Saturday, April 27, 2013

ಪೂರ್ವಿಕರ ಕನಸುಗಳ ದಾರಿಗೆ ...... !


- ಸಿದ್ಧರಾಮ ಹಿಪ್ಪರಗಿ, ಧಾರವಾಡ
ಹೊಟ್ಟೆಯೊಳಗಿನ ಸಂಕಟಗಳು
ಹೂಂಕರಿಸಿದರೆ ಹಿಂಸೆಗಳು
ಉಸಿರುಗಟ್ಟಿಸುವ ಅವಮಾನಗಳು
ದನಿಯೆತ್ತಲು ದಬ್ಬಾಳಿಕೆಗಳು
ಅಂಧತ್ವದ ದೌರ್ಜನ್ಯಗಳು
ಕಳೆದು ಹೋದವು ಸಾಕಷ್ಟು ಶತಮಾನಗಳು !

ಮೂರು ಕಾಸಿನ ಕೂಲಿಗೆ ಮೂಳೆ ಮುರಿದುಕೊಂಡು
ಅವಮಾನದ ಯಮ ಭಾರದ ಹೊರೆ ಹೊತ್ತುಕೊಂಡು
ಘೋರ ಹಸಿವಿನ ರಕ್ಕಸನ ಮಡಿಲಲ್ಲಿಟ್ಟುಕೊಂಡು
ಬಡತನವೆಂಬ ಭೂತಕ್ಕೆ ಸೊಡ್ಡು ಹೊಡೆದುಕೊಂಡು
ಭೀಮಜ್ಯೋತಿಯ ಮಾರ್ಗದಲ್ಲಿ ಉರಿದುಕೊಂಡು 
ಮೊದಲು ಮನುಷ್ಯ ನಾನೆಂಬ ಅರಿವಾಗಿಸಿಕೊಂಡು
ಕುಗ್ಗದೆ ಧೈರ್ಯವೆಂಬ ಆಯುಧ ಹಿಡಿದುಕೊಂಡು
ನಾನು ನಾನಾಗಲು ಜಾಗೃತಗೊಂಡು !

ಹೊರಟಿರುವೆನು  ದೃಢತೆಯ ಹೆಜ್ಜೆಯಲಿ
ಜೊತೆಗಿದೆ ಭೀಮ ಬಲದ ರಕ್ಷಾಕವಚ
ಅನ್ಯಾಯದ ವಿರುದ್ಧ ಒಗ್ಗೂಡುವಿಕೆಗೆ 
ನಾಗರಿಕ ಸಮಾಜದ ನಿರ್ದಯತೆಯ  ನಿರ್ಲಕ್ಷ್ಯ
ಹೋಗಲಿ ಬಿಡಿ ಅಂಜುವುದೇಕ್ಕೇನಿದೆ ?

ವಾಸ್ತವ ಪರಿಚಯಿಸಿದ ಚಳುವಳಿ
ಆಧ್ಯಾತ್ಮ ಪಯಣದ ಬಳುವಳಿ
ಜೀವನ ಪಾಠಗಳ ಕಲಿಯುತ
ಕಲಿತಿದ್ದನ್ನು ಅಳವಡಿಸಿಕೊಳ್ಳುತ
ಸಾಗಿದೆ ಸಂಗ್ರಾಮ ನಿರಂತರ !

ಸಮಾನತೆ-ಸಾಮಾಜಿಕ ನ್ಯಾಯ
ಸಹಬಾಳ್ವೆ-ಸಮಪಾಲು
ಆಶಾದೀವಿಗೆಯ ಜ್ಯೋತಿಗಳು
ಮನೆ-ಮನದ ಬಾಗಿಲುಗಳ
ಬಡಿದಾಗ ಸ್ವಾಗತಿಸುವ 
ಮುಖಗಳನು ಅರಳಿಸಬೇಕಿದೆ
ಸವಾಲುಗಳ ಎದುರಿಸಬೇಕಿದೆ
ಎಡರು-ತೊಡರು ನಿವಾರಿಸಿಕೊಳ್ಳಬೇಕಿದೆ !

ಮನೆಯ ದ್ವಾರಪಾಲಕ ನೀನಾಗದೇ 
ಆನೆಯಂತಿರುವ ದೈತ್ಯಮನೆಯ ಮಾಲೀಕನಾಗುವ 
ಪೂರ್ವಿಕರ ಕನಸುಗಳ ದಾರಿಗೆ 
ಹೂ ಹಾಸಬೇಕಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.