ ಭಾಳ ತ್ರಾಸ್ ಆಗಾಕತ್ತಾವು !
ನಮ್ಮ ಅತ್ತಿಗಿ ಭಾಳ ತ್ರಾಸ ಆಗೇತಿ. ಮಾಂವ್ಗೂ ತ್ರಾಸ್ ಏತಿ. ಬೆಳಗಾಂವದಾಗಿನ ಭಾಳ ಡಾಕ್ಟರ್ ಕಡೀ ಇಬ್ಬರೂನು ತೋರ್ಸೇವಿ. ರೊಕ್ಕ ಇರೂ ಪೆಸೆಂಟ್ ಸಿಕ್ರ ಅವಶ್ಯಕತಾ ಇರಲಿಕ್ಕಂದ್ರೂ ಏನೇನೋ ತಪಾಸ ಮಾಡಿ ಪೆಸೆಂಟ್‍ಗೋಳ್ನ ಲುಟಾಸ್ತಾರು ! ಬಿ.ಪಿ., ಶುಗರ್ ಇಲ್ಲಿಕಂದ್ರೂ ಅದಾವಂತ ಹೇಳಿ ಹಗಲಿ ದರೋಡಿ ಮಾಡ್ತಾರು ಡಾಕ್ಟರ್ ಸಾಹೇಬ್ರ, ನಾ ಅಂತೂ ಹೇಳಿ ಕೇಳಿ ಮಹಾರಾಜಾ ಮನಿಷ್ಯಾ. ಬೇಕಾರ ನಾ ಆಣಿ ಮಾಡ್ಯ ಹೇಳ್ತೇನಿ ; ನಮ್ಮ ಮಾಂವ್ನ ಮನ್ಯಾಗ ಏನೇನ ತ್ರಾಸ ಆಗಾಕತ್ತಾವಲಾ ಅವುಗೋಳೀಗೆಲ್ಲ ಅವರ ಅಣತಮರು ಮಾಡಿಸಿದ ಮಾಟಾssನ ಕಾರಣ ಏತಿ ! ದೇವ್ರಾಣಿರೀಪಾ, ಅವ್ರನೂ ನಿಮ್ಮ ಕಡೀನ ತೋರ್ಸಕ ಕರಕೊಂಡ ಬರಾಂವದೇನಿ !”
ದೀರ್ಘವಾಗಿ ಹೇಳಿದ ನಾರಾಯಣನ ಆಮತು ಕೇಳಿ ಡಾಕ್ಟರ ಮನಸ್ಸು ದ್ವಂದ್ವಕ್ಕೆ ಸಿಲುಕಿತು !
“ನಾರಾಯಣರಾವ್, ನೀವ್ ಸಂತ ಮಹಾರಾಜ ಇದ್ದೇರಿ. ಆದರ ಮ್ಯಾಲಿಂದ ಮ್ಯಾಲ ದೇವ್ರಾಣಿ, ದೇವ್ರಾಣಿ ಅಂತ ಯಾಕ ಹೇಳ್ತೇರಿ ? ಮಂದಿ ಏನೋ ಮಾಡ್ಸಿದ್ದಾರು ಅಂತ ಎಂಥ ಭ್ರಮಾ ಇಟ್ಕೊಂಡೀರಲ್ಲ ? ಅಲ್ಲ, ಸಂತರು ಏನ ಹೇಳ್ಯಾರು ಗೊತ್ತದ ಏನ ನಿಮಗ ... ; ‘ಮೈಮ್ಯಾಗ ಬರೂ ಗಾಳಿಧೂಳಿ ಬರೀ ಸೋಗಿನ ದಾಳಿ !’ ಅಲ್ವೇನ್ರಿ ? ಜ್ಞಾನೇಶ್ವರ ಮಹಾರಾಜರು ಹೇಳ್ಯಾರಲ್ಲ ; ‘ಮಂತ್ರದಿಂದ ವೈರಿ ಸತ್ತರ ಸೊಂಟಕ್ಯಾಕ ಉಡದಾರ ?’ ಮತ್ತೊಂದ ಕಡೀ ಅವರss ಹೇಳ್ಯಾರ, ‘ಹರಕೆ ಹೊತ್ತು ಮಗು ಹಡೆದರ ಕಾರಣ ಹೇಗಾಗುತ್ತಾನ ಪತಿ ?’ ಅಂದ್ರ ... ... ನಾ ಏನ ಹೇಳ್ಬೇಕಂತೀನಿ ಅಂದ್ರ ಈ ಹರಕೆ, ಮಾಟ-ಮಂತ್ರಾ ಎಲ್ಲಾ ಬಂಡಲ್ ಅದವು. ಇಂದ ಜಗತ್ತ ಎಷ್ಟ ಮುಂದ ಹೋಗೇದ ? ನೀವು ನೋಡ್ಯರ ಸಂತ ಮಹಾರಾಜ ಆಗಿನೂ ಹಳೀದನ್ನ ಜಗ್ಗಾಡ್ಕೊಂತ ಕುಂತೇರಿ ! ಮೂಢನಂಬಿಕಿ ಮ್ಯಾಲ ಯಾಕ ನಿಮಗ ನಂಬ್ಕಿ ? ವಿಚಿತ್ರ ಅನ್ನಿಸ್ತದ ನನಗ. ಕೊಳ್ಳಾಗ ಮಾಲಿ, ಕಾಲಾಗ ದಿಂಡಿ ಅಂತೇರಿ ; ಪಂಢರಪುರದ ವಾರಕರೀ ಅಂತೇರಿ ! ಮತ್ತ ಮ್ಯಾಲ ಇಂಥಾ ವಿಚಾರಗಳ್ನೆಲ್ಲ ನಂಬತೇರಿ ! ಖರೇ ಹೇಳ್ಬೇಕಂದ್ರ ನಿಮ್ಮಂಥವರ್ನ ನಾ ಎಂದೂ ನೋಡಿಲ್ಲ ! ಜ್ಞಾನೇಶ್ವರ, ತುಕಾರಾಮ, ಚೋಖಾಮೇಳ, ಸಾವತಾ, ಏಕನಾಥ ಮೊದಲಾದ ಸಂತ ಮಹರಾಜರು ಈ ಮೂಢನಂಬಿಕೆಯನ್ನು ಕಟುವಾಗಿ ಟೀಕಿಸ್ಯಾರ. ಇಂಥ ಹುಚ್ಚುತನದ ಕಲ್ಪನೆಗಳನ್ನ ತಿರಸ್ಕರಿಸ್ಯಾರ. ಕೆಟ್ಟ ರೂಢಿ, ಸಂಪ್ರದಾಯ ಅನ್ನೂ ಪ್ರವಾಹಗಳ ವಿರುದ್ಧ ಈಜಿ ನಮಗ ಅರಿವ ನೀಡೂ ಕೆಲಸಾ ಮಾಡ್ಯಾರು. ಇದೆಲ್ಲ ಬರೀ ಭ್ರಮಾ ನಾರಾಯಣರಾವ್ ! ಇದರಿಂದ ಇಡೀ ಸಮಾಜ ದುರ್ಬಲ ಆಗ್ತದ ಅಷ್ಟ !”
ಡಾಕ್ಟರು ತುಂಬ ವಿಷಯಗಳ ಮಾತನಾಡಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ. ಆದರೆ ಮೂರ್ಖನಾದ ಆ ನಾರಾಯಣರಾವ್ ಮಹಾರಾಜನಿಗೆ ಒಂದಿಷ್ಟೂ ತಿಳಿಯಲಿಲ್ಲ ! ಬದಲಿಗೆ ಆತ ಮತ್ತೇ ತನ್ನ ಹಳೇ ಹಾಡನ್ನೇ ಹಾಡುತ್ತ ಮೂರ್ಖತನದ ಸೂರು ಎಳೆದ !
“ಹಂಗಲ್ರಿss ಡಾಕ್ಟರ್ ಸಾಹೇಬ್ರ, ಈ ದ್ರೌಪದಿ ಮ್ಯಾಲ ಯಾರೋ ಮಾಟಾ ಮಾಡಿಸ್ಯಾರರೀ ! ಅದರ ಪ್ರಭಾವ ಇದೇತಿ. ಯಾರೋ ಮಾಟಾ ಮಾಡ್ಸಿ ಹೊಟ್ಟ್ಯಾಗ ಹಾಕ್ಯಾರಿ ! ರಾತ್ರಿ ಸರೋತ್ತಿನ್ಯಾಗ ಈಕೀ ಒದ್ದಾಡೋದೇನು, ಚೀರಾಡೋದೇನು ! ಹೊಟ್ಟ್ಯಾಗೀನ ಗಂಟದಿಂದ ಸಾಕಾಗೇತಿ ಅನ್ನೋದೇನು ! ಇದೆಲ್ಲ ಹೊಟ್ಟ್ಯಾಗೀನ ಗಂಟದss ತ್ರಾಸ ! ನಿಮಗ ಮಾಟಾ ಮಾಡ್ಸೂ ವಿಷ್ಯಾ ತಿಳ್ಯೂದಿಲ್ಲ ಬಿಡ್ರಿ ! ನೀವ್ ಈಕೀನ ಚೊಲೋತಂಗ ಚೆಕ್ ಮಾಡ್ರಿ. ಮತ್ತ ಹೊಟ್ಟ್ಯಾಗ ಇರೂ ಗಂಟಷ್ಟ ತಗದ ಬಿಡ್ರಿ ! ನಮ್ಮ ಮಾಂವ-ಅತ್ತೀಗಿ ಯಾಕ ಸುಮ್ನ ತ್ರಾಸ ಕೊಡೂದು ಅಂತ ನಾನss ಈ ಜವಾಬ್ದಾರಿ ಹೊತ್ಕೊಂಡೇನಿ. ಹೊಟ್ಟ್ಯಾಗಿಂದ ಅಷ್ಟ ನಿಕಾಲ ಮಾಡ್ರಿ”
“ನೀವ್ ಹೆಂಗ್ ಅಂತೇರಿ ಹಂಗ. ನಾ ಎಲ್ಲಾ ತಪಾಸ ಮಾಡ್ತೇನಿ. ಅಲ್ಲಿತಂಕಾ ನೀವೊಂದಿಷ್ಟ ಹೊರಗ ಹೋಗ್ರಿ”
“ಡಾಕ್ಟರ್ ಸಾಹೇಬ್ರ, ಫೀಜಿನ ಚಿಂತಿ ಮಾಡಬ್ಯಾಡ್ರಿ. ಎಷ್ಟಬೇಕೋ ಅಷ್ಟ ಖರ್ಚ ಮಾಡಾಕ ನಾ ತಯಾರಿದೇನಿ. ಈಕೀ ಚೊಲೋ ಆದರ ಸಾಕ ನೋಡ್ರಿ” ಎಂದು ನಾರಾಯಣರಾವ್ ತುಂಬ ಉತ್ಸುಕತೆಯಿಂದಲೇ ಹೇಳಿದ.
