Monday, February 04, 2013

ದಲಿತ ಸಾಹಿತ್ಯದ ಗೈರುಹಾಜರಿಯಲ್ಲಿ ಕಸಾಪ ಸಮ್ಮೇಳನ !


ಬಸವರಾಜ ಸೂಳಿಭಾವಿ - ಡಾ. ಎಚ್.ಎಸ್.ಅನುಪಮಾ


ಸರ್ಕಾರ ಅಲುಗಾಡುತ್ತಿರುವಾಗಲೂ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಪರಿಷತ್ತು ಮತ್ತೊಂದು ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಜ್ಜಾಗುತ್ತಿರುವಾಗ ಅದರ ಸ್ವರೂಪದ ಬಗ್ಗೆ ಮತ್ತೆ ಗಂಭೀರ ಚರ್ಚೆ ನಡೆಯತೊಡಗಿದೆ. ವಿಜಾಪುರದ ಬರದ ನಾಡು ತನ್ನಲ್ಲಿರುವ ಸೌಂದರ್ಯ, ಐತಿಹಾಸಿಕ ಸ್ಮಾರಕಗಳನ್ನೆಲ್ಲ ತೋರಿಸಲು ತವಕಿಸುತ್ತಿರುವಾಗ ಪರಿಷತ್ತಿನ ನಿಜಮುಖ ಮತ್ತೆ ಮುನ್ನೆಲೆಗೆ ಬಂದಿದೆ.


ಈ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ವಚನ ಸಾಹಿತ್ಯ, ಅನುಭಾವಿ ಸಾಹಿತ್ಯ, ಗಝಲ್ ಸಾಹಿತ್ಯ, ಜಾನಪದ ಸಾಹಿತ್ಯ ಇತ್ಯಾದಿ ಸಾಹಿತ್ಯದ ನಾನಾ ಪ್ರಕಾರಗಳಿಗೆ ಒಂದೊಂದು ಗೋಷ್ಠಿ ಇದೆ. ಎಂದಿನಂತೆ ದಲಿತ ಸಾಹಿತ್ಯ ಪ್ರಕಾರವಷ್ಟೇ ಗೈರುಹಾಜರಿ. ರಾಜಾಶ್ರಯದಲ್ಲಿ ಹುಟ್ಟಿದ ಕಸಾಪ ತಳ ಸಮುದಾಯಗಳ ತಲ್ಲಣ ಒಳಗೊಂಡ ಸಾಹಿತ್ಯದ ದನಿಯಲ್ಲ ಎಂಬುದನ್ನು ಅದರ ನಡೆ ಸ್ಪಷ್ಟಪಡಿಸುತ್ತಲೇ ಬಂದಿದೆ.


ನೂರು ವರ್ಷ ಮಿಕ್ಕಿದ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಈ ತನಕ ಆಯ್ಕೆಯಾದವರಲ್ಲಿ ಒಬ್ಬರೂ ದಲಿತ ಸಮುದಾಯದಿಂದ ಬಂದವರಿಲ್ಲ. ನಡೆದ ಎಪ್ಪತ್ತೊಂಬತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾದವರಲ್ಲಿ ಗೀತಾ ನಾಗಭೂಷಣ ಒಬ್ಬರಷ್ಟೇ ಪರಿಶಿಷ್ಟ ಪಂಗಡದವರು. ಜಿಲ್ಲಾ ಘಟಕಗಳ ಸಂಘಟನೆ ಮತ್ತು ಸಮ್ಮೇಳನಗಳಲ್ಲಿಯೂ ಇದು ಪುನರಾವರ್ತನೆಯಾಗಿದೆ.


