Thursday, April 04, 2013

ಭಾರತ ದೇಶದ ಬಿಟ್ಟಿ ದೇವರುಗಳು !


ಸುನೀಲ್ ರಾವ್

ಕ್ರಿಯೇಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಖಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರಬೇಕು ಎಂಬ ಯಾವ ರಿವಾಜಿದೆ?

 
ನಾನು ‘ಅಲೆಮಾರಿ ಮನಸು’ ಕಾಲಂ ಶುರು ಮಾಡಿದಾಗ ಬಂದ ನೂರಾರು ಅಭಿಪ್ರಾಯ ಗಳಲ್ಲಿ ಶೇ.95ಪಾಲು ಬಿಟ್ಟಿ ಸಲಹೆಗಳೇ ಇದ್ದವು. ಪರಿಚಿತರೊಬ್ಬರು ಮೊದಲನೆ ಕಾಲಂ ಓದಿ ನೀನು ಬಹಳ ಇಂಪ್ರೂವ್ ಆಗ್ಬೇಕು ಎಂದು ಸಲಹೆ ಕೊಟ್ಟರು. ಒಹ್ ಹೌದಾ! ಏನ್ ಇಂಪ್ರೂವ್ ಆಗ್ಬೇಕು ಹೇಳಿ ಸಾರ್ ಅಂದ್ರೆ ಆತ ಉತ್ತರಿಸಲಿಲ್ಲ. ಇನ್ನೊಬ್ಬರು ಮೆಸೇಜ್ ಮಾಡಿ ನೀ ತಗೊಳ್ಳೊ ಟಾಪಿಕ್ ಗಳಲ್ಲಿ ಪೂರಾ ಪರ್ಸನಲ್ ಇರತ್ತೆ ಕಣಯ್ಯ ಅದೆಲ್ಲಾ ಬರೀಬೇಡ ಅಂದ್ರು. ನಂತರದ ವಾರ ಬೇರೆ ವಿಷಯ ಬರೆದೆ. 
ಮತ್ತೊಂದು ಮೆಸೇಜ್ ಬಂತು-ನೀವು ಬರೆಯುವ ಬರಹದಲ್ಲಿ ನಿಮ್ಮ ವೈಯಕ್ತಿಕವಾದ ಅನುಭವ ಬರೀರಿ ತುಂಬಾ ಚೆನ್ನಾಗಿರ್ತವೆ ಅಂತ. ಯಾವುದೋ ಕಾರ್ಯಕ್ರಮ ದಲ್ಲಿ ಸಿಕ್ಕ ಗೆಳೆಯರೊಬ್ಬರು ನೀವು ಕಾಲಂ ಬರೆ ಯೋರು ಲಂಕೇಶ್ ಪುಸ್ತಕಗಳನ್ನು ಓದ್ಬೇಕು ಸುನಿಲ್ ಆಗ ಕಾಲಂ ಅಂದ್ರೇನು ಅಂತ ಅರ್ಥ ಆಗತ್ತೆ ಅಂದ್ರು. ಲಂಕೇಶ್ ಥರ ಬರೆಯೋಕೆ ಲಂಕೇಶ್ ಇದ್ರಲ್ಲ ನಾ ಯಾಕ್ ಅವರನ್ನ ಇಮಿ ಟೇಟ್ ಮಾಡ್ಬೇಕಿತ್ತು ಎಂಬುದು ನನಗೆ ಅರ್ಥ ಆಗಲಿಲ್ಲ. ನನ್ನ ಬರಹಗಳು ಯಾವತ್ತಿಗೂ ನನ್ನ ಅನುಭವಗಳ ಮೂಲಕ ಕಟ್ಟಿಕೊಡಲು ಸಾಧ್ಯ. ಅದುಬಿಟ್ಟು ಕಾಣದ ಅಲೌಕಿಕವನ್ನು ತೋರಿಸುವ ತಾಕತ್ತು ನನಗಿಲ್ಲ. ಯಾಕೆಂದರೆ ನಾನೊಬ್ಬ ಯಕಶ್ಚಿತ್ ಮನುಷ್ಯ. ಪತ್ರಿಕೆಯವರೊಬ್ಬರು ನನ್ನ ಕಥೆಯೊಂದನ್ನು ಕೇಳಿದ್ದರು ಕಳಿಸಿದ್ದಾದ ಮೇಲೆ ಇ-ಮೇಲ್ ಮಾಡಿ ದ್ದರು-