“ಓಕೆ, ಓಕೆ. ಆತಾತು. ನೀವ್ ಹೊರಗ ಕೂಡ್ರಿ. ನಾ ಚೆಕ್‍ಫ್ ಮಾಡ್ತೇನಿ” ಎಂದು ಹೇಳಿದ ಡಾಕ್ಟರು ದ್ರೌಪದಿಯೊಂದಿಗೆ ಚೆಕ್‍ಫ್ ರೂಮಿನೊಳಗೆ ಹೊಕ್ಕ !
*****
ಡಾಕ್ಟರ್ ಸರನೋಬತ್ ತುಂಬ ಚಾಣಾಕ್ಷ ವ್ಯಕ್ತಿ.
ಚಿಚ್ಚಿ ಅಂದ್ರ ಚಿಕನ್ ಅನ್ನೊದು ಆತನಿಗೆ ಗೊತ್ತು ! ಒಂದಿಷ್ಟು ಚೆಕಫ್ ಮಾಡುವಷ್ಟರಲ್ಲಿಯೇ ಹಕೀಕತ್ತು ಏನು ಎನ್ನುವುದು ಆತನಿಗೆ ಗೊತ್ತಾಗಿ ಹೋಗಿತ್ತು !
ದ್ರೌಪದಿಯ ಹೊಟ್ಟೆಯಲ್ಲಿ ಇರುವ ಗಂಟು ಬೇರೆಯೇ ಆಗಿದೆ !
ಆಕೆಗೆ ಇನ್ನೂ ಮದುವೆಯೇ ಆಗಿಲ್ಲ ; ಆದರೂ ಹೊಟ್ಟೆಯಲ್ಲಿ ಮುಲುಕಾಡುವ ಪಿಂಡ ಇದೆ !
ಹೇಗಾಯಿತು ಇದು ?
ಇದು ಮಾಟ ಮಾಡಿಸಿದ್ದಲ್ಲ !
ದ್ರೌಪದಿ ಯಾರೋ ಗಂಡಸಿನ ಜೊತೆ ಮೈತ್ರಿ ಮಾಡಿ, ಸಲ್ಲಾಪವಾಡಿ ಸುಖದಲ್ಲಿಯೇ ಗೊತ್ತಾಗದಂತೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ಗಂಟು ಅಥವಾ ಪಿಂಡ ಬೆಳೆದು ನಿಂತಿದೆ !
ಇದು ಅನೈತಿಕ ಸಂಬಂಧದ ಪ್ರತಿಫಲವಲ್ಲದೇ ಬೇರೇನೂ ಅಲ್ಲ !
ದ್ರೌಪದಿಯನ್ನು ವಿಶ್ವಾಸಕ್ಕೆ ತೆಗದುಕೊಂಡ ಡಾ. ಸರನೋಬತ್ ಡಾಕ್ಟರು ಸತ್ಯವನ್ನು ಹೊತೆಗೆಯುವ ಪ್ರಯತ್ನ ಮಾಡಿದ ! ಆತ ಆತ್ಮೀಯವಾಗಿಯೇ ಮಾತನಾಡಿದ ;
“ನೋಡ ದ್ರೌಪದಿ, ನಿನ್ನ ರೋಗ ಭಾಳ ದೊಡ್ಡದು ! ಎಲ್ಲಾರಿಗೂ ತ್ರಾಸ ಮಾಡೂವಂಥದ್ದು ! ನಿಂದ ಮದ್ವಿ ಆಗಿಲ್ಲ ; ಆದರ ನಿನ್ನ ಹೊಟ್ಟ್ಯಾಗ ಪಿಂಡ ಬೆಳ್ಯಾಕತ್ತದ ! ಇದ ಹೆಂಗ ? ಮೂರ ತಿಂಗ್ಳಾದ್ರೂ ನೀ ಯಾಕ ಸುಮ್ಮನಿದ್ದೀ ? ಹಂಗ ನೋಡಿದ್ರ ಋತುಚಕ್ರದಾಗ ಒಂದೆರಡ ಪಾಳಿ ತಪ್ಪಿದ ಮ್ಯಾಲಾದ್ರೂ ನೀ ಒಂದಿಷ್ಟ ವಿಚಾರ ಮಾಡ್ಬೇಕಿತ್ತಲಾ ? ಆದರ ನೀ ಹಂಗ ಮಾಡಿಲ್ಲ ! ಖರೇ ಹೇಳ, ಇದೆಲ್ಲ ಭಾನಗಡಿ ಯಾರ್ದು ?”