ಈ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರ ಯಾದಿಯಲ್ಲಿ ದಲಿತ ಸಮುದಾಯದ ಸಾಹಿತಿಗಳ ಹೆಸರುಗಳಿಲ್ಲ. ಇದು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಕಟುಸತ್ಯವೆಂದರೆ ಕಸಾಪಕ್ಕಿರುವುದು ದಲಿತ ಅಸ್ಮಿತೆ ನಿರಾಕರಿಸುವ ಮೇಲ್ಜಾತಿ ಚಹರೆ. ಜಾತಿ ಆಧಾರಿತ ಸಮಾಜದಲ್ಲಿ ಕಸಾಪ ಮೇಲ್ವರ್ಗದವರ ಸಾಹಿತ್ಯಿಕ ಸಂವೇದನೆಗಳ ಅಭಿವ್ಯಕ್ತಿ ಘಟಕದಂತಿದೆ. ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಬೇಕೆಂಬ ಅಭಿಪ್ರಾಯ ವ್ಯಕ್ತಗೊಂಡಾಗಲೂ ಅದನ್ನು ನಿರಾಕರಿಸುವ ಅಸಡ್ಡೆ ಪ್ರಕಟವಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.


ಹಂಪನಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ 1979ರಲ್ಲಿ ನಡೆದ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಿ ಎಂಬ ಕೂಗು ಕೇಳಿಬಂತು. ಚನ್ನಣ್ಣ ವಾಲೀಕಾರರ ಆ ನಿಲುವಿಗೆ ಕಸಾಪ ಅಧ್ಯಕ್ಷರು ಸಾಹಿತ್ಯದಲ್ಲಿ `ದಲಿತ-ಬಲಿತ' ಎಂಬುದಿಲ್ಲ ಎಂದು ಹೇಳಿದ್ದರು. ಈ ಮಾತು ಅವರೊಬ್ಬರ ಹೇಳಿಕೆ ಮಾತ್ರವಲ್ಲ, ಸಾಹಿತ್ಯದಲ್ಲಿ ಮೇಲ್ಜಾತಿಗಳ ಪ್ರಾಬಲ್ಯ ಮತ್ತು ಧೋರಣೆಯ ಪುರಾವೆಯೂ ಆಗಿದೆ. ಕಸಾಪದ ಈ ಮನೋಧರ್ಮವನ್ನು ವಿರೋಧಿಸಿಯೇ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿದ್ದರೂ ಆ ಧೋರಣೆ ವಿಜಾಪುರ ಸಾಹಿತ್ಯ ಸಮ್ಮೇಳನದವರೆಗೂ ಮುಂದುವರೆದುಕೊಂಡು ಬಂದಿದೆ.


ಸಮ್ಮೇಳನದಲ್ಲಿ ಯಾವ ಗೋಷ್ಠಿಯನ್ನಾದರೂ ಇಡುವ ಸ್ವಾತಂತ್ರ್ಯವಿರುವಾಗ ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗೆ ಅವಕಾಶ ನೀಡಿ ಎಂದು ವಿಜಾಪುರ ಸಮ್ಮೇಳನದ ಪೂರ್ವಭಾವಿ ಸಭೆಗಳಲ್ಲಿ ದಲಿತ ಸಾಹಿತಿಗಳು ಒತ್ತಾಯಿಸುತ್ತಲೇ ಬಂದಿದ್ದರು. ದಲಿತ ಸಂಘಟನೆಗಳ ಅಭಿಮತವೂ ಅದೇ ಆಗಿತ್ತು. ಅಷ್ಟಾದರೂ ದಲಿತ ಸಾಹಿತ್ಯ ಗೋಷ್ಠಿಗೆ ಅವಕಾಶ ನೀಡುವ ವಿಚಾರ ಕೈಬಿಟ್ಟುಹೋಗಿದೆ. ಜಾತಿಪದ್ಧತಿ ವಿರುದ್ಧ ಚಾರಿತ್ರಿಕ ಹೋರಾಟ ಕಟ್ಟಿ, ಅನುಭವ ಮಂಟಪದಲ್ಲಿ ದಲಿತ ದಮನಿತ ದನಿಗಳಿಗೆ ವಿಪುಲ ಅವಕಾಶ ನೀಡಿದ ಬಸವಣ್ಣನ ನಾಡಿನಲ್ಲಿ ನಡೆವ ಸಮ್ಮೇಳನ ದಲಿತ ಸಾಹಿತ್ಯ ಚರ್ಚೆಗೆ ಆಸ್ಪದ ಕಲ್ಪಿಸದೇ ಹೋಗಿರುವುದು ಕಸಾಪದ ಮೇಲ್ಜಾತಿ ಪ್ರೇಮವನ್ನು ಢಾಳಾಗಿ ತೋರ್ಪಡಿಸಿದೆ.


