Monday, February 11, 2013

ಸಾಹಿತ್ಯ ಸಮ್ಮೇಳನದ ಅವಘಡ !


            ಮಾತಾಡುವುದಕ್ಕೆ ತ್ರಾಣ ಕೊಡದ ಅಧ್ಯಕ್ಷರ ಇಳಿ ವಯಸ್ಸು, ಯಾವುದೇ ಹೊಸ ಚಿಂತನೆಗಳನ್ನು ಹೊಳೆಸದ ಹಳೆ ಪ್ರಶ್ನೆಗಳು ಮತ್ತು ಆಗಲೇ ಹೇಳಿದ ಉತ್ತರಗಳ ಪುನರಾವರ್ತನೆ - ಇವುಗಳೊಂದಿಗೆ ಬಹುನಿರೀಕ್ಷಿತ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕೊನೆಗೊಂಡಿತು.

    ಅಧ್ಯಕ್ಷರ ಅನಾರೋಗ್ಯದಿಂದಾಗಿಯೇ ತಡವಾಗಿ ಸಂವಾದವನ್ನು ಪ್ರಾರಂಭಿಸಿದರಾದರೂ ಅವರಾಗಲೇ ತುಂಬ ಸುಸ್ತಾಗಿದ್ದರು. ಅವರನ್ನು ಹೊಗಳುತ್ತಾ, ವಿಷಯಾಂತರ ಮಾಡುತ್ತಾ ಸಂವಾದಕರು ಪ್ರಶ್ನೆ ಕೇಳುತ್ತಾ ಹೋದರು. ಅವರ ಪ್ರಶ್ನೆ ಮತ್ತು ಇವರ ಉತ್ತರದ ನಡುವೆ ಲೇಖಕಿ ಡಾ.ವಸುಂಧರಾ ಭೂಪತಿ ನಿರ್ವಾಹಕಿಯಾಗಿ ಕೆಲಸ ಮಾಡಿದರು. ಆದರೆ ಸಂವಾದದ ಮೂಲಕ ಸಮ್ಮೇಳನಾಧ್ಯಕ್ಷರನ್ನು ಪ್ರೇಕ್ಷಕರು ಅರಿತುಕೊಳ್ಳುವ ಇಂಥ ಸಂವಾದದ ಮೂಲ ಆಶಯವೇ ಈಡೇರಲಿಲ್ಲ.

    ಅಧ್ಯಕ್ಷ ಕೋಚೆ ಇಳಿವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಹಣ್ಣಾಗಿದ್ದರಾದರೂ ಮನೋಚೈತನ್ಯ ಕುಂದಿರಲಿಲ್ಲ. ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿರುವಾಗ ಇನ್ನೊಂದು ಪ್ರಶ್ನೆಯ ಕಡೆ ಹೋಗಲಾಯಿತು. ಆದರೆ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸದೇ ಮುನ್ನಡೆಯಬಾರದು ಎಂದು ಹೇಳಿ ತಮ್ಮ ಉತ್ತರವನ್ನು ಕೋಚೆ ಮುಂದುವರಿಸಿದರು.

            ಅವರಿಗೆ ತೊಂದರೆಯಾಗದಿರಲೆಂದು ಎಲ್ಲರ ಪ್ರಶ್ನೆಗಳನ್ನೂ ಒಟ್ಟಿಗೇ ನೀಡಿ, ಉತ್ತರವನ್ನು ಕಡೆಯಲ್ಲಿ ನೀಡುವ ಅವಕಾಶ ಕಲ್ಪಿಸಲಾಯಿತು. ಆದರೆ 'ತುಂಬ ಪ್ರಶ್ನೆ ಒಟ್ಟಿಗೇ ಕೇಳಿಬಿಟ್ಟರೆ ನನಗೆ ಯಾರು ಏನು ಕೇಳಿದರು ಅಂತ ಗೊತ್ತಾಗುವುದಿಲ್ಲ, ನೆನಪೂ ಇರುವುದಿಲ್ಲ' ಎಂದು ತಮಾಷೆಯಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ರಚಿಸಿ:

          ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕನ್ನಡ ಶಾಲೆಗಳು ಮತ್ತು ಇಂಗ್ಲಿಷ್‌ ಶಾಲೆಗಳನ್ನು ಮುಚ್ಚುವ ಸ್ಥಿತಿ ಯಾಕೆ ಬಂದಿದೆ ಎಂಬ ಬಗ್ಗೆ ಅಧ್ಯಯನ ಆಗಬೇಕು ಎಂದರು. ಸರ್ಕಾರ ಒಂದು ಸಮಿತಿಯನ್ನು ರಚಿಸಿ ಸರ್ವೇ ನಡೆಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆಯಲ್ಲಿ ಓದಿದವರು ಮತ್ತು ಇಂಗ್ಲಿಷ್‌ ಶಾಲೆಗಳಲ್ಲಿ ಓದಿದವರು ಪಡೆದುಕೊಂಡ ಯಶಸ್ಸಿನ ಅನುಪಾತವನ್ನು ತೆಗೆಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾತೃಭಾಷೆಯ ಶಿಕ್ಷಣದಲ್ಲಿ ಅಪಾರ ಯಶಸ್ಸು ಗಳಿಸಿದ್ದಾರೆ. ಆದರೆ ಇಂಗ್ಲಿಷ್‌ ಓದಿದರೆ ಮಾತ್ರ ಗೆಲುವು ಮತ್ತು ಉದ್ಯೋಗ ಸಾಧ್ಯ ಎನ್ನುವ ಭ್ರಮೆ ಮೂಡಿರುವುದರಿಂದಲೇ ಕನ್ನಡ ಶಾಲೆಗಳ ಈ ದುಸ್ಥಿತಿಗೆ ಕಾರಣ ಎಂದು ಕೋಚೆ ಹೇಳಿದರು.

ಮಾತುಕತೆಯಿಂದಷ್ಟೇ ಸಾಧ್ಯ:

        ಕಾವೇರಿ, ಕೃಷ್ಣಾ ನದಿ ಹಂಚಿಕೆ ವಿವಾದದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕಳೆದ 20ವರ್ಷಗಳಿಂದ ಕರ್ನಾಟಕ ಮತ್ತು ನೆರೆ ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ವಿವಾದ ನಡೆಯುತ್ತಲೇ ಇದೆ. ಇದನ್ನು ನ್ಯಾಯಾಲಯದ ಮೂಲಕವೇ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ. ಪರಸ್ಪರ ಕೂತು ಚರ್ಚಿಸಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ದೇಣಿಗೆ ಸಂಗ್ರಹಿಸೋಣ:

         ಸಮ್ಮೇಳನ ಸರ್ಕಾರದ ಸಹಾಯಕ್ಕೆ ಕೈಚಾಚಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲೆ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ನಡೆಯುತ್ತಿತ್ತು. ಈಗ ಹಾಗಿಲ್ಲ, ಸರ್ಕಾರದ ಹಣ ಎಂದಾಕ್ಷಣ ಅದ್ದೂರಿತನವೂ ಬರುತ್ತದೆ. ಹಾಗಾಗಿ ಮತ್ತೆ ಜನರಿಂದ ಹಣ ಸಂಗ್ರಹಿಸಿ, ಸರಳ ಸಮ್ಮೇಳನ ಆಯೋಜಿಸಲು ಸಾಧ್ಯ ಎಂದರು.

ಒಂದಾಗಿ ಬಾಳ್ಳೋಣ:

              ಗಡಿ, ಪ್ರಾದೇಶಿಕ ಅಸಮಾನತೆ ಸೇರಿದಂತೆ ಇವತ್ತು ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪ್ರೀತಿಯೇ ಉತ್ತರ ಎಂದು ಕೋಚೆ ನುಡಿದರು. ತಮ್ಮ ಸಂವಾದದ ಕೊನೆಯ ಆಶಯ ಇಷ್ಟೇ, ಎಲ್ಲರೂ ಒಂದಾಗಿ ಇರೋಣ, ಪ್ರೀತಿಯಿಂದ ಬಾಳ್ಳೋಣ ಎಂದರು. 

ಕೃಪೆ : ಉದಯವಾಣಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.