ದ್ರೌಪದಿಗೆ ದುಃಖ ಒತ್ತರಿಸಿ ಬಂತು ! ಆಕೆ ಮುಳು ಮುಳು ಅಳುತ್ತಲೇ ಕತೆ ಹೇಳತೊಡಗಿದ್ದಳು !
“ಸರ್, ಇದೆಲ್ಲಾ ನಮ್ಮ ಮಾಮಾ ಮಾಡಿದ ಭಾನಗಡಿನ ! ನಮ್ಮ ಅಕ್ಕಾ ಡೆಲಿವರೀ ಸಲ್ವಾಗಿ ತೌರ್ಮನಿಗಿ ಹ್ವಾದ ಮ್ಯಾಲ, ಮಾಮಾನ ಹೊಟ್ಟೀದ ಹಾಲ್ ಆಗ್ಬಾರ್ದಂತ ನಮ್ಮ ಅಪ್ಪ ನನ್ನ ತಂದು ಇಲ್ಲಿಟ್ರು. ನಮ್ಮ ಮಾಮಾನ ಮ್ಯಾಲ, ನಮ್ಮ ಮನ್ಯಾವರ್ದು ಭಾಳಂದ್ರ ಭಾssಳ ವಿಶ್ವಾಸ ಇತ್ತು ! ಇವರ ಮಾರಾಜಾ ಅದಾರ ಅಂದ ಮ್ಯಾಲ ನಂಬ್ಕಿ ಇಡೂಲ್ಲದ ಏನ ಮಾಡ್ತಾರು ಹೇಳ್ರ್ಯಲ್ಲ ? ಆದರ ಮನಿಯೊಳಗ ನಮ್ಮಿಬ್ಬರ ನಡುವ ಪ್ರೇಮದ ರಂಗ ಹರದಾಡಿತು ! ಮನಿಯೊಳಗ ಇರಾವ್ರ ನಾವಿಬ್ರ ! ಹೊಲಕ್ಕ ಹೋಗಿ ಬಂದ ಇವ್ರು ನನ್ನ ಹಂತ್ಯಾಕ ಕರೀತಿದ್ರು ! ಎಣ್ಣಿ ಹಚ್ಚಿ ಮೈ ಮಾಲೀಸ್ ಮಾಡಾಕ ಹೇಳ್ತಿದ್ರು ! ತಲಿ ನೋಸಾಕತ್ತೇತಿ ಒರ್ಸು ಅಂತಿದ್ರು ! ನಾ ಬ್ಯಾರೆ ಏನೂ ವಿಚಾರ ಮಾಡೂಲ್ಲದ ಭಾಳ ವಿಶ್ವಾಸದಿಂದನ ಮಾಡತಿದ್ನಿ. ಆದರ ಸಾವಕಾಶ ನಮ್ಮ ಮಾಮಾ ಸಮತೋಲನ ಕಳ್ಕೊಂಡ್ರು ! ಗೊತ್ತಾಗದಂಗ ನನ್ನ ಹಾಸಿಗೀಗಿ ಎಳೆದ್ರು ! ನಾನೂ ಹರೇದ ಹುಡುಗಿ ! ನನ್ನ ವಿರೋಧ ಭಾಳ ದಿನ ಉಳಿಲಿಲ್ಲ ! ಹರೇದ ನನ್ನ ಮೈಯ್ಯಾಗನೂ ಹಸವ ಇತ್ತು ! ಪ್ರಕೃತಿ ನಿಯಮ ಮೀರಾಕ ಆಗದಿಲ್ಲ ! ಹಸವ ಹೆಚ್ಚಾತು ! .... ಮತ್ತ ಬ್ಯಾರೆ ಏನ ಆಗ್ತೇತಿ ಹೇಳ್ರ್ಯಲಾ ? ಏನ ಆಗಬಾರ್ದಿತ್ತಲಾ ಅದss ಆತು ! ಮೊದಲ ಸಲಾ ನನಗ ಕಾಂಡೋಮ್ ತೋರ್ಸಿ ಇದರಿಂದ ಹೊಟ್ಟೀಲಿ ಆಗೂದಿಲ್ಲ ಅಂತ ಮಾಮಾ ಹೇಳತ್ತಿದ್ರು ! ಇಬ್ರಿಗೂ ಸುಖಾ ಸಿಗಾಕತ್ತಿತ್ತು ! ನಾ ಮೋಹದ ಬಲ್ಯಾಗ ಬಿದ್ದೇನಿ ಅನ್ನೂ ಖಬರss ಇರ್ಲಿಲ್ಲ ! ಒಂದೆರಡಲ್ಲ ಭಾssಳ ರಾತ್ರಿಗೋಳು ಮೈ ಸುಖದಾಗ ಕಳದ ಹ್ವಾದೂ ! ಕಾಂಡೋಮ್‍ದಿಂದ ಯಾವ ತೊಂದ್ರೀನೂ ಇಲ್ಲ ಅಂತ ನನ್ನ ಗೆಳತ್ಯಾರ ಹೇಳೂದ ಕೇಳಿದ್ನಿ ! ಹಿಂಗಾಗಿ ದಿನ್ನಾ ಮೈ ಸುಖಾ ನಂಗೂ ಬೇಕ ಅನ್ನಸತಿತ್ತು ! ಆದರ ಆ ಸುಖದಾಗ ಕಾಂಡೋಮ್ ಏತ್ಯೋ ಇಲ್ಲೋ ತಿಳಿಲಾರ್ದ ಮೈ ಮರತ್ನಿ ! ಸುಖದಾಗ ಮೈ ಮರಿತಿದ್ರ ಫಲಾನ ಈ ಹೊಟ್ಟಿ !
