ಮೂಲ ಮರಾಠಿ : ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ_____________________________________________________________________________
ಶಾಂತಾಬಾಯಿ !
ಗಂಡ, ಅಪಘಾತದಲ್ಲಿ ತೀರಿಕೊಂಡ ಮೇಲೆ ವಿಧವೆಯಾದ ಆಕೆಯ ಮಡಿಲಲ್ಲಿ ಚಿಕ್ಕ ಚಿಕ್ಕ ಮೂರು ಮಕ್ಕಳಿದ್ದವು ; ಬದುಕು ನಡೆಸಲು ಏನೂ ಇರಲಿಲ್ಲ !
ಮಾಡುವುದಾದರೂ ಏನು ?
ಶಾಂತಾಬಾಯಿ ನೋವಿನಲ್ಲೂ ಸ್ಥೈರ್ಯ ಕಳೆದುಕೊಳ್ಳಲಿಲ್ಲ.
ಅಸಹಾಯಕತೆಯಿಂದ ಅಳಲಿಲ್ಲ ; ಎದೆಗುಂದಲಿಲ್ಲ.
ಗುಬ್ಬಿಯಂತಹ ಮೂರು ಮಕ್ಕಳಿಗಾಗಿ ಆಕೆ ತುಂಬು ಧೈರ್ಯದಿಂದಲೇ ಎದೆ ಮೇಲೆ ಎಗರಿ ಬಿದ್ದಿದ್ದ ಪರಿಸ್ಥಿತಿಯನ್ನು ನಿಭಾಯಿಸಿದಳು.
ಗಂಡನ ಸಾವು ಎಂದರೆ ಹೆಣ್ಣಿನ ಬಾಳಿನ ಮೇಲೆ ಬಿದ್ದ ಸಂಕಟದ ಗುಡ್ಡವೇ ಸರಿ. ಆದರೆ ತನ್ನ ಮಕ್ಕಳನ್ನು ಬೆಳೆಸಲು, ಪಾಲಿಸಲು ಆ ಸಂಕಟದ ಗುಡ್ಡವೇ ಶಾಂತಾಬಾಯಿಗೆ ಶಕ್ತಿ ನೀಡಿದಂತಿತ್ತು !
ಏನಾದರೂ ಸರಿ ; ತನ್ನ ಬಳ್ಳಿಯ ಹೂಗಳು ಅರಳಲೇ ಬೇಕು ಎಂಬ ಹಠವನ್ನು ಮನದಲ್ಲಿ ತುಂಬಿಕೊಂಡ ಆಕೆ ಬದುಕಿ ತೋರಿದಳು.
ವೊದಲಿಗೆ ಕಾಯಿಪಲ್ಲೆ ಮಾರುವ ಕಾಯಕ ಮಾಡತೊಡಗಿದಳು. ಮುಂಗಡ ಹಣವಿಲ್ಲದೆ ಕಾಯಿಪಲ್ಲೆ ದೊರೆಯುತ್ತಿತ್ತು. ಜನಸಂಚಾರದ ಹಾದಿಯ ಬದಿಗೆ ಕುಳಿತು ಕಾಯಿಪಲ್ಲೆ ಮಾರಬಹುದು ; ಬಾಡಿಗೆ ಅಂಗಡಿಯ ಅವಶ್ಯಕತೆಯೇ ಇಲ್ಲ ! ಆಕೆ ನೋವನ್ನೆಲ್ಲ ಮರೆತು ಮನಸಿಟ್ಟು ದುಡಿದು ಮಕ್ಕಳನ್ನು ಬೆಳೆಸತೊಡಗಿದಳು !
ಶಾಂತಾಬಾಯಿ ಹೆಚ್ಚು ಕಲಿತವಳಲ್ಲ. ಆದರೆ ಶಿಕ್ಷಣವೇ ಮನುಷ್ಯ ಬದುಕಲು ಅಸ್ತ್ರವಾಗುತ್ತದೆ ಎಂಬ ಅರಿವು ಆಕೆಯಲ್ಲಿತ್ತು ! ಕ್ರಾಂತಿದೀಪ ಸಾವಿತ್ರಿಬಾಯಿ ಫುಲೆಯ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದಳು. ಕಷ್ಟಗಳ ಸುರಿಮಳೆಯೇ ಸುರಿದರೂ ಕೂಡ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ; ಉನ್ನತವಾದ ಸರಕಾರಿ ಹುದ್ದೆ ದೊರೆಯಬೇಕು ಎಂದು ಆಕೆ ಪಣ ತೊಟ್ಟಳು. ಮಕ್ಕಳಿಗೂ ಕೂಡ ಆಕೆ ಯಾವಾಗಲೂ ಇದನ್ನೇ ಹೇಳುತ್ತಿದ್ದಳು. ಗುರಿ ತಲುಪಲು ಬೇಕಾದ ಬಲವನ್ನು ಅವರಲ್ಲಿ ತುಂಬುತ್ತಿದ್ದಳು. ಹಂಬಲದ ಹುಚ್ಚಿನಲ್ಲಿಯೇ ಬೆವರು ಹರಿಸಿ ದುಡಿಯತೊಡಗಿದ್ದಳು. ತನ್ನ ಭವ್ಯವಾದ, ದಿವ್ಯವಾದ ಕನಸನ್ನು ನನಸಾಗಿಸಿಕೊಳ್ಳಲು ಆಕಾಶ-ಭೂಮಿಗಳೆರಡನ್ನೂ ಒಂದು ಮಾಡುವ ಉಮೇದು ಆಕೆಯಲ್ಲಿತ್ತು.
ಆಕೆಯ ಮಕ್ಕಳಾದರೂ ಆಕೆಯ ಹಂಬಲದಂತೆಯೇ ಬುದ್ಧಿವಂತರಾಗಿಯೇ ಬೆಳೆದರು. ಆ ಮೂರೂ ಮಕ್ಕಳು ಉನ್ನತ ಶಿಕ್ಷಣ ಪಡೆದುದರಿಂದ ಶಾಂತಬಾಯಿಯ ಕಷ್ಟಗಳು ಕರಗಿ ಹೋಗಿ ಸುಖದ ಸಂಭ್ರಮ ಗೂಡು ಕಟ್ಟುತ್ತಿತ್ತು.