‘‘ಪ್ರೀತಿಯ ಸುನೀಲ್ ನಿಮ್ಮ ಕತೆಯು ಬಹಳ ಚೆನ್ನಾಗಿದ್ದು, ಅದರ ಪಾತ್ರ ಹಾಗೂ ಸನ್ನಿ ವೇಶಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಾ. ಆದರೆ ಕೆಲವೊಂದು ಪಾತ್ರಗಳನ್ನು ಈಗಿನ ಕಾಲ ಮಾನಕ್ಕೆ ಕಟ್ಟಿಕೊಟ್ಟು ಬರೆದಿದ್ದೀರಿ ತುಂಬಾ ಹಸಿ ಹಸಿ ಅನ್ನಿಸ್ತಿವೆ ಬದಲಾಯಿಸಿ, ನಾಯಕನ ಪಾತ್ರ ವನ್ನು ಇನ್ನೊಂಚೂರ್ ಸ್ಟ್ರಾಂಗ್ ಮಾಡಿ ಕೊಟ್ಟರೆ ಮುಂದಿನ ಎಡಿಷನ್‌ಗೆ ಪ್ರಕಟಿಸಿಬಿಡ್ತೇವೆ’’ ಎಂದು ಬರೆದಿದ್ದರು..
ಅದಕ್ಕೆ ನನ್ನ ಉತ್ತರ ಹೀಗೆ ಬರೆಯಲೇಬೇಕಿತ್ತು -‘‘ಮಾನ್ಯರೇ, ನನ್ನ ಕತೆಯನ್ನು ಪ್ರಕಟಿಸುತ್ತೇನೆ ಎಂಬ ಆಶ್ವಾಸನೆ ಕೊಟ್ಟದ್ದಕ್ಕೆ ಧನ್ಯ ವಾದಗಳು, ಇನ್ನು ತಾವು ಹೇಳಿದ ಹಸಿ ಹಸಿ ಚಿತ್ರಣಗಳು ವಾಸ್ತವದಲ್ಲಿ ನಡೆಯುವಂತದ್ದು, ಅದನ್ನು ನಾನು ವಿವರಿಸುವುದಕ್ಕೆ ನಾನು ಇನ್ನೊಂದು ಕತೆ ಬರೆಯಬೇಕಾಗುತ್ತದೆ. 
ಇನ್ನು ಅದರಲ್ಲಿ ಬರುವ ಪಾತ್ರಗಳನ್ನು ಬದಲಾಯಿಸಿ ಬರೆಯಬೇಕಿದ್ದರೆ ಅದು ನನ್ನ ವಿವೇಚನೆಗೆ ಮೊದಲೇ ಬರುತ್ತಿತ್ತು ಅಥವಾ ನನ್ನ ಕಡಿಮೆ ಬುದ್ಧಿಗೆ ಅದು ಹೊಳೆಯಲಿಲ್ಲ. ನಿಮಗೆ ಆ ಕತೆಯಲ್ಲಿ ಯಾವ ತೆರನಾದ ಬದಲಾವಣೆ ಅಗತ್ಯವಿದೆಯೋ ಅದನ್ನೆಲ್ಲಾ ಸೇರಿಸಿ ನೀವೆ ಒಂದು ಕತೆ ಬರೆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇನೆ. ಧನ್ಯವಾದ’’ 
ಎಂದು ಪುನಃ ಬರೆದಿದ್ದಕ್ಕೆ ಅವರಿಂದ ಉತ್ತರ ಬರಲಿಲ್ಲ. ಸಲಹೆಗಳನ್ನು ಸ್ವೀಕರಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೇ ಬಿಟ್ಟಿ ಸಲಹೆಗಳನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಫೇಸ್‌ಬುಕ್‌ನಲ್ಲಿ ಕೊಂಚ ಮಟ್ಟಿಗೆ ನಾನು ಸಕ್ರಿಯ. ಅಲ್ಲಿ ಒಂದಷ್ಟು ಜನ ಸ್ನೇಹಿತರಾಗಿದ್ದಾರೆ, ಇನ್ನೊಂದಷ್ಟು ಜನ ಮೇಷ್ಟ್ರುಗಳಿದ್ದಾರೆ, ಮತ್ತೊಂದಷ್ಟು ಜನ ಹೆಡ್ ಮೇಷ್ಟ್ರುಗಳಿದ್ದಾರೆ. ಸ್ನೇಹಿತರನ್ನು