ಸರ್, ಈಗ ಈ ಮಾಮಾ ನನ್ನೂ ಮದ್ವಿ ಆಗ್ತೇನು ಅಂತಾರು ! ಇಬ್ರನೂ ಖುಷಿಲೇ ಇಡ್ತೇನಿ ಅಂತಾರು ! ಈಗ ನೋಡ್ಯರ ಮಾಟಾ-ಮಂತ್ರ ಮುಂದ ಮಾಡಿ ತಾ ಬಚಾವ್ ಆಗಾಕ ನೋಡಾಕತ್ತಾರು ! ನನ್ನ ಈ ನರಕದಿಂದ ಪಾರ ಮಾಡ್ರಿ ಸರ್ ! ಇಲ್ಲಂದ್ರ ನಾ ಕೇರೀನೋ ಬಾಂವಿನೋ ನೋಡ್ಕೋಬೇಕಾಗ್ತೇತಿ ! ನಂಗ ಬ್ಯಾರೆ ಹಾದಿ ಇಲ್ಲ ... !”
*****
ಡಾ. ಸರನೋಬತ್‍ನಿಗೆ ನಡೆದಿರುವುದು ಏನು ಎಂಬುದು ಪಕ್ಕಾ ಗೊತ್ತಾಗಿ ಹೋಗಿತ್ತು ! ಆದರೆ ಮುಂದಿನ ದಾರಿ ಏನು ಎಂಬುದು ತಿಳಿಯಲಿಲ್ಲ ! ಆತ ನಾರಾಯಣರಾವ್‍ನನ್ನು ಒಳಗೆ ಕರೆಯಿಸಿದ.
“ನಾರಾಯಣರಾವ್, ಮಹಾರಾಜರ್ಹಂಗ ಸೋಂಗ ಹಾಕಿ ಮಾಟಾ-ಮಂತ್ರ ಮುಂದ ಮಾಡಿ ನೀವ್ ಭಾssಳ ಮೋಸಾ ಮಾಡೇರಿ ! ಪುಣ್ಯಕರ್ಮಕ್ಕ ಬೆನ್ನೆಲಬಾಗಿ ನಿಲ್ಲಬೇಕಾದ ನೀವss ಮಹಾರಾಜರ್ಹಾಂಗ ಸೋಂಗ ಹಾಕಿ ಭಾಳ ಕೆಟ್ಟ ಪಾಪಾ ಮಾಡೇರಿ ! ಈ ಹುಡ್ಗಿ ಹೊಟ್ಟ್ಯಾಗಿರೂ ಗಂಟು ಯಾರೋ ಮಾಟಾ ಮಾಡಿಸಿದ್ದಲ್ಲ ; ಅದು ನೀವss ಮಾಡಿದ ಪಾಪದ ಫಲಾ ! ಖರೇ ಹೇಳ್ಬೇಕಂದ್ರ ನಿಮ್ಮ ಹರಕತ್ತ ಕಂಡು ನನಗ ಹೇಸ್ಗಿ ಅನ್ನಿಸ್ಲಿಕ್ಕತ್ತದ ! ಭ್ರೂಣ ಹತ್ಯಾ ಮಹಾಪಾಪ ; ಆ ಪಾಪಾ ಮಾಡಂತ ನನಗ ಹೇಳ್ಕಲಿಕ್ಕತ್ತೀರಿ ? ನಿಮ್ಮ ಮಹಾರಾಜಗಿರಿಗಿ ಏನ ಅನ್ನಬೇಕೋ ತಿಳೀವಲ್ದು. ಈಗ ಸರಳ ನೀವ್ ಇಲ್ಲಿಂದ ಜಾಗಾ ಮಾಡ್ರಿ. ಇಲ್ಲಂದ್ರ ಪೋಲೀಸ್‍ರ್ನ ಕರ್ಸಬೇಕಾದೋತು !”
ಪೋಲೀಸು ಎಂಬ ಮಾತು ಕೇಳಿದ ತಕ್ಷಣ ನಾರಾಯಣನ ಮೈಯಿಂದ ನೀರು ಇಳಿಯತೊಡಗಿತು ! ಆತ ಲಗುಬಗೆಯಿಂದ ದ್ರೌಪದಿಯನ್ನು ಕರೆದುಕೊಂಡು ಆ ಆಸ್ಪತ್ರೆಯಿಂದ ಪಚಾರಾದ !