ಹಿರಯ ಮಗ ಪ್ರಲ್ಹಾದ ಇಂಜಿನೀಯರ್ ಆಗಿ ಬೆಳಗಾವಿ ಬಿಟ್ಟು ಮುಂಬಾಯಿ ಸೇರಿಕೊಂಡು ಸರಕಾರಿ ಹುದ್ದೆ ಗಳಿಸಿದ. ಎರಡನೆಯ ಮಗ ಪ್ರಕಾಶನೂ ಬಿ.ಕಾಂ. ಪದವೀಧರನಾಗಿ ಮುಂಬಾಯಿಯ ಬ್ಯಾಂಕಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಬೆಳಗಾವಿಯನ್ನು ಬಿಟ್ಟ. ಮೂರನೆಯ ಮಗ ವಿನಾಯಕ ಬಿಜಿನೆಸ್ದಲ್ಲಿ ಆಸಕ್ತಿವಹಿಸಿ ಬೆಳಗಾವಿಯ ಒಂದು ಸೂಕ್ತ ಜಾಗದಲ್ಲಿ ಹೊಟೇಲು ಆರಂಭಿಸಿದ.
*****
ಒಂದು ಕಾಲದಲ್ಲಿ ರೊಟ್ಟಿಯ ತುಣುಕಿಗಾಗಿ ಹಪಹಪಿಸುತ್ತಿದ್ದ ತನ್ನ ಮೂರೂ ಮಕ್ಕಳು ಇಂದು ಹಣದ ರಾಶಿಯ ಮೇಲೆ ರಾಜ್ಯ ಮಾಡುವುದನ್ನು ಕಂಡು ಶಾಂತಾಬಾಯಿಯ ಜೀವ ತೃಪ್ತಗೊಂಡಿತು. ಒಂದು ಕಾಲದಲ್ಲಿ ಎಲ್ಲಿಯಾದರೂ ಸಹಾಯ ಬೇಡಿಯಾಳು ಎಂದು ಶಾಂತಾಬಾಯಿಯಿಂದ ದೂರ ಓಡುತ್ತಿದ್ದ ಸಂಬಂಧಿಕರು ಈಗ ಆಕೆಯ ಆಸುಪಾಸಿನಲ್ಲೇ ಸುತ್ತಾಡತೊಡಗಿದ್ದರು ! ಮೇಲಿಂದ ಮೇಲೆ ಆಕೆಯ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲು ಬರತೊಡಗಿದ್ದರು ! ಸೊಸೆಯಂದಿರನ್ನು ಯಾವಾಗ ತರುತ್ತಿ ಎಂದೂ ಕೇಳತೊಡಗಿದರು ! ಮಕ್ಕಳ ಮುಂದೆ ಶಾಂತಾಬಾಯಿ ಮದುವೆಯ ಪ್ರಸ್ತಾಪ ಮಾಡಿದಾಗ, ಈ ಮುರುಕು ಮನೆಗೆ ಯಾರು ಹೆಣ್ಣು ಕೊಡುತ್ತಾರೆ ; ವೊದಲು ಹೊಸಮನೆ ಕಟ್ಟೋಣ, ಆಮೇಲೆ ಮದುವೆ-ಗಿದುವೆ ಎಲ್ಲ ಎಂದರು !
*****
ಮೂರೂ ಮಕ್ಕಳು ಸೇರಿ, ತಮ್ಮ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಮೂರು ಅಂತಸ್ತಿನ ಅದ್ಭುತವಾದ ಮಹಲನ್ನು ಕಟ್ಟಿಸಿದರು. ಚೆಲುವೆಯರಾದ ಸೊಸೆಯಂದಿರು ಮನೆ ತುಂಬಿದರು. ಮನೆ ನಂದನವಾಗಿ ನಲಿಯತೊಡಗಿತ್ತು !
ಆದರೆ ಮುಂದೆ ನಡೆದದ್ದು ಮಾತ್ರ ಘೋರವಾದದ್ದು ! ಎಣಿಸಿದಂತೆ ಯಾವುದೂ ಆಗುವುದಿಲ್ಲ ! ಮದುವೆಯ ಸಲುವಾಗಿ ಎರಡೆರಡು ತಿಂಗಳು ರಜೆ ಹಾಕಿ ಬಂದ ಪ್ರಲ್ಹಾದ ಮತ್ತು ಪ್ರಕಾಶರಿಗೆ ರಜೆ ಯಾವಾಗ ಮುಗಿಯುತ್ತದೆಯೋ ಎನಿಸತೊಡಗಿತ್ತು ! ಯಾಕೆಂದರೆ ಬಡತನದ ಅರಿವಿನ ಶಾಂತಾಬಾಯಿಯ ಕಟ್ಟುನಿಟ್ಟು ಹೊಸದಾಗಿ ಮನೆ ಸೇರಿದ ಸೊಸೆಯಂದಿರಿಗೆ ಇರುಸು-ಮುರುಸು ಉಂಟು ಮಾಡುತ್ತಿತ್ತು !