ಹೊರತುಪಡಿಸಿ ಇನ್ನಿರುವ ಎರಡು ಪಂಗಡಗಳು ಸಕ್ರಿಯವಾಗಿ ಬಿಟ್ಟಿ ಸಲಹೆಗಳಲ್ಲಿ ನಿರತರಾಗಿರುತ್ತಾರೆ. ಯಾರೋ ಒಬ್ಬ ಸ್ನೇಹಿತ ಒಂದು ಕವನ ಬರೆದು ಅವನ ವಾಲ್ ಮೇಲೆ ಅಂಟಿಸಿದ್ದ. ಅದರ ಕಾಮೆಂಟುಗಳನ್ನು ಗಮನಿಸಿದ್ದೆ. ವಿದೇಶದ ಒಬ್ಬ ಹೆಡ್ ಮಾಸ್ಟರ್ ತಮ್ಮ ಸಮಯವನ್ನೆಲ್ಲಾ ಖರ್ಚು ಮಾಡಿಕೊಂಡು ಕವನಕ್ಕೂ ಮೀರಿ ಕತೆ ಬರೆದಂತೆ ಅರ್ಧ ಪುಟ-ಅವನು ಹೇಗೆ ಕವಿತೆ ಬರೆಯ ಬಹುದಿತ್ತು ಎಂಬುದಕ್ಕೆ ವಿವರಣೆ ಕೊಟ್ಟಿದ್ದರು. ಸಲಹೆಯನ್ನು ಕೊಟ್ಟ ವ್ಯಕ್ತಿ ಒಂದೇ ಒಂದು ಪದ್ಯವನ್ನ ಬರೆದಿದ್ದು ನಾನು ಇದುವರೆಗೂ ಕಂಡಿರಲಿಲ್ಲ. ಪಾಪ ಆ ಹುಡುಗ ಕವಿತೆ ಹಾಕು ವುದನ್ನೆ ಬಿಟ್ಟು ಬಿಟ್ಟ. 
ಇನ್ನು ಕೆಲವರು ತಮ್ಮದೇ ಸಿದ್ದಾಂತಗಳಿಗೆ ಒಳಪಟ್ಟವರು ಮತ್ತೆಲ್ಲರೂ ಹಾಗೆ ಜಗತ್ತನ್ನು ಕಾಣಬೇಕು ಎಂದು ಹಂಬಲಿಸುತ್ತಾರೆ. ತುಂಬಾ ಅರಿತ ಜನ ಯಾವತ್ತೂ ಇನ್ನೊ ಬ್ಬರಿಗೆ ಬಿಟ್ಟಿ ಸಲಹೆಗಳನ್ನು ಕೊಡಲಾರರು. ತೀರಾ ಅನಿವಾರ್ಯ ಸಲಹೆಗಳಿದ್ದರೆ ಅದನ್ನ್ನು ವೈಯಕ್ತಿಕವಾಗಿ ಹೇಳಿ ಮುಗಿಸುತ್ತಾರೆ. ಕ್ರಿಯೇ ಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಕಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲ ದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರ ಬೇಕು ಎಂಬ ಯಾವ ರಿವಾಜಿದೆ? ಇನ್ನು ಸಲಹೆ ಕೊಡುವವರು ಯಾರು ಎಂಬುದು ಬಹಳ ಮುಖ್ಯವಾದ ವಿಷಯ. ಪರೀಕ್ಷೆಯಲ್ಲಿ ಮೂರು ಬಾರಿ ಡುಮ್ಕಿ ಹೊಡೆದ ಹುಡುಗ ನೊಬ್ಬ- you have to come up in ur life understanding disolve ಎಂದು ಮೆಸೇಜ್ ಕಳಿಸಿ ನಗೆಪಾಟಲಾಗುತ್ತಾನೆ. ಇಲ್ಲಿ ಭಾಗಶಃ ಸಮಯ ಅದೇ ಆಗುತ್ತದೆ. ನನ್ನ ಇನ್ನೊಬ್ಬ ಸ್ನೇಹಿತ ಹೊಸದೊಂದು ಬ್ಯುಸಿನೆಸ್ ಮಾಡಿ ಕೈಸುಟ್ಟುಕೊಂಡ, ಸಾಲಗಳೂ ಆದವು.