*****
ದ್ರೌಪದಿ ಹಠ ಹಿಡಿದು ಕುಳಿತ್ತಿದ್ದಳು !
“ನೀ ನಿರೋಧ ಹಾಕ್ಕೊಂಡ ಮ್ಯಾಲೂ ಇದ ಹ್ಯಾಂಗ ಆತು ? ಇದಕ್ಕ ಇನ್ನ ಉಳದಿರೋ ಹಾದಿ ಒಂದss ಒಂದ ; ಆತ್ಮಹತ್ಯೆ ! ಆದರ ಆತ್ಮಹತ್ಯಾ ಮಾಡ್ಕೊಳ್ಳಾಕೂ ಧೈರ್ಯಾ ಬೇಕಾಗ್ತೇತಿ. ಆ ಧೈರ್ಯಾನೂ ನಂಗಿಲ್ಲ ! ಇನ್ನ ನಿನ್ನ ಉಸಾಬರಿ ಸಾಕು. ನಾ ನಿನ್ನ ಬಿಟ್ಟ ಹೋಗ್ತೇನಿ”
ಸಿಟ್ಟಿನಿಂದ ಒಂದೇ ಸಮನೇ ಬೈಯ್ಯುತ್ತಲೇ ಇದ್ದ ದ್ರೌಪದಿ ಅದೇ ದಿನ ತನ್ನ ತವರಿಗೆ ಹೊರಟು ಹೋದಳು !
*****
ದ್ರೌಪದಿ ಹುಚ್ಚಿಯಂತಾಗಿದ್ದಳು !
ಅನ್ನ-ನೀರು-ನಿದ್ದೆಯ ಮೇಲಿನ ಆಕೆಯ ಲಕ್ಷ್ಯ ಹಾರಿ ಹೋಗಿತ್ತು ! ಕಾಲ ಉರುಳಿದಂತೆ ಆಕೆಯ ಪ್ರಕೃತಿ ಬಿಗಡಾಯಿಸತೊಡಗಿತ್ತು ! ಬರುಬರುತ್ತ ಆಕೆ ಯಾರೊಂದಿಗೂ ಮಾತನಾಡದೇ ಮೌನಿಯಾಗಿರತೊಡಗಿದಳು ! ನಿಜವಾಗಿ ಮೂಕಿಯೇ ಆದಳು ! ಆಕೆಯನ್ನು ಮಾತನಡಿಸುವ ಪ್ರಯತ್ನದಲ್ಲಿ ತಂದೆ-ತಾಯಿ ಸೋತು ಹೋದರು !
‘ಹೇಗೆ ಹೇಳಬೇಕು ?’
‘ಏನು ಹೇಳಬೇಕು ?’
‘ತಂದೆ-ತಾಯಿ ಏನು ತಿಳಿದುಕೊಳ್ಳಬಹುದು ?’
‘ಅಕ್ಕ ಸುಮ್ಮನಿರುತ್ತಾಳೆಯೇ ?’
ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಪೇಚಿನಲ್ಲಿ ದ್ರೌಪದಿ ಸಿಲುಕಿಕೊಂಡಿದ್ದಳು !
ಅತ್ತ ದರಿ ; ಇತ್ತ ಪುಲಿ !
ತುಂಬ ಪ್ರಯತ್ನದ ನಂತರ ಆಕೆ ಮೌನವನ್ನು ಮುರಿದಳು !
ಅಳಿಯನ ಅಯೋಗ್ಯತನ ಕೇಳಿ ತಂದೆ-ತಾಯಿಯ ತಲೆ ಗಿಮಿಗಿಮಿ ತಿರುಗತೊಡಗಿತ್ತು ! ಅವರು ಮೂರ್ಚೆ ಬೀಳುವುದೊಂದೇ ಬಾಕಿ ಇತ್ತು ! ಇದರಿಂದ ಹೇಗೆ ಪಾರಾಗಬೇಕು ಎಂಬ ಚಿಂತೆ ಅವರನ್ನು ಆವರಿಸಿಕೊಂಡು ಹಿಂಡಿ ಹಿಪ್ಪಿ ಮಾಡಿತ್ತು ! ಆದರೆ ಯಾವ ಹಾದಿಗಳೂ ಅವರ ಮುಂದೆ ಸುರಳಿತವಾಗಿ ತೆರೆದುಕೊಳ್ಳಲಿಲ್ಲ ! ಹಾಗೆ ಹೀಗೆ ಮಾಡಿ ಕೊನೆ ಅವರೊಂದು ನಿರ್ಧಾರಕ್ಕೆ ಬಂದರು ;
ದ್ರೌಪದಿಯನ್ನು ನಾರಾಯಣನಿಗೇ ಮದುವೆ ಮಾಡಿಕೊಡಬೇಕು !