ಕಿರಿಯ ಮಗ ವಿನಾಯಕನ ಹೆಂಡತಿಯಂತೂ ಹೋಯ್ಮಾಲಿಯೇ ಆಗಿದ್ದಳು ! ಇಂದಲ್ಲ ನಾಳೆ, ಇಬ್ಬರೂ ಮೈದುನರು ಮುಂಬಾಯಿಗೆ ತಮ್ಮ ತಮ್ಮ ಹೆಂಡತಿಯರೊಂದಿಗೆ ಹೊರಟು ಬಿಡುತ್ತಾರೆ ; ಇಲ್ಲಿ ತಾನೊಬ್ಬಳೇ ಈ ಮುದುಕಿಯ ಕಷ್ಟವನ್ನು ಸಹಿಸಬೇಕಾಗುತ್ತದೆ ಎಂಬುದು ಆಕೆಯ ಒಳಗುದಿಯಾಗಿತ್ತು ! ಮುದುಕಿಯನ್ನು ತಾನೊಬ್ಬಳೇ ನೋಡಿಕೊಳ್ಳಬೇಕಾಗುತ್ತದೆ ಎಂದುಕೊಂಡ ಆಕೆ ಗಂಡನ ಹತ್ತಿರ ತಕರಾರು ಎತ್ತಿದಳು. ಹಿರಿಯರಿಬ್ಬರೂ ಕಿರಿಯ ತಮ್ಮನನ್ನು ಬೆಂಬಲಿಸಿದರು. ಮುಂಬಾಯಿಗೆ ಮರಳುವ ಮುಂಚೆ ಬೇರೆಯಾಗುವ ಮಾತುಗಳನ್ನು ಸೊಸೆಯಂದಿರು ವಿನಿಮಯ ಮಾಡಿಕೊಂಡರು ! ಹೆಂಡತಿಯರ ಗುಂಗಿನಲ್ಲಿದ್ದ ಶಾಂತಾಬಾಯಿ ಕರುಳ ಕುಡಿಗಳಾಗಿದ್ದ ಆ ಮೂರೂ ಮಕ್ಕಳೂ ತಲೆಕೆಟ್ಟವರಂತೆ ವರ್ತಿಸಿದರು ! ಅವರಿಗೆ ತಮ್ಮ ಅವ್ವ ಎದುರಿಸಿದ ಕಷ್ಟಗಳ ಅರಿವು ಮರೆತು, ಹೆಂಡತಿಯರ ಹೇಳಿಕೆ ಮಾತಿಗೆ ತಲೆಬಾಗಿ ಪಾಲು ಹಂಚಿಕೊಳ್ಳಲು ಸಿದ್ಧವಾದರು !
ಶಾಂತಾಬಾಯಿಗೆ ವೊದವೊದಲು ಈ ಸಂಗತಿ ಒಂದಿಷ್ಟು ನೋವು ನೀಡಿದ್ದು ಸತ್ಯ. ಆದರೆ ಮಕ್ಕಳು ಹೇಗಾದರೂ ಸುಖಿಯಾಗಿದ್ದರೆ ಸಾಕು ಎಂದಿತು ತಾಯಿ ಹೃದಯ ! ಪಾಲು ಹಂಚಿಕೊಳ್ಳಲು ಆಕೆ ಸಮ್ಮತಿಸಿದಳು. ಹಾಗೆ ನೋಡಿದರೆ ಹಿರಿಯ ಮಕ್ಕಳಿಬ್ಬರೂ ನೌಕರಿಯ ನಿಮಿತ್ಯವಾಗಿ ಮನೆಯನ್ನು ಬಿಟ್ಟು ಹೋಗುವವರೇ ಅಲ್ಲವೆ ; ಅದಕ್ಕೆ ಯಾಕೆ ತಕರಾರು ಎಂದುಕೊಂಡ ಆಕೆ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಳು !
*****
ಪಂಚರನ್ನು ಕರೆಯಿಸಲಾಯಿತು !
ಮನೆಯಂತೂ ವೊದಲೇ ಮೂರು ಅಂತಸ್ತಿನದೇ ಆಗಿತ್ತು ! ಮೇಲಿನ ಮಹಡಿ ಹಿರಿಯ ಮಗ ಪ್ರಲ್ಹಾದನ ಪಾಲಾಯಿತು. ನಡುವಿನ ಮಗ ಪ್ರಕಾಶನಿಗೆ ನಡುವಿನ ಮಹಡಿ ಎಂದಾಯಿತು. ಕೆಳಗಿದ್ದ ಮನೆ ಕಿರಿಯ ಮಗ ವಿನಾಯಕನಿಗೆ ಉಳಿಯಿತು. ಹೀಗಾಗಿ ಮನೆ ಪಾಲು ಮಾಡಿಕೊಳ್ಳುವಲ್ಲಿ ಯಾವ ತಕರಾರೂ ಇರಲಿಲ್ಲ.
ಪಂಚರನ್ನು ಕರೆಯಿಸಿದ್ದು ಮನೆ ಪಾಲು ಮಾಡಿಕೊಳ್ಳಲು ಅಲ್ಲ !
ಮುದುಕಿಯಾದ ಶಾಂತಾಬಾಯಿಯನ್ನು ಹೇಗೆ ಹಂಚಿಕೊಳ್ಳಬೇಕು ? ಮುಂಬಾಯಿಯ ಇಬ್ಬರೂ ಸೊಸೆಯಂದಿರು ಅತ್ತೆಯನ್ನು ತಾವಿದ್ದಲ್ಲಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು ! ಕಿರಿಯಾಕೆ ಕೂಡ ತನಗೂ ನಿಭಾಯಿಸುವುದಾಗುವುದಿಲ್ಲ ಎಂದು ಜಾರಿಕೊಂಡಿದ್ದಳು !
“ಹಂಗಾದ್ರ, ವಯಸ್ಸಾದ ಮುದ್ಕಿ ಎಲ್ಲಿರ್ಬೇಕ ಹೇಳ್ರ್ಯಲ್ಲ ?” ಪಂಚರು ಪ್ರಶ್ನೆ ಎಸೆದರು.
ವೊದಲೇ ಮಾತಾಡಿಕೊಂಡಂತೆ ಹಿರಿಸೊಸೆ, “ಅತ್ತಿಯೋರ್ನ ನಾಕನೇ ಮಾಡಿ ಮ್ಯಾಗ ಅಂದ್ರ ಟೆರೆಸ್ ಮ್ಯಾಲ ಇರೂ ರೂಮದಾಗ ಇಟ್ಟರಾಗುದಿಲ್ಲೇನ ?” ಎಂದಾಗ ಉಳಿದಿಬ್ಬರೂ ಸೊಸೆಯಂದಿರು ಸಮ್ಮತಿ ಸೂಚಿಸಿದರು ! ಮೂರೂ ಮಂದಿ ಗಂಡುಮಕ್ಕಳು ಮೌನವಾಗಿಯೇ ತಮಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಿಂತಿದ್ದರು !