ಅವನು ಉದ್ಯಮ ಶುರು ಮಾಡಿ, ಕೈಲಿ ನಾಕು ಕಾಸು ಓಡಾಡುತ್ತಿದ್ದಾಗ ಅವನ ಬಾಲ ಹಿಡಿದು ಓಡಾಡುತ್ತಿದ್ದ ಕೆಲವರೆಲ್ಲ ಈಗ ಅವನಿಗೆ ಬುದ್ಧಿ ಹೇಳುವ ಸರತಿಯಲ್ಲಿದ್ದರು. ಅವರೆಲ್ಲರ ಮಾತುಗಳನ್ನು ಸಮಾಧಾನದಿಂದ ಕೇಳಿ ತರುವಾಯ ರೋಸಿ ಹೋಗಿ-‘‘ನಿಮ್ಮಲ್ಯಾರಾದರೂ ನಾನು ಮಾಡಿರೋ ಸಾಲವನ್ನು ತೀರ್ಸಿದ್ರೆ, ನಿಮ್ಮ ಕಾಲಿನ ಚಪ್ಪಲಿ ತಗೊಂಡು ಹೊಡೆದರೂ ಹೊಡಿಸ್ಕೊತೀನಿ. ಯಾರಾದರೂ ನನ್ನ ಸಾಲ ತೀರಿಸ್ತೀರಾ?’’ ಎಂದು ರೇಗಿಬಿಟ್ಟ. ಆವತ್ತಿಂದ ಯಾವ ನೆಂಟನೂ ನನ್ನ ಸ್ನೇಹಿತನ ಮನೆ ಕಡೆ ಸುಳಿದಾಡಿದ್ದು ನನಗೆ ಕಾಣಲಿಲ್ಲ. ಬಂದಿದ್ದ ಒಬ್ಬೊಬ್ಬ ನೆಂಟನ ಹಿಂದೆ ಅಸಂಖ್ಯ ಸೋಲಿನ ಕತೆಗಳಿದ್ದವು. ಸೋಲಾದ ಮೇಲೆ ಹಲವಾರು ಸೋಲುಗಳು. ಸೋತು ಸುಣ್ಣವಾದವನು ಬದುಕಿನ ಯಶಸ್ಸಿಗೆ ಸೂತ್ರಗಳನ್ನು ಹೇಳಿಕೊಟ್ಟರೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಬಿಟ್ಟಿ ಸಲಹೆಗಳು ಕೆಲವೊಮ್ಮೆ ಆಪ್ತ ವಲಯದಿಂದಲೂ ಬಂದಿರುತ್ತದೆ. ಸಲಹೆಯನ್ನು ಕೊಡುವಾಗ ಆ ವ್ಯಕ್ತಿಗಳು ನಮ್ಮ ಜೀವನವನ್ನು ಕಮಾಂಡ್ ಮಾಡಲು ಬಂದಿರುತ್ತಾರೆ ಎನಿಸಿಬಿಡುತ್ತದೆ. ಅದರ ಅರಿವು ಅವರಿಗೆ ಕೆಲವೊಮ್ಮೆ ಇರುವುದಿಲ್ಲ. ಅದು ಎದುರಿಗಿನ ವ್ಯಕ್ತಿಗೆ ಎಷ್ಟು ಮುಜುಗರ ಮಾಡುತ್ತದೆ ಎಂದು ಅವರು