*****
ದ್ರೌಪದಿ ಭಿಡೆ ಬಿಟ್ಟೇ ಹೇಳಿದಳು ;
“ಮಾಮಾ ನನ್ನ ಜೋಡಿ ಲಗ್ನಾ ಮಾಡ್ಕೋತೇನಿ ಅಂತ ಆಣೀ ಮಾಡ್ಯಾಣು ! ಅಂವ್ನ ಜೋಡೀನ ನಾ ಸಂಸಾರ ಮಾಡಾಕಿ. ಯಾವದರ ಗುಡ್ಯಾಗ ಯಾಕಾಗವಲ್ದು ನಮ್ಮ ಲಗ್ನಾ ಮಾಡ್ಸರಿ. ಲಗ್ನಾ ಆದ್ರ ಎಲ್ಲಾ ಚೊಲೋ ಆಗ್ತೇತಿ”
ತನ್ನ ಅಳಿಯನನ್ನು ಕರೆಯಿಸಿಕೊಂಡು ಯಾರಿಗೂ ಗೊತ್ತಾಗದಂತೆ ವೈಜನಾಥ ದೇವಾಲಯದಲ್ಲಿ ಮದುವೆ ಮಾಡಿ ಬಿಡಬೇಕು ಎಂದು ಆಕೆಯ ಅಪ್ಪನೂ ನಿರ್ಧರಿಸಿದ !
ಆದರೆ ಮಂಜುಳಾ ?
ಮಂಜುಳಾ ವಿರೋಧಿಸಿದಳು !
“ನನ್ನ ತಂಗೀನ ಸಂವತಿ ಅಂತ ನಾ ಹೆಂಗ್ ಒಪ್ಕೊಳ್ಲಿ ? ಇಷ್ಟ ದಿವಸ ಅಕ್ಕಾ-ತಂಗಿ ಅಂತ ಪ್ರೀತಿಲೇ ಬದಕೇವಿ. ಈಗ ಸಂವತೇರ ಆಗಿ ಬದಕಬೇಕೇನ ? ಸಂವತಿ ಅಂದ್ರ ಮನ್ಯಾಗ ಜಗಳ ಆಗೇ ಆಗ್ತಾವ ! ನಾ ಈ ಲಗ್ನಕ ಒಪ್ಪೂದಿಲ್ಲ ತಿಳ್ಕೋರಿ”
ಮಂಜುಳಾ ಮಾತು ಕೇಳಿದ ಮೇಲೆ ನಾನಾ ಪರಿಯಿಂದ ಆಕೆಯನ್ನು ಸಮಾಧಾನಿಸಿ, “ಸಧ್ಯ ಇರೋದ ಇದೊಂದ ಹಾದಿ. ಇಲ್ಲಂದ್ರ ಎರಡೂ ಮನೆತನಗಳ ಮಾನ-ಮರ್ಯಾದೆ ಹರಾಜಾಗ್ತೇತಿ” ಎಂದಾಗ ಆಕೆ ಗತ್ಯಂತರವಿಲ್ಲದೆ ಹ್ಞೂಂಗುಟ್ಟಿದಳು !
*****
ಅಳಿಯ ನಾರಾಯಣನನ್ನು ಊರಿಗೆ ಕರೆಯಿಸಲಾಯಿತು !
ಆತನ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ಆತನಿಂದಲೇ ಆದ ಈ ಹಲ್ಕಾ ಕೆಲಸಕ್ಕಾಗಿ ಜಗಳಾ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿ ಹೇಳಿದರು !
ನಾರಾಯಣ ತಿರುಗಿ ಬಿದ್ದ !
ಎಲ್ಲವನ್ನೂ ಕೇಳಿದ ಆತನಿಗೆ ಒಂದುಕ್ಷಣ ಒಳ್ಳೆಯದೇ ಆಯಿತು ಎನಿಸಿದರೂ ಮಹಾರಾಜ ಮಂಡಳಿಯಲ್ಲಿ ತನಗೆ ಸ್ಥಾನಮಾನ ಸಿಗಲಾರದು ; ಅದರಿಂದ ತಾನು ದೂರ ಉಳಿಯಬೇಕಾಗುತ್ತದೆ ಎಂದುಕೊಂಡ. ಆತನ ಕಪಟ ಸಂತತನ ಜಾಗೃತವಾಗಿತ್ತು. ತನ್ನದೇನೂ ತಪ್ಪಿಲ್ಲ ಎಂದು ವಾದಿಸತೊಡಗಿದ !