“ನೀವ್ ಏನ್ ಅಂತೀರೋ ಪೋರಗೋಳ್ರ್ಯಾ ?” ಪಂಚರು ಮಕ್ಕಳನ್ನೇ ನೇರವಾಗಿ ಕೇಳಿದರು.
“ಅವ್ರ ಹೆಂಗ್ ಹೇಳ್ತಾರೋ ಹಂಗ ಆಗ್ಲಿ” ಮೂವರೂ ‘ಜೀ’ ಎಳೆದರು !
“ಹಂಗಾದ್ರ, ಆ ಮುದ್ಕಿ ಹೊಟ್ಟಿಗಿ-ಬಟ್ಟಿಗಿ ಏನ್ಮಡ್ಬೇಕಂತೇರಿ ?”
“ಅತ್ತೀ ಕಡೀ ಭಾಳ ರೊಕ್ಕ ಇರ್ಬೇಕಲಾ. ಇಲ್ಲದಿರಕ ಮೂರ ಮಕ್ಳಾ ಸಾಕಿ, ಸಾಲಿ ಕಲ್ಸಾಕ ಆಗ್ತಿತ್ತೇನ್ರಿ ? ಇನ್ನೂ ಭಾಳಕೂನೆ ರೊಕ್ಕ ಇರ್ಬೇಕ ಬಿಡ್ರಿ. ನಮ್ಮ ಕಡಿಂದ ಒಂದ ದಮ್ಮಡಿನೂ ಅಕಿಗೂ ಕೊಡಾಕಾಗುದಿಲ್ಲ” ಎಂಬ ಸೊಸೆಯಂದಿರ ಕಟುನುಡಿಗಳನ್ನು ಕೇಳಿದ ಶಾಂತಾಬಾಯಿಗೆ ನೆಲ ನುಂಗಬಾರದೇ ಎನಿಸತೊಡಗಿತು ! ಆದರೆ ಎಂಥದ್ದೇ ಸಂಕಷ್ಟ ಸಂದರ್ಭದಲ್ಲೂ ನೋವನ್ನು ಸಹಿಸಿಕೊಳ್ಳುವ ಶಕ್ತಿ, ಆಕೆಯ ಗಂಡ ತೀರಿಕೊಂಡಾಗಲೇ ಆಕೆಗೆ ಸಿದ್ಧಿಸಿತ್ತು !
ಎಂಥಾ ಕೌರ್ಯ !
ಪಂಚರು ತಮ್ಮ ತಮ್ಮಲೇ ಮಾತಾಡಿಕೊಂಡರು. ಒಂದು ದಿಟ್ಟ ನಿಲುಮೆಯನ್ನು ತಾಳಿದ ಅವರು, ಆ ಗಂಡುಮಕ್ಕಳಿಗೆ ಹೇಳಿದರು, “ಏನ್ರ್ಯಪಾ, ನಿಮ್ಮ ಹ್ಯಾಂತೇರ ಮಾತಾಡ್ತಾರು ; ನೀವ್ ನೋಡ್ಯರ ಕಲ್ಲಿನಗತೆ ಮೂಕಾಗಿ ನಿಂತೇರಿ. ಇದೇನ ಸರಿ ಅಲ್ಲ. ಪಾಪ ಆ ಮುದ್ಕಿ, ನಿಮ್ಮ ಸಲಮಂದ ಎಸ್ಟೊಂದ್ ಕಸ್ಟಾ ಸೋಸ್ಯಾಳ ಅನ್ನೂದ ನಿಮಗೇನ ಅರೀದಲ್ಲ. ಎಲ್ಲಾ ನೋಡ್ಕೊಂಡ ಬೆಳದೇರಿ. ನಿಮ್ಮ ಸಲಮಂದ ರಕ್ತಾ ಬೆವರ ಮಾಡ್ಕೊಂಡ ದುಡದ ಹೆಣ್ಣಮಗಳ ಆಕಿ. ಹಂತಾಕಿಯನ್ನ ನೀವ್ ಟೇರೆಸ್ ಮ್ಯಾಲ ಹಾಕಾಕತ್ತೇರಿ ? ನಿಮಗೇನ ಇದ ಒಪ್ಪೂ ಮಾತ ?”
ಪಂಚರ ಯಾವೊಂದು ಮಾತುಗಳೂ ಆ ಮಕ್ಕಳ ಮೇಲೆ ಯಾವೊಂದು ಪರಿಣಾಮವನ್ನೂ ಬೀರಿದಂತೆ ಕಾಣಿಸಲಿಲ್ಲ !
ಹೇಳಿಕೇಳಿ ನಿರ್ಲಜ್ಜರೇ ಆಗಿದ್ದ ಅವರು ಮಾತನಾಡಲು ಬಾಯಿಯೇ ಇಲ್ಲದವರಂತೆ ನಿಂತುಕೊಂಡಿದ್ದರು !
ಹಿರಿಯ ಮಗ ಕೊನೆಗೂ ಬಾಯಿ ಬಿಟ್ಟ !
“ನಾವಿಬ್ರೂ ಮುಂಬಾಯಾಗ ಇರಾರು. ಹಂಗಾಗಿ ನಮ್ಮ ಕಡಿಂದ ಅವ್ವನ ನೋಡಕೊಳ್ಳಾಕ ಆಗೂದ ಇಲ್ಲ. ಇಸ್ಟಂತೂ ಮಾಡಾಕ ತಯಾರ ಅದೇವು. ಏನಂದ್ರ ಯಾರ್ನರೆ ಆಳ ಇಟ್ಟ ಅವ್ವನ ಸೇವಾ ಮಾಡ್ಸತೇವು. ಮುಂಬಾಯಾಗ ಇರೂ ನಾವಿಬ್ರೂ ಆಳಿನ ಎರಡ ತಿಂಗ್ಳ ಪಗಾರ ಕೊಡತೇವು. ಸಣ್ಣಾಂವ ಮೂರ್ನೆ ತಿಂಗ್ಳದ ನೋಡ್ಕೋಲಿ”
ಕಿರಿಯ ಮಗ ಕೂಡ ಮಾತಾಡಿದ, “ನಾನೂ ಅದನ ಕೊಡಾಕ ತಯಾರಿದೇನಿ. ಅವ್ವನ ನೋಡ್ಕೊಳ್ಳಾಕ ಖಾಯಮ್ಮಾಗಿ ಯಾರ್ನರೆ ಪಗಾರ ಕೊಟ್ಟ ನೇಮಸ್ರಿ”
“ಏನ್ರೆಪಾ, ಏನ್ ಹೇಳ್ತೇರಿ ?” ಉಳಿದವರಿಬ್ಬರನ್ನು ಪಂಚರು ಕೇಳಿದರು.
“ಅಂವಾ ಹೇಳಿದಾಂಗ ಮಾಡ್ರಿ. ನಾವೂ ನಮ್ಮ ನಮ್ಮ ಪಾಲಿನ ಆಳಿನ ಪಗಾರ ಕಳ್ಸತೇವು”
ಪಂಚರಿಗೆ ಅಸಹ್ಯವೆನಿಸಿತು ! ಎಂಥ ಮಕ್ಕಳಿವು ! ಮುಂದೆ ಏನೊಂದೂ ಮಾತನಾಡದೆ ಅವರು ಎದ್ದು ಹೋದರು !
ಟೇರೆಸ್ ಮೇಲೆ ಹಳೆಯ ಸಾಮಾನುಗಳನ್ನು ಇಡಲು ಕಟ್ಟಿದ್ದ ಕೋಣೆಯನ್ನು ಸ್ವಚ್ಛಗೊಳಿಸಿದ ಆ ಮೂವರೂ ಮಕ್ಕಳು, ಶಾಂತಾಬಾಯಿಗಾಗಿ ಒಂದು ಮಂಚ, ಗಾದಿ, ಒಂದಿಷ್ಟು ಪಾತ್ರ-ಪಗಡಿಗಳೊಂದಿಗೆ ಅವ್ವನನ್ನು ಅಲ್ಲಿಟ್ಟು, ಆಕೆಯನ್ನು ನೊಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿದರು !
*****
ರಜೆಗಳನ್ನೆಲ್ಲ ಮುಗಿಸಿಕೊಂಡ ಪ್ರಲ್ಹಾದ ಮತ್ತು ಪ್ರಕಾಶ ತಮ್ಮ ಹೆಂಡತಿಯರೊಂದಿಗೆ ಮುಂಬಾಯಿಗೆ ಹೋದರು. ಕಿರಿಯಾತ ತನ್ನ ಹೊಟೇಲು ಉದ್ದಿಮೆಯಲ್ಲಿ ಮಗ್ನನಾದ. ಆತನ ಹೆಂಡತಿ ಮಹಿಳಾ ವಿವೋಚನಾ ಚಳುವಳಿಯ ಸದಸ್ಯೆಯಾಗಿದ್ದಳು ! ಮಹಿಳಾ ವಿವೋಚನೆಯ ಬಗ್ಗೆ ಆಕೆ ಉದ್ದುದ್ದ ಭಾಷಣವನ್ನೂ ಸಭೆ-ಸಮಾರಂಭದಲ್ಲಿ ಬಿಗಿಯುತ್ತಿದ್ದಳು ! ಆಕೆಯ ಮಾತುಗಳನ್ನು ಕೇಳಿದವರು ಆಕೆಯನ್ನು ಮೆಚ್ಚಿಕೊಳ್ಳತೊಡಗಿದರು !
ತನ್ನ ಸ್ವಂತ ಅತ್ತೆಯನ್ನೇ ನೋಡಿಕೊಳ್ಳದೇ ನಿರ್ದಯವಾಗಿ ಟೇರೆಸ್ಗೆ ವರ್ಗಾಯಿಸಿದ ಮೇಲೆಯೂ ಆಕೆಯ ಲಂಗು-ಲಗಾಮಿಲ್ಲದ ಮಹಿಳಾ ವಿವೋಚನಾ ಪರ ಭಾಷಣಗಳು ನಿರಂತರವಾಗಿದ್ದವು !
“ಇಂದಿನವರು ವೃದ್ಧ ತಂದೆ-ತಾಯಿಯರನ್ನು ನೋಡೋದಿಲ್ಲ. ಇಂಥವರಿಗೆ ಧಿಕ್ಕಾರವಿರಲಿ. ಸಮಾಜದಲ್ಲಿ ಇಂಥ ಅಮಾನವೀಯ ವರ್ತನೆಗಳಿಗೆ ಅಂಕುಶ ಹಾಕುವ ಕೆಲಸವನ್ನು ನಾವು ಮಾಡಬೇಕಿದೆ”
ಇದು ಆಕೆಯ ಭಾಷಣದ ಒಂದು ಝಲಕು !
*****
ಒಂದು ದಿನ ಬೆಳಿಗ್ಗೆ ಇದ್ದಕಿದ್ದಂತೆ ಆ ಸಮಾಜಸೇವಕಿ ಸೊಸೆಯ ಮನೆಯ ಟೇರೆಸಿನ ಮೇಲೆ ಕಾಗೆಗಳು ‘ಕಾವ್ ಕಾವ್’ ಅನ್ನತೊಡಗಿದ್ದವು ! ತಮ್ಮ ಗೂಡಿಗೆ ಬೆಂಕಿ ಬಿದ್ದಂತೆ ಅವು ಹಾಹಾಕಾರ ಎಬ್ಬಿಸಿದ್ದವು ! ಗುಬ್ಬಿಗಳು ಕೂಡ ಅಳುಧ್ವನಿಯಲ್ಲಿ ಚಿಂವ್ಗುಟ್ಟುತ್ತಿದ್ದವು !
ಅಕ್ಕಪಕ್ಕದವರಿಗೆ ಏನೊಂದೂ ತಿಳಿಯದಂತಾಯಿತು ! ನಡೆಯಬಾರದ್ದೇನೋ ನಡೆದಿದೆ ಎಂದುಕೊಂಡರೂ ನಡೆದಿರುವುದು ಏನು ಎಂಬುದು ಅವರಿಗೆ ಗೊತ್ತಾಗಲಿಲ್ಲ ! ಗಲ್ಲಿಯವರೆಲ್ಲ ಒಂದು ಕಡೆ ಸೇರಿ ಗುಜುಗುಜು ಆರಂಭಿಸಿದ್ದರು ! ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬಾಡಿಗೆದಾರರಿದ್ದರು. ತಮ್ಮ ಮನೆಯ ಟೇರೆಸ್ ಮೇಲೆ ಏನೋ ನಡೆದಿದೆ ಎಂಬ ಗುಮಾನಿ ಅವರಿಗೆ ಬಂತು. ಬಾಡಿಗೆದಾರ ಶಿವಬಾ ಪರೀಟ್ ಟೇರೆಸ್ ಮೇಲೆ ಹೋದ.
ಅಲ್ಲೆಲ್ಲ ತಡೆದುಕೊಳ್ಳಲಾರದಂಥ ದುರ್ಗಂಧ ಹರಡಿತ್ತು ! ಯಾವುದೋ ಪ್ರಾಣಿ ಸತ್ತು ಕೊಳೆತು ಹೋದ ಆ ದುರ್ಗಂಧವನ್ನು ತಡೆದುಕೊಳ್ಳಲಾರದೇ ಶಿವಬಾ ದಡದಡನೇ ಕೆಳಗಿಳಿದು ಬಂದು ಸೇರಿದವರಿಗೆಲ್ಲ ಹೇಳಿದ, “ಅಲ್ಲೇನೋ ಸತ್ತ ಕೊಳತಾಂಗ ವಾಸ ಬರಾಕತ್ತೇತಿ”
ಪಂಚರೂ ಸೇರಿದರು. ಬೆಳಿಗ್ಗೆ ಬೆಳಿಗ್ಗೆ ಗಟಾರು ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರಿಗೆ ಟೇರೆಸ್ ಮೇಲೆ ಹೋಗಿ ನೋಡಿಕೊಂಡು ಬರುವಂತೆ ಹೇಳಲಾಯಿತು. ಅವರೆಲ್ಲ ಟೇರೆಸ್ ಏರಿದರು.
ಮೇಲೆ ಹೋಗಿ ನೋಡಿದರೆ ಆ ಮುದುಕಿ ಇರುತ್ತಿದ್ದ ಕೋಣೆಯಿಂದಲೇ ಆ ದುರ್ಗಂಧ ಹರಡಿತ್ತು ! ಕಾರ್ಮಿಕರು ಪಂಚರನ್ನು ಕೂಗಿ ಕರೆದರು. ಪಂಚರು ಮೇಲೆ ಬಂದು ಆ ಕೋಣೆಯ ಬಾಗಿಲು ಮುರಿಸಿ ಒಳಹೊಕ್ಕರು.
ಅವರೆಲ್ಲರ ತಲೆ ಸುತ್ತಿದಂತಾಯಿತು ! ಒಳಗಿನ ದೃಶ್ಯ ಭಯಂಕರವಾಗಿತ್ತು ! ‘ಹೆಣ, ಹೆಣ’ ಎನ್ನುತ್ತ ಅವರೆಲ್ಲ ಕೂಗು ಹಾಕತೊಡಗಿದರು !
ಶಾಂತಾಬಾಯಿಯ ಹೆಣ ಮಂಚದ ಮೇಲಿನಿಂದ ಕೆಳಗೆ ಬಿದ್ದು ಕೊಳೆತು ಹೋಗಿತ್ತು !
ಯಾವ ಶಾಂತಾಬಾಯಿ ಪಡಬಾರದ ಕಷ್ಟಗಳನ್ನೆಲ್ಲ ಸಹಿಸಿ, ತನ್ನ ಮೂವರು ಮಕ್ಕಳನ್ನು ಬೆಳೆಸಿ, ಓದಿಸಿ ವಿದ್ಯಾವಂತರನ್ನಾಗಿಸಿ ಆದರ್ಶ ತಾಯಿ ಎಂಬುದಾಗಿ ಗೌರವಿಸಲ್ಪಡುತ್ತಿದ್ದಳೋ ಅಂಥವಳ ದೇಹವನ್ನು ಕ್ರೀಮಿ-ಕೀಟಗಳು ಮುಕ್ಕಿ ತಿನ್ನುತ್ತಿದ್ದವು ! ಅವೆಲ್ಲ ಆಕೆಯ ಮಕ್ಕಳಂತೆಯೇ ಆಕೆಯ ಮಾಂಸವನ್ನು ತಿಂದು ಕೊಬ್ಬಿಕೊಂಡು ಓಡಾಡಿಕೊಂಡಿದ್ದವು !
ಅಲ್ಲಿ ಶಾಂತಾಬಾಯಿಯ ದೇಹದ ಎಲುಬಿನ ಹಂದರ ಮಾತ್ರ ಉಳಿದಿತ್ತು !
ಮೂಗು ಮುಚ್ಚಿಕೊಂಡೇ ಬಂದು ನೋಡಿದ ಗಲ್ಲಿಯವರೆಲ್ಲರ ಎದೆ ಒಡೆದಂತಾಗಿತ್ತು ! ಅವರ ಮನಸ್ಸುಗಳು ಆ ಆದರ್ಶ ತಾಯಿಗೆ ಬಂದ ದುರ್ಗತಿಗೆ ಕಂಡು ರೋಧಿಸತೊಡಗಿದ್ದವು. ಅವರ ಹೃದಯ ಘಾಸಿಗೊಂಡಿತ್ತು !
*****
ಮುಂಬಾಯಿಯ ಮಕ್ಕಳಿಗೆ ಸುದ್ದಿ ತಲುಪಿಸಲಾಯಿತು.
ಕೃತಘ್ನ ಆ ಭಂಡ ಮಕ್ಕಳು ಬರಲೇ ಇಲ್ಲ ; “ನಾವ್ ಬಂದ್ರೇನ ಆಕಿ ಬದಕ್ತಾಳು ? ವಿನಾಯಕ ಅಂತ್ಯಸಂಸ್ಕಾರ ಮಾಡಿ ಮುಗಸ್ಲಿ. ನಾವ್ ತಿಥಿ ಮಾಡಾಕ ಬರ್ತೇವು” ಎಂದು ಅಲ್ಲಿಂದಲೇ ಸುದ್ದಿ ಕಳುಹಿಸಿದರು !
ಫೋನಿನಲ್ಲಿ ಅವರ ಮಾತುಗಳನ್ನು ಕೇಳಿದ ಪಂಚರು ಅವಕ್ಕಾದರು !
“ಹಿಂಥಾ ನಾಲಾಯಕ್ ಮಕ್ಳು ಯಾರ್ ಹೊಟ್ಟ್ಯಾಗೂ ಹುಟ್ಟಬಾರ್ದು !”
*****
ಪೋಲೀಸರಿಗೆ ಸುದ್ದಿ ಹೋಯಿತು.
ಪೋಲೀಸರು ಬರುತ್ತಲೇ ಸಮಾಜಸೇವಕಿಯಾಗಿದ್ದ ಶಾಂತಾಬಾಯಿಯ ಸೊಸೆ ಬಾಯಿ ಬಾಯಿ ಬಡೆದುಕೊಂಡು ಅಳುವ ನಾಟಕವನ್ನು ಚೆನ್ನಾಗಿಯೇ ನಿಭಾಯಿಸಿದಳು !
ವಿನಾಯಕನೂ ದುಃಖದಲ್ಲಿದ್ದವರಂತೆ ಸೋಗು ಹಾಕಿದ್ದ !
ಪೋಲೀಸರ ವಿಚಾರಣೆ ನಡೆಸಿದ್ದರು.
“ಏನ್ರಿ ವಿನಾಯಕರಾವ್, ಈ ಹೆಣಾ ಯಾರ್ದು ?”
“ನಮ್ಮ ತಾಯಿದರಿ ಸರ್”
“ನಿಮ್ಮ ತಾಯಿಯದ ಅಂತ ಹೆಂಗ ಹೇಳ್ತೇರಿ ?”
“ಹ್ವಾದ ವಾರ ನಾವ್ ಮೂರೂ ಮಂದಿ ಅಣತಮರು ಮಾತಾಡಿಕೊಂಡಾಂಗ ಪಾಲಾ ಮಾಡ್ಕೊಂಡ ಮ್ಯಾಲ ನಮ್ಮ ತಾಯ್ಗಿ ಟೇರೆಸ್ ಮ್ಯಾಲಿನ ರೂಮಿನ್ಯಾಗ ಇರೂ ವ್ಯವಸ್ಥಾ ಮಾಡಿದ್ದ್ಯುರಿ.”
“ನಿಮ್ಮ ತಾಯೀನ ನೋಡಾಕ ಈ ಎಂಟ ದಿವ್ಸದಾಗ ಯಾವಾಗರೇ ಮ್ಯಾಲ ಹೋಗಿದ್ರಿ ?”
“ಇಲ್ರಿ ಸರ್”
“ಯಾಕ್ ?”
“ಈ ತಿಂಗ್ಳ ಹಿರಿಯಣ್ಣ, ಆಕೀನ ನೋಡ್ಕೊಳ್ಳೂ ಮಾತಾಗಿತ್ರಿ”
“ಅವ್ರಾದ್ರೂ ನೋಡ್ಯಾರೇನು ?”
“ಇಲ್ರಿ ಸರ್, ಅವ್ರು ಮುಂಬಾಯಾಗ ಇರ್ತಾರು”
“ಅವ್ರ ಅಲ್ಲಿಂದ ಹೆಂಗ್ ನೋಡ್ತಾರ್ರಿ ವಿನಾಯಕರಾವ್ ?”
“ಪಗಾರದ ಮ್ಯಾಲ ಒಂದಾಳ ನೇಮಿಸು ವಿಚಾರಿತ್ರಿ ಸರ್”
“ಆ ಆಳ ಎಲ್ಲಿ ಅದಾನು ?”
“ಗೊತ್ತಿಲ್ರಿ ಸರ್”
“ಯಾಕ ?”
“ಅದನ್ನ ಹಿರಿ ಅಣ್ಣಾನ ನಿರ್ಧರಿಸ್ಬೇಕಿತ್ರಿ”
“ಹೋಗ್ಲಿ, ಆ ಆಳಮನಸ್ಯಾ ಬಂದಾನಿಲ್ಲೋ ? ಅಂವಾ ಚೊಲೋತಂಗ ನೋಡ್ಕೋತಾನೋ ಇಲ್ಲೋ ನೋಡ್ಬೇಕಾಗಿತ್ತಲ್ಲ ನೀವ್ ?”
“ನೋಡ್ಬೇಕಿತ್ರಿ ಸರ್ ... ...”
“ನೋಡ್ಬೇಕಿತ್ತು ಅಂತೀರಿ ! ಮತ್ತ್ಯಾಕ ನೋಡದಿಲ್ಲ ?”
“ಹೇಳ್ಯನಲ್ರಿ. ಈ ತಿಂಗ್ಳ ಜವಾಬದಾರಿ ಹಿರಿ ಅಣ್ಣಂದ ಇತ್ತು... ...”
“ಶಬ್ಬಾಶ್ ... ! ಗುಡ್... ! ವೇರಿ ಗುಡ್ ! ಹಿಂಥಾ ಮಕ್ಳು ಪ್ರತಿಯೊಬ್ಬ ತಂದೆ-ತಾಯಿ ಹೊಟ್ಟ್ಯಾಗ ಹುಟ್ಟಿ ಬಂದ್ರ ಕಣ್ಣಾಗೀನು ಕಣ್ಣೀರ ಕರಗಿ ಹೋಗ್ತಾವು ! ಲೇ ಹುಚ್ಚ, ಜನಕಲ್ಲದಿದ್ರೂ ಮನಕ್ಕಾದ್ರೂ ನಾಚಬೇಕಲೇ ! ಖರೇ ಅಂದ್ರ ನಿಮ್ಮಂಥ ಬದ್ಮಾಸ್ ಮಕ್ಕಳನ್ನ ಹುಟ್ಟಿಸಿದ ಆ ತಾಯಿ ಭಾಳ ದೊಡ್ಡ ತಪ್ಪ ಮಾಡಿದಂಗಾತು ! ... ...”
ಸಮಾಜಸೇವಕಿ ಸೊಸೆಯತ್ತ ತಿರುಗಿದ ಪೋಲೀಸ್ ಇನ್ಸಪೆಕ್ಟರ್, “ಏನೇ ಮಿಡ್ಕಲಾಡಿ, ಮಹಿಳಾ ವಿವೋಚನಾ ಹೋರಾಟ ಮಾಡೂ ಸಮಾಜಸೇವಕಿ ಹೌದಿಲ್ಲೋ ನೀ ? ಇದ ಏನ್ ನಿನ್ನ ಸಮಾಜ ಸೇವಾ ? ಇದ ಏನ್ ನಿನ್ನ ಮಹಿಳಾ ವಿವೋಚನಾ ? ಹೇಳೋದ ಆಚಾರ ; ತಿನ್ನೋದು ಬದ್ನಿಕಾಯಿ ! ಹಂಗ ನೋಡ್ಯರ ನಿಮ್ಮ ಮೈಮ್ಯಾಲ ಡಾಂಬರ್ ಸುರುವಿ ಬಾರಕೋಲಲೇ ಬಾರ್ಸಬೇಕ ! ಆದರ ಕಾನೂನದಾಗ ಹಂಥಾ ಅವಕಾಶಾ ಇಲ್ಲಂತ ಬಿಟ್ಟೇನಿ. ಥೂ ನಿಮ್ಮ ಜನ್ಮಕ !”
ಇನ್ಸಪೆಕ್ಟರ್ ಎದ್ದು, ಆ ತಾಯಿಯ ಎಲುಬಿನ ಹಂದರಕ್ಕೆ ಶಿರಬಾಗಿ ನಮಸ್ಕರಿಸಿದ ; ಆತನಿಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ ! ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದವನೇ ಅಲ್ಲಿಂದ ಹೊರಟು ಹೋದ !
ಪಂಚರ ಹೇಳಿಕೆಯಿಂದ ಶಾಂತಾಬಾಯಿ ಅನ್ನ-ನೀರಿಲ್ಲದೇ ಚಡಪಡಿಸಿ ತೀರಿಕೊಂಡಿದ್ದಾಳೆ ಎಂಬುದಾಗಿ ಪಂಚನಾಮೆ ಆಯಿತು !
*****
ಆ ಆದರ್ಶ ತಾಯಿಗೆ ಸತ್ತಮೇಲೆಯೂ ಅಪಮಾನವಾಗಬಾರದೆಂದು ಪಂಚರೇ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು !
ಶಾಂತಾಬಾಯಿಯ ಮಕ್ಕಳು ಮತ್ತು ಸೊಸೆಯಂದಿರನ್ನು ಜನ ನಿಂದಿಸತೊಡಗಿದರು ! ಅದರಲ್ಲಂತೂ ಹತ್ತಿರವೇ ಇದ್ದರೂ ಹೆತ್ತತಾಯಿಯನ್ನು ಮರೆತ ಕೃತಘ್ನ ಮಗ ವಿನಾಯಕ ಮತ್ತು ಸಮಾಜಸೇವಕಿಯ ಸೋಗಿನ ಸೊಸೆಯನ್ನು ನಿಂದಿಸುತ್ತ ಮಹಾತಾಯಿಯ ಅಂತ್ಯಸಂಸ್ಕಾರಕ್ಕೆ ಎಲ್ಲ ತಯಾರಿ ಮಾಡಿಕೊಂಡರು. ಒಂದು ಚೀಲದಲ್ಲಿ ಆ ತಾಯಿಯ ಹೆಣದ ಎಲುಬುಗಳನ್ನೆಲ್ಲ ತುಂಬಿ, ಮಸಣಕ್ಕೆ ಒಯ್ದು ಬೆಂಕಿ ಇಟ್ಟರು !
‘ಕಣ್ಣೀರು ಕಮರಿ ಹೋದವು !’
ಮಸಣಕ್ಕೆ ಬಂದವರೆಲ್ಲ ಕಣ್ಣೀರುಗರೆಯುತ್ತ ಮನೆಗೆ ಮರಳಿದರು.
ನಿಜವಾಗಿಯೂ ಜೀವನ ಎನ್ನುವುದು ಎರಡು ಕ್ಷಣದ ಆಟವೇ ಅಲ್ಲವೆ ? ಸಂಬಂಧ-ಗಿಂಬಂಧ, ಪ್ರೇಮ ಅನ್ನುವುದೆಲ್ಲ ಬರಿ ಬುರುಡೆ ! ಕೇವಲ ತೋರಿಕೆಯಷ್ಟೆ ! ಅದೆಲ್ಲವನ್ನೂ ಸೃಷ್ಟಿಸಿಕೊಂಡವರೂ ನಾವೇ ಅಲ್ಲವೆ ?
*****
“ಅವ್ವ, ನೀನು ಪ್ರತಿಕ್ಷಣ ನೆನಪಾಗುತ್ತಿಯಾ. ನೀನಿಲ್ಲದೇ ನಾವೆಲ್ಲ ತಬ್ಬಲಿಗಳಾಗಿದ್ದೇವೆ ! ನಿನ್ನ ಆದರ್ಶದ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿನ್ನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ನಿನಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೇವೆ”
ದಿನಪತ್ರಿಕೆಗಳಲ್ಲಿ ಶಾಂತಾಬಾಯಿಯ ದೊಡ್ಡದಾದ ಫೋಟೋ ಹಾಕಿಸಿ ಆ ನಿರ್ದಯಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದರು !
ಪತ್ರಿಕೆಗಳಲ್ಲಿ ಅದನ್ನು ಕಂಡವರೆಲ್ಲ ‘ಕರುಳ ಕಣ್ಣೀರು ಕಮರಿ ಹೋದವು’ ಎಂದು ನೊಂದುಕೊಂಡರು !
*****
No comments:
Post a Comment