ಊಹಿಸಿಕೊಳ್ಳಬೇಕು. ಪರ್ಸನಲ್ ವಿಚಾರಗಳಾದ ನಮ್ಮ ಮನೆ, ನಮ್ಮ ಪ್ರೀತಿ, ನಮ್ಮ ಉದ್ಯೋಗ ಹೀಗೆ ಎಲ್ಲ ಕಡೆಯಲ್ಲೂ ಅದು ಹರಿದಾಡುತ್ತದೆ. ನಾವು ಕಾಣದ ಯಾವುದೋ ಲೋಕವೊಂದನ್ನು ಸೃಷ್ಟಿ ಮಾಡಿಕೊಡಲು ಹೋಗುತ್ತಾರೆ. ಉದಾಹರಣೆ ಪ್ರೀತಿ ಪ್ರೇಮಗಳ ವಿಷಯದಲ್ಲಿ ಈಗಿನ ಕಾಲದ ಹುಡುಗರು ಕೊಂಚ ಮಟ್ಟಿಗೆ ಭಿನ್ನವಾಗಿ ಅರಿತಿರುತ್ತಾರೆ. ಪ್ರತಿಯೊಬ್ಬ ಹುಡುಗನಿಗಾಗಲಿ ಹುಡುಗಿಗಾಗಲಿ ತಮ್ಮ ಅಪ್ಪಅಮ್ಮನಂತೆ ಅನಿವಾರ್ಯಕ್ಕೆ ಬದುಕುವುದು ಖಂಡಿತವಾಗಿಯೂ ಇಷ್ಟವಿರುವುದಿಲ್ಲ. ಅಂತಹವರ ಮಧ್ಯೆ ಒಂದು ನವಿರಾದ ಭಾವನೆಗಳು ಸ್ವಂದನವಾಗಿರ್ತವೆ. ಮತ್ತು ಬದುಕುವ ವಿಧಾನಗಳಲ್ಲಿ ಸಿದ್ಧ ಮಾದರಿಗೂ ಮೀರಿದ ಒಂದು ಜೀವನ ಪರ್ಯಟನೆಯನ್ನು ಕಲ್ಪಿಸಿಕೊಂಡು ಇರುತ್ತಾರೆ. ಆಗ ಇದಿರಾಗುವ ಡಾಳು ಸಲಹೆಗಳು ಅದೆಷ್ಟು ಹಿಂಸೆ ಕೊಡ್ತವೆ ಅಂದರೆ ಅಸ್ತಿತ್ವದಲ್ಲೆ ಇಲ್ಲದ ಸಮಸ್ಯೆಗಳನ್ನೆಲ್ಲಾ ತಂದು ಆ ಇಬ್ಬರ ಮನಸಿನಲ್ಲಿ ಮೂಡಿಸಿಬಿಡುತ್ತಾರೆ ಹಿರಿಯರು. ಇದನ್ನು ಸಲಹೆ ಕೊಡುವವರ ತಪ್ಪುಎಂದು ಹೇಳಲಾರೆ. ಆದರೆ ಈಗಿನ ಮನಸ್ಥಿತಿ ಮತ್ತು ಗಳನ್ನು ಸಲಹೆಗಾರರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಮನಸ್ಥಿತಿ ಮತ್ತು ಸ್ವರೂಪಗಳು ಕಾಲಘಟ್ಟದಲ್ಲಿ ಭಿನ್ನವಾಗುತ್ತಾ ಹೋಗುತ್ತದೆ. 
ನಾನು ಆಗಲೇ ಹೇಳಿದಂತೆ ಸಲಹೆಗಳು ಸೂಕ್ತವಾಗಿದ್ದರೆ ಪಡೆಯಲು ಯಾವ ಮುಜುಗರವೂ ಸಲ್ಲ. ಆದರೇ ಪುಗಸಟ್ಟೆ ಸಲಹೆಗಳನ್ನಲ್ಲ. ಇತ್ತೀಚೆಗೆ ಅಂತಹ ಸಲಹೆಗಾರರಿಂದ ಒಂದು ಅಂತರವನ್ನು ಕಾಯ್ದುಕೊಂಡಿದ್ದೇನೆ. ನಮ್ಮ ಬದುಕಿನ ಪ್ರತೀ ಹೆಜ್ಜೆಯಲ್ಲೂ ಯಾರೋ ಬಂದು ಬದುಕಿದರೆ ಸಹಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಪರಮಹಂಸರು ಒಬ್ಬ ಹುಡುಗನಿಗೆ ಬೆಲ್ಲ ತಿನ್ನುವುದನ್ನು ಬಿಡಿಸಲು, ಸ್ವತಃ ತಾವು ಬಿಟ್ಟು ಅಮೇಲೆ ಆ ಹುಡುಗನಿಗೆ ಹೇಳಿದ ಕತೆ ಎಷ್ಟೊಂದು ಸೂಕ್ತ. ತಮ್ಮ ಬದುಕಿನ ಬಹುಭಾಗವನ್ನು ಕಂಡವರಿಗೆ ಸಲಹೆಗಳನ್ನು ಕೊಡುತ್ತಾ ಬದುಕುವವರನ್ನು ಕೆಲಕಾಲ ದೂರವಿಟ್ಟರೆ ಉತ್ತಮ. ಇಲ್ಲವಾದರೆ ಕಾರಂಜಿಯಂತೆ ಚಿಮ್ಮುವ ಬದುಕಿಗೆ ಉತ್ಸಾಹವೇ ಇಲ್ಲದಂತೆ ಕೊರಗಬೇಕಾಗುತ್ತದೆ. ಬಿಟ್ಟಿ ಸಲಹೆಗಳು ನಮ್ಮ ಮನಸಿನಲ್ಲಿ ಹಾಗೆ ಉಳಿದುಕೊಳ್ಳುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ, ಮತ್ತೆ ಅದೊಂದು ಸುಳ್ಳಾಗಿ ಮಾರ್ಪಾಡಾಗುತ್ತದೆ. ಮತ್ತೆ ಕುಂದುತ್ತೇವೆ.....ಇನ್ನೊಮ್ಮೆ ಆ ಕೆಲಸ ಮಾಡಲು ಹೋಗಲಾರೆವು. ಬಿಟ್ಟಿ ಸಲಹೆಗಳಿಂದ ನಮ್ಮ ಹಲವಾರು ಆವಿಷ್ಕಾರಗಳು ಶುರುವಾಗುವ ಮೊದಲೇ ಆಗಿ ಬಿಡುತ್ತದೆ. ಆಸೆಗಳು ಹುಟ್ಟುವ ಮೊದಲೇ ಹೊಸಕಿ ಹಾಕುತ್ತೇವಲ್ಲ ಅದೆಷ್ಟು ಪಾಪಕಾರ್ಯ!
ಮೇಲೆ ಬರುವ ಯಾವ ಪಾತ್ರ ಹಾಗೂ ಸನ್ನಿವೇಶಗಳೂ ಕಾಲ್ಪನಿಕವಲ್ಲ. ಎಲ್ಲವೂ ವಾಸ್ತವ ಮತ್ತು ಸತ್ಯವೇ ಆಗಿದೆ. ಈ ಪಾತ್ರಗಳಲ್ಲಿ ಯಾರಿಗಾದರೂ ತಮ್ಮ ಹೋಲಿಕೆಗಳಿದ್ದರೆ, ತಾವೇ ಎಂದು ಭಾವಿಸಿಕೊಳ್ಳಬಹುದು.
ಕೃಪೆ : ವಾರ್ತಾಭಾರತಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.