ದಲಿತ ಚಳವಳಿಯ ಮುನ್ನ ಮತ್ತು ನಂತರ ರಚಿತವಾದ ಅಪಾರ ದಲಿತ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡಾಗ; ಸಂವಿಧಾನಾತ್ಮಕ ಕ್ರಮಗಳ ಹೊರತಾಗಿಯೂ ದಲಿತ ಸಮುದಾಯ ಬಿಕ್ಕಟ್ಟುಗಳಲ್ಲಿ ಮುಳುಗಿರುವಾಗ; ಬೆರಳೆಣಿಕೆಯಷ್ಟು ದಲಿತ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರೂ ದಲಿತ ಸಂವೇದನೆ - ಬಿಕ್ಕಟ್ಟು ಕುರಿತು ಒಂದೂ ಗೋಷ್ಠಿಯಿಲ್ಲದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಹುದೊಡ್ಡ ಲೋಪವಾಗಿ ಕಾಣಿಸುತ್ತಿದೆ.


ಇಲ್ಲಿ ಕೆಲ ಪ್ರಶ್ನೆಗಳೇಳುತ್ತವೆ. ಭಾಗವಹಿಸುತ್ತಿರುವ ದಲಿತ ಲೇಖಕರು ಏಕೆ ಈ ಕುರಿತು ಪ್ರಶ್ನಿಸುವುದಿಲ್ಲ? ಸಾಹಿತ್ಯ ಪರಿಷತ್ತಿನಲ್ಲಿ ಪರಿಶಿಷ್ಟಜಾತಿ ಕೋಟಾದಲ್ಲಿ  ಪ್ರಾತಿನಿಧ್ಯ ಪಡೆದವರೇಕೆ ಪ್ರತಿಭಟಿಸುವುದಿಲ್ಲ? ದಲಿತ ಪ್ರಶ್ನೆಯನ್ನು ದಲಿತರೇ ಎತ್ತಬೇಕೆಂದು ದಲಿತೇತರ ಲೇಖಕರು ಏಕೆ ಭಾವಿಸುತ್ತಾರೆ? ಮಾತೆತ್ತಿದರೆ ದಲಿತ ಪರ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುವ ಸರ್ಕಾರದಿಂದ ಅನುದಾನ ಪಡೆಯುವ ಪರಿಷತ್ತು ಗೋಷ್ಠಿಯೊಂದನ್ನು ದಲಿತ ಸಂವೇದನೆಗೆ ಮೀಸಲಿಡಲು ಏಕೆ ಹಿಂದೆ ಮುಂದೆ ನೋಡುತ್ತದೆ? ಇಂಥ ಪ್ರಶ್ನೆಗಳಿಗೆ ಸಮಜಾಯಿಷಿ ಉತ್ತರಗಳು ಸಿದ್ಧವಾಗಿರುತ್ತವೆ. ಆದರೆ ಇಂಥ ಸಮಜಾಯಿಷಿಗಳ ಸಾರ ಇಷ್ಟೆ: ದಲಿತ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವ ಪ್ರಾತಿನಿಧಿಕವಾಗಿರಲೆಂದೇ ಹೊರತು ಸಮಾನ ನೆಲೆಯ ಸಹಭಾಗಿತ್ವ ಹಾಗೂ ಒಳಗೊಳ್ಳುವಿಕೆಗಲ್ಲ.


ಸಾಮಾಜಿಕ ನ್ಯಾಯದ ಮೇಲೆ ಆಣೆಯಿಡುವ ಸರ್ಕಾರದ ಲೋಪಗಳನ್ನು ಎತ್ತಿತೋರಿಸಿ ಪ್ರಶ್ನಿಸುವುದೇ ಇಷ್ಟು ಕಷ್ಟವಾದರೆ; ಭಾಷೆ ಕುರಿತ ತಪ್ಪು ನೀತಿಗಳ ವಿರುದ್ಧ, ನಿರುಪಯೋಗಿ ಕಾರ್ಯಕ್ರಮಗಳ ವಿರುದ್ಧ, ಜನವಿರೋಧಿ ತಾತ್ವಿಕತೆಯ ವಿರುದ್ಧ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುವುದು ದೂರವೇ ಉಳಿಯಿತು.


ಸಾಹಿತ್ಯ, ಕಲೆಗಳು ಎಂದಿನಿಂದ ರಾಜಾಶ್ರಯದಲ್ಲಿ ಅರಳಿವೆ, ನರಳಿವೆ. ಹಾಗೆಯೇ ರಾಜಸ್ವದ ಹಂಗಿಲ್ಲದೆ ಜನಪದರ ಬಯಲಲ್ಲಿ ಜೀವಂತವಾಗಿಯೂ ಉಳಿದಿವೆ. ಸಾಹಿತ್ಯಕ್ಕೆ ದೊರಕುವ ರಾಜಾಶ್ರಯ ಕೇವಲ ಆಸ್ಥಾನ ಕವಿ, ಪಂಡಿತರ ಸ್ವ-ಪೋಷಣೆಗಷ್ಟೇ ಸೀಮಿತವಾಗುವುದಾದರೆ; ರಾಜಾಶ್ರಯದ ಹೆಮ್ಮರ ಸಣ್ಣಪುಟ್ಟ ಸಸಿಗರಿಕೆಗಳೆಂಬ ಬಹುತ್ವ ಬಿಂಬಿಸುವ ಜೀವಸಂಕುಲದ ಬೆಳವಣಿಗೆಗೆ ಮಾರಕವಾಗುವುದಾದರೆ; ಅದು ಭಾಷೆಗೂ, ಆ ಭಾಷೆಯ ಸಾಹಿತ್ಯಕ್ಕೂ ಶತ್ರುವೇ.


ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರೀ ಅನುದಾನವನ್ನವಲಂಬಿಸಿದ ಒಂದು ಸಂಸ್ಥೆ. ಪ್ರತಿ ವರ್ಷ ನಡೆಯುವ ಸಮ್ಮೇಳನವೂ ಅದರ ಪ್ರತಿಬಿಂಬವೇ ಆಗಿರುತ್ತದೆ. ಅದು ಎಷ್ಟು ರಾಜಕೀಕರಣಗೊಂಡಿದೆಯೆಂದರೆ ಅಲ್ಲಿ ಸಾಹಿತಿಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಅಷ್ಟೇ ಅಲ್ಲ, ಅದು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನುವಂತೆಯೂ ಇಲ್ಲ. ಸರ್ಕಾರದ ಹಂಗಿನಲ್ಲಿರುವ ಕಸಾಪದಲ್ಲಿ ರಾಜಕೀಯ-ಸಾಮಾಜಿಕ ಬದುಕಿನ ಲೆಕ್ಕಾಚಾರ, ಸಮೀಕರಣಗಳೇ ಮುಂದುವರೆಯುತ್ತವೆ. ಎಲ್ಲೆಡೆ ಇಂಗ್ಲಿಷ್ ಶಾಲೆ ತೆರೆಯಲು ಅವಕಾಶ ಕೊಟ್ಟು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ ಮತ್ತು ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಕಸಾಪ, ಸರ್ಕಾರ ಕೊಡುವ ಅನುದಾನದಿಂದ ಬಾಯಿಮುಚ್ಚಿಕೊಂಡಿದೆ. ಸರ್ಕಾರದ ಅನುದಾನ ಜನರ ಹಣ, ಅದನ್ನು ಕೊಡಬೇಕಾದ್ದು ಸರ್ಕಾರದ ಕರ್ತವ್ಯ ಎಂದುಕೊಂಡರೂ ಅದರ ಅಧೀನತೆ ಮಗ್ಗಲು ಬದಲಿಸಿದಂತಾಗುತ್ತದೆ.


ಸಾಹಿತ್ಯ ಚಳವಳಿಯಲ್ಲಾಗುವ ಹೊಸತನಗಳಿಗೆ ತೆರೆದುಕೊಳ್ಳದೇ, ಕಾಲದ ಪಲ್ಲಟಗಳನ್ನು ಗಮನಿಸದೇ ಬೀಸುಗಾಲಿಡುವ ಕಸಾಪ ಉದ್ದಕ್ಕೂ ಸಾಂಪ್ರದಾಯಿಕ ನೆಲೆಯಲ್ಲಿ ಒಂದೇ ಮಾದರಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಕಾಲದ ಸಂಕಟಗಳಿಗೆ, ಅದನ್ನು ಒಳಗೊಳ್ಳುವ ಸಾಹಿತ್ಯ ಸಂವೇದನೆಯ ಕಡೆಗೆ ಕ್ಯಾರೆ ಅನ್ನದೆ ವರ್ಷವರ್ಷ ಸಮ್ಮೇಳನ ನಡೆದು ಗೊತ್ತುವಳಿ ಸ್ವೀಕರಿಸಲಾಗುತ್ತಿದೆ. ಪರಿಷತ್ತು ಜಾತಿ ವಾಸನೆಯಿಂದ ಎಂದೂ ಬಿಡಿಸಿಕೊಳ್ಳದಿರುವುದು; ರಾಜಕಾರಣಿಗಳಿಂದ ಉದ್ಘಾಟಿಸಲ್ಪಡುವುದು; ಸಾಹಿತ್ಯಕ್ಕೆ ಸಂಬಂಧವೇ ಇಲ್ಲದ ಸ್ವಾಮಿಗಳನ್ನು ಕರೆತಂದು ಉಧೋ ಉಧೋ ಎನ್ನುವುದು ಇವೆಲ್ಲ ಅದರ ಸ್ವರೂಪಕ್ಕೆ ತಕ್ಕ ಪುರಾವೆಗಳಾಗಿವೆ. 


ಎಂದೇ ಕಸಾಪ ಹೊಸತನ ಪಡೆದುಕೊಳ್ಳಬಯಸಿದಲ್ಲಿ ತುಂಬ ನಿಷ್ಠುರ ದಾರಿ ಕ್ರಮಿಸಬೇಕಾಗುತ್ತದೆ. ಸ್ವಾಯತ್ತ ಸಂಸ್ಥೆಯಾಗಿ ತನ್ನ ಹಣಕಾಸನ್ನು ತಾನೇ ಉತ್ಪಾದಿಸಿಕೊಂಡು ಸರ್ಕಾರದ ಹಂಗಿನಿಂದ ಹೊರಬರಬೇಕು. ಕಸಾಪ ವರ್ತಮಾನದ ತಲ್ಲಣಗಳ ಬಗ್ಗೆ ಮಾತನಾಡಿ ಜನರ ಧ್ವನಿಯಾಗಬೇಕು. ಸಾಹಿತ್ಯದ ಬೆಳವಣಿಗೆ ಗಮನಿಸಿ ಹೊಸ ಸಾಧ್ಯತೆಗಳಿಗೆ ಅವಕಾಶ ನೀಡಬೇಕು. ರಾಜಕಾರಣದ ಮತ್ತು ಆಳುವವರ ಭಾಷೆಯಾದ ಮೆರವಣಿಗೆಯ ಔಚಿತ್ಯ ಏನೆಂದು ವಿವೇಚನೆಗೊಳಪಟ್ಟು ಸರಳತೆ ಸಾಹಿತ್ಯ ಸಮ್ಮೇಳನಗಳ ಆದ್ಯತೆಯಾಗಬೇಕು. ಸಾಹಿತ್ಯ ಅರಿವಿನ ವಿನಯದತ್ತ ಸಾಗಬೇಕು.

ಕಸಾಪ ಮುನ್ನಡೆಸುವವರು ಈ ಎಲ್ಲದರ ಕುರಿತು ತುರ್ತಾಗಿ ಯೋಚಿಸಬೇಕು.
ಕೃಪೆ : ಪ್ರಜಾವಾಣಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.