“ನೀವೇನ ಆಟಾ ಸುರು ಮಾಡೇರಿ ? ನಿಮ್ಮ ಮಗ್ಳ ಎಲ್ಲಿ ಸೆಗಣಾ ತಿಂದ ಬಂದಾಳೋ ಯಾರ್ಗಿ ಗೊತ್ತ ! ಆಕೀ ಮಾತ ಕೇಳಿ ನೀವ್ ಆ ಸೆಗಣಾ ನನ್ನ ಮ್ಯಾಲ ಚೆಲ್ಲೂ ವಿಚಾರ ಮಾಡೇರಿ ? ಜನಕ್ಕ ಅಂಜದಿದ್ರೂ ಮನಕ್ಕಾದ್ರೂ ಅಂಜಬೇಕಲಾ ! ನನ್ನ ಮ್ಯಾಲ ಇಲ್ಲದ ಆರೋಪ ಹೊರ್ಸಬ್ಯಾಡ್ರಿ. ಯಾರ ಮುಂದಾರ ಇದ್ನ ಹೇಳ್ಯರ ಕೇಳಿದೋರು ನನ್ನ ಮುಖಕ ಸೆಗಣಿ ಬಳದಾರಲಾ ! ಇದರಾಗ ನನ್ನ ಸೇರ್ಸಕೋಬ್ಯಾಡ್ರಿ. ಮುಂದ ನನ್ನ ಏನೂ ಕೇಳಬ್ಯಾಡ್ರಿ. ಏನ್ ಮಾಡ್ಕೋತಿರೋ ಮಾಡ್ಕೋರಿ”
ಅವಸರ ಅವಸರವಾಗಿಯೇ ಎಲ್ಲವನ್ನೂ ಒದರಿ ತರತುರಿಯಲ್ಲೇ ಆತ ಅಲ್ಲಿಂದ ಹೊರಟು ಹೋದ !
ಈಗ ಮಾತ್ರ ಕುಟುಂಬ ಮೇಲೆ ಆಕಾಶವೇ ಹರಿದು ಬಿದ್ದಂತಾಯಿತು ! ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದ ಹುಮ್ಮಸ್ಸು ಕರಗಿ ದುಸುಮುಸುಗಳು ಆರಂಭವಾದವು !
*****
ಇದ್ದಕ್ಕಿದ್ದಂತೆ ಒಂದು ದಿನ ಮನೆಯಲ್ಲಿ ಹಾಹಾಕಾರವೇ ಎದ್ದಿತು !
ಬೆಳಗಾಗಿ ತುಂಬ ಹೊತ್ತದರೂ ದ್ರೌಪದಿ ಎದ್ದಿಲ್ಲ ಎಂದುಕೊಂಡು ಮನೆಯವರು ಬಾಗಿಲು ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದರು. ಆದರೆ ತುಂಬ ಹೊತ್ತು ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ! ಗಾಭರಿಯಾದ ಮನೆಯವರು ಬಾಗಿಲು ಮುರಿದು ಒಳಹೊಕ್ಕರು !
ದ್ರೌಪದಿ ಹೆಣವಾಗಿ ಮಲಗಿದ್ದಾಳೆ !
ಅಸ್ತವ್ಯಸ್ತಗೊಂಡ ಆಕೆಯ ದೇಹ ಒದ್ದಾಡಿ ಒದ್ದಾಡಿ ಹೆಣವಾಗಿದೆ ! ಮನೆಯಲ್ಲಿದ್ದ ಕೀಟನಾಶಕ ಔಷಧಿಯ ಡಬ್ಬಿ ಅಲ್ಲೇ ಪಕ್ಕದಲ್ಲಿ ಉರುಳಿ ಬಿದ್ದಿತ್ತು !
ಇಡೀ ಮನೆ ರೋಧಿಸತೊಡಗಿತು !
ಅಕ್ಕಪಕ್ಕದವರು ಸೇರಿದರು. ತಮ್ಮ ಮನೆಯ ಮಾನ ಉಳಿಸಿಕೊಳ್ಳಲು ಹಾರ್ಟ್ ಅಟ್ಯಾಕ್ ಆಗಿ ತನ್ನ ಮಗಳು ತೀರಿಕೊಂಡಿದ್ದಾಳೆ ಎಂದು ತಂದೆ-ತಾಯಿ ಹೇಳಿಕೊಂಡು ಅತ್ತರು !
ಮನೆಯ ಮಾನವೇನೋ ಉಳಿಯಿತು !
ಬಂಗಾರದಂಥ ಮಗಳು ಬದುಕುಳಿಯಲಿಲ್ಲ !
ದ್ರೌಪದಿ ಸಹಜವಾಗಿ ಸಾಯದೇ ಮಹಾರಾಜ ಅನ್ನಿಸಿಕೊಂಡ ನಾರಾಯಣನ ಹಲ್ಕಟ್ ಕೆಲಸದಿಮದ ಹೆಣವಾಗಿದ್ದಳು !
ಹೊರಜಗತ್ತಿಗೆ ಇದು ತಿಳಿಯಲೇ ಇಲ್ಲ ! ನಾರಾಯಣ ಮಹಾರಾಜನ ಸಂತತನ ಅಭಾದಿತವಾಗಿ ಮುಂದುವರಿಯಿತು !
ನಾರಾಯಣನಂತಹ ಸೋಗಲಾಡಿ ಜನರನ್ನು ಕಂಡೇ ಸಂತ ತುಕಾರಾಮ ಒಂದು ಹೇಳುತ್ತಾನೆ;
‘ತುಕಾನ ಮಾತಿದು ಇಂಥ ನರರನ್ನು
ಚಪ್ಪಲಿಯಿಂದ ಹೊಡೆಯಬೇಕು !’

sir, good one in a typical belgaavi kannada.
ReplyDelete