ಡಾ. ಸಿದ್ರಾಮ ಕಾರಣಿಕ
ಯಾವುದೋ
ಸಿನೇಮಾ ಹಾಡೊಂದರಲ್ಲಿ 'ಶ್ರೀ ರಾಮ'ನ ಹೆಸರು ಬಂದಿದೆಯೆಂದು ತಗಾದೆ ತೆಗೆದ ಬಗ್ಗೆ
ಪಬ್ಲಿಕ್ ಟಿ.ವ್ಹಿ.ಯಲ್ಲಿ ಚರ್ಚೆ ಆರಂಭವಾಗಿದೆ. ಆ ಹಾಡಿಗೆ ವ್ಯಕ್ತಪಡಿಸುವವರು ಕನಕದಾಸರ
ಹರಿಭಕ್ತಸಾರವನ್ನು ಒಮ್ಮೆ ಓದಬೇಕು.
ಅಲ್ಲಿ ಕನಕದಾಸರು ಹರಿಯ
ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುತ್ತ ಇಡೀ
ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ
ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ
ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ
ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲೆ ಕಣ್ಣು ಹಾಕಿದ ಚಂದ್ರ, ಮಾವನಿಗೆ
ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ
ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ
ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು
ಪ್ರಾರ್ಥಿಸಿಕೊಳ್ಳುತ್ತಾರೆ.
ಇನ್ನು ಮುಂದೆ ರಾಮ, ಕೃಷ್ಣ, ಶಿವ ಮೊದಲಾದ
ಗಂಡು ದೇವರುಗಳ ಮತ್ತು ಸೀತಾ, ರುಕ್ಮಿಣಿ, ದ್ರೌಪದಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ
ಮೊದಲಾದ ಹೆಣ್ಣು ದೇವರ ಹೆಸರುಗಳನ್ನು ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಟಿ.ವ್ಹಿ.
ಮುಂದೆ ಕುಳಿತ ಸ್ವಾಮಿಜಿಯೊಬ್ಬರು 'ಶ್ರೀ ರಾಮ ಅಂದ್ರೆ ಅರ್ಥ ಏನು ಗೊತ್ತಾ ? ಹೆಸರಿನ ಅರ್ಥ ಗೊತ್ತಿಲ್ಲದಿದ್ದರೆ ಹ್ಯಾಗೆ ಹೆಸರಿಡ್ತೀರಿ ?' ಎಂದು ಜೋರಾಗಿಯೇ ಫರ್ಮಾನು ಹೊರಡಿಸಿದರು !
ಅಯ್ಯೋ ಸ್ವಾಮಿ, ಇದು ಬಿಟ್ಟು ಬಿಡಿ ; ಇನ್ನು ಮುಂದೆ ಕಲ್ಲವ್ವ, ಕಲ್ಲಪ್ಪ ಮೊದಲಾದ
ಹೆಸರುಗಳನ್ನೂ ಇಡುವಂತಿಲ್ಲವೇನೋ ? ಯಾಕೆಂದರೆ 'ನಮ್ಮ ದೇವರು ಕಲ್ಲಿನ ರೂಪದಲ್ಲಿದೆ. ಆ
ಹೆಸರನ್ನು ಬಳಸಬಾರದು' ಎಂದು ಜೋಲಿ ಹೊಡೆಯುತ್ತಾರೋ ಏನೋ ?
ಯಾಕೋ ಇತ್ತೀಚಿಗೆ
ಇಂಥ ಪ್ರಕ್ರಿಯೆಗಳು ತುಂಬ ಜೋರಾಗಿಯೇ ನಡೆದಿವೆ. ಹೀಗಿರಬಾರದು ; ಹೀಗಿರಬೇಕು ; ಹೀಗೆಯೇ
ಇರಬೇಕು ಎನ್ನುವ ಯಜಮಾನ್ಯ ಸಂಸ್ಕೃತಿ ಮತ್ತೇ ವಿಜ್ರಂಬಿಸಲು ಆರಂಭವಾಗಿದೆಯೇ ?
ಪ್ರಜ್ಞಾವಂತರು ಯೋಚಿಸಬೇಕು ಸ್ವಾಮಿ ! ಏನಂತೀರಿ ?
No comments:
